M.V.Kamath’s autobiography: Part 7 – ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್ : ಭಾಗ 7

ಕಾಲೇಜು ಮುಗಿದ ಮೇಲೆಯೇ ನಿಜ ಜೀವನದ ಆರಂಭ

ಬಯಸುವುದು ಒಂದು ಆಗುವುದು ಇನ್ನೊಂದು ಅನ್ನುವುದು ಇದಕ್ಕೇ ಏನೋ. ಕಾಮತರು ಮೆಡಿಕಲ್ ಓದಬೇಕೆಂದು ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದರು. ಉತ್ತಮ ಇಂಗ್ಲಿಷ್ ಇದ್ದ ಅವರು ಥಿಯರಿಯಲ್ಲಿ ಪಾಸಾಗಿದ್ದರೂ ಪ್ರಾಕ್ಟಿಕಲ್‌ನಲ್ಲಿ ಫೇಲಾಗಿದ್ದರು. ಕಾಲೇಜು ಜೀವನ ಮುಗಿದ ಮೇಲೆಯೇ ನಿಜ ಜೀವನ ಆರಂಭವಾಗುತ್ತದೆ ಎಂದು ಕಾಮತ್ ಗಟ್ಟಿಯಾಗಿ ನಂಬಿದ್ದರು. ಕಾಮತ್‌ರ ಆತ್ಮಚರಿತ್ರೆಯ ಮುಂದುವರಿದ ಭಾಗ.

1937ರಲ್ಲಿ ಕಾಮತರು ಎಸ್.ಎಸ್.ಎಲ್.ಸಿ. ಪಾಸಾದರು. ಆಗ ಅವರಿಗೆ 16 ವಯಸ್ಸು. ರಿಜಲ್ಟ್ ಆದದ್ದು ಮದ್ರಾಸಿನಲ್ಲಿ. `ದಿ ಹಿಂದೂ’ ಪತ್ರಿಕೆಯಲ್ಲಿ ಉತ್ತೀರ್ಣರಾವರ ನಂಬರ್‌ಗಳು ಪ್ರಕಟವಾಗುತ್ತಿದ್ದವು. ಪತ್ರಿಕೆ ಒಂದು ದಿನ ತಡವಾಗಿ ಉಡುಪಿ ತಲುಪುತ್ತಿತ್ತು. ಪತ್ರಿಕೆ ನೋಡುವವರೆಗೆ ಕಾತರ, ಉದ್ವೇಗ ಆವರಿಸಿತ್ತು. ತಮ್ಮ ನಂಬರ್ ಪತ್ರಿಕೆಯಲ್ಲಿ ಕಾಣ್ಣಾರೆ ಕಂಡಾಗ ಕಾಮತರಿಗೆ ಅಪರಿಮಿತ ಆನಂದವಾಗಿತ್ತು. ತಲೆಯ ಮೇಲಿನ ಒಂದು ಭಾರ ಇಳಿದಂತಾಗಿತ್ತು. ಅಣ್ಣ ಅದೇ ಸಮಯ ಬಿ.ಎ. ಪಾಸಾಗಿದ್ದ. ಮನೆಯಲ್ಲಿ ವಿಶೇಷ ಸಂಭ್ರಮವೇನೂ ಇರಲಿಲ್ಲ. ಆದರೆ ಇವರಿಗೆ ವೈಯಕ್ತಿಕ ನೆಲೆಯಲ್ಲಿ ಪರ್ವತದ ಒಂದು ಶಿಖರ ಏರಿದ ಸಂಭ್ರಮ, ಸಂತಸ. ಇವರ ಸಂಬಂಧಿಕರೊಬ್ಬರು ಇವರಿಗೆ ಒಂದು ಕಾಣಿಕೆ ಕೊಟ್ಟರು. ಅದು ಶೇವಿಂಗ್ ಸೆಟ್ ಆಗಿತ್ತು. ತಾವೂ ಈಗ ದೊಡ್ಡವರಾದೆವು ಎಂಬ ಭಾವ ಮನದಲ್ಲಿ ಆವರಿಸಿತು.

ಆ ದಿನಗಳಲ್ಲಿ ಉಡುಪಿಯಲ್ಲಿ ಕಾಲೇಜು ಇರಲಿಲ್ಲ. ಇವರಿಗೆ ತಂದೆಯವರು ಕಲಿತ ಮದ್ರಾಸಿನ ಕ್ರಿಶ್ಚನ್ ಕಾಲೇಜು ಸೇರುವ ಹೆಬ್ಬಯಕೆ ಇತ್ತು. ಆಗ ಆ ಕಾಲೇಜು ಇನ್ನೂ ಸುಧಾರಿಸಿ ಹೆಚ್ಚು ಆಕರ್ಷಕವಾಗಿತ್ತು. ತಂದೆಯವರ ಸಮ್ಮತಿ ಪಡೆದು ಅಲ್ಲಿಯ ಪ್ರವೇಶ ಪತ್ರ ತರಿಸಿ ಅದನ್ನು ತುಂಬಿ ಕಳಿಸಿದ್ದಾಯಿತು. ಕಾಲೇಜು ಶುರುವಾಗುವ ಸಮಯ ಬಂದರೂ ಕಾಲೇಜಿನಿಂದ ಪ್ರವೇಶ ದೊರೆತ ಸಮಾಚಾರವೇ ಬರಲಿಲ್ಲ. ರಿಪ್ಲಾಯ್-ಪೇಡ್ ಟೆಲಿಗ್ರಾಂ ಕಳಿಸಿದರೆ ಬಂದ ಉತ್ತರ ನಿರಾಶೆಯನ್ನು ತಂದಿತ್ತು. ಇವರ ಅರ್ಜಿ ಕಾಲೇಜಿಗೆ ತಲುಪಿರಲಿಲ್ಲವಂತೆ. ಇನ್ನೇನು ಮಾಡುವುದು ತಿಳಿಯದೇ ಇಬ್ಬರು ಅಣ್ಣಂದಿರು ಕಲಿತಿದ್ದ ಮಂಗಳೂರ ಗವರ್ನಮೆಂಟ್ ಕಾಲೇಜು ಸೇರುವುದು ಅನಿವಾರ್ಯವಾಯಿತು. ಆ ಕಾಲೇಜಿನ ಪ್ರಿನ್ಸಿಪಾಲರು ಜಿ.ಕೆ ಚೆಟ್ಟೂರ್ ಎಂಬವರು ಬಹಳ ಹೆಸರುವಾಸಿಯಾಗಿದ್ದರು. ಅವರು ಆ ಕಾಲದಲ್ಲಿ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದಿದ್ದರು. ತಮ್ಮ ಬಿ.ಎ. ಡಿಗ್ರಿಯ ಮುಂದೆ `ಅಗ್ಝನ್’ ಎಂದು ಹೆಮ್ಮೆಯಿಂದ ಸೇರಿಸುತ್ತಿದ್ದರು. ಆ ಅಭಿಮಾನದಿಂದ ಕಾಲೇಜು ಸೇರಲು ಹೊರಟರೆ ಕ್ಯಾನ್ಸರ್ ರೋಗ ಪೀಡಿತರಾದ ಅವರು ಚಿಕ್ಕವಯದಲ್ಲೇ, ಇವರು ಕಾಲೇಜ್ ಸೇರುವ ಮೊದಲೇ ತೀರಿಹೋದರು.

ಆ ಕಾಲದಲ್ಲಿ ಮಂಗಳೂರು ನಗರದಲ್ಲಿ ಕಮಲಾದೇವಿ ಚಟೋಪಾಧ್ಯಾಯರ ಹೆಸರು ಬಹಳ ಪ್ರಸಿದ್ಧವಾಗಿತ್ತು. ಅವರು `ದೊಡ್ಡಮನೆ’ಯಲ್ಲಿ ವಾಸವಾಗಿದ್ದರು. ಅದರ ಎದುರಿಗೆ ಇದ್ದ ಕೆನರಾ ಹಾಸ್ಟೇಲಿನಲ್ಲಿ ಕಾಮತರು ವಾಸವಾಗಿದ್ದರು. ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ತಮ್ಮ ಆತ್ಮಚರಿತ್ರೆಯಲ್ಲಿ ಕಮಲಾದೇವಿಯ ಬಗ್ಗೆ ಬರೆದದ್ದನ್ನು ಕಾಮತರು ಉದ್ಧರಿಸುತ್ತಾರೆ.

“26 ಜನೇವರಿ 1930, ಕಮಲಾದೇವಿ ಇಡೀ ದೇಶದ ಗಮನವನ್ನು ಸೆಳೆದರು. ತ್ರಿರಂಗಾ ಧ್ವಜವನ್ನು ಗಟ್ಟಿಯಾಗಿ ಹಿಡಿದಿದ್ದರು. ಅವರಿಗೆ ಪೆಟ್ಟು ಬಿದ್ದರೂ ಬಂಡೆಗಲ್ಲಿನಂತೆ ನಿಂತು ಧ್ವಜವನ್ನು ರಕ್ಷಿಸಿದರು. ಮತ್ತೆ ಎಪ್ರಿಲ್ 1930ರಲ್ಲಿ ಕಮಲಾದೇವಿ ಉಪ್ಪಿನ ಕಾಯದೆಯನ್ನು ಉಲ್ಲಂಘಿಸಿದರು. ಮಂಬೈ ಚೌಪಾಟಿ ದಂಡೆಯಲ್ಲಿ ಸ್ಟೋವ್ ಮೇಲೆ ಸಮುದ್ರದ ನೀರನ್ನು ಕಾಯಿಸಿ ಉಪ್ಪು ತಯಾರಿಸುತ್ತಿದ್ದ ಸ್ವಯಂಸೇವಕರಲ್ಲಿ ಮುಂದಾಳಾಗಿ ಪೋಲೀಸರ ಲಾಠೀಪ್ರಹಾರಕ್ಕೆ ಬೆನ್ನು ಒಡ್ಡಿದ್ದರು. ಉರಿಯುತ್ತಿರುವ ಒಲೆಯ ಮೇಲೆ ಬಿದ್ದು ಮೈ ಸುಟ್ಟುಕೊಂಡರೂ, ಪೋಲೀಸರು ಆಸ್ಪತ್ರೆಗೆ ಸೇರಿಸಲು ಮುಂದೆ ಬಂದರೂ ಅವರ ಸಹಾಯವನ್ನು ನಿರಾಕರಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದರು.” (ಆರ್. ವೆಂಕಟರಾಮನ್, `ಎ ಮೆನಿ ಸ್ಪ್ಲೆಂಡರ್ಡ್ ಲೈಫ್’).

ಕಮಲಾದೇವಿಯವರ ಬಗ್ಗೆ ಇನ್ನೂ ಅನೇಕ ವಿವರಗಳನ್ನು ಕಾಮತರು ನೀಡುತ್ತಾರೆ. 1903ರಲ್ಲಿ ಮಂಗಳೂರಿನ ಸಾರಸ್ವತ ಕುಟುಂಬದಲ್ಲಿ ಜನಿಸಿದ ಕಮಲಾದೇವಿ 1910ರಲ್ಲೇ ತಮ್ಮ ತಂದೆಯವರನ್ನು ಕಳೆದುಕೊಂಡರು. ಅವರಿಗೆ ಹದಿನಾಲ್ಕು ವಯಸ್ಸಾಗಿದ್ದಾಗ, 1917ರಲ್ಲಿ ಕೃಷ್ಣರಾವ್ ನಾಯಂಪಳ್ಳಿ ಎಂಬವರನ್ನು ಮದುವೆಯಾದರು. ಮರುವರ್ಷ ವೈಧವ್ಯ ಪ್ರಾಪ್ತವಾಯಿತು. ಧೃತಿಗೆಡದೆ ವಿದ್ಯಾಭ್ಯಾಸ ಮುಂದುವರಿಸಿ ಕೆಂಬ್ರಿಜ್ ಪರೀಕ್ಷೆಯಲ್ಲಿ ಪಾಸಾದರು. ಅವರಿಗೆ ಇಪ್ಪತ್ತು ವರ್ಷ ಇರುವಾಗಲೇ ಆಲ್ ಇಂಡಿಯಾ ವೂಮೆನ್ಸ್ ಕಾನ್ಫರೆನ್ಸ್‌ನ ಜನರಲ್ ಸೆಕ್ರೆಟರಿ ಆಗಿದ್ದರು. ಅದೇ ವೇಳೆಗೆ ಸರೋಜಿನಿ ನಾಯಡು ಅವರ ತಮ್ಮನಾದ ಹರೇಂದ್ರನಾಥ ಚಟೋಪಾಧ್ಯಾಯ ಅವರನ್ನು ಮದುವೆಯಾದರು. ರಾಜಕಾರಣ ಅವಳ ರಕ್ತದಲ್ಲಿತ್ತು. ಉಪ್ಪಿನ ಸತ್ಯಾಗ್ರಹದ ವೇಳೆ ಸತ್ಯಾಗ್ರಹಿಗಳು ತಯಾರಿಸಿದ ಮೊದಲ ಉಪ್ಪಿನ ಪಾಕೀಟನ್ನು ರೂ.500ಕ್ಕೆ ಮಾರಿದ ಕೀರ್ತಿ ಪಡೆದರು. (ಆ ಕಾಲದಲ್ಲಿ ರೂ. 30ಕ್ಕೆ ಒಂದು ಕುಟುಂಬ ಜೀವನ ನಡೆಸಬಹುದಾಗಿತ್ತು). ಇನ್ನೊಂದು ಉಪ್ಪಿನ ಪಾಕೀಟನ್ನು ರೂ.10,000ಕ್ಕೆ ಮಾರಿದ್ದರಂತೆ!

ಕಮಲಾದೇವಿ ಮನಸ್ಸು ಮಾಡಿದ್ದರೆ ನೆಹರು ಕ್ಯಾಬಿನೆಟ್‌ನಲ್ಲಿ ಮಂತ್ರಿ ಪದವಿ ಪಡೆಯಬಹುದಾಗಿತ್ತು. ಅದರೆ ಅವರು ಸಮಾಜ ಸೇವೆಯಲ್ಲಿ ತೊಡಗಿದರು. ಕಾಮತರು ಫ್ರೀ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಇವರ ಸೀನಿಯರ್ ಆಗಿದ್ದ ಸಿ.ಕೆ.ನಾರಾಯಣಸ್ವಾಮಿ ಇವರನ್ನು ಕರೆದು ಕಮಲಾದೇವಿಯ ಚರಿತ್ರೆಯನ್ನು ಬರೆಯಲು ಕೇಳಿದರಂತೆ. ಅದು ಬಹು ದೊಡ್ದ ಗೌರವದ ಮಾತಾಗಿತ್ತು ಎನ್ನುತ್ತಾರೆ. ರಾಷ್ಟ್ರಕ್ಕಾಗಿ ಹೋರಾಡಿದ ಈ ಮಹಿಳೆ ಜನಮನದ `ನಾಯಕಿ’ಯಾಗಿದ್ದರು. ಪದ್ಮಭೂಷಣ ಪ್ರಶಸ್ತಿ, ರೇಮನ್ ಮೆಗ್‌ಸೆಸೆ ಅವಾರ್ಡ್, ಬನಾರಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಈ ಮಹಿಳೆಯ ಚರಿತ್ರೆ ಬರೆಯುವದು ಎಂತಹ ಗೌರವದ ಕೆಲಸ. ಮುಂದೆ ಕಾರಣಾಂತರಗಳಿಂದ (ಟೈಮ್ಸ್ ಆಫ್ ಇಂಡಿಯಾದವರು ಕಾಮತರನ್ನು ವಾಶಿಂಗ್ಟನ್‌ಗೆ ಕಳಿಸಿದ್ದರಿಂದ) ಆ ಕೆಲಸ ಮಾಡಲು ಕಾಮತರಿಗೆ ಆಗಲಿಲ್ಲ. ಮುಂದೆ ಕಮಲಾದೇವಿಯವರೇ ತಮ್ಮ ಜೀವನದ ಸ್ಮೃತಿಚಿತ್ರ , `ಇನ್ನರ್ ರಿಸೆಸಿಸ್, ಔಟರ್ ಸ್ಪೇಸಿಸ್’ (Inner Recesses, Outer Spaces)ಬರೆದರಂತೆ. ಮುಂದೆ ಶಕುಂತಲಾ ನರಸಿಂಹನ್ ಎಂಬವರು ಕಮಲಾದೇವಿಯವರ ಚರಿತ್ರೆ , `ಕಮಲಾದೇವಿ- ದಿ ರೊಮ್ಯಾಂಟಿಕ್ ರೆಬೆಲ್’ ಬರೆದರು.

1981ರಲ್ಲಿ ಬೇಂದ್ರೆಯವರು ಹರಕಿಸನದಾಸ್ ಆಸ್ಪತ್ರೆಯಲ್ಲಿದ್ದಾಗ ಬೇಂದ್ರೆಯವರ ಮಗನಿಂದ ಟೆಲಿಫೋನ್ ಸಂದೇಶ ಬಂತಂತೆ. `ಬೇಂದ್ರೆಯವರು ನಿಮ್ಮನ್ನು ಕಾಣಲು ಬಯಸುತ್ತಾರೆ’ ಎಂಬ ಸಂಗತಿ ಅವರ ಕುತೂಹಲ ಕೆರಳಿಸಿತ್ತು. ಕಾಮತರು ಬೇಂದ್ರೆಯವರನ್ನು ಕಾಣಲು ಆಸ್ಪತ್ರೆಗೆ ಹೋದಾಗ ಬೇಂದ್ರೆಯವರ ಮೇಲೆ ಶಸ್ತ್ರಚಿಕಿತ್ಸೆಯಾಗಿತ್ತು, ಅವರು ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಮರುದಿನ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ದಾದರ್‌ನಲ್ಲಿ ನಡೆದ ಕವಿಗಳ ಅಂತಿಮ ಸಂಸ್ಕಾರದಲ್ಲಿ ತಾವು ಭಾಗವಹಿಸಿದ್ದ ಬಗ್ಗೆ ಕಾಮತರು ಬರೆಯುತ್ತಾರೆ. `ಬೇಂದ್ರೆಯವರು ತಮಗೆ ಏನು ಹೇಳಬೇಕಾಗಿತ್ತು ಎಂಬ ವಿಷಯ ಗೂಢವಾಗಿಯೇ ಉಳಿಯಿತು’ ಎನ್ನುತ್ತಾರೆ.

ಮಂಗಳೂರಿನ ಗವರ್ನಮೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಇಂಗ್ಲಿಷ್‌ನಲ್ಲಿ ಅತ್ಯಧಿಕ ಗುಣ ಪಡೆದ ವಿದ್ಯಾರ್ಥಿಗೆ `ಹಾಜಿ ಕಾಸೀಂ’ ಬಹುಮಾನ ದೊರೆಯುತ್ತಿತ್ತು. ಕಾಮತರು ಕೂಡ ಒಬ್ಬ ಸ್ಪರ್ಧಿಯಾಗಿದ್ದರು. ಅವರಿಗೆ ಆ ಬಹುಮಾನ ಒಂದೆರಡೇ ಗುಣಗಳ ಅಂತರದಲ್ಲಿ ತಪ್ಪಿಹೋಯಿತು, ಅವರಿಗೆ ಅಸಮಾಧಾನವಾಯಿತು. ಆ ಬಹುಮಾನ ಕಾಮತರ ಮಿತ್ರ ರಮೇಶ್ ಧಾರೇಶ್ವರ್ ಎಂಬವರಿಗೆ ದೊರೆಯಿತು. ಮುಂದೆ ರಮೇಶ್ ಮಿಲಟರಿಯಲ್ಲಿ ಹಿರಿಯ ಡಾಕ್ಟರರಾದರು. ಡಾಕ್ಟರನಾಗಬೇಕೆಂಬ ಕನಸು ಕಂಡ ಕಾಮತರು ಮುಂದೆ ಹಿರಿಯ ಆಂಗ್ಲ ಪತ್ರಕರ್ತರಾದರು.

ಕೆಲ ವರ್ಷಗಳ ನಂತರ ಕಾಮತರ ಅಕ್ಕನ ಮಗ ಮೋಹನ ಪೈ ಎಂಬವನು ಇಂಗ್ಲಿಷಿನಲ್ಲಿ ಅತ್ಯಧಿಕ ಅಂಕ ಗಳಿಸಿ ಹಾಜಿ ಕಾಸೀಂ ಪ್ರೈಜ್ ಪಡೆದಾಗ ಕಾಮತರ ಮನೆಯಲ್ಲಿ ಸಂಭ್ರಮವಾಯ್ತು. ಹಿಂದೆ ಆದ ಹಾನಿ ಈಗ ತುಂಬಿಬಂದಿತ್ತು. ಮೋಹನ ಬಹುಭಾಷಾ ತಜ್ಞನಾಗಿದ್ದ.(ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತಮಿಳು ಮುಂತಾದ ಭಾಷೆಗಳಲ್ಲಿ ಪರಿಣತನಾಗಿದ್ದ.) ಕಾಮತರು ಮದ್ರಾಸಿನ ಕ್ರಿಶ್ಚನ್ ಕಾಲೇಜಿನಲ್ಲಿ ಅಭ್ಯಾಸ ಮಾಡುವ ಕನಸು ಕಂಡಿದ್ದರು. ಅದು ತಪ್ಪಿಹೋದ ಅಸಮಾಧನ ಅವರಲ್ಲಿತ್ತು. ಆದರೆ ಮೊಹನ್ ಆ ಕಾಲೇಜಿನಲ್ಲಿ ಕಲಿತ ಎಂಬ ಅಭಿಮಾನ ಕಾಮತರಿಗೆ ಇತ್ತು. ಅವನು ಮುಂದೆ ಐ.ಎ.ಎಸ್. ಪರೀಕ್ಷೆ ಪಾಸಾದ. ಆಂಧ್ರಪ್ರದೇಶದ ಕೇಡರ್‌ನಲ್ಲಿ ಆಯ್ಕೆಗೊಂಡ. ಹೀಗಾಗಿ ತೆಲಗು ಮತ್ತು ಉರ್ದು ಭಾಷೆ ಕಲಿತ. ಕವಿ ರವೀಂದ್ರರ ಗೀತಾಂಜಲಿ ಮೂಲದಲ್ಲಿ ಓದುವ ಆಸಕ್ತಿ ತಳೆದುದರಿಂದ ಬಂಗಾಲಿ ಭಾಷೆಯನ್ನೂ ಕಲಿತ. ರಾಜ್ಯದ ಚೀಫ್ ಸೆಕ್ರೆಟರಿ ಆಗುವ ಅಥವಾ ರಾಜ್ಯದ ಒಂದು ವಿಶ್ವವಿದ್ಯಾಲಯದ ಕುಲಪತಿ ಆಗುವ ಅವಕಾಶ ಬಂದಾಗ ಕುಲಪತಿ ಆಗುವುದನ್ನೇ ಮೆಚ್ಚಿದ.

ಕಾಮತರು ಕಾಲೇಜಿನಲ್ಲಿದ್ದಾಗ ಹೆಚ್ಚು ಬರೆಯಲಿಲ್ಲ. ಕಾಲೇಜಿನ ಮೆಸೆಲೆನಿಗೆ ಒಂದು ಕವಿತೆ ಬರೆದಿದ್ದರಂತೆ. ಅದು ಕಾಗೆಯ ಮೇಲಿನ ಪದ್ಯ. (ಓಡ್ ಟು ದಿ ಕ್ರೋ). ಆರ್.ಕೆ.ಲಕ್ಷ್ಮಣ ಅದನ್ನು ಓದಿದ್ದರೆ ಬಹಳ ಮೆಚ್ಚಬಹುದಾಗಿತ್ತು ಎನ್ನುತ್ತಾರೆ. ಆರ್.ಕೆ ಲಕ್ಷ್ಮಣ ಮುಂದೆ ಕಾಗೆಗಳ ವಸ್ತು ಆರಿಸಿ ಸುಂದರ ಕಾರ್ಟೂನ್‌ಗಳನ್ನು ಬಿಡಿಸಿದರಂತೆ. ಅಮೇರಿಕನ್ ಲೇಖಕ ಮಾರ್ಕ್ ಟ್ವೇನ್ ಕೂಡ ಕಾಗೆಯ ಬಗ್ಗೆ ಬರೆದುದನ್ನು ನೆನೆಯುತ್ತಾರೆ. ಇಂಗ್ಲೀಷ ಸಾಹಿತ್ಯವನ್ನು ಬಹು ಪ್ರೀತಿಯಿಂದ ಕಾಲೇಜು ಜೀವನದಲ್ಲಿ ಓದುತ್ತಿದ್ದರು. ಕಾವ್ಯ ಅವರಿಗೆ ಹೆಚ್ಚಿನ ಪ್ರೀತಿಯ ವಿಷಯವಾಗಿತ್ತು. ಪಾಲ್‌ಗ್ರೇವ್ಸ್ `ಗೋಲ್ಡನ್ ಟ್ರೆಜರಿ’ ಕಾವ್ಯ ಸಂಗ್ರಹ ಇವರ ನಚ್ಚಿನದಾಗಿತ್ತು. ನೂರಾರು ಸಾಲುಗಳು ಅವರಿಗೆ ಮುಖೋದ್ಗತವಾಗಿದ್ದವು. ಪಾಲ್‌ಗ್ರೇವ್ ತನ್ನ ಪುಸ್ತಕವನ್ನು ಅಂದಿನ ಪೋಯೆಟ್ ಲಾರೆಟ್ ಆಗಿದ್ದ ಲಾರ್ಡ್ ಟೆನಿಸನ್ನನಿಗೆ ಅರ್ಪಿಸಿದ್ದ.

ಕಾಮತರು ಫ್ರೀ ಪ್ರೆಸ್ ಜರ್ನಲ್‌ದಲ್ಲಿ ಕೆಲಸ ಮಾಡುತ್ತಿರುವಾಗ ಒಂದು ಲೇಖನದಲ್ಲಿ ಕವಿ ಬ್ರೌನಿಂಗನ ಸಾಲುಗಳನ್ನು ಉದ್ಧರಿಸಿದ್ದರಂತೆ. ಅದನ್ನು ಮೆಚ್ಚಿದ ಸಂಪಾದಕ ಸ್ವಾಮಿನಾಥನ್ ನಟರಾಜನ್ ಇವರನ್ನು ತನ್ನ ಕ್ಯಾಬಿನ್ನಿಗೆ ಕರೆಸಿದರಂತೆ. ಇವರ ಕಾವ್ಯಾಸಕ್ತಿಯ ಬಗ್ಗೆ ಕೇಳಿದರಂತೆ. ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಕಾವ್ಯದಿಂದ ನೂರಾರು ಸಾಲು ಕಾಮತರು ಉದ್ಧರಿಸಿದರಂತೆ. “ನೀನು ಬ್ರೌನಿಂಗ್ ಕವಿಯ ಕಾವ್ಯದಿಂದ ಎಷ್ಟು ಸಾಲು ಉದ್ಧರಿಸಬಲ್ಲೆ?” ಎಂದು ಕೇಳಿದಾಗ ಕಾಮತರು, “ಒಂದು ಸಾವಿರ ಸಾಲು ಉದ್ಧರಿಸ ಬಲ್ಲೆ” ಎಂದು ಉತ್ತರಿಸಿದರಂತೆ. ನಂತರ ಸ್ವಾಮಿನಾಥನ್ ಕೇಳಿದರು, “ಮಿಲ್ಟನ್ ಮಹಾಕವಿಯ `ಪೆರಡೈಸ್ ಲೊಸ್ಟ್'(Paradise Lost)ದಿಂದ ಎಷ್ಟು ಸಾಲು ಉದ್ಧರಿಸಬಲ್ಲೆ?”ಎಂದು. ಅಗ ಕಾಮತರು “ಒಂದೂ ಇಲ್ಲ” ಎಂದರಂತೆ.

ಪೆರಡೈಸ್ ಲಾಸ್ಟ್ ದಿಂದ “ಆಫ್ ಮ್ಯಾನ್ಸ್ ಫರ್ಸ್ಟ್ ಡಿಸ್‌ಒಬಿಡಿಯನ್ಸ್, ಅಂಡ ದಿ ಫ್ರುಟ್ | ಆಫ್ ದಿ ಫಾರ್‌ಬಿಡನ್ ಟ್ರೀ…” ಎಂದು ನಿರರ್ಗಳವಾಗಿ ರಿಸೈಟ್ ಮಾಡಲು ತೊಡಗಿದರಂತೆ. ನೂರಾರು ಸಾಲು ಹೇಳಿದ ಮೇಲೆ, “ಇನ್ನು `ಪೆರಡೈಸ್ ರಿಗೇನ್ಡ್’ ಭಾಗದಿಂದ ಪದ್ಯ ಉದ್ಧರಿಸಲಾ?” ಎಂದು ಕೇಳಿದರಂತೆ. ಆಗ ಕಾಮತರು , “ಸಾಕು. ನಿಮ್ಮ ಯೋಗ್ಯತೆಯ ಕಲ್ಪನೆ ನನಗೆ ಬಂದಿದೆ.” ಎಂದರಂತೆ. ಈ ಸನ್ನಿವೇಶದ ಬಗ್ಗೆ ಬರೆಯುತ್ತ ಕಾಮತರು ಹೇಳುತ್ತಾರೆ, “ಯಾವುದೇ ಕ್ಷೇತ್ರದಲ್ಲಿ ನಿಮಗಿಂತ ಮುಂದೆ ಇರುವವರು ನಿಮಗೆ ಸಿಕ್ಕೇ ಸಿಗುತ್ತಾರೆ.” ಎಂದು.

ಕಾಮತರು ವಿಜ್ಞಾನದ ವಿದ್ಯಾರ್ಥಿ ಆಗಿದ್ದರು. ಇವರಿಗೆ ಮುಂದೆ ಡಾಕ್ಟರರಾಗುವ ಆಸೆಯಿತ್ತು. ನೋಬೆಲ್ ಬಹುಮಾನ ಪಡೆದ ಡಾ| ಅಲ್ಬರ್ಟ್ ಸ್ವಿಟ್‌ಝರ್ ಇವರ ಹೀರೋ ಆಗಿದ್ದರು. ಈ ಡಾಕ್ಟರ್ ಆಫ್ರಿಕೆಯಲ್ಲಿ ಅತಿ ಹಿಂದುಳಿದ ಪ್ರದೇಶದಲ್ಲಿ ಇದ್ದು ಅಲ್ಲಿಯ ಜನರ ಸೇವೆ ಮಾಡಿದ್ದರು. ತಾವು ಕೂಡ `ಬೇರ್ ಫುಟ್’ ಡಾಕ್ಟರರಾಗಿ ಕರ್ನಾಟಕದ ಹಳ್ಳಿಗಳಲ್ಲಿ ಸುತ್ತಾಡುವ ಕನಸು ಕಾಣುತ್ತಿದ್ದರು. ಆಗ ಇವರು ಮದುವೆಯ ಬಗ್ಗೆ, ಸುಖಜೀವನದ ಬಗ್ಗೆ ಕನಸುಕಾಣುತ್ತಿರಲಿಲ್ಲ. `ದಕ್ಷಿಣ ಕನ್ನಡದ ಒಂದು ಕೇಂದ್ರ ಹಳ್ಳಿಯನ್ನು ಆರಿಸಿ, ಅಲ್ಲಿಂದ ಸುತ್ತಲೂ ಹಳ್ಳಿಗಳಲ್ಲಿ ಆರೋಗ್ಯ ನೀಡಲು ಸುತ್ತಾಡುವದು. ವಾರಾಂತ್ಯ(ವೀಕ್‌ಎಂಡ್)ದಲ್ಲಿ ಕೇಂದ್ರದ ಹಳ್ಳಿಗೆ ಮರಳಿ ಬಂದು ವಿಶ್ರಾಂತಿ ಪಡೆಯುವದು, ಮತ್ತು ಅಭ್ಯಾಸ ಮಾಡುವುದು’ ಇವರ ಕನಸಾಗಿತ್ತು.

ಐದು ವರ್ಷ ಮೆಡಿಕಲ್ ಕಾಲೇಜಿಗೆ ಕಳಿಸುವುದು ಬಹಳ ಖರ್ಚಿನ ವ್ಯವಹಾರವೆಂದು ತಂದೆ ಒಪ್ಪಲಿಲ್ಲ. ಕಾಮತರ ಒಬ್ಬ ಅಣ್ಣ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ. ಉಡುಪಿಯಿಂದ ಬಸ್ ಹಿಡಿದು ಹರಿಹರಕ್ಕೆ ಬಂದು, ಅಲ್ಲಿಂದ ಮುಂಬೈ ಟ್ರೇನ್ ಹಿಡಿದು ದಾದರ್ ತಲುಪಿದರು. ಅಣ್ಣ ಸ್ಟೇಶನ್ನಿಗೆ ಬಂದಿದ್ದರು(1939). ಇವರು ಉಟ್ಟ ಮುಂಡು, ಹಳೆಯ ಮಾದರಿಯ ಶರ್ಟ್ ನೋಡಿ ಅಣ್ಣ ಮರುಕಪಟ್ಟು, ಮರುದಿನ ಟೇಲರ್ ಬಳಿ ಕರೆದುಕೊಂಡು ಹೋಗಿ, ಮುಂಬೈಗೆ ತಕ್ಕ ಪ್ಯಾಂಟು, ಶರ್ಟು ಹೊಲಿಸಿ ಇವರಲ್ಲಿ ಬಾಹ್ಯ ಪರಿವರ್ತನೆ ತಂದರು. ಕಾಮತರು ಗ್ರ್ಯಾಂಟ್ ಮೆಡಿಕಲ್ ಕಾಲೇಜಿಗೆ ಹೋಗಿ ಅರ್ಜಿ ತಂದರು. ಇವರ ಶಿಕ್ಷಣ ಮದ್ರಾಸ್ ಯುನಿವರ್ಸಿಟಿಯಿಂದ ಅದುದರಿಂದ ಮೈಗ್ರೇಶನ್, ಟ್ರಾನ್ಸ್‌ಫರ್ ಸರ್ಟಿಫಿಕೇಟ್ ತರಬೇಕಾಗುತ್ತಿತ್ತು ಅದಕ್ಕಿಂತ ಮುಖ್ಯವಾಗಿ ಮೆಡಿಕಲ್ ಕಾಲೇಜಿನ ಖರ್ಚು ವಹಿಸಲು ಅಣ್ಣನಿಗೆ ಸಾಧ್ಯವಿರಲಿಲ್ಲ. ಸಾಲ ತೆಗೆದರೆ ಮನೆತನಕ್ಕೆ ಕೆಟ್ಟಹೆಸರು. ಆದ್ದರಿಂದ ಇವರಿಂದ ಬಿ.ಎಸ್‌ಸಿ ಮಾಡಿಸಬೇಕೆಂದು ನಿರ್ಧರಿಸಲಾಯಿತು. ಇವರಿಗೆ ಫಿಲಾಸಫಿ, ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿ ಇತ್ತು. ಆರ್ಟ್ಸ್ ಡಿಗ್ರಿ ಪಡೆದರೆ ನೌಕರಿ ಪಡೆಯುವುದು ಕಷ್ಟದ್ದಾಗಿತ್ತು. ಆದ್ದರಿಂದ ವಿಜ್ಞಾನ ವಿಷಯ ಆರಿಸಲು ಹೇಳಲಾಯ್ತು.

ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಪ್ರವೇಶ್ ದೊರೆಯಿತು. ಫಿಜಿಕ್ಸ್ ಹಾಗೂ ಕೆಮೆಸ್ಟ್ರಿ ವಿಷಯದ ಆಯ್ಕೆಯೂ ಆಯಿತು. ಥೇರಿಯಲ್ಲಿ ಇವರು ಚೆನ್ನಾಗಿದ್ದರು. ಪ್ರ್ಯಾಕ್ಟಿಕಲ್‌ನಲ್ಲಿಯೇ ಫೇಲಾದರು. ಆದರೂ ಟರ್ಮ್ಸ್ ಇಡಲು ಅನುಮತಿ ದೊರಕಿತ್ತು. ಮೂರನೆಯ ವರ್ಷ ಮುಗಿಸಿದಾಗ ಇವರು ಮೂರನೆಯ ತರಗತಿಯಲ್ಲಿ ಪಾಸಾದರು. ಇವರ ಸ್ವಾಭಿಮಾನಕ್ಕೆ ಅದು ಭಂಗ ತಂದಿತ್ತು. ಏತನ್ಮಧ್ಯೇ ಕಾಮತರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು. ಧಾರಾವಿಯಲ್ಲಿ ಸಾಕ್ಷರತೆಯ ಪ್ರಸಾರದ ಕಾರ್ಯದಲ್ಲಿ ತೊಡಗಿದರು. ಚರ್ಮದ ಕೆಲಸ ಮಾಡುವ ಹಲವಾರು ಕನ್ನಡ ಕುಟುಂಬಗಳು ಅಲ್ಲಿ ನೆಲೆಸಿದ್ದವು. ಇವರು ಆ ಜನರಿಗೆ ಕನ್ನಡ ಓದಲು ಬರೆಯಲು ಕಲಿಸಿದರು. `ಕಾಲೇಜು ಶಿಕ್ಷಣ ಮುಗಿದ ಮೇಲೆಯೇ ನಿಜವಾದ ಜೀವನ ಆರಂಭವಾಗುತ್ತದೆ’ ಎನ್ನುತ್ತಾರೆ ಕಾಮತರು. ಅವರ ಮಿತ್ರರೆಲ್ಲ ತಮ್ಮ ದಾರಿ ಕಂಡುಕೊಂಡು ಮುನ್ನಡೆದಿದ್ದರು.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: