Master of Political Drama -HD Devegowda – ದೇವೇಗೌಡರು ಈಗ ಏನು ಮಾಡುತ್ತಿದ್ದಾರೆ?

ಈಗ ಯಜಮಾನ್ ದೇವೇಗೌಡರು ಏನು ಮಾಡುತ್ತಿದ್ದಾರೆ? ಕುತೂಹಲದ  ಪ್ರಶ್ನೆ. ಅವರು ಅಧಿಕೃತವಾಗಿ ನಿರುದ್ಯೋಗಿಯಲ್ಲ. ಅನಧಿಕೃತವಾಗಿ ಹೇಳುವುದಾದರೆ, ಅವರ ಇಡೀ ಬುಡಕಟ್ಟಿಗೆ ಈಗ ನಿರುದ್ಯೋಗ ಪರ್ವ. ಚುನಾವಣೆಯ ಫಲಿತಾಂಶ ಮುಕ್ಕಾಲು ಮೂರು ಪಾಲು ಘೋಷಿತವಾಗುತ್ತಿದ್ದಂತೆಯೇ ‘ಇನ್ನು ಈ ಸಲ ಗೌಡಪ್ಪ ಮತ್ತು ಅಯಪ್ಪನ ಮಕ್ಕಳ ಆಟ ನಡೆಯದು’ ಅಂತ ತೀರ್ಮಾನವಾಗಿ ಹೋಯಿತು.

devegowdaಅದಾದ ಮೇಲೆ ನನ್ನಲ್ಲಿ ಶುರುವಾದದ್ದೇ ಗೌಡರ ಮೆಂಟಾಲಿಟಿಯ ಬಗೆಗಿನ ಜಿಜ್ಞಾಸೆ, ಒಂದೇ ಒಂದು ದುಶ್ಚಟವೂ ಇಲ್ಲದ, ಪೂರ್ಣಾವಧಿ(ಜೀವಿತಾವಧಿ!)ರಾಜಕಾರಣಿಯಾದ, ಶತ್ರು ಸಂಹಾರೀ ಪರಾಕ್ರಮಿಯಾದ, ಮಕ್ಕಳೆಡೆಗೆ ಅಕ್ಷಮ್ಯ ಬಲಹೀನತೆ ಹೊಂದಿರುವ, ಜ್ಯೋತಿಷ್ಯ -ಮಾಟ ಮಂತ್ರ, ವಾಮಾಚಾರಗಳನ್ನು ವಿಪರೀತವಾಗಿ ನಂಬುವ ಈ ಯಜಮಾನ್ ದೇವೆಗೌಡರು ಯಾವತ್ತಿದ್ದರೂ ಮನೋವಿಜ್ಞಾನಿಗಳಿಗೆ ಒಂದು ಅಧ್ಯಯನಕ್ಕಾಗುವ ಶರೀರವೇ.

ಅವರ ಪ್ರಕಾರ ಮನುಷ್ಯನ ಮೂಲಶಕ್ತಿಗಳೆಂದರೆ ಕಾಮ ಮತ್ತು ಶತ್ರುವಿನ ಮೇಲೆರಗಿ ಹೋಗುವಿಕೆ, ಇವೆರಡರಲ್ಲೂ ಮನುಷ್ಯ ತಣಿಯಬೇಕು. ಹಾಗೆ ತಣಿದಾಗಲೇ ಮರಣ ಪ್ರವೃತ್ತಿ ಇಲ್ಲದಂತಾಗಿ ಜೀವನ ಪ್ರವೃತ್ತ್ತಿ ಮತ್ತು ಜೀವನ್ಮುಖತೆ ನಮ್ಮ ವ್ಯಕ್ತಿತ್ವದಲ್ಲಿ ತಲೆಯೆತ್ತುತ್ತವೆ. ದೇವೆಗೌಡರ ಸಮಸ್ಯೆಯೆಂದರೆ, ಅವರಲ್ಲಿ ಯಾವತ್ತಿಗೂ ತಣಿಯದ ಅಗ್ರೇಷನ್? ಹೀಗಾಗಿ ಅವರು ಯಾರನ್ನಾದರೂ ನಾಶ ಮಾಡುತ್ತಲೇ ಇರುತ್ತಾರೆ. ಅದು ಸಾಧ್ಯವಾಗದಿದ್ದಾಗ ತಾವೇ ನಾಶವಾಗುತ್ತಿರುತ್ತಾರೆ. ಅವರಿಗದು ಅನಿವಾರ್ಯ. ಇವತ್ತಿಗೂ ಹಳ್ಳಿ ಮನೆಗಳಲ್ಲಿ’ ಮದ್ದು’ ಹಾಕೋ ಅಜ್ಜಿಯರಿರುತ್ತಾರಂತೆ. ಯಾರೂ ಸಿಕ್ಕದಿದ್ದರೆ ತಮ್ಮ ಮಕ್ಕಳಿಗೆ ‘ಮದ್ದು’ ಹಾಕಿಬಿಡುತ್ತಾರಂತೆ. ನಮ್ಮ ದೇವೆಗೌಡರದು ಅದೇ ಜಾಯಮಾನ.

ಮೂಲತಃ ದೇವೆಗೌಡರು ಕೀಳರಿಮೆಗಳಿರುವ ಮನುಷ್ಯ. ಹೆಗಡೆಗಿದ್ದಂಥ ಚೆಂದ,ಛರಿಷ್ಮಾ ಇವರಿಗಿಲ್ಲ. ಅಂಥ ವಿದ್ಯೆ, ಬುದ್ಧಿವಂತಿಕೆಯೂ ಇಲ್ಲ. ಜನ್ಮತಃ ಶ್ರೀಮಂತರೂ ಅಲ್ಲ. ಇವೆಲ್ಲವೂ ಇದ್ದ ಹೆಗಡೆಯವರನ್ನು ದೇವೆಗೌಡ ಆರಂಭದಿಂದಲೂ ದ್ವೇಷಿಸಿದರು. ನೀವೇ ನೆನಪು ಮಾಡಿಕೊಂಡು ನೋಡಿ. ಜನತಾ(ಪರಿವಾರ) ದಳ ಐದು ಸಲ splitಆಯಿತು. ಆ ಪೈಕಿ ನಾಲ್ಕು ಸಲ ಹೋಳಾಗಲಿಕ್ಕೆ ಕಾರಣರಾದವರೇ ದೇವೆಗೌಡ! ಮೊದಲು 1983 ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಹೆಗಡೆಯನ್ನು ಹಣಿದು ಹಾಕಲು ದೇವೆಗೌಡ ಮುಂದಾದರು. ಆದರೆ ಹೆಗಡೆ ಇದ್ದಕ್ಕಿದ್ದ ಹಾಗೆ ಲಿಂಗಾಯತ ನಾಯಕರಾಗಿ emerge ಆಗಿ ಬಿಟ್ಟರು. ಅದೇ 1983 ರಲ್ಲಿ ಬ್ರಾಹ್ಮಣರು, ಲಿಂಗಾಯತರು ಒಕ್ಕೊರಲಾಗಿ ಬಿಜೆಪಿಯ ಬೆಂಬಲಕ್ಕೆ ನಿಂತಿದ್ದರಿಂಡ ಪಾರ್ಲಿಮೆಂಟಿಗೆ ಇವರು 18 ಜನ ಆಯ್ಕೆಯದರು. ಹೆಗಡೆ ಸಮಸ್ತರ ನಾಯಕರಾಗಿ emerge ಆದ ಕಾಲವದು. ಆದ ದೇವೆಗೌಡರು ಕೇವಲ ಒಕ್ಕಲಿಗ ನಾಯಕರಾಗಿ ಉಳಿದರು.

ಹೆಗಡೆಯೊಂದಿಗಿನ ಕದನ ಎಲ್ಲಿಯವರೆಗೆ ಮುಂದುವರೆಯಿತು ಅಂದರೆ, 1989 ರಲ್ಲಿ ಜನತಾ ಪರಿವಾರ ಇಬ್ಭಾಗವಾಯಿತು. ಮುಂದೆ ಇಡೀ ದೇಶದಲ್ಲೇಪರ್ಯಾಯ ಪಕ್ಷವಾಗಿ ಬೆಳೆಯಬಹುದಾದುದನ್ನು ಕೇವಲ ತಮ್ಮ ಕುತ್ಸಿತತನದಿಂದಾಗಿ ಹೋಳು ಮಾಡಿ, ಬೊಮ್ಮಾಯಿ ಸರ್ಕಾರವನ್ನು ದೇವೆಗೌಡ ಕೆಡವಿದರು. ಮುಂದೆ ಸಮಾಜವಾದಿ ಜನತಾ ಪಕ್ಷವೆಂದು ಹೆಸರಿಟ್ಟುಕೊಂಡು ಚುನಾವಣೆಗೆ ಹೋದರೆ ಇವರಿಗೆ ದಕ್ಕಿದ್ದು ಎರಡು ಸೀಟು. ಹುದ್ದು ದೇವೆಗೌಡರು ಸೋತರು.

ಆದರೆ ಸೋತೆ ಅಂತ ಚಾದರ ಹೊದ್ದುಕೊಂಡು ಮೂಲೆಯಲ್ಲಿ ಮಲಗುವ ಜಾಯಮಾನ ಗೌಡರದಲ್ಲ. ನಿಧಾನಕ್ಕೆ ಎದ್ದು ಸಿದ್ರಾಮಯ್ಯನನ್ನು ಹುರಿಗೊಳಿಸಿದರು. ನೀನೇ ನಾಯಕ ಅಂದರು. ಪಕ್ಕದಲ್ಲಿ ಸಿ.ಎಂ. ಇಬ್ರಾಹಿಂರನ್ನು ತಂದಿಟ್ಟುಕೊಂಡರು. ಎಂ.ಪಿ. ಪ್ರಕಾಶ್ ಗೆ ಜಾಗ ಕೊಟ್ಟರು. ಹೆಗಡೆಯ ಕಾಲು ಹಿಡಿದರು. ಬಹುಶಃ ದೇವರಾಜ ಅರಸು ಮತ್ತು ಹೆಗಡೆಯ ನಂತರ ಕರ್ನಾಟಕದ ಜಾತಿಗಳಕೆಮಿಸ್ಟ್ರಿ ಅರ್ಥಮಾಡಿಕೊಂಡವರೇ ದೇವೆಗೌಡ. ಹೀಗಾಗಿ ಲಿಂಗಾಯತ ಮತ್ತು ಒಕ್ಕಲಿಗ ಹೊಂದಾಣಿಕೆಗೆ ತಾವೇ ಚುಕ್ಕಾಣಿ ಹಿಡಿದು  ಖುಲ್ಲಂಖುಲ್ಲ 115 ಸೀಟು ಆಕ್ರಮಿಸಿಕೊಂಡುಬಿಟ್ಟರು. ಯಾವಾಗ ಚುನಾವಣೆ ಗೆದ್ದು, ತಮ್ಮದೇ ಸರ್ಕಾರ ಒಂದು ಕುರ್ಚಿಯ ಮೇಲೆ ವಿರಾಜಮಾನರಾದರೋ, ದೇವೆಗೌಡರಲ್ಲಿ ಮೂಲ ಮರಣ ಪ್ರವೃತ್ತಿ ಹೆಡೆಯೆತ್ತಿತು. ತಕ್ಷಣಕ್ಕೆ ಅವರಿಗೆ ಕಾಣಿಸಿದ ಶತ್ರುವೆಂದರೆ ರಾಮಕೃಷ್ಣ ಹೆಗಡೆ. 1996 ರಲ್ಲಿ ತಾವು ಪ್ರಧಾನ ಮಂತ್ರಿಯಾಗುತ್ತಿದ್ದಂತೆಯೇ ಹೆಗಡೆಯನ್ನು ತೆಗೆದುಬಿಟ್ಟರು. ಅದರ ಪರಿಣಾಮವಾಗಿ 1998 ರ ಲೋಕಸಭಾ ಚುನಾವಣೆಯಲ್ಲಿ ಗೌಡರ ಜನತಾದಳ ಅಷ್ಟೂ ಸೀಟು ಕಳೆದುಕೊಂಡಿತು. ಅಪ್ಪ ಮಕ್ಕಳು ಹೀನಾಯವಾಗಿ ಸೋತು ಅಪ್ಪಚ್ಚಿಯಾಗಿ ಹೋದರು. ಅವತ್ತಿನ ಲೋಕಶಕ್ತಿ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಲೋಕಸಭೆಗೆ 16 ಜನ ಆರಿಸಿ ಹೋದರು.

ಅವತ್ತಿನ ತನಕ ಆರೆಸ್ಸೆಸ್ಸಿನ ತೆಕ್ಕೆಯಲ್ಲಿದ್ದು ಧರ್ಮಾಧಾರಿತ ಮತಗಳನ್ನು ಮಾತ್ರ ಪಡೆಯುತ್ತಿದ್ದಬಿಜೆಪಿಗೆ ಮೊದಲ ಬಾರಿಗೆ ಲಿಂಗಾಯತ ಮತಬ್ಯಾಂಕಿನ base ಸಿಕ್ಕ ಹಾಗಾಯಿತು. ಹಾಗೆ ಬಿಜೆಪಿಗೊಂದುನೆಲೆ ದಕ್ಕುವುದಕ್ಕೇ ಕಾರನವಾದದ್ದೇ ದೇವೆಗೌಡರ ಮರಣ ಪ್ರವೃತ್ತಿಯ ರಾಜಕಾರಣ! ಮುಂದೆ ನೋಡಿ, ಹೆಗಡೆಯನ್ನುತೆಗೆದಾದ ಮೇಲೆ ಈವಯ್ಯ ಪಟೇಲರನ್ನುಮುಗಿಸಿ ಮೂಲೆ ಗುಂಪು ಮಾಡಿದರು. ಎಂಪಿ.ಪ್ರಕಾಶರನ್ನು ನಗಣ್ಯಮಾಡಿದರು.ಸಿಂಧ್ಯಾರನ್ನಂತೂ ಬಡಿದು ಕೂರಿಡಿಸಿಬಿಟ್ಟರು.ಯಾರ್ಯಾರು ತಮ್ಮ ಗೆಲುವಿಗೆ ಕಾರಣವಾಗಿದ್ದರೋ ಅವರನ್ನೆಲ್ಲ ತರಿದುಹಾಕಿದ ಗೌಡರ ಕಡೆಗೆ 1999 ರ ಹೊತ್ತಿಗೆ ಜೊತೆಯಲ್ಲಿಟ್ಟುಕೊಂಡದ್ದು ಒಬ್ಬ ಸಿದ್ರಾಮಯ್ಯ ಮತ್ತು ಇನ್ನೊಬ್ಬ ಎಚ್.ಸಿ. ಮಹದೇವಪ್ಪನನ್ನು ಮಾತ್ರ. ಉಳಿದವರೆಲ್ಲ ಅವತ್ತು ಜೆ.ಡಿ.ಯು ಕಡೆಗೆ ನಡೆದು ಹೋದರು. ಜನತಾ ಪರಿವಾರ ಮತ್ತೆ ಹೋಳಾಗಿತ್ತು.

ಮುಂದೆ ಎಸ್ಸೆಂಕೃಷ್ಣರ ಅವಧಿಯಲ್ಲಿ ದೇವೆಗೌಡರ ಪಾಡು, ಅದು ಪಾಡಲ್ಲ ಬಿಡಿ. ಕೃಷ್ಣ ಮತ್ತು ಡಿಕೆ ಶಿವಕುಮಾರು ಕೊಟ್ಟ ಹೊಡೆತಗಳು ಒಂದೊಂದಲ್ಲ. ಕಡೆಗೆ ಡೀಕೇಶಿಯ ಮನೆತನಕ ಹೋದ ರೇವಣ್ಣ “ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡು” ಅಂತ ಕೇಳುವ ಪರಿಸ್ಥಿತಿ ಬಂದು ಬಿಟ್ಟಿತ್ತು.

ಆಗ ಮತ್ತೆ ಗೌಡರಲ್ಲಿ ಶುರುವಾಯಿತಲ್ಲ, ಜೀವನ್ಮುಖಿ ಪ್ರವೃತ್ತಿ? ಇವರ ಜಾಯಮಾನವೇ ಅಂತಹುದು. ಸತ್ತಾಗ ಬದುಕುವ ಆಸೆ. ಬದುಕುವಾಗ ಸಾಯುವ ಹಂಬಲ. ಎಲ್ಲರೂ ಕೈ ಬಿಟ್ಟು ಹೋಗಿದ್ದಾಗ ಮತ್ತೆ ಎಲ್ಲರನ್ನೂ ಹುಡುಕಿಕೊಂಡು ಹೊರಟರು ದೇವೆಗೌಡ. ಅದೇ  ಸಿದ್ರಾಮಯ್ಯ, ಪ್ರಕಾಶ್, ಇಬ್ರಾಹಿಂ -ಎಲ್ಲರೂ 2004 ರಲ್ಲಿ ಮತ್ತೆ ಒಂದಾದರು.ಅದೃಷ್ಟ ಕೊಂಚ ಕಣ್ತೆರೆದು 58 ಸೀಟು ಗೆದ್ದರು. ಅಷ್ಟಾಗುತ್ತಿದ್ದಂತೆಯೇ ದೇವೆಗೌಡರಲ್ಲಿ ಮೋಹಿನಿ ಭಸ್ಮಾಸುರ ಬಂದು ಸ್ಥಾಪಿತನಾದ. ಸಿದ್ರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿ, ಅವರನ್ನು  ಹಚ್ಯಾ ಹಚ್ಯಾ ಮಾಡಿ, ತಮ್ಮ ಮಾತಿಗೆ ಕೋಲೆ ಬಸವನಂತೆ ತಲೆ ದೂಗುವ ಧರಂ ಸಿಂಗ್ ರನ್ನು ತಂದುಕೂಡಿಸಿಕೊಂಡರು.

ಅವತ್ತಿನ ತನಕ ಒಬ್ಬ ಶಾಸಕನಲ್ಲದೆ ಬೇರೆ ಏನೇನೂ ಆಗಿರದಿದ್ದ ತಮ್ಮ ಮಗ ಕುಮಾರಸ್ವಾಮಿಯನ್ನು ಮುಂಚೂಣಿಗೆ ತಂದ ದೇವೆಗೌಡರು ಸಿದ್ರಾಮಯ್ಯನನ್ನು ಕೆಲಸಕ್ಕೆ ಬಾರದಂತೆ ಮಾಡಿ ಕೂಡಿಸಿಬಿಟ್ಟರು. ಶಿವಮೊಗ್ಗ ಚುನಾವಣಾ ಸಭೆಗೆ ಸಿದ್ರಾಮಯ್ಯ ಹೋಡರೆ ಅಲ್ಲಿ ಕಾರ್ಯಕರ್ತರೇ ಇಲ್ಲದಂತೆ ಮಾಡಿ, ‘ನೀನೊಬ್ಬ ಲೀಡರೇ ಅಲ್ಲ” ಎಂಬಂತೆ ಆಟವಾಡಿಬಿಟ್ಟರು. ಬೇಸತ್ತ ಸಿದ್ರಾಮಯ್ಯ ಕೈಕೊಡವಿಕೊಂಡು ಕಾಂಗ್ರೆಸ್ಸಿಗೆ ಹೋಗುತ್ತಿದ್ದಂತೆಯೇ , ಮಗ ಕುಮಾರಸ್ವಾಮಿಯನ್ನು ಒಪ್ಪಂದಕ್ಕೆ ಬಿಟ್ಟು ಗೌಡರು ಬಿಜೆಪಿಯೊಂದಿಗೆ ಕೂಡಿಕೆ ಮಾಡಿಕೊಂಡರು! ಅಲ್ಲಿ ಅಸೆಂಬ್ಲಿಯಲ್ಲಿ ಮಾತಾಡಲಿಕ್ಕೆ ಬೇಕಲ್ಲ ಎಂಬ ಕಾರಣಕ್ಕೆ ಎಂ.ಪಿ. ಪ್ರಕಾಶರನ್ನು  ಇಟ್ಟುಕೊಂಡರೂ, ಗೃಹಮಂತ್ರಿಯಾಗಿದ್ದ ಅವರಮಾತು ಒಬ್ಬ ಹೆಡ್ ಕಾನ್ ಸ್ಟೇಬಲ್ಲೂ ಕೇಳದಂತೆ  ರೇವಣ್ಣನ ಮೂಲಕ ಮಾಡಿ ಕೂಡಿಸಿಬಿಟ್ಟರು.

ಈ ಶತ್ರು ಸಂಹಾರ ಮತ್ತು ಮರಣ ಪ್ರವೃತ್ತಿಗೆ ಕಟ್ಟ ಕಡೆಯಲ್ಲಿ ಬಲಿಯಾದದ್ದೆಂದರೆ ಚೆಲುವರಾಯಸ್ವಾಮಿ. ಅಕಸ್ಮತ್ ಜನತಾದಳಕ್ಕೆ ಹೆಚ್ಚಿನ ಸೀಟು ಬಂದರೆ ಮುಕ್ಕಾಲು ಪಕ್ಷವನ್ನೇ ಒಡೆದು ಕಾಂಗ್ರೆಸ್ಸಿನೊಂದಿಗೆ ಹೋಗಿಬಿಡಬಲ್ಲ ಚೈತನ್ಯ ಚೆಲುವರಾಯಸ್ವಾಮಿಗೆ ಇತ್ತು. ಕುಮಾರಸ್ವಾಮಿಯೊಂದಿಗೆ ಒಡನಾಟವಿದ್ದುದರಿಂದ, ಲಿಂಕುಗಳು, ತಂತ್ರಗಳು ಎಲ್ಲವೂ ಆತನಿಗೆ ಅರ್ಥವಾಗಿದ್ದವು. ಮೇಲಾಗಿ ದೇವೆಗೌಡರಯಾವುದೇ ಮಕ್ಕಳಿಗಿಂತ ಚೆಲುವರಾಯ ಧಾರಾಳಿ. ನಾಳೆ ಒಕ್ಕಲಿಗ ನಾಯಕನಾಗಿ ಬೆಳಯಬಲ್ಲ ವರ್ಚಸ್ವಿ. ಹೀಗಾಗಿ ಚೆಲುವರಾಯಸ್ವಾಮಿಯನ್ನು, ರೇವಣ್ಣನ ಮೂಲಕ ಮಾಡಬಾರದ ತಂತ್ರಗಳನ್ನೆಲ್ಲ ಮಾಡಿಸಿ ಸೋಲಿಸಿಯೇ ಬಿಟ್ಟರು. “ನಾವು ಅಧಿಕಾರಕ್ಕೆ ಬರದಿದ್ರೂ ಪರವಾಗಿಲ್ಲ. ಚೆಲುವ ಸೋತನಲ್ಲ? ಅಷ್ಟೇ ಸಾಕು” ಅಂದನಂತೆ ರೇವಣ್ಣ.

ಇವತ್ತು ದೇವೆಗೌಡರ ಬಳಿ ಲಿಂಗಾಯತರ್ಯಾರು ಇರಲಿಲ್ಲ. ದಲಿತರಿಲ್ಲ. ಹಿಂದುಳಿದವರಿಲ್ಲ. ಒಂದಷ್ಟು ಕಡೆ ಮುಸ್ಲಿಮರು ಮತ್ತು ಒಕ್ಕಲಿಗರ ಓಟು ಮಾತ್ರ ಬಿದ್ದವು. ಅವುಕೂದ ಅಭ್ಯರ್ಥಿಗಳ ವರ್ಚಸ್ಸಿನಿಂದ ದೊರೆತ ಮತಗಳೇ ಹೊರತು ಪಕ್ಷದ ಅಥವಾ ಗೌಡರ ವರ್ಚಸ್ಸಿಗೆ ಬಿದ್ದ ಮತಗಳಲ್ಲ. ಒಕ್ಕಲಿಗರಲ್ಲೂ  ದೇವೆಗೌಡರಿಗೆ ಮರಸೊಕ್ಕಲಿಗರನ್ನು ಕಂಡರೆ ಆಗುವುದಿಲ್ಲ. ಕುಂಚಟಿಗರು ಆಗಲ್ಲ. ದಾಸ ಒಕ್ಕಲಿಗರೂ ದೂರ. ಅವರಿಗೇನಿದ್ದರೂ ಮುಳ್ಳು ಒಕ್ಕಲಿಗ ಮತ್ತು ಗಂಗಟಕಾರರೇ ಆಗಬೇಕು. ಆ ಪೈಕಿಯೂ ತಮಗೆ ಬೇಡವಾದವರನ್ನ, ತಮ್ಮ ಮಕ್ಕಳನ್ನು ಮೀರಿ ಬೆಳೆಯಬಹುದಾದವರನ್ನು ಈಗಾಗಲೇ ಗೌಡರು ನಾಶ ಮಾಡಿದ್ದಾರೆ. ಅದಕ್ಕೆ ಚೆಲುವರಾಯ ಸ್ವಾಮಿ ಉದಾಹರಣೆಯೇ ಸಾಕು.

ಒಂದು ಕಾಲಕ್ಕೆ ದೇಶದ ಪ್ರಧಾನಿಯಾಗಿದ್ದ, ಪಕ್ಷವನ್ನು ಅದ್ಭುತವಾಗಿ ಕಟ್ಟಿಬೆಳೆಸಿದ, ಮೆರೆದ ಮನುಷ್ಯ ಇವತ್ತು ಪದ್ಮನಾಭನಗರದ ಮನೆಯಲಿ ಶುದ್ಧ ಒಬ್ಬಂಟಿ, ಇದು  ಅವರ ಮರಣ ಪ್ರವೃತ್ತಿಯ ಅತಿರೇಕದ ಸ್ಥಿತಿ. ರಾಷ್ಟ್ರಮಟ್ಟದಲ್ಲಂತೂ ದೇವೆಗೌಡರನ್ನು ಯಾರೆಂದರೆ ಯಾರೂ ನಂಬುವುದಿಲ್ಲ.

ಹಾಗಂತ ದೇವೆಗೌಡರು ಸುಮ್ಮನೆ ಕೂಡುತ್ತಾರೆ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ. ಅವರೀಗ ಬದುಕಬೇಕು. ನಾಳೆ ಲೋಕಸಭಾ ಚುನಾವಣೆಗಳು ಬರಲಿವೆ. ಆಸ್ಕರ್ ಫರ್ನಾಂಡೀಸ್ ರಂತಹ ಅಬ್ಬೇಪಾರಿಗಳನ್ನು ಹಿಡಿದು ಕಾಂಗ್ರೆಸ್ಸಿನೊಂದಿಗೆ ಮಾತುಕತೆ ಪ್ರಾರಂಭಿಸುತ್ತಾರೆ. ಯಡಿಯೂರಪ್ಪ ಕೇವಲ ಲಿಂಗಾಯತ ನಾಯಕಎಂದು ಬಿಂಬಿಸಿ, ಉಳಿದವರಲ್ಲಿ ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ಉಂಟುಮಾಡುತ್ತಾರೆ. ಅವರಿಗೆ ಚೆನ್ನಾಗಿ ಗೊತ್ತು; ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲೇ ಒಂದು ವರ್ಷದ ನಂತರ ಜಾತಿ ಅಸಮಾಧಾನಗಳು ಶುರುವಾಗುತ್ತವೆ. ಅದನ್ನು ನಂಬಿಕೊಂಡೇ ದೇವೆಗೌಡರು ತಮ್ಮ ಹೊಸ ಆಟ ಪ್ರಾರಂಭಿಸುತ್ತಾರೆ. ಅದು ಅವರ ವೃತ್ತಿ. ಅದೇ ಅವರ ಪ್ರವೃತ್ತಿ.

ಮೋಸಕ್ಕೆ ಒಳಗಾಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತೊಂದಿದೆ. ದೇವೆಗೌಡರು ನಂಬುವುದು ಅದನ್ನೇ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: