Daily Archives: ಆಗಷ್ಟ್ 8, 2009

Gifted poet’s Masterpiece – ವರಕವಿ ಬೇಂದ್ರೆಯವರ ಅಮರಕೃತಿ ಕನ್ನಡ `ಮೇಘದೂತ’-1

D R Bendreಬೇಂದ್ರೆ ಜನ್ಮದಿನಾಚರಣೆಯ ಅಂಗವಾಗಿ ವರಕವಿಯ `ಕನ್ನಡ ಮೇಘದೂತ’ದ ಎಂಟನೆಯ ಮುದ್ರಣ ಹೊರಬಂದಿದೆ. ಈ ಖಂಡಕಾವ್ಯ 48 ಪುಟಗಳ ಅನುವಾದ. ಹೊಸ ಮುದ್ರಣದ ವೈಶಿಷ್ಟ್ಯವೆಂದರೆ 49 ಪುಟಗಳ ಬೇಂದ್ರೆಯವರ ಮೂಲ ಹಸ್ತಪ್ರತಿಯನ್ನು ಜೊತೆಗೆ ಪ್ರಕಟಿಸಿದ್ದು. ಇದು ಕನ್ನಡ ಪ್ರಕಾಶನದಲ್ಲಿಯ ಒಂದು ವಿನೂತನ ಪ್ರಯೋಗ.
ವರಕವಿ ದ.ರಾ. ಬೇಂದ್ರೆಯವರು ಜನಮಾನಸದ ಕವಿ. ಕನ್ನಡ ಕಾವ್ಯದ ಸಾವಿರ ವರ್ಷಗಳ ಇತಿಹಾಸದಲ್ಲಿ ಕನ್ನಡದ ಸತ್ವವನ್ನು ಸಮರ್ಥವಾಗಿ ಬಳಸಿದ ಮೂರು ಕವಿಗಳೆಂದರೆ ಆದಿಕವಿ ಪಂಪ, ರೂಪಕಚಕ್ರವರ್ತಿ ಕುಮಾರವ್ಯಾಸ ಮತ್ತು ಶ್ರಾವಣಕವಿ ದ.ರಾ.ಬೇಂದ್ರೆ- ಎಂದು ಹೇಳಿದವರು ಕನ್ನಡದ ಹಿರಿಯ ಕವಿ-ವಿಮರ್ಶಕ ಗೋಪಾಲಕೃಷ್ಣ ಅಡಿಗರು.

ಜನೆವರಿ 31, ಬೇಂದ್ರೆಯವರು ಹುಟ್ಟಿದ ದಿನ. ಬೇಂದ್ರೆಯವರ112ನೆಯ ಹುಟ್ಟು ಹಬ್ಬವನ್ನು ಧಾರವಾಡದ ಬೇಂದ್ರೆಭವನದಲ್ಲಿ ಆಚರಿಸಲಾಯ್ತು. ಬೇಂದ್ರೆಯವರ ಸಪ್ತಸ್ಮಾರಕಗಳಿರುವ ಹುಬ್ಬಳ್ಳಿಯ `ಬೇಂದ್ರೆ ಕುಟೀರ’ದಲ್ಲಿ ಬೇಂದ್ರೆಯವರ ಹುಟ್ಟು ಹಬ್ಬವನ್ನು ಭಾರತೀಯ ಪಾಂಚಾಂಗದ ಪ್ರಕಾರ ಭಾರತ ಹುಣ್ಣಿಮೆಯ ಮರುದಿನ, ಗುರುಪ್ರತಿಪ್ರದೆಯಂದು, ಆಚರಿಸಲಾಗುವುದು. (22 ಫೆಬ್ರವರಿ). ಧಾರವಾಡದ ಧಾರಕ್ಕೆ ಹುಬ್ಬಳ್ಳಿಯ ಹೂಬಳ್ಳಿ ಸೇರಿದೆ. ಇವೆರಡು ಅವಳಿಪಟ್ಟಣಗಳಲ್ಲಿ ಬೇಂದ್ರೆಯವರ ಜನ್ಮದಿನದ ವಾತಾವರಣ ಒಂದು ತಿಂಗಳಕಾಲ ಹಬ್ಬಿರುವುದು ಒಂದು ವಿಶೇಷತೆಯೇ ಆಗಿದೆ.

ಈ ಸಂದರ್ಭಕ್ಕೆ ಪೀಠಿಕೆಯಂತೆ ವರಕವಿ ಬೇಂದ್ರೆಯವರ `ಕನ್ನಡ ಮೇಘದೂತ’ದ ಎಂಟನೆಯ ಮುದ್ರಣ ಹೊರಬಂದಿದೆ. ಈ ಖಂಡಕಾವ್ಯ 48 ಪುಟಗಳ ಅನುವಾದ. ಹೊಸ ಮುದ್ರಣದ ವೈಶಿಷ್ಟ್ಯವೆಂದರೆ 49 ಪುಟಗಳ ಬೇಂದ್ರೆಯವರ ಮೂಲ ಹಸ್ತಪ್ರತಿಯನ್ನು ಜೊತೆಗೆ ಪ್ರಕಟಿಸಿದ್ದು. ಇದು ಕನ್ನಡ ಪ್ರಕಾಶನದಲ್ಲಿಯ ಒಂದು ವಿನೂತನ ಪ್ರಯೋಗ. ಹಸ್ತಪ್ರತಿಯಲ್ಲಿ ಬೇಂದ್ರೆಯವರು ಮಾಡಿದ ತಿದ್ದುಪಡಿಗಳು ವಿಶಿಷ್ಟವಾಗಿವೆ. ಮುದ್ರಣದಲ್ಲಿ ಕರಡು ತಿದ್ದುವಾಗ ಬೇಂದ್ರೆಯವರೇ ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದಾರೆ. ಹಿಂದೆ ಬ್ರಿಟಿಶ್ ಕೌನ್ಸಿಲ್ ಲೈಬ್ರರಿಯಲ್ಲಿ ಒಂದು ಪುಸ್ತಕ ನೋಡಿದ ನೆನಪು. ಕೀಟ್ಸ ಕವಿಯ ಪ್ರಸಿದ್ಧಸಾಲು ”A thing of beauty is joy for ever” ಇದನ್ನು ಅವನು ನಾಲ್ಕಾರು ರೀತಿಯಿಂದ ತಿದ್ದಿದ್ದನ್ನು ಅವನ ಹಸ್ತಾಕ್ಷರಗಳಲ್ಲು ಪ್ರಕಟಿಸಿದ್ದರು. ಕವಿಯ ರಚನೆಯ ಬಗ್ಗೆ ಕೆಲವು ಹೊಸ ವಿಷಯಗಳನ್ನು ಅವರ ಹಸ್ತಪ್ರತಿಗಳು ತಿಳಿಸುತ್ತವೆ. ಈ ಮುದ್ರಣದಲ್ಲಿ ಇನ್ನೂ ಹಲವಾರು ಉಪಯುಕ್ತ ಬರಹಗಳು ಸೇರಿರುವುದರಿಂದ ಈ ಹೊತ್ತಿಗೆ 208 ಪುಟಗಳಷ್ಟು ಬೃಹತ್ತನ್ನು ಪಡೆದಿದೆ. ಎನ್.ಸಿ. ದೇಸಾಯಿ ಅವರ ವರ್ಣಚಿತ್ರಗಳು ಮತ್ತು ರೇಖಾಚಿತ್ರಗಳು ಇವೆ. ಬೇಂದ್ರೆ ಕಲಾವಿದರೆಂದೇ ಪ್ರಸಿದ್ಧರಾದ ಸುರೇಶ ಕುಲಕರ್ಣಿಯವರ ರೇಖಾಚಿತ್ರಗಳೂ ಹೊತ್ತಿಗೆಯ ಅಂದವನ್ನು ಹೆಚ್ಚಿಸಿವೆ.

Manuscript published in Bendre's Meghadoota
ವರಕವಿ ಬೇಂದ್ರೆಯವರು ಪ್ರಥಮ ಮುದ್ರಣದ ಮುನ್ನುಡಿಯಲ್ಲಿ (22-12-1943) ಹೀಗೆ ಬರೆದಿದ್ದಾರೆ:
“ಕರ್ನಾಟಕದಲ್ಲಿ ಕಾಲಿದಾಸನಿಗಿದ್ದಷ್ಟು ಮಾನ, ಭರತಖಂಡದಲ್ಲಿ ಬೇರೆ ಯಾವ ಪ್ರಾಂತದಲ್ಲಿ ಇದೆಯೋ ನನಗೆ ಗೊತ್ತಿಲ್ಲ. …ಪ್ರಖ್ಯಾತ ಪುಲಕೇಶಿಯ ಮಹತ್ವದ ಶಾಸನವನ್ನು ಬರೆದ ಐಹೊಳೆಯ ಕವಿ ರವಿಕೀರ್ತಿ, ತಾನು ಕಾಲಿದಾಸನ ಸಮಾನನಾಗಿರಬೇಕೆಂದು ಹವಣಿಸುತ್ತಿರುವುದಾಗಿ ನಮಗೆ ಗೊತ್ತಿದೆ. ನೃಪತುಂಗನ ಕವಿರಾಜಮಾರ್ಗದಲ್ಲಿ ಕಾಲಿದಾಸನು ಕನ್ನಡ ಕವಿಗಳ ಆದರ್ಶ ಪಂಕ್ತಿಗೆ ಸೇರಿದ್ದಾನೆ. ವೀರಕವಿ ರನ್ನ ಕಾಲಿದಾಸನಿಗೆ ನಮಿಸದೆ ಹೋಗಿಲ್ಲ. ಇಷ್ಟಿದ್ದರೂ, ಸಂಸ್ಕೃತ ಪ್ರಾಕೃತ ಗದ್ಯಪದ್ಯ ಕಾವ್ಯಗಳು ಕನ್ನಡಕ್ಕೆ ಬರುವದು ಪಂಪನಿಗಿಂತಲೂ ಪ್ರಾಚೀನವಾಗಿದ್ದರೂ, ಕನ್ನಡದಲ್ಲಿ ಶಾಕುಂತಲ, ಮೇಘದೂತಗಳು ಒಡಮೂಡಬೇಕಾದರೆ ಕ್ರಿ.ಶ. 19ನೆಯ ಶತಮಾನದ ವರೆಗೆ ಕಾಯಬೇಕಾಯಿತು.”

ತಾವು ಮಾಡಿದ ಭಾಷಾಂತರದ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ:
“ನನ್ನ ಕನ್ನಡ ಮೇಘದೂತ, ಭಾಷಾಂತರ ಎಂದು ನಾನು ಹೇಳಿಕೊಳ್ಳಲಾರೆ. ಆ ಗುಣ ಇದಕ್ಕಿಲ್ಲ. ಆದರೆ, ಮೇಘದೂತದ ಪ್ರತಿಪದ್ಯ ಓದಿ, ನನಗಾದ ಆನಂದವನ್ನು, ನಾನು ಕಂಡ ಚೆಲುವನ್ನು ಈ ಕನ್ನಡ ಪದ್ಯಗಳಲ್ಲಿ ಕಟ್ಟಿದ್ದೇನೆ, ರಚಿಸಿದ್ದೇನೆ. ಮಂದಾಕ್ರಾಂತ ವೃತ್ತದ ಬದಲು |3.3.2| ಇಂತಹ ಮೂರು ಗಣಗಳುಳ್ಳ ಎಂಟು ಮಾತ್ರೆಯ ಗಣ ಮೂರು, ಕೊನೆಗೊಂದು ಗುರು. ಅಂತೂ 26 ಮಾತ್ರೆಯ, ಮೂರು ನಾಲ್ಕು ಕಿಂಚಿತ್ ಯತಿಗಳುಳ್ಳ ಕೊನೆಯ ಪ್ರಾಸದ ಚತುಷ್ಪಾದದ ಒಂದು ಹೊಸ `ರಗಳೆ’ಯ ಜಾತಿಯನ್ನು ಇಲ್ಲಿ ರಚಿಸಿ ಬಳಸಿದ್ದೇನೆ. ಕಾಲಿದಾಸನ ಸಂಸ್ಕೃತವನ್ನರಿಯದ, ಹೆಣ್ಣುಗಂಡು ಇದನ್ನೋದಿಕೊಂಡು, ಒಂದು ಚಿತ್ತಪರಿಣಾಮವನ್ನು ಪಡೆಯಲೆಂದು, ಪಡೆಯುವರೆಂದು ನಾನು ಕೋರಿದ್ದೇನೆ.”

ಈ ಕೃತಿಯನ್ನು ಸಂಪಾದಿಸುವಲ್ಲಿ ಡಾ. ವಾಮನ ಬೇಂದ್ರೆಯವರು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಸಂಪಾದಕನ ಭೂಮಿಕೆಯಲ್ಲಿ ಕವಿಯ ಮನೋಭೂಮಿಕೆಯ ಬಗ್ಗೆ ಬರೆಯುತ್ತಾರೆ. ಇದು ಪ್ರಕಟಗೊಂಡಾಗ ರಸಿಕರ ವಿಮರ್ಶಕರ ಗಮನ ಸೆಳೆದಿತ್ತು. ಬಿ.ಎಚ್.ಶ್ರೀಧರ, ಪಂಡರೀನಾಥಾಚಾರ್ಯ ಗಲಗಲಿ, ಆರ್.ಜಿ.ಕುಲಕ್ರಣಿ, ಬಿ.ಬಿ.ರಾಜಪುರೋಹಿತ ಬರೆದ ಲೇಖನಗಳನ್ನು ಸಂಗ್ರಹಿಸಿದ್ದಾರೆ. ಬೇಂದ್ರೆಯವರ ಅವಸಾನದ ನಂತರ ನಡೆದ ಪುನರ್ ವಿಮರ್ಸ್ಜೆಯಲ್ಲಿ ಪ್ರಮುಖರಾದ ಎಚ್.ಎಸ್.ವೆಂಕಟೇಶಮೂರ್ತಿ, ಡಿ.ಆರ್.ನಾಗರಾಜ, ಜಿ.ಎಸ್.ಆಮೂರರ ರಸವಿಮರ್ಶೆಗಳ ಸಾರಾಂಶ ಒದಗಿಸಿದ್ದಾರೆ. ಇಲ್ಲಿಯ ಅನುವಾದದಲ್ಲಿ ಅಡಗಿರುವ ಬೇಂದ್ರೆಯವರ ಕಾವ್ಯಸಿದ್ಧಾಂತದ ನಿಲವನ್ನು ವಿವೇಚಿಸಿದ್ದಾರೆ.

ಪ್ರಕಾಶನ ಮಾಡಿದ ಕೆ.ಎಸ್.ಶರ್ಮಾ ಅವರು, `ಹಿಂದಾಗಲಿಲ್ಲ ಮುಂದಾಗಲಾರೆ | ಕವಿ ಕಾಲಿದಾಸ ನೀನು’ ಎಂಬ ಬೇಂದ್ರೆಯವರ ಸಾಲು ಅವರಿಗೂ ಅನ್ವಯಿಸಿತ್ತದೆ ಅನ್ನುತ್ತಾರೆ. `ಹಿಂದಾಗಲಿಲ್ಲ ಮುಂದಾಗಲಾರೆ | ಅಂಬಿಕಾತನಯ ನೀನು’ ಎಂದು ನಾವು ಹೇಳಬಹುದಾಗಿದೆ.

Advertisements

ಆಕ್ಸ್‌ಫರ್ಡ್‌ನ ಅರ್ಥಶಾಸ್ತ್ರಜ್ಞರೇ ಚರ್ಚೆಗೆ ಅಂಜಿದೊಡೆಂತಯ್ಯ?

ಹೆಸರು: ಡಾ ಮನಮೋಹನ್ ಸಿಂಗ್

ಹುದ್ದೆ: ಭಾರತದ ಪ್ರಧಾನಿ

ಶಿಕ್ಷಣ: ಪ್ರತಿಷ್ಠಿತ ಆಕ್ಸ್‌ಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ೧೯೬೨ರಲ್ಲಿ ಅರ್ಥ ಶಾಸ್ತ್ರದಲ್ಲೇ ಡಾಕ್ಟರೇಟ್.

ಸಾಧನೆ: 1966ರಲ್ಲಿ UNCTAD ಕಾರ್ಯದರ್ಶಿಯಾಗಿ ನೇಮಕ, 1971ರಲ್ಲಿ ಕೇಂದ್ರ ವಾಣಿಜ್ಯ ಖಾತೆಯ ಆರ್ಥಿಕ ಸಲಹೆಗಾರರಾಗಿ ನೇಮಕ, ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಉಪನ್ಯಾಸಕರಾಗಿ ಸೇವೆ, 1982ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ದ ಗವರ್ನರ್, 1987ರಲ್ಲಿ ‘ನ್ಯಾಮ್’ನ ‘ದಿ ಸೌತ್ ಕಮಿಷನ್’ನ ಮಹಾ ಕಾರ್ಯದರ್ಶಿಯಾಗಿ ಆಯ್ಕೆ.

ಅಷ್ಟೇ ಅಲ್ಲ, 1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನಿಯುಕ್ತಿಗೊಳ್ಳುವ ಮೊದಲು ಯುಜಿಸಿ ಅಧ್ಯಕ್ಷರಾಗಿ, ವಿತ್ತಖಾತೆ ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಪ್ರಧಾನಿ ಸಲಹೆಗಾರರಾಗಿಯೂ ಮನಮೋಹನ್ ಸಿಂಗ್ ಸೇವೆ ಸಲ್ಲಿಸಿದ್ದರು. ಈಗಂತೂ ಡಾ. ಮನಮೋಹನ್ ಸಿಂಗ್ ಅವರ profile ಇನ್ನೂ ದೊಡ್ಡದಾಗಿದೆ. ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅವರಂತೆ ಕಾಗದದ ಮೇಲಷ್ಟೇ ಖ್ಯಾತ ಅರ್ಥಶಾಸ್ತ್ರಜ್ಞರಾಗದೆ, ಭಾರತದ ಆರ್ಥಿಕ ಉದಾರೀಕರಣದ ಹರಿಕಾರ ಎನಿಸಿಕೊಂಡಿದ್ದಾರೆ. ಜತೆಗೆ ಪ್ರಧಾನಿಯಾಗಿ ಐದು ವರ್ಷ ಪೂರೈಸುವ ಹಂತಕ್ಕೆ ಬಂದಿದ್ದಾರೆ. ಇಂತಹ ಶ್ರೀಮಂತ ಅನುಭವವೊಂದೇ ಸಾಕು ಜಗತ್ತಿನ ಯಾವುದೇ ವ್ಯಕ್ತಿಯ ಜತೆ ಚರ್ಚೆಗಿಳಿಯಲು. ನಿಜ ಹೇಳಬೇಕೆಂದರೆ, ಚರ್ಚೆಗೆ ಬರುವಂತೆ ಮನಮೋಹನ್ ಸಿಂಗ್ ಅವರೇ ತಮ್ಮ ವಿರೋಧಿಗಳಿಗೆ ಪಂಥಾಹ್ವಾನ ನೀಡಬೇಕಿತ್ತು!
ಆದರೆ ಆಗಿದ್ದೇನು?

ಮಾರ್ಚ್ 25ರಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ ಸೋನಿಯಾ ಗಾಂಧಿಯವರು, “ಮನಮೋಹನ್ ಸಿಂಗ್ ಅವರೇ ನಮ್ಮ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ” ಎಂದು ಘೋಷಣೆ ಮಾಡಿದರು. ಪಕ್ಕದಲ್ಲೇ ಇದ್ದ ಮನಮೋಹನ್ ಸಿಂಗ್ ಎಷ್ಟು ಉತ್ಸಾಹಿತರಾದರೆಂದರೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿಯವರ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದರು. ಆಡ್ವಾಣಿಯವರನ್ನು “ಅವಕಾಶವಾದಿ” ಎಂದು ಟೀಕಿಸಿದರು. “ಆಡ್ವಾಣಿಯವರು ಗೃಹ ಸಚಿವರಾಗಿದ್ದಾಗ ಸಂಸತ್ತಿನ ಮೇಲೆ ದಾಳಿಯಾಯಿತು, ಕೆಂಪುಕೋಟೆಯ ಮೇಲೆ ಆಕ್ರಮಣ ನಡೆಯಿತು,  ಗುಜರಾತ್ ಹತ್ಯಾಕಾಂಡವೂ ಸಂಭವಿಸಿತು, ಇಂಡಿಯನ್ ಏರ್‌ಲೈನ್ಸ್ ವಿಮಾನವೂ ಅಪಹರಣಕ್ಕೊಳಗಾಯಿತು. ಕೊನೆಗೆ ಭಯೋತ್ಪಾದಕರಿಗೇ ಬಿಡುಗಡೆಯ ಉಡುಗೊರೆ ಸಿಕ್ಕಿತು. ಆಡ್ವಾಣಿಯವರ ಸಾಧನೆ ಇದೇ! “.
ಮನಮೋಹನ್ ಸಿಂಗ್ ಇಷ್ಟಕ್ಕೇ ಸುಮ್ಮನಾಗಲಿಲ್ಲ.

ಮಗ್ಗುಲಲ್ಲೇ ಸೋನಿಯಾ ಗಾಂಧಿಯವರು ಕುಳಿತಿದ್ದ ಕಾರಣದಿಂದಲೋ ಏನೋ ಹಿಂದೆಂದೂ ಕಾಣದಂತಹ ಧೈರ್ಯ ತೋರಿಸಿದ ಅವರು, “ನಾನು ದುರ್ಬಲ ಪ್ರಧಾನಿಯೋ ಅಥವಾ ಪ್ರಬಲ ಪ್ರಧಾನಿಯೋ ಎಂಬುದನ್ನು ನಮ್ಮ ಸರಕಾರದ ಸಾಧನೆಗಳೇ ಹೇಳುತ್ತವೆ. ಆದರೆ ನನ್ನನ್ನು ದುರ್ಬಲ ಪ್ರಧಾನಿ ಎನ್ನುವ ಆಡ್ವಾಣಿಯವರು, ಬಾಬರಿ ಮಸೀದಿ ನೆಲಸಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಬಿಟ್ಟರೆ ರಾಷ್ಟ್ರ ಕಲ್ಯಾಣಕ್ಕೆ ಯಾವ ಕೊಡುಗೆ ಕೊಟ್ಟಿದ್ದಾರೆ?” ಎಂದು ಬಿಟ್ಟರು!

ಅದು ನಿಜಕ್ಕೂ ಗಂಭೀರ ಆರೋಪವಾಗಿತ್ತು. ವರುಣ್ ಗಾಂಧಿಯವರು ಕೋಮುದ್ವೇಷ ಹುಟ್ಟುಹಾಕಿದ್ದಾರೆ ಎಂದು ಯಾವ ಭಾಷಣವನ್ನು ಕಾಂಗ್ರೆಸ್ ಟೀಕಿಸುತ್ತಿತ್ತೋ, ಮನಮೋಹನ್ ಸಿಂಗ್ ಟೀಕೆ ಕೂಡ ಅಷ್ಟೇ ಅಪಾಯಕಾರಿಯಾಗಿತ್ತು. ಹಾಗಂತ ಆಡ್ವಾಣಿಯವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರುದಿನ ಅಂದರೆ ಮಾರ್ಚ್ 26 ರಂದು ಅರುಣಾಚಲ ಪ್ರದೇಶದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಲು ನಿಂತ ಆಡ್ವಾಣಿ ಯವರು, ‘ಮನಮೋಹನ್ ಸಿಂಗ್ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಸೋನಿಯಾ ಗಾಂಧಿಯವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಪ್ರಧಾನಿ ಯಾರಾಗಬಹುದೆಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆದರೆ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಿಂದ ಹಿಂಬಾಗಿಲು ಬಿಟ್ಟು ನೇರವಾಗಿ ಜನರಿಂದ ಲೋಕಸಭೆಗೆ ಆಯ್ಕೆಯಾಗಬೇಕು! ಆಗ ಜನರೂ ಅವರನ್ನು ಒಪ್ಪಿಕೊಳ್ಳುತ್ತಾರೆ’ ಎಂದು ಮೊದಲ ಗುದ್ದು ನೀಡಿದರು. ‘ಮನಮೋಹನ್ ಸಿಂಗ್ ಅವರು ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ. ಸೋನಿಯಾ ಗಾಂಧಿಯವರ ಅನುಮತಿಯಿಲ್ಲದೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ! ಸೋನಿಯಾ ಅಂಕಿತವಿಲ್ಲದೆ ಒಂದು ಕಡತವೂ ಮುಂದೆ ಸಾಗುವುದಿಲ್ಲ’ ಎಂದು ಟೀಕಾಪ್ರಹಾರ ಮಾಡಿದರು. ಇನ್ನೂ ಮುಂದುವರಿದು, ‘ಅಮೆರಿಕದಲ್ಲಿ ಡೆಮೋಕ್ರಾಟ್ ಹಾಗೂ ರಿಪಬ್ಲಿಕನ್ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳು ಟೀವಿ ಮುಂದೆ ನೇರವಾಗಿ ಚರ್ಚಾಸಮರ ನಡೆಸುತ್ತಾರೆ. ಇಡೀ ದೇಶ ಅದನ್ನು ವೀಕ್ಷಿಸಿ, ಯಾರಿಗೆ ವೋಟು ಹಾಕಬೇಕೆಂದು ನಿರ್ಧರಿಸುತ್ತದೆ. ಮನಮೋಹನ್ ಸಿಂಗ್ ಅವರ ಜತೆ ನಾನೂ ನೇರ ಚರ್ಚೆಗೆ ಸಿದ್ಧನಿದ್ದೇನೆ’ ಎಂದರು.

ಅದು ಖಂಡಿತ ಒಳ್ಳೆಯ ಸವಾಲೇ ಆಗಿತ್ತು.

ಮನಮೋಹನ್ ಸಿಂಗ್ ಅವರ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಆ ಸವಾಲನ್ನು ಸ್ವೀಕರಿಸಬೇಕಿತ್ತು ಹಾಗೂ ಸ್ವೀಕರಿಸುತ್ತಿದ್ದರು. ಆದರೆ ಒಬ್ಬ ಜವಾಬ್ದಾರಿಯುತ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರು ೧೫ ದಿನಗಳ ಕಾಲ ಮೌನಕ್ಕೆ ಶರಣುಹೋಗಿದ್ದೇಕೆ? ಪಕ್ಷದ ವಕ್ತಾರೆ ಜಯಂತಿ ನಟರಾಜನ್ ಅವರ ಮೂಲಕ  “ಈ ಆಡ್ವಾಣಿಗೆ ಅಮೆರಿಕದ ಬಗ್ಗೆ ವ್ಯಾಮೋಹ ಹೆಚ್ಚು” ಎಂದು ಪ್ರತಿಕ್ರಿಯೆ ಕೊಡಿಸಿ, Spit and run ಥರಾ ಓಡಿ ಹೋಗಿದ್ದು ಎಷ್ಟು ಸರಿ? ಅಲ್ಪಸಂಖ್ಯಾತರ ವಿರುದ್ಧ ದ್ವೇಷಕಾರುವ ಭಾಷಣ ಮಾಡಿದ್ದಾರೆಂದು ವರುಣ್ ಗಾಂಧಿಯವರನ್ನು ಟೀಕಿಸಿದ ಮನಮೋಹನ್ ಸಿಂಗ್, “ಆಡ್ವಾಣಿಯವರ ಏಕೈಕ ಸಾಧನೆಯೆಂದರೆ ಬಾಬರಿ ಮಸೀದಿ ನೆಲಸಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದು” ಎಂದಿದ್ದೂ ಕೋಮುವಾದಿ ಹೇಳಿಕೆಯೇ ಆಗಿರಲಿಲ್ಲವೆ? ಅಷ್ಟಕ್ಕೂ, 17 ವರ್ಷಗಳ ಹಿಂದೆ ನಡೆದ ಬಾಬರಿ ಮಸೀದಿ ದ್ವಂಸ ಪ್ರಕರಣವನ್ನು ಕೆದಕಿದ್ದು, ಮುಸ್ಲಿಮರಲ್ಲಿ ಬಿಜೆಪಿ ವಿರುದ್ಧ ದ್ವೇಷಭಾವನೆ ಹುಟ್ಟುಹಾಕುವ ಹಾಗೂ ಮುಸ್ಲಿಮರನ್ನು ತಮ್ಮತ್ತ ಸೆಳೆದುಕೊಳ್ಳುವ ಒಳಉದ್ದೇಶದಿಂದಲೇ ಅಲ್ಲವೆ? ಅಂತಹ ಗುರುತರ ಆರೋಪ ಮತ್ತು ಟೀಕೆಯನ್ನು ಮಾಡಿದ ಮೇಲೆ ಮನಮೋಹನ್ ಸಿಂಗ್ ಅವರು ಮುಂದಿನ ಹಂತದ ಆರೋಪ-ಪ್ರತ್ಯಾರೋಪ ಅಥವಾ ಚರ್ಚೆಗೆ ಸಿದ್ಧವಾಗಿರ ಬೇಕಿತ್ತಲ್ಲವೆ?

ಆದರೆ ಚರ್ಚೆಯಿಂದ ಪಲಾಯನ ಮಾಡಿದ್ದೇಕೆ?

ಆಕ್ಸ್‌ಫರ್ಡ್‌ನಲ್ಲಿ ಓದಿದ, ರಿಸರ್ವ್ ಬ್ಯಾಂಕನ್ನು ಮುನ್ನಡೆಸಿದ, ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಮಹಾನ್ ವ್ಯಕ್ತಿಯಲ್ಲೇ ‘Courage of conviction” ಇಲ್ಲ ಅಂದರೆ ಹೇಗೆ ಸ್ವಾಮಿ? ಇಷ್ಟೆಲ್ಲಾ ಅನುಭವ ಹೊಂದಿರುವ ನಿಮ್ಮನ್ನು ಸಮರ್ಥಿಸಿಕೊಳ್ಳಲು ಆ ರಾಜ್‌ದೀಪ್ ಸರ್ದೇಸಾಯಿ, ಅವರ ಪತ್ನಿ ಸಾಗರಿಕಾ ಘೋಷ್, ನಿಖಿಲ್ ವಾಗ್ಲೆ, ಬರ್ಖಾ ದತ್ ಏಕೆ ಬೇಕು ಸಾರ್?! ಮೊನ್ನೆ ಲಂಡನ್‌ನಲ್ಲಿ ನಡೆದ ಜಿ-೨೦ ರಾಷ್ಟ್ರಗಳ ಸಭೆಯ ವೇಳೆ ತನ್ನ ಮಗಳಿಗಾಗಿ ಆಟೋಗ್ರಾಫ್ ಕೊಡಿ ಎಂದು ಬರಾಕ್ ಒಬಾಮ ಅವರನ್ನು ಕೇಳಿಕೊಂಡ ಮನಮೋಹನ್ ಸಿಂಗ್, ‘ನೀವು ಭಾರತದಲ್ಲಿರುವ ಯುವಜನತೆಯಲ್ಲೂ ಅಪಾರ ಜನಪ್ರಿಯತೆ ಹೊಂದಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬರಾಕ್ ಒಬಾಮ ಭಾರತದ ಯುವಜನತೆಯ ಮನಗೆದ್ದಿದ್ದು ಅವರ ಮಾತಿನ ಮೋಡಿಯಿಂದಲೇ ಅಲ್ಲವೆ? ಆಡಳಿತದ ಯಾವ ಅನುಭವವೂ ಇಲ್ಲದ ಬರಾಕ್ ಒಬಾಮ ಎಂಬ ಮೊದಲ ಬಾರಿಯ ಸೆನೆಟರ್. ಹಾಗಿದ್ದರೂ ವಿಯೆಟ್ನಾಂ ಯುದ್ಧದ ಹೀರೋ, ರಿಪಬ್ಲಿಕನ್ ಪಕ್ಷದ ಹಿರಿಯ ನೇತಾರ, ನಾಲ್ಕು ಬಾರಿ ಸೆನೆಟರ್ ಆಗಿದ್ದ ಅನುಭವಿ ಜಾನ್ ಮೆಕೇನ್ ಅವರನ್ನೇ ಸೋಲಿಸುತ್ತಾರೆಂದರೆ ಇನ್ನು ಐದು ವರ್ಷ ಪ್ರಧಾನಿಯಾಗಿರುವ ಹಾಗೂ ಅನುಭವ ಶ್ರೀಮಂತಿಕೆ ಹೊಂದಿರುವ ನೀವೇ ಪುಕ್ಕಲರಂತೆ ಓಡಿ ಹೋದರೆ ಹೇಗೆ ಸ್ವಾಮಿ?

ಆಡ್ವಾಣಿಯವರ ಬಗ್ಗೆ ಸಿಟ್ಟು ಮಾಡಿಕೊಳ್ಳಲು, ಅವರೇನು ಇದೇ ಮೊದಲ ಬಾರಿಗೆ ನಿಮ್ಮನ್ನು ಈ ದೇಶ ಕಂಡ ಅತ್ಯಂತ ‘ದುರ್ಬಲ ಪ್ರಧಾನಿ’ ಎಂದು ಹೇಳಿದ್ದಲ್ಲ. ಕಳೆದ ಮೂರು ವರ್ಷಗಳಿಂದಲೂ ಹಾಗೆ ಹೇಳುತ್ತಾ ಬಂದಿದ್ದಾರೆ. ಅಂತಹ ಮಾತನ್ನು ಇದುವರೆಗೂ ನೀವು ನಿರ್ಲಕ್ಷಿಸುತ್ತಾ ಬಂದಿದ್ದೇನೋ ಸರಿ. ಆದರೆ ನಿಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಸೋನಿಯಾ ಗಾಂಧಿಯವರು ಘೋಷಣೆ ಮಾಡಿದ ಕೂಡಲೇ ಕೋಪ ನೆತ್ತಿಗೇರಿಸಿಕೊಂಡು ಪ್ರತಿದಾಳಿ ಮಾಡಿದ ಮೇಲೆ ಮುಂದಿನ ಸುತ್ತಿಗೂ ತಯಾರಾಗಬೇಕಿತ್ತಲ್ಲವೆ? ಆದರೆ ಪಲಾಯನವಾದ ವೇಕೆ? ಭಯ ಕಾಡುತ್ತಿದೆಯೇ? ಅಮೆರಿಕದ ಜತೆಗಿನ ಅಣುಸಹಕಾರ ಒಪ್ಪಂದ ವಿಷಯದಲ್ಲಿ ನೀವು ತೋರಿದ ಧೈರ್ಯ, ದೃಢ ನಿಲುವು ಎಲ್ಲವೂ ಮೆಚ್ಚುವಂಥವುಗಳೇ ಆಗಿದ್ದವು. ಆದರೆ ಅವುಗಳನ್ನು ಹೊರತುಪಡಿಸಿ ಹೇಳಿಕೊಳ್ಳಲು ನಿಮ್ಮ ಬಳಿ ಯಾವ ಸಾಧನೆಗಳಿವೆ?

ನೀವೇ ಹೇಳಿ?

ಕಳೆದ ೫ ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ಮಾಡಿರುವ ಸಾಧನೆಯಾದರೂ ಏನು? ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸವಲತ್ತಿನ ಬಗ್ಗೆ ಮಾತನಾಡುತ್ತೀರಲ್ಲಾ, ಈ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿ ಜನರ ಬಾಯನ್ನೇ ಮುಚ್ಚಲು ಪ್ರಯತ್ನಿಸಿದವರಾರು? ಅದು ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳುವ ಯತ್ನವಾಗಿರಲಿಲ್ಲವೆ? ಗುಜರಾತ್ ಹಿಂಸಾಚಾರ ತಪ್ಪು ಎನ್ನುವುದಾದರೆ ೧೯೮೪ರ ಸಿಖ್ ಹತ್ಯಾಕಾಂಡ ಸರಿಯೆ? ಗುಜರಾತ್ ಹಿಂಸಾಚಾರಕ್ಕಾಗಿ ಬಿಜೆಪಿ ದೇಶದ ಕ್ಷಮೆಯಾಚಿಸಿಲ್ಲ ಎಂದು ದೂರುತ್ತೀರಲ್ಲಾ, ಸಿಖ್ ಹತ್ಯಾಕಾಂಡಕ್ಕಾಗಿ ನೀವು ದೇಶದ ಕ್ಷಮೆಯಾಚಿಸಲು 20 ವರ್ಷಗಳನ್ನು ತೆಗೆದುಕೊಂಡಿದ್ದೇಕೆ? ಒಂದು ವೇಳೆ ಆಡ್ವಾಣಿಯವರು ಬಾಬರಿ ಮಸೀದಿ ನೆಲಸಮಕ್ಕೆ ಕಾರಣ ಎನ್ನುವುದಾದರೆ, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ (ನೀವೂ ಮಂತ್ರಿಯಾಗಿದ್ದ) ಕಾಂಗ್ರೆಸ್ ಸರಕಾರ ಮೂಕಪ್ರೇಕ್ಷಕನಾಗಿ ಕುಳಿತಿದ್ದೇಕೆ? ಧರ್ಮನಿರಪೇಕ್ಷತೆಯ ಬಗ್ಗೆ ಭಾಷಣ ನೀಡುತ್ತೀರಲ್ಲಾ, ದೇಶಾದ್ಯಂತ ಸಮಾನ ನಾಗರೀಕ ಸಂಹಿತೆಯನ್ನು ಜಾರಿಗೆ ತರಲು ಏಕೆ ವಿರೋಧಿಸುತ್ತೀರಿ? ಬಿಜೆಪಿಯನ್ನು ಕೋಮುವಾದಿ ಎನ್ನುವುದಾದರೆ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯನ್ನು ಪ್ರತಿಪಾದಿಸಿದ ಮುಸ್ಲಿಂ ಲೀಗ್‌ನ ಹಾಲಿ ರೂಪವಾದ ಇಂಡಿಯನ್ ಯುನಿಯನ್ ಆಫ್ ಮುಸ್ಲಿಂ ಲೀಗ್ ಜತೆ ನೀವು ಕೇರಳದಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಿರುವುದೇಕೆ? ವರುಣ್ ಗಾಂಧಿ ಮಾತನಾಡಿದ ಕೂಡಲೇ ಜೈಲಿಗೆ ತಳ್ಳಬೇಕು ಎನ್ನುತ್ತೀರಲ್ಲಾ ಮಹಾರಾಷ್ಟ್ರದಲ್ಲಿ ಪ್ರಾದೇಶಿಕತೆ ಮತ್ತು ಭಾಷೆ ಹೆಸರಿನಲ್ಲಿ ರಾಜ್‌ಠಾಕ್ರೆ ಮಾಡಿದ್ದೇನು? ಅವರನ್ನೇಕೆ ನಿಮ್ಮ ಕಾಂಗ್ರೆಸ್ ಸರಕಾರ ಬಂಧಿಸಿ ಜೈಲಿಗೆ ತಳ್ಳಿಲ್ಲ? ರಾಜ್ ಠಾಕ್ರೆಯನ್ನು ಪೋಷಿಸಿದರೆ ಭಾಳಾ ಠಾಕ್ರೆಯವರನ್ನು ಹತ್ತಿಕ್ಕಬಹುದು ಎಂಬ ಲೆಕ್ಕಾಚಾರವೇ? ವಿದೇಶಿಯರು ಟಿಬೆಟ್ ಪರವಾಗಿ ಭಾರತದಲ್ಲಿ ಪ್ರತಿಭಟನೆ ನಡೆಸುವ ವಿರುದ್ಧ ನಿರ್ಬಂಧ ಹೇರಿದ್ದೀರಲ್ಲಾ, ವಿದೇಶಿ ಮಿಷನರಿಗಳು ಭಾರತದಲ್ಲಿ ಮತಪ್ರಚಾರ ಮಾಡಲು ಅವಕಾಶ ಕೊಟ್ಟಿರುವುದೇಕೆ? ನಿಮ್ಮ ಧರ್ಮನಿರಪೇಕ್ಷತೆ ಎಂಥದ್ದು ಎಂಬುದು ಇದರಿಂದ ಗೊತ್ತಾಗುವುದಿಲ್ಲವೆ?

ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ಮಾಡಿದ್ದು ಹಾಗೂ ಮಾಡುತ್ತಿರುವುದು ಖಂಡಿತ ರಾಜಕಾರಣವನ್ನೇ.

ಆದರೆ ನೀವು ಮಾಡುತ್ತಿರುವುದೇನು? ರಾಮಸೇತು ವಿವಾದ ವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ಬದಲು ಸುಪ್ರೀಂಕೋರ್ಟ್‌ನಲ್ಲಿ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿತಲ್ಲಾ ನಿಮ್ಮ ಸರಕಾರ, ಕ್ರೈಸ್ತರ ಮೂಲದೈವ ಲಾರ್ಡ್ ಅಬ್ರಹಾಂನ ಅಸ್ತಿತ್ವವನ್ನು ಪ್ರಶ್ನಿಸುವ ತಾಕತ್ತು ನಿಮಗಿದೆಯೇ? ರಾಮಸೇತುವನ್ನು ‘ಅಡಮ್ಸ್ ಬ್ರಿಜ್’ ಎಂದು ಉಲ್ಲೇಖಿಸುತ್ತೀರಲ್ಲಾ ಯಾವನು ಆ ಅಡಮ್ಸ್? ನೀವು ಮಾಡುತ್ತಿರುವುದು ವಿಭಜಕ ರಾಜಕಾರಣ ವನ್ನಲ್ಲವೆ? ಮನಮೋಹನ್ ಸಿಂಗ್ ಅವರೇ, ಆರ್ಥಿಕ ವಿಚಾರದಲ್ಲಿ ನೀವು ಖಂಡಿತ ಬುದ್ಧಿವಂತರಿರಬಹುದು, ಆದರೆ ಅಮರನಾಥ ಸಂಘರ್ಷದ ವೇಳೆ, ‘ಹೊಸ ದಿಲ್ಲಿಗಿಂತ ಮುಜಫ್ಫರಾಬಾದೇ(ಪಾಕಿಸ್ತಾನ) ನಮಗೆ ಹತ್ತಿರ’ ಎಂದ ಮೆಹಬೂಬಾ ಮುಫ್ತಿಗೆ ಒಂದು ಸಣ್ಣ ಎಚ್ಚರಿಕೆಯನ್ನೂ ಕೊಡದ ನೀವು ದುರ್ಬಲ ಪ್ರಧಾನಿಯಲ್ಲದೆ ಪ್ರಬಲರೇನು? ಆಕೆ ಆಡಿದ್ದು ದೇಶ ತುಂಡರಿಸುವ ಮಾತನ್ನೇ ಅಲ್ಲವೆ? ಒಂದು ಹಾಗೂ ಎರಡು ರೂಪಾಯಿ ನಾಣ್ಯದ ಮೇಲೆ ಕ್ರಾಸ್ ಅಚ್ಚುಹಾಕಿಸಿದ್ದು ಯಾವ ಸೀಮೆ ಜಾತ್ಯತೀತವಾದ? ನೀವೇ ಉತ್ತರಿಸಿ, ದೇಶವನ್ನು ಮುನ್ನಡೆಸುವುದು ಕಷ್ಟವೋ ಅಥವಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ  ಗೆಲ್ಲುವುದು ಕಷ್ಟವೋ? ಒಬ್ಬ ಅನಕ್ಷರಸ್ಥನೂ ಚುನಾವಣೆಯಲ್ಲಿ ಗೆಲ್ಲುವುದೇ ಸುಲಭ ಎಂದು ಹೇಳುತ್ತಾನೆ. ಆದರೆ ದೇಶದಲ್ಲೇ ಅತ್ಯಂತ ಜನಪ್ರಿಯ ವ್ಯಕ್ತಿ ನೀವು ಎನ್ನುವುದಾದರೆ, ನಿಮ್ಮ ಪ್ರಾಬಲ್ಯವೇನೆಂಬುದನ್ನು ನಿಮ್ಮ ಸರಕಾರದ ಸಾಧನೆಗಳೇ ಹೇಳುವುದಾದರೆ ಏಕೆ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ? ರಾಜ್ಯಸಭೆಯೆಂಬ ಹಿಂಬಾಗಿಲೇ ಏಕೆ ಬೇಕು? ದೇಶದ ಮತದಾರರಲ್ಲಿ ಹೆಚ್ಚಿನವರು ದಡ್ಡರು, ಅನಕ್ಷರಸ್ಥರು, ಜಾತಿ ನೋಡಿ ವೋಟು ಹಾಕುವವರು ಎಂದೇ ಇಟ್ಟುಕೊಂಡರೂ ಯಾವ ಒಂದು ಜಾತಿಯ ಹಿಡಿತದಲ್ಲೂ ಇರದ ದಕ್ಷಿಣ ದಿಲ್ಲಿಯಂತಹ ದೇಶದ ಅತ್ಯಂತ ಸುಶಿಕ್ಷಿತ ಕ್ಷೇತ್ರದಲ್ಲಿ  ನೀವು ೧೯೯೯ರಲ್ಲಿ ಸೋತಿದ್ದೇಕೆ?

ಸ್ವಿಸ್ ಬ್ಯಾಂಕ್‌ನಲ್ಲಿ ೨೫ ಲಕ್ಷ ಕೋಟಿ ರೂ. ಕಳ್ಳ ಹಣವಿದೆ ಎಂದು ಆಡ್ವಾಣಿಯವರು ಗಂಭೀರ ಆರೋಪ ಮಾಡಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಆ ಹಣವನ್ನು ವಾಪಸ್ ತರುವುದಾಗಿ ವಾಗ್ದಾನ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ನಿಮ್ಮ ಪಕ್ಷದ ವಕ್ತಾರ ಜೈರಾಮ್ ರಮೇಶ್ ಆಡುತ್ತಿರುವ ಮಾತುಗಳೇನು? ‘ಆಡ್ವಾಣಿ ಸುಳ್ಳು ಹೇಳುತ್ತಿದ್ದಾರೆ, ಇಂಟರ್‌ನೆಟ್ ಹಾಗೂ ಅಲ್ಲಿ ಇಲ್ಲಿ ತಡಕಾಡಿ ಹುಸಿ ಅಂಕಿ-ಆಂಶ ನೀಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗೇಕೆ ಹಣವನ್ನು ವಾಪಸ್ ತರಲಿಲ್ಲ?’ ಎಂದು ಪ್ರಶ್ನಿಸುತ್ತಿರುವ ಜೈರಾಮ್ ರಮೇಶ್ ಅವರ ಮಾನಸಿಕ ಆರೋಗ್ಯ ಕೆಟ್ಟಿದೆ ಎಂದು ನಿಮಗನಿಸುತ್ತಿಲ್ಲವೆ? ಒಂದು ವೇಳೆ, ಆಡ್ವಾಣಿಯವರು ಸುಳ್ಳು ಹೇಳುತ್ತಿದ್ದಾರೆ ಎಂದರೆ ಸತ್ಯ ಯಾವುದು? ಅವರ ಅಂಕಿ-ಅಂಶ ತಪ್ಪಿರಬಹುದು. ಆದರೆ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಕಳ್ಳಸಂಪತ್ತು ಇರುವುದು ಸುಳ್ಳಾ? ಎಷ್ಟಾದರೂ ಇರಲಿ, ವಾಪಸ್ ತರುತ್ತೇವೆ ಎಂದು ನೀವೇ ಏಕೆ ಹೇಳುವುದಿಲ್ಲ? ಬಿಜೆಪಿಯವರು ಅಧಿಕಾರದಲ್ಲಿದ್ದಾಗೇಕೆ ಹಣವನ್ನು ವಾಪಸ್ ತರಲಿಲ್ಲ ಎಂದು ಪ್ರಶ್ನಿಸುತ್ತಿದ್ದೀರಲ್ಲಾ, ತನ್ನಲ್ಲಿ ಖಾತೆ ಹೊಂದಿದವರ ಹೆಸರುಗಳನ್ನು ಬಹಿರಂಗಪಡಿಸಲು ಸ್ವಿಸ್ ಬ್ಯಾಂಕ್ ಒಪ್ಪಿಕೊಂಡು ೬ ತಿಂಗಳೂ ಆಗಿಲ್ಲ. ಅದೂ ಅಮೆರಿಕದ ತೀವ್ರ ಒತ್ತಡದ ಮೇರೆಗೆ ಮಾಹಿತಿ ನೀಡಲು ಒಪ್ಪಿಕೊಂಡಿದೆಯಷ್ಟೇ. ಜತೆಗೆ ಒಂದು ದೇಶದ ಹಾಲಿ ಸರಕಾರ ಔಪಚಾರಿಕವಾಗಿ ಮನವಿ ಸಲ್ಲಿಸಿದರೆ ಮಾತ್ರ ಮಾಹಿತಿ ನೀಡುತ್ತದೆ. ಈಗ ಅಧಿಕಾರದಲ್ಲಿರುವುದು ಯುಪಿಎನೋ, ಎನ್‌ಡಿಎಯೋ?

ಬಹಿರಂಗ ಚರ್ಚೆಗೆ ಬಂದರೆ ಈ ಮೇಲಿನ ವಿಚಾರಗಳೆಲ್ಲ ಬಹಿರಂಗವಾಗುತ್ತವೆ, ನಿಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಕಾಡುತ್ತಿದೆಯೇ ಮನಮೋಹನ್ ಸಿಂಗ್ ಅವರೇ?

ಅಂದಮಾತ್ರಕ್ಕೆ ಆಡ್ವಾಣಿಯವರನ್ನೇನು ಹೊಗಳುತ್ತಿಲ್ಲ.  ಒಬ್ಬ ಗೃಹ ಸಚಿವರಾಗಿ ಆಡ್ವಾಣಿಯವರು ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡಿಲ್ಲ. ಒಳ್ಳೆಯದೆಲ್ಲ ತನ್ನದು, ಕೆಟ್ಟದ್ದೆಲ್ಲಾ ವಾಜಪೇಯಿಯವರದ್ದು ಎನ್ನುವ ಆಡ್ವಾಣಿಯವರು ಕಿಲಾಡಿ ಅಸಾಮಿಯೇ ಸರಿ. ಒಬ್ಬ ರಾಜಕಾರಣಿಯಲ್ಲಿರುವ ಎಲ್ಲ ಗುಣ-ದೋಷಗಳೂ ಅವರಲ್ಲಿವೆ. ಹಾಗಂತ ಅವರನ್ನು ಪ್ರಧಾನಿ ಹುದ್ದೆಗೆ ಅನರ್ಹ ಎಂದು ಹೇಳಲು ಸಾಧ್ಯವಿಲ್ಲ. ಅವರೊಬ್ಬ ಮಹಾನ್ ಸಂಘಟಕ, Strategist. ನೀವು ಆಕ್ಸ್‌ಫರ್ಡ್‌ನಲ್ಲಿ ಓದಿದ್ದರೂ ಆಡ್ವಾಣಿಯವರು ನಿಮಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲರು. Pseudo-secularism, cultural nationalism, Hindutva, minorityism ಮುಂತಾದ ಪದ, ಪದಗುಚ್ಛಗಳನ್ನು ಸೃಷ್ಟಿಸಿದ್ದು, ಆ ಮೂಲಕ ತಮ್ಮ ರಾಷ್ಟ್ರವಾದವನ್ನು ಸಮರ್ಥಿಸಿಕೊಂಡಿದ್ದು ಸಾಮಾನ್ಯ ಮಾತಲ್ಲ. 1984ರ ಚುನಾವಣೆಯಲ್ಲಿ 2 ಸ್ಥಾನಗಳಿಗಿಳಿದಿದ್ದ ಬಿಜೆಪಿಯನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅವರೇ. ಅಟಲ್ ಪ್ರಧಾನಿಯಾಗಿದ್ದರ ಹಿಂದೆ ಆಡ್ವಾಣಿಯವರ ಪರಿಶ್ರಮವಿದೆ. ಈಗ ತಾವೇ ಪ್ರಧಾನಿಯಾಗಬೇಕೆಂದು ಅವರು ಆಸೆ ಪಡುತ್ತಿರುವುದರಲ್ಲಿ ಯಾವ ತಪ್ಪೂ ಇಲ್ಲ.

ನಿಮ್ಮಿಬ್ಬರನ್ನೂ ತೆಗಳುವ ಉದ್ದೇಶ ಇಲ್ಲಿಲ್ಲ. ಆದರೆ ನೀವಿ ಬ್ಬರೂ ಚರ್ಚೆಗೆ ಕುಳಿತಿದ್ದರೆ ಅದರಿಂದ ಒಬ್ಬ ಸಾಮಾನ್ಯ ಮತದಾರನಿಗೆ ಅನುಕೂಲವಾಗುತ್ತಿತ್ತು. ಅಷ್ಟಕ್ಕೂ ಪ್ರಜಾ ಪ್ರಭುತ್ವ ಬೆಳೆಯಬೇಕಾದರೆ ಆಗಾಗ್ಗೆ ಆರೋಗ್ಯಕರ ಚರ್ಚೆಗಳೂ ನಡೆಯಬೇಕು. ಅದಕ್ಕೆ ಚುನಾವಣೆಗಿಂತ ಒಳ್ಳೆಯ ಸಂದರ್ಭ ಯಾವುದಿದೆ? ಹಾಗಿರುವಾಗ ಒಂದು ಘನ ಚರ್ಚೆಗೆ ನಾಂದಿಯಾಗುವ ಮೂಲಕ ಕೈ ಕಡಿ, ಕತ್ತು ಕಡಿ, ರೋಲರ್ ಹತ್ತಿಸುತ್ತೇನೆ ಎಂಬ ಚಿಲ್ಲರೆ ರಾಜಕೀಯದಲ್ಲಿ ತೊಡಗಿರುವವರಿಗೆ ನಿಮ್ಮಂಥ ಸಭ್ಯರಾಜಕಾರಣಿಗಳು ಮೇಲ್ಪಂಕ್ತಿ ಹಾಕಿಕೊಡಬಹುದಿತ್ತು. ಇಂಥದ್ದೊಂದು ಚರ್ಚೆ ನಡೆದಿದ್ದರೆ ಜಾತಿ ಹಾಗೂ ಇನ್ನಿತರ ಲೆಕ್ಕಾಚಾರದ ಮೇಲೆ ಪ್ರಧಾನಿ ಸ್ಥಾನಕ್ಕೇರಲು ಹವಣಿಸುತ್ತಿರುವವರಿಗೂ ಒಂದು ಪಾಠವಾಗುತ್ತಿತ್ತು. ಲಲ್ಲು, ಉಲ್ಲು, ಪಾಸ್ವಾನ್, ಪವಾರ್ ಹಾಗೂ ಸ್ವತಂತ್ರವಾಗಿ ನಾಲ್ಕು ಸಾಲು ಹೇಳಲು ಬಾರದ ಮಾಯಾವತಿಯವರಂತಹವರೂ ಪ್ರಧಾನಿ ಸ್ಥಾನಕ್ಕಾಗಿ ಜೊಲ್ಲು ಸುರಿಸುವ ಮೊದಲು ಬೆವರುಹರಿಸಬೇಕಾಗಿ ಬರುತ್ತಿತ್ತು. ಇಂತಹ ಬಹಿರಂಗ ಚರ್ಚೆ ಅಧ್ಯಕ್ಷೀಯ ಪ್ರಜಾತಂತ್ರವಿರುವ ಅಮೆರಿಕ ಮಾತ್ರವಲ್ಲ,  ಪ್ರಧಾನಿ ಹುದ್ದೆ ಹೊಂದಿರುವ ಜಪಾನ್, ಬ್ರಿಟನ್‌ಗಳಲ್ಲೂ ನಡೆಯುತ್ತವೆ. ನಾವೂ ಬರುತ್ತೇವೆ ಎನ್ನುತ್ತಿರುವ ಕಮ್ಮಿನಿಸ್ಟರು ಹಾಗೂ ಇತರರ ಬಗ್ಗೆ ತಲೆಕೆಡಿಸಿಕೊಳ್ಳದೆ ನೀವಿಬ್ಬರು ಚರ್ಚೆಗೆ ಕುಳಿತುಕೊಳ್ಳಬಹುದಿತ್ತು. ಖಂಡಿತ, ದೇಶದಲ್ಲಿರುವುದು ಎನ್‌ಡಿಎ-ಯುಪಿಎಗಳೆರಡೇ ಅಲ್ಲ ಅನ್ನುವುದು ಪೊಳ್ಳುವಾದವಷ್ಟೇ. ಯಾವುದೇ ಪಕ್ಷವನ್ನು ರಾಷ್ಟ್ರೀಯ ಪಕ್ಷವೆನ್ನಬೇಕಾದರೆ ಅದು ರಾಷ್ಟ್ರದಲ್ಲಿ ಚಲಾವಣೆಯಾಗುವ ಮತಗಳಲ್ಲಿ ಒಟ್ಟು ಶೇ. ೬ರಷ್ಟನ್ನು ಪಡೆದುಕೊಂಡಿರಬೇಕು. ಅಂತಹ ಅರ್ಹತೆ ಕಾಂಗ್ರೆಸ್-ಬಿಜೆಪಿ ಬಿಟ್ಟರೆ ಬೇರಾವ ಪಕ್ಷಗಳಿಗೂ ಇಲ್ಲ.

ಹಾಗಿದ್ದರೂ ನೀವು ಮಾಡುತ್ತಿರುವುದೇನು ಮನಮೋಹನ್ ಸಿಂಗ್?

ಆಡ್ವಾಣಿಯವರು ನಿಮಗೆ ಸವಾಲೆಸೆದು 15 ದಿನಗಳು ಕಳೆದ ನಂತರ ಬಾಯ್ಬಿಟ್ಟಿದ್ದೀರಲ್ಲಾ, ಒಂದು ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟು ಸಮಯ ಬೇಕಾ? ಅದೂ ನೀವು ಕೊಟ್ಟಿರುವ ಪ್ರತಿಕ್ರಿಯೆಯಾದರೂ  ಏನು? “ಆಡ್ವಾಣಿಯವರಿಗೆ   ಪರ್ಯಾಯ ಪ್ರಧಾನಿಯೆಂಬ ಸ್ಥಾನ ನೀಡಲು ಇಷ್ಟವಿಲ್ಲ ದಿರುವುದರಿಂದ  ಟಿವಿ ಮುಂದೆ ನೇರ ಚರ್ಚೆಗೆ ಸಿದ್ಧನಿಲ್ಲ” ಎಂದಿದ್ದೀರಲ್ಲಾ ನಿಮ್ಮಲ್ಲಿ ಕನಿಷ್ಠ ಪ್ರಾಮಾಣಿಕತೆ, ಸೌಜನ್ಯಗಳಾದರೂ ಇವೆಯೇ? ಆಡ್ವಾಣಿಯವರು ಪರ್ಯಾಯ ಪ್ರಧಾನಿಯೋ, ಅಲ್ಲವೋ ಎಂಬುದನ್ನು ನಿರ್ಧರಿಸಬೇಕಾಗಿರುವವರು ಈ ದೇಶದ ಮತದಾರರೋ ಅಥವಾ ನೀವೋ? ಅಥವಾ ನಿಮ್ಮನ್ನು ಪ್ರಧಾನಿ ಸ್ಥಾನಕ್ಕೆ ಕುಳ್ಳಿರಿಸಿರುವ ಸೋನಿಯಾ ಗಾಂಧಿಯವರೋ? ಇನ್ನು Decency, Morality  ಬಗ್ಗೆ ಅದ್ಯಾವ ಮುಖ ಇಟ್ಟುಕೊಂಡು ಮಾತನಾಡುತ್ತಿದ್ದೀರಿ ಸಾರ್? ಸರಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಂಬಿ ಎಣಿಸುತ್ತಿದ್ದ ಆರ್‌ಜೆಡಿ ಸಂಸದ ಪಪ್ಪು ಯಾದವ್ ಹಾಗೂ ಶಹಾಬುದ್ದೀನ್ ಅವರನ್ನು ಜೈಲಿನಿಂದ ಸಂಸತ್ತಿಗೆ ಕರೆತರುವಾಗ ನಿಮ್ಮ ನೈತಿಕತೆ ಎಲ್ಲಿಗೆ ಹೋಗಿತ್ತು? ಕಾಸು ಕೊಟ್ಟು ವೋಟು ಖರೀದಿಸುವಾಗ ಎಲ್ಲಿ ನಿದ್ರಿಸುತ್ತಿತ್ತು ನಿಮ್ಮ ನೈತಿಕ ಪ್ರe?

ಚರ್ಚೆಗೆ ಬರಲು ತಾಕತ್ತಿಲ್ಲದಿದ್ದರೆ ಒಪ್ಪಿಕೊಳ್ಳಿ, ನೆಪ ಹೇಳಬೇಡಿ.

ಡಿಸೆಂಬರ್ 7 ಬಂದು ಹೋಯಿತು, ಅಂದೇ ಅವರ ನೆನಪಾಗಿತ್ತು, ಆದರೆ…

(Photo: Master Hirannaiah, Beechi and Uday Shankar)

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi  ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.

ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿ ವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ” ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.

ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ” ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು. ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ” ಎಂದು ಅವರೇ ತಮ್ಮ ‘ಭಯಾಗ್ರಫಿ”ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?” ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು” ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು” ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು” ಎಂದು ಊಟಕ್ಕೆ ಅಣಿ ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. “ಹೆಂಡತಿಗಾಗಿ ಯಾರ್‍ಯಾರೋ ಏನೇನೋ ಮಾಡಿದ್ದಾರೆ. ಬ್ರಿಟನ್ ರಾಜ  ೬ನೇ ಜಾರ್ಜ್ ಪತ್ನಿಗಾಗಿ ಸಿಂಹಾ ಸನವನ್ನೇ ತ್ಯಾಗ ಮಾಡಲಿಲ್ಲವೆ? ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು” ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.

ಮರುದಿನ ರೈಲು ಪ್ರಯಾಣವಿತ್ತು.

ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ. ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೀಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.

ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ”!

ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ” ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು” ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ, ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ” ಎಂದು ಪ್ರಕಟಿಸಿ ಬಿಟ್ಟರು! ಅದೆಲ್ಲಿದ್ದರೋ ಏನೋ ಕಚೇರಿಗೆ ಓಡಿಬಂದ ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ”. ೧೯೫೦ರಲ್ಲಿ ಮೊದಲ ಮುದ್ರಣ ಕಂಡ “ತಿಂಮನ ತಲೆ” ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ.

ಹಾಗಂತ ಹೇಳಿದರೆ ಖಂಡಿತ ಅತಿಶಯೋಕ್ತಿಯಾಗದು.

ನಿಮಗೆ ಆರ್ಟ್ ಬುಕ್‌ವಾಲ್ಡ್ ಗೊತ್ತಿರಬಹುದು. ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಮೂಲಕ ಹಾಸ್ಯಕ್ಕೆ ಹೊಸ ಭಾಷ್ಯ ಬರೆದಾತ. ಒಮ್ಮೆ ಅಮೆರಿಕದ ಅಧ್ಯಕ್ಷರು ಬುಕ್‌ವಾಲ್ಡ್ ನನ್ನು ಔತಣಕ್ಕೆ ಕರೆದರು. ಪತ್ನಿ ಸಮೇತ ಬುಕ್‌ವಾಲ್ಡ್ ಹೋದ. ಆ ವೇಳೆಗಾಗಲೇ ಬುಕ್‌ವಾಲ್ಡ್ ಬುದ್ಧಿಗೆ ಸ್ವಲ್ಪ ಮಂಕು ಕವಿದು ಅರುಳೋ-ಮರುಳೋ ಎಂಬಂತಾಗಿತ್ತು. ಇತ್ತ ಬುಕ್‌ವಾಲ್ಡ್ ಪತ್ನಿ ಮಹಾ ಕುಳ್ಳಿ. ಊಟಕ್ಕೆ ಕುಳಿತಿದ್ದಾಗ ಬುಕ್‌ವಾಲ್ಡ್ ತನ್ನ ಬಗ್ಗೆಯೇ ಒಂದು ಜೋಕು ಹೇಳಿದ- I am mentally challenged and she is vertically challenged!!

ಅಂಕಣದಲ್ಲಿ ಬುಕ್‌ವಾಲ್ಡ್ ರಾಜಕೀಯ ವಿಡಂಬನೆ ಮಾಡುತ್ತಿದ್ದರು. ಆದರೆ ಬೀಚಿಯವರು ಅತ್ಯಂತ ಗಂಭೀರ ಸಮಸ್ಯೆಗಳ ಬಗ್ಗೆಯೂ ಮಾರ್ಮಿಕವಾಗಿ ಹಾಸ್ಯ ಮಾಡುತ್ತಿದ್ದರು.

ಒಮ್ಮೆ ಇಬ್ಬರು ವ್ಯಕ್ತಿಗಳು ಕುರಿಯೊಂದನ್ನು ಕಸಾಯಿ ಖಾನೆಗೆ ಎಳೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಿದ ಪುಟ್ಟ ಬಾಲಕ ಅಪ್ಪನನ್ನು ಕೇಳಿದ-ಕುರಿಯನ್ನು ಎಲ್ಲಿಗೆ ಎಳೆದೊಯ್ಯುತ್ತಿದ್ದಾರೆ?
ಅಪ್ಪ: ಕಸಾಯಿ ಖಾನೆಗೆ.
ಮಗ: ಸಧ್ಯಾ
ಅಪ್ಪ: ಏಕೆ ಹಾಗೆ ನಿಟ್ಟುಸಿರು ಬಿಡುತ್ತಿದ್ದೀಯಾ?
ಮಗ: ನನ್ನಂತೆಯೇ ಆ ಕುರಿಯನ್ನೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ನಾನಂದುಕೊಂಡಿದ್ದೆ!

ಆಗ ದೇಶಾದ್ಯಂತ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದಿತ್ತು. ಹಠ ಹಿಡಿದ ಮಕ್ಕಳನ್ನು ಹೊಡೆದು, ಬಡಿದಾದರೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದರು. ಅಂದರೆ ಕಡ್ಡಾಯ ಶಿಕ್ಷಣ ಜಾರಿಯ ಉದ್ದೇಶವೇನೋ ಒಳ್ಳೆಯದಿತ್ತು. ಮಾರ್ಗ ಸರಿಯಿರ ಲಿಲ್ಲ ಎಂಬುದನ್ನು ತಿಳಿಹಾಸ್ಯದೊಂದಿಗೆ ಹೇಳುವ ಜಾಣ್ಮೆ ಬೀಚಿ ಯವರಲ್ಲಿ ಮಾತ್ರ ಇತ್ತು. ಅವರ “ಬೆಳ್ಳಿ ತಿಂಮ ೧೦೮ ಹೇಳಿದ”, “ತಿಮ್ಮನ ತಲೆ”, “ಅಂದನಾ ತಿಮ್ಮ”- ಈ ಮೂರು ಪುಸ್ತಕಗಳೂ ನಿಮ್ಮನ್ನು ನಕ್ಕು ನಗಿಸಿದರೂ ಒಂದಕ್ಕಿಂತ ಒಂದು ಭಿನ್ನ.

ಭ್ರಾತೃಪ್ರೇಮ
ಪ್ರಾಣಿದಯೆಯ ಬಗ್ಗೆ ದೀರ್ಘ ಭಾಷಣ ಮಾಡಿದ ಆನಂತರ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು ತಿಂಮನ ಮಾಸ್ತರು. “ರಸ್ತೆಯಲ್ಲಿ ಹೋಗುವಾಗ ನಾನೊಬ್ಬ ತುಂಟ ಹುಡುಗನನ್ನು ನೋಡುತ್ತೇನೆ. ಯಾರ ಗೋಜಿಗೂ ಹೋಗದೆ ತಲೆಬಗ್ಗಿಸಿ ತನ್ನಷ್ಟಕ್ಕೆ ಹೋಗುತ್ತಿದ್ದ ಮೂಕಪ್ರಾಣಿ ಕತ್ತೆಯೊಂದನ್ನು ಹುಡುಗ ಹೊಡೆಯುತ್ತಿದ್ದಾನೆ. ಆಗ ನಾನು ಅವನಿಗೆ ಛೀ ಮಾಡಿ ಕಳಿಸಿ ಕತ್ತೆಯನ್ನು ಕಷ್ಟದಿಂದ ಪಾರುಮಾಡುತ್ತೇನೆ. ಈ ನನ್ನ ಕಾರ್ಯ ಏನನ್ನು ಸೂಚಿಸುತ್ತದೆ?”.
“ನಾನು ಹೇಳುತ್ತೇನೆ ಸಾರ್” ಎಂದು ಎದ್ದು ನಿಂತ ತಿಂಮ. ಕೂಡಲೇ ಉತ್ತರವನ್ನೂ ಹೇಳಿದ “ನಿಮ್ಮದು ಭ್ರಾತೃಪ್ರೇಮ ಸಾರ್!”

ಕಡೇ ಪರೀಕ್ಷೆ
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು, ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ-“ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?”.
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.
“ಹೌದು, ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ-ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!”

ಮಾತು ಕೇಳುವ ಹೆಂಡತಿ
“ತಿಂಮಾ?”
“ಏನು ಸ್ವಾಮಿ?”
“ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ, ನಿನ್ನ ಹೆಂಡತಿ?”
“ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?”
“ಹೌದು, ಕೇಳುತ್ತಾಳೇನಯ್ಯಾ ನಿನ್ನ ಮಾತು?”
“ಏನು ಸ್ವಾಮಿ, ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಕೊಟ್ಟು ಕೇಳುತ್ತಾಳೆ ಗೊತ್ತೆ?!”

ತಂದೆಯ ಶತ್ರುವಿನಂತೆ ಮಗ
ಹೊಸದಾಗಿ ಸಾಹಿತಿಯಾಗಿದ್ದ ತನ್ನ ಗೆಳೆಯನನ್ನು ಕಾಣಲು ತಿಂಮ ಹೋಗಿದ್ದ. ಆದರೆ ಮಿತ್ರನ ಮನೆಯ ಸನ್ನಿವೇಶವನ್ನು ಕಂಡು ತಿಂಮ ಪೆಚ್ಚಾದ. ತನ್ನ ಕೊನೆಯ ಮಗನ ಮೇಲೆ ಗೆಳೆಯ ಸಿಟ್ಟಾಗಿದ್ದ, ಬೈಗುಳಗಳ ಸುರಿಮಳೆಗೈಯ್ಯುತ್ತಿದ್ದ. ಅದನ್ನು ಕಂಡ ತಿಂಮ, ‘ಏನು?’ ಎಂದು ಕೇಳುವ ಮೊದಲೇ ಸ್ನೇಹಿತ ಎಲ್ಲವನ್ನೂ ವಿವರಿಸಿದ.

“ನೋಡಯ್ಯಾ ಈ ಅವಿವೇಕಿಯನ್ನ. ಎಂತಹ ಕೆಲಸ ಮಾಡಿ ದ್ದಾನೆ? ರಾತ್ರಿಯೆಲ್ಲಾ ಕುಳಿತು ೬ ಕವನ ಬರೆದಿಟ್ಟಿದ್ದೆ. ಆ ಎಲ್ಲ ಕಾಗದಗಳನ್ನೂ ಒಯ್ದು ಒಲೆಯಲ್ಲಿ ಹಾಕಿದ್ದಾನೆ ಇವನು”.

ಆದರೆ ದುಃಖ ತೋಡಿಕೊಂಡ ಗೆಳೆಯನನ್ನು ಸಮಾಧಾನ ಮಾಡುವ ಬದಲು “ಶಬಾಸ್” ಎಂದು ಆತನ ಮಗನ ಬೆನ್ನು ತಟ್ಟಿದ ತಿಂಮ, ಸ್ನೇಹಿತನಿಗೆ ಹೇಳಿದ-“ನಿಮ್ಮ ವಂಶವೇ ಅಂಥದ್ದು. ತಂದೆ ಸಾಹಿತಿ, ಮಗ ವಿಮರ್ಶಕ! ಈ ವಯಸ್ಸಿಗೇ ನಿನ್ನ ಕೃತಿಗಳನ್ನು ಅರ್ಥಮಾಡಿಕೊಂಡಿದ್ದಾನೆ ನೋಡು!!”

ಇಂದು ಜೋಕುಗಳು ಬೇಕೆಂದರೆ ಗೂಗಲ್ ಡಾಟ್‌ಕಾಮ್ ಮೂಲಕ ತಡಕಾಡಬಹುದು, ‘ವಿಕಿಪೀಡಿಯಾ’ದ ಮೊರೆಹೋಗ ಬಹುದು, ಆನ್‌ಲೈನ್ ಜೋಕ್ಸ್‌ಗಾಗಿಯೇ “Funtoosh” ಇದೆ. ಇದು ಇಂಟರ್‌ನೆಟ್ ಯುಗ. ನಮ್ಮ ಕನ್ನಡದಲ್ಲಿ ಈಗ ಕಾಣ ಸಿಗುತ್ತಿರುವವರೂ ಇಂಟರ್‌ನೆಟ್ ಕವಿಗಳು, ಸಣ್ಣಕಥೆಗಾರರೇ. ಗದ್ಯದ ಒಂದು ಸಾಲು ಅಥವಾ ವಾಕ್ಯವನ್ನು ನಾಲ್ಕು ಕಡೆ ತುಂಡು ಮಾಡಿ ಅದೇ ಕವಿತೆ, ಕವನ ಹಾಗೂ ತಾನೊಬ್ಬ ಕವಿ, ಕವಯಿತ್ರಿ ಎಂದು ಪೋಸು ಕೊಡುವವರಿಗೂ ಕಡಿಮೆಯೇನಿಲ್ಲ. ಇನ್ನು ಕೆಲವರು ಶಬ್ದಗಳ ಆಡಂಬರವೇ ಸಾಹಿತ್ಯ ಎಂಬಂತೆ ಪೋಸು ಕೊಡುತ್ತಾರೆ. ಇದನ್ನೆಲ್ಲಾ ನೋಡಿದಾಗ ಇಂಟರ್‌ನೆಟ್ ಎಂಬುದು ಕಲ್ಪನೆಗೂ ನಿಲುಕದ ಕಾಲದಲ್ಲಿ ಬೀಚಿ ಹೇಗೆ ಇಂತಹ ಹಾಸ್ಯಚಟಾಕಿಗಳನ್ನು ಬರೆದರು ಎಂದು ಆಶ್ಚರ್ಯವಾಗುತ್ತದೆ. ಈಗಿನ ಜೋಕು, ಚಟಾಕಿ, ಚೋದ್ಯ, ಸಣ್ಣಕಥೆಗಳನ್ನು ಓದಿದಾಗ ಅವುಗಳನ್ನು ಅನುಭವಿಸುವ ಬದಲು ‘ಎಲ್ಲೋ ಕೇಳಿದ್ದೇನಲ್ಲಾ, ಎಲ್ಲೋ ಓದಿದ ಹಾಗೆ ಇದೆಯೆಲ್ಲಾ’ ಎಂದು ಮನಸ್ಸು ಮೂಲ ವನ್ನು ಹುಡುಕಲಾರಂಭಿಸುತ್ತದೆ. ಒಂದೇ ಜೋಕು ಹಲವು ಪತ್ರಿಕೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ‘ರೀಸೈಕ್ಲ್’ ಆಗುತ್ತದೆ. ಆದರೆ ಬೀಚಿಯವರ ಬಹುದೊಡ್ಡ ಹೆಗ್ಗಳಿಕೆಯೆಂದರೆ ಅವರ ಜೋಕುಗಳಲ್ಲಿ ಇಂದಿಗೂ ತಾಜಾತನವಿದೆ, ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಳ್ಳಬಹುದು. ತೀರಾ Original ಎನಿಸುತ್ತವೆ.

ಬೀಚಿ ಕಾರ್ಯಕ್ಷೇತ್ರ ಬರೀ ಜೋಕು, ಕಥೆಗಳಿಗಷ್ಟೇ ಸೀಮಿತವಾಗಲಿಲ್ಲ.

‘ಸುಧಾ’ ವಾರಪತ್ರಿಕೆಯಲ್ಲಿ ‘ನೀವು ಕೇಳಿದಿರಿ?’ ಎಂಬ ಅಂಕಣ ಇಂದಿಗೂ ಪ್ರಕಟವಾಗುತ್ತದೆ. ಒಂದು ಕಾಲದಲ್ಲಿ ಈ ಅಂಕಣದಲ್ಲಿ ಬರುತ್ತಿದ್ದ ಪ್ರಶ್ನೆಗಳಿಗೆ ಬೀಚಿ ಉತ್ತರಿಸುತ್ತಿದ್ದರು.
ಪ್ರಶ್ನೆ: ಸರ್, ನಾನು ಎಂ.ಎಲ್.ಎ. ಹಾಗೂ ಎಂ.ಪಿ. ಎರಡಕ್ಕೂ ನಿಂತುಕೊಳ್ಳಬೇಕೆಂದಿದ್ದೇನೆ?
ಬೀಚಿ: ಒಂದಕ್ಕೆ ನಿಂತುಕೊಳ್ಳುತ್ತಾರೆ. ಆದರೆ ಎರಡಕ್ಕೂ ನಿಂತು ಕೊಳ್ಳುತ್ತಾರೆ ಅಂತ ಗೊತ್ತಿರಲಿಲ್ಲ!

‘ಪ್ರಜಾಮತ’ದ ‘ಗುಪ್ತ ಸಮಾಲೋಚನೆ’ ಒಂಥರಾ ಮಜಾ ಕೊಟ್ಟರೆ ಬೀಚಿ ಬುಲೆಟ್‌ಗಳು ಚಿಳ್ ಎನಿಸುತ್ತಿದ್ದವು. ಇವತ್ತಿಗೂ ಇಂತಹ ಪ್ರಶ್ನೆ-ಉತ್ತರಗಳ ಕಾಲಂಗಳು ಹೆಚ್ಚೂಕಡಿಮೆ ಎಲ್ಲ ವಾರಪತ್ರಿಕೆ, ಟ್ಯಾಬ್ಲಾಯ್ಡ್‌ಗಳಲ್ಲೂ ಪ್ರಕಟವಾಗುತ್ತಿವೆ. ಉತ್ತರ ಕೊಡುವವರೇ ಕೆಲವೊಮ್ಮೆ ಪ್ರಶ್ನೆಗಳನ್ನೂ ‘ಕೇಳಿ’ಕೊಳ್ಳುತ್ತಾರೆ! ಅವುಗಳಲ್ಲಿ ತಿಳಿಹಾಸ್ಯದ ಬದಲು ಯಾರನ್ನೋ ಅವಹೇಳನ ಮಾಡುವ ಉದ್ದೇಶ ತೂರಿಬಂದಿರುತ್ತದೆ. ಹಾಗಾಗಿ ನಕ್ಕು, ನಗಿ ಸುವ ಬದಲು “PJ’ (poor jokes)ಗಳೆನಿಸಿಕೊಂಡು ಬಿಡುತ್ತವೆ. ಇಂಗ್ಲಿಷ್‌ನಲ್ಲಿ ಜಗ್ ಸುರೈಯಾ(ಟೈಮ್ಸ್ ಆಫ್ ಇಂಡಿಯಾ) ಅವರಂತಹ ಕೆಲವರು ಗಂಭೀರವಾದ ವಿಚಾರಗಳನ್ನು ತಿಳಿಹಾಸ್ಯ ದೊಂದಿಗೆ ಇಂದಿಗೂ ಚೆನ್ನಾಗಿ ಬರೆಯುತ್ತಿದ್ದಾರೆ. ಆದರೆ ಕನ್ನಡದಲ್ಲಿ ಬೀಚಿ ಹಾಕಿಕೊಟ್ಟ ಪರಂಪರೆಯನ್ನು ಮುಂದು ವರಿಸಿಕೊಂಡು ಹೋಗುವ ಸಾಮರ್ಥ್ಯ ಪೂರ್ಣಮಟ್ಟದಲ್ಲಿ ಯಾರಲ್ಲೂ ಕಾಣಲಿಲ್ಲ. ಒಂದೆರಡು ದಶಕಗಳ ಕಾಲ ‘ಕೊರವಂಜಿ’ ಕೊಂಚ ಕೊರತೆಯನ್ನು ನೀಗಿಸಿದರೂ ಕಾಲಾಂತರದಲ್ಲಿ ಬದುಕುಳಿಯಲಿಲ್ಲ. ವೈಯೆನ್ಕೆ, ನಾ. ಕಸ್ತೂರಿ, ಪುಂಡಲಿಕ ಶೇಠ್ ಅವರಂತಹವರು ಈ ಪರಂಪರೆಯನ್ನು ಮುಂದುವರಿಸಿದರೂ ತಟ್ಟೆ ಖಾಲಿಯಾದ ನಂತರ ಬೆರಳು ನೆಕ್ಕುವಾಗ ಸಿಕ್ಕಷ್ಟು ಸುಖ ಅವುಗಳಿಂದ ಸಿಕ್ಕಿತೇ ಹೊರತು ಬೀChiಯವರಂತೆ ಭರಪೂರ ಭೋಜನವನ್ನು ಉಣ ಬಡಿಸಲೂ ಯಾರಿಗೂ  ಸಾಧ್ಯವಾಗಲಿಲ್ಲ. ಈಗಂತೂ ಯಾರೂ ಇಲ್ಲವಾಗಿದ್ದಾರೆ.

ಅಶ್ಲೀಲ ಸಾಹಿತ್ಯ
“ಅಪ್ಪಾ”
“ಏನೋ ತಿಂಮಾ?”
“ಅಶ್ಲೀಲ ಸಾಹಿತ್ಯವೆಂದರೆ ಯಾವುದಪ್ಪಾ?”
“ಚಿಕ್ಕವರು ಓದಬಾರದ್ದು ಅಶ್ಲೀಲ ಸಾಹಿತ್ಯ”
“ಹೀಗೆಂದು ದೊಡ್ಡವರು ಹೇಳ್ತಾರಲ್ವೇನಪ್ಪಾ?”
“ಹೌದೋ ತಿಂಮಾ”
“ಚಿಕ್ಕವರಿದ್ದಾಗ ಓದಿ, ದೊಡ್ಡವರಾದ ಮೇಲೆ ಚಿಕ್ಕವರು ಓದಕೂಡದು ಎಂಬುದಕ್ಕೇ ಅಶ್ಲೀಲಸಾಹಿತ್ಯವೆನ್ನುತ್ತಾರೇನಪ್ಪಾ?”

ಅವರಷ್ಟು ಚೆನ್ನಾಗಿ ಕಾಲೆಳೆಯಲು, ಕಾಲೆಳೆಯುತ್ತಲೇ ದೊಡ್ಡವರನ್ನು, ದೊಡ್ಡವರ ಧೂರ್ತತನವನ್ನು ಬೆತ್ತಲು ಮಾಡಲು ಬಹುಶಃ ಯಾರಿಗೂ ಬರುವುದಿಲ್ಲ.

ಜನಿವಾರ
ಅಪ್ಪ: ತಿಂಮಾ ಜನಿವಾರ ಹಾಕಿಕೋ.
ತಿಂಮಾ: ಯಾಕಪ್ಪಾ?
ಅಪ್ಪ: ಜನಿವಾರ ಹಾಕಿಕೊಳ್ಳದಿದ್ದರೆ ಮುಂದಿನ ಜನ್ಮದಲ್ಲಿ ನೀನು ಕತ್ತೆಯಾಗಿ ಹುಟ್ಟುತ್ತೀಯಾ.
ತಿಂಮಾ: ಅಪ್ಪಾ ಊರಲ್ಲಿ ಬಹಳ ಕತ್ತೆಗಳಿವೆ. ಅವರೆಲ್ಲ ಹಿಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿದ್ದು ಜನಿವಾರ ಹಾಕಿಕೊಳ್ಳುವುದನ್ನು ಮರೆತಿದ್ದವರಾ?!

ಝೆನ್ ಕಥೆಗಳಂತೆ ಅತ್ಯಂತ ಕಡಿಮೆ ಪದ, ಸಾಲುಗಳಲ್ಲಿ ಕಥೆ, ಜೋಕು ಹೇಳುತ್ತಿದ್ದ ಬೀಚಿ, ಆಧುನಿಕ ಬರಹಗಾರರಿಗೆ ಮಾದರಿ. ಅರವತ್ಮೂರು ಕೃತಿಗಳನ್ನು ರಚಿಸಿರುವ ಅವರಲ್ಲಿ ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಚೋದ್ಯದ ಮೂಲಕ ಹೇಳುವ ಜಾಣ್ಮೆ, ಸ್ವತಃ ಬಡತನದಲ್ಲಿದ್ದರೂ ಸಮಾಜವನ್ನು ಗೇಲಿ ಮಾಡಿ ನಗುವ, ನಗಿಸುವ ಸಾಮರ್ಥ್ಯ, ಒಬ್ಬ ವ್ಯಂಗ್ಯಚಿತ್ರ ಬರಹಗಾರನಲ್ಲಿರಬೇಕಾದ ಹಾಸ್ಯಪ್ರeಯನ್ನು ಕಾಣಬಹು ದಾಗಿತ್ತು. ಹಾಗಾಗಿಯೇ ಆ ಕಾಲದಲ್ಲಿ ಹೊಸದಾದ ಒಂದು ಓದುಗ ವರ್ಗವನ್ನು ಸೃಷ್ಟಿಸಿದರು. ಒಂದಿಡೀ ತಲೆಮಾರು ಅವರ ಜೋಕು, ಕಥೆಗಳನ್ನು ಕೇಳಿಕೊಂಡು ಬೆಳೆಯಿತು. ಇಂದು ಅವರ ಸ್ಥಾನವನ್ನು ತುಂಬುವ ಮಾತು ಹಾಗಿರಲಿ, ಅವರನ್ನು ನೆನಪು ಮಾಡಿಕೊಡುವಂತಹವರೂ ಕಾಣ ಸಿಗುವುದಿಲ್ಲ.

ಮೊನ್ನೆ ಡಿಸೆಂಬರ್ 7ರಂದು ಬೀChi ಯವರ (ರಾಯಸಂ ಭೀಮಸೇನ ರಾವ್ ) ಪುಣ್ಯತಿಥಿ ಇತ್ತು. ಆದರೆ ಮುಂಬೈ ಮೇಲೆ ನಡೆದಿದ್ದ ಭಯೋತ್ಪಾದನೆಯ ಬೊಬ್ಬೆಯಲ್ಲಿ ಅವರನ್ನು ನೆನಪಿಸಿ ಕೊಳ್ಳಲಾಗಿರಲಿಲ್ಲ. ತಡವಾದರೂ ನೆನಪಿಸಿಕೊಳ್ಳದೇ ಇದ್ದರೆ ಹೇಗೆ, ಅಲ್ಲವೆ?

ಅಂದು ಮಠಗಳಲ್ಲಿತ್ತು ನಮ್ಮ ವಿಶ್ವಾಸದ ಗಂಟು, ಇಂದು ಗಂಟಿದ್ದರಷ್ಟೇ ನಂಟು!

“ಸರಕಾರ ನೆಲ, ಜಲ, ವಿದ್ಯುತ್ ಹಾಗೂ ಶಿಕ್ಷಣ ವಲಯವನ್ನು ಖಾಸಗೀಕರಣ ಮಾಡುತ್ತಿದೆ. ಉದಾರೀಕರಣ, ಜಾಗತೀಕರಣದ ಕಪಿಮುಷ್ಟಿ ಯಲ್ಲಿ ಸಿಲುಕಿ ಈಗಾಗಲೇ ನಲುಗಿದ್ದೇವೆ. ಕಳ್ಳಕಾಕರು, ಮಠಾಧೀಶರು ಹಾಗೂ ಉಳ್ಳವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಜನರ ಬದುಕಿಗೆ ಸಂಬಂಧಿಸಿದ ನೆಲ, ಜಲ , ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ. ಈ ಕೆಲಸವನ್ನು ಕಳ್ಳಕಾಕರಿಗೆ ವಹಿಸಬೇಡಿ. ಈ ಕೆಲಸ ಮಾಡಿದರೆ ನೀವು ಪುನಃ ಅಧಿಕಾರಕ್ಕೆ ಬರುವುದು ಖಚಿತ. ಇದು ನನ್ನ ಭವಿಷ್ಯವಾಣಿ”.

ಕಳೆದ ವಾರ ಚಿತ್ರದುರ್ಗದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಪ್ರೊ. ಎಲ್. ಬಸವರಾಜು ಸರಕಾರಕ್ಕೆ ಹೇಳಿದ ಕಿವಿಮಾತಿದು.

“ಮಠಗಳು, ಮಠಾಧೀಶರು ನಮ್ಮ ಶತ್ರುಗಳು” ಎಂದು ಹೇಳಿಕೆ ನೀಡುವ ಮೂಲಕ ಸಮ್ಮೇಳನಕ್ಕೂ ಮುನ್ನವೇ ಒಂದಿಷ್ಟು ಅನಗತ್ಯ ಚರ್ಚೆ, ವಿವಾದಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಬಿಟ್ಟರೆ ಬಸವರಾಜು ಅವರು ಎತ್ತಿರುವ ವಿಚಾರಗಳ ಬಗ್ಗೆ  ನೈಜ ಕಾಳಜಿ ಇರುವವರೆಲ್ಲ ಖಂಡಿತ ಯೋಚಿಸಬೇಕಾದ ಅಗತ್ಯವಿದೆ.

ಬಹುಶಃ ನೀವು Jim Crow laws ಬಗ್ಗೆ ಕೇಳಿರಬಹುದು.

ಹದಿನೆಂಟನೇ ಶತಮಾನದಲ್ಲಿ ಅಮೆರಿಕದಲ್ಲಿ ಕರಿಯರನ್ನು ಮಾರುಕಟ್ಟೆಯಲ್ಲಿ ಹರಾಜಿಗಿಟ್ಟು ಮಾರಾಟ ಮಾಡುತ್ತಿದ್ದರು. ಇಂತಹ ಗುಲಾಮಗಿರಿ ಹಾಗೂ ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದ್ದ ನೀತಿಯ ವಿರುದ್ಧ ೧೮೬೧ರಿಂದ ೬೫ರವರೆಗೂ ಅಮೆರಿಕದಾದ್ಯಂತ ಒಂದು ಯಶಸ್ವಿ ‘ಸಿವಿಲ್ ವಾರ್’ ನಡೆಯಿತು. ಆನಂತರ ಗುಲಾಮಗಿರಿಯನ್ನು ನಿಷೇಧಿಸಿದ್ದಲ್ಲದೆ, ಕರಿಯರಿಗೆ ರೈಲು, ಬಸ್, ಶಾಲೆ, ಕಾಲೇಜು ಸೇರಿದಂತೆ ಎಲ್ಲ ಸಾರ್ವಜನಿಕ ಸೇವೆಗಳಲ್ಲೂ “ಪ್ರತ್ಯೇಕ, ಆದರೆ ಸಮಾನ”(Separate but Equal) ವ್ಯವಸ್ಥೆಯನ್ನು ಮಾಡಲಾಯಿತು. ಅವುಗಳನ್ನೇ ‘ಜಿಮ್ ಕ್ರೋ ಲಾ’ ಎನ್ನುವುದು. ಈ ಕಾನೂನಿನ ಪ್ರಕಾರ ಕರಿಯರಿಗೂ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಶಾಲೆ, ಕಾಲೇಜುಗಳನ್ನು ತೆರೆಯಲಾಯಿತು. ಉಚಿತ ಶಿಕ್ಷಣ ಸೇವೆ ಆರಂಭವಾಯಿತು. ತೊಗಲಿನ ಬಣ್ಣದ ಸಲುವಾಗಿ ಶಿಕ್ಷಣದಿಂದಲೇ ವಂಚಿತರಾಗಿದ್ದ ಕರಿಯರಿಗೆ ಪ್ರತ್ಯೇಕ ಶಾಲೆ, ಕಾಲೇಜುಗಳ ಸ್ಥಾಪನೆಯಿಂದಾಗಿ ವಿದ್ಯೆ ಸಿಗುವಂತಾಯಿತು. Historically Black Colleges and Universities (ಎಚ್‌ಬಿಸಿಯು) ಸ್ಥಾಪನೆಯಿಂದಾಗಿ ಕರಿಯರು ಬಿಳಿಯರ ಜತೆ ಸ್ಪರ್ಧೆ ಮಾಡುವಷ್ಟರ ಮಟ್ಟಿಗೆ ಬೆಳೆಯಲು ಅನುಕೂಲವಾಯಿತು. ಎಲ್ಲದರಲ್ಲೂ ಕರಿಯರನ್ನು ಪ್ರತ್ಯೇಕವಾಗಿಡಲು ಆರಂಭಿಸಿದ ಈ ಕಾಯಿದೆ ಕಾಲಾಂತರದಲ್ಲಿ ಅರ್ಥ ಕಳೆದುಕೊಂಡು ಕರಿಯರೇ ಅದನ್ನು ವಿರೋಧಿಸುವಂತಾದರೂ, ೧೯೫೪ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಈ ಕಾಯಿದೆಗೆ ತಡೆಹಾಕಿದರೂ ಶಿಕ್ಷಣದ ವಿಷಯದಲ್ಲಿ ಕಾಯಿದೆಯಿಂದ ಕರಿಯರಿಗೆ ಅಪಾರ ಲಾಭವಾಗಿದ್ದಂತೂ ನಿಜ. ಇಂದಿಗೂ ಅಮೆರಿಕದಲ್ಲಿ ೧೦೩ ಎಚ್‌ಬಿಸಿಯುಗಳಿವೆ. ಅವುಗಳಲ್ಲಿ ದೊರೆಯುತ್ತಿರುವ ಗುಣ ಮಟ್ಟದ ಶಿಕ್ಷಣ ಎಷ್ಟು ಹೆಸರುವಾಸಿಯಾಗಿದೆಯೆಂದರೆ ಬಿಳಿಯರೂ ಎಚ್‌ಬಿಸಿಯುಗಳನ್ನು ಸೇರಿದ್ದಾರೆ. ಅಲ್ಲಿ ಕಲಿತು ಮೇಲೆ ಬಂದ ವಿದ್ಯಾರ್ಥಿಗಳು ಪ್ರತಿಯಾಗಿ ನೀಡುತ್ತಿರುವ ದೇಣಿಗೆ ಸರಕಾರದ ಸಹಾಯ ಧನಕ್ಕಿಂತ ಹೆಚ್ಚಾಗಿದೆ. ಅಂದರೆ ಸರಕಾರದಿಂದ ಉಚಿತವಾಗಿ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ನಿಂತ ಮೇಲೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಕಾಲೇಜುಗಳಿಗೆ ಸಹಾಯ ನೀಡುವ ಮೂಲಕ ಸಮಾಜದ ಋಣಭಾರವನ್ನು ತೀರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, “ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ” ಎಂಬ ಬಸವರಾಜು ಅವರ ಕೂಗಿನ ಹಿಂದೆಯೂ ಒಂದು ತರ್ಕವಿದೆ, ದಲಿತರ ಆರ್ತನಾದವಿದೆ. ಅಷ್ಟಕ್ಕೂ ಪ್ರತ್ಯೇಕ ಶಾಲೆಗಳೆಂದರೆ ಸಾಮಾಜಿಕವಾಗಿ ದೂರವಿಡುವುದೆಂದಲ್ಲ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ದೀನ-ದಲಿತರಿಗೆ ಉತ್ತಮ ದರ್ಜೆಯ ಶಿಕ್ಷಣ ಉಚಿತವಾಗಿ ಸಿಗುವಂತೆ ಮಾಡುವ ವ್ಯವಸ್ಥೆ ಯಷ್ಟೇ.
ಇಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸ್ವಾತಂತ್ರ್ಯ ಬಂದು ೬೨ ವರ್ಷಗಳ ನಂತರ ಕರೆ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ?

ತುಂಬಾ ಹೆಚ್ಚು ಹಿಂದಕ್ಕೆ ಹೋಗುವುದು ಬೇಡ. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ. ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆ ಕಟಾವಾಗಿ, ಸಂಕ್ರಾಂತಿ ಕಳೆದ ನಂತರ ನಮ್ಮ ಕಿರಿಯ ಮಠಾಧೀಶರು ಊರೂರು ಗಳಿಗೆ ಬರುತ್ತಿದ್ದರು. ಅವರ ಜತೆ ಒಂದು ದೊಡ್ಡ ದಂಡೂ ಬರುತ್ತಿತ್ತು. ಒಂದು ಊರಿನಲ್ಲಿ ಒಂದೆರಡು ದಿನ ಮೊಕ್ಕಾಂ ಹೂಡಿ, ನೆರೆಯ ಹಳ್ಳಿಗಳಿಗೂ ಭೇಟಿಕೊಟ್ಟು ಸಂಜೆ ಬೀಡಿಗೆ ಮರಳುತ್ತಿದ್ದರು. ಹಾಗೆ ಆಗಮಿಸಿದ ಸ್ವಾಮೀಜಿ ಯಾವ ಜಾತಿ, ಮಠದವರು ಎಂದು ಯಾರೂ ಕೇಳುತ್ತಿರಲಿಲ್ಲ. ಸ್ವಾಮೀಜಿಗಳೂ ತಮ್ಮ ಜಾತಿಯವರನ್ನು ಮಾತ್ರ ಕಾಣಲು ಆಗಮಿಸುತ್ತಿರಲಿಲ್ಲ. ಒಬ್ಬ ಸ್ವಾಮೀಜಿ ಬಂದಿದ್ದಾರೆ ಎಂದರೆ ಎಲ್ಲ ಮನೆಯವರೂ ತಮ್ಮ ಶಕ್ತಿಗನುಸಾರ ದವಸ-ಧಾನ್ಯ, ಕಾಣಿಕೆಗಳನ್ನು ತಂದು ಒಪ್ಪಿಸುತ್ತಿದ್ದರು. ಸಂಜೆಯ ವೇಳೆ ಧಾರ್ಮಿಕ ಕಾರ್ಯಕ್ರಮ, ಪ್ರವಚನ ನಡೆಯುತ್ತಿತ್ತು. ಅವತ್ತು ಜನ ಕೊಟ್ಟ ದವಸ-ಧಾನ್ಯ, ಕಾಣಿಕೆಯಿಂದ ಮಠಗಳು ವರ್ಷ ಕಳೆಯುತ್ತಿದ್ದವು. ಜನ ಕೂಡ ಆ ಜಾತಿ, ಈ ಜಾತಿ ಎನ್ನದೆ ಎಲ್ಲರೂ ಏಕೆ ಕಾಣಿಕೆ ನೀಡುತ್ತಿದ್ದರು ಎಂದರೆ ಮಠಗಳು ಯಾವುದೇ ಜಾತಿಗಳದ್ದಾಗಿದ್ದರೂ ಸಮಾಜದ ಎಲ್ಲರ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು.

‘ಇವನಾರವ ಇವನಾರವ ಎನ್ನದಿರು, ಇವ ನಮ್ಮವ’ ಎಂದು ಬಸವಣ್ಣ ಹೇಳಿದಂತೆ ಮಠಗಳೂ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಮಕ್ಕಳಿಗೆ ಮೂಲ ಶಿಕ್ಷಣವನ್ನು (ಫಂಡಮೆಂಟಲ್ ಎಜುಕೇಶನ್) ಹೇಳಿಕೊಡುತ್ತಿದ್ದವು. ಧಾರ್ಮಿಕ ಪಾಠದ ಜತೆಗೆ  “”3 R’s” ಅಂದರೆ ಓದು, ಬರಹ, ಲೆಕ್ಕ (Reading, Writing, Arithmetics) ಮುಂತಾದ ಬದುಕಿಗೆ ಬೇಕಾದ ಪ್ರಾಥಮಿಕ ವಿದ್ಯೆಯನ್ನು ಹೇಳಿ ಕೊಡುವ ಕೆಲಸ ಮಾಡುತ್ತಿ ದ್ದವು. ಹಾಗಾಗಿ ಮಠಗಳೆಂದರೆ ಸಮಾಜದ ಎಲ್ಲರೂ ಗೌರವಿ ಸುವ ಕೇಂದ್ರಗಳಾಗಿದ್ದವು. ‘ಮಠಕ್ಕೆ ಹಾಕಿದರೆ ಮಗ ಉದ್ಧಾರ ಆಗುತ್ತಾನೆ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಒಂದು ವೇಳೆ, ಮಠದಲ್ಲಿ ಕಲಿತು ಹೊರಬಂದವನೊಬ್ಬ ಸಣ್ಣ ತಪ್ಪು ಮಾಡಿದರೂ ಅದು ಅಕ್ಷಮ್ಯ ಅಪರಾಧವೆನಿಸುತ್ತಿತ್ತು. ಅಂದರೆ ಮಠದಲ್ಲಿ ಕಲಿತವನೆಂದರೆ ಆತ ಎಲ್ಲ ಸದ್ಗುಣಗಳನ್ನೂ ರೂಢಿಸಿಕೊಂಡವನೆಂಬ ನಂಬಿಕೆ ಇತ್ತು. ಹೀಗೆ ನಮ್ಮ ಜನ ಮಠ-ಮಂದಿರಗಳಲ್ಲಿ ತಮ್ಮ ವಿಶ್ವಾಸದ ಗಂಟನ್ನಿಟ್ಟಿದ್ದರು.

ಆದರೆ ಇಂದು ಆ ಮಾತನ್ನು ಹೇಳಲು ಸಾಧ್ಯವಿದೆಯೇ?

ಯಾವ ಮಠಾಧೀಶರೂ ಸಂಕ್ರಾಂತಿ ಕಳೆದ ನಂತರ ಊರೂರು ಸುತ್ತಲು ಬರುವುದಿಲ್ಲ. ಜನರೇ ಶಾಲೆ, ಕಾಲೇಜು ಪ್ರಾರಂಭ ವಾಗುವ ಮುನ್ನ ಮಗ, ಮಗಳಿಗೆ ಅಡ್ಮಿಶನ್ ಕೋರಿ ಸ್ವಾಮೀಜಿಗಳ ಕಾಲ ಬಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅಂದು ಸ್ವಾಮೀಜಿಗಳ ಕಾಲಿಗೆ ನಮಸ್ಕರಿಸಿದರೆ ಭಸ್ಮ ಕೊಡುತ್ತಿದ್ದರು, ಇಂದು ನಮಸ್ಕರಿಸಿ ನೋಟು, ಚೆಕ್ಕು ಇಟ್ಟರೆ ‘ಸೀಟು’, ಸೇಬು, ಮೂಸಂಬಿ ಅಥವಾ ಕಿತ್ತಳೆ ಹಣ್ಣನ್ನು ನಿಮ್ಮ ಕೈಗಿಡುತ್ತಾರೆ.

ಇಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು?

ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಿಕ್ಷಣದ ವಿಚಾರ ಬಂದಾಗ “Profit is a dirty word” ಎನ್ನುತ್ತಿದ್ದರು. ಅಂದರೆ ವಿದ್ಯೆ ಎಂಬುದು ಲಾಭದ ಉದ್ದೇಶ ಇಟ್ಟುಕೊಂಡು ಮಾಡುವ ಉದ್ದಿಮೆಯಲ್ಲ. ಅದಕ್ಕೇ ನಮ್ಮಲ್ಲಿ ‘ವಿದ್ಯಾದಾನ’ ಎನ್ನುತ್ತಿದ್ದುದು. ಆದರೆ ಸರಕಾರವೊಂದರಿಂದಲೇ ಹತ್ತಾರು ಕೋಟಿ ಭಾರತೀಯರಿಗೆ ವಿದ್ಯಾದಾನ ಮಾಡಲು ಸಾಧ್ಯವಿಲ್ಲ ಎಂದರಿತ ಸರಕಾರ, ಸಾಮಾಜಿಕ ಕಾಳಜಿ ಇರುವವರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು, ಸ್ವತಂತ್ರವಾಗಿ ನಡೆಸಲು ಧಾರಾಳವಾಗಿ ಅನುಮತಿ ಕೊಡಲು ಆರಂಭಿಸಿತು. ಇದರ ಲಾಭವನ್ನು ದುಡ್ಡಿದ್ದವರು ಹಾಗೂ ಮಠಗಳು ಪಡೆದುಕೊಳ್ಳಲಾರಂಭಿಸಿದವು. ಆದರೆ ಯಾವಾಗ ಮಠಗಳು ಬದುಕಿಗೆ ಬೇಕಾದ ಮೂಲ ಶಿಕ್ಷಣದ ಬದಲು ಉನ್ನತ ಶಿಕ್ಷಣದತ್ತ ಹೆಚ್ಚು ಹೆಚ್ಚು ಗಮನಹರಿಸಲು ಪ್ರಾರಂಭಿಸಿದವೋ ಆಗ ನೆಹರು ಹೇಳಿದ್ದ ಮಾತು ಅರ್ಥಕಳೆದುಕೊಳ್ಳಲಾರಂಬಿಸಿತು. ಇವತ್ತು ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಡಿ (ವಿಟಿಯು) ೧೫೯ ಎಂಜಿನಿಯರಿಂಗ್ ಹಾಗೂ ಬ್ಯುಸಿನೆಸ್ ಮೇನೇಜ್‌ಮೆಂಟ್ ಕಾಲೇಜುಗಳಿವೆ. ಅವುಗಳಲ್ಲಿ ಎಷ್ಟು ಸರಕಾರಿ ಕಾಲೇಜುಗಳಿವೆ ಹಾಗೂ ಎಷ್ಟು ಕಾಲೇಜುಗಳು ಮಠಗಳು ಹಾಗೂ ದುಡ್ಡಪ್ಪಗಳ ನಿಯಂತ್ರಣದಲ್ಲಿವೆ ಎಂಬುದನ್ನು ಲೆಕ್ಕಹಾಕಿ. ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಬಲ ಎನಿಸಿಕೊಂಡ ಎಲ್ಲ ಮಠಗಳ ಬಳಿಯಲ್ಲೂ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಎರಡೂ ಕಾಲೇಜುಗಳಿವೆ. ಅವುಗಳಿಗೆ ಪ್ರಾಬಲ್ಯ ಬಂದಿದ್ದೇ ಇಂತಹ ಕಾಲೇಜುಗಳಿಂದ. ಹೀಗೆ  ಕಾಲೇಜುಗಳನ್ನೇ ಕಾಮಧೇನುಗಳನ್ನಾಗಿ ಮಾಡಿಕೊಂಡ ಮಠಗಳು ‘ಪವರ್ ಸೆಂಟರ್’ಗಳಾದವು. ಅಂದು ರಾಜಕಾರಣಿಗಳು ಎಲ್ಲರಿಗೂ ಸರಕಾರವೇ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಠಗಳಿಗೆ ಜವಾಬ್ದಾರಿ ಕೊಟ್ಟರು. ಇವತ್ತು ಮಠಗಳು ರಾಜಕಾರಣವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗಿ ಬೆಳೆದಿವೆ. ನೀವೇ ಯೋಚನೆ ಮಾಡಿ, ರಾಮಕೃಷ್ಣ ಮಠದಂತಹ ಕೆಲವನ್ನು ಬಿಟ್ಟು ಯಾವುದೇ ಮಠವನ್ನು ಹೆಸರಿಸಿ, ಕೂಡಲೇ ‘ಇಂತಹ ಜಾತಿಯದ್ದು’ ಎಂಬ ಯೋಚನೆ ಅರಿವಿಲ್ಲದಂತೆಯೇ ನಿಮ್ಮ ಮನಸ್ಸಿಗೆ ಬರುತ್ತದೆ. ಅಂದರೆ ಹಿಂದೆ ಸರ್ವಜನರ ಅಭ್ಯುದಯದ ಗುರಿ ಇಟ್ಟುಕೊಂಡಿದ್ದ ಮಠಗಳ ಕೈಗೆ ಉನ್ನತ ಶಿಕ್ಷಣದ ‘ಫಲ’ ಸಿಕ್ಕಿದ ನಂತರ ದುಡ್ಡು ಹರಿದು ಬಂತು. ಆ ದುಡ್ಡು ಎಷ್ಟು ಪ್ರಚೋದಕವಾಗಿತ್ತೆಂದರೆ ಮಠಗಳಿಗೆ “”3 R’s” ಇತ್ತಲ್ಲ ಅದು “”Rs” ಥರಾ ಕಾಣಲಾರಂಭಿಸಿತು. ಹೀಗೆ ಮೂಲ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗುತ್ತಾ ಹೋದ ಮಠಗಳು ಹಾಗೂ ಜನರ ನಡುವೆ ಅಂತರ ಸೃಷ್ಟಿಯಾಗತೊಡಗಿತು. ಕಾಲಕ್ರಮೇಣ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಎಲ್ಲ ಮಠಗಳಿಗೂ ಹೋಗುತ್ತಿದ್ದ ಕಾಲ ಬದಲಾಗಿ ಅವು ಜಾತಿ ಮಠಗಳಾಗತೊಡಗಿದವು. ಹೀಗೆ ಮಠಗಳು ಆಯಾ ಜಾತಿಗಳಿಗೆ ಸೀಮಿತವಾಗಿದ್ದು ಸಮಾಜಕ್ಕೆ ನಷ್ಟವಾದರೂ, ಮಠಗಳಿಗೆ ಮಾತ್ರ ವರದಾನವಾಯಿತು. ಅಂದರೆ ಮಠಗಳೂ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೆಸಲು ಅವಕಾಶ ಲಭ್ಯವಾಯಿತು. ಇಂತಹ ಸ್ವಾಮೀಜಿಯವರನ್ನು ಎದುರು ಹಾಕಿಕೊಂಡರೆ ಅವರ ಸಮುದಾಯದವರು ಮುನಿಸಿಕೊಳ್ಳುತ್ತಾರೆ, ಇಂತಹ ಜಾತಿಯ ಮತಗಳು ಕೈತಪ್ಪಿ ಹೋಗುತ್ತವೆ ಎಂಬ ಭಯ ನಮ್ಮ ರಾಜಕಾರಣಿಗಳನ್ನು ಕಾಡು ವಂತೆ ಮಾಡಿದರು. ಹೀಗೆ ಮಠಗಳು ಇಂದು ರಾಜಕೀಯದ ಮೇಲೆಯೂ ನಿಯಂತ್ರಣ ಸಾಧಿಸಿವೆ.

ಈ ರೀತಿ ಸರಕಾರ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು ವಿದ್ಯಾದಾನದ ಜವಾಬ್ದಾರಿಯನ್ನು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು, ದುಡ್ಡಪ್ಪಗಳು ಮತ್ತು ಮಠಗಳಿಗೆ ವಹಿಸಿದ್ದು ಹಾಗೂ ವಹಿಸಿಕೊಂಡವರು ಅದನ್ನು ಉದ್ಯಮದಂತೆ ನಡೆಸಿಕೊಂಡಿದ್ದರ ಪರಿಣಾಮವಾಗಿ ದೀನ ದಲಿತರು ಮೂಲ ಹಾಗೂ ಉನ್ನತ ಶಿಕ್ಷಣ ಎರಡರಿಂದಲೂ ವಂಚಿತರಾಗಬೇಕಾಗಿ ಬಂತು. ಇತ್ತ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರೆಂಬ ಹಣೆ ಪಟ್ಟಿ ಹಾಕಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿರುವವರು ‘ನಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್. ನಾವು ಮೀಸಲಾತಿ ಕೊಡಬೇಕೆಂದಿಲ್ಲ’ ಎಂದು ವಾದಿಸಿ ಗೆದ್ದರು. ಇನ್ನೊಂದೆಡೆ ದುಡ್ಡಪ್ಪಗಳು ಹಾಗೂ ಮಠಗಳು ರಾಜಕೀಯದ ಮೇಲೆ ತಾವು ಸಾಧಿಸಿರುವ ನಿಯಂತ್ರಣವನ್ನು ಉಪಯೋಗಿಸಿಕೊಂಡು ತಮ್ಮ ಶಿಕ್ಷಣ ಸಂಸ್ಥೆಗಳನ್ನು “ಡೀಮ್ಡ್ ಯೂನಿವರ್ಸಿಟಿ”ಗಳೆಂದು ಘೋಷಿಸಿಕೊಳ್ಳುತ್ತಿದ್ದಾರೆ, ಇಲ್ಲವೇ “ಸ್ವಾಯತ್ತ ಸಂಸ್ಥೆ”(ಅಟಾನಮಸ್ ಸ್ಟೇಟಸ್) ಎಂಬ ಸ್ಥಾನಮಾನ ಪಡೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸರಕಾರಿ ಸೀಟುಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿವೆ. ಹೀಗೆ ಎಲ್ಲರೂ ತಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್, ರಿಸರ್ವೇಶನ್ ಕೊಡುವುದಿಲ್ಲ ಎನ್ನಲು ಆರಂಭಿಸಿದರೆ, ಡೀಮ್ಡ್ ಹಾಗೂ ಆಟಾನಮಸ್ ಎಂಬ ತಡೆಗೋಡೆ ಕಟ್ಟಿಕೊಂಡರೆ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿ, ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತನಾಗಿರುವ ದಲಿತರು ಎಲ್ಲಿಗೆ ಹೋಗಬೇಕು? ಅವರ ನೋವು ನಮಗೇಕೆ ಅರ್ಥವಾಗುವುದಿಲ್ಲ?

“ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ”, “ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ” ಎಂದಿರುವ ಬಸವರಾಜು ಅವರ ಕೂಗಿನ ಹಿಂದೆ ಇಂತಹ ಹಾಲಿ ಪರಿಸ್ಥಿತಿಯ ಕ್ರೂರ ಅಣಕವಿದೆ, ದಲಿತ ಹಾಗೂ ಎಲ್ಲ ಜಾತಿಯ ಬಡಬಗ್ಗರ ಹತಾಶೆಯಿದೆ ಎಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?

ಖಂಡಿತ ಮಠಗಳು ಏನನ್ನೂ ಮಾಡಿಲ್ಲ ಎಂದು ಸಾರಾ ಸಗಟಾಗಿ ಇಲ್ಲಿ ಹೇಳುತ್ತಿಲ್ಲ.

ಒಂದು ವೇಳೆ, ಬಸವರಾಜು ಅವರ ಮಾತು, ಟೀಕೆಯಲ್ಲಿ ಹುರುಳಿಲ್ಲ ಎನ್ನುವುದಾದರೆ ಎಲ್ಲ ಮಠಗಳೂ ತಮ್ಮ ಆದಾಯ ಮತ್ತು ಬಡವರ ಕಲ್ಯಾಣಕ್ಕಾಗಿ ಇದುವರೆಗೂ ಮಾಡಿರುವ ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಲಿ? ಒಬ್ಬ ಸಾಮಾನ್ಯ ನಾಗರಿಕ ಸರಕಾರಕ್ಕೆ ತನ್ನ ಆದಾಯ ಹಾಗೂ ವೆಚ್ಚದ ಲೆಕ್ಕ ಕೊಡುತ್ತಾನೆ. ಆ ಕೆಲಸವನ್ನು ಮಠಗಳೂ ಮಾಡಲಿ. ಅವು ನಡೆಸುತ್ತಿರುವ ಉಚಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನೂ ತೆರೆದಿಡಲಿ.

ಇವತ್ತು ಶಿಕ್ಷಣ ವ್ಯವಸ್ಥೆ ಮೇಲೆ ಮಠಗಳ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ ತಮ್ಮ ಪ್ರಾಬಲ್ಯವಿರುವ, ಶಿಕ್ಷಣ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಕನಿಷ್ಠ ಸೌಲಭ್ಯಗಳ ಸರಕಾರಿ ಕಾಲೇಜುಗಳನ್ನು ಸ್ಥಾಪಿಸುವುದಕ್ಕೂ ಅಡ್ಡಿ ಬಂದಿವೆ. ಇನ್ನು ವೃತ್ತಿಪರ ಕಾಲೇಜುಗಳೆಂಬ ಕಾಮಧೇನು ನೀಡುವ ಫಲವನ್ನು ಕೆಳಸ್ತರಕ್ಕೆ ಹಂಚುವ ಕೆಲಸವನ್ನಾದರೂ ಮಠಗಳು ಮಾಡುತ್ತಿವೆಯೇ? ಎಷ್ಟು ಮಠಗಳು ಎಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳನ್ನು ಕನಿಷ್ಠ ಮಟ್ಟದ ಸುಶಿಕ್ಷಿತರನ್ನಾಗಿಸುವ ಪ್ರಯತ್ನ ನಡೆಸಿವೆ? ಮಠಮಾನ್ಯಗಳು ಈ ಸಾಮಾಜಿಕ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಅಂಗನವಾಡಿಗಳ ಅಗತ್ಯವಾದರೂ ಏನಿತ್ತು? ಕ್ಯಾಪಿಟೇಶನ್ ವಿರುದ್ಧ ವೀರಪ್ಪ ಮೊಯಿಲಿ ಅವರು ಕೆಂಡಕಾರಿ ಅದರ ನಿಷೇಧಕ್ಕೆ ಕರೆ ನೀಡಿದಾಗ ರೌದ್ರಾವತಾರ ತಳೆದ ಈ ‘ಉಳ್ಳವರ’ ಮಠಗಳು ಸರಕಾರವನ್ನು ಕಿತ್ತೊಗೆಯಲು ಪಣತೊಟ್ಟಿದ್ದನ್ನು ಮರೆಯಲಾದೀತೆ? ಅಷ್ಟೇ ಏಕೆ, ಮಠಗಳು ಸ್ವಜಾತಿಯ ಬಡವರಿಗೇ ಸಹಾಯ ಮಾಡುತ್ತಿಲ್ಲ ಎಂಬ ಆರೋಪ ವನ್ನು ಅಲ್ಲಗಳೆಯಲು ಸಾಧ್ಯವಿದೆಯೆ?

ಅಂದ ಮಾತ್ರಕ್ಕೆ “ಮಠಗಳಿಂದ ಶಿಕ್ಷಣವನ್ನು ಕಿತ್ತುಕೊಳ್ಳಬೇಕು ಎಂದಲ್ಲ”, ನರ್ಸಿಂಗ್, ಮೆಡಿಕಲ್, ಎಂಜಿನಿಯರಿಂಗ್, ಬ್ಯುಸಿನೆಸ್ ಮೇನೇಜ್‌ಮೆಂಟ್ ಮುಂತಾದ ಉನ್ನತ ಶಿಕ್ಷಣದ ಮೋಹವನ್ನು ಸ್ವಲ್ಪ ಕಡಿಮೆ ಮಾಡಿ “”Back to roots” ಎಂಬಂತೆ ಮಕ್ಕಳಿಗೆ ಓದು, ಬರಹ, ಲೆಕ್ಕವನ್ನು ಕಲಿಸುವಂತಹ ಮೂಲ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಎಲ್ಲ ಮಕ್ಕಳೂ ಒಟ್ಟಿಗೆ ಕುಳಿತು ಧಾರ್ಮಿಕ ಹಾಗೂ ಲೌಖಿಕ ಪಾಠವನ್ನು ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಿ ಜಾತಿರಹಿತ ಭಾವನೆ ಮೂಲದಲ್ಲೇ ಮೈಗೂಡುವಂತೆ ಮಾಡಬೇಕು. ಅಂತಹ ಸಮಾನ ಶಿಕ್ಷಣ ವ್ಯವಸ್ಥೆ ಸಿಕ್ಕಾಗ ಮಾತ್ರ ಒಂದು ಸ್ವಸ್ಥ ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.

ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಬಹುಮುಖ್ಯ ವಾದ ಅಂಶವಿದೆ.

ಒಬ್ಬ ದಲಿತ ಮತಾಂತರಗೊಂಡ ಕೂಡಲೇ ನಮಗೆ ಸಿಟ್ಟು ಬರುತ್ತದೆ. ಮಿಷನರಿಗಳನ್ನು ದೂಷಿಸಲಾರಂಭಿಸುತ್ತೇವೆ. ಆದರೆ ಆ ದಲಿತ ಮಾತೃಧರ್ಮ ತೊರೆಯುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವರಾರು? ಮತಾಂತರಗೊಳ್ಳುವವರೇನೂ ದಡ್ಡರಲ್ಲ. ಯೇಸುವನ್ನು ಪ್ರಾರ್ಥಿಸಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ, ಪಾದ್ರಿಗಳು ಹೇಳುತ್ತಿರುವುದೆಲ್ಲ ಪೊಳ್ಳು ಎಂಬುದು ಅವರಿಗೂ ಗೊತ್ತು. ಆದರೂ ಸಾಮಾಜಿಕ ಅಸಮಾನತೆ, ತಾರತಮ್ಯಗಳಿಲ್ಲದ ಒಂದು Better life ಎಂಬ ಮರೀಚಿಕೆಯನ್ನರಸಿಕೊಂಡು, ತಮ್ಮ ಮಕ್ಕಳಿಗೆ ಕಾನ್ವೆಂಟ್‌ಗಳಲ್ಲಿ ಪ್ರವೇಶ ಹಾಗೂ ಪುಕ್ಕಟೆ ಶಿಕ್ಷಣ ಸಿಗುತ್ತದೆ, ನಮ್ಮ ಮಕ್ಕಳಿಗಾದರೂ ಒಂದು ಒಳ್ಳೆಯ ಭವಿಷ್ಯ ಸೃಷ್ಟಿಯಾಗುತ್ತದೆ ಎಂಬ ಆಸೆಯಿಂದ ಹೋಗುತ್ತಾರೆ. ಅಂತಹ ಅನುಕೂಲಗಳನ್ನು ಸ್ವಧರ್ಮೀಯರೇ ಏಕೆ ಸೃಷ್ಟಿಸಬಾರದು? ಆಗಾಧ ಆದಾಯವನ್ನು ಹೊಂದಿರುವ ನಮ್ಮ ಮಠ-ಮಂದಿರಗಳೇಕೆ ಆ ಕೆಲಸ ಮಾಡಬಾರದು? ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಲಾಗದು. ಅಷ್ಟಕ್ಕೂ, ಸರಕಾರ ದಲಿತರಿಗೆ ಒಂದಿಷ್ಟು ಮೀಸಲು ನೀಡಬಹುದು, ಒಂದು ಹಂತದವರೆಗೂ ಪುಕ್ಕಟೆ ಶಿಕ್ಷಣ ಕೊಡಬಹುದು. ಆದರೆ ಮನಸ್ಸು-ಮನಸ್ಸುಗಳ ನಡುವೆ ಇರುವ ಕಂದಕವನ್ನು ಯಾವ ಕಾನೂನಿನಿಂದಲೂ ಮುಚ್ಚಲು ಸಾಧ್ಯವಿಲ್ಲ. ಆ ಕೆಲಸ ವನ್ನು ಮಠ-ಮಂದಿರಗಳು ಮಾಡಬೇಕು.  ಹೀಗಿದ್ದರೂ ‘ಮತಾಂತರಗೊಳ್ಳಬೇಡಿ, ನಿಮ್ಮನ್ನೆಲ್ಲ ಒಪ್ಪಿಕೊಳ್ಳುತ್ತೇವೆ, ಅಪ್ಪಿಕೊಳ್ಳುತ್ತೇವೆ’ ಎಂದು ಭಾಷಣ ಕೊಟ್ಟು, ಸಹಪಂಕ್ತಿ ಬೋಜನ ಮಾಡೋಣ ಬನ್ನಿ ಎಂದ ಕೂಡಲೇ ಮೌನಕ್ಕೆ ಶರಣಾಗುತ್ತಾರೆ. ಹಾಗಾದರೆ ಒಬ್ಬ ಶಂಕರಾಚಾರ್ಯ, ವಿವೇಕಾನಂದ ಯಾವ ಉದ್ದೇಶಕ್ಕಾಗಿ ದೇಶ ಸುತ್ತಿದರು?  ಶ್ರೀ ನಾರಾಯಣ ಗುರುಗಳು ಯಾವ ಕಾರಣಕ್ಕಾಗಿ ನಾಡನ್ನಲೆದರು? ಅವರೂ ಪೀಠದ ಮೇಲೆ ಕುಳಿತುಕೊಂಡು ನೋಟು ಮುಂದಿಟ್ಟವರಿಗೆ ಸೀಟು, ಸೇಬು, ಮೂಸಂಬಿ, ಕಿತ್ತಳೆ ಹಣ್ಣು ಕೊಡಬಹುದಿತ್ತಲ್ಲವೆ? ಹಾಗೆ ಕೊಟ್ಟಿದ್ದರೆ ಅವರು ದೇಹಬಿಟ್ಟ ನಂತರವೂ ಬದುಕಿರುತ್ತಿರಲಿಲ್ಲ.

ಇದು ಎಲ್ಲ ಮಠಾಧೀಶರಿಗೂ ಅರ್ಥವಾಗಬೇಕು. ಮಠ ಎಂದರೆ ಪೀಠದ ಮೇಲೆ ಆಸೀನರಾಗಿ, “ರೆವಿನ್ಯೂ ಜನರೇಟಿಂಗ್ ಸ್ಕೂಲ್, ಕಾಲೇಜು”ಗಳನ್ನು ಸ್ಥಾಪಿಸಿ, ಗಂಟಿದ್ದವರಿಗೆ ಮಾತ್ರ ತಮ್ಮ ಕಾಲೇಜುಗಳ ಬಾಗಿಲು ತೆರೆಯುವುದಲ್ಲ.

ಈ ಹಿನ್ನೆಲೆಯಲ್ಲಿ, ಎಲ್ಲ ಮಠಗಳನ್ನೂ ಒಂದೇ ತಕ್ಕಡಿಗೆ ಹಾಕಿ, ಮಠಗಳೆಂದರೆ ಸಮಾಜ ವಿರೋಧಿಗಳು ಎಂದು ಏಕಾಏಕಿ ತೀರ್ಪು ಕೊಟ್ಟ ಬಸವರಾಜು ಅವರ ಆ ಮಾತನ್ನು ನಿರ್ಲಕ್ಷಿಸಿ,  ಬಸವರಾಜು ಅವರನ್ನೂ ನಿಮಿತ್ತವಾಗಿಟ್ಟುಕೊಂಡು ಅವರು ಎತ್ತಿರುವ ಕೆಲವು ಪ್ರಶ್ನೆಗಳ ಹಿಂದೆ ಇರುವ ಸಾಮಾಜಿಕ ಪರಿಸ್ಥಿತಿ ಹಾಗೂ ಅದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ದಲಿತರು ಮತ್ತು ಎಲ್ಲ ಜಾತಿಗಳ ಹಿಂದುಳಿದವರನ್ನು ಕಡೆಗಣಿಸಿದರೆ ಮುಂದೆ ಎಂತಹ ಅಪಾಯ ಎದುರಾಗಬಹುದು ಎಂಬುದನ್ನು ಊಹೆ ಮಾಡಿಕೊಳ್ಳಿ.

ಎಲ್ಲವೂ ನಿಮ್ಮ ವಿವೇಚನೆಗೆ ಬಿಟ್ಟಿದ್ದು.

Stop character assassination! – ಸತ್ತ ಮೇಲೆ ಶೀಲದ ಸತ್ವಪರೀಕ್ಷೆ ಸರಿಯೇ?

ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ.
Uma Khurana, Padmapriya, Arushiಬಹುಶಃ ನೀವು ಮರೆತೇ ಬಿಟ್ಟಿರಬಹುದು ಉಮಾ ಖುರಾನಾ ಅವರನ್ನ.

ಆಕೆ ದಿಲ್ಲಿಯ ದರ್ಯಾಗಂಜ್‌ನಲ್ಲಿರುವ ಸರಕಾರಿ ಶಾಲೆಯಾದ “ಸರ್ವೋದಯ ಕನ್ಯಾ ವಿದ್ಯಾಲಯ”ದಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದರು. ಇತ್ತ 2007, ಆಗಸ್ಟ್ 30ರಂದು ದಿಲ್ಲಿಯ ಸ್ಥಳೀಯ ಖಾಸಗಿ ಹಿಂದಿ ಚಾನೆಲ್ಲಾದ “Live India”ದಲ್ಲಿ ಇದ್ದಕ್ಕಿದ್ದಂತೆಯೇ “Sting operation” ಪ್ರಸಾರವಾಗ ತೊಡಗಿತು. ರಶ್ಮಿ ಖನ್ನಾ ಎಂಬಾಕೆ ತೆರೆಯ ಮೇಲೆ ಕಾಣಿಸಿಕೊಂಡಳು. ಆಕೆ ಸರ್ವೋದಯ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ ಎಂದು ಒಕ್ಕಣೆ ಕೊಟ್ಟರು. ಅಶ್ಲೀಲ ಚಿತ್ರ, ವಿಡಿಯೋ ಚಿತ್ರಣಗಳನ್ನು ತೋರಿಸಿದರು. ಗಣಿತ ಶಿಕ್ಷಕಿಯಾದ ಉಮಾ ಖುರಾನಾ ಸರ್ವೋದಯ ಶಾಲೆಯ ವಿದ್ಯಾರ್ಥಿನಿಯರನ್ನು `ಮಾಂಸ ದಂಧೆ’ಗೆ ದೂಡುತ್ತಿದ್ದಾರೆ, ಪ್ರಚೋದಿಸುತ್ತಿದ್ದಾರೆ ಎಂದು ಪದೇ ಪದೆ ಪ್ರಸಾರ ಮಾಡಲಾಯಿತು. ಅದನ್ನು ನೋಡಿದ್ದೇ ತಡ ಆ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರ ಕೋಪ ನೆತ್ತಿಗೇರಿತು. ಎಲ್ಲಿ ತಮ್ಮ ಮಕ್ಕಳನ್ನೂ ವೇಶ್ಯಾವಾಟಿಕೆಗೆ ದೂಡಲಾಗಿದೆಯೋ ಎಂಬ ಆತಂಕವೂ ಕಾಡತೊಡಗಿತು. ಹೀಗೆ ಕೋಪ, ಆತಂಕಗಳೊಂದಿಗೆ ಶಾಲೆಗೆ ನುಗ್ಗಿದ ಪೋಷಕರು ಉಮಾ ಖುರಾನಾ ಅವರನ್ನು ಹಿಡಿದು ಎಳೆದಾಡತೊಡಗಿದರು. ಆಕೆ ಧರಿಸಿದ್ದ ಉಡುಪಿನ ಮೇಲ್ಭಾಗ ಸಂಪೂರ್ಣವಾಗಿ ಹರಿದು ಅರೆನಗ್ನಗೊಂಡರೂ ಅಮಾನುಷವಾಗಿ ಥಳಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಟಿವಿ ಚಾನೆಲ್‌ಗಳು ಉಮಾ ಖುರಾನಾಗೆ ಹಿಗ್ಗಾಮುಗ್ಗ ಥಳಿಸುವುದನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದವು. `Porn racket`, `Porn in School”ಎಂಬ ಶೀರ್ಷಿಕೆಗಳೊಂದಿಗೆ ರಾಷ್ಟ್ರೀಯ ಚಾನೆಲ್‌ಗಳೂ ಕೂಡ ಉಮಾ ಖುರಾನಾ ಅವರನ್ನು ಥಳಿಸುತ್ತಿರುವುದನ್ನು, ಬಟ್ಟೆ ಚಿಂದಿಯಾಗುವಂತೆ ಹೊಡೆಸಿಕೊಳ್ಳುತ್ತಿರುವುದನ್ನು ಪ್ರಸಾರ ಮಾಡತೊಡಗಿದವು. TV sting shows school teacher in ‘porn racket” ಎಂದು ಮರುದಿನ ಪತ್ರಿಕೆಗಳೂ ಬರೆದವು. ಅದರಲ್ಲೂ `ಹಿಂದೂಸ್ಥಾನ್ ಟೈಮ್ಸ್’ ಪತ್ರಿಕೆಯಂತೂ “Who is Uma Khurana?” ಎಂಬ ಶೀರ್ಷಿಕೆಯಡಿ “ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂಬ ಸ್ಟಿಂಗ್ ಆಪರೇಶನ್‌ನ ಬೆನ್ನಲ್ಲೇ ಸರ್ವೋದಯ ಕನ್ಯಾ ವಿದ್ಯಾಲಯದ ಗಣಿತ ಶಿಕ್ಷಕಿಯನ್ನು ಕೋಪೋದ್ರಿಕ್ತ ಪೋಷಕರು ಚೆನ್ನಾಗಿ ಥಳಿಸಿದ್ದಾರೆ. ಖುರಾನಾ ಅವರ ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಇಂತಹ ಕಪ್ಪುಚುಕ್ಕೆಗಳು ಕಾಣ ಸಿಗುತ್ತವೆ. ವಿವೇಕ್ ವಿಹಾರ್ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಸಂದರ್ಭದಲ್ಲೂ ಖುರಾನಾ ಅವರನ್ನು ಒಮ್ಮೆ ಸಸ್ಪೆಂಡ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಬಿಟ್ಟು ವಿವಾದಕ್ಕೆ ಸಿಲುಕಿದ್ದರು” ಎಂದು ಬರೆಯಿತು. ಈ ಮಧ್ಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾವುದೇ ಆಧಾರಗಳಿಲ್ಲದ್ದರೂ ಎಫ್‌ಐಆರ್ ದಾಖಲಿಸಿದರು. “ಅನೈತಿಕ ಚಟುವಟಿಕೆ ತಡೆ ಕಾಯಿದೆ”ಯಡಿ ಬಂಧಿಸಿದರು. ಶೀಲಾ ದಿಕ್ಷೀತ್ ಅವರ ಸರಕಾರವೂ ಶೀಲದ ವಿಷಯದಲ್ಲಿ ಭಾರೀ ಸಂವೇದನೆ ತೋರಿತು! ಮೊದಲಿಗೆ ಉಮಾ ಖುರಾನಾ ಅವರನ್ನು ಸಸ್ಪೆಂಡ್ ಮಾಡಿದ ದಿಲ್ಲಿ ಸರಕಾರ, ಮಾಧ್ಯಮಗಳ ಅಬ್ಬರದ ಪ್ರಚಾರದಿಂದ ಉತ್ತೇಜನಗೊಂಡು ಆಕೆಯನ್ನು ಕೆಲಸದಿಂದಲೂ ಕಿತ್ತುಹಾಕಿ ಬಿಟ್ಟಿತು. ಶಿಕ್ಷಕಿಯೇ ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ದೂಡುತ್ತಿದ್ದಾಳೆ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ, ಬೆತ್ತಲೆ ಚಿತ್ರ ತೆಗೆದು ಬೆದರಿಸುತ್ತಿದ್ದಾಳೆ ಅಂದರೆ ಯಾರು ತಾನೇ ರೊಚ್ಚಿಗೇಳುವುದಿಲ್ಲ? ಆದರೆ ವಾಸ್ತವದಲ್ಲಿ ನಡೆದಿದ್ದೇನು?

`ಸ್ಟಿಂಗ್ ಆಪರೇಶನ್’ ಹಾಗೂ ಹಲ್ಲೆ ಪ್ರಕರಣ ನಡೆದು ಐದು ದಿನ ಕಳೆದರೂ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಯಾವ ವಿದ್ಯಾರ್ಥಿನಿಯೂ ಉಮಾ ಖುರಾನಾ ವಿರುದ್ಧ ದೂರು ನೀಡಲಿಲ್ಲ! ಪೋಷಕರ ಆರೋಪದ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ನೆಪ ಹೇಳಲಾರಂಭಿಸಿದ ಪೊಲೀಸರು ನುಣುಚಿಕೊಳ್ಳಲು ಯತ್ನಿಸಲಾರಂಭಿಸಿದರು. ಅಷ್ಟಕ್ಕೂ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಲು ಯಾವ ಸಾಕ್ಷ್ಯಾಧಾರಗಳೂ ಇರಲಿಲ್ಲ. ಪ್ರಕರಣ ಕೋರ್ಟ್ ಮುಂದೆ ಬಂತು, ಸಾಕ್ಷ್ಯ ಒದಗಿಸುವಂತೆ ಪೊಲೀಸರು “ಲೈವ್ ಇಂಡಿಯಾ” ಚಾನೆಲ್ಲನ್ನೇ ಬೆನ್ನುಹತ್ತಬೇಕಾಯಿತು. ಆಗ ನೋಡಿ ಸತ್ಯ ಹೊರಬಿತ್ತು. ಉಮಾ ಖುರಾನಾ ಹಾಗೂ ವೀರೇಂದ್ರ ಅರೋರಾ ಎಂಬವರ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿ, ಜಗಳಕ್ಕೆ ಕಾರಣವಾಗಿತ್ತು. ಆಕೆಯ ಮಾನ ಕಳೆಯಲು ಮುಂದಾದ ಅರೋರಾ, `ಲೈವ್ ಇಂಡಿಯಾ’ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಧೀರ್ ಚೌಧುರಿ ಜತೆ ಸೇರಿ ಯೋಜನೆಯೊಂದನ್ನು ರೂಪಿಸಿದರು. ಅದೇ ಸ್ಟಿಂಗ್ ಆಪರೇಶನ್. ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ರಶ್ಮಿ ಖನ್ನಾ ಎಂಬಾಕೆ ವಿದ್ಯಾರ್ಥಿನಿಯ ವೇಷ ತಳೆದರು. ಬಲಿಪಶುವಿನಂತೆ ಕ್ಯಾಮೆರಾ ಮುಂದೆ ನಟನೆ ಮಾಡಿದರು. ಚಾನೆಲ್‌ನ ವರದಿಗಾರ ಪ್ರಕಾಶ್ ಸಿಂಗ್ ಸುದ್ದಿ ಸೃಷ್ಟಿಸಿ, `ಸ್ಟಿಂಗ್ ಆಪರೇಶನ್’ ಹೆಸರಿನಲ್ಲಿ ಅಶ್ಲೀಲ ಚಿತ್ರ, ಚಿತ್ರಣಗಳೊಂದಿಗೆ ವರದಿ ಮಾಡಿದರು. ಆದರೆ 2007, ಸೆಪ್ಟೆಂಬರ್ 13ರಂದು ಪ್ರಕರಣದ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ.ಕೆ. ಶರ್ಮಾ ಹಾಗೂ ಸಂಜೀವ್ ಖನ್ನಾಗೆ ಪಿತೂರಿಯ ಅರಿವಾಯಿತು. ಉಮಾ ಖುರಾನಾ ಅವರನ್ನು ದೋಷಮುಕ್ತರೆಂದು ಘೋಷಿಸಿ ಬಿಡುಗಡೆಗೊಳಿಸಿದರು. ಅಷ್ಟೇ ಅಲ್ಲ, ವರದಿಗಾರ ಪ್ರಕಾಶ್ ಸಿಂಗ್ ಹಾಗೂ ರಶ್ಮಿ ಖನ್ನಾ ಅವರನ್ನು ಬಂಧಿಸುವಂತೆ ಆದೇಶ ನೀಡಿದರು. `ಲೈವ್ ಇಂಡಿಯಾ’ ಚಾನೆಲ್ಲನ್ನೇ ಮುಚ್ಚಿಹಾಕಿಸಿದರು. ಆದರೆ ಅಷ್ಟರೊಳಗೆ ಉಮಾ ಖುರಾರಾ ಮರ್ಯಾದೆ ಬೀದಿ ಪಾಲಾಗಿತ್ತು. ಅಂದು ಸ್ಟಿಂಗ್ ಆಪರೇಶನ್ ಪ್ರಸಾರವಾದಾಗ ಇಡೀ ದೇಶವೇ ದಿಗ್ಭ್ರಮೆಗೊಂಡಿತ್ತು, ರಾಷ್ಟ್ರವೇ ರೊಚ್ಚಿಗೆದ್ದಿತ್ತು. ನಾವೆಲ್ಲರೂ ನೈತಿಕಪ್ರಜ್ಞೆ ಅದಾಗತಾನೇ ಜಾಗೃತಗೊಂಡಂತೆ “Moral high ground” ಏರಿ ಬೋಧನೆಗಿಳಿದು ಬಿಟ್ಟಿದ್ದೆವು.

ಒಂದು ತಿಂಗಳ ಹಿಂದೆ ನೋಯ್ಡಾ ಪೊಲೀಸರು ಮಾಡಿದ್ದೂ ಇದೇ ಕೆಲಸವನ್ನು! ಮನೆ ಕೆಲಸದ ಹೇಮರಾಜ್ ಮಹಡಿ ಮೇಲೆಯೇ ಹೆಣವಾಗಿ ಬಿದ್ದಿದ್ದರೂ ಆರುಷಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ತೀರ್ಪುಕೊಟ್ಟರು. ಸತ್ಯಸಂಗತಿ ಗೊತ್ತಾದ ಕೂಡಲೇ ಪತ್ರಿಕಾಗೋಷ್ಠಿ ಕರೆದ ಪೊಲೀಸರು, ಅಪ್ಪ ಡಾ. ರಾಜೇಶ್ ತಲ್ವಾರ್ ಅವರೇ ಆರುಷಿಯ ಕೊಲೆಗಾರ. ಮನೆಯಲ್ಲಿ ಕೆಲಸಕ್ಕಿದ್ದ ಹೇಮ್‌ರಾಜ್ ಜತೆ ಆರುಷಿ ಅಸಭ್ಯ ಭಂಗಿಯಲ್ಲಿದ್ದಿದ್ದು ಕಣ್ಣಿಗೆ ಬಿದ್ದಿದ್ದೇ ಕೊಲೆಗೆ ಕಾರಣ ಎಂದು `ಅನೈತಿಕ’ ಸಂಬಂಧದ ಕಥೆ ಕಟ್ಟಿದರು. ಆ 14 ವರ್ಷದ ಹುಡುಗಿ ಭವಿಷ್ಯದ ಬಗ್ಗೆ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳೋ ಗೊತ್ತಿಲ್ಲ, ಆದರೆ ಅಕಾಲಿಕವಾಗಿ ಕೊಲೆಯಾಗಿ ಒಂದು ತಿಂಗಳು ಕಳೆದರೂ ಇಂದಿಗೂ ಚಾರಿತ್ರ್ಯವಧೆಗೆ ಗುರಿಯಾಗುತ್ತಿದ್ದಾಳೆ. ನಿಜವಾಗಿ ನಡೆದಿದ್ದೇನು ಎಂದು ಹೇಳಲು, ತನ್ನನ್ನು ಸಮರ್ಥಿಸಿಕೊಳ್ಳಲು ಆಕೆಯೇ ಇಲ್ಲದಿರುವಾಗ ಶೀಲದ ಮೇಲೆ ಶಂಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಜೀವನ ಏನು ಎಂಬುದು ಅರ್ಥವಾಗುವ ಮೊದಲೇ ಅಗಲಿರುವ ಒಬ್ಬ ಹೆಣ್ಣುಮಗಳ ಚಾರಿತ್ರ್ಯದ ಬಗ್ಗೆ ಏಕಿಂಥ ಅನುಮಾನ? ಅಕಸ್ಮಾತ್, ಆರುಷಿ ಅಸಭ್ಯವಾದ ಭಂಗಿಯಲ್ಲಿದ್ದಾಗ ಸಿಕ್ಕಿಬಿದ್ದಿದ್ದರೂ ಬೈದು ಬುದ್ಧಿಹೇಳುವ ಬದಲು, ಅದೊಂದೇ ಕಾರಣಕ್ಕೆ ಹೆತ್ತಮಗಳನ್ನೇ ಕೊಲೆಗೈಯ್ಯುವಷ್ಟು ಅಪ್ಪ ಕಟುನಾಗಿರುತ್ತಾನೆಯೇ? ಹದಿನಾಲ್ಕು ವರ್ಷದ ಹುಡುಗಿ 47 ವರ್ಷದ ಮುದುಕನ ಬಳಿ ಲೈಂಗಿಕ ಸಂಬಂಧ ಬೆಳೆಸಬೇಕಾದ ಅನಿವಾರ್ಯತೆಯಾದರೂ ಏನಿತ್ತು? ಆಕೆಗೆ ಅಷ್ಟೊಂದು ಆಸಕ್ತಿಯಿದ್ದರೆ ಆಕೆಯ ಸಹಪಾಠಿಗಳು, ಹುಡುಗರು ಸಿಗುತ್ತಿದ್ದರಲ್ಲವೆ? ಅಷ್ಟಕ್ಕೂ ಒಂದಿಬ್ಬರು ಸಹಪಾಠಿಗಳ ಜತೆ ಆಕೆ ವಿನಿಮಯ ಮಾಡಿಕೊಂಡಿರುವ ಪ್ರಚೋದಕ ಎಸ್‌ಎಂಎಸ್‌ಗಳನ್ನು ಮಾಧ್ಯಮಗಳೇ ಪ್ರಕಟಿಸಿವೆ. ಅದಿರಲಿ, ಡಾ.ತಲ್ವಾರ್ ಜತೆ ಡಾ. ದುರಾನಿ, ಹೇಮ್‌ರಾಜ್ ಜತೆ ಆರುಷಿಯ ಸಂಬಂಧ ಹೊಂದಿದ್ದರು ಎಂದು ಘೋಷಣೆ ಮಾಡಲು ಪೊಲೀಸರೇನು ಪ್ರತ್ಯಕ್ಷವಾಗಿ ಕಂಡಿದ್ದರೆ? ನಾವೇಕೆ ಎಲ್ಲದರಲ್ಲೂ ಅನೈತಿಕ ಸಂಬಂಧವನ್ನೇ ಹುಡುಕಲು ಪ್ರಯತ್ನಿಸುತ್ತೇವೆ?

ಮೊನ್ನೆ ಪ್ರಾಣಕಳೆದುಕೊಂಡ ನಮ್ಮ ರಾಜ್ಯದವರೇ ಆದ ಪದ್ಮಪ್ರಿಯಾ ಎಂಬ ನತದೃಷ್ಟ ಮಹಿಳೆಯ ಚಾರಿತ್ರ್ಯದ ಬಗ್ಗೆ ವರದಿಯಾದ ಕಟ್ಟುಕಥೆಗಳನ್ನು ಓದಿದಾಗ ಅಂತರಾತ್ಮ ಅನ್ನುವುದು ಇದ್ದವರಿಗೆ ಖಂಡಿತ ಅತೀವ ದುಃಖವಾಗಿರುತ್ತದೆ, ಮನಸ್ಸು ಘಾಸಿಗೊಂಡಿರುತ್ತದೆ. ಆಕೆ ಕಾಣೆಯಾಗಿದ್ದಾಳೆ, ಮನೆ ಬಿಟ್ಟು ತೆರಳಿದ್ದಾಳೆ ಎಂದ ಕೂಡಲೇ ನಮ್ಮ ಮನಸ್ಸಿಗೆ ಅನೈತಿಕ ಸಂಬಂಧವೇ ನೆನಪಾಗುವುದೇಕೆ? ನಮ್ಮಲ್ಲಿ ನೈತಿಕತೆ ಅನ್ನುವುದು ಉಳಿದಿಲ್ಲದಿರುವುದೇ ನಾವು ಹಾಗೆ ಯೋಚಿಸಲು ಕಾರಣ ಅಂತ ಅನ್ನಿಸುವುದಿಲ್ಲವೆ? ಒಂದು ಗಂಡು-ಹೆಣ್ಣು ಭಾಗಿಯಾಗಿರುವ ಘಟನೆಗಳು ಸಂಭವಿಸಿದಾಗ ನಮ್ಮ ಮನಸ್ಸೇಕೆ ಅನೈತಿಕ ಸಂಬಂಧದ ಕಡೆಯೇ ಸಾಗುತ್ತದೆ? ನಾವೇಕೆ ಹೆಣ್ಣನ್ನು ಅನುಮಾನದಿಂದಲೇ ನೋಡುತ್ತೇವೆ? ನಮ್ಮ ಕಣ್ಣುಗಳಲ್ಲಿ ಶಂಕೆಯೇ ಏಕೆ ತುಂಬಿ ಬಿಡುತ್ತದೆ? ಅಷ್ಟಕ್ಕೂ ದೈಹಿಕ ಸುಖ ಬೇಕಾಗಿದ್ದರೆ ಎರಡು ಮಕ್ಕಳಿಗೆ ಜನ್ಮಕೊಟ್ಟು, 35 ವರ್ಷ ತುಂಬಿ ಅರ್ಧ ಪ್ರಾಯ ಕಳೆಯುವವವರೆಗೂ ಪದ್ಮಪ್ರಿಯಾ ಕಾಯಬೇಕಾಗಿರಲಿಲ್ಲ. ಮಿಗಿಲಾಗಿ ಆಕೆಗೆ ದೈಹಿಕ ಸುಖವೇ ಮುಖ್ಯವಾಗಿದ್ದರೆ, ಅತುಲ್‌ರಾವ್ ಜತೆ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದರೆ ದಿಲ್ಲಿಗೆ ಪಲಾಯನ ಮಾಡಬೇಕಾದ ಅಗತ್ಯವೇನಿತ್ತು? ಗಂಡ ರಘುಪತಿ ಭಟ್ಟರ ಅನೈತಿಕ ಸಂಬಂಧದಿಂದ ಬೇಸತ್ತು ಆಕೆ ಅಂತಹ ನಿರ್ಧಾರಕ್ಕೆ ಬಂದಿರಬಹುದು. ಅಷ್ಟಕ್ಕೂ ಆಕೆ ನೀತಿಗೆಟ್ಟ ಹೆಣ್ಣಾಗಿದ್ದರೆ ತೆರೆಮರೆಯಲ್ಲಿ ಸುಖಪಡೆದುಕೊಳ್ಳುತ್ತಾ ಗಂಡನ ಅನೈತಿಕತೆಯನ್ನೂ ಸಹಿಸಿಕೊಂಡು ಸಂಬಂಧವನ್ನು ಕಾಪಾಡಿಕೊಳ್ಳಬಹುದಿತ್ತು. ಜಗತ್ತಿನ ಎಲ್ಲ ಗಂಡಾಂತರ, ಸಾಮಾಜಿಕ ಅವಹೇಳನದ ಭಯವನ್ನು ಮೈಮೇಲೆ ಎಳೆದುಕೊಂಡು ದಿಲ್ಲಿಗೆ ಓಡಿ ಹೋಗುವ ಅಗತ್ಯವೇನಿತ್ತು? ವ್ಯವಹಾರ ಚತುರೆಯಾದ ಆಕೆಗೆ ಲೋಕಜ್ಞಾನ ಇಲ್ಲದೇ ಇರುತ್ತಾ? ಇಷ್ಟೆಲ್ಲಾ ಅಪಾಯಗಳಿವೆ ಎಂದು ಗೊತ್ತಿದ್ದೂ ಆಕೆ ದಿಲ್ಲಿಗೆ ತೆರಳಿ ಕಾಲ್‌ಸೆಂಟರ್ ಸೇರಿ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೊರಟ್ಟಿದ್ದಳೆಂದರೆ ಆಕೆಯೊಳಗೆ ಬಲವಾದ ಯಾವುದೋ ನೋವು, ಗಂಡನ ಪ್ರವೃತ್ತಿಯ ಬಗ್ಗೆ ಅಸಹ್ಯ ಭಾವನೆ ಇದ್ದಿರಬಹುದಲ್ಲವೆ? ಇಲ್ಲದೇ ಹೋಗಿದ್ದರೆ ಯಾವ ತಾಯಿ ತಾನೇ ತನ್ನ ದೈಹಿಕ ಸುಖಕ್ಕಾಗಿ ಹೆತ್ತಮಕ್ಕಳನ್ನು ಬಿಟ್ಟು ಹೋಗುತ್ತಾಳೆ? ಅದಿರಲಿ, ವ್ಯಭಿಚಾರವೆಂಬುದು ಏಕೆ ಹೆಣ್ಣಿಗೆ ಮಾತ್ರ ಸಂಬಂಧಪಟ್ಟ ವಿಷಯವಾಗಿ ಬಿಡುತ್ತದೆ? ರಘುಪತಿ ಭಟ್ಟರ ಚಾರಿತ್ಯ್ರವನ್ನೇಕೆ ನಾವು ಸತ್ವಪರೀಕ್ಷೆಗೆ ಒಳಪಡಿಸುತ್ತಿಲ್ಲ? ಅವರೇನು ಶ್ರೀರಾಮಚಂದ್ರನೇ? ನಮ್ಮ ಸಮಾಜ ಸಂವೇದನೆಯನ್ನೇ ಕಳೆದುಕೊಂಡು ಬಿಟ್ಟಿದೆಯೇ?

ಅದು ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ರೋನನ್ ಸೇನ್ ಅವರಿಂದ “Headless Chickens” ಎಂದು ಕರೆಸಿಕೊಂಡ ಪತ್ರಕರ್ತರಿರಬಹುದು, `ರಾಜಶೇಖರ್, ನಿಮ್ಮ ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ, ನಿಮಗೇನನಿಸುತ್ತಿದೆ?!’ ಎಂದು ಕೇಳುವ ಟಿವಿ ಆಂಕರ್‌ಗಳಿರಬಹುದು ಅಥವಾ ಅವರು ಬರೆದಿದ್ದನ್ನು ಬಾಯಿ ಚಪ್ಪರಿಸಿಕೊಂಡು ಓದುವ ಹಾಗೂ ಬಾಯಿ ತೆರೆದುಕೊಂಡು ಟಿವಿ ನೋಡುವವರು ಆಗಿರಬಹುದು. ಅವರು ಪದ್ಮಪ್ರಿಯಾ ಅವರ ಚಾರಿತ್ರ್ಯಕ್ಕಿಂತ ಮೊದಲು ತಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಪ್ರಶ್ನಿಸಿಕೊಳ್ಳುವುದು, ತಮ್ಮ ನೈತಿಕತೆಯನ್ನು ಪರಾಮರ್ಶಿಸಿಕೊಳ್ಳುವುದೊಳಿತು. ಇವತ್ತು ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನಮ್ಮ ಕುತೂಹಲಕ್ಕೆ ಇಬ್ಬರು ಮಕ್ಕಳು ಅನಾಥವಾಗಬೇಕಾಗಿ ಬಂದಿದ್ದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇವತ್ತು ವಿಷಯ ತಣ್ಣಗಾಗಿರಬಹುದು. ಮುಂದೊಂದು ದಿನ ಮರೆತಂತೆಯೂ ಭಾಸವಾಗಬಹುದು. ಆದರೆ ನೆನಪುಗಳು ಅಳಿಸಿ ಹೋಗುವುದಿಲ್ಲ. ಆಕೆ ಕಳಂಕಿತ ಹೆಣ್ಣಾಗಿಯೇ ಉಳಿದು ಬಿಡುತ್ತಾಳೆ. ಅಷ್ಟಕ್ಕೂ ತನ್ನನ್ನು ಸಮರ್ಥಿಸಿಕೊಳ್ಳಲು, ನೈಜ ಕಾರಣವನ್ನು ವಿವರಿಸಲು ಆಕೆಯೇ ಇಲ್ಲ. ಆಕೆಯ ಮಕ್ಕಳು `ಇಂಥಾಕೆಯ ಮಕ್ಕಳು’ ಎಂಬ ಕಳಂಕವನ್ನು ಜೀವನ ಪರ್ಯಂತ ಹೊರಬೇಕಾಗುತ್ತದೆ. ನೀವೇ ಹೇಳಿ, ಸತ್ತು ಚಿತೆಯೇರಿದ ಮೇಲೂ ನಾವೇಕೆ ಶೀಲದ ಸತ್ವಪರೀಕ್ಷೆ ಮಾಡುತ್ತಿದ್ದೇವೆ? ಅವರಿಬ್ಬರ ಮಧ್ಯೆ ಯಾವ ಸಂಬಂಧವಿತ್ತು ಎಂಬುದು ಅವರಿಬ್ಬರಿಗಷ್ಟೇ ಗೊತ್ತು. ಹಾಗಿರುವಾಗ ತಾವೇ ಇಣುಕಿ ನೋಡಿದಂತೆ, ಪ್ರತ್ಯಕ್ಷವಾಗಿ ಕಂಡಂತೆ ಬರೆಯುವುದು ಮತ್ತು ಹಾಗೆ ಬರೆದಿದ್ದನ್ನು ಸತ್ಯವೆಂಬಂತೆ ನಂಬುವುದು ಎಷ್ಟು ಸರಿ? ಪತ್ರಿಕೆಗಳಲ್ಲಿ ಬರೆಯುವವರು, ಬರೆದಿದ್ದನ್ನು ಓದುವ ಓದುಗರೆಲ್ಲರೂ ಸುಶಿಕ್ಷಿತರೇ. ಅನಕ್ಷರಸ್ಥರು ಪತ್ರಿಕೆ ಓದುವುದಿಲ್ಲ. ಸುಶಿಕ್ಷಿತರೇ ಹೀಗೆ ವರ್ತಿಸಿದರೆ ಸಮಾಜದ ಗತಿಯೇನು?

“ಅದು ಯಾವುದೇ ವ್ಯಕ್ತಿಯಾಗಿರಲಿ ಆರೋಪ ಸಾಬೀತಾಗುವವರೆಗೂ ನಿರಪರಾಧಿ” ಎಂದು ನಮ್ಮ ಕಾನೂನು ಹೇಳುತ್ತದೆ.

ಆದರೆ ರಘುಪತಿ ಭಟ್ಟರೆ, ನಿಮ್ಮ ಪತ್ನಿ ಪದ್ಮಪ್ರಿಯಾ ಅವರ ಬದುಕು ಮೊಟಕುಗೊಳ್ಳುವುದಕ್ಕೆ ಕಾರಣ ಯಾರು? ನೀವೋ ಅಥವಾ ಅತುಲ್‌ನೋ? ಅತುಲ್ ಕೆಟ್ಟವ್ಯಕ್ತಿಯೇ ಆಗಿರಬಹುದು. ಆದರೆ ನೀವು ಸರಿಯಿದ್ದಿದ್ದರೆ ನಿಮ್ಮ ಹೆಂಡತಿ ಅತುಲ್ ಸಹಾಯ ಕೇಳುವ ಅಗತ್ಯವೇಕೆ ಬರುತ್ತಿತ್ತು? ಯಾವ ಹೆಣ್ಣುತಾನೇ ಸೆಕ್ಸ್‌ಗಾಗಿ ಸಂಬಂಧವನ್ನೇ ಕಡಿದುಕೊಳ್ಳಲು ಮುಂದಾಗುತ್ತಾಳೆ? ಕಾಮತೃಷೆ ತೀರಿಸಿಕೊಳ್ಳುವ ಬಯಕೆ ಆಕೆಗಿದ್ದರೆ ವಿಚ್ಛೇದನೆ ನೀಡುವಂತೆ ನಿಮ್ಮನ್ನು ಅಂಗಲಾಚುತ್ತಿರಲಿಲ್ಲ. ನಿಮಗೆ ಹೆಂಡತಿ ಮೇಲೆ ಪ್ರೀತಿ ಉಳಿದಿಲ್ಲವೆಂದಾಗಿದ್ದರೆ ಸಂಬಂಧದ ಕೊಂಡಿಯೇಕೆ ಬೇಕಿತ್ತು? ಆಕೆಯ ಇಚ್ಛೆಯಂತೆ ಡೈವೋರ್ಸ್ ನೀಡಿದ್ದಿದ್ದರೆ ಕನಿಷ್ಠ ಒಂದು ಹೆಣ್ಣಿನ ಪ್ರಾಣವಾದರೂ ಉಳಿದಿರುತ್ತಿತ್ತಲ್ಲವೆ?

ಏನೇ ಹೇಳಿ, ಕೈಹಿಡಿದವಳನ್ನು ಪ್ರೀತಿಗೆ ಬದಲು ಸಂಬಂಧದಲ್ಲಿ ಕಟ್ಟಿಹಾಕುವ ರಘುಪತಿ ಭಟ್ಟರಂತಹ ಗಂಡಂದಿರಿರುವವರೆಗೂ, `ಶಾಸಕರ ಪತ್ನಿಗೇ ರಕ್ಷಣೆ ಇಲ್ಲವೆಂದಾದರೆ ಸಾಮಾನ್ಯರ ಗತಿಯೇನು?’ ಎಂದು ಹೇಳಿಕೆ ನೀಡುವ ಬಾಯಿಬಡುಕಿ ಪ್ರಮೀಳಾ ನೇಸರ್ಗಿ, ಖರ್ಗೆಯವರಂತಹ ನಿರ್ಭಾವುಕ ಮನಸ್ಸುಗಳು ಇರುವವರೆಗೂ ಸಮಾಜ ಹೆಣ್ಣಿನ ಶೀಲದ ಸತ್ವಪರೀಕ್ಷೆ ನಡೆಸುವುದನ್ನು ನಿಲ್ಲಿಸುವುದಿಲ್ಲ. ಛೇ.

Does God Really Exist? – ದೇವರು ನಿಜವಾಗಿಯೂ ಇರುವುದಾದರೆ ಎಲ್ಲಿದ್ದಾನೆ?

Where is God? What is God?

ಪ್ರೀತಿಯನ್ನು ಹೇಗೆ ವ್ಯಾಖ್ಯಾನಕ್ಕೆ ಒಡ್ಡಲಾಗುವುದಿಲ್ಲವೋ ದೇವರ ಅಸ್ತಿತ್ವವನ್ನೂ ಅರಿಯಲು, ದೇವರನ್ನು ಅಳೆಯಲು ಸಾಧ್ಯವಿಲ್ಲ. ನಂಬಿದವರಿಗೆ ಇದ್ದಾನೆ ಇಲ್ಲದವರಿಗೆ ಇಲ್ಲ. ಪ್ರೀತಿ, ನಂಬಿಕೆ, ವಿಶ್ವಾಸ, ಒಳ್ಳೆಯತನ, ಆಕಾಶ, ಭೂಮಿ, ಆಕಾರ, ನಿರಾಕಾರ… ದೇವರು ಅಂದ್ರೆ ಏನು? ದೇವರು ಅಂದ್ರೆ ಯಾರು?
ಯಾರು ದೇವರು? ಎಷ್ಟುಮಂದಿ ದೇವರು? ದೇವರ ಹೆಸರಲ್ಲಿ ಜಗಳವೇಕೆ?ಧರ್ಮಗಳು ಮನುಷ್ಯರನ್ನು ದ್ವೇಷ, ಹಿಂಸೆಯ ನರಕಕ್ಕೆ ತಳ್ಳಲು ಹುಟ್ಟಿಕೊಂಡಿವೆಯೇ? ದುರ್ಬಲರನ್ನು ಶೋಷೀಸಲಿಕ್ಕೆ ಹುಟ್ಟಿಕೊಂಡಿವೆಯೇ? ಮತಾಂಧತೆಯಿಂದ ಅವು ಮಾನವನನ್ನು ಉನ್ಮತ್ತನನ್ನಾಗಿಸುವ ಮಾದಕ ದ್ರವ್ಯಗಳೇ?

`ವಿಶ್ವದ ಮೂಲಭೂತ ಏಕತೆಯ ಕುರಿತ ಸಿದ್ಧಾಂತ ಕೇವಲ ಅನುಭಾವಿಗಳ ದೃಢವಾದ ಅನುಭೂತಿ ಮಾತ್ರವಲ್ಲ ಅದು ಆಧುನಿಕ ಯುಗದ ಭೌತಶಾಸ್ತ್ರದ ಅಧ್ಯಯನದಿಂದ ತಿಳಿದುಬರುವ ಪ್ರಮುಖವಾದ ಸಂಗತಿಯೂ ಹೌದು. ಪೌರಸ್ತ್ಯ ತಾತ್ತ್ವಿಕ ಪರಂಪರೆಯು ಭೇದರಹಿತ ಏಕಮೇವಾದ್ವಿತೀಯವಾದ ಪರಮಸತ್ಯದ ನೈಜಸ್ವರೂಪವನ್ನು ತಿಳಿಸುತ್ತ ಅದು ಸರ್ವವ್ಯಾಪಿಯಾಗಿದೆ ಎಂದು ಹೇಳುತ್ತದೆ. ಹಿಂದೂಧರ್ಮದಲ್ಲಿ ಅದನ್ನು `ಬ್ರಹ್ಮ” ಎಂದೂ ಬೌದ್ಧಧರ್ಮದಲ್ಲಿ `ಧರ್ಮಕಾಯ”ವೆಂದೂ ಚೀನಾದೇಶದ ತಾವೋಮತದಲ್ಲಿ `ಯಾವೋ” ಎಂದೂ ಪರಿಗಣಿಸುತ್ತಾರೆ.” -ಪ್ರಿಜೊ ಕಾಪ್ರಾ.

1993ರಲ್ಲಿ ಅಮೇರಿಕೆಯಲ್ಲಿ ನಡೆದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹೇಳಿದ ಮಾತುಗಳು:
`ಜಗತ್ತಿಗೆ ವಿಶ್ವಧರ್ಮ ಸಮ್ಮೇಳನವು ಏನಾದರೂ ತೋರಿದ್ದರೆ ಅದು ಇದು. ದೈವೀಪ್ರಜ್ಞೆ, ಪವಿತ್ರತೆ, ದಯೆ, ದಾನಬುದ್ಧಿ- ಮುಂತಾದವುಗಳು ಜಗತ್ತಿನ ಯಾವ ಒಂದು ಧರ್ಮಸಂಸ್ಥೆಗೋ ಧರ್ಮಕ್ಕೋ ಮೀಸಲಾದುದಲ್ಲ. ಪ್ರತಿಯೊಂದು ಧರ್ಮವೂ ಕೂಡ, ಉನ್ನತ ಮಟ್ಟದ ಉದಾತ್ತ ಚರಿತರಾದ ಸ್ತ್ರೀಪುರುಷರನ್ನು ಕೊಟ್ಟಿರುವುದು. ಇಷ್ಟೊಂದು ಸಾಕ್ಷ್ಯಾಧಾರಗಳೆಲ್ಲವೂ ಇರುವಾಗಲೂ ಯಾರಾದರೂ ತಮ್ಮ ಧರ್ಮ ಒಂದೇ ಬಾಳುವುದು, ಇತರ ಧರ್ಮಗಳೆಲ್ಲವೂ ನಾಶವಾಗುವವು ಎಂದು ತಿಳಿದುಕೊಂಡರೆ ಅವರ ಅಜ್ಞಾನ, ಮತಾಂಧತೆ, ಮತಿಹೀನತೆಗಳನ್ನು ಕಂಡು ನಾನು ತೀವ್ರವಾಗಿ ಮರುಗುತ್ತೇನೆ, ಕನಿಕರಪಡುತ್ತೇನೆ. ಪ್ರತಿಯೊಂದು ಧರ್ಮದ ಧ್ವಜದ ಮೇಲೂ ವಿಭಿನ್ನ ಧರ್ಮಾನುಯಾಯಿಗಳು ಎಷ್ಟೇ ವಿರೋಧಿಸಿದರೂ `ಹೋರಾಟವಲ್ಲ, ಸಹಾಯ”, `ನಾಶವಲ್ಲ, ಸ್ವೀಕಾರ”, `ವೈಮನಸ್ಯವಲ್ಲ, ಶಾಂತಿ ಮತ್ತು ಸಮನ್ವಯ” ಎಂಬುದನ್ನು ಬೇಗ ಬರೆಯಲಾಗುವುದು”.

ವಿಜ್ಞಾನದ ಪರಮಾದ್ಭುತವಾದ ನೂತನ ಸಂಶೋಧನೆಗಳ ಬೆಳಕಿನಲ್ಲಿ ಇಡಿಯ ಜಗತ್ತೇ ಒಂದು ಎಂಬುದು ಸ್ಪಷ್ಟವಾಗಿರುವ ಸನ್ನಿವೇಶದಲ್ಲಿ ಜಗತ್ತಿನ ನಿಯಾಮಕನೂ ಒಬ್ಬನೇ. ಎಲ್ಲರೂ ದೇವರ ಮಕ್ಕಳೇ ಎಂಬ ಶ್ರೇಷ್ಠ ಸತ್ಯವನ್ನು ಎಲ್ಲ ಧಾರ್ಮಿಕ ಮುಖಂಡರೂ ಪ್ರಸಾರ ಮಾಡುವ ಕಾಲ ಸನ್ನಿಹಿತವಾಗಿದೆ.

* `ಯಾರ ಮಹಿಮೆಯನ್ನು ಹಿಮವತ್ ಪರ್ವತಗಳೂ ಅಗಾಧಸಾಗರಗಳೂ ನದಿಗಳೂ ದಶದಿಕ್ಕುಗಳೂ ಸಾರುತ್ತವೆಯೋ ಆತನನ್ನು ನಮ್ಮ ಪರಿಶುದ್ಧ ನಿವೇದನೆಗಳಿಂದ ಪೂಜಿಸೋಣ.” (ಋಗ್ವೇದ 10-121-3)
* `ಸಪ್ತ ಸಮುದ್ರಗಳೂ ಭೂಮಿಯೂ ಅಲ್ಲಿದ್ದುಕೊಂಡಿರುವ ಎಲ್ಲವೂ ಅವನನ್ನು ಹೊಗಳಿ ಹಾಡುತ್ತವೆ. ಅವನನ್ನು ಹಾಡಿ ಹೊಗಳದ ಯಾವ ವಸ್ತುವೂ ಇಲ್ಲ. ಆದರೆ ಅವು ಮಾಡುವ ಸ್ತುತಿಯನ್ನು ನೀವು ತಿಳಿದುಕೊಂಡಿಲ್ಲ.” (ಅಲ್ ಕೊರಾನ್, 17.33)
* `ಭಗವಂತನು ಚೈತನ್ಯಮಯನು, ಅವನು ಎಲ್ಲ ವಸ್ತುಗಳಲ್ಲಿಯೂ ವ್ಯಕ್ತನಾಗಿದ್ದಾನೆ- ಜೀವಾತ್ಮನು ಶರೀರದಲ್ಲಿ ವ್ಯಕ್ತವಾಗುವಂತೆ.” (ಕ್ರೈಸ್ತರ ಪ್ರಸಿದ್ಧ ಪವಿತ್ರ ಗ್ರಂಥ, ಫಿಲೋಕಾಲಿಯಾ ಸಂ.1.337)
* `ಭಗವಂತನೇ ಸಮಸ್ತ ಜಗತ್ತಿನ ಉತ್ಪತ್ತಿಗೆ ಕಾರಣ. ಆತನಿಂದಲೇ ಜಗತ್ತು ನಡೆಯುತ್ತದೆ. (ಭಗವದ್ಗೀತೆ- 10.8)
* `ಕಣ್ಣು ತೆರೆದಿದ್ದರೂ ಸರ್ವಭೂತಗಳಲ್ಲಿಯೂ ಭಗವಂತನಿರುವುದನ್ನು ನೋಡಿದ್ದೇನೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಗಿಡಮರಗಳಲ್ಲಿ, ಸೂರ್ಯಚಂದ್ರರಲ್ಲಿ, ನೆಲದಲ್ಲಿ, ಜಲದಲ್ಲಿ, ಸರ್ವಭೂತಗಳಲ್ಲಿಯೂ ಆತನೇ ಇದ್ದಾನೆ.” – ಭಗವಾನ್ ಶ್ರೀರಾಮಕೃಷ್ಣ.

ನಿಜವಾದ ಪ್ರೀತಿ ವ್ಯಕ್ತವಾಗುವ ಬಗೆ ಹೇಗೆ? ತ್ಯಾಗ ಸೇವೆಗಳ ಮೂಲಕ ಅಲ್ಲವೇ? ಪ್ರೀತಿಪಾತ್ರರ ಮೆಚ್ಚುಗೆಗಾಗಿ ಅವರ ಸಂತೋಷಕ್ಕಾಗಿ ಎಂಥ ತ್ಯಾಗಕ್ಕೂ ಸೇವೆಗೂ ನಾವು ಸಿದ್ಧರೆಂದರೆ ನಮ್ಮಲ್ಲಿ ನಿಜವಾದ ಪ್ರೀತಿ ಉಕ್ಕುತ್ತಿದೆ ಎಂದಾಯಿತಲ್ಲವೇ? ಇಂದು ಧಾರ್ಮಿಕರೆನಿಸಿಕೊಂಡವರು ಎಲ್ಲರೆಡೆಗೂ ಆ ಪ್ರೀತಿಯನ್ನು ಹರಿಯಿಸಲು ಸಮರ್ಥರಾಗಿದ್ದಾರೆಯೇ? ಪರಸ್ಪರ ದ್ವೇಷಿಸಲು ನಮ್ಮಲ್ಲಿ ಬೇಕಷ್ಟು ಧರ್ಮಗಳಿವೆ ಆದರೆ ಪ್ರೀತಿಸಲು ಇಲ್ಲ.

ಗಾಡ್ ಅಲ್ಲಾ ಬ್ರಹ್ಮ ಎಂಬೆಲ್ಲ ಹೆಸರುಗಳು ಬೇರೆ ಬೇರೆಯಾದರೂ ಸರ್ವಶಕ್ತನಾದ ಭಗವಂತನು ಒಬ್ಬನೇ. ಎಲ್ಲರೂ ಆತನ ಮಕ್ಕಳೇ. ಕೆಲವರು ಸ್ವಲ್ಪ ಮುಂದಿದ್ದಾರೆ. ಇನ್ನು ಕೆಲವರು ಸ್ವಲ್ಪ ಹಿಂದಿದ್ದಾರೆ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಲು ಕಲಿಯಬೇಕೆಂಬುದೇ ಆತನ ಇಚ್ಛೆ. ಪ್ರೇಮಮಯನಾದ ಭಗವಂತನ ಪ್ರತಿನಿಧಿಗಳಾದ ಬೆಳಕು ಗಾಳಿಗಳು ಎಲ್ಲರ ಮನೆಯಂಗಳಕ್ಕೂ ಹರಿಯುತ್ತವೆ. ಎಲ್ಲೆಡೆಗೂ ಹಬ್ಬಿ ಎಲ್ಲರನ್ನೂ ತಬ್ಬಿ ಅವು ನಿಸ್ವಾರ್ಥಪ್ರೀತಿಯ ಪಾಠವನ್ನೇ ಬೋಧಿಸುತ್ತವೆ. ನನ್ನ ಆಕಾರಗಳಿಂದ ಗೋಚರಿಸಿದರೂ ಆತ ಒಬ್ಬನೇ. ಎಲ್ಲರೂ ಬೇರೆ ಬೇರೆ ಪಥಗಳಿಂದ ಅವನನ್ನು ಸಮೀಪಿಸುತ್ತಿದ್ದಾರೆ ಎಂಬ ಸತ್ಯ ಎಲ್ಲರಿಗೂ ಮನವರಿಕೆಯಾಗಬೇಕಾಗಿದೆ. ಅಸಂಖ್ಯ ದೇವದೇವಿ ದೇವತೆಗಳಾಗಿ ಕಂಡರೂ ಆತನೊಬ್ಬನೇ. ಯಾವ ಮತ ಪಂಥದವರೇ ಆಗಲಿ, ದೇವರಲ್ಲಿ ವಿಶ್ವಾಸವಿರುವವರೆಲ್ಲ ಶಾಂತಿ ಸೌಹಾರ್ದ ಸಮನ್ವಯ ಸದ್ಭಾವನೆಗಳು ಸರ್ವತ್ರ ವೃದ್ಧಿಯಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಬೇಕು.

ಈಶ್ವರ ಅಲ್ಲಾ ತೇರೇ ನಾಮ, ಸಬಕೋ ಸನ್ಮತಿ ದೇ ಭಗವಾನ್.

***

ಒಬ್ಬ ಭಕ್ತನಿಗೆ ದೇವರನ್ನು ಕಾಣುವ ಹಂಬಲವಿತ್ತು, ಅವನ ಸ್ವಪ್ನದಲ್ಲಿ ದೇವ ಬಂದ:
`ನಾಳೆ ನಿನ್ನನ್ನು ಕಾಣಲು ಬರುವೆ’ ಎಂದ. ಇಡೀ ದಿನ ದೇವನಿಗಾಗಿ ಭಕ್ತ ಕಾಯ್ದ.
ಭಗವಂತ ಬರಲಿಲ್ಲ ಎಂದು ಬೇಸರಗೊಂಡು ಭಕ್ತ ಮಲಗಿದ. ಮತ್ತೆ ಅವನ ಸ್ವಪ್ನದಲ್ಲಿ
ದೇವ ಪ್ರತ್ಯಕ್ಷನಾದ. `ಯಾಕೆ ಬರಲಿಲ್ಲ?’ ಭಕ್ತ ಆಕ್ಷೇಪಿಸಿದ. ಭಗವಂತನೆಂದ: `ವತ್ಸ,
ಮೂರು ಸಲ ಬಂದೆ; ಮುದುಕ, ಭಿಕ್ಷುಕ, ನಾಯಿಯಾಗಿ- ನೀನೇ ಎನ್ನ ಓಡಿಸಿದೆಯಲ್ಲ?’ ಎಂದು.
(`ಜೀವಿ” ವಚನ-60-4)

The Power of Worship – ಅಂತಃಶಕ್ತಿಯ ಅಕ್ಷಯ ಆಗರವೇ ಪ್ರಾರ್ಥನೆಯಲ್ಲಿದೆ

The power of worshipವ್ಯಾವಹಾರಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಗುದ್ದು ಜಾಸ್ತಿಯಾದರೆ, ಅಧ್ಯಾತ್ಮಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಮದ್ದು ಜಾಸ್ತಿ, ಅಂದರೆ ದೇವರ ವಿಶೇಷ ಕೃಪೆ ಲಭ್ಯ. `ನಾನು”ವಿನ ನಾಶಕ್ಕೆ ಪ್ರಾರ್ಥನೆಯೇ ಪ್ರಬಲವಾದ ಅಸ್ತ್ರ. `ನನ್ನನಳಿಸು, ನಿನ್ನ ಮೆರೆಸು! ಬಂದು ನೆಲೆಸು, ಹೃದಯಪದ್ಮದಲದಲಿ!” ಎಂಬುದೇ ಸಾಧಕನ ತಾರಕಮಂತ್ರ, ಅದೇ ಪ್ರಾರ್ಥನೆಯ ಪರಾಕಾಷ್ಠೆ.

ಅಧ್ಯಾಯ ಏಳು : ಪ್ರಾರ್ಥನೆಯಿಂದ ಪರಿವರ್ತನೆ

“ದೇವರಲ್ಲಿ ಅಚಲ ಶ್ರದ್ಧೆ ನಿಜವಾಗಿಯೂ ಅದ್ಭುತಗಳನ್ನೇ ಮಾಡಬಲ್ಲದು. ಅಂಥಾ ಶ್ರದ್ಧಾವಂತನೇ ಸರ್ವಶಕ್ತನು. ಆ ಶ್ರದ್ಧೆ ಇಲ್ಲದಾತನೇ ನಿಶ್ಶಕ್ತನು. ಖಂಡಿತವಾಗಿಯೂ ಶ್ರದ್ಧೆಯೇ ಜೀವನ; ಅಶ್ರದ್ಧೆಯೇ ಮರಣ.” – ಶ್ರೀ ರಾಮಕೃಷ್ಣ ಪರಮಹಂಸ
“ನಮ್ಮ ಹೃದಯಾಂತರಾಳದ ದೈವತ್ವವನ್ನು ಜಾಗ್ರತಗೊಳಿಸುವುದೇ ಪ್ರಾರ್ಥನೆಯ ಉದ್ದೇಶ. ಪ್ರಾರ್ಥನೆಯ ಅದ್ಭುತ ಪ್ರಭಾವವನ್ನು ಉಂಡವರು ಅನ್ನವಿಲ್ಲದೆ ಅನೇಕ ದಿನ ಬದುಕಬಹುದು. ಆದರೆ ಪ್ರಾರ್ಥನೆ ಇಲ್ಲದೆ ಅರೆಗಳಿಗೆಯೂ ಬದುಕಿರಲಾರ. ಪ್ರಾರ್ಥನೆಯೇ ಆತನ ಬಾಳಿನ ಉಸಿರು.””-ಮಹಾತ್ಮಾ ಗಾಂಧಿ

ದೇವರಲ್ಲಿ ಮೊರೆ, ಇದುವೇ ಪ್ರಾರ್ಥನೆಯ ನಿಜವಾದ ಅಂತರಾರ್ಥ. ದೇವರು ದಯಾಮಯ. ಕರುಣಾಕರ. ಸರ್ವಕರ್ತ, ಸರ್ವಹರ್ತ. ನಮ್ಮ ಹೃದಯದಲ್ಲಿಯ ರಕ್ತವನ್ನು ಪಂಪ್ ಮಾಡುವವನು ದೇವರು. ಅವನಿಗೆ ಆಸ್ತಿಕ ನಾಸ್ತಿಕ ಎಂಬ ಭೇದಭಾವವಿಲ್ಲ. ದೇವರು ಶಾಂತಿ ಸಮಾಧಾನಗಳ ಬೀಡು, ಆನಂದದ ತವರು, ಸಂತೋಷದ ಸಾಗರ. ಆತನ ಕೃಪೆಗೆ ಇತಿಮಿತಿ ಇದೆಯೇ. ಆತನೊಲಿದರೆ ಕೊರಡು ಕೊನರುವುದು, ಬರಡು ಹಯನವಾಗುವುದು.

ದೇವರೆಡೆಗಿನ ಯಾತ್ರೆಯನ್ನೇ ಸಾಧನೆ ಎನ್ನುವುದು. ಒಂದೇ ಗುರಿಯೆಡೆಗೆ ಸಾಗುವ ವಿವಿಧ ಮಾರ್ಗಗಳಂತೆ ಈ ಸಾಧನೆಯಲ್ಲೂ ವೈವಿಧ್ಯಗಳಿವೆ. ಪ್ರಾರ್ಥನೆ ಅವುಗಳಲ್ಲೊಂದಷ್ಟೆ. ಇದು ಆಂತರ್ಯದ ಪರಿಶುದ್ಧತೆಗೆ ಸುಲಭವಾದ ಮಾರ್ಗ. ಜಪ, ಧ್ಯಾನ, ಭಜನೆ, ಸಾಷ್ಟಾಂಗನಮನ, ಸ್ತೋತ್ರಪಾರಾಯಣ, ವ್ರತ ನಿಯಮ ಪರಿಪಾಲನೆ, ಪೂಜೆ ಪುನಸ್ಕಾರಗಳೆಲ್ಲವೂ ಈ ಮಾರ್ಗದ ಕವಲುಗಳಷ್ಟೆ.

ಪರಿಶುದ್ಧತೆಗಾಗಿ ಪ್ರಾರ್ಥನೆಯ ಕ್ರಮ ಇಂದು ನಿನ್ನೆಯದಲ್ಲ. ವೈದಿಕಯುಗದಿಂದಲೂ ಪ್ರಚಲಿತವಾದದ್ದೆ. `ಸರ್ವೇ ಜನಾಃ ಸುಖಿನೋ ಭವಂತು”, ಬೃಹದಾರಣ್ಯಕೋಪನಿಷತ್ತಿನ ಅಧ್ಯಾರೋಹ ಮಂತ್ರ `ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂ ಗಮಯ”, ಅಷ್ಟೇ ಏಕೆ ಧೀಶಕ್ತಿ ಬೆಳಗುವ ಗಾಯತ್ರಿ ಮಂತ್ರ ಇವೆಲ್ಲ ಇದಕ್ಕೆ ನಿದರ್ಶನಗಳು. ಆದರೆ ವಿಚಾರವಾದದ ಅಲೆ ಎದ್ದು ಪ್ರಾರ್ಥನಾಧರ್ಮಕ್ಕೆ ಗ್ರಹಣ ಹಿಡಿದಂತಾಯಿತು.

ಶ್ರೀ ರಾಮಕೃಷ್ಣ ಪರಮಹಂಸರ ಪದತಲದಲ್ಲಿ ಕುಳಿತು ಶ್ರದ್ಧೆಯಿಂದ ಅವರ ವಚನಾಮೃತವನ್ನು ಆಲಿಸಿ, ಅತಃಕರಣಪೂರ್ವಕವಾಗಿ ಅವರ ಸೇವೆಯನ್ನು ಮಾಡಿದ ಸ್ವಾಮಿ ಅದ್ಭುತಾನಂದರ ಜೀವನದಲ್ಲಿಯ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ.

ವಿಭೂತಿಬಾಬು ಒಂದು ದಿನ ಕಾಶಿಯಲ್ಲಿ ತಮ್ಮ ಹಿರಿಯರೊಡನೆ ಮಾತನಾಡುತ್ತ ಕಾಶಿಯ ವಿಶ್ವನಾಥ ದೇವಾಲಯದಲ್ಲಿ `ಶಿವನ ಸಾನಿಧ್ಯವೆ, ಮತ್ತೇನು? ಎಲ್ಲ ಬರಿ ನಂಬಿಕೆಯ ಭ್ರಾಂತಿ!’ ಎಂದು ಗೇಲಿ ಮಾಡಿದರು. ಸಂಜೆ ಅವರು ಅದ್ಭುತಾನಂದರನ್ನು ನೋಡಲು ಬರುತ್ತಿರುವಾಗಲೇ ಅದ್ಭುತಾನಂದರ ಧ್ವನಿ ಮೊಳಗಿತು, “ಎಂಥ ಮೂರ್ಖತೆ! ವಿಶ್ವನಾಥನ ಸಾನ್ನಿಧ್ಯವನ್ನು ತಿಳಿಯಲು ನೀನು ಏನು ತಪಸ್ಸು, ಸಾಧನೆಗಳನ್ನು ಮಾಡಿರುವೆ? ಅದಕ್ಕೆ ಬೇಕಾದ ಪವಿತ್ರತೆ ವ್ಯಾಕುಲತೆಗಳು ನಿನ್ನಲ್ಲಿವೆಯೇ?” ಎಂದು ದೃಢಸ್ವರದಲ್ಲಿ ಹೇಳಿದರಂತೆ. ವಿಭೂತಿಬಾಬುಗಳು ಚಕಿತರಾಗಿ ತಮ್ಮ ಸಂಶಯದ ಮಾತುಗಳಿಗಾಗಿ ಪಶ್ಚಾತ್ತಾಪಪಟ್ಟು ವಿನಮ್ರಭಾವದಿಂದ ಅದ್ಭುತಾನಂದರಿಗೆ ಪ್ರಣಾಮ ಮಾಡಿದಾಗ ಅವರು ಏನೂ ತಿಳಿಯದಂತೆ ನಕ್ಕು, `ವಿಶ್ವನಾಥ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿ ತೀರ್ಥಪ್ರಸಾದಗಳನ್ನು ತೆಗೆದುಕೊಂಡು ಬಾ’ ಎಂದು ಹೇಳಿದರಂತೆ.

ದೇವರ ಕೃಪೆಯ ಬಗ್ಗೆ ಹಲಾವಾರು ಕತೆಗಳನ್ನು ಹೇಳುತ್ತಾರೆ. ಒಂದು ಹೀಗಿದೆ.

ಚಿತ್ತರಂಜನ ಮೊಹಂತಿ ಬಿ.ಎ.ಪದವೀಧರ. ವಾಸುದೇವಪುರ ಎಂಬಲ್ಲಿ ಅಧ್ಯಾಪಕ. 1968ರಲ್ಲಿ ಅವರಿಗೆ ಸನ್ನಿಪಾತ ಜ್ವರ ಬಂತು. ಕಣ್ಣು ಹೋದವು, ಕುರುಡರಾದರು. ಅಧ್ಯಾಪಕ ವೃತ್ತಿ ಬಿಡಬೇಕಾಗಿ ಬಂತು. ಚಿಕಿತ್ಸೆಗಾಗಿ, ಕುಟುಂಬ ರಕ್ಷಣೆಗಾಗಿ ಇದ್ದ ಸ್ವಲ್ಪ ಆಸ್ತಿ ಮಾರಿದರು. ದೂರದ ಓರಿಸ್ಸಾದ ಬಲನೋರ ಜಿಲ್ಲೆಯ ಒಂದು ಗ್ರಾಮ ಸೇರಿದರು. 1969ರಲ್ಲಿ, ಶ್ರಾವಣ ಮಾಸದಲ್ಲಿ, ಬಲಸೋರಿನ ಶ್ರೀ ಚಂದನೇಶ್ವರ ದೇವಾಲಯದಲ್ಲಿ ಆರು ದಿನ ಎಡೆಬಿಡದೆ ದೇವರನ್ನು ಪ್ರಾರ್ಥಿಸಿದರಂತೆ. ಕೊನೆಯ ದಿನ ರಾತ್ರಿ ಶಿವನು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದನಂತೆ, “ನೀನು ಹಿಂದಿನ ಜನ್ಮದಲ್ಲಿ ತಂದೆತಾಯಿಗಳ ಏಕಮಾತ್ರ ಪುತ್ರನಾಗಿದ್ದೆ. ಒಂದು ದಿನ ನಿನ್ನ ತಾಯಿ ಹರಗೌರೀ ಹೂವು ಆರತಿ, ನೈವೇದ್ಯ ಸಿದ್ಧಮಾಡಿ ಇಡುತ್ತಿದ್ದಾಗ ನೀನು ಎಲ್ಲೋ ನೋಡುತ್ತ ಅವನ್ನು ತುಳಿದುಬಿಟ್ಟೆ. ನಿನ್ನ ತಾಯಿ ಕುಪಿತರಾಗಿ `ಇಷ್ಟು ಬೆಳಕಿರುವಲ್ಲಿ ಇವನ್ನು ಕಾಣಲಾರದವ ನೀನು ಕುರುಡನಾಗು’ ಎಂದಳು. ನಿನ್ನ ಪೂರ್ವಜನ್ಮದ ತಂದೆತಾಯಿ ಈಗ ಬಲಸೋರ ಜಿಲ್ಲೆಯ ಬಂಪದಾ ಎಂಬಲ್ಲಿ ಗಣನಾಥ ಬೇಹಾರ ಮತ್ತು ಲಕ್ಷ್ಮೀದೇವಿ ಎಂಬ ಹೆಸರಿನಿಂದ ಇದ್ದಾರೆ. ನೀನು ಶಿವರಾತ್ರಿಯ ದಿನ ಬಂಪದಾಕ್ಕೆ ಸಮೀಪದಲ್ಲಿರುವ ಜಾರೀಶ್ವರ ದೇವಸ್ಥಾನದ ಕೆರೆಯಲ್ಲಿ ಮಿಂದು, ಆ ಕೆರೆಯ ನೀರನ್ನೇ ತೆಗೆದುಕೊಂಡು ಗಣನಾಥ ಬೇಹಾರ ಮನೆಯಲ್ಲಿ ಹರಗೌರೀ ಪೂಜೆ ನಡೆಸು. ನಂತರ ಗಣನಾಥ ಬೇಹಾರ ಮತ್ತು ಲಕ್ಶ್ಮೀದೇವಿ ನಿನ್ನನ್ನು ಮುಟ್ಟಲಿ. ಒಡನೆಯೇ ನಿನ್ನ ದೃಷ್ಟಿ ಬರುವುದು.”

ಶಿವನ ಆದೇಶದಂತೆ ಮೋಹಂತಿ ನಡೆದುಕೊಂಡ. ಸ್ವಪ್ನದ ವಿಚಾರ ಇತರರಿಗೆ ತಿಳಿಸಿ ಅವರ ಸಹಾಯದಿಂದ ಶಿವರಾತ್ರಿಯ ದಿನ ಭಕ್ತಿಯಿಂದ ಪೂಜೆ ಮಾಡಿದ. ಆ ಪೂಜೆ ನೋಡಲು ಸಾವಿರಾರು ಜನ ಸೇರಿದ್ದರಂತೆ. ಪೂಜೆಯ ನಂತರ ಬೇಹಾರ ದಂಪತಿಗಳು ಮೋಹಂತಿಯನ್ನು ಮುಟ್ಟಿ ಹರಸಿದರು. ಎಲ್ಲರ ಸಮ್ಮುಖದಲ್ಲಿ ಅವನ ದೃಷ್ಟಿ ಮರಳಿ ಬಂತು. ನಂತರ ಅವರು ಅಲ್ಲಿ ಹರದೇವಿ ದೇವಾಲಯ ಕಟ್ಟಿಸಲು ನಿಶ್ಚಯಿಸಿದರು. ಅಲ್ಲಿ ಜನಜಾತ್ರೆ ನೆರೆಯಿತು. ಈ ಕತೆ `ರಾಷ್ಟ್ರದೀಪ’ ಎಂಬ ಓರಿಯಾ ಪತ್ರಿಕೆಯಲ್ಲಿ ಪ್ರಕಟವಾಯಿತು (21-3-1970).

ಕರ್ನಾಟಕದ ಸಂತಶ್ರೇಷ್ಠರಲ್ಲಿ ಒಬ್ಬರಾದ ಜಗನ್ನಾಥದಾಸರು ಮೊದಲು ಘನ ವಿದ್ವಾಂಸರಾಗಿದ್ದರು. ನಂತರ ಅವರು ವಿನಮ್ರ ಭಕ್ತರಾಗಿ ಪರಿವರ್ತನೆಗೊಂಡ ಕತೆ ರೋಚಕವಾಗಿದೆ. ಅವರು ಮೊದಲು ಶ್ರೀನಿವಾಸ ಪಂಡಿತರಾಗಿದ್ದರು. ಆ ಕಾಲದ ಭಾಗವತಾಗ್ರೇಸರರಾಗಿದ್ದ ಸಂತ ವಿಜಯದಾಸರನ್ನು ಅಲ್ಪರಾಗಿಕಂಡರು. ಅದರಿಂದ ಅವರಿಗೆ ರೋಗಬಾಧೆಯಾಯಿತು. ತಮ್ಮ ಹೀನ ಸ್ಥಿತಿಗೆ ಕಾರಣ ಅರಿತು ಸಂತರಲ್ಲಿ ಶರಣಾಗತರಾದರು. ವಿಜಯದಾಸರು ಅವರ ಮೊರೆ ಕೇಳಿ ಉಪಾಯಕ್ಕೆ ತಮ್ಮ ಶಿಷ್ಯ ಗೋಪಾಲದಾಸರ ಕಡೆಗೆ ಕಳಿಸಿದರು. ಗೋಪಾಲದಾಸರಿಂದ ದೀಕ್ಷೆ ಪಡೆದರು. ಅವರು ಕೊಟ್ಟ ಮಂತ್ರಿಸಿದ ರೊಟ್ಟಿಯನ್ನು ಸೇವಿಸಿ ತಮ್ಮ ರೋಗ ಕಳೆದುಕೊಂಡರು. ಗುರುವಿಗೆ ಶರಣರಾದರು. ಗುರುವಿನ ಅಪ್ಪಣೆಯಂತೆ ಪಂಢರಪುರಕ್ಕೆ ಹೋಗಿ ಪಾಂಡುರಮಗ ದರ್ಶನ ಪಡೆದರು. ಚಂದ್ರಭಾಗಾನದಿಯಲ್ಲಿ ಸ್ನಾನಮಾಡಿದಾಗ `ಜಗನ್ನಾಥವಿಟ್ಠಲ” ಅಂಕಿತವುಳ್ಳ ಶಿಲೆಯನ್ನು ಪಡೆದರು. ಮುಂದೆ ಅದೇ ಅವರ ಅಂಕಿತವಾಯಿತು. (ಅವರಿಗೆ ಅಲ್ಪಾಯುಷ್ಯವಿತ್ತು. ಗುರು ಗೋಪಾಲದಾಸರು ಅವರಿಗೆ 40 ವರ್ಷ ತಮ್ಮ ಆಯುಷ್ಯ ನೀಡಿದರು. `ಅದರಿಂದಾಗಿ `ಹರಿಕಥಾಮೃತಸಾರ”ದಂತಹ ಮಹತ್ಕೃತಿಯನ್ನು ರಚಿಸಲು ಜಗನ್ನಾಥದಾಸರಿಗೆ ಸಾಧ್ಯವಾಯಿತು.)

ಗೊಂದಾವಳಿ ಕ್ಷೇತ್ರದಲ್ಲಿ ವಾಸವಾಗಿದ್ದ ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಗೆ ಒಂದು ದಿನ ಸಂಸಾರಿಗಳಾದ ಭಕ್ತರು ಕೇಳಿದರು, `ನಾವು ಸಂಸಾರಿಗಳು. ನಮಗೆ ಹೆಂಡತಿ, ಮಕ್ಕಳು, ಹೊಲಮನೆ, ದನಕರು- ಮುಂತಾದ ಅನೇಕ ಉಪಾಧಿಗಳಿವೆ. ತಾವು ಹೇಳುವಂತೆ ಶ್ರೀರಾಮನಾಮ ಸ್ಮರಣೆಯನ್ನು ಸತತವಾಗಿ ಮಾಡುವುದಾಗಲೀ, ಶ್ರೀರಾಮನನ್ನು ಏಕಾಗ್ರತೆಯಿಂದ ಧ್ಯಾನಿಸುವುದಾಗಲೀ, ಕೊನೆಗೆ ಸ್ವಲ್ಪಕಾಲ ಒಂದೇಚಿತ್ತದಿಂದ ಜಪಮಾಡುವುದಾಗಲೀ ನಮಗೆ ಸಾಧ್ಯವಿಲ್ಲವಾಗಿದೆ.” ಎಂದು ಕೇಳುತ್ತ, `ನಮಗೆ ಪರಮಾರ್ಥ ಪ್ರಾಪ್ತಿಗೆ ದಾರಿಯಾವುದು?” ಎಂದು ಕೇಳಿದಾಗ ಬ್ರಹ್ಮಚೈತನ್ಯರು ಉತ್ತರಿಸಿದರು. `ನೀವು ಹೆಂಡತಿ ಮಕ್ಕಳನ್ನು ಕಂಡಾಗ, ಶ್ರೀ ರಾಮನು ಈ ಹೆಂಡತಿಮಕ್ಕಳನ್ನು ನನಗೆ ಪಾಲನೆ ಮಾಡುವುದಕ್ಕಾಗಿ ಕೊಟ್ಟಿದ್ದಾನೆ. ನಾನು ಅವರ ಬಗ್ಗೆ ಏನೇನು ಮಾಡಬೇಕಾದ ಕರ್ತವ್ಯವಿದೆಯೋ ಅದೆಲ್ಲವನ್ನು ಮಾಡಿ ಶ್ರೀರಾಮನಿಗೆ ಒಪ್ಪಿಸಬೇಕು ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ. ಇದರಿಂದ ನಿಮಗೆ ನಿಮ್ಮ ಸಂಸಾರದ ಯಾವುದೇ ವಸ್ತುವನ್ನು ನೋಡಿದಾಗ, `ಇದು ಶ್ರೀರಾಮನದು. ನನಗೆ ಅವನು ಇದನ್ನು ನೋಡಿಕೊಳ್ಳಲು ಕೊಟ್ಟಿದ್ದಾನೆ. ನಾನು ನನ್ನ ಕರ್ತವ್ಯವನ್ನು ಆ ಬಗ್ಗೆ ಮಾಡಿ ಅವನಿಗೆ ಒಪ್ಪಿಸಬೇಕು.” ಎಂಬ ಭಾವ ಹುಟ್ಟುವುದು. ಕೆಲವು ದಿನ ಪ್ರಯತ್ನಪೂರ್ವಕವಾಗಿ ಈ ಭಾವನೆಯನ್ನು ರೂಢಿಸಿಕೊಂಡರೆ ಕಾಲಾಂತರದಲ್ಲಿ ಅದು ರೂಢಿಯಾಗಿ, `ನನ್ನದು” ಎಂಬ ಅಭಿಮಾನವು ಹೊರಟುಹೋಗುತ್ತದೆ. ಒಳಗೂ ಹೊರಗೂ ಶ್ರೀರಾಮ ಭಾವನೆ ವ್ಯಾಪಿಸಿಬಿಡುತ್ತದೆ.  ಈ ಸಾಧನೆಯನ್ನು ಬಿಡದೆ ಆರು ತಿಂಗಳು ಮಾಡಿ ನೋಡಿರಿ. ಶ್ರೀರಾಮನ ಸಾಕ್ಷಾತ್ಕಾರವಾಗದಿದ್ದರೆ ಆಗ ನನ್ನಲ್ಲಿ ಬಂದು ಕೇಳಿರಿ.” ಎಂದರಂತೆ.

ತೈಲಧಾರೆಯಂತೆ ಮನಸ್ಸು ಏಕಮುಖವಾಗಿ ದೇವರೆಡೆಗೆ ಹರಿಯುವುದೇ ಧ್ಯಾನ. ಜಪದಲ್ಲಿ ಏಕನಿಷ್ಠೆ, ಏಕಾಗ್ರತೆಗಳು ಏಕೀಭವಿಸಿದಾಗ ಅದು ಧ್ಯಾನದ ಮಟ್ಟಕ್ಕೇರುತ್ತದೆ. ಹೃದಯವು ಧ್ಯಾನಕ್ಕೆ ಪ್ರಶಸ್ಥವಾದ ಸ್ಥಾನ ಎಂಬುದು ಧ್ಯಾನಸಿದ್ಧರ ಅಭಿಮತ. ಆದರೆ ಈ ಹೃದಯ ಯಾವುದು? ನಮಗೆ ತ್ರಿವಿಧ ಹೃದಯಗಳಿವೆ. ಶರೀರದಾದ್ಯಂತ ರಕ್ತವನ್ನು ಪಂಪಿಸುವ ಕೆಲಸ ಮಾಡುತ್ತಿರುವ `ಲಬ್, ಡಬ್” ಎನ್ನುವ ಹೃದಯ ಎಲ್ಲರಿಗೂ ಗೊತ್ತು. ಎರಡನೆಯ ಹೃದಯದ ಬಗ್ಗೆ ಮಾತಾಡುತ್ತೇವೆ. `ಆತನ ಹೃದಯ ಶುದ್ಧವಾಗಿದೆ.” `ಅವನ ಮಾತು ಹೃದಯಾಂತರಾಳದಿಂದ ಬರುತ್ತದೆ, ಬುದ್ಧಿಯ ಕಸರತ್ತಿನಿಂದ ಅಲ್ಲ.” ಪ್ರೀತಿ, ಭಕ್ತಿ, ನಿಃಸ್ವಾರ್ಥತೆ, ಸೇವಾಮನೋಭಾವ, ನಿರಹಂಕಾರ ಇವೆಲ್ಲ ಈ ಹೃದಯದ ಲಕ್ಷಣಗಳು. ಮೂರನೆಯ ಹೃದಯವೇ ಅಧ್ಯಾತ್ಮಿಕ ಹೃದಯ. ಇದನ್ನು ಅನಾಹತ ಚಕ್ರ ಎಂದೂ ಕರೆಯುತ್ತಾರೆ. (ಸ್ಥೂಲ, ಸೂಕ್ಷ್ಮ, ಕಾರಣ – ಈ ಮೂರು ಶರೀರಗಳ ಸಂಧಿಸ್ಥಾನವನ್ನು ತಂತ್ರಶಾಸ್ತ್ರದಲ್ಲಿ ಚಕ್ರ ಎಂದು ಕರೆಯುತ್ತಾರೆ.) ಹೃದಯದಲ್ಲಿ ಧ್ಯಾನ ಮಾಡಿ ಎಂದಾಗ ಈ ಅಧ್ಯಾತ್ಮಿಕ ಹೃದಯದಲ್ಲಿ ಮನಸ್ಸನ್ನು ನಿಲ್ಲಿಸಿ ಎಂದರ್ಥ. ನಮ್ಮಲ್ಲಿ ಹೆಚ್ಚಿನವರ ಮಾನಸಿಕ ಶಕ್ತಿಯೆಲ್ಲ ದೈಹಿಕ, ಜೈವಿಕ ಬಯಕೆಗಳ ತೃಪ್ತಿಗಾಗಿ ಮತ್ತು `ಅಹಂ”ನ ರಕ್ಷಣೆಗಾಗಿಯೇ ವ್ಯಯವಾಗುತ್ತದೆ. ರಮಣ ಮಹರ್ಷಿಗಳು ಅನ್ನುವಂತೆ `ನಾನು”ವಿನ ಮೂಲವನ್ನು ಶೋಧಿಸುತ್ತಾ ಹೋದರೆ ಈ ಚಕ್ರವನ್ನು ಅಥವಾ ಅಧ್ಯಾತ್ಮಿಕ ಹೃದಯವನ್ನು ತಲುಪಬಹುದು.

ಪ್ರಾರ್ಥನೆಯು ಧ್ಯಾನಕ್ಕೆ ಪ್ರೇರಕವೂ ಹೌದು, ಪೋಷಕವೂ ಹೌದು. ಪ್ರಾರ್ಥನೆಯ ಅಭ್ಯಾಸದಿಂದ ಧ್ಯಾನ ಶಕ್ತಿಶಾಲಿಯಾಗುತ್ತದೆ. ಧ್ಯಾನಕ್ಕೆ ಕುಳಿತುಕೊಳ್ಳುವದಕ್ಕೆ ಮೊದಲು ಹತ್ತು, ಹದಿನೈದು ನಿಮಿಷಗಳ ಕಾಲ ಒಂದೇ ಮನಸ್ಸಿನಿಂದ ಪ್ರಾರ್ಥಿಸಬೇಕು. ಕಾರ್ಮೋಡಗಳು ದಟ್ಟೈಸಿದಾಗ ಹನಿಯೊಡೆದು ಮಳೆಸುರಿವಂತೆ, ಪ್ರಾರ್ಥನೆ ತೀವ್ರವಾದಾಗ ಮನಸ್ಸು ಮೇಲೇರಿ ಭಾವನಾತ್ಮಕ ಹೃದಯವನ್ನು ದಾಟಿ, ಅಧ್ಯಾತ್ಮಿಕ ಹೃದಯವನ್ನು ತಲುಪುವಾಗ ಕಣ್ತುಂಬಿ ಬಂದು ಕಂಬನಿ ಹರಿಯತೊಡಗುತ್ತದೆ. ಅದೇ ವ್ಯಾಕುಲತೆಯ ಉಗಮ. ಅದರಿಂದಲೇ ಧ್ಯಾನದ ಸಿದ್ಧಿ.

ಪರಿವರ್ತನೆಯ ಪ್ರವರ್ತಕವಾಗಬಲ್ಲ ಅಂತಃಶಕ್ತಿಯ ಅಕ್ಷಯ ಆಗರವೇ ಪ್ರಾರ್ಥನೆಯಲ್ಲಿದೆ. ಗುಂಡಿ ಒತ್ತಿದೊಡನೆ ಚಿಮ್ಮುವ ಚಿಲುಮೆಯಂತೆ, ಪ್ರಾರ್ಥನೆಯ ಪರಿಪಾಠದಿಮದ ಆ ಶಕ್ತಿಯ ಮೂಲ ಕರಗತವಾಗುತ್ತದೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ, ವೈದ್ಯ ಅಲೆಕ್ಸಿಸ್ ಕೆರೆಲ್ ಹೇಳುತ್ತಾನೆ:
“ಅತಿ ಹೆಚ್ಚಿನ ಪ್ರಭಾವಶಾಲಿಯಾದ ಶಕ್ತಿಯನ್ನು ಪ್ರಾರ್ಥನೆಯಿಂದ ವ್ಯಕ್ತಿಯೊಬ್ಬ ಸೃಜಿಸಬಲ್ಲ. ಭೂಮ್ಯಾಕರ್ಷಣ ಶಕ್ತಿ ಎಷ್ಟು ಸತ್ಯವೋ, ಪ್ರಾರ್ಥನೆಯಿಂದ ಬಲಸಂವರ್ಧನೆ ಸಾಧ್ಯ ಎಂಬುದೂ ಅಷ್ಟೇ ಸತ್ಯ. ಇತರ ಎಲ್ಲ ತೆರನಾದ ಚಿಕಿತ್ಸಾವಿಧಾನಗಳು ಫಲಪ್ರದವಾಗದಿದ್ದಾಗ ಕೇವಲ ಶ್ರದ್ಧಾನ್ವಿತ ಹೃತ್ಪೂರ್ವಕ ಪ್ರಾರ್ಥನೆಯಿಂದ ರೋಗಕ್ಲೇಶಗಳಿಂದ ಮುಕ್ತರಾದ ವ್ಯಕ್ತಿಗಳನ್ನು ವೈದ್ಯನಾದ ನಾನು ಕಂಡುಕೊಂಡಿದ್ದೇನೆ. ಈ ಪ್ರಾರ್ಥನಾ ವಿಧಾನ ರೇಡಿಯಂನಂತೆ ಅದ್ಭುತ ಶಕ್ತಿ ವಿಕರಣಶೀಲದ್ದು. ತಾನೇತಾನಾಗಿ ಶಕ್ತಿಯನ್ನು ಜಾಗ್ರತಗೊಳಿಸಿ ವೃದ್ಧಿಸುವಂಥದ್ದು. ನಾವು ಪ್ರಾರ್ಥಿಸುವಾಗಲೆಲ್ಲ ಈ ವಿಶ್ವಬ್ರಹ್ಮಾಂಡವನ್ನು ನಡೆಯಿಸುವ, ಎಂದೆಂದಿಗೂ ಬತ್ತಿಬರಿದಾಗದ ದಿವ್ಯ ಶಕ್ತಿಯ ಸಂಪರ್ಕ ಲಭ್ಯವಾಗುತ್ತದೆ. ನಮ್ಮ ಕಳಕಳಿಯ ಬೇಡಿಕೆಯು ಎಷ್ಟೋ ವಿಧದ ನಮ್ಮ ದೌರ್ಬಲ್ಯಗಳನ್ನು ದೂರ ಮಾಡುತ್ತದೆ; ತನ್ಮೂಲಕ ನಾವು ಬಲಿಷ್ಠರಾಗಿ ತಲೆ ಎತ್ತುತ್ತೇವೆ. ಭಗವಂತನನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಿದಾಗಲೆಲ್ಲ ನಿಮ್ಮ ತನುಮನಗಳಲ್ಲಿ ಶುಭ ಪರಿಣಾಮ ಆಗಿಯೇ ತೀರುತ್ತದೆ.””

ವ್ಯಾವಹಾರಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಗುದ್ದು ಜಾಸ್ತಿಯಾದರೆ, ಅಧ್ಯಾತ್ಮಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಮದ್ದು ಜಾಸ್ತಿ, ಅಂದರೆ ದೇವರ ವಿಶೇಷ ಕೃಪೆ ಲಭ್ಯ. `ನಾನು”ವಿನ ನಾಶಕ್ಕೆ ಪ್ರಾರ್ಥನೆಯೇ ಪ್ರಬಲವಾದ ಅಸ್ತ್ರ. `ನನ್ನನಳಿಸು, ನಿನ್ನ ಮೆರೆಸು! ಬಂದು ನೆಲೆಸು, ಹೃದಯಪದ್ಮದಲದಲಿ!” ಎಂಬುದೇ ಸಾಧಕನ ತಾರಕಮಂತ್ರ, ಅದೇ ಪ್ರಾರ್ಥನೆಯ ಪರಾಕಾಷ್ಠೆ.

ದೇವರು ಒಲಿದರೆ ಕೊರಡು ಕೊನರುವುದು, ಬರಡು ಹಯನಾಗುವುದು.
ದೇವರೇ ಸರ್ವಶಕ್ತ, ಸರ್ವಕರ್ತ, ಸರ್ವಹರ್ತ, ಅವನೆ ದಯಾಸಾಗರ.
ದೇವರನ್ನು ಒಲಿಸುವ ಹಲವಾರು ಮಾರ್ಗಗಳಲ್ಲಿ ಪ್ರಾರ್ಥನೆಯೂ ಒಂದು.
ನಮ್ಮ ಮೊರೆ ಅವನನ್ನು ತಲುಪಬೇಕು, ಅವನ ಕೃಪಾಧಾರೆ ಸುರಿಯಬೇಕು.
ದೇವರನ್ನು ಒಲಿಸುವ ನೂರು ದಾರಿಗಳಲ್ಲಿ, ಅತ್ಯಂತ ಸುಲಭ ದಾರಿ ಪ್ರಾರ್ಥನೆ.
(`ಜೀವಿ” ವಚನ-59-1)

Jagadatmananda on Edgar Cayce – ಸ್ವಾಮಿ ಜಗದಾತ್ಮಾನಂದರ `ಬದುಕಲು ಕಲಿಯಿರಿ’ ಭಾಗ-6

Edgar Cayce (1877-1945)
`ಜೀವನದಲ್ಲಿ ಎಲ್ಲಿಯೋ ಲೆಕ್ಕ ತಪ್ಪುತ್ತಿದೆ’ ಎಂದು ಎನಿಸುತ್ತಿದೆ. ಆಯವ್ಯಯದ ಪಟ್ಟಿ ಮಾಡಿದಾಗ ಲಾಭನಷ್ಟದ ಕೋಷ್ಟಕ ಹೊಂದುತ್ತಿಲ್ಲ. ಜೀವನದ ಲೆಕ್ಕಕ್ಕೆ ಸರಿಯಾದ ಉತ್ತರ ಪಡೆಯಲು ನಂಬಿಕೆ ಮುಖ್ಯ. ಕರ್ಮಸಿದ್ಧಾಂತ ನಂಬಿದರೆ, ಇಂದಿನ ಸ್ಥಿತಿಯೆ ಪೂರ್ವಕರ್ಮದ ಫಲವು. ಇಂದಿನ ಸತ್ಕರ್ಮ ನಾಳೆ ಬರಲಿರುವ ಜನ್ಮಕ್ಕೆ ನಾವೆ ಕಟ್ಟಿಟ್ಟ ಬುತ್ತಿಯು
ಅಧ್ಯಾಯ ಆರು : ಬಿತ್ತಿದಂತೆ ಬೆಳೆ ಸುಳ್ಳಲ್ಲ

“ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಯ ಫಲ. ಯೋಚನೆಗಳೇ ಈಗಿನ ನಮ್ಮ ಸ್ಥಿತಿಗೆ ತಳಹದಿ. ನಡೆನುಡಿಗಳಲ್ಲಿ ನಮ್ಮ ಯೋಚನೆ ಒಳ್ಳೆಯದಾಗಿದ್ದರೆ ನೆರಳಿನಂತೆ ಸುಖವು ಹಿಂಬಾಲಿಸುತ್ತದೆ; ನಮ್ಮ ಯೋಚನೆ ಕೆಟ್ಟದ್ದಾಗಿದ್ದರೆ ದುಃಖವು ಬೆಂಬತ್ತಿ ಬರುತ್ತದೆ.” -ಗೌತಮ ಬುದ್ಧ

“ಪ್ರತಿಯೊಂದು ಕಾರ್ಯಕ್ಕೂ ಕಾರಣವಿರುವಂತೆ, ನಮ್ಮ ಸದ್ಯದ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳೇ ಕಾರಣವಾದರೆ, ನಮ್ಮ ಇಂದಿನ ಕರ್ಮಗಳೇ ನಾಳಿನ ಸ್ಥಿತಿಯ ರೂವಾರಿಗಳು. ರೇಶ್ಮೆ ಹುಳು ತಾನೇ ತನ್ನ ಸುತ್ತ ಕೋಶವನ್ನು ನಿರ್ಮಿಸಿಕೊಂಡು ಬಂಧಿಯಾದಂತೆ, ನಮ್ಮ ಸಂಸ್ಕಾರಗಳ ಜಾಲವನ್ನು ನಾವೇ ನಮ್ಮ ಸುತ್ತ ಹೆಣೆದು ಅದರಿಂದ ಪಾರಾಗಲು ಸಾಧ್ಯವಾಗದೆ ಹೆಣಗಾಡುತ್ತಿದ್ದೇವೆ. ಕರ್ಮದ ಚಕ್ರ ಚಾಲನೆ ಮಾಡಿದ ನಾವೇ ಅದರಡಿ ಬಿದ್ದು ವಿಲಿವಿಲಿ ಒದ್ದಾಡುತ್ತಿದ್ದೇವೆ. ಆದರೆ ಒಂದು ಮಾತು – ನಮ್ಮ ಅಧೋಗತಿ ಮಾತ್ರವಲ್ಲ, ಉನ್ನತಿಯೂ ಕರ್ಮದಿಂದಲೇ ಸಾಧ್ಯ. ಮಾನವ ಸ್ವಾತಂತ್ರ್ಯದ ಅಭಿವ್ಯಕ್ತಿಯೇ ಕರ್ಮ.”  -ಸ್ವಾಮಿ ವಿವೇಕಾನಂದ

ಇತರ ಧರ್ಮೀಯರು ಈ `ಕರ್ಮನಿಯಮ’ವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಮನುಷ್ಯನ ಹುಟ್ಟುಸಾವುಗಳ ನಡುವಣ ಈ ಬದುಕು ಪೂರ್ವನಿಯೋಜಿತವಲ್ಲ. ಕೇವಲ ಆಕಸ್ಮಿಕ. ಪುನರ್ಜನ್ಮವನ್ನು ಒಪ್ಪದ ಕ್ರೈಸ್ತ ಧರ್ಮದಲ್ಲಿ ಜನಿಸಿ, ಜನ್ಮಜನ್ಮಾಂತರದ ಹಿನ್ನೆಲೆಯ ವಿವರಗಳನ್ನೆಲ್ಲ ಬಿತ್ತರಿಸಿದ, ಇದೇ ವಿಜ್ಞಾನ ಯುಗದಲ್ಲಿ ಬಾಳಿಬದಿಕಿದ ಎಡ್ಗರ್ ಕೇಸೀಯ ಜೀವನದ ಕೆಲವು ಘಟನೆಗಳ ಬಗ್ಗೆ ಬರೆಯುತ್ತಾರೆ. ಎಕ್ಸ್-ರೇ ದೃಷ್ಟಿಯ ಎಡ್ಗರ್ ಕೇಸೀ `ಅತೀಂದ್ರಿಯ ಅನುಭವಗಳ ಅದ್ಭುತ ದಾಖಲೆಗಳನ್ನು’ ನಿರ್ಮಿಸಿದ.

`ಅತೀಂದ್ರ್ಯಾನುಭವಗಳ ಅದ್ಭುತ ದಾಖಲೆಗಳು!”
`ಎಕ್ಸ್-ರೇ ದೃಷ್ಟಿಯ ಎಡ್ಗರ್‌ಕೇಸೀ”
`ಸಂಸ್ಕೃತ ಭಾಷೆಯನ್ನು ಕೇಳಿಯೇ ಅರಿಯದ ವ್ಯಕ್ತಿ ಸುಪ್ತನಿದ್ರೆಯಲ್ಲಿ ಸಂಸ್ಕೃತ ಶಬ್ದವನ್ನು ಉಪಯೋಗಿಸಿದ!”
`ಜನ್ಮಾಂತರ ಮತ್ತು ಕರ್ಮಗಳನ್ನು ಕುರಿತು ಪಶ್ಚಿಮದ ಕ್ರೈಸ್ತ ದೃಷ್ಟಾರನ ಅಭೂತಪೂರ್ವ ಅನುಭವಗಳು!”

ಮೇಲಿನ ವಿವಿಧ ಹೇಳಿಕೆಗಳು ಎಡ್ಗರ್ ಕೇಸೀಯ ಅತೀಂದ್ರಿಯ ಶಕ್ತಿಯನ್ನು ಪರಿಚಯ ಮಾಡಿಕೊಡಲು ಅಮೇರಿಕದ ವಿವಿಧ ನಿಯತಕಾಲಿಕೆಗಳಲ್ಲಿ ಆಗಿಂದಾಗ್ಗೆ ಪ್ರಕಟವಾದ ಕೆಲವು ಲೇಖನಗಳ ಶಿರೋನಾಮೆಗಳು.

1910 ಅಕ್ಟೋಬರ್ 19ರ `ನ್ಯೂಯಾರ್ಕ ಟೈಮ್ಸ್” ತನ್ನ ಭಾನುವಾರದ ಸಾಹಿತ್ಯ ವಿಭಾಗದಲ್ಲಿ ಒಂದು ವಿಸ್ಮಯಕಾರಿ ವರದಿಯನ್ನು ಪ್ರಕಟಿಸಿತು-
`ಸುಪ್ತನಿದ್ರೆಗೆ ಒಳಪಟ್ಟಾಗ ಡಾಕ್ಟರ್ ಆಗುವ ಕೇಸೀಯ ಸಾಮರ್ಥ್ಯ, ದೇಶದ ವೈದ್ಯರುಗಳನ್ನು ವಿಸ್ಮಯಗೊಳಿಸಿದ ಅಪೂರ್ವಶಕ್ತಿ.” ಮುಂದಿನ ವಿವರಣೆ ಹೀಗಿತ್ತು: `ದೇಶದ ಪ್ರಖ್ಯಾತ ಡಾಕ್ಟರುಗಳು ಎಡ್ಗರ್ ಕೇಸೀಗೆ ಸಿದ್ಧಿಸಿದೆ ಎಂದು ಹೇಳಲಾದ ಅದ್ಭುತ ಶಕ್ತಿಯ ಬಗೆಗೆ ಆಸಕ್ತರಾಗಿದ್ದಾರೆ. ವೈದ್ಯಕೀಯ ಶಾಸ್ತ್ರದ ಅಲ್ಪ ಸ್ವಲ್ಪ ತಿಳಿವಳಿಕೆ ಇಲ್ಲದಿದ್ದರೂ, ಸುಪ್ತನಿದ್ರಾಸ್ಥಿತಿಯಲ್ಲಿ ಆತ ಅತ್ಯಂತ ಭೀಕರ ಮಾರಕ ರೋಗಗಳ ಕಾರಣವನ್ನೂ ಕಂಡುಹಿಡಿದು ಔಷಧಿಗಳನ್ನು ಸೂಚಿಸುತ್ತಿದ್ದಾನೆ!”

ವ್ಯಕ್ತಿಯ ಹೆಸರು, ಊರು, ವಿಳಾಸ ಕೊಟ್ಟರೆ ಸಾಕು; ಸಂಬಂಧಪಟ್ಟ ವ್ಯಕ್ತಿ ನೆರೆಯ ಕೋಣೆಯಲ್ಲೇ ಇರಬಹುದು ಅಥವಾ ಸಹಸ್ರಾರು ಮೈಲು ದೂರದ ರಾಷ್ಟ್ರದಲ್ಲಿರಬಹುದು- ಸುಪ್ತನಿದ್ರೆಯ ಆಳದ ಸ್ತರಗಳಿಂದ ಕೇಸೀಯ ಅತೀಂದ್ರಿಯ ದೃಷ್ಟಿಗೆ ಎಲ್ಲವೂ ಗೋಚರವಾಗುತ್ತಿತ್ತು. ಸುಪ್ತನಿದ್ರೆಯಲ್ಲಿದ್ದುಕೊಂಡೇ ಆತ ಮಾತನಾಡಲು ತೊಡಗುತ್ತಿದ್ದ. ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ. ತಾನು ಕೇಳಿ ಕಂಡರಿಯದ ಊರಿನ ಪ್ರಾಕೃತಿಕ ಸೌಂದರ್ಯ, ತತ್ಕಾಲದ ಹವೆ, ಸೂಚಿಸಲ್ಪಟ್ಟ ವ್ಯಕ್ತಿಯ ವೇಷಭೂಷಣ, ಒಳಹೊರಗುಗಳನ್ನು ಪ್ರತ್ಯಕ್ಷವಾಗಿ ಕಂಡಂತೆ ವಿವರಿಸುತ್ತಿದ್ದ.

ಸಂಯುಕ್ತ ಸಂಸ್ಥಾನದ ಕೆಂಟಕಿಯ ಹಾಫ್‌ಕಿನ್ಸ್‌ವಿಲ್ಲೆಯಲ್ಲಿ 1877ರಲ್ಲಿ ಜನಿಸಿದ ಕೇಸೀಯ ತಂದೆತಾಯಿಗಳು  ನಿರಕ್ಷರಿಗಳಾದ ರೈತರು. ಹಳ್ಳಿಯ ಶಾಲೆಯಲ್ಲಿ 9ನೆಯ ತರಗತಿಯ ವರೆಗೆ ಓದಿದ ಕೇಸೀ ಏಸುಭಕ್ತ. ತಾನೊಬ್ಬ ಧರ್ಮೋಪದೇಶಕನಾಗಬೇಕೆಂದು, ರೋಗಗಳಿಂದ ಸಂತ್ರಸ್ತರ ಸೇವೆಯನ್ನು ಮಾಡಬೇಕೆಂದು ಬಯಕೆ ಹೊಂದಿದ ಇವನು ಹೆಚ್ಚು ಓದಲು ಆಗದೆ, ಹಳ್ಳಿಯಲ್ಲಿಯ ಕೆಲಸಕ್ಕೆ ಒಗ್ಗದೇ ಪಟ್ಟಣ ಸೇರಿ ಅಲ್ಲಿ ಒಂದು ಪುಸ್ತಕದ ಅಂಗಡಿಯಲ್ಲಿ ಕೆಲಸಗಾರನಾಗಿ ಸೇರಿದ. ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಅವನ ಜೀವನದ ದಿಕ್ಕೇ ಬದಲಾಯಿತು. ಲೆರಿಂಜೈಟಿಸ್ ಎಂಬ ಗಂಟಲು ಬೇನೆಗೆ ತುತ್ತಾಗಿ ತನ್ನ ಧ್ವನಿಯನ್ನೇ ಕಳೆದುಕೊಂಡು ಒಂದು ವರ್ಷ ಕೆಲಸ ಹುಡುಕುತ್ತ ಕಳೆದು, ಗಂಟಲಿನ ಕೆಲಸವಿಲ್ಲದ ಒಬ್ಬ ಫೋಟೋಗ್ರಾಫರ್ ಆಗಲು ನಿಶ್ಚಯಿಸಿದ. ಆದರೆ ಆದದ್ದೇ ಬೇರೆ.

ಒಮ್ಮೆ ಹಾರ್ಟ್ ಎಂಬ ಯಕ್ಷಿಣಿಗಾರ ಕೇಸೀಯನ್ನು ಸುಪ್ತನಿದ್ರೆಗೆ ಒಳಪಡಿಸಿದ. ಆಶ್ಚರ್ಯವೇ ಕಾದಿತ್ತು. ಸುಪ್ತನಿದ್ರೆಯಲ್ಲಿರುವಾಗ ಕೇಸೀ ಮಾತಾಡಿದ. ಎಚ್ಚತ್ತ ಮೇಲೆ ಯಥಾಸ್ಥಿತಿ ಮೂಕನಾದ. ಮುಂದೆ ಲೈನ್ ಎಂಬ ಅಸ್ಟಿಯೋಪಥಿಜ್ಞ ಸಮ್ಮೋಹಿನಿ ವಿದ್ಯೆ ಬಳಸಿ ಕೇಸಿಯ ರೋಗವನ್ನು ನಿವಾರಿಸಿದ. ಕೇಸೀ ಸುಪ್ತಾವಸ್ಥೆಯಲ್ಲಿದ್ದಾಗ ಲೈನ್ ಸೂಚನೆ ನೀಡಿದಂತೆ ಮಾತಾಡಿದ. ದೈಹಿಕ ದೌರ್ಬಲ್ಯದಿಂದಾಗಿ ಕೇಸೀಯ ಧ್ವನಿತಂತುಗಳ ಸ್ನಾಯುಗಳು ತೀರಾ ಶಕ್ತಿಹೀನವಾಗಿದ್ದವು. ಆದ್ದರಿಂದ ಅವನಿಗೆ ಮಾತಾಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ತನ್ನ ದೇಹದ ಒಳ ಪ್ರವೇಶಿಸಿ `ತೊಂದರೆಗೊಳಗಾದ ದೇಹಭಾಗಕ್ಕೆ ರಕ್ತಪ್ರವಾಹ ಹೆಚ್ಚುವಂತೆ ಸೂಚನೆ ಕೊಡಲು’ ಕೇಸೀ ಹೇಳಿದ. ಅದರಂತೆ ಲೈನ್ ಸೂಚನೆಯನ್ನೂ ಕೊಟ್ಟ. ರಕ್ತವು ಕೇಸೀಯ ದೇಹದ ಮೇಲ್ಭಾಗದಲ್ಲಿ ಪ್ರವಹಿಸಿತೊಡಗಿತು. ಈ ಪ್ರಯೋಗದಿಂದ ಕೇಸೀ ಮೊದಲಿನಂತೆ ಮಾತಾಡತೊಡಗಿದ.

ಕೇಸೀ ಸುಪ್ತನಿದ್ರೆಯಲ್ಲಿ ತನ್ನ ದೇಹವನ್ನು ತಾನೇ ಕಂಡು ಅದರ ಸ್ಥಿತಿಯನ್ನು ಸ್ಪಷ್ಟವಾಗಿ ಹೇಳಬಲ್ಲವನಾಗಿದ್ದರೆ, ಇತರರ ದೇಹಗಳ ಬಗ್ಗೆ ಕೂಡ ಹೇಳಬಹುದಲ್ಲ ಎಂಬ ವಿಚಾರ ಲೈನ್‌ಗೆ ಬಂತು. ತನ್ನ ದೇಹದ ರಚನೆ ಒಳಹೊಕ್ಕು ತನಗಾಗುತ್ತಿರುವ ಬಾಧೆಗಳ ಬಗ್ಗೆ ತಿಳಿಸಲು ಕೇಳಿಕೊಂಡ. ಹಿಂದೆ ಯಾವ ವೈದ್ಯನೂ ಹೇಳದ ಔಷಧಿ, ಆಹಾರ ಹಾಗೂ ಚಿಕಿತ್ಸಾ ವಿಧಾನವನ್ನು ಸುಪ್ತನಿದ್ರೆಯಲ್ಲಿದ್ದ ಕೇಸೀ, ಲೈನ್‌ಗೆ ವಿವರಿಸಿದನಂತೆ. ಅದನ್ನು ಅನುಸರಿಸಿದಾಗ ಲೈನ್‌ನ ಆರೋಗ್ಯ ಸುಧಾರಿಸಿತಂತೆ. ಈ ಘಟನೆಯಿಂದಾಗಿ ರೋಗ ನಿವಾರಣೆಯ ಬಗ್ಗೆ ಇರುವ ಕೇಸೀಯ ಅದ್ಭುತ ಶಕ್ತಿ ಬೆಳಕಿಗೆ ಬರುವಂತಾಯಿತು.

ಕೇಸೀಗೆ ವೈದ್ಯಕೀಯ ಶಾಸ್ತ್ರದ ಗಂಧಗಾಳಿ ಇಲ್ಲದಿದ್ದರೂ ಸುಪ್ತನಿದ್ರೆಯಲ್ಲಿದ್ದಾಗ ಆತ ವೈದ್ಯಕೀಯ ಭಾಷೆಯಲ್ಲೆ ಸುಲಲಿತವಾಗಿ ಮಾತಾಡುತ್ತಿದ್ದನಂತೆ. ಕೇಸೀ 43 ವರ್ಷ ಕಾಲ ಅಸಂಖ್ಯ ಜನರಿಗೆ ತನ್ನ ಅತೀಂದ್ರೀಯ ಶಕ್ತಿಯ ನೆರವಿನಿಂದ ಸಲಹೆ ನೀಡಿದನಂತೆ. ಸುಮಾರು 30 ಸಾವಿರ ಸಲಹೆಗಳನ್ನು ಸಂಗ್ರಹಿಸಲಾಗಿದೆಯಂತೆ. ಗೀನಾ ಸೆರ್ಮಿನಾರಾ ಎಂಬ ಪ್ರಸಿದ್ಧ ಮನೋವೈಜ್ಞಾನಿಯೊಬ್ಬರು ಇವನ ಮೇಲೆ ಮೂರು ಪುಸ್ತಕ ಬರೆದಿದ್ದಾರಂತೆ. ಕೇಸೀಯ ಹಿಂದಿನ ಅಸ್ತಿತ್ವದ ಬಗ್ಗೆ ಸುಪ್ತಸ್ಥಿತಿಯಲ್ಲಿ ಪ್ರಶ್ನಿಸಲಾಗಿತ್ತಂತೆ. ಹಿಂದೆ ಅವನು ಈಜಿಪ್ಟನಲ್ಲಿ ಧರ್ಮೋಪದೇಶಕನಾಗಿದ್ದನಂತೆ. ಆಗ ಕೆಲವೊಂದು ಸಿದ್ಧಿ ಪಡೆದಿದ್ದನಂತೆ. ಇನ್ನೊಂದು ಜನ್ಮದಲ್ಲಿ ವೈದ್ಯನಾಗಿದ್ದ. ಪುನರ್ಜನ್ಮವನ್ನು ಒಪ್ಪಿದರೆ ಕ್ರೈಸ್ತ ಮತ್ತು ಅವನ ಉಪದೇಶವನ್ನು ಕಡೆಗಣಿಸಿದಂತಾಗುವುದಿಲ್ಲವೇ? ಎಂಬ ಪ್ರಶ್ನೆ ಕೇಸೀಯನ್ನು ಕಾಡಿತ್ತಂತೆ. ಅವನಿಗೆ ಸಮಾಧಾನ ನೀಡಿದವ ಲ್ಯಾಮರ್ಸ್.

1923ರಲ್ಲಿ ಲ್ಯಾಮರ್ಸ್ ಕೇಸೀಯ ಶಕ್ತಿಯನ್ನು ಪರೀಕ್ಷಿಸಿದನಂತೆ. ಸುಪ್ತಾವಸ್ಥೆಯಲ್ಲಿದ್ದ ಕೇಸೀ ಲ್ಯಾಮರ್ಸನ ಜಾತಕವನ್ನೇ ಹೇಳಿದನಂತೆ. `ನೀನು ಹಿಂದೊಮ್ಮೆ ಸಸ್ಯಾಸಿಯಾಗಿದ್ದೆ’ ಎಂದಿದ್ದನಂತೆ. ಕ್ರಿಸ್ತನ ಉಪದೇಶದಲ್ಲಿ ಪುನರ್ಜನ್ಮ ಹುದುಗಿದೆಯೆಂದೂ, ಅನಂತರ ಬಂದ ಧರ್ಮಗುರುಗಳು ಆ ವಿಚಾರಕ್ಕೆ ಪ್ರಾಶಸ್ತ್ಯವನ್ನು ನೀಡಲಿಲ್ಲವೆಂದೂ, `ಪುನರ್ಜನ್ಮವೆಂದರೆ ಒಂದು ದೃಷ್ಟಿಯಿಂದ ವಿಕಾಸ’ ಎಂದೂ ಲ್ಯಾಮರ್ಸ್ ವಿವರಿಸಿದನಂತೆ. ಜೀವಿಯು ದೇಹವನ್ನು ಬದಲಾಯಿಸುತ್ತಾನೆ ಎಂಬ ಮಾತನ್ನು  ಪಶ್ಚಿಮದ ಪ್ರತಿಭಾಶಾಲಿಗಳಾದ ಪ್ಲೇಟೊ, ಗಯಟೇ, ಎಮರ್ಸನ್, ವಾಲ್ಟ ವಿಟ್‌ಮನ್ ಮೊದಲಾದವರು ನಂಬಿದ್ದರೆಂದು ಹೇಳಿ ಕೇಸೀಯನ್ನು ಸಮಾಧಾನಪಡಿಸಿದ್ದನಂತೆ.

`ಈ ಯುಗದಲ್ಲಿ, ಎಂದರೆ 19 ಮತ್ತು 20ನೆಯ ಶತಮಾನಗಳಲ್ಲಿ ಕಾಣಿಸಿಕೊಂಡ ಅನೇಕ ಹಿರಿಯ ವಿಜ್ಞಾನಿಗಳು, ಕ್ರಿ.ಪೂ. 9500 ವರ್ಷಗಳ ಹಿಂದೆ, ಈಗ ಅಟ್ಲಾಂಟಾ ಸಾಗರ ಇರುವ ಪ್ರದೇಶದಲ್ಲಿದ್ದ ಪುರಾತನ ಭೂಖಂಡದಲ್ಲಿನ ಅತ್ಯುನ್ನತ ಸಂಸ್ಕೃತಿಯ ಕಾಲದಲ್ಲಿದ್ದು, ಈಗ ಪುನರ್ಜನ್ಮವೆತ್ತಿ ಬಂದವರು.’ ಎಂದು ಕೇಸೀ ಹೇಳುತ್ತಿದ್ದನಂತೆ. `ಪಾಪ ಮತ್ತು ದುಃಖಗಳ ಕಾರ್ಯಕಾರಣ ತಿಳಿಸುವ ಪದವೇ ಕರ್ಮ’ ಎಂದು ಕೇಸೀ ಹೇಳುತ್ತಿದ್ದ. ಅವನ ಹೇಳಿಕೆಯಲ್ಲಿ ಕರ್ಮ, ಕಾರ್ಮಿಕ ಮುಂತಾದ ಶಬ್ದಗಳು ಮತ್ತೆಮತ್ತೆ ಬರುತ್ತವೆ. ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕೇಡು ಈ ಜನ್ಮದಲ್ಲಿ ನಮಗೆ ಅಹಿತ ಮಾಡುತ್ತದೆ. ಇದಕ್ಕೆ `ಬೂಮರಾಂಗ್ ಕರ್ಮ’ ಎಂಬ ಶಬ್ದವನ್ನು ಕೇಸೀ ಬಳಸುತ್ತಾನಂತೆ. ಅನೇಕ ಉದಾಹರಣೆಗಳನ್ನು ಕೇಸೀ ಕೊಡುತ್ತಾನಂತೆ.

ಪರರ ನರಳಾಟ ಕಂಡೂ ಕಾಣದಂತೆ ನಟಿಸುವುದೂ ದೋಷ ಅಥವಾ ಅಪರಾಧ ಎಂದು ಕೇಸೀ ಹೇಳುತ್ತಾನಂತೆ. ಮಾಡಬೇಕಾದ ಕಾರ್ಯ ಮಾಡದ ತಪ್ಪು, ಮಾಡಬಾರದ ಕೆಲಸ ಮಾಡಿದ ತಪ್ಪುಗಳ ಬಗ್ಗೆ ಕೇಸೀ ಹೇಳುತ್ತಾನಂತೆ. ಈ ಜನ್ಮದಲ್ಲಿ ಹುಟ್ಟುಕಿವುಡನಾಗಿರುವ ವ್ಯಕ್ತಿ ಹಿಂದಿನ ಜನ್ಮದಲ್ಲಿ ಸಹಾಯಕ್ಕಾಗಿ ಅಂಗಲಾಚಿದವರೊಡನೆ ಕಿವುಡನಂತೆ ವರ್ತಿಸಿದ್ದ.  ತೀವ್ರ ಅಸ್ತಮಾದಿಂದ ಬಳಲುವ ವ್ಯಕ್ತಿ ಹಿಂದಿನ ಜನ್ಮದಲ್ಲಿ ಇನ್ನೊಬ್ಬರ ಬಾಳನ್ನು ಮೆಟ್ಟಿ ಬದುಕಿದ್ದ. ಹನ್ನೊಂದು ವರ್ಷದ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದ. ಅವನನ್ನು ಕೇಸೀಗೆ ತೋರಿಸಿದಾಗ `ಇವನು ಹಿಂದಿನ ಜನ್ಮದಲ್ಲಿ, ಪ್ಯುರಿಟನ್ನರ ಕಾಲದಲ್ಲಿ, ಫ್ರಾನ್ಸಿನಲ್ಲಿ ಆಸ್ಥಾನ ಮಂತ್ರಿಯಾಗಿದ್ದ. ಶಿಕ್ಷೆಗೆ ಒಳಗಾದವರನ್ನು ಕೊಳ್ಳಕ್ಕೆ ನೂಕಿ ಆನಂದ ಪಡುತ್ತಿದ್ದ. ಈ ಜನ್ಮದಲ್ಲಿ ತನ್ನ ಮೂತ್ರದ ಹೊಳೆಯಲ್ಲಿ ತಾನೇ ಬಿದ್ದುಕೊಳ್ಳುವ ಪರಿಸ್ಥಿತಿ ಬಂದಿದೆ.’ ಎಂದನಂತೆ. ಮುಂದೆ ಅದಕ್ಕೆ ಪರಿಹಾರವನ್ನೂ ಸೂಚಿಸಿದನಂತೆ. ರಾತ್ರಿ ಮಲಗುವಾಗ ಹುಡುಗನ ಕಿವಿಯಲ್ಲಿ, `ನೀನು ಒಳ್ಳೆಯವನು. ನೀನು ಎಂದಿಗೂ ಅಂತಹ ಅಸಹ್ಯ ತಪ್ಪುಗಳನ್ನು ಮಾಡಲಾರೆ. ನಿನ್ನಿಂದ ಒಳಿತನ್ನೇ ನಿನ್ನ ಹಿರಿಯರು ನಿರೀಕ್ಷಿಸುತ್ತಿದ್ದಾರೆ. ಅಜ್ಞಾನದಿಂದ ಉಂಟಾಗಿದ್ದ ದುಷ್ಕರ್ಮಕ್ಕಾಗಿ ನೀನು ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದಿ’ ಎಂದು ಒಂದು ವಾರದ ವರೆಗೆ ಹೇಳಿದರು. ಬಳಿಕ ತಿಂಗಳಿಗೊಮ್ಮೆ ಆ ಮಾತು ಹೇಳುತ್ತಿದ್ದರಂತೆ. ಹುಡುಗ ಆ ದುರಭ್ಯಾಸದಿಂದ ಪಾರಾದನಂತೆ.

ಗೀನಾ ಸೆರ್ಮಿನಾರಾ ಬರೆದ `ಮೆನಿ ಮ್ಯಾನ್ಶನ್ಸ್’ ಎಂಬ ಗ್ರಂಥವನ್ನು, ಜನ್ಮಾಂತರ ಹಾಗೂ ಕರ್ಮದಲ್ಲಿ ವಿಶ್ವಾಸವಿಲ್ಲದವರು ತಪ್ಪದೇ ಓದಬೇಕೆಂದು ಲೇಖಕರು ಬರೆಯುತ್ತಾರೆ.

`ಜೀವನದಲ್ಲಿ ಎಲ್ಲಿಯೋ ಲೆಕ್ಕ ತಪ್ಪುತ್ತಿದೆ’ ಎಂದು ಎನಿಸುತ್ತಿದೆ.
ಆಯವ್ಯಯದ ಪಟ್ಟಿ ಮಾಡಿದಾಗ ಲಾಭನಷ್ಟದ ಕೋಷ್ಟಕ ಹೊಂದುತ್ತಿಲ್ಲ.
ಜೀವನದ ಲೆಕ್ಕಕ್ಕೆ ಸರಿಯಾದ ಉತ್ತರ ಪಡೆಯಲು ನಂಬಿಕೆ ಮುಖ್ಯ.
ಕರ್ಮಸಿದ್ಧಾಂತ ನಂಬಿದರೆ, ಇಂದಿನ ಸ್ಥಿತಿಯೆ ಪೂರ್ವಕರ್ಮದ ಫಲವು.
ಇಂದಿನ ಸತ್ಕರ್ಮ ನಾಳೆ ಬರಲಿರುವ ಜನ್ಮಕ್ಕೆ ನಾವೆ ಕಟ್ಟಿಟ್ಟ ಬುತ್ತಿಯು.
(`ಜೀವಿ” ವಚನ 58-1)

Swamy Jagadatmananda on supernatural power – ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’ ಭಾಗ-5

ಇದೆಲ್ಲ ಭ್ರಾಮಕ ಕಲ್ಪನೆಯೆಂದು, ಕತೆಯೆಂದು ತಳ್ಳಿಹಾಕಬಹುದಾಗಿತ್ತು. ಆದರೆ ವರ್ಜೀನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಯಾನ್ ಸ್ಟೀವನ್‌ಸನ್ ಇವಳನ್ನು ಕಾಣಲು 1974ರಲ್ಲಿ ಭಾರತಕ್ಕೆ ಬಂದರು. ಇವಳನ್ನು ಚೆನ್ನಾಗಿ ಪರೀಕ್ಷಿಸಿ, `ಇದು ಪುನರ್ಜನ್ಮಕ್ಕೊಂದು ಸ್ಪಷ್ಟವಾದ ಸಾಕ್ಷ್ಯಾಧಾರ’ ಎಂದರು. `ಪುನರ್ಜನ್ಮವಲ್ಲದೇ ಬೇರಾವ ಅರ್ಥ- ವಿವರಣೆ ಕೊಡಲು ಸಾಧ್ಯವಿಲ್ಲ.’ ಎಂದು ಮನಗಂಡೇ ಅವರು ತಮ್ಮ ದೇಶಕ್ಕೆ ಮರಳಿದರು.

ಮೃದುಲ ಶರ್ಮಾ ಐದು ವರ್ಷದ ಬಾಲಿಕೆ ಇದ್ದಾಗ ಹೃಷಿಕೇಶದ ಸ್ವಾಮಿ ಶಿವಾನಂದರನ್ನು ತಾಯಿಯ ಜೊತೆಗೆ ಭೇಟಿ ಮಾಡಿದ್ದಳು. ಸ್ವಾಮಿ ಶಿವಾನಂದರು ತಮ್ಮ ಬರಹದಲ್ಲಿ ಈ ವಿಚಾರ ಸೂಚಿಸಿದ್ದಾರಂತೆ. ಇಷ್ಟೆಲ್ಲ ವಿವರವಾಗಿ ಮೃದುಲ ಬಗ್ಗೆ ಬರೆಯಲು `ದಿ ಟೈಮ್ಸ್ ಆಫ್ ಇಂಡಿಯಾ’ದ 1976 ಅಕ್ಟೋಬರ್31ರ ಸಂಚಿಕೆಯಲ್ಲಿ ಪ್ರಕಟಗೊಂಡ ಸಚಿತ್ರ ಲೇಖನವೇ ಆಧಾರ ಎಂದು ಜಗದಾತ್ಮಾನಂದರು ಬರೆಯುತ್ತಾರೆ. ಸೋವಿಯೆಟ್ ದೇಶದಲ್ಲಿ ಕೂಡ ಬಹಳ ಅಭ್ಯಾಸ ನಡೆದಿದೆಯಂತೆ ಅಲ್ಲಿ 152ರಷ್ಟು ಗ್ರಂಥಗಳು ಪ್ರಕಟವಾಗಿದ್ದವೆಂದು ಬರೆಯುತ್ತಾರೆ.

`ಎಲುಬು ರಕ್ತ ಮಾಂಸ ನರವ್ಯೂಹಗಳಿಂದ ಕೂಡಿದ ಮನುಷ್ಯ ಶರೀರದ ಹಿನ್ನೆಲೆಯಲ್ಲಿ, ಸಾಮಾನ್ಯ ದೃಷ್ಟಿಗೆ ಗೋಚರಿಸದ, ಭಾರತದಲ್ಲಿ ಪುರಾತನ ಕಾಲದಿಂದಲೂ ಯೋಗಿಗಳಿಗೆ ಗೋಚರಿಸಿದೆ ಎಂದು ಹೇಳಲಾದ, ಅತ್ಯಂತ ಸೂಕ್ಷ್ಮವಾದ ಚೈತನ್ಯಮಯ ಶರೀರವಿದೆ ಎಂಬ ಸೂಚನೆ ರಶ್ಯನ್ ತಜ್ಞರಿಗೆ ಸುಮಾರು 1939ರ ಹೊತ್ತಿಗೆ ತಿಳಿದಿತ್ತು. ಆಗಲೇ ದಕ್ಷಿಣ ರಶಿಯಾದ ಕ್ಯೂಬಾನ್ ಪ್ರಾಂತದ ಕ್ರಸ್ನೋದರ್ ಎಂಬಲ್ಲಿ ಸಂಶೋಧನೆ ಪ್ರಾರಂಭವಾಗಿತ್ತು. ಮನುಷ್ಯ ದೇಹದಲ್ಲಿ ಸೂಕ್ಷ್ಮಾತಿಸೂಕ್ಷ್ಮ ರೂಪದಿಂದಿರುವ ಈ ಚೈತನ್ಯ ಶರೀರವನ್ನು ಗುರುತಿಸಲು ಅಗತ್ಯವಾದ ಕೆಲವೊಂದು ಉಪಕರಣಗಳನ್ನು ಸಜ್ಜುಗೊಳಿಸಲು ತಜ್ಞರನ್ನು ಹುಡುಕುತ್ತಿದ್ದರು. ಅವರಿಗೆ ಸಹಾಯಕನಾಗಿ ಬಂದ ತಾಂತ್ರಿಕಜ್ಞನೇ ಸಮ್ಯೋನ್ ಡೆವಿಡೊವಿಚ್ ಕೀರ್ಲಿಯನ್.’

ಮನುಷ್ಯದೇಹದಿಂದ ಹೊರಹೊಮ್ಮುವ ಒಂದು ವಿಶಿಷ್ಟ ಚೈತನ್ಯವು ವಿದ್ಯುತ್ತಿನ ಪ್ರವಾಹವನ್ನು ಪ್ರಭಾವಗೊಳಿಸುವುದೆಂದು ತಜ್ಞರು ಹೇಳುತ್ತಾರೆ. ದೇಹದಿಂದ ಹೊರಹೊಮ್ಮುವ ಆ ಚೈತನ್ಯ ಅಥವಾ ಪ್ರಭಾವಲಯದ ಫೋಟೋ ತೆಗೆಯಲು ನಮ್ಮ ದೇಹವನ್ನು ಅಥವಾ ಯಾವುದಾದರೊಂದು ಅಂಗವನ್ನು ಅಧಿಕ ಆವರ್ತನದ ವಿದ್ಯುತ್ ಪ್ರವಾಹಕ್ಷೇತ್ರದ ಸಮೀಪವಿರಿಸಬೇಕು. ಆಗ ಹೊರಹೊಮ್ಮುವ ಚೈತನ್ಯವು ವಿದ್ಯುತ್ ಕ್ಷೇತ್ರದ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಆಗ ಅವುಗಳ ಬಣ್ಣವೂ ಬದಲಿಸುತ್ತದೆ. ಕೀರ್ಲಿಯನ್ ಸಿದ್ಧಪಡಿಸಿದ ಪರಿಷ್ಕೃತ ಉಪಕರಣದಿಂದ ಅವುಗಳ ಸ್ಥಿತ್ಯಂತರ, ಗತಿವೈಚಿತ್ರ್ಯ, ವರ್ಣವೈವಿಧ್ಯಗಳನ್ನು ಕಾಣಬಹುದು. ಕೀರ್ಲಿಯನ್ ಉಪಕರಣ ವಿದ್ಯುತ್ ಅಲ್ಲದ `ಚೈತನ್ಯವನ್ನು’ ಒಂದು ರೀತಿ ವಿದ್ಯುತ್ತಾಗಿ ಪರಿವರ್ತಿಸಿ ನಮ್ಮ ದೃಷ್ಟಿಗೆ ನಿಲುಕುವಂತೆ ಮಾಡುತ್ತದೆ. ಕೀರ್ಲಿಯನ್ ಉಪಕರಣದ ಮೂಲಕ ಈ ಸೂಕ್ಷ್ಮದೇಹದ ಅಥವಾ ಶಕ್ತಿದೇಹದ ರೋಮಾಂಚಕಾರಿ ಅದ್ಭುತ ದೃಶ್ಯವನ್ನು ವಿಕ್ಷಿಸಿದವರು ಅತೀಂದ್ರಿಯ ವಿಚಾರದಲ್ಲಿ ಸಾಮಾನ್ಯ ಕುತೂಹಲಿಗಳಾದ ಜನರಲ್ಲ. ಸೋವಿಯಟ್ ದೇಶದ `ಪ್ರಿಸೀಡಿಯಮ್ ಆಫ್ ದಿ ಅಕಾಡೆಮಿ ಆಫ್ ಸೈಯನ್ಸಿಸ್”ನ ಮೇಧಾವಿ ಸಂಶೋಧಕ ವಿಜ್ಞಾನಿಗಳು ಎನ್ನುತ್ತಾರೆ.

ಈ ವಿಚಾರದಲ್ಲಿ `ಭಾರತೀಯರಿಗೆ ಅಸಡ್ಡೆ ಏಕೆ?’ ಎಂದು ಸ್ವಾಮೀಜಿ ಪ್ರಶ್ನಿಸುತ್ತಾರೆ. ಜಗತ್ತಿನಲ್ಲಿ ಇಷ್ಟೊಂದು ಸಂಶೋಧನೆ ನಡೆಯುತ್ತಿರುವಾಗ, `ಭಾರತದಲ್ಲಿ ಇಂದು ಆಂಗ್ಲ ವಿದ್ಯಾಭ್ಯಾಸ ಮಾಡಿದ ಯಾವ ವ್ಯಕ್ತಿಗಾದರೂ ಈ ಹಳೆಯ ಸಿದ್ಧಾಂತಗಳು `ಮೂಢನಂಬಿಕೆಯ ಕಂತೆ, ಪಾಮರರನ್ನು ವಂಚಿಸಲು ಮಾಡಿದ ಸಂಚು’ ಎನ್ನುವ ಭಾವನೆಯು ರೂಢಮೂಲವಾಗುತ್ತದೆ’ ಎಂದು ಖೇದಿಸುತ್ತಾರೆ. “ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಪ್ರಾಕ್ತನ ಸಿದ್ಧಾಂತಗಳ ಸತ್ವ ಮತ್ತು ಮಹತ್ವಗಳನ್ನು ತಿಳಿದು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡರೆ, ಬದುಕಿಗೊಂದು ಸಾರ್ಥಕತೆ ಬಂದೀತು ಎಂಬುದನ್ನು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ದುರ್ಲಭ ಎನ್ನುವಷ್ಟು ವಿರಳ ಎಂದರೆ ತಪ್ಪಲ್ಲ.” ಎನ್ನುತ್ತಾರೆ.

`ಇಂದು ಭಾರತೀಯರ ಯೋಗ, ತತ್ತ್ವಚಿಂತನೆ, ಸಂಗೀತ ಮತ್ತು ಕಲೆ – ಇವು ಇತರ ದೇಶದ ಮನಸ್ಸನ್ನು ಏಕೆ ಸೆಳೆಯುತ್ತವೆ? ಕೇವಲ ಹೊಸತನದ ಕ್ಷಣಿಕ ಕುತೂಹಲ, ಉದ್ವೇಗಕ್ಕಾಗಿಯೇ ಅಲ್ಲ. ಈ ದೇಶದ ಪುರಾತನ ಋಷಿಗಳು ಮನಸ್ಸಿನ ಆಳಕ್ಕೆ ಮುಳುಗಿ, ಜೀವನದ ಅರ್ಥ ಉದ್ದೇಶಗಳನ್ನು ಕಂಡುಕೊಂಡರು. ಜನತೆಗೆ ಕೆಲವೊಂದು ಶಾಶ್ವತ ಮೌಲ್ಯಗಳನ್ನು ನೀಡಿದರು. ವಿಜ್ಞಾನದ ಪ್ರಗತಿಯ ದೇಶಗಳಲ್ಲಿ ಮನಸ್ಸಿನ ಆಳಕ್ಕೆ ಮುಳುಗಿ ಅದರ ರಹಸ್ಯವನ್ನು ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಮ್ಯಾಕ್ಸ್‌ಮುಲ್ಲರ್ ಅವರ ಅಭಿಪ್ರಾಯದಂತೆ ಯೋಗಶಾಸ್ತ್ರಕ್ಕೆ ಸುಮಾರು ಆರು ಸಾವಿರ ವರ್ಷಗಳ ಪ್ರಾಚೀನತೆ ಇದೆ. ಗೌತುಮನು ಬುದ್ಧನಾಗುವ ಮೊದಲು ಅರಣ್ಯಗಳಲ್ಲಿ ಅಲೆಯುತ್ತಿರುವಾಗ ಅಸಂಖ್ಯ ಸಾಧಕ ತಪಸ್ವಿಗಳನ್ನು ಕಂಡ ವಿಚಾರವಿದೆ.’

`ಪರಮ ಸಾಕ್ಷಾತ್ಕಾರದ ಸಾಧನೆಯಲ್ಲಿ ಆಪ್ತವಾಕ್ಯ ಅಥವಾ ಅಥವಾ ಶಬ್ದಪ್ರಮಾಣ, ಯುಕ್ತಿ ಅಥವಾ ತರ್ಕದ ಮೂಲಕ ವಿಚಾರದ ಒರೆಗಲ್ಲಿನಲ್ಲಿ ವಿಮರ್ಶಿಸುವ ವಿಧಾನ ಮತ್ತು ಸ್ವಂತ ಬದುಕಿನಲ್ಲಿ ಆ ಅನುಭವ – ಈ ಮೂರೂ ವಿಧಾನಗಳು ಸೇರಿಕೊಂಡಿವೆ.’ `ಯುಕ್ತಿತರ್ಕಗಳನ್ನು ಸ್ವಾನುಭವವನ್ನು ಬಿಟ್ಟು ಕೇವಲ ಶಬ್ದಪ್ರಮಾಣವನ್ನೇ ಅಧ್ಯಯನ ಮಾಡುವ ವ್ಯಕ್ತಿ ಮತಾಂಧನಾಗುವ ಸಂಭವವಿದೆ’ ಅನ್ನುತ್ತಾರೆ. ಪಶ್ಚಿಮ ಸಂಸ್ಕೃತಿ ಸಮಾಜ ಉಳಿಯಬೇಕಾದರೆ ಕರ್ಮ ಸಿದ್ಧಾಂತದ ಅರಿವನ್ನು ಅಲ್ಲಿಯ ಜನಮಾನಸದಲ್ಲಿ ಪ್ರಸಾರಗೊಳಿಸಬೇಕೆಂದು ಆಂಗ್ಲ ಲೇಖಕ ಪಾಲ್ ಬ್ರಂಟನ್ ಒಮ್ಮೆ ಹೇಳಿದ್ದರಂತೆ.

`ಚರ್ಚ್ ಹಗೂ ಕ್ರೈಸ್ತಧರ್ಮಾಧಿಕಾರಿಗಳೆಲ್ಲ ಇದನ್ನು (ಕರ್ಮ ಸಿದ್ಧಾಂತವನ್ನು) ಮೂಢನಂಬಿಕೆ ಎಂದು ವಿರೋಧಿಸಿದ್ದರೂ ಒಂದು ಗಣನೆಯ ಪ್ರಕಾರ ಅಮೇರಿಕಾ ದೇಶದ ನಾಲ್ವರಲ್ಲಿ ಒಬ್ಬರು ಈ ಸಿದ್ಧಾಂತವನ್ನು ಒಪ್ಪುತ್ತಾರೆ.’ ಎನ್ನುತ್ತಾರೆ. ಬ್ರಿಟನ್ನಿನ ಸಂಡೇ ಟೆಲಿಗ್ರಾಫ್ ಪತ್ರಿಕೆ ನಡೆಸಿದ ಪರಿಶೀಲನೆಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಜನಸಾಮಾನ್ಯರ ನಂಬಿಕೆಯ ಪ್ರಮಾಣ (ಕರ್ಮ ಹಾಗೂ ಜನ್ಮಾಂತರ ಸಿದ್ಧಾಂತಗಳ ಬಗ್ಗೆ) ಶೇಕಡಾ ಹದಿನೆಂಟರಿಂದ ಇಪ್ಪತ್ತೆಂಟಕ್ಕೆ ಏರಿದೆಯಂತೆ.

ಕ್ರೈಸ್ತಮತದ ಯುನಿಟೇರಿಯನ್ ಪಂಥಕ್ಕೆ ಸೇರಿದ ಧರ್ಮಗುರು ವಿಲಿಯಂ ಆರ್ ಅಲ್‌ಗರ್ ಎಂಬವರು ಕರ್ಮ-ಜನ್ಮಾಂತರವಾದವನ್ನು ತಲೆಬುಡವಿಲ್ಲದ ಸಿದ್ಧಾಂತವೆಂದು ಪ್ರತಿಪಾದಿಸಲು ಅಧ್ಯಯನ ಮಾಡಲು ಹೊರಟು ತಮ್ಮ ಜೀವನವನ್ನೇ ಅದಕ್ಕಾಗಿ ಸವೆಸಿದರಂತೆ. ಕೊನೆಗೆ ಆದದ್ದೇ ಬೇರೆ. ಅವರು ಆ ಸಿದ್ಧಾಂತದ ಪ್ರತಿಪಾದಕರೇ ಆದರಂತೆ. ಅವರ ಉದ್ಗ್ರಂಥ `ಭವಿಷ್ಯ ಜೀವನದ ವಿಮರ್ಶಾತ್ಮಕ ಇತಿಹಾಸ’ ಉನ್ನತ ಮಟ್ಟದ ಪಾಂಡಿತ್ಯಕ್ಕೆ ಅದ್ವಿತೀಯ ಮಾದರಿ ಎಂದು ಹೊಗಳಲ್ಪಟ್ಟ ಗ್ರಂಥ. `ಕರ್ಮಜನ್ಮಾಂತರ ಯುಕ್ತಿಯುಕ್ತವಾದ ಅದ್ಭುತ ಸಿದ್ಧಾಂತ, ಅದನ್ನು ಮೂಢನಂಬಿಗೆ ಎಂದು ಅಲ್ಲಗಳೆಯುವುದು ಮೂರ್ಖತನ’ ಎಂದು ಹೇಳಿದ್ದಾರಂತೆ.

`ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವಚಾರ್ಜುನ’ ಎಂದ ಕೃಷ್ಣ.
ನರನದು ಮರುಹುಟ್ಟು, ಆದರೆ ನಾರಾಯಣನದು ಪುನರಾವತಾರ.
ಜನುಮಮರಣದ ಲೀಲೆ, ಎಲ್ಲದಕ್ಕೂ ಅವನೇ ಸೂತ್ರಧಾರ.
ಮತ್ತೆಮತ್ತೆ ಸಾಯುವ ಶರೀರ, ಬದಲುಮಾಡುವ ಹಳೆಯ ಬಟ್ಟೆ.
ಉಟ್ಟು ಹರಿಯುವ ದೇಹಕಾಗಿ ಯಾಕೆ ಶೋಕ, ಯಾಕೆ ಚಿಂತೆ?
(`ಜೀವಿ” ವಚನ 57-2)

Purity in love is the greatest love – ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’ ಭಾಗ-4

ದ್ವೇಷ ಮಹಾ ದೋಷ. ದ್ವಿವಿಷ ಎಂದರೆ ವಿಷದ ಎರಡು ಪಾಲು ಅದುವೆ ದ್ವೇಷ. ಯಾರು ದ್ವೇಷ ಮಾಡುತ್ತಾರೆ, ತಾವೂ ಉರಿಯುತ್ತಾರೆ, ಇತರರನ್ನೂ ಉರಿಸುತ್ತಾರೆ. ದ್ವೇಷದಿಂದ ಮನುಷ್ಯ ನಡೆದಾಡುವ ವಿಷದ ಕಾರ್ಖಾನೆಯಾಗುತ್ತಾನೆ. ಶೈಶವ, ಬಾಲ್ಯಗಳಲ್ಲಿ ತಂದೆತಾಯಂದಿರ ಪರಿಶುದ್ಧ ಪ್ರೀತಿಯನ್ನು ಕಂಡರಿಯದ ಮಕ್ಕಳು ದುಷ್ಟರೂ, ಭ್ರಷ್ಟರೂ, ಕ್ರೂರಿಗಳೂ ಆಗುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.

ಅಧ್ಯಾಯ ನಾಲ್ಕು : ಪ್ರೀತಿಯ ಪ್ರಚಂಡ ಪ್ರಭಾವ

“ಜಗತ್ತೇ ಪರಿಶುದ್ಧ ಪ್ರೀತಿಗಾಗಿ ಆತುರದಿಂದ ಹಾತೊರೆಯುತ್ತಿದೆ. ಪ್ರತಿಫಲವನ್ನಪೇಕ್ಷಿಸದೆಯೇ ನಾವದನ್ನು ಹಂಚಬೇಕು. ಪ್ರೀತಿಗೆ ಎಂದಿಗೂ ಅಪಜಯವಿಲ್ಲ. ಇಂದೋ, ನಾಳೆಯೋ, ಶತಮಾನಗಳ ನಂತರವೋ ಸತ್ಯ ಮಾತ್ರವೇ ಜಯಿಸುವುದು. ಪ್ರೀತಿಯು ಜಯವನ್ನು ತಂದೇ ತರುವುದು. ನೀವು ನಿಮ್ಮ ಸಹೋದರರನ್ನು ಪ್ರೀತಿಸುವಿರೇನು? ಪ್ರೀತಿಯ ಸರ್ವಶಕ್ತತೆಯಲ್ಲಿ ನಂಬಿಕೆ ಇಡಿ. ನಿಮ್ಮಲ್ಲಿ ಪರಿಶುದ್ಧ ಪ್ರೀತಿ ಇದೆಯೆಂದಾದರೆ ನೀವೇ ಸರ್ವಶಕ್ತರು.” – ವಿವೇಕಾನಂದ

“ಪರಿಶುದ್ಧ ಪರಿಪೂರ್ಣ ಪ್ರೀತಿಯು ಭೀತಿಯನ್ನು ದೂರಕ್ಕೆಸೆಯುವುದು'” – ಏಸು ಕ್ರಿಸ್ತ

“ಪರಿಶುದ್ಧ ನಿಸ್ವಾರ್ಥ ಪ್ರೀತಿ ಒಂದು ದೈವೀ ಶಕ್ತಿ. ಶ್ರದ್ಧೆ, ಭರವಸೆ ಮತ್ತು ಪ್ರೀತಿ ಇವುಗಳಲ್ಲಿ ಪ್ರೀತಿಯೇ ಅತ್ಯಂತ ಮಹಿಮಾನ್ವಿತವಾದುದು.'” -ಸಂತ ಪೌಲ.

ಸುರಕ್ಷಿತ ದಂಪತಿಗಳ ರೋಚಕ ಕತೆ ಹೇಳುತ್ತಾರೆ. ಇಬ್ಬರೂ ಒಂದೇ ಕಾಲೇಜಿನ ಪ್ರಾಧ್ಯಾಪಕರು. ಇಬ್ಬರಲ್ಲಿ ಮತಭೇದವಿತ್ತು. ಒಮ್ಮೆ ಅವರಲ್ಲಿ ವಾಗ್‌ಯುದ್ಧ ವಿಕೋಪಕ್ಕೆ ಹೋದಾಗ ಗಂಡ ಹೆಂಡತಿಯ ಕೆನ್ನೆಯನ್ನು ಬಾರಿಸಿದ. ಅವಳು ಕುಪಿತಳಾಗಿ ತವರಿಗೆ ತೆರಳಿದಳು. ಕೆಲಕಾಲದ ನಂತರ ಗಂಡನಿಗೆ ವಿಪರೀತ ವಿಷಮಜ್ವರದ ಬಾಧೆಯಾಗಿ ಹಾಸಿಗೆ ಹಿಡಿದಿದ್ದಾನೆಂಬ ಸುದ್ದಿ ಅವಳಿಗೆ ಬಂತು. ಏನು ಮಾಡುವುದು ತಿಳಿಯದಾಯಿತು. ಅವಳು ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ಕಂಡಳು. `ಸ್ತ್ರೀ ಹಾಗೂ ಪುರುಷರು ಒಂದು ರಥದ ಎರಡು ಚಕ್ರಗಳಿಂದ್ದಂತೆ. ಎರಡೂ ಒಂದೇ ದಿಕ್ಕಿನೆಡೆ ನಡೆಯಬೇಕು. ಎರಡೂ ಬೇರೆ ಬೇರೆ ದಿಕ್ಕಿನೆಡೆ ಎಳೆದಾಡಿದರೆ ರಥದ ದುರ್ದೆಶೆಯಾಗುತ್ತದೆ. ಪ್ರಪಂಚ ಒಂದು ಆಟ. ಅದರಲ್ಲಿ ಭೇದ ಸ್ವಾಭಾವಿಕ. ಪುರುಷ ಶೌರ್ಯ ಹಾಗೂ ಔದಾರ್ಯದ ಮೂರ್ತಿಯಾಗಬೇಕು. ಸ್ತ್ರೀಯಲ್ಲಿ ಸಹನೆ ಮತ್ತು ಅನನ್ಯ ಶರಣಾಗತಿಗಳು ಮೈತಾಳಬೇಕು. ಸಂಸಾರದಲ್ಲಿ ಸೋಲುವುದು ಸ್ತ್ರೀಯ ಸಹನಶೀಲತೆಯ ಪರೀಕ್ಷೆ. ಜಗತ್ತು ಒಂದು ನಾಟಕ. ನಿಮ್ಮ ಪಾತ್ರ ನೀವು ಸರಿಯಾಗಿ ನಿಭಾಯಿಸಬೇಕು’ ಎಂದು ಮುಂತಾಗಿ ಬೋಧಿಸಿದರು. `ಗುರುಗಳೇ, ಈಗ ನಾನೇನು ಮಾಡಲಿ ಹೇಳಿರಿ?’ ಎಂದವಳು ಪ್ರಶ್ನಿಸಿದಾಗ ಗುರುಗಳೆಂದರು, “ಮೊದಲಗಾಡಿ ಹಿಡಿದು ನೀನು ನಿಮ್ಮ ಯಜಮಾನರಿವಲ್ಲಿಗೆ ಹೋಗು. ಹಿಂದೆ ಏನೂ ನಡೆದಿಲ್ಲವೆನ್ನುವಂತೆ ಭಾವಿಸಿ ಅವರ ಶುಶ್ರೂಷೆ ಮಾಡು. ಪ್ರತಿ ದಿನ ಬೆಳಿಗ್ಗೆ ಅವರಿಗೆ ನಮಸ್ಕರಿಸು.” ಎಂದು. ಪತಿಯ ಕಾಯಿಲೆ ಗುಣಮುಖವಾಯ್ತು. ಇವಳು ಅವರ ಸೇವೆ ಮಾಡಿದಳು. ಅವಳು ನಮಸ್ಕರಿಸುವಾಗ ಅವರಿಗೆ ಅಳುವೇ ಬಂತು. ಬಹಳ ಪಶ್ಚಾತ್ತಪವಾಗಿತ್ತು. ನಿನ್ನ ಬದಲಾವಣೆ ಕಂಡರೆ ಯಾರೋ ಮಹಾತ್ಮರು ನಿನಗೆ ಹೀಗೆ ವರ್ತಿಸಲು ಹೇಳಿರಬೇಕು. ಮುಂದೆ ನನ್ನಿಂದ ಇಂಥ ತಪ್ಪು ಆಗದು ಎಂದು ವಚನ ಕೊಡುತ್ತೇನೆ ಎಂದನಂತೆ ಪತಿ. ಅವರಿಗೆ ಒಂದು ಗಂಡು ಮಗುವಾಯ್ತು. ಇಬ್ಬರೂ ಸಂತರ ದರುಶನ ಪಡೆದು ಕೃತಕೃತ್ಯರಾದರು.

ಅಮೇರಿಕೆಯ ಬಾಲ್ಟಿಮೋರ್‌ನಲ್ಲಿಯ ಸಮಾಜಶಾಸ್ತ್ರದ ಪ್ರಾಧ್ಯಾಪಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಕೊಳಚೆಪ್ರದೇಶದಲ್ಲಿ ವಾಸಿಸುವ ಎಳೆಯ ಮಕ್ಕಳನ್ನು ಕುರಿತು ಅಭ್ಯಾಸ ಮಾಡಲು ಹೇಳಿದರಂತೆ. ಅವರುಗಳು 200 ಎಳೆಯರನ್ನು ಸಂದರ್ಶಿಸಿ ಮಾಹಿತಿ ಕಲೆಹಾಕಿದರಂತೆ. ಮಕ್ಕಳು ವಾಸಿಸುತ್ತಿದ್ದ ವಾತಾವರಣ ಭಯಾನಕವಾಗಿತ್ತು, ಅಸಹ್ಯವಾಗಿತ್ತು. ಈ ಮಕ್ಕಳಲ್ಲಿ ಶೇಕಡಾ 90ರಷ್ಟು ಮಕ್ಕಳು ದುಷ್ಟರಾಗಿ ಬೆಳೆದು ಜೈಲುವಾಸ ಮಾಡುವರೆಂದು ಭವಿಷ್ಯ ನುಡಿಯಲಾಗಿತ್ತು. ಇಪ್ಪತ್ತೈದು ವರ್ಷಗಳ ನಂತರ ಅದೇ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಇನ್ನೊಂದು ತಂಡವನ್ನು ಆ ಕೊಳಚೆ ಪ್ರದೇಶಕ್ಕೆ ಕಳಿಸಿದರು. ಹಿಂದೆ ತಮ್ಮ ವಿದ್ಯಾರ್ಥಿಗಳು ಮಾಡಿದ ಅಭ್ಯಾಸದ ಪರಿಣಾಮಗಳನ್ನು ನೋಡಲು ಉತ್ಸುಕರಾಗಿದ್ದರು. ಹಿಂದೆ ಸಂಪರ್ಕಿಸಿದ ಎಳೆಯರೀಗ ದೊಡ್ಡವರಾಗಿದ್ದರು. ಅವರಲ್ಲಿ 90 ಜನರನ್ನು ಸಂಪರ್ಕಿಸಲು ಸಾಧ್ಯವಾಗಿತ್ತು. ಹಿಂದಿನವರು ನುಡಿದ ಭವಿಷ್ಯ ಸುಳ್ಳಾಗಿತ್ತು. ಅವರೆಲ್ಲರೂ ಸಭ್ಯ ನಾಗರಿಕರಾಗಿದ್ದರು. ಇವರ ಪರಿವರ್ತನೆಯ ಗುಟ್ಟೇನು?

ಹೊಸ ಅಭ್ಯಾಸದಿಂದ ತಿಳಿದ ವಿಷಯ ಹೀಗಿತ್ತು: ಈ ಕೊಳಚೆ ಪ್ರದೇಶದಲ್ಲಿದ್ದ ಶಾಲೆಯಲ್ಲಿ ಶೀಲಾ ರೂರ್ಕೆ ಎಂಬ ಅಧ್ಯಾಪಕಿಯಿದ್ದಳು. ಅವಳ ಪ್ರಭಾವ ಮಕ್ಕಳ ಮೇಲೆ ಬಹಳ ಆಗಿತ್ತು ಎಂಬುದು ಕಂಡು ಬಂತು. ಆ ಅಧ್ಯಾಪಕಿ ನಿವೃತ್ತಳಾಗಿ ಬಹಳ ವರ್ಷವಾಗಿತ್ತು. ಅವಳನ್ನು ಹುಡುಕಲು ತೊಡಗಿದರು. ಅವಳನ್ನು ಕಂಡು ಅವಳ ಸಂದರ್ಶನ ಪಡೆದರು. `ಈ ಕೊಳಚೆ ಪ್ರದೇಶದ ಮಕ್ಕಳಿಗೆ ನೀವು ಹೇಗೆ ಸ್ಫೂರ್ತಿ ನೀಡಿದಿರಿ? ನಿಮ್ಮ ಯಾವ ಉಪಾಯದಿಂದ ಇವರೆಲ್ಲ ಸಭ್ಯ ನಾಗರಿಕರಾದರು?’ ಎಂದು ಕೇಳಿದಾಗ ಆ ಅಧ್ಯಾಪಕಿ ವಿನಮ್ರಳಾಗಿ ಉತ್ತರಿಸಿದ್ದಳಂತೆ, `ನನಗೆ ಯಾವ ಉಪಾಯ ಗೊತ್ತಿಲ್ಲ. ನಾನು ಆ ಶಾಲೆಯ ಅಧ್ಯಾಪಕಿಯಾಗಿರುವಷ್ಟು ಕಾಲ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡೆ’ ಎಂದು.

`ಪ್ರೀತಿ ಪರಿವರ್ತನೆಯ ಪ್ರವರ್ತಕವಾಗಬಲ್ಲದು. ಪ್ರೀತಿ ಪಡೆದವನೇ ಪ್ರೀತಿಯ ಮಹಿಮೆ ತಿಳಿಯಬಲ್ಲ. ಆತನೇ ಪ್ರೀತಿಯನ್ನು ಇತರರಿಗೆ ನೀಡಬಲ್ಲ.’

“ಜನರೇನೋ ಪ್ರೀತಿಸುವುದು ಅತ್ಯಂತ ಸುಲಭ ಕಾರ್ಯವೆಂದು ನಂಬಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರೀತಿಸುವ ಸಾಮರ್ಥ್ಯವಿದ್ದರೂ ನಿಜವಾಗಿ ಪ್ರೀತಿಸುವುದು ಒಂದು ಅಸಾಮಾನ್ಯ ಸಿದ್ಧಿಯೇ ಸರಿ” ಎಂದು ಎರಿಕ್ ಫ್ರೋಂ ಹೇಳುತ್ತಾರೆ.

`ಪ್ರೀತಿ ಎಂದರೆ ಕೇವಲ ಭಾವಪರವಶತೆ, ಗಂಡು ಹೆಣ್ಣುಗಳ ದೈಹಿಕ ಆಕರ್ಷಣೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಕಾಮ ಮತ್ತು ಸೌಂದರ್ಯ ಭಾವನೆಗಳ ಮಿಶ್ರಣದಿಂದ ಬಿಡಿಸಿ, ಪ್ರೀತಿಯ ಸ್ವರೂಪವನ್ನು ತಿಳಿದುಕೊಳ್ಳಲು ನಾವು ಯತ್ನಿಸಬೇಕು’ ಎನ್ನುತ್ತಾರೆ ಲೇಖಕರು.

ಸ್ವಾರ್ಥರಹಿತ ಪರಿಶುದ್ಧ ಪ್ರೀತಿಯಲ್ಲಿ ಅಪಾರ ಶಕ್ತಿ ಇದೆ. ಪ್ರೀತಿಯಿಂದ ವಂಚಿತರಾದ ಎಳೆಯ ಮಕ್ಕಳು ಸಮಾಜದಲ್ಲಿ ನೈತಿಕವಾಗಿ, ಸಾಮಾಜಿಕವಾಗಿ ಹಿಂದುಳಿಯುತ್ತವೆ. ಕುಡಿತದ ಚಟ, ಅಪರಾಧ ಹಾಗೂ ಆತ್ಮಹತ್ಯೆಯ ಪ್ರವೃತ್ತಿಗಳನ್ನು ತಡೆಗಟ್ಟಲು ಪ್ರೀತಿಯೆಂಬುದೇ ಅತ್ಯಂತ ಪರಿಣಾಮಕಾರಿ ದಿವ್ಯೌಷಧಿಯಾಗಿದೆ. ದ್ವೇಷ, ಭಯ ಹಾಗೂ ನರಮಂಡಲದ ದೌರ್ಬಲ್ಯ ಮೊದಲಾದ ತೊಂದರೆಗಳನ್ನು ದೂರ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಮಕ್ಕಳ ಸರಿಯಾದ ಬೆಳವಣಿಗೆಗೆ ತಾಯಿಯ ಪ್ರೀತಿ ವಾತ್ಸಲ್ಯಗಳು ಅತ್ಯಂತ ಅವಶ್ಯಕವಾದವುಗಳು ಎಂದು ಅನುಭವ ಹಾಗೂ ಸಂಶೋಧನೆಗಳ ಮೂಲಕ ಸಾಬೀತಾಗಿದೆ. `ಸಂಕ್ರಾಮಿಕ ರೋಗದಿಂದ, ಹಸಿವೆಯಿಂದ, ಅಯೋಗ್ಯ ಅಹಾರದಿಂದ ಮಕ್ಕಳು ದುರ್ಬಲವಾಗಿ ಸಾಯುವಂತೆ, ತಾಯಿಯ ಒಲವನ್ನೇ ಕಂಡರಿಯದ ಮಕ್ಕಳು ಬಹು ಬೇಗನೇ ರೋಗಿಷ್ಠರೂ, ದುರ್ಬಲರೂ ಆಗಿ ಸಾಯುತ್ತಾರೆ’ ಎಂದು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಡಾ| ರೀನೆ ಎ ಸ್ವೀಟ್ಸ ಹೇಳುತ್ತಾರೆ.

`ತಾನು ಯಾರಿಗೂ ಬೇಡಾದವನು’ ಎಂಬ ಭಾವನೆಯ ರೋಗ ಬಹಳ ಕೆಟ್ಟದಾದ ರೋಗ. `ಕುಷ್ಟರೋಗಕ್ಕೆ ನಾವು ಔಷಧಿ ಕಂಡುಹಿಡಿದಿದ್ದೇವೆ, ಕ್ಷಯರೋಗಕ್ಕೆ ಔಷಧಿಯುಂಟು, ಆದರೆ ಪ್ರೀತಿಯನ್ನು ಕಂಡರಿಯದ ಈ ಕೆಟ್ಟರೋಗಕ್ಕೆ ಔಷಧಿ ಎಲ್ಲಿದೆ? ಹೃದಯದಲ್ಲಿ ಪ್ರೀತಿಯನ್ನು ತುಂಬಿಕೊಂಡು, ಕೈಗಳಿಂದ ಸೇವೆಮಾಡಲು ಸಿದ್ಧರಾದ ವ್ಯಕ್ತಿಗಳಿಂದ ಮಾತ್ರವೇ ಈ ಕೆಟ್ಟರೋಗ ದೂರವಾಗಲು ಸಾಧ್ಯ’ ಎಂದು ಮದರ್ ಥೇರೇಸಾ ಹೇಳಿದ್ದರಂತೆ. `ಜಗತ್ತೇ ಪರಿಶುದ್ಧ ಪ್ರೀತಿಗಾಗಿ ಆತುರದಿಂದ ಹಾತೊರೆಯುತ್ತಿದೆ. ಪ್ರತಿಫಲವನ್ನು ಅಪೇಕ್ಷಿಸದೇ ನಾವು ಅದನ್ನು ಹಂಚಬೇಕು’ ಎಂದವರು ಸ್ವಾಮಿ ವಿವೇಕಾನಂದರು.

ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಜಗದ ಮುಖವನ್ನೇ ಬದಲಿಸಿದ್ದಾರೆ. `ಇದೀಗ ಮುಖ್ಯವಾಗಿ ಹಿಂಸೆ, ಯುಧ್ಧ, ರಕ್ತಪಾತ, ಕೊಲೆಗಡುಕತನ ಇವುಗಳನ್ನು ದೂರಮಾಡಲು, ಮತ್ತು ನಿಸ್ವಾರ್ಥ ಪ್ರೀತಿಯ ಶಕ್ತಿಯನ್ನು ಕುರಿತು, ಸಂಶೋಧನೆ ನಡೆಸಬೇಕಾಗಿದೆ ಎಂದು ಸೊರೊಕಿನ್ ಅಭಿಪ್ರಾಯಪಡುತ್ತಾರೆ.

ಮನೋದೈಹಿಕ ಬೇನೆಗಳನ್ನು ಕುರಿತ ಸಂಶೋಧನೆಗಳಿಂದ ಗೊತ್ತಾಗಿರುವ ತಥ್ಯಾಂಶಗಳು ಇಂತಿವೆ: `ದ್ವೇಷ ಕೆಟ್ಟದ್ದು, ಪ್ರೀತಿ ಒಳ್ಳೆಯದ್ದು. ದ್ವೇಷ, ಮತ್ಸರ, ದುರಭಿಮಾನ, ಚಿಂತೆ, ಸೇಡಿನ ಮನೋಭಾವ ಇವು ಶರೀರಾರೋಗ್ಯಕ್ಕೆ ತೀವ್ರ ಕೆಡಕು ಉಂಟುಮಾಡುವ ವಿಷಯಗಳು. ಪ್ರೀತಿ ಶರೀರದ ಆರೋಗ್ಯಕ್ಕೆ ಅಷ್ಟೇ ಅಲ್ಲ, ಮಾನಸಿಕ ಹಾಗೂ ನೈತಿಕ ಸುಸ್ಥಿತಿಗೂ ಅವಶ್ಯಕವಾಗಿದೆ.

ಕರ್ಮಯೋಗವನ್ನು ಕುರಿತು ವ್ಯಾಖ್ಯಾನಿಸುವಾಗ ವಿವೇಕಾನಂದರು `ನಿಸ್ವಾರ್ಥತೆಯೇ ದೇವರು’ ಎನ್ನುತ್ತಾರೆ. ನಿಸ್ವಾರ್ಥತೆಯಲ್ಲಿರುವ ಮಹಾಗುಣ ಮನುಷ್ಯನನ್ನು ದೈವತ್ವಕ್ಕೆ ಏರಿಸಬಲ್ಲದು ಎಂಬುದು ಈ ಮಾತಿನ ಅರ್ಥ ಎನ್ನುತ್ತಾರೆ ಲೇಖಕರು. ನಿಸ್ವಾರ್ಥ ಪ್ರೀತಿಗೆ ತಾಯಿಗಿಂತ ಬೇರೆಯ ಮಾದರಿ ಸಿಗಲಾರದು. ಆದ್ದರಿಂದಲೇ ತಾಯಿಯೇ ದೇವರು, `ಮಾತೃದೇವೋಭವ’ ಎಂದು ಋಷಿಮುನಿಗಳು ಕರೆದಿರಬೇಕು. ಪ್ರೀತಿ ಎಷ್ಟರಮಟ್ಟಿಗೆ ಪರಿಶುದ್ಧವಾಗಿದೆ ಎಂಬುದನ್ನು ತಿಳಿಯಲು ನಿಸ್ವಾರ್ಥತೆಯೇ ಒರೆಗಲ್ಲು. ಇಂದಿನ ಸ್ತ್ರೀಸ್ವಾತಂತ್ರ್ಯ ತಾಯ್ತನಕ್ಕೆ ಮಾರಕವಾಗುತ್ತಿದೆ ಎನ್ನುತ್ತಾರೆ.

ಸ್ವಾಮಿ ರಾಮಕೃಷ್ಣರಲ್ಲಿ ಕಾಣುತ್ತಿದ್ದ ಅನೇಕ ಗುಣಗಳಲ್ಲಿ ಅತ್ಯಧಿಕ ಆಕರ್ಷಕವಾದ ಗುಣ ಅವರ ತೋರುತ್ತಿದ್ದ ಪ್ರೀತಿ ಹಾಗೂ ವಾತ್ಸಲ್ಯ. ಪ್ರಯೊಬ್ಬರ ಹಿತಚಿಂತನೆಯಲ್ಲಿ ಅವರಿಗೆ ಆಸಕ್ತಿ ಇರುತ್ತಿತ್ತು. ಮಾತೃತ್ವದ ಸಾಕಾರ ಮೂರ್ತಿಯಾದ ಶಾರದಾದೇವಿಯವರ ಬಗ್ಗೆ ಸಿಸ್ಟರ್ ನಿವೇದಿತಾ ಬರೆಯುತ್ತ, `ಮೇರೆಯಿಲ್ಲದ ವಾತ್ಸಲ್ಯ ವಾರಿಧಿ’ ಎಂದು ಅವರ ಗುಣಗಾನ ಮಾಡುತ್ತಾರೆ.

ಮಾನವ ಸಮಾಜಕ್ಕೆ ವಿಜ್ಞಾನದ ಪ್ರಗತಿಯಿಂದ ಮಾನವಕುಲಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. `ಸುಖಲೋಲುಪತೆ ಮತ್ತು ಸ್ವೇಚ್ಛಾಚಾರಕ್ಕಿಳಿಸಿದ ಸ್ವಾತಂತ್ರ್ಯಕ್ಕೆ ವಿಜ್ಞಾನ ಸಹಕಾರಿಯಾಗಿದೆ. ವಿಯೆಟ್ನಾಂ ಯುದ್ಧದಲ್ಲಿ ೪೫ ಸಾವಿರ ಸೈನಿಕರು ಸತ್ತಿದ್ದರೆ ಮಾದಕ ದ್ರವ್ಯ ಸೇವಿಸಿ ಲಕ್ಷಾವಧಿ ಯುವಕರು ಸಾಯುತ್ತಿದ್ದಾರೆ. ಮಾದಕದ್ರವ್ಯ ವ್ಯಾಪರದ ಪ್ರಮುಖ ಹದಿಮೂರು ಸಂಸ್ಥೆಗಳಿವೆ. ಇವುಗಳಲ್ಲಿ ಒಂದಾದ ಕಳ್ಳವ್ಯಾಪಾರ ಸಂಸ್ಥೆಯ ವರುಷದ ವ್ಯಾಪಾರ ಎರಡು ಸಾವಿರ ಕೋಟಿ ರೂಪಾಯಿ ಮೀರಿದೆಯಂತೆ.

ಇಂದಿನ ದಿನಗಳಲ್ಲಿ ನೈತಿಕತೆಯ ಅಧಃಪತನವಾಗಿದೆ. `ಕಳೆದ ಇನ್ನೂರು ವರುಷಗಳಿಂದ, ಮುಖ್ಯವಾಗಿ ಕಳೆದ ಹಲವು ದಶಕಗಳಿಂದ, ನಮ್ಮ ಸಂಸ್ಕೃತಿಯ ಎಲ್ಲ ವಿಭಾಗಗಳು ಅತಿಲೈಂಗಿಕತೆಯ ದಾಳಿಗೊಳಗಾಗಿವೆ. ನಮ್ಮ ನಾಗರಿಕತೆ ಎಷ್ಟು ಎಷ್ಟು ಲೈಂಗಿಕತೆಯಲ್ಲಿ ಮುಳುಗಿದೆ ಎಂದರೆ ಬದುಕಿನ ಎಲ್ಲೆಡೆಗಳಿಂದಲೂ ಅದು ಇಂದು ಹೊರಹೊಮ್ಮುತ್ತಿದೆ.’ ಎನ್ನುತ್ತಾರೆ ಸಮಾಜ ಶಾಸ್ತ್ರಜ್ಞ ಸೊರೊಕಿನ್. ಸಾಹಿತ್ಯ, ಕಥೆಕಾದಂಬರಿ, ಚಿತ್ರ, ಸಂಗೀತ, ಚಲನಚಿತ್ರ, ಟೆಲಿವಿಜನ್, ಪತ್ರಿಕೆ, ಮ್ಯಾಗಜಿನ್, ಜಾಹೀರಾತು – ಎಲ್ಲ ಕ್ಷೇತ್ರದಲ್ಲಿ ಲೈಂಗಿಕತೆಯ ಹಾವಳಿ ಹೇಗೆ ನಡೆದಿದೆ ಎಂಬುದನ್ನು ಸಾಕ್ಷ್ಯಾಧಾರ ಸಮೇತವಾಗಿ ಅವರು ಚಿಂತನ ಮಂಥನ ನಡೆಸುತ್ತಾರೆ. ಭೋಗ ಸ್ವಾರ್ಥಗಳೇ ವೈವಾಹಿಕ ಜೀವನದ ಉದ್ದೇಶವಾದರೆ ಘರ್ಷಣೆ ತಡೆಯುವುದೆಂತು? ಮಕ್ಕಳಿಗೆ ಮೊಲೆಹಾಲು ಕುಡಿಸುವುದು ತನ್ನ ಶರೀರ ಸೌಷ್ಠವಕ್ಕೆ ಕುಂದು ಎಂಬ ತಾಯಿ ಮಗುವಿಗೆ ಜನ್ಮಕೊಡುವುದು ತನ್ನ ಸ್ವಚ್ಛಂದ ವಿಹಾರಕ್ಕೆ ತೊಡಕು ಎಂದು ಭಾವಿಸಿದ್ದಾಳೆ.

ಇತಿಹಾಸದ ಪುಟಗಳನ್ನು ಲೇಖಕರು ನೆನೆಯುತ್ತಾರೆ. ಭಾರತೀಯರ ನೈತಿಕತೆಯ ಕಂಪು ವಿಶ್ವದಲ್ಲೆಡೆ ಹರಡಿತ್ತು. ವಿದೇಶಿ ಪ್ರವಾಸಿಗಳು ಭಾರತವನ್ನು ಮುಕ್ತಕಂಠದಿಂದ ಹೊಗಳಿದ್ದರು. ಚೀನಾದೇಶದ ಪ್ರವಾಸಿ ಹುವೆನ್‌ತ್ಸ್ಯಾಂಗ್ ಸಾವಿರದ ಐದುನೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಾಗ ಇಲ್ಲಿಯ ಸಂಪತ್ತನ್ನು ಕಂಡು ಬೆರಗಾಗಿದ್ದ. ಗ್ರೀಕರ ರಾಯಭಾರಿಯಾಗಿ ಮೆಗಾಸ್ತನೀಸ ಇಲ್ಲಿಗೆ ಬಂದಾಗ ಮನೆಗಳಿಗೆ ಬೀಗ ಇಲ್ಲದಿರುವುದನು ಕಂಡು ಅಚ್ಚರಿಪಟ್ಟಿದ್ದ. ಭೂಸಂಚಾರಿ ಮಾರ್ಕೊಪೋಲೋ ಹೇಳಿದ್ದ, `ಭೂಲೋಕದಲ್ಲೇ ಭಾರತೀಯರು ಅತ್ಯಂತ ಒಳ್ಳೆಯವರು, ಸತ್ಯವಂತರಾದ ವ್ಯಾಪಾರಿಗಳು ಯಾವ ಕಾರಣದಿಂದಲೂ ಸುಳ್ಳುಹೇಳುವುದಿಲ್ಲ.’ ಹನ್ನೊಂದನೆಯ ಶತಮಾನದಲ್ಲಿ ಬಂದ ಮಹಮ್ಮದೀಯ ಇದ್ರಿಸಿ, `ಇಂಡಿಯಾದೇಶದ ಜನರು ನಂಬಿಕೆ, ಸತ್ಯನಿಷ್ಠೆಗೆ ಪ್ರಸಿದ್ಧರಾಗಿದ್ದಾರೆ’ ಎಂದಿದ್ದ. ಮೂರುನೂರು ವರ್ಷದ ಹಿಂದೆ ಪೋರ್ಚುಗೀಸರು ಬರೆದರು, `ಹಿಂದುಗಳು ಮೊದಲು ಸೂಚನೆ ಮಾಡದೆ ಯುದ್ಧ ಮಾಡುವುದಿಲ್ಲ. ವೀರರಾದ ಇವರು ಶತ್ರುಗಳ ಬಗ್ಗೆ ಸ್ವಲ್ಪವೂ ದ್ವೇಷ ಇಟ್ಟುಕೊಂಡವರಲ್ಲ’ ಎಂದು.

ಜಗತ್ತಿನ ಅಸಂಖ್ಯ ರಾಜರುಗಳಲ್ಲಿ ಅಶೋಕ ಚಕ್ರವರ್ತಿ ಮಾತ್ರ ದೇದೀಪ್ಯಮಾನವಾದ ಧ್ರುವ ನಕ್ಷತ್ರದಂತೆ ಕಂಗೊಳಿಸುತ್ತಾನೆ ಎಂದು ಜಗತ್ತಿನ ಇತಿಹಾಸ ಬರೆದ ಎಚ್.ಜಿ.ವೆಲ್ಸ್ ಹೇಳಿದ್ದು ಅತಿಶಯೋಕ್ತಿಯಾಗಿರಲಿಲ್ಲ. ಚಕ್ರವರ್ತಿ ಹರ್ಷವರ್ಧನ ಪ್ರತಿ ಐದುವರ್ಷಕ್ಕೊಮ್ಮೆ ತಾನು ಸಂಗ್ರಹಿಸಿದ್ದ ಐಶ್ವರ್ಯವನ್ನು ವಿದ್ವಾಂಸರಿಗೆ ಮತ್ತು ಬಡವರಿಗೆ ಸಂಪೂರ್ಣವಾಗಿ ಹಂಚುತ್ತಿದ್ದನಂತೆ.

ದಿವ್ಯಪ್ರೀತಿಯ ಮೂಲಸ್ರೋತ ಅಧ್ಯಾತ್ಮದಲ್ಲಿದೆ ಅನ್ನುತ್ತಾರೆ. `ಮುಖಂಡನಾಗುವವನಿಗೆ ಮೊದಲು ಹೃದಯ ಸಂಪನ್ನತೆ ಇರಬೇಕು ಎನ್ನುತ್ತಿದ್ದರು’ ವಿವೇಕಾನಂದರು.

ದ್ವೇಷ ಮಹಾ ದೋಷ. ದ್ವಿವಿಷ ಎಂದರೆ ವಿಷದ ಎರಡು ಪಾಲು ಅದುವೆ ದ್ವೇಷ. ಯಾರು ದ್ವೇಷ ಮಾಡುತ್ತಾರೆ, ತಾವೂ ಉರಿಯುತ್ತಾರೆ, ಇತರರನ್ನೂ ಉರಿಸುತ್ತಾರೆ. ದ್ವೇಷದಿಂದ ಮನುಷ್ಯ ನಡೆದಾಡುವ ವಿಷದ ಕಾರ್ಖಾನೆಯಾಗುತ್ತಾನೆ. “ದ್ವೇಷಕ್ಕಿಂತ ಭಯಾನಕವಾದ ಹತ್ಯೆ ಬೇರೊಂದಿಲ್ಲ. ದ್ವೇಷವೇ ಅತ್ಯಂತ ಭೀಕರ ಜ್ವರ. ದ್ವೇಷದಿಂದ ದ್ವೇಷ ಎಂದಿಗೂ ಅಳಿಯದು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಿರಿ. ನಿಂದೆಯ ನುಡಿಗೆ ಕಿವುಡರಾಗಿರಬೇಕು. ತಮಗಿಂತಲೂ ಹೆಚ್ಚು ವಿದ್ಯಾವಂತರು, ಹೆಚ್ಚು ಯಶಸ್ವಿಯಾದವರನ್ನು ಟೀಕಿಸಿದಾಗ, ಕೆಲವರಿಗೆ ಅನಾಗರಿಕ ಆನಂದ ಉಂಟಾಗುತ್ತದೆ” ಎಂದವ ಬುದ್ಧ.

ಪ್ರೀತಿಯೇ ಪರಮೌಷಧಿ ಎನ್ನುತ್ತಾರೆ. ಪ್ರೀತಿಸುವುದನ್ನು ನಾವು ನಿಸರ್ಗದಿಂದ ಕಲಿಯಬೇಕು. ಅರಳಿದ ಕುಸುಮಗಳ ಮೇಲೇರುವ ಭ್ರಮರಗಳ ಮೇಲೆ ಪುಷ್ಪಗಳು ದ್ವೇಷ ಮಾಡುತ್ತವೆಯೇ? ತುಂಬಿದ ಕೆಚ್ಚಲಿಗೆ ಕೈಹಾಕಿ ಹಾಲು ಹಿಂಡುವ ಗೋಲ್ಲನ ಕೈ ಕಡಿಯಲು ಕಾಮಧೇನು ಹೊರಡುವದೇ? ಮೀನಗಳು ಬಹಳಾದವು ಎಂದು ಕೋಪಗೊಂಡು ಸಾಗರ ಬತ್ತುವದೇ? ಅಸೂಯೆ, ಅತೃಪ್ತಿಗಳನ್ನು ನಿರ್ನಾಮ ಮಾಡುವದೇ ಪ್ರೀತಿ. `ಸರ್ವೇ ಜನಾಃ ಸುಖಿನೋ ಭವಂತು’ ಇದುವೆ ಪ್ರೀತಿಯ ಮಂತ್ರ.

ದ್ವೇಷವೆಂದರೆ ದ್ವಿವಿಷ. ಅದು ಎರಡೂ ಬದಿ ಧಾರೆ ಇರುವ ಖಡ್ಗ.
ದ್ವೇಷಿಸುವವ ತಾನೂ ಕುದಿಯುತ್ತಾನೆ, ಇತರರನ್ನೂ ಸುಡುತ್ತಾನೆ.
ದ್ವೇಷವನ್ನು ಪ್ರೀತಿಯಾಗಿ ಪರಿವರ್ತಿಸಬಲ್ಲವನೇ ಸದ್ಗುರು.
`ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’.
ಸದ್ಗುರುವಿನ ಹಿತವಚನ ಆಲಿಸಬೇಕು, ಪ್ರೀತಿಯ ಪವಾಡ ಅನುಭವಿಸಬೇಕು.
(`ಜೀವಿ” ವಚನ-56-2)