Philosopher Gurudev Ranade : part 2 – ಮಹಾನ್ ದಾರ್ಶನಿಕ ಗುರುದೇವ ರಾನಡೆ : ಭಾಗ 2

ಮಹಾನ್ ದಾರ್ಶನಿಕ ಡಾ. ಗುರುದೇವ ರಾನಡೆ ಮತ್ತು ವರಕವಿ ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಇವರಿಬ್ಬರು ಮಹಾನುಭಾವರು ನನ್ನನ್ನು ಹಿಡಿದು ‘ಇವ ನಮ್ಮ ಹುಡುಗ” ಅಂದಾಗ ನನ್ನ ಜೀವನ ಧನ್ಯವಾಯಿತು ಎಂದೆನಿಸಿತ್ತು.

Philosopher Dr. Gurudev Ranadeಇನ್ನೊಂದು ಅವಿಸ್ಮರಣೀಯ ಘಟನೆಯ ಬಗ್ಗೆ ಬರೆಯಬೇಕು. ಆ ಘಟನೆ ನನ್ನನ್ನು ಗುರುದೇವ ರಾನಡೆಯವರ ಬಳಿಗೆ ಇನ್ನಷ್ಟು ಹತ್ತಿರಕ್ಕೆ ಎಳೆದಿತ್ತು. ನಾನು ಧಾರವಾಡದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಕಾಲವದು. ನಮ್ಮ ತಂದೆ ವಿಠ್ಠಲರಾಯರು ಪೋಸ್ಟ್ ಆಫೀಸಿನಲ್ಲಿ ಕೆಲಸಮಾಡುತ್ತಿದ್ದರು. ನಾವು ಗುರುರಾವ ಜಮಖಂಡಿಯವರ ಕಂಪೌಂಡಿನಲ್ಲಿ (ಔಟ್‌ಹೌಸ್‌ನಲ್ಲಿ) ಬಾಡಿಗೆ ಇದ್ದೆವು. ಆಗ ಜಮಖಂಡಿಯವರು ಜಿಲ್ಲಾ ನ್ಯಾಯಾಧೀಶರಾಗಿ ಕೊಲ್ಲಾಪುರಕ್ಕೆ ತೆರಳಿದ್ದರು. ನಂತರ ಕರ್ನಾಟಕ ರಾಜ್ಯವಾದ ಮೇಲೆ ಮತ್ತೆ ಧಾರವಾಡಕ್ಕೆ ಮರಳಿದ್ದರು. ಗುರುದೇವ ರಾನಡೆಯವರು ಧಾರವಾಡಕ್ಕೆ ಬಂದಾಗ ಜಮಖಂಡಿಯವರ ಬಂಗಲೆಯಲ್ಲೇ ವಾಸಮಾಡುತ್ತಿದ್ದರು. ನಮಗೆ ಎಲ್ಲಿಲ್ಲದ ಆನಂದವಾಗುತ್ತಿತ್ತು. ದಿನಾಲು ಅವರ ದರ್ಶನವಾಗುತ್ತಿತ್ತು. ಆ ದಿನಗಳಲ್ಲಿ ಗುರುದೇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುತ್ತಿದ್ದರು. 20 ಉಪನ್ಯಾಸದ ತಯಾರಿ ಮಾಡಿದ್ದರು, ಆದರೆ 14 ಉಪನ್ಯಾಸಗಳನ್ನು ಮಾತ್ರ ಕೊಟ್ಟರು. ಅವರನ್ನು ಕಾಣಲು ನಮ್ಮ ಕನ್ನೂರ ಕಾಕಾ ಅವರು ಬಂದಿದ್ದರು. ನನಗೆ ಹೇಳಿದರು, “ನಿಮ್ಮ ಅಪ್ಪ, ನಿಮ್ಮ ಅಜ್ಜ, ಎಲ್ಲರೂ ನಾಮಧಾರಕರು. ನೀನು ಗುರುದೇವ ರಾನಡೆಯವರಲ್ಲಿ ನಾಮ ಪಡೆದುಕೋ” ಎಂದು. ನಾನು ಒಪ್ಪಿದೆ. ನನಗೆ ಗುರುಗಳಿಂದ ನಾಮ ದೀಕ್ಷೆ ಕೊಡಿಸಿದರು. ನಂತರ ತಮ್ಮದೇ ಆದ ಸಲುಗೆಯ ದನಿಯಲ್ಲಿ ಅಂದರು, “ಏ ಲಡ್ಡಿಬಸಪ್ಪ, ಗುರುಗಳಿಂದ ದೀಕ್ಷಾ ಪಡೆದರಷ್ಟೇ ಸಾಕಾಗೋದಿಲ್ಲ. ಅವರನ್ನ ಮೆಚ್ಚಿಸುವಂತಹ ಕವಿತಾ ಬರಿ” ಎಂದು.

ಅದೇ ದಿನ ನಾನು ‘ಗುರು ಮಹಿಮೆ” ಎಂಬ ಒಂದು ಪದ್ಯವನ್ನು ಬರೆದೆ. ನಾನು ಸುದೈವದಿಂದ ವರಕವಿ ಬೇಂದ್ರೆಯವರ ಶಿಷ್ಯನಾಗಿದ್ದರಿಂದ, ಅವರ ಗರಡಿಯಲ್ಲಿ ಕಾವ್ಯರಚನೆಯ ತರಬೇತಿ ಪಡೆದಿದ್ದರಿಂದ, ಶೀಘ್ರದಲ್ಲಿ ಒಂದು ಕವಿತೆ ಬರೆಯುವುದು ಸಾಧ್ಯವಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರ ಮಾರ್ಗದರ್ಶನದಲ್ಲಿ ಹಲವಾರು ಕೃತಿಗಳನ್ನು ನಾನು ರಚಿಸಿದ್ದೆ. ನಾನು ಬರೆದ ‘ಗುರು ಮಹಿಮೆ” ಎಂಬ ಪದ್ಯ ಮುಖ್ಯವಾಗಿ ಗುರು ರಾನಡೆಯವರನ್ನೇ ಉದ್ದೇಶಿಸಿ ಇದ್ದರೂ, ಅದು ಸಾಮನ್ಯವಾಗಿ ಗುರು ಪರಂಪರೆಯ ಎಲ್ಲ ಗುರುಗಳಿಗೆ ಅನ್ವಯಿಸುವಂತಿತ್ತು. ಆ ಪದ್ಯವನ್ನು ನಾನು ಕನ್ನೂರ ಕಾಕಾ ಅವರಿಗೆ ತೋರಿಸಿದೆ. ಅವರು ಬಹಳ ಸಂತಸಪಟ್ಟರು. “ನೋಡು ಗುರಣ್ಣ. ನಾವೆಲ್ಲಾ ಈ ಹಾಲ್‌ನಲ್ಲಿ ಧ್ಯಾನಕ್ಕ ಕೂತಿರುವಾಗ ನೀನೂ ಕೂಡು. ಈ ಹಾಡು ನೀನೇ ಹಾಡು.” ಅಂದರು. ಅವರ ಮನದಲ್ಲಿ ಒಂದು ಗುಪ್ತ ಉದ್ದೇಶವಿತ್ತು. ಅದನ್ನು ಅವರು ನನಗೆ ಹೇಳಿರಲಿಲ್ಲ. ನನ್ನ ಹಾಡು ಅವರ ಕಿವಿಗೆ ಬೀಳಬೇಕು ಎಂಬುದು ಅವರ ಮನದ ಇಂಗಿತವಾಗಿತ್ತು ಎಂದು ನಂತರ ನನಗೆ ತಿಳಿಯಿತು. ನ್ಯಾಯವಾದಿ ಜಮಖಂಡಿ ಗುರುರಾಯರ ಬಂಗ್ಲೆಯ ಮಧ್ಯದಲ್ಲಿ ಒಂದು ಹಾಲ್ ಇತ್ತು. ಇತರ ಸಾಧಕರು ಆ ಹಾಲ್‌ನಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಆ ಹಾಲ್‌ನ ಬದಿಯ ಚಿಕ್ಕ ಕೋಣೆಯಲ್ಲಿ ಗುರುದೇವ ರಾನಡೆಯವರು ಧ್ಯಾನಕ್ಕೆ ಕೂತಿರುತ್ತಿದ್ದರು. ನಾನೂ ಹಾಲ್‌ನಲ್ಲಿ ಎಲ್ಲರ ಮಧ್ಯೆ ಧ್ಯಾನಕ್ಕೆ ಕುಳಿತೆ. ಮಧ್ಯದಲ್ಲಿ ಕೆಲವರು ಹಾಡು ಹಾಡುತ್ತಿದ್ದರು. ಅವರಿಂದ ಪ್ರೇರಣೆ ಪಡೆದು ನಾನು ನನ್ನ ಹಾಡು ನನಗೆ ಬಂದ ಶೈಲಿಯಲ್ಲಿ ಹಾಡಿದೆ. ನಾನೇನು ಹಾಡುಗಾರನಲ್ಲ. ಆದರೂ ಹಿರಿಯರ ಆದೇಶವನ್ನು ಪಾಲಿಸಿ ನನಗೆ ಬಂದ ಧಾಟಿಯಲ್ಲಿ ನಾನು ರಚಿಸಿದ ‘ಗುರು ಮಹಿಮೆ” ಎಂಬ ಹಾಡನ್ನು ಹಾಡಿದ್ದೆ. ನಂತರ ನಾನು ಹೊರಗೆ ಬಂದೆ. ಕನ್ನೂರ ಕಾಕಾ ಕೂಡಾ ಹೊರಗೆ ಬಂದರು. ನನ್ನನ್ನು ಅಪ್ಪಿಕೊಂಡು “ಶಾಬಾಶ್ ಮಗನೇ, ನೀನು ಪರೀಕ್ಷೆಯಲ್ಲಿ ಪಾಸಾದೆ” ಅಂದರು. ನನಗೆ ಅರ್ಥವಾಗಲಿಲ್ಲ. ಅವರು ನಂತರ ಬಿಡಿಸಿ ಹೇಳಿದರು, “ನನ್ನ ಉದ್ದೇಶ ನಿನ್ನ ಹಾಡು ಗುರುಗಳವರೆಗೆ ತಲುಪಬೇಕೆಂದು ಇತ್ತು. ಅದು ಗುರುಗಳನ್ನು ತಲುಪಿತು.” ನನಗೆ ಒಗಟದಂತಹ ಅವರ ಮಾತಿನ ಅರ್ಥವಾಗಲಿಲ್ಲ. ನಂತರ ಅವರು ಹೇಳಿದರು, “ನೀನು ಹಾಡು ಹಾಡುತ್ತಿರುವಾಗ ರಾಂಭೋ ಅವರು (ಗುರುದೇವ ರಾನಡೆಯವರು) ಎದ್ದು ಬಂದು ಬಾಗಿಲು ತೆರೆದು ನಿನ್ನನ್ನು ನೋಡಿದರು. ಮೆಚ್ಚಿ ತಲೆ ತೂಗಿದರು.” ಎಂದು.

ಸ್ವಲ್ಪೇ ಸಮಯದಲ್ಲಿ ಅದಕ್ಕೆ ಪ್ರಮಾಣ ದೊರೆಯಿತು. ಒಬ್ಬ ಸಾಧಕರು ನನ್ನೆಡೆಗೆ ಬಂದರು. “ಈಗ ತಾನೆ ಗುರುಮಹಿಮೆಯ ಬಗ್ಗೆ  ಹಾಡು ಹೇಳಿದವರು ನೀವೇನಾ?” ಎಂದು ಕೇಳಿದರು. ಹಾಂ ಎಂದೆ. ನಿಮಗೆ ಗುರುದೇವರು ಕರೆದಿದ್ದಾರೆ. ನಾನು ಗುರುದೇವರನ್ನು ಭೆಟ್ಟಿಯಾದೆ. “ನೀನು ಗುರುಮಹಿಮೆ ಅಂತ ಹಾಡಿದೆಯಲ್ಲ. ಆ ಹಾಡು ಯಾರು ಬರೆದಿದ್ದಾರೆ?” ಎಂದು ಪ್ರಶ್ನಿಸಿದರು. “ನಾನೇ ರಚಿಸಿದ ಹಾಡು”. ಎಂದು ಉತ್ತರಿಸಿದೆ. “ಆ ಹಾಡನ್ನು ದೇವನಾಗರಿ ಲಿಪಿಯಲ್ಲಿ ಬರೆದು ನನಗೆ ಕೊಡು” ಎಂದರು. ನಾನು ಅವರಿಂದ ನಾಮ ಪಡೆದದ್ದು ಅವರ ಸ್ಮರಣೆಯಲ್ಲಿತ್ತು. ನಾನು ಯಾರ ಮಗ, ಯಾರ ಮೊಮ್ಮಗ ಕೇಳಿ ತಿಳಿದು, “ಹಾಗಾದರೆ ನಿನ್ನದು ನಾಮಧಾರಕರ ಮೂರನೆಯ ಪೀಢಿ” ಎನ್ನುತ್ತ ಬೆನ್ನು ತಟ್ಟಿದರು. ಆ ದಿನ ನನ್ನ ಜೀವನದಲ್ಲಿಯ ಅಮೃತದಿನ, ನನಗೆ ಆ ಹಾಡು ಬರೆದ ದಿನ ಜ್ಞಾಪಕದಲ್ಲಿದೆ. 28 ಡಿಸೆಂಬರ್, 1956. ಆ ವರ್ಷ ನಾನು ಬಿ.ಎ.ಪಾಸಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿಗಾಗಿ ಓದುತ್ತಿದ್ದೆ.

ಅದೇ ದಿನ ಸಂಜೆ ನಾಲ್ಕು ಗಂಟೆಗೆ ಗುರುದೇವರ ಪ್ರವಚನವಿತ್ತು (ಆಂಗ್ಲಭಾಷೆಯಲ್ಲಿ). ನಾವೆಲ್ಲ ಗುರುವಾಣಿ ಕೇಳಲು ಉತ್ಸುಕರಾಗಿ ಆಸೀನರಾಗಿದ್ದೆವು. ನನ್ನನ್ನು ಕರೆದು, ಮುಂದೆ ಬಂದು ಕೂಡಲು ಗುರುಗಳು ಸಂಜ್ಞೆ ಮಾಡಿದರು. ತಮ್ಮ ಪ್ರವಚನದಲ್ಲಿ ಅವರು ಗುರುವಿನ ಮಹಿಮೆಯ ಬಗ್ಗೆ ಹೇಳತೊಡಗಿದರು. ನನಗೆ ಒಂದೊಂದೇ ಪಂಕ್ತಿ ಓದಲು ಹೇಳಿದರು. ನಾನು ವಾಚನ ಶುರು ಮಾಡಿದೆ:

“ಗುರು ಮಹಿಮೆಯ ಅರಿಯೆ ಹೊರಟು ವ್ಯರ್ಥ ಗಾಸಿಯಾದೆನೊ|
ಸಾಗರವನು ಈಸುಬಿದ್ದು ತೀರ ತೋರದಾದೆನೊ |ಪಲ್ಲ|”

ಗುರುದೇವರು ಇದರ ಬಗ್ಗೆ ವಿಸ್ತರಿಸತೊಡಗಿದರು. ತಮ್ಮ ಗುರುಗಳಾದ ಶ್ರೀ ಭಾವೂಸಾಹೇಬ ಮಹಾರಾಜರ ಮಹಿಮೆಯನ್ನು ಕೊಂಡಾಡತೊಡಗಿದರು. ತಮ್ಮ ಗುರುಗಳ ಮಹಿಮೆ ಸಾಗರದಷ್ಟೇ ವಿಶಾಲವಾಗಿತ್ತು ಎಂದರು. ಈ ಉಪಮೆ ಎಷ್ಟು ಸುಂದರವಾಗಿದೆ ಎಂದರು.

“ಮನದುಂಬಿಗೆ ಗುಂಗು ಹಿಡಿಸಿ ಮೈಮರೆತವನಾರೊ?
ಈ ಜೀವಕೆ ನಾದತುಂಬಿ ಕುಣಿಸುತಿರುವನಾರೊ?
ತಿಳಿನೀರಲಿ ಬಣ್ಣ ಕೆಡಹಿ ನೋಡುತಿರುವನಾರೊ?
ಶಬ್ದದಿಂದ ಮೌನದೆಡೆಗೆ ಕರೆಯುತಿರುವನಾರೊ?”

‘ತುಂಬಿ” ಶಬ್ದ ಕೇಳಿದಾಗ ಅವರಿಗೆ ಬಸವಣ್ಣನವರ ವಚನ (ನಿಮ್ಮ ಚರಣಕಮಲದಲಿ ಆನು ತುಂಬಿ) ನೆನಪಾಯ್ತು. ಜೀವಕ್ಕೆ ನಾದ ತುಂಬುವುದು ಎಂದರೇನು, ತಿಳಿನೀರಲಿ ಬಣ್ಣ ಹಾಕುವುದೆಂದರೇನು ವಿವರಿಸಿ, ‘ಶಬ್ದದಿಂದ ಮೌನದೆಡೆಗೆ” ಕರೆದೊಯ್ಯುವ ಗುರುವಿನ ಮಹಿಮೆಯ ಬಗ್ಗೆ ಹೆಚ್ಚು ವಿವರಣೆ ನೀಡಿದರು.

“ಹುಚ್ಚನೇನು ಜಗದ ಹುಚ್ಚು ಬಿಡಿಸ ಹೊರಟ ಮಾಂತ್ರಿಕ
ನಾಮ ಜಪವ ಕಲಿಸಿ ಜಗವ ಮರೆತ ದಿವ್ಯ ಅರ್ಚಕ
ನಾಮದಲ್ಲಿ ನವವಿಧದಾ ಭಕ್ತಿಯ ನಿರ್ದೇಶಕ
ನನ್ನ ಕಣ್ಗೆ ಕಣ್ಣಾಗಲು ಬೇಡುವೆ ನಾ ಸಾಧಕ”

ಈ ನುಡಿಯನ್ನು ವಿಸ್ತಾರವಾಗಿ ವಿವರಿಸಿದರು. ಗುರು ಹುಚ್ಚನಂತೆ ಕಾಣುತ್ತಾನೆ ಎನ್ನುತ್ತ ‘ಎಂಥಾ ಹುಚ್ಚು ಹಿಡಿದೀತಿಂವಗ ಯಾರು ಕಲಿಸಿ ಬಿಟ್ಟಾರವ್ವ” ಎಂಬ ದಾಸರ ಪದವನ್ನು ನೆನೆದರು. ಶಿಷ್ಯನ ಜಗದಹುಚ್ಚು ಬಿಡಿಸುವವ ಗುರು ತಾನು ಹುಚ್ಚ ಹೇಗಾದಾನು? ಇಲ್ಲಿ ಮಾತಿನ ಬೆಡಗಿದೆ ಎಂದರು. ನಾಮಸ್ಮರಣೆಯಲ್ಲಿ ನವವಿಧ ಭಕ್ತಿ ಹೇಗೆ ಅಡಗಿದೆ ಎಂಬುದರ ವಿವರಣೆ ನೀಡಿದರು. ‘ಕಣ್ಣಿಗೆ ಕಣ್ಣಾಗು” ಎಂತಹ ದೊಡ್ದವಿಚಾರ ಎನ್ನುತ್ತ ಹಿಂದೀ ಸಂತರು ಹೇಳಿದ ‘ಆಂಖಕಾ ಆಂಖ ಬನನಾ” ಎಂಬ ಮಾತನ್ನು ನೆನೆದು ಇಲ್ಲಿ ಅಡಗಿದ ವಿಚಾರ ವಿವರಿಸಿದರು.

“ಜಾತಿ-ಪಾತಿ, ಉಚ್ಚ-ನೀಚ, ಭಾವ ತೊಡೆದು ಹಾಕಿದ
ನನ್ನ ದೇಹ ಕ್ಷೇತ್ರದಲ್ಲಿ ನಾಮ ಬೀಜ ಬಿತ್ತಿದ
ಅಧ್ಯಾತ್ಮದ ಕಾರ್ಯಕೆಂದು ನನ್ನ ಹೃದಯ ಹೂಡಿದ
ಶಕ್ತಿಹೀನನಾದ ನನಗೆ ಮಂತ್ರಬಲವ ನೀಡಿದ”

‘ತೊಡೆದು” ಅಂದರೆ ಏನರ್ಥ? ಎಂದು ಕೇಳಿದರು. ಅಳಿಸಿಹಾಕು ಎಂದೆ. ‘ತೊಡೆ ಅಂದರೆ ಲೇಪಿಸು ಅಂತ ಕೂಡ ಅರ್ಥ ಇದೆಯಲ್ಲಾ” ಅಂದರು. ಭಗವದ್ಗೀತೆಯಲ್ಲಿ ಬರುವ ಕ್ಷೇತ್ರ-ಕ್ಷೇತ್ರಜ್ಞನ ವಿಚಾರ ವಿಸ್ತರಿಸಿದರು. ನಮ್ಮ ದೇಹ ಕ್ಷೇತ್ರವಾದರೆ ದೇವರು ಕ್ಷೇತ್ರಜ್ಞ ಅಂದರು. ಶಿಷ್ಯನಿಗೆ ಗುರು ಹೇಗೆ ಮಂತ್ರಬಲ ನೀಡುತ್ತಾನೆ ಎಂಬುದನ್ನು ವಿವರಿಸಿದರು.

“ಗುರುವೆ ಬ್ರಹ್ಮನೆಂಬ ಮಾತು ಸತ್ಯವಿದನು ಬಲ್ಲೆನು
ಬ್ರಹ್ಮನಿಹನೊ ಇಲ್ಲವೊ ಅವನ ನಾನು ಕಾಣೆನು
ಗುರುವೆ ನನಗೆ ಆಧಾರವು ಅವನನೆಂದು ಮರೆಯೆನು
ಪ್ರಳಯಮೇಘ ಗದರಿದರೂ ಅವನ ನಾನು ತೊರೆಯೆನು”

ಕೊನೆಯ ನುಡಿಯನ್ನು ಬಹಳ ವಿಸ್ತಾರವಾಗಿ ವಿವೇಚಿಸಿದರು. ಬ್ರಹ್ಮ ಇದ್ದಾನೋ ಇಲ್ಲವೋ ನಮಗೆ ಯಾಕೆ ಗೊತ್ತಿಲ್ಲ ಅಂದರೆ ಅದನ್ನು ಗೊತ್ತುಮಾಡಿಕೊಡುವವನೇ ಗುರು ಎಂದರು. ಪ್ರಳಯ ಮೇಘದ ಬಗ್ಗೆ ಹೇಳುತ್ತ, ಗುರು ಕೊಟ್ಟ ನಾಮಸ್ಮರಣೆ ನಿಲ್ಲಿಸಿದರೆ ಗುರುವನ್ನು ಬಿಟ್ಟಂತೆ ಎನ್ನುತ್ತ ಒಂದು ಉದಾಹರಣೆ ಕೊಟ್ಟರು. “ಗುರುವಿನಲ್ಲಿ ಇರುವ ವಿಶ್ವಾಸವೇ ನಾಮಸ್ಮರಣೆಯಲ್ಲಿರುವ ವಿಶ್ವಾಸ. ಒಬ್ಬ ಧ್ಯಾನಕ್ಕೆ ಕುಳಿತಿದ್ದ. ಅವನ ಮೈಮೇಲೆ ಒಂದು ಹಾವು ಹಾದುಹೋಯಿತು. ಆದರೂ ಅವನು ನಿಶ್ಚಲನಾಗಿಯೇ ಕುಳಿತಿದ್ದ ಎಂದರು. ಇಂಥ ಪದ್ಯ ಬರೆಯಬೇಕಾದರೆ ಪೂರ್ವಜನ್ಮದ ಸುಕೃತ ಬೇಕು” ಎಂದರು. ಅವರ ಪ್ರವಚನ ಮುಗಿದಿತ್ತು. ನಾನು ಆನಂದ ಸಾಗರದಲ್ಲಿ ತೇಲುತ್ತಿದ್ದೆ.

ಆಗ ಇನ್ನೊಂದು ಘಟನೆ ನಡೆಯಿತು. ಸಾಧನಕೇರಿಯಿಂದ ವರಕವಿ ಬೇಂದ್ರೆಯವರು ಗುರುದೇವ ರಾನಡೆಯವರ ಭೆಟ್ಟಿಗೆ ಬಂದರು. ‘ಯಾ ದತ್ತೋಪಂತ” ಎಂದು ಗುರುಗಳು ಅವರನ್ನು ಸ್ವಾಗತಿಸಿದರೆ, ಬೇಂದ್ರೆಯವರು ‘ರಾಂಭೋ! ದರ್ಶನಾಲಾ ಆಲೋ” ಎಂದರು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿದರು. ಆ ದೃಶ್ಯ ನೋಡುವಂತಿತ್ತು. ಅವರಿಬ್ಬರೂ ಮರಾಠಿಯಲ್ಲಿಯೇ ಮಾತಾಡಿದರು. ಬೇಂದ್ರೆಯವರು ನನ್ನನ್ನು ಕರೆದು ಒಂದು ರಟ್ಟೆ ಹಿಡಿದು ಗುರುದೇವರಿಗೆ ಪರಿಚಯಿಸುತ್ತ, “ಇವ ಒಳ್ಳೆ ಕವಿತಾ ಬರೆಯತಾನ. ಇವ ನಮ್ಮ ಹುಡುಗ. ಇವನಿಗೆ ನೀವು ಮಾರ್ಗದರ್ಶನ ಮಾಡಬೇಕು” ಎಂದರು. ಗುರುದೇವ ರಾನಡೆಯವರು ನನ್ನ ಇನ್ನೊಂದು ರಟ್ಟೆ ಹಿಡಿದು, “ಇವ ನಮ್ಮ ಶಿಷ್ಯ, ಕವಿತೆ ಬರೆಯುತ್ತಾನೆ. ಇವನಿಗೆ ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ” ಅಂದರು. ಇಬ್ಬರು ಮಹಾನುಭಾವರು ನನ್ನನ್ನು ಹಿಡಿದು ‘ಇವ ನಮ್ಮ ಹುಡುಗ”, ‘ಹಾ ಮಾಝಾ ಶಿಷ್ಯ” ಅಂದಾಗ ನನ್ನ ಜೀವನ ಧನ್ಯವಾಯಿತು ಎಂದೆನಿಸಿತ್ತು.

ಗುರುದೇವ ರಾನಡೆಯವರು ಸ್ವರ್ಗಸ್ಥರಾದಾಗ ನಾನು ‘ಗುರುದೇವನಿಗೆ ಶ್ರದ್ಧಾಂಜಲಿ” ಎಂಬ ಚರಮಗೀತವನ್ನು ಬರೆದೆ. ಆ ಕವಿತೆ ನನ್ನ ಪ್ರಥಮ ಕವನ ಸಂಗ್ರಹ “ಮಧುಸಂಚಯ”ದಲ್ಲಿ ಪ್ರಕಟವಾಗಿದೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. 1 ಟಿಪ್ಪಣಿ.

  1. Very good to read ,

    I need the list of publications, and wish to by and read.

    Please mail the details to svkotbagi@yahoo.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: