Poet Chennaveera Kanavi 81, felicitated in Dharwad, part-2 -ಮಧುರಚೆನ್ನರ ಮಧುರಗೀತ ಕುರಿತು ಕಣವಿ

ಕನ್ನಡದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಚೆನ್ನವೀರ ಕಣವಿಯವರಿಗೆ ಈಗ 81. ಈ ಸಂದರ್ಭಕ್ಕೆ ತಕ್ಕದಾದ ಒಂದು `ಸಾಹಿತ್ಯಾಭಿನಂದನೆಯ ಕಾರ್ಯಕ್ರಮ ಕರ್ನಾಟಕದಲ್ಲಿ (ಧಾರವಾಡದಲ್ಲಿ) ನಡೆಯಿತು (6.7.2008). ಅವರ `ಮಧುರಚೆನ್ನರ ನೆನಪಿಗೆ’ ಎಂಬ ಪದ್ಯದ ಬಗ್ಗೆ ಇಲ್ಲಿ ರಸವಿಮರ್ಶೆಯ ಮಾಡಿ ನಾನು ಒಂದು ರೀತಿಯಿಂದ ನುಡಿ ನಮನ ಸಲ್ಲಿಸುತ್ತಿರುವೆ. – ಜೀವಿ.

Madhura chenna‘ದೇವತಾ ಪೃಥಿವಿ” ಮಧುರಚೆನ್ನರ ಸಾಧನೆಯ ಒಂದು ಸ್ಥಿತಿಯನ್ನು ಪ್ರಕಟಿಸುವ ಒಂದು ಮಹತ್ವದ ಕವಿತೆ. ಅದರ ಪ್ರಸ್ತಾಪನೆ ಈ ಪದ್ಯದಲ್ಲಿದೆ. ಜೀವನು ದೇವರ ಪ್ರೇರಕತ್ವವನ್ನು ಒಪ್ಪಿಕೊಳ್ಳುವ ಸ್ಥಿತಿ, ಮಧುರಚೆನ್ನರ ಪ್ರಕಾರ ಅದುವೆ ಪಾರಮಾರ್ಥಿಕತೆ. ‘ಬೆಳಗು” ಎಂಬ ಅವರ ಆತ್ಮಕಥನದಲ್ಲಿ ಈ ಸ್ಥಿತಿಯ ಬಗ್ಗೆ ಬರೆದಿದ್ದಾರೆ. ಸಾಧನೆಗೆ ಮುನ್ನಡೆದಾಗ ಹೊಸ ಸಂಕಟಗಳು ಉದ್ಭವಿಸುತ್ತವೆ. ಅದಕ್ಕೆ ಕಾಳರಾತ್ರಿ ಅನ್ನುತ್ತಾರೆ. (ಡಾರ್ಕ ನೈಟ್ ಆಫ್ ದಿ ಸೋಲ್). ಮಧುರಚೆನ್ನರು ‘ದೇವಾತಾ ಪೃಥಿವಿ”ಯಲ್ಲಿ ಹೀಗೆ ಬರೆಯುತ್ತಾರೆ:

“ಹಸಿವೀಗೆ ಮೊಲೆಯುಂಡೆ ಕಸವೀಸಿಗೇನುಳ್ಳೆ |
ಹಾಲೊಲ್ಲೆ ಸಾಕು ಬಿಗಿದಪ್ಪ | ತಾಯಮ್ಮ|
ಮಲಗಿರುವ ತಾಯಿ ಪೃಥಿವೀ ||”

ಮುಂದೆ ಹೇಳುತ್ತಾರೆ:

“ಮೊಲೆಹಾಲು ರುಚಿಗೊಂಡು ಮನದ್ಹಾಲ ಬಯಸೀನ |
ಗುಟುಕುಗುಟುಕಿಗೊಮ್ಮೆ ಮಿಕಿ ಮಿಕಿ | ಏಳಮ್ಮ |
ಮಲಗಿರುವ ತಾಯಿ ಪೃಥಿವೀ ||”

ಮೊಲೆಹಾಲು ಸವಿದ ಮೇಲೆಯೇ ಮನದ ಹಾಲನ್ನು ಬಯಸುವುದು ಸಾಧಕನ ಅಂತರಂಗದ ಅಳಲು. “ಪೃಥ್ವಿಯ ಒಡಲಿನಲ್ಲಿಯೇ ದೇವತ್ವವನ್ನು ಕಾಣುವ ಹಂಬಲ, ಜಡಚೇತನಗಳೆಂಬುವು ಒಂದೇ ಶಕ್ತಿಯ ಭಿನ್ನ ರೂಪಗಳು.” ಎನ್ನುತ್ತಾರೆ ಕೀರ್ತಿನಾಥರು. ಅವರೇ ಹೇಳುತ್ತಾರೆ, “ ಭಾಷೆಗೆ ಪ್ರಾಣಶಕ್ತಿ ಹಾಗೂ ಮಂತ್ರಶಕ್ತಿ ಬೇಕು. ಈ ಎಲ್ಲ ಗುಣಗಳು ‘ದೇವತಾ ಪೃಥಿವಿ”ಯಲ್ಲಿರುವುದೇ ಅದರ ಯಶಸ್ಸಿಗೆ ಕಾರಣವಾಗಿದೆ.” ಎಂದು. ಬೇಂದ್ರೆಯವರು ಈ ಕವಿತೆಯನ್ನು ಮೆಚ್ಚಿ, ಇದು ಮಧುರಚೆನ್ನರ ‘ಕೃತಿಶಿರೋರತ್ನ”ವೆನ್ನುತ್ತಾರೆ.

“ಹರಿಗಡಿದ ಬಾಳಿನೊರತೆಯ ತೋಡೆ, ಪ್ರೀತಿಜಲ
ಸೆಲೆಯೊಡೆದು ಬರೆ ಮಧುರಗೀತವಾಗಿ
ಹಲವನೆಲ್ಲವನುಳಿದು ಹಾಡಿ ಮೀಸಲುಗವಿತೆ
ಚಲುವಿನಲ್ಲಿಯೆ ಬೆರತೆ ಬಯಕೆ ಮಾಗಿ!”

ಕಣವಿಯವರ ಮೇಲಿನ ಚರಣದಲ್ಲಿ ಮಧುರಚೆನ್ನರ ಇನ್ನೊಂದು ಮಹತ್ವದ ಪದ್ಯ ‘ಮಧುರಗೀತ”ದ ಪ್ರಸ್ತಾಪ ಮಾಡುತ್ತಾರೆ.

‘ಮಧುರಗೀತ” ಮಧುರಚೆನ್ನರ ನೂರು ನುಡಿಗಳ ಒಂದು ನೀಳ್ಗವಿತೆ. ‘ವಿಮರ್ಶಕರು ಇದನ್ನು ಮೈತ್ರಿಯೋಗದ ಖಂಡಕಾವ್ಯವೆಂದೇ ಕರೆದಿದ್ದಾರೆ” ಎನ್ನುತ್ತಾರೆ ಡಾ| ಗುರುಲಿಂಗ ಕಾಪಸೆ. ಇಲ್ಲಿ ಗೆಳೆತನದ ಚಿತ್ರಣದ ಜೊತೆಗೆ ಅಧ್ಯಾತ್ಮಿಕ ಹಾಗೂ ತಾತ್ವಕ ವಿಚಾರಗಳೂ ಸೇರಿವೆ. ಇದರಲ್ಲಿ ಐದು ಭಾಗಗಳು, ಅವಕ್ಕೆ ‘ಮುದ್ದು” ಎಂದು ಕರೆಯಲಾಗಿದೆ. ಪ್ರತಿ ಮುದ್ದಿನಲ್ಲಿ ಇಪ್ಪತ್ತು ನುಡಿಗಳಿವೆ. ಇಲ್ಲಿ ಪ್ರೇಮ-ಮೋಹಗಳ ವ್ಯತ್ಯಾಸ, ಸ್ವಾರ್ಥ-ನಿಸ್ವಾರ್ಥ ಭಾವಗಳ ಚರ್ಚೆ; ನಾವೇಕೆ ಹುಟ್ಟಿದೆವು, ದೇವರ ಅಸ್ತಿತ್ವವೇನು ಎಂಬ ಜಿಜ್ಞಾಸೆ; ವಿಚಾರ ಹಾಗೂ ಆಚಾರಕ್ಕೆ ಇರುವ ಅಂತರ, ಗೆಳೆತನದ ಆದರ್ಶಗಳ ಚಿತ್ರಣ; ಸತ್ಯ-ಪ್ರೀತಿಗಳ ಸಂಬಂಧಗಳು ಇವೆ. ಕೊನೆಯ ಭಾಗ ಗೆಳೆತನದ ಬಗ್ಗೆ ಇದೆ. ಮಿತ್ರ ವೀರಣ್ಣನನ್ನು ಕುರಿತು ಬರೆದ ಪದ್ಯವಿದು. ಇವರಿಬ್ಬರ ಪ್ರೇಮದ ಕುರುಹಾಗಿ ‘ಮಧುರಚೆನ್ನ” ಎಂಬ ಕಾವ್ಯನಾಮ ಮಧುರಚೆನ್ನರು ಪಡೆದದ್ದು ತಿಳಿಯುತ್ತದೆ:

“ ಜನರಾಡಿಕೊಳಬಹುದು ನನಗು ನಿನಗೂ ಕೂಡೆ |
ಅವರೇನು ಬಲ್ಲರೋ ಒಳನಿಧಾನ |
ನನಗೆ ನೀನತಿ ಮಧುರ ನಿನಗೆ ನಾ ಬಲು ಚೆನ್ನ |
ಹೀಗೆಂತಲೆ ನಾವು ‘ಮಧುರಚೆನ್ನ” ||”

ಕಣವಿಯವರ ಪದ್ಯದ ಮುಂದಿನ ಚರಣ ಹೀಗಿದೆ:

“ನಿಶ್ಶಬ್ದ ನಿಶ್ಶಬ್ದ ಶಬ್ದದಾಚೆಯೆ ಶಬ್ದ”-
ಮೌನ ಕೋಗಿಲೆಯದನೆ ಧ್ಯಾನಿಸಿತ್ತು!
ಸೂರ್ಯಕಾಂತಿಯ ಚಿತ್ತವದರ ಸುಳಿವಿಗೆ ಹೊರಳಿ
ಬೆಳಕಿನೊಳಗಿನ ಬೆಳಕು ಹೀರುತಿತ್ತು!”

ಈ ನುಡಿಯಲ್ಲಿ ಮಧುರಚೆನ್ನರ ಅತ್ಯಂತ ಹಾಗೂ ಮಹತ್ವಾಕಾಂಕ್ಷಿ ಕಾವ್ಯ, “ನನ್ನ ನಲ್ಲ”ದ ಪ್ರಸ್ತಾಪವಿದೆ. ಮಧುರೆಚೆನ್ನರು ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ಸಾಧನೆಯನ್ನು ಆರಂಭಿಸಿದರು. ಅವರ ಭಕ್ತಿ ಸತಿ-ಪತಿ ಭಾವದ್ದು. ‘ಶರಣಸತಿ, ಲಿಂಗ ಪತಿ” ಎಂದು ನಂಬಿ ಈಶ್ವರನನ್ನು ಒಲಿಸುವ ದಾರಿ. ಇದು ಅವರ ಆತ್ಮಾನುಭವದ ಕಾವ್ಯ. ಇಲ್ಲಿ ಐದು ಎಸಳುಗಳಿವೆ. ಪ್ರತಿ ಎಸಳಿನಲ್ಲಿ ಇಪ್ಪತ್ತು ನುಡಿಗಳಿವೆ. ಪ್ರತಿ ಎಸಳಿನ ಕೊನೆಗೆ ಬರುವ ನುಡಿ ಇದು:

“ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು |
ಬಯಕೆ ಬರುವುದರ ಕಣ್ಸನ್ನೆ ಕಾಣೋ |
ಅರಿಯದಾ ಹವಣಿಕೆಯು ಜೀವ ಜೀವನ ಲೀಲೆ |
ದೇವ ದೇವನ ಗೂಢವಿಧಿಯು ಕಾಣೋ |”

Chennaveera Kanavi (Courtesy : indianautographs.com)ಮೊದಲನೆಯ ಭಾಗದಲ್ಲಿ ಹನ್ನೆರಡನೆಯ ವಯಸ್ಸಿಗೆ ದೇವರಾಯನ ಹೆಸರು ಕೇಳಿ ಅವನಲ್ಲಿ ಮರುಳಾದ ಕನ್ನೆಯ ವರ್ಣನೆ ಇದೆ. ಶರಣ ಸತಿ, ಲಿಂಗ ಪತಿ ಎಂಬ ಭಾವವಿದೆ. ಎರಡನೆಯ ಭಾಗದಲ್ಲಿ ಪತಿಯ ಶೋಧವಿದೆ. ಮೂರನೆಯ ಭಾಗದಲ್ಲಿ ಪ್ರಕೃತಿಯೊಡನೆ ಪರಮಾತ್ಮನ ಅನುಸಂಧಾನ ನಡೆಯುತ್ತದೆ. “ನಿಲ್ಲು ನಿಲ್ಲೆಲೆ ನವಿಲೆ ನಿನ್ನ ಕಣ್ಣುಗಳೇಸು | ಕಣ್ಣ ಬಣ್ಣಗಳೇಸು ಎಣಿಸಲಾರೆ | ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ | ತಾಳಲಾರದು ಜೀವ ಹೇಳಬಾರೆ” ಎನ್ನುತ್ತ, ನವಿಲೆ ನೀನಾದರೂ ದೇವರನ್ನು ಕಂಡಿದ್ದೀಯಾ, ಕಂಡಿದ್ದರೆ ತೋರಿಸು ಎಂಬ ಭಾವವಿದೆ. ನಾಲ್ಕನೆಯ ಭಾಗದಲ್ಲಿ ತಮಗಾದ ದಿವ್ಯಾನುಭವದ ಚಿತ್ರಣವಿದೆ. ಈ ದಿವ್ಯಾನುಭವವನ್ನು ‘ಬ್ರಹ್ಮಸಂಸ್ಪರ್ಶ”ವೆಂದು ತಮ್ಮ ಆತ್ಮಕಥೆಯಲ್ಲಿ ವಿವರಿಸಿದ್ದಾರೆ. “ನಿಶ್ಶಬ್ದ ನಿಶ್ಶಬ್ದ ಶಬ್ದದಾಚೆಯ ಶಬ್ದ | ನಿಶ್ಶಬ್ದವೆಂದರೂ ಮೌನವಲ್ಲ | ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ | ನಿಸ್ಸೀಮವೆಂದರೂ ಶೂನ್ಯವಲ್ಲ”. ಈ ನುಡಿ ಆರು ಸಲ ಪುನರಾವರ್ತನೆ ಗೊಂಡಿದೆ. ಹಿಂದೆ ನಿರಾಶೆ ಕವಿದಾಗ, “ಬಣ್ಣದಾ ಹಣ್ಣುಗಳ ತಿಂದು ತೇಗಲು ಬಹುದೆ | ಚಿತ್ರದಾ ಮಲ್ಲಿಗೆಯ ಮೂಸಬಹುದೆ? | ಮಣ್ಣಗೊಂಬೆಯ ಮೆಚ್ಚಿ ಮಾತನಾಡಿಸಬಹುದೆ | ಹೊಗೆಯ ಹೊಳೆ ಯಾರಾರೆ ಈಸಬಹುದೇ?” ಎಂದು, ಪ್ರಾರಂಭದ ಹುಡುಕಾಟದಲ್ಲಿ ಪ್ರಶ್ನಿಸಿದ್ದರು. ಈಗ ಸ್ಥಿತಿ ಬದಲಾಗಿದೆ. ಹೊಸ ಅನುಭವ ಬಂದಿದೆ. ಆ ಮಾತು, ಆ ದೃಶ್ಯ ಬದಲಾಗುತ್ತದೆ. “ಬಣ್ಣದಾ ಹಣ್ಣುಗಳ ತಿಂದು ತೇಗಲುಬಹುದು | ಚಿತ್ರದಾ ಮಲ್ಲಿಗೆಯ ಮೂಸಬಹುದು | ಮಣ್ಣಗೊಂಬೆಯ ಮೆಚ್ಚಿ ಮಾತನಾಡಿಸಬಹುದು | ಹೊಗೆಯ ಹೊಳೆ ಈವಾಗ ಈಸಬಹುದು” ಎಂದು ಧನಾತ್ಮಕವಾಗಿ ಸ್ಪಂದಿಸುತ್ತಾರೆ. ಐದನೆಯ ಎಸಳಿನ ಪ್ರಾರಂಭದಲ್ಲಿ ಈ ಸಾಲುಗಳಿವೆ, “ತಂದೆ ನೀ ಕಣ್ತೆರೆದರಂದಿಗರುಣೋದಯವು | ಮುಂದೆ ಸೂರ್ಯೋದಯದ ಚಿಂತೆಯಿಲ್ಲ | ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು | ಇಂದೊಳಗು ಹೊರಗು ಬೆಳಗಾಯಿತಲ್ಲ | ” ಎಂಬ ಉದ್ಗಾರ ತೆರೆಯುತ್ತಾರೆ.

ಕಣವಿಯವರ ಮುಂದಿನ ನುಡಿ ಹೀಗಿದೆ:
“ಇಲ್ಲಿ ಊರಿದ ಬೀಜವಲ್ಲಿ ಹಣ್ಣಾಗಿತ್ತು
ಆಕಾಶದಡವಿಯಲಿ ಕೊಂಬೆ ಚಾಚಿ
ಮರದ ನೆರಳಲಿ ತನ್ನ ನೆರಳನರಸಲು ಬಹುದೆ?
ಅರಿತವರಿಗಂತದುವೆ ಆತ್ಮಸೂಚಿ!”

ಈ ನುಡಿಯು ಮಧುರಚೆನ್ನರ ಜೀವನ-ಸಾಧನೆಯ ಬಗ್ಗೆ ಕವಿ ಕಣವಿಯವರು ಬರೆದ ಟಿಪ್ಪಣಿಯಾಗಿದೆ. ಮಧುರಚೆನ್ನರು ಮಣ್ಣಿನಮಗನಾಗಿ ಹುಟ್ಟಿಬೆಳೆದವರು. ನೆಲದಲ್ಲಿ ಅಂದು ಅವರು ಬಿತ್ತಿದ ಬೀಜ ಬೆಳೆದು ಹಣ್ಣಾಗಿ ಆಕಾಶದಲ್ಲಿ ಕೊಂಬೆಯನ್ನು ಚಾಚಿದ್ದನ್ನು ಕಾಣುತ್ತಾರೆ. ಈ ಮರದ ನೆರಳಿನಲ್ಲಿ ನಮ್ಮ ನೆರಳು ಅರಸುವಂತಿಲ್ಲ. ಇಲ್ಲಿ ನಾವು ಒಂದಾಗುತ್ತೇವೆ, ಇದೆ ಆತ್ಮಸೂಚಿಯಾಗಿದೆ ಎಂಬ ಭಾವವಿದೆ.

ಕೊನೆಯ ಚರಣ ಹೀಗಿದೆ:
“ತನುವು ನಿಸದಿಗೆಗಲ್ಲು ಮನವು ಮಾಸತಿ ಕಲ್ಲು
ನಿಮ್ಮ ಸಾಧನೆಯೊಂದು ವೀರಗಲ್ಲು!
ಭಾವ ದೇವಾಲಯದಿ ನಿತ್ಯ ನಂದಾದೀಪ
ಶರಣು ಶರಣೆಂಬುದೇ ಕೊನೆಯ ಸೊಲ್ಲು!”

ಕೊನೆಗೆ ಮಧುರಚೆನ್ನರ ಮಹಾಚೇತನಕ್ಕೆ ಶರಣೆನ್ನುತ್ತಾರೆ. ಅವರ ತನು ನಿಸದಿಗೆಗಲ್ಲು (ಸಮಾಧಿಕಲ್ಲು) ಆಗಿದ್ದರೆ, ಅವರ ಮನ ಮಹಾಸತಿ ಕಲ್ಲು (ಪತಿವ್ರತೆಯ ಕುರುಹು), ಇನ್ನು ಅವರ ಜೀವನದ ಸಾಧನೆ ವೀರಗಲ್ಲು ಎನ್ನುತ್ತಾರೆ. ಪ್ರತಿಯೊಬ್ಬ ಸಾಧಕನೂ ಅಧ್ಯಾತ್ಮಯುದ್ಧದ ಸೈನಿಕನೇ, ಅವನಿಗೆ ಗೆಲವಾದರೆ ಅವನು ಭಕ್ತಿಸಾಮ್ರಾಜ್ಯದ ಅಧಿಪತಿಯಾಗುತ್ತಾನೆ, ಸಾವನ್ನಪ್ಪಿದರೆ ಅಮರತ್ವ ಪಡೆಯುತ್ತಾನೆ. ನಿಸದಿಗೆಗಲ್ಲು, ಮಾಸತಿ ಕಲ್ಲು ಮತ್ತು ವೀರಗಲ್ಲುಗಳು ಅಮರತ್ವದ ಸಂಕೇತಗಳಾಗಿ ತೋರುತ್ತವೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: