Purity in love is the greatest love – ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’ ಭಾಗ-4

ದ್ವೇಷ ಮಹಾ ದೋಷ. ದ್ವಿವಿಷ ಎಂದರೆ ವಿಷದ ಎರಡು ಪಾಲು ಅದುವೆ ದ್ವೇಷ. ಯಾರು ದ್ವೇಷ ಮಾಡುತ್ತಾರೆ, ತಾವೂ ಉರಿಯುತ್ತಾರೆ, ಇತರರನ್ನೂ ಉರಿಸುತ್ತಾರೆ. ದ್ವೇಷದಿಂದ ಮನುಷ್ಯ ನಡೆದಾಡುವ ವಿಷದ ಕಾರ್ಖಾನೆಯಾಗುತ್ತಾನೆ. ಶೈಶವ, ಬಾಲ್ಯಗಳಲ್ಲಿ ತಂದೆತಾಯಂದಿರ ಪರಿಶುದ್ಧ ಪ್ರೀತಿಯನ್ನು ಕಂಡರಿಯದ ಮಕ್ಕಳು ದುಷ್ಟರೂ, ಭ್ರಷ್ಟರೂ, ಕ್ರೂರಿಗಳೂ ಆಗುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.

ಅಧ್ಯಾಯ ನಾಲ್ಕು : ಪ್ರೀತಿಯ ಪ್ರಚಂಡ ಪ್ರಭಾವ

“ಜಗತ್ತೇ ಪರಿಶುದ್ಧ ಪ್ರೀತಿಗಾಗಿ ಆತುರದಿಂದ ಹಾತೊರೆಯುತ್ತಿದೆ. ಪ್ರತಿಫಲವನ್ನಪೇಕ್ಷಿಸದೆಯೇ ನಾವದನ್ನು ಹಂಚಬೇಕು. ಪ್ರೀತಿಗೆ ಎಂದಿಗೂ ಅಪಜಯವಿಲ್ಲ. ಇಂದೋ, ನಾಳೆಯೋ, ಶತಮಾನಗಳ ನಂತರವೋ ಸತ್ಯ ಮಾತ್ರವೇ ಜಯಿಸುವುದು. ಪ್ರೀತಿಯು ಜಯವನ್ನು ತಂದೇ ತರುವುದು. ನೀವು ನಿಮ್ಮ ಸಹೋದರರನ್ನು ಪ್ರೀತಿಸುವಿರೇನು? ಪ್ರೀತಿಯ ಸರ್ವಶಕ್ತತೆಯಲ್ಲಿ ನಂಬಿಕೆ ಇಡಿ. ನಿಮ್ಮಲ್ಲಿ ಪರಿಶುದ್ಧ ಪ್ರೀತಿ ಇದೆಯೆಂದಾದರೆ ನೀವೇ ಸರ್ವಶಕ್ತರು.” – ವಿವೇಕಾನಂದ

“ಪರಿಶುದ್ಧ ಪರಿಪೂರ್ಣ ಪ್ರೀತಿಯು ಭೀತಿಯನ್ನು ದೂರಕ್ಕೆಸೆಯುವುದು'” – ಏಸು ಕ್ರಿಸ್ತ

“ಪರಿಶುದ್ಧ ನಿಸ್ವಾರ್ಥ ಪ್ರೀತಿ ಒಂದು ದೈವೀ ಶಕ್ತಿ. ಶ್ರದ್ಧೆ, ಭರವಸೆ ಮತ್ತು ಪ್ರೀತಿ ಇವುಗಳಲ್ಲಿ ಪ್ರೀತಿಯೇ ಅತ್ಯಂತ ಮಹಿಮಾನ್ವಿತವಾದುದು.'” -ಸಂತ ಪೌಲ.

ಸುರಕ್ಷಿತ ದಂಪತಿಗಳ ರೋಚಕ ಕತೆ ಹೇಳುತ್ತಾರೆ. ಇಬ್ಬರೂ ಒಂದೇ ಕಾಲೇಜಿನ ಪ್ರಾಧ್ಯಾಪಕರು. ಇಬ್ಬರಲ್ಲಿ ಮತಭೇದವಿತ್ತು. ಒಮ್ಮೆ ಅವರಲ್ಲಿ ವಾಗ್‌ಯುದ್ಧ ವಿಕೋಪಕ್ಕೆ ಹೋದಾಗ ಗಂಡ ಹೆಂಡತಿಯ ಕೆನ್ನೆಯನ್ನು ಬಾರಿಸಿದ. ಅವಳು ಕುಪಿತಳಾಗಿ ತವರಿಗೆ ತೆರಳಿದಳು. ಕೆಲಕಾಲದ ನಂತರ ಗಂಡನಿಗೆ ವಿಪರೀತ ವಿಷಮಜ್ವರದ ಬಾಧೆಯಾಗಿ ಹಾಸಿಗೆ ಹಿಡಿದಿದ್ದಾನೆಂಬ ಸುದ್ದಿ ಅವಳಿಗೆ ಬಂತು. ಏನು ಮಾಡುವುದು ತಿಳಿಯದಾಯಿತು. ಅವಳು ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ಕಂಡಳು. `ಸ್ತ್ರೀ ಹಾಗೂ ಪುರುಷರು ಒಂದು ರಥದ ಎರಡು ಚಕ್ರಗಳಿಂದ್ದಂತೆ. ಎರಡೂ ಒಂದೇ ದಿಕ್ಕಿನೆಡೆ ನಡೆಯಬೇಕು. ಎರಡೂ ಬೇರೆ ಬೇರೆ ದಿಕ್ಕಿನೆಡೆ ಎಳೆದಾಡಿದರೆ ರಥದ ದುರ್ದೆಶೆಯಾಗುತ್ತದೆ. ಪ್ರಪಂಚ ಒಂದು ಆಟ. ಅದರಲ್ಲಿ ಭೇದ ಸ್ವಾಭಾವಿಕ. ಪುರುಷ ಶೌರ್ಯ ಹಾಗೂ ಔದಾರ್ಯದ ಮೂರ್ತಿಯಾಗಬೇಕು. ಸ್ತ್ರೀಯಲ್ಲಿ ಸಹನೆ ಮತ್ತು ಅನನ್ಯ ಶರಣಾಗತಿಗಳು ಮೈತಾಳಬೇಕು. ಸಂಸಾರದಲ್ಲಿ ಸೋಲುವುದು ಸ್ತ್ರೀಯ ಸಹನಶೀಲತೆಯ ಪರೀಕ್ಷೆ. ಜಗತ್ತು ಒಂದು ನಾಟಕ. ನಿಮ್ಮ ಪಾತ್ರ ನೀವು ಸರಿಯಾಗಿ ನಿಭಾಯಿಸಬೇಕು’ ಎಂದು ಮುಂತಾಗಿ ಬೋಧಿಸಿದರು. `ಗುರುಗಳೇ, ಈಗ ನಾನೇನು ಮಾಡಲಿ ಹೇಳಿರಿ?’ ಎಂದವಳು ಪ್ರಶ್ನಿಸಿದಾಗ ಗುರುಗಳೆಂದರು, “ಮೊದಲಗಾಡಿ ಹಿಡಿದು ನೀನು ನಿಮ್ಮ ಯಜಮಾನರಿವಲ್ಲಿಗೆ ಹೋಗು. ಹಿಂದೆ ಏನೂ ನಡೆದಿಲ್ಲವೆನ್ನುವಂತೆ ಭಾವಿಸಿ ಅವರ ಶುಶ್ರೂಷೆ ಮಾಡು. ಪ್ರತಿ ದಿನ ಬೆಳಿಗ್ಗೆ ಅವರಿಗೆ ನಮಸ್ಕರಿಸು.” ಎಂದು. ಪತಿಯ ಕಾಯಿಲೆ ಗುಣಮುಖವಾಯ್ತು. ಇವಳು ಅವರ ಸೇವೆ ಮಾಡಿದಳು. ಅವಳು ನಮಸ್ಕರಿಸುವಾಗ ಅವರಿಗೆ ಅಳುವೇ ಬಂತು. ಬಹಳ ಪಶ್ಚಾತ್ತಪವಾಗಿತ್ತು. ನಿನ್ನ ಬದಲಾವಣೆ ಕಂಡರೆ ಯಾರೋ ಮಹಾತ್ಮರು ನಿನಗೆ ಹೀಗೆ ವರ್ತಿಸಲು ಹೇಳಿರಬೇಕು. ಮುಂದೆ ನನ್ನಿಂದ ಇಂಥ ತಪ್ಪು ಆಗದು ಎಂದು ವಚನ ಕೊಡುತ್ತೇನೆ ಎಂದನಂತೆ ಪತಿ. ಅವರಿಗೆ ಒಂದು ಗಂಡು ಮಗುವಾಯ್ತು. ಇಬ್ಬರೂ ಸಂತರ ದರುಶನ ಪಡೆದು ಕೃತಕೃತ್ಯರಾದರು.

ಅಮೇರಿಕೆಯ ಬಾಲ್ಟಿಮೋರ್‌ನಲ್ಲಿಯ ಸಮಾಜಶಾಸ್ತ್ರದ ಪ್ರಾಧ್ಯಾಪಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಕೊಳಚೆಪ್ರದೇಶದಲ್ಲಿ ವಾಸಿಸುವ ಎಳೆಯ ಮಕ್ಕಳನ್ನು ಕುರಿತು ಅಭ್ಯಾಸ ಮಾಡಲು ಹೇಳಿದರಂತೆ. ಅವರುಗಳು 200 ಎಳೆಯರನ್ನು ಸಂದರ್ಶಿಸಿ ಮಾಹಿತಿ ಕಲೆಹಾಕಿದರಂತೆ. ಮಕ್ಕಳು ವಾಸಿಸುತ್ತಿದ್ದ ವಾತಾವರಣ ಭಯಾನಕವಾಗಿತ್ತು, ಅಸಹ್ಯವಾಗಿತ್ತು. ಈ ಮಕ್ಕಳಲ್ಲಿ ಶೇಕಡಾ 90ರಷ್ಟು ಮಕ್ಕಳು ದುಷ್ಟರಾಗಿ ಬೆಳೆದು ಜೈಲುವಾಸ ಮಾಡುವರೆಂದು ಭವಿಷ್ಯ ನುಡಿಯಲಾಗಿತ್ತು. ಇಪ್ಪತ್ತೈದು ವರ್ಷಗಳ ನಂತರ ಅದೇ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಇನ್ನೊಂದು ತಂಡವನ್ನು ಆ ಕೊಳಚೆ ಪ್ರದೇಶಕ್ಕೆ ಕಳಿಸಿದರು. ಹಿಂದೆ ತಮ್ಮ ವಿದ್ಯಾರ್ಥಿಗಳು ಮಾಡಿದ ಅಭ್ಯಾಸದ ಪರಿಣಾಮಗಳನ್ನು ನೋಡಲು ಉತ್ಸುಕರಾಗಿದ್ದರು. ಹಿಂದೆ ಸಂಪರ್ಕಿಸಿದ ಎಳೆಯರೀಗ ದೊಡ್ಡವರಾಗಿದ್ದರು. ಅವರಲ್ಲಿ 90 ಜನರನ್ನು ಸಂಪರ್ಕಿಸಲು ಸಾಧ್ಯವಾಗಿತ್ತು. ಹಿಂದಿನವರು ನುಡಿದ ಭವಿಷ್ಯ ಸುಳ್ಳಾಗಿತ್ತು. ಅವರೆಲ್ಲರೂ ಸಭ್ಯ ನಾಗರಿಕರಾಗಿದ್ದರು. ಇವರ ಪರಿವರ್ತನೆಯ ಗುಟ್ಟೇನು?

ಹೊಸ ಅಭ್ಯಾಸದಿಂದ ತಿಳಿದ ವಿಷಯ ಹೀಗಿತ್ತು: ಈ ಕೊಳಚೆ ಪ್ರದೇಶದಲ್ಲಿದ್ದ ಶಾಲೆಯಲ್ಲಿ ಶೀಲಾ ರೂರ್ಕೆ ಎಂಬ ಅಧ್ಯಾಪಕಿಯಿದ್ದಳು. ಅವಳ ಪ್ರಭಾವ ಮಕ್ಕಳ ಮೇಲೆ ಬಹಳ ಆಗಿತ್ತು ಎಂಬುದು ಕಂಡು ಬಂತು. ಆ ಅಧ್ಯಾಪಕಿ ನಿವೃತ್ತಳಾಗಿ ಬಹಳ ವರ್ಷವಾಗಿತ್ತು. ಅವಳನ್ನು ಹುಡುಕಲು ತೊಡಗಿದರು. ಅವಳನ್ನು ಕಂಡು ಅವಳ ಸಂದರ್ಶನ ಪಡೆದರು. `ಈ ಕೊಳಚೆ ಪ್ರದೇಶದ ಮಕ್ಕಳಿಗೆ ನೀವು ಹೇಗೆ ಸ್ಫೂರ್ತಿ ನೀಡಿದಿರಿ? ನಿಮ್ಮ ಯಾವ ಉಪಾಯದಿಂದ ಇವರೆಲ್ಲ ಸಭ್ಯ ನಾಗರಿಕರಾದರು?’ ಎಂದು ಕೇಳಿದಾಗ ಆ ಅಧ್ಯಾಪಕಿ ವಿನಮ್ರಳಾಗಿ ಉತ್ತರಿಸಿದ್ದಳಂತೆ, `ನನಗೆ ಯಾವ ಉಪಾಯ ಗೊತ್ತಿಲ್ಲ. ನಾನು ಆ ಶಾಲೆಯ ಅಧ್ಯಾಪಕಿಯಾಗಿರುವಷ್ಟು ಕಾಲ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡೆ’ ಎಂದು.

`ಪ್ರೀತಿ ಪರಿವರ್ತನೆಯ ಪ್ರವರ್ತಕವಾಗಬಲ್ಲದು. ಪ್ರೀತಿ ಪಡೆದವನೇ ಪ್ರೀತಿಯ ಮಹಿಮೆ ತಿಳಿಯಬಲ್ಲ. ಆತನೇ ಪ್ರೀತಿಯನ್ನು ಇತರರಿಗೆ ನೀಡಬಲ್ಲ.’

“ಜನರೇನೋ ಪ್ರೀತಿಸುವುದು ಅತ್ಯಂತ ಸುಲಭ ಕಾರ್ಯವೆಂದು ನಂಬಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರೀತಿಸುವ ಸಾಮರ್ಥ್ಯವಿದ್ದರೂ ನಿಜವಾಗಿ ಪ್ರೀತಿಸುವುದು ಒಂದು ಅಸಾಮಾನ್ಯ ಸಿದ್ಧಿಯೇ ಸರಿ” ಎಂದು ಎರಿಕ್ ಫ್ರೋಂ ಹೇಳುತ್ತಾರೆ.

`ಪ್ರೀತಿ ಎಂದರೆ ಕೇವಲ ಭಾವಪರವಶತೆ, ಗಂಡು ಹೆಣ್ಣುಗಳ ದೈಹಿಕ ಆಕರ್ಷಣೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಕಾಮ ಮತ್ತು ಸೌಂದರ್ಯ ಭಾವನೆಗಳ ಮಿಶ್ರಣದಿಂದ ಬಿಡಿಸಿ, ಪ್ರೀತಿಯ ಸ್ವರೂಪವನ್ನು ತಿಳಿದುಕೊಳ್ಳಲು ನಾವು ಯತ್ನಿಸಬೇಕು’ ಎನ್ನುತ್ತಾರೆ ಲೇಖಕರು.

ಸ್ವಾರ್ಥರಹಿತ ಪರಿಶುದ್ಧ ಪ್ರೀತಿಯಲ್ಲಿ ಅಪಾರ ಶಕ್ತಿ ಇದೆ. ಪ್ರೀತಿಯಿಂದ ವಂಚಿತರಾದ ಎಳೆಯ ಮಕ್ಕಳು ಸಮಾಜದಲ್ಲಿ ನೈತಿಕವಾಗಿ, ಸಾಮಾಜಿಕವಾಗಿ ಹಿಂದುಳಿಯುತ್ತವೆ. ಕುಡಿತದ ಚಟ, ಅಪರಾಧ ಹಾಗೂ ಆತ್ಮಹತ್ಯೆಯ ಪ್ರವೃತ್ತಿಗಳನ್ನು ತಡೆಗಟ್ಟಲು ಪ್ರೀತಿಯೆಂಬುದೇ ಅತ್ಯಂತ ಪರಿಣಾಮಕಾರಿ ದಿವ್ಯೌಷಧಿಯಾಗಿದೆ. ದ್ವೇಷ, ಭಯ ಹಾಗೂ ನರಮಂಡಲದ ದೌರ್ಬಲ್ಯ ಮೊದಲಾದ ತೊಂದರೆಗಳನ್ನು ದೂರ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಮಕ್ಕಳ ಸರಿಯಾದ ಬೆಳವಣಿಗೆಗೆ ತಾಯಿಯ ಪ್ರೀತಿ ವಾತ್ಸಲ್ಯಗಳು ಅತ್ಯಂತ ಅವಶ್ಯಕವಾದವುಗಳು ಎಂದು ಅನುಭವ ಹಾಗೂ ಸಂಶೋಧನೆಗಳ ಮೂಲಕ ಸಾಬೀತಾಗಿದೆ. `ಸಂಕ್ರಾಮಿಕ ರೋಗದಿಂದ, ಹಸಿವೆಯಿಂದ, ಅಯೋಗ್ಯ ಅಹಾರದಿಂದ ಮಕ್ಕಳು ದುರ್ಬಲವಾಗಿ ಸಾಯುವಂತೆ, ತಾಯಿಯ ಒಲವನ್ನೇ ಕಂಡರಿಯದ ಮಕ್ಕಳು ಬಹು ಬೇಗನೇ ರೋಗಿಷ್ಠರೂ, ದುರ್ಬಲರೂ ಆಗಿ ಸಾಯುತ್ತಾರೆ’ ಎಂದು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಡಾ| ರೀನೆ ಎ ಸ್ವೀಟ್ಸ ಹೇಳುತ್ತಾರೆ.

`ತಾನು ಯಾರಿಗೂ ಬೇಡಾದವನು’ ಎಂಬ ಭಾವನೆಯ ರೋಗ ಬಹಳ ಕೆಟ್ಟದಾದ ರೋಗ. `ಕುಷ್ಟರೋಗಕ್ಕೆ ನಾವು ಔಷಧಿ ಕಂಡುಹಿಡಿದಿದ್ದೇವೆ, ಕ್ಷಯರೋಗಕ್ಕೆ ಔಷಧಿಯುಂಟು, ಆದರೆ ಪ್ರೀತಿಯನ್ನು ಕಂಡರಿಯದ ಈ ಕೆಟ್ಟರೋಗಕ್ಕೆ ಔಷಧಿ ಎಲ್ಲಿದೆ? ಹೃದಯದಲ್ಲಿ ಪ್ರೀತಿಯನ್ನು ತುಂಬಿಕೊಂಡು, ಕೈಗಳಿಂದ ಸೇವೆಮಾಡಲು ಸಿದ್ಧರಾದ ವ್ಯಕ್ತಿಗಳಿಂದ ಮಾತ್ರವೇ ಈ ಕೆಟ್ಟರೋಗ ದೂರವಾಗಲು ಸಾಧ್ಯ’ ಎಂದು ಮದರ್ ಥೇರೇಸಾ ಹೇಳಿದ್ದರಂತೆ. `ಜಗತ್ತೇ ಪರಿಶುದ್ಧ ಪ್ರೀತಿಗಾಗಿ ಆತುರದಿಂದ ಹಾತೊರೆಯುತ್ತಿದೆ. ಪ್ರತಿಫಲವನ್ನು ಅಪೇಕ್ಷಿಸದೇ ನಾವು ಅದನ್ನು ಹಂಚಬೇಕು’ ಎಂದವರು ಸ್ವಾಮಿ ವಿವೇಕಾನಂದರು.

ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಜಗದ ಮುಖವನ್ನೇ ಬದಲಿಸಿದ್ದಾರೆ. `ಇದೀಗ ಮುಖ್ಯವಾಗಿ ಹಿಂಸೆ, ಯುಧ್ಧ, ರಕ್ತಪಾತ, ಕೊಲೆಗಡುಕತನ ಇವುಗಳನ್ನು ದೂರಮಾಡಲು, ಮತ್ತು ನಿಸ್ವಾರ್ಥ ಪ್ರೀತಿಯ ಶಕ್ತಿಯನ್ನು ಕುರಿತು, ಸಂಶೋಧನೆ ನಡೆಸಬೇಕಾಗಿದೆ ಎಂದು ಸೊರೊಕಿನ್ ಅಭಿಪ್ರಾಯಪಡುತ್ತಾರೆ.

ಮನೋದೈಹಿಕ ಬೇನೆಗಳನ್ನು ಕುರಿತ ಸಂಶೋಧನೆಗಳಿಂದ ಗೊತ್ತಾಗಿರುವ ತಥ್ಯಾಂಶಗಳು ಇಂತಿವೆ: `ದ್ವೇಷ ಕೆಟ್ಟದ್ದು, ಪ್ರೀತಿ ಒಳ್ಳೆಯದ್ದು. ದ್ವೇಷ, ಮತ್ಸರ, ದುರಭಿಮಾನ, ಚಿಂತೆ, ಸೇಡಿನ ಮನೋಭಾವ ಇವು ಶರೀರಾರೋಗ್ಯಕ್ಕೆ ತೀವ್ರ ಕೆಡಕು ಉಂಟುಮಾಡುವ ವಿಷಯಗಳು. ಪ್ರೀತಿ ಶರೀರದ ಆರೋಗ್ಯಕ್ಕೆ ಅಷ್ಟೇ ಅಲ್ಲ, ಮಾನಸಿಕ ಹಾಗೂ ನೈತಿಕ ಸುಸ್ಥಿತಿಗೂ ಅವಶ್ಯಕವಾಗಿದೆ.

ಕರ್ಮಯೋಗವನ್ನು ಕುರಿತು ವ್ಯಾಖ್ಯಾನಿಸುವಾಗ ವಿವೇಕಾನಂದರು `ನಿಸ್ವಾರ್ಥತೆಯೇ ದೇವರು’ ಎನ್ನುತ್ತಾರೆ. ನಿಸ್ವಾರ್ಥತೆಯಲ್ಲಿರುವ ಮಹಾಗುಣ ಮನುಷ್ಯನನ್ನು ದೈವತ್ವಕ್ಕೆ ಏರಿಸಬಲ್ಲದು ಎಂಬುದು ಈ ಮಾತಿನ ಅರ್ಥ ಎನ್ನುತ್ತಾರೆ ಲೇಖಕರು. ನಿಸ್ವಾರ್ಥ ಪ್ರೀತಿಗೆ ತಾಯಿಗಿಂತ ಬೇರೆಯ ಮಾದರಿ ಸಿಗಲಾರದು. ಆದ್ದರಿಂದಲೇ ತಾಯಿಯೇ ದೇವರು, `ಮಾತೃದೇವೋಭವ’ ಎಂದು ಋಷಿಮುನಿಗಳು ಕರೆದಿರಬೇಕು. ಪ್ರೀತಿ ಎಷ್ಟರಮಟ್ಟಿಗೆ ಪರಿಶುದ್ಧವಾಗಿದೆ ಎಂಬುದನ್ನು ತಿಳಿಯಲು ನಿಸ್ವಾರ್ಥತೆಯೇ ಒರೆಗಲ್ಲು. ಇಂದಿನ ಸ್ತ್ರೀಸ್ವಾತಂತ್ರ್ಯ ತಾಯ್ತನಕ್ಕೆ ಮಾರಕವಾಗುತ್ತಿದೆ ಎನ್ನುತ್ತಾರೆ.

ಸ್ವಾಮಿ ರಾಮಕೃಷ್ಣರಲ್ಲಿ ಕಾಣುತ್ತಿದ್ದ ಅನೇಕ ಗುಣಗಳಲ್ಲಿ ಅತ್ಯಧಿಕ ಆಕರ್ಷಕವಾದ ಗುಣ ಅವರ ತೋರುತ್ತಿದ್ದ ಪ್ರೀತಿ ಹಾಗೂ ವಾತ್ಸಲ್ಯ. ಪ್ರಯೊಬ್ಬರ ಹಿತಚಿಂತನೆಯಲ್ಲಿ ಅವರಿಗೆ ಆಸಕ್ತಿ ಇರುತ್ತಿತ್ತು. ಮಾತೃತ್ವದ ಸಾಕಾರ ಮೂರ್ತಿಯಾದ ಶಾರದಾದೇವಿಯವರ ಬಗ್ಗೆ ಸಿಸ್ಟರ್ ನಿವೇದಿತಾ ಬರೆಯುತ್ತ, `ಮೇರೆಯಿಲ್ಲದ ವಾತ್ಸಲ್ಯ ವಾರಿಧಿ’ ಎಂದು ಅವರ ಗುಣಗಾನ ಮಾಡುತ್ತಾರೆ.

ಮಾನವ ಸಮಾಜಕ್ಕೆ ವಿಜ್ಞಾನದ ಪ್ರಗತಿಯಿಂದ ಮಾನವಕುಲಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. `ಸುಖಲೋಲುಪತೆ ಮತ್ತು ಸ್ವೇಚ್ಛಾಚಾರಕ್ಕಿಳಿಸಿದ ಸ್ವಾತಂತ್ರ್ಯಕ್ಕೆ ವಿಜ್ಞಾನ ಸಹಕಾರಿಯಾಗಿದೆ. ವಿಯೆಟ್ನಾಂ ಯುದ್ಧದಲ್ಲಿ ೪೫ ಸಾವಿರ ಸೈನಿಕರು ಸತ್ತಿದ್ದರೆ ಮಾದಕ ದ್ರವ್ಯ ಸೇವಿಸಿ ಲಕ್ಷಾವಧಿ ಯುವಕರು ಸಾಯುತ್ತಿದ್ದಾರೆ. ಮಾದಕದ್ರವ್ಯ ವ್ಯಾಪರದ ಪ್ರಮುಖ ಹದಿಮೂರು ಸಂಸ್ಥೆಗಳಿವೆ. ಇವುಗಳಲ್ಲಿ ಒಂದಾದ ಕಳ್ಳವ್ಯಾಪಾರ ಸಂಸ್ಥೆಯ ವರುಷದ ವ್ಯಾಪಾರ ಎರಡು ಸಾವಿರ ಕೋಟಿ ರೂಪಾಯಿ ಮೀರಿದೆಯಂತೆ.

ಇಂದಿನ ದಿನಗಳಲ್ಲಿ ನೈತಿಕತೆಯ ಅಧಃಪತನವಾಗಿದೆ. `ಕಳೆದ ಇನ್ನೂರು ವರುಷಗಳಿಂದ, ಮುಖ್ಯವಾಗಿ ಕಳೆದ ಹಲವು ದಶಕಗಳಿಂದ, ನಮ್ಮ ಸಂಸ್ಕೃತಿಯ ಎಲ್ಲ ವಿಭಾಗಗಳು ಅತಿಲೈಂಗಿಕತೆಯ ದಾಳಿಗೊಳಗಾಗಿವೆ. ನಮ್ಮ ನಾಗರಿಕತೆ ಎಷ್ಟು ಎಷ್ಟು ಲೈಂಗಿಕತೆಯಲ್ಲಿ ಮುಳುಗಿದೆ ಎಂದರೆ ಬದುಕಿನ ಎಲ್ಲೆಡೆಗಳಿಂದಲೂ ಅದು ಇಂದು ಹೊರಹೊಮ್ಮುತ್ತಿದೆ.’ ಎನ್ನುತ್ತಾರೆ ಸಮಾಜ ಶಾಸ್ತ್ರಜ್ಞ ಸೊರೊಕಿನ್. ಸಾಹಿತ್ಯ, ಕಥೆಕಾದಂಬರಿ, ಚಿತ್ರ, ಸಂಗೀತ, ಚಲನಚಿತ್ರ, ಟೆಲಿವಿಜನ್, ಪತ್ರಿಕೆ, ಮ್ಯಾಗಜಿನ್, ಜಾಹೀರಾತು – ಎಲ್ಲ ಕ್ಷೇತ್ರದಲ್ಲಿ ಲೈಂಗಿಕತೆಯ ಹಾವಳಿ ಹೇಗೆ ನಡೆದಿದೆ ಎಂಬುದನ್ನು ಸಾಕ್ಷ್ಯಾಧಾರ ಸಮೇತವಾಗಿ ಅವರು ಚಿಂತನ ಮಂಥನ ನಡೆಸುತ್ತಾರೆ. ಭೋಗ ಸ್ವಾರ್ಥಗಳೇ ವೈವಾಹಿಕ ಜೀವನದ ಉದ್ದೇಶವಾದರೆ ಘರ್ಷಣೆ ತಡೆಯುವುದೆಂತು? ಮಕ್ಕಳಿಗೆ ಮೊಲೆಹಾಲು ಕುಡಿಸುವುದು ತನ್ನ ಶರೀರ ಸೌಷ್ಠವಕ್ಕೆ ಕುಂದು ಎಂಬ ತಾಯಿ ಮಗುವಿಗೆ ಜನ್ಮಕೊಡುವುದು ತನ್ನ ಸ್ವಚ್ಛಂದ ವಿಹಾರಕ್ಕೆ ತೊಡಕು ಎಂದು ಭಾವಿಸಿದ್ದಾಳೆ.

ಇತಿಹಾಸದ ಪುಟಗಳನ್ನು ಲೇಖಕರು ನೆನೆಯುತ್ತಾರೆ. ಭಾರತೀಯರ ನೈತಿಕತೆಯ ಕಂಪು ವಿಶ್ವದಲ್ಲೆಡೆ ಹರಡಿತ್ತು. ವಿದೇಶಿ ಪ್ರವಾಸಿಗಳು ಭಾರತವನ್ನು ಮುಕ್ತಕಂಠದಿಂದ ಹೊಗಳಿದ್ದರು. ಚೀನಾದೇಶದ ಪ್ರವಾಸಿ ಹುವೆನ್‌ತ್ಸ್ಯಾಂಗ್ ಸಾವಿರದ ಐದುನೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಾಗ ಇಲ್ಲಿಯ ಸಂಪತ್ತನ್ನು ಕಂಡು ಬೆರಗಾಗಿದ್ದ. ಗ್ರೀಕರ ರಾಯಭಾರಿಯಾಗಿ ಮೆಗಾಸ್ತನೀಸ ಇಲ್ಲಿಗೆ ಬಂದಾಗ ಮನೆಗಳಿಗೆ ಬೀಗ ಇಲ್ಲದಿರುವುದನು ಕಂಡು ಅಚ್ಚರಿಪಟ್ಟಿದ್ದ. ಭೂಸಂಚಾರಿ ಮಾರ್ಕೊಪೋಲೋ ಹೇಳಿದ್ದ, `ಭೂಲೋಕದಲ್ಲೇ ಭಾರತೀಯರು ಅತ್ಯಂತ ಒಳ್ಳೆಯವರು, ಸತ್ಯವಂತರಾದ ವ್ಯಾಪಾರಿಗಳು ಯಾವ ಕಾರಣದಿಂದಲೂ ಸುಳ್ಳುಹೇಳುವುದಿಲ್ಲ.’ ಹನ್ನೊಂದನೆಯ ಶತಮಾನದಲ್ಲಿ ಬಂದ ಮಹಮ್ಮದೀಯ ಇದ್ರಿಸಿ, `ಇಂಡಿಯಾದೇಶದ ಜನರು ನಂಬಿಕೆ, ಸತ್ಯನಿಷ್ಠೆಗೆ ಪ್ರಸಿದ್ಧರಾಗಿದ್ದಾರೆ’ ಎಂದಿದ್ದ. ಮೂರುನೂರು ವರ್ಷದ ಹಿಂದೆ ಪೋರ್ಚುಗೀಸರು ಬರೆದರು, `ಹಿಂದುಗಳು ಮೊದಲು ಸೂಚನೆ ಮಾಡದೆ ಯುದ್ಧ ಮಾಡುವುದಿಲ್ಲ. ವೀರರಾದ ಇವರು ಶತ್ರುಗಳ ಬಗ್ಗೆ ಸ್ವಲ್ಪವೂ ದ್ವೇಷ ಇಟ್ಟುಕೊಂಡವರಲ್ಲ’ ಎಂದು.

ಜಗತ್ತಿನ ಅಸಂಖ್ಯ ರಾಜರುಗಳಲ್ಲಿ ಅಶೋಕ ಚಕ್ರವರ್ತಿ ಮಾತ್ರ ದೇದೀಪ್ಯಮಾನವಾದ ಧ್ರುವ ನಕ್ಷತ್ರದಂತೆ ಕಂಗೊಳಿಸುತ್ತಾನೆ ಎಂದು ಜಗತ್ತಿನ ಇತಿಹಾಸ ಬರೆದ ಎಚ್.ಜಿ.ವೆಲ್ಸ್ ಹೇಳಿದ್ದು ಅತಿಶಯೋಕ್ತಿಯಾಗಿರಲಿಲ್ಲ. ಚಕ್ರವರ್ತಿ ಹರ್ಷವರ್ಧನ ಪ್ರತಿ ಐದುವರ್ಷಕ್ಕೊಮ್ಮೆ ತಾನು ಸಂಗ್ರಹಿಸಿದ್ದ ಐಶ್ವರ್ಯವನ್ನು ವಿದ್ವಾಂಸರಿಗೆ ಮತ್ತು ಬಡವರಿಗೆ ಸಂಪೂರ್ಣವಾಗಿ ಹಂಚುತ್ತಿದ್ದನಂತೆ.

ದಿವ್ಯಪ್ರೀತಿಯ ಮೂಲಸ್ರೋತ ಅಧ್ಯಾತ್ಮದಲ್ಲಿದೆ ಅನ್ನುತ್ತಾರೆ. `ಮುಖಂಡನಾಗುವವನಿಗೆ ಮೊದಲು ಹೃದಯ ಸಂಪನ್ನತೆ ಇರಬೇಕು ಎನ್ನುತ್ತಿದ್ದರು’ ವಿವೇಕಾನಂದರು.

ದ್ವೇಷ ಮಹಾ ದೋಷ. ದ್ವಿವಿಷ ಎಂದರೆ ವಿಷದ ಎರಡು ಪಾಲು ಅದುವೆ ದ್ವೇಷ. ಯಾರು ದ್ವೇಷ ಮಾಡುತ್ತಾರೆ, ತಾವೂ ಉರಿಯುತ್ತಾರೆ, ಇತರರನ್ನೂ ಉರಿಸುತ್ತಾರೆ. ದ್ವೇಷದಿಂದ ಮನುಷ್ಯ ನಡೆದಾಡುವ ವಿಷದ ಕಾರ್ಖಾನೆಯಾಗುತ್ತಾನೆ. “ದ್ವೇಷಕ್ಕಿಂತ ಭಯಾನಕವಾದ ಹತ್ಯೆ ಬೇರೊಂದಿಲ್ಲ. ದ್ವೇಷವೇ ಅತ್ಯಂತ ಭೀಕರ ಜ್ವರ. ದ್ವೇಷದಿಂದ ದ್ವೇಷ ಎಂದಿಗೂ ಅಳಿಯದು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಿರಿ. ನಿಂದೆಯ ನುಡಿಗೆ ಕಿವುಡರಾಗಿರಬೇಕು. ತಮಗಿಂತಲೂ ಹೆಚ್ಚು ವಿದ್ಯಾವಂತರು, ಹೆಚ್ಚು ಯಶಸ್ವಿಯಾದವರನ್ನು ಟೀಕಿಸಿದಾಗ, ಕೆಲವರಿಗೆ ಅನಾಗರಿಕ ಆನಂದ ಉಂಟಾಗುತ್ತದೆ” ಎಂದವ ಬುದ್ಧ.

ಪ್ರೀತಿಯೇ ಪರಮೌಷಧಿ ಎನ್ನುತ್ತಾರೆ. ಪ್ರೀತಿಸುವುದನ್ನು ನಾವು ನಿಸರ್ಗದಿಂದ ಕಲಿಯಬೇಕು. ಅರಳಿದ ಕುಸುಮಗಳ ಮೇಲೇರುವ ಭ್ರಮರಗಳ ಮೇಲೆ ಪುಷ್ಪಗಳು ದ್ವೇಷ ಮಾಡುತ್ತವೆಯೇ? ತುಂಬಿದ ಕೆಚ್ಚಲಿಗೆ ಕೈಹಾಕಿ ಹಾಲು ಹಿಂಡುವ ಗೋಲ್ಲನ ಕೈ ಕಡಿಯಲು ಕಾಮಧೇನು ಹೊರಡುವದೇ? ಮೀನಗಳು ಬಹಳಾದವು ಎಂದು ಕೋಪಗೊಂಡು ಸಾಗರ ಬತ್ತುವದೇ? ಅಸೂಯೆ, ಅತೃಪ್ತಿಗಳನ್ನು ನಿರ್ನಾಮ ಮಾಡುವದೇ ಪ್ರೀತಿ. `ಸರ್ವೇ ಜನಾಃ ಸುಖಿನೋ ಭವಂತು’ ಇದುವೆ ಪ್ರೀತಿಯ ಮಂತ್ರ.

ದ್ವೇಷವೆಂದರೆ ದ್ವಿವಿಷ. ಅದು ಎರಡೂ ಬದಿ ಧಾರೆ ಇರುವ ಖಡ್ಗ.
ದ್ವೇಷಿಸುವವ ತಾನೂ ಕುದಿಯುತ್ತಾನೆ, ಇತರರನ್ನೂ ಸುಡುತ್ತಾನೆ.
ದ್ವೇಷವನ್ನು ಪ್ರೀತಿಯಾಗಿ ಪರಿವರ್ತಿಸಬಲ್ಲವನೇ ಸದ್ಗುರು.
`ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’.
ಸದ್ಗುರುವಿನ ಹಿತವಚನ ಆಲಿಸಬೇಕು, ಪ್ರೀತಿಯ ಪವಾಡ ಅನುಭವಿಸಬೇಕು.
(`ಜೀವಿ” ವಚನ-56-2)

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: