Kannada movie Moggina Manasu – ಎಲ್ಲರ ಮನಸು ತಟ್ಟುವ ‘ಮೊಗ್ಗಿನ ಮನಸು’

ಒಂದು ಕ್ಷಣ ಕಣ್ಣಲ್ಲಿ ನೀರು ಚುಳ್ಳೆಂದವು. ‘ನಾನು ಮೊಗ್ಗಿನ ಮನಸು’ ಸಿನಿಮಾ ನೋಡುತ್ತಾ ಕುಳಿತಿದ್ದೆ. ಇರುವ ಛಪ್ಪನ್ನೈವತ್ತಾರು ಕೆಲಸಗಳ ಮಧ್ಯೆ ಎಲ್ಲ ಬಿಟ್ಟು ಸಿನಿಮಾ ನೋಡಲು ಹೋಗುವುದು ನನ್ನ ಪಾಲಿಗೆ ಪನಿಷ್ಮೆಂಟೇ. ಆದರೆ ನಿರ್ದೇಶಕ ಶಶಾಂಕ ಮತ್ತು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಂಗಾಧರ್ ಕರೆದ ರೀತಿಯಿತ್ತಲ್ಲ? ನಿರಾಕರಿಸದಾದೆ. ಮಲ್ಲೇಶ್ವರದ ಪುಟ್ಟ ಚಿತ್ರಮಂದಿರದಲ್ಲಿ ನಾವೇ ಐದಾರು ಜನ ಕುಳಿತು ಮೊಗ್ಗಿನ ಮನಸು ನೋಡಿದೆವು.

ಈ ಚಿತ್ರ ಗಾಂಧಿ ನಗರದ ಅಷ್ಟೂ ಫಾರ್ಮುಲಾಗಳನ್ನು ಮುರಿಯುತ್ತ ಹೋಗುತ್ತದೆ. ಮೂದಲನೆಯದಾಗಿ ಚಿತ್ರಕ್ಕೆ ಹಿರೋ ಇಲ್ಲ. ಹಾಗಂತ ಮಹಿಳಾಮಣಿಗಳ ಸಿನಿಮಾ ಅಂತ ನೋಡಿದರೆ ಉಹುಂ. ‘ಮೊಗ್ಗಿನ ಮನಸು’ಗೆ ನಾಯಕಿಯೂ ಇಲ್ಲ. ಧಿಗ್ಗ ದಿಗಾ ಅಂತ ಮರ ಸುತ್ತುವ ಹಾಡುಗಳಿಲ್ಲ. ಮೆಲೋಡ್ರಾಮಾ ಇರುವಂಥ ಕಣ್ಣೀರು ಚಿಮುಕಿಸುವಂಥ ಫ್ಯಾಮಿಲಿ ದೃಶ್ಯಗಳೂ ಇಲ್ಲ. ಎಲ್ಲೂ ಒಂದು ಕಡೆ ಸಣ್ದದಾಗಿ ವಾಯಲೆನ್ಸ್ ಶುರುವಾಗಬಹುದಾ ಅಂತ ನೋಡಿದರೆ ಫೈಟು, ಹಿಂಸಾಚಾರ, ಸ್ಯಾಡಿಸಮ್ಮು ಇತ್ಯಾದಿ ಆಕರ್ಷಣೆ(!)ಗಳ ಗೋಜಿಗೇ ಹೋಗಿಲ್ಲ ಶಶಾಂಕ್.

ಶಶಾಂಕ್‌ಗೆ ಈ ಚಿತ್ರವನ್ನು ‘ಹೀಗೆ’ ಮಾಡಬೇಕು ಅನ್ನೋ ಕಮಿಟ್‌ಮೆಂಟ್ ಮೊದಲಿನಿಂದಲೂ ಇತ್ತು ಅಂತ ಕಾಣುತ್ತೆ. ಒಂದಿಷ್ಟು ಹುಡುಗರು, ಒಂದಿಷ್ಟು ಹುಡುಗಿಯರು, ಒಂದು ಕಾಲೇಜು, ಒಂದು ಹಾಸ್ಟೆಲು ಇವಿಷ್ಟನ್ನೂ ಇಟ್ಟುಕೊಂಡು ಮಂಗಳೂರಿನ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾ ಪ್ರಾರಂಭಿಸುತ್ತಾರೆ. ಆರಂಭದಲ್ಲೇ ಸಣ್ಣದೊಂದು ragging. ಅದು ಅತೀರೇಕಕ್ಕೆ ಹೋಗುತ್ತಾ ಅಂತ ಪ್ರೇಕ್ಷಕ ಅತಂಕಗೊಳ್ಳುವುದರೊಳಗಾಗಿಯೇ rag ಮಾಡಿದ ಇಬ್ಬರು ಸೀನಿಯರ್ ಹುಡುಗಿಯರ ಮತ್ತು rag ಮಾಡಿಸಿಕೊಂಡ ಎರಡು ಮೊಗ್ಗಿನ ಮನಸ್ಸಿಗಳೂ ಗೆಳತಿಯರಾಗಿ ಒಂದಾಗಿಬಡುತ್ತಾರೆ. ಇವರ ಪಾಲಿಗೆ ಸೀನಿಯರ್‌ಗಳು ಅಕ್ಕ ಮತ್ತು ದೀದಿ.ಸೀನಿಯರ್‌ಗಳಿಬ್ಬರಿಗೂ ಬಾಯ್‌ಫ್ರೆಂಡ್ಸ್ ಇದ್ದಾರೆ ಅನ್ನೋದೇ ಈ ಫಸ್ಟ್ ಪಿಯುಸಿ ಹುಡುಗಿಯರಿಗೆ ಸೋಜಿಗ. ಅದು ಅವರ ಅಸೆ ಕೂಡ.

ಇದ್ದುದರಲ್ಲಿ ಕೊಂಚ ಹಿರೋಯಿನ್ನು ಅನ್ನಿಸುವಂಥ ಪಾತ್ರ ರಾಧಿಕಾ ಪಂಡಿತ್‌ಳದು. ಅವಳಿ ಮೂದಲು attract ಆಗುವುದೇ ತನ್ನ ಕ್ಲಾಸಿನ ಇಂಗ್ಲಿಷ್ ಲಕ್ಚರರ್‌ನೆಡೆಗೆ. ಹಾಗಾದರೆ ಇದು ಮೇಷ್ಟ್ರು ಮತ್ತು ವಿದ್ಯಾರ್ಥಿಯ ಮಧ್ಯದ ಕಥೆಯಾಗಲಿದೆ ಅನ್ನಿಸುತ್ತದೆ. ಆಕಸ್ಮಾತ್ ಶಶಾಂಕ್ ಅದೊಂದು ತಪ್ಪು ಮಾಡಿದ್ದರೆ ‘ಮೊಗ್ಗು’ ಮುಗುಚಿಕೊಂಡು ಬಿಡುತ್ತಿತ್ತೇನೋ. ಏಕೆಂದರೆ ಆ ತೆರೆನಾದ ಸಂಬಂಧವಿಟ್ಟುಕೊಂಡು ಮಲಯಾಳಂದಲ್ಲಿ ಒಂದು ಸಿನಿಮಾ ಬಂದಿದೆ. ತೆಲುಗಿನಲ್ಲಿ ‘ಗುಪ್ಪೆಡು ಮನಸು’ ಎಂಬ ಸಿನಿಮಾ ಬಂದಿದೆ. ಅಲ್ಲಿ ಶರತ್ ಬಾಬು ಮತ್ತು ಸರಿತಾ ನಟಿಸಿದ್ದಾರೆ. ಅವೆರಡನ್ನೂ ಮೀರಿಸುವಂಥ ಸಿನಿಮಾ ಮಾಡೋದಕ್ಕೆ ದೊಡ್ಡ ತಾಕತ್ತುಬೇಕು. ಪಾತ್ರಗಳನ್ನು ನಿರ್ವಹಿಸಬಲ್ಲ ದೊಡ್ಡ ತಾಕತ್ತಿನ ನಟರು ಬೇಕು. ಅಲ್ಲದೆ ಇವತ್ತಿನ ಮಟ್ಟಿಗೆ ಅದು ತಡವಿಕೊಳ್ಳಬಹುದಾದ subject ಅಲ್ಲ.

ಶಶಾಂಕ್ ಅಂಥ ರಿಸ್ಕನ್ನು comfortable ಅಗಿ avoid ಮಾಡಿಕೊಂಡು ಮುನ್ನಡೆಯುತ್ತಾರೆ. ಪಿಯುಸಿ ಓದೋ ಹುಡುಗಿಯ ಹೃದಯಲ್ಲಿ ಹುಟ್ಟವ ವಯೋ ಸಹಜವಾದ ಕ್ರಷ್ ಅಥವಾ ಇನ್‌ಫ್ಯಾಚುಯೇಷನ್ನೇ ಹೊರತು ಪ್ರಬುದ್ಧ ಪ್ರೀತಿಯಲ್ಲ ಅನ್ನೋದನ್ನು ಮೇಷ್ಟ್ರು ಅರ್ಥ ಮಾಡಿಕೊಂಡಿರುತ್ತಾನೆ. ತನ್ನನ್ನು ಪ್ರೀತಿಸಲು ಬಂದ ಹುಡುಗಿಗೆ ಅದನ್ನೇ ಮನವರಿಕೆ ಮಾಡಿಕೊಡುತ್ತಾನೆ. ಅವನ ಅಷ್ಟೂ ಮಾತುಗಳನ್ನು ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಾಳೆ ರಾಧಿಕಾ ಪಂಡಿತ್. ಮೇಷ್ಟ್ರು ಈಚೆಗೆ ಬಂದ ಕೂಡಲೇ ಕಾಲಿಗೆ ನಮಸ್ಕಾರ ಮಾಡುತ್ತಾಳೆ. ‘ಸರ್ ಇವತ್ತು ಟಿಚರ್ಸ್ ಡೇ …’ ಅನ್ನುತ್ತಾಳೆ. ಬರೆದಿಟ್ಟುಕೊಂಡು ಬಂದ ಪ್ರೇಮಪತ್ರ ಅವಳಲ್ಲೇ ಉಳಿದು ಹೋಗುತ್ತದೆ. ಪ್ರೇಕ್ಷಕ ಕಣ್ಣೀರಾಗುವುದೂ ಶಶಾಂಕ್ ಗೆಲ್ಲುವುದೂ ಏಕಕಾಲಕ್ಕೆ ಸಂಭವಿಸುತ್ತದೆ.

ಈ ಚಿತ್ರದ ನಾಯಕಿ(?)ಯರ ಪಟ್ಟಿಯಲ್ಲಿರುವುದು ಶುಭಾ ಪೂಂಜಾ. ಸದ್ಯಕ್ಕೆ ಕನ್ನಡದಲ್ಲಿ ಹಾಗೆ ಎಳೇ ಮುಖವಿರುವ ನಟಿಯೆಂದರೆ ಅವಳೇ. ಚಿತ್ರದಲ್ಲಿ ಅವಳ ಹೆಸರು ರೇಣುಕಾದೇವಿ. ರಾಣೆಬೆನ್ನೂರಿನ ಹತ್ತಿರದ ಹಲಗೇರಿಯವಳು. ಉತ್ತರ ಕರ್ನಾಟಕದ ಜಾಣ ಹುಡುಗಿ. ಅದರೆ ಕನ್ನಡ ಮೀಡಿಯಂನಲ್ಲಿರುವುದರಿಂದ ಇಂಗ್ಲಿಷ್ ಬಾರದು. ತಾಯಿ ಇಲ್ಲದ ಮಗಳನ್ನು ತಂದು ಅವಳಪ್ಪ ಮಂಗಳೂರಿನ ಹಾಸ್ಟೆಲ್‌ಗೆ ಸೇರಿಸುತ್ತಾನೆ. ಹುಡುಗಿಗೆ ಡಾಕ್ಟರ್ ಆಗುವ ಕನಸು. ಶಶಾಂಕ್ ಈ ಪಾತ್ರವನ್ನು ಎಷ್ಟು ಛಿಸಲ್ ಮಾಡುತ್ತಾ ಹೋಗುತ್ತಾರೆಂದರೆ, ಅವಳು ದಾರಿ ತಪ್ಪತೊಡಗಿದಾಗ, ಪ್ರಚಂಡ ಮಾತಿನ ಒಬ್ಬ flirtನ ಕೈಗೆ ಸಿಕ್ಕಾಗ ಎಲ್ಲೋ ಒಂದು ಕಡೆ ಅವಳನ್ನು ಪಕ್ಕಕ್ಕೆ ಕರೆದು ನಾವೇ ಬುದ್ಧಿ ಹೇಳಿಬಿಡೋಣವಾ ಅಂತ ಅನ್ನಿಸಿಬಿಡುತ್ತದೆ. ಪೋಲಿ ಜೋಕುಗಳನ್ನು ಹೇಳಿ ಹೇಳಿಯೇ ಅವಳನ್ನು ಹುಡುಗನೊಬ್ಬ ಪಟಾಯಿಸಿ ಗರ್ಭವತಿಯನ್ನಾಗಿ ಮಾಡಿಬಿಡುತ್ತಾನೆ. ತೀರ ಮುಗುದೆಯಾದ ಹುಡುಗಿ ‘ಪೆಪ್ಸಿ ಕುಡಿದರೆ ಹೊಟ್ಟೇಲಿರೋ ನಮ್ಮ ಮಗುವಿಗೆ ತೊಂದರೆಯಾಗುತ್ತದೆ’ ಅನ್ನುವ ಮೂಲಕ ತಾನು ಗರ್ಭವತಿಯೆಂಬುದನ್ನು ಅರಹುತ್ತಾಳೆ. “ಇವಾಗ್ಲೇ ಮಗೂನಾ? ಅದನ್ನ ಅಬಾರ್ಷನ್ ಮಾಡಿಸಿಕೋ” ಅಂತ ಸಲಹೆ ಕೊಡುವ ಅವಳ ಗೆಳೆಯ ಇಡೀ ಸಿನೆಮಾದಿಂದಲೇ ಜಾರಿಕೊಂಡುಬಿಡುತ್ತಾನೆ. ಡಾಕ್ಟರಾಗಬೇಕು ಅಂತ ಕನಸು ಹೊತ್ತು ಕಾಲೇಜಿಗೆ ಬಂದ ‘ಮೊಗ್ಗಿನ ಮನಸು’ ಅಬಾರ್ಷನ್ ಮಾಡಿಸಿಕೊಳ್ಳಲು ಡಾಕ್ಟರರ ಬಳಿಗೆ ಹೋಗಬೇಕಾದ ಸಂದರ್ಭ ಬಂದಾಗ, ಅಪ್ಪನ ಕನಸು, ತನ್ನ ಆಶಯ, ಗರ್ಭದಲ್ಲಿರುವ ಕಂದ ಯಾವುದನ್ನೂ ಕೊಂದುಕೊಳ್ಳಲಾಗದೆ ತನ್ನನ್ನು ತಾನು ಕೊಂದುಕೊಂಡುಬಿಡುತ್ತಾಳೆ.

ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಹುಡುಗೀರ ಹಾಸ್ಟೆಲು ಹೇಗೆ ತತ್ತರಿಸಿ ಹೋಗುತ್ತದೆ ಎಂಬುದರ ಕಲ್ಪನೆ ಇಲ್ಲದಿದ್ದರೆ, ಆ ತರಹದ ಸೀನ್ shoot ಮಾಡುವುದು ಸಾಧ್ಯವಿಲ್ಲ. ಶಶಾಂಕ್‌ಗೆ ಇಂಥ ಅನೇಕ ಸೂಕ್ಷ್ಮಗಳ ಅರಿವಿದೆ. ಅದಿರುವುದರಿಂದಲೇ ರಾಧಿಕಾ ಪಂಡಿತ್‌ಳ ತಂದೆ ತಾಯಿಯ (ಅಚ್ಯುತ್ ಮತ್ತು ಸುಧಾ ಬೆಳವಾಡಿ) ಪ್ರಬುದ್ಧ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಗಂಟು ಬಿದ್ದು ಒಪ್ಪಿಸಿ ಪ್ರೀತಿಸತೊಡಗುವ ಹುಡುಗ ಹೇಗೆ ತನ್ನ ಗೆಳತಿಯೆಡೆಗೆ possessive ಆಗತೊಡಗುತ್ತಾನೆ, ಅಂಥ ಪೊಸೆಸಿವ್‌ನೆಸ್ ಹುಡುಗಿಯರನ್ನು ಹೇಗೆ ಹಿಂಸೆ ಮಾಡುತ್ತದೆ ಎಂಬುದನ್ನು ತುಂಬ crisp ಆಗಿ ಶಶಾಂಕ್ ಹೇಳಿ ಮುಗಿಸುತ್ತಾರೆ. ಗಮನಿಸಬೇಕಾದ್ದೆಂದರೆ, ಸಿನೆಮಾದ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ unfold ಆಗಿ, ಅತ್ಯಂತ ಲಾಜಿಕಲ್ ಆಗಿ conclude ಆಗುತ್ತದೆ. ಇದಕ್ಕೆ ಜೈಜಗದೀಶ್, ತುಳಸಿ, ಇನ್ನಿಬ್ಬರು ನಾಯಕಿಯರು, ಅವರ ಹೀರೋಗಳು, ರಾಧಿಕಾ ಪಂಡಿತ್‌ಳನ್ನು affair ಮುಗಿದುಹೋದ ನಂತರವೂ ಪ್ರೀತಿಸುವ ಯಶ್ ಮುಂತಾದ ಪಾತ್ರಗಳು ಉದಾಹರಣೆ.

ಅನೇಕ ಯುವ ನಿರ್ದೇಶಕರಂತೆ ಶಶಾಂಕ್ ಕೂಡ ನನ್ನ ಬರಹಗಳಿಂದ ಪ್ರಭಾವಿತರಾಗಿದ್ದಾರೆ. ಆದರೆ ಅದನ್ನು positive ಆಗಿ ಅವರು ತೆರೆಗೆ ತಂದಿದ್ದಾರೆಂಬುದು ನನ್ನ ಮಟ್ಟಿಗೆ ಸಮಾಧಾನದ ಸಂಗತಿ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: