Strange and rare politiacal species -ಸೋಮಶೇಖರ್ ಎಂಬ ವಿಸ್ಮಯ ಜನನಾಯಕ

B. Somashekher, guy who thinksಹಿಂದುಳಿದ ವರ್ಗಗಳ ನಾಯಕರೆಂದು ಹೇಳಿಕೊಂಡು ಹಿಂದುಳಿದವರನ್ನು ಮತ್ತು ಮುಂದೆ ಸಾಗುವವರನ್ನು ಏಕಕಾಲಕ್ಕೆ ತುಳಿಯುವ ಅಂಬೇಡ್ಕರ್ ತುಂಡುಗಳಿಗೆ  ಕರ್ನಾಟಕದಲ್ಲಿ ಏನೇನೂ ಕೊರತೆಯಿಲ್ಲ. ಬುಡಬುಡಕೆ ನಾಯಕರ ಸಂತೆಪೇಟೆಯಲ್ಲಿ “ರಾಜಕಾರಣಿಗಳಿಗೆ ಕಂಡರಾಗದ ” ಈ ಸೋಮಶೇಖರ್ ಎಂಬ ಪ್ರಾಣಿ ಬದುಕಿರುವುದಾದರೂ ಹೇಗೆ ? ಕರ್ನಾಟಕವೇ ವಿಸ್ಮಯ.

ಆತ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿ.ಉತ್ತರ ಕರ್ನಾಟಕದವನಾದ ಆತ ದಕ್ಷಿಣ ಕನ್ನಡದ ಪ್ರತಿಷ್ಠಿತ ಖಾಸಗಿ ಮೆಡಿಕಲ್  ಕಾಲೇಜಿನಲ್ಲಿ ಎಂಬಿ ಬಿಎಸ್ ಮಾಡುತ್ತಿದ್ದಾನೆ. ಪ್ರಸ್ತುತ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆತ ಹಿಂದಿನ ಎರಡು ವರ್ಷ ಗಳಲ್ಲಿ ಶೇ.72 ಮಾರ್ಕ್ಸ್‌ಗಳೊಂದಿಗೆ ಪಾಸಾಗಿದ್ದಾನೆ.  ಅಂಥ ಪ್ರತಿಭಾವಂತನೂ ಶುಲ್ಕ ಕಟ್ಟಲಾಗದೆ ಒಂದು ಅಮೂಲ್ಯ ವರ್ಷವನ್ನೇ ಕಳೆದುಕೊಳ್ಳಬೇಕಾದ ಸಂದರ್ಭ ಕಳೆದ ಡಿಸೆಂಬರ್‌ನಲ್ಲಿ ಎದುರಾಗಿತ್ತು. ನಿಮಗೆಲ್ಲ ತಿಳಿದಿರುವಂತೆ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸರಕಾರವೇ ಭರಿಸುತ್ತದೆ.

ಆದರೆ, ಸರಕಾರದ ವಿಳಂಬ ನೀತಿಯಿಂದಾಗಿ ಸಹಾಯಧನ ಬಾರದೆ ಆತ ಸಂಕಷ್ಟಕ್ಕೆ ಸಿಲುಕಿದ್ದ. ಒಟ್ಟು ಒಂದು ಲಕ್ಷದಷ್ಟಿರುವ ಶೈಕ್ಷಣಿಕ ಶುಲ್ಕವನ್ನು ಪಾವತಿಸಿದರಷ್ಟೇ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಕಾಲೇಜು ಆಡಳಿತ  ಹೇಳಿದ ಕಾರಣ ದಾರಿಯೇ ಕಾಣದಾಯಿತು. ಇಂತಹ ಸಂದರ್ಭದಲ್ಲಿ ಆತನ ಅಳಲನ್ನು ಅರ್ಥಮಾಡಿಕೊಂಡ ವ್ಯಕ್ತಿಯೊಬ್ಬರಿಗೆ ತಕ್ಷಣಕ್ಕೆ ನೆನಪಾಗಿದ್ದು ಮಾಜಿ ಶಿಕ್ಷಣ ಸಚಿವರೊಬ್ಬರ ಹೆಸರು. ಅವರು ಮಂತ್ರಿಯಾಗಿ  ಹತ್ತು ವರ್ಷಗಳೇ ಕಳೆದಿವೆ. ಹಾಗಾಗಿ ಅವರ ಮಾತಿನಿಂದ ಉಪಯೋಗವಾಗುತ್ತೋ ಇಲ್ಲವೋ ಎಂಬ ಅನುಮಾನ ದೊಂದಿಗೇ ಕರೆ ಮಾಡಿ ವಿಷಯ ತಿಳಿಸಿದ ಅರ್ಧ ಗಂಟೆ ಯೊಳಗೆ ವಾಪಸ್ ಫೋನ್ ಮಾಡಿದ ಮಾಜಿ ಸಚಿವರು  “ಆ ಹುಡುಗನಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಭೇಟಿ ಮಾಡಲು ಹೇಳಿ. ಪರೀಕ್ಷೆಗೆ  ಅವಕಾಶ ಮಾಡಿಕೊಡುತ್ತಾರೆ” ಎಂದರು!

ಅಂದು ಆ ಹಿಂದುಳಿದ ವರ್ಗದ ವಿದ್ಯಾರ್ಥಿಯ ನೆರವಿಗೆ ಬಂದಿದ್ದು ಬಿ. ಸೋಮಶೇಖರ್. ಒಂದು ವೇಳೆ ಬಿ. ಸೋಮಶೇಖರ್  ಗೊತ್ತೆ ಅಂತ ನೀವು ಯಾರನ್ನಾದರೂ ಕೇಳಿದರೆ, “ಯಾರು, ಆ ಸೋಮಶೇಖರ್ ಅವರಾ?” ಮಹಾ ಅಹಂಕಾರಿ ಅನ್ನುವವರಿದ್ದಾರೆ. Erratic ಎಂದು ಹೇಳುವವರೂ ಸಾಕಷ್ಟಿದ್ದಾರೆ. ಅಷ್ಟಕ್ಕೂ ಮಣ್ಣಿನ ಮಗ, ಮೊಮ್ಮಗ ಅಂತ ಬೊಗಳೆ ಬಿಡುವವರು, ‘ಐಟಿ ಪಿತಾಮಹ” ತಾನೇ ಎಂದು ಪೋಸು ಕೊಡುವ ‘ವಿಗ್‌ಧಾರಿ”ಗಳು , ‘ಸಜ್ಜನಿಕೆ”ಯ ಮುಖವಾಡ ಹಾಕಿಕೊಂಡು ‘ಪ್ರಕಾಶಿ”ಸುತ್ತಿರುವವರು ಹಾಗೂ ಶಿಕ್ಷಣ ಸಚಿವರಾಗಿದ್ದಾಗ ಕನ್ನಡದ 52 ಅಕ್ಷರಗಳಿಗೇ ಕತ್ತರಿ ಹಾಕಲು ಹೊರಟಿದ್ದ  ಗಬ್ಬು’ನಾಥ”ಗಳಿಗೆ ನಾವು ಎಷ್ಟು ಒಗ್ಗಿಹೋಗಿದ್ದೇವೆಂದರೆ ನೇರನುಡಿ-ನಡವಳಿಕೆ ಯವರು ನಮಗೆ ಅಹಂಕಾರಿಗಳೆನಿಸಿ ಬಿಡುತ್ತಾರೆ.

ಅದಕ್ಕೆ ತಕ್ಕಂತೆ ಪತ್ರಕರ್ತರಾದವರೂ ಕೂಡ ಒಬ್ಬ ವ್ಯಕ್ತಿ ಬದುಕಿರುವವರೆಗೂ ತೆಗಳಿ, ಸತ್ತ ಕೂಡಲೇ ಹೊಗಳಿ ಬರೆದು ಬಿಡುತ್ತಾರೆ. ಈ ಹಿನ್ನೆಲೆಯಲ್ಲಿ, ನಾವು ಅಂದುಕೊಂಡಿರುವುದೇ ನಿಜವಾದ ಸೋಮಶೇಖರ್ ಅವರಾ? ಎಂಬ ಪ್ರಶ್ನೆಯನ್ನು ಕೇಳಿ ಕೊಳ್ಳಬೇಕಾಗಿದೆ. ನಮ್ಮ ಸಂಸದೀಯ ಪ್ರಜಾತಂತ್ರದ ಇತಿಹಾಸವನ್ನು ಒಮ್ಮೆ ದಿಟ್ಟಿಸಿ ನೋಡಿ. ಪಕ್ಷದ ಹೆಸರಿನ ಬಲದಿಂದಲೇ ಗೆದ್ದು ಬರುವವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಆದರೆ ಸಿದ್ದರಾಮಯ್ಯ, ಸಿಂಧ್ಯಾ, ರಘುಪತಿ, ಜೀವಿಜಯ, ಜೀವರಾಜ್ ಆಳ್ವ, ಸೋಮಶೇಖರ್ ವಿಷಯದಲ್ಲಿ ಇದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಇವರೆಲ್ಲರೂ ಜೆಪಿ ಚಳವಳಿಯಿಂದ ಬಂದವರೇ ಆಗಿದ್ದರೂ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸ್ವಂತ ವರ್ಚಸ್ಸು ಹೊಂದಿದ್ದವರು. ಅವರ ಮಾತುಗಳನ್ನು ಕೇಳು ವುದಕ್ಕಾಗಿಯೇ ಜನ ಬರುತ್ತಿದ್ದರು. ಅವರುಗಳ ಹೆಸರು ನೋಡಿಯೇ ವೋಟು ಹಾಕುತ್ತಿದ್ದರು.

ಅಂತಹ ವ್ಯಕ್ತಿಗತ ವರ್ಚಸ್ಸೇ 1983ರಲ್ಲಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದಿತು. ಹಾಗೆ ರಚನೆಯಾದ ರಾಮಕೃಷ್ಣ ಹೆಗಡೆಯವರ ಸರಕಾರದಲ್ಲಿ ಮೊದಲಿಗೆ ಪ್ರಾಥಮಿಕ ಹಾಗೂ ವಯಸ್ಕ ಶಿಕ್ಷಣ ಸಚಿವರಾದ ಬಿ. ಸೋಮಶೇಖರ್, 1987ರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆಯನ್ನು ಪಡೆದು ಕೊಂಡರು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಮಂತ್ರಿಯಾಗಿದ್ದರೂ, ಯಾವುದೇ ಪೂರ್ವ ಅನುಭವ ಇಲ್ಲದಿದ್ದರೂ ಜನಪರ ಕೆಲಸ ಮಾಡಬೇಕೆನ್ನುವ ಉತ್ಸಾಹ ಅವರಲ್ಲಿತ್ತು. ಉತ್ಸಾಹದ ಜತೆಗೆ ವಿವೇಚನೆಯೂ ಇತ್ತು. ಹಾಗಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕಡೆಗೆ ಮೊದಲು ಗಮನಕೊಟ್ಟರು. ಶಿಕ್ಷಣದ ಗುಣಮಟ್ಟ  ಹೆಚ್ಚಾಗಬೇಕಾದರೆ ಶಿಕ್ಷಕರ ಜ್ಞಾನದ ಮಟ್ಟವನ್ನು ಹೆಚ್ಚಾಗಬೇಕು ಎಂಬುದನ್ನು ಅರಿತ ಅವರು, ಅದುವರೆಗೂ ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾಗಿದ್ದ ಟಿಸಿಎಚ್ ಅನ್ನು ಮಾಡಲು ಪಿಯುಸಿಯನ್ನು ಅರ್ಹತೆಯನ್ನಾಗಿ ಮಾಡಿ ‘ಕ್ವಾಲಿಟಿ ಎಜುಕೇಶನ್”ಗೆ ಬುನಾದಿ ಹಾಕಿದರು!

ಅಷ್ಟೇ ಅಲ್ಲ, ಎಸ್‌ಎಸ್‌ಎಲ್‌ಸಿಯಲ್ಲಿ ಪಲ್ಟಿ ಹೊಡೆದ ವಿದ್ಯಾರ್ಥಿಗಳಿಗೆ ಮೇ.ನಲ್ಲೇ ಸಪ್ಲಿಮೆಂಟರಿ ಪರೀಕ್ಷೆ ನಡೆಸುವ ಪದ್ಧತಿಯನ್ನು 1987ರಲ್ಲಿ ಜಾರಿಗೆ ತಂದಿದ್ದೇ ಸೋಮಶೇಖರ್! ಇದರಿಂದ ಪ್ರಯೋಜನ ಆಗಿದ್ದು ಯಾರಿಗೆ? ಸಾಮಾನ್ಯವಾಗಿ ಫೇಲಾಗುವವರು ಹಿಂದುಳಿದ ಜಾತಿ/ವರ್ಗ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದವರೇ. ಹಾಗೆ ಫೇಲಾಗಿ ಹೊಲ-ಗದ್ದೆ, ಹೋಟೆಲ್, ಫ್ಯಾಕ್ಟರಿ, ಗ್ಯಾರೇಜ್ ಪಾಲಾಗುತ್ತಿದ್ದ ವಿದ್ಯಾರ್ಥಿಗಳು ಸಪ್ಲಿಮೆಂಟರಿಗಾಗಿ ಅಕ್ಟೋಬರ್, ಮಾರ್ಚ್‌ವರೆಗೂ ಕಾಯುವ ಬದಲು ಮೇ.ನಲ್ಲೇ ಮತ್ತೆ ಭವಿಷ್ಯ ಕಂಡುಕೊಳ್ಳಲು ಅವಕಾಶ ದೊರೆಯಿತು. ಕಳೆದ ವರ್ಷವೊಂದರಲ್ಲೇ 1.85 ಲಕ್ಷ ವಿದ್ಯಾರ್ಥಿಗಳು ಮೇ-ಜೂನ್‌ನಲ್ಲಿ ನಡೆದ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸಾಗಿ ಎಲ್ಲರಂತೆ ಕಾಲೇಜಿಗೆ ಹೋಗಲು ಸಾಧ್ಯವಾಯಿತು.

ಇದು ಯಾರ ದೂರದೃಷ್ಟಿಯ ಫಲ? ಮೊದಲೆಲ್ಲ ಶಾಲಾ ಶಿಕ್ಷಕರು ರಜೆ ತೆಗೆದುಕೊಳ್ಳಬೇಕೆಂದರೆ ತಾಲೂಕು ಕೇಂದ್ರಕ್ಕೆ ಬಂದು  AEO ಅನುಮತಿ ಪಡೆದುಕೊಳ್ಳಬೇಕಿತ್ತು. ಪಕ್ಕದಲ್ಲೇ ಹೈಸ್ಕೂಲ್ ಇದ್ದರೂ,  ಸ್ಥಾನಮಾನದಲ್ಲಿ ಹೈಸ್ಕೂಲ್ ಹೆಡ್‌ಮಾಸ್ಟರ್ AEO ಸಮನಾಗಿದ್ದರೂ ರಜೆ ನೀಡುವ ಅಧಿಕಾರ ಇರಲಿಲ್ಲ. ಇದರಿಂದಾಗುವ ಅನನುಕೂಲಗಳನ್ನು ಅರ್ಥಮಾಡಿ ಕೊಂಡ ಸೋಮಶೇಖರ್ ‘ಕ್ಲಸ್ಟರ್” ಪದ್ಧತಿ ತಂದರು. ಅಂದರೆ ಹೈಸ್ಕೂಲೊಂದರ ಸುತ್ತಮುತ್ತ ಬರುವ ನರ್ಸರಿ, ಪ್ರೈಮರಿ, ಮಿಡ್ಲ್ ಸ್ಕೂಲ್‌ಗಳನ್ನು ಹೈಸ್ಕೂಲ್‌ನ ವ್ಯಾಪ್ತಿಗೆ ಸೇರಿಸಿ ಹೈಸ್ಕೂಲ್ ಹೆಡ್‌ಮಾಸ್ಟರ್‌ಗೇ ರಜೆ ಕೊಡುವ ಅಧಿಕಾರ ನೀಡಿದರು. ಅಲ್ಲದೆ ಅಗತ್ಯವಿದ್ದ ಕಡೆ ಮಾತ್ರ ಶಾಲೆಗಳನ್ನು ತೆರೆಯುವ ಸಲುವಾಗಿ ‘ಸ್ಕೂಲ್ ಮ್ಯಾಪಿಂಗ್” ಮಾಡಿಸಿದರು. ‘ಆಪರೇಶನ್ ಬ್ಲಾಕ್ ಬೋರ್ಡ್” ಕಾರ್ಯಕ್ರಮದಡಿ ಭಾರೀ ಸಂಖ್ಯೆಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೂ ಕೈಹಾಕಿದರು. ಶಿಕ್ಷಕರಿಗೆ ತರಬೇತಿ ನೀಡಲು ಅನುಕೂಲ ಕಲ್ಪಿಸುವ ಸಲುವಾಗಿ  DIET (District institute of educational training) ನಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ತರಬೇತಿ ಕೇಂದ್ರಗಳನ್ನು ತೆರೆದರು. ಇಂತಹ ಪ್ರಯತ್ನ ದೇಶದಲ್ಲಿಯೇ ಮೊದಲದ್ದೆನಿಸಿಕೊಂಡಿತು.

ನಮ್ಮಲ್ಲಿ ಒಂದು ಮಾತಿದೆ. ಗೊಮ್ಮಟನ ತಲೆಮೇಲೆ ಹಾಲು ಹಾಕಿದವರಿಗಿಂತ ಪಾದ ತೊಳೆದವರೇ ಕಣ್ಣಿಗೆ ಕಾಣುತ್ತಾರೆ ಅಂತ. ಆ ಮಾತು ನಿಜಕ್ಕೂ ಅರ್ಥಗರ್ಭಿತ. ಅಷ್ಟಕ್ಕೂ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ಜಾರಿಗೆ ತಂದಿದ್ದು ವೀರಪ್ಪ ಮೊಯಿಲಿ ಅಂತ ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ ಅದರ ಕೀರ್ತಿ ಸಲ್ಲಬೇಕಾಗಿರುವುದು ಜನತಾ ಸರಕಾರ ಹಾಗೂ ಸೋಮಶೇಖರ್ ಅವರಿಗೆ!!

1984ರಲ್ಲಿಯೇ “ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ಕಾಯಿದೆ”ಯನ್ನು ಜಾರಿಗೆ ತಂದ ರಾಮಕೃಷ್ಣ ಹೆಗಡೆ ಸರಕಾರ ಕ್ಯಾಪಿಟೇಶನ್ ಫೀ ಅಥವಾ ಡೊನೇಶನ್ ಹಾವಳಿಗೆ ನಿಷೇಧ ಹೇರಿದ್ದಲ್ಲದೆ ದೇಶದಲ್ಲಿಯೇ ಮೊಟ್ಟಮೊದಲಿಗೆ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದಿತು. ಆದರೆ ವೃತ್ತಿಪರ ಕಾಲೇಜುಗಳ ಪ್ರವೇಶ, ಶುಲ್ಕಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ರೂಪಿಸದ ಕಾರಣ ಖಾಸಗಿ ಕಾಲೇಜುಗಳು ಶೇ.20ರಷ್ಟು ಸೀಟುಗಳನ್ನು ಮೆರಿಟ್ ಆಧಾರದ ಮೇಲೆ, ಉಳಿದ 80ರಷ್ಟು ಸೀಟುಗಳನ್ನು ಹೆಚ್ಚು ಹಣ ಕೊಟ್ಟವರಿಗೆ ನೀಡಲು ಆರಂಭಿಸಿದವು. ಹಾಗಾಗಿ ಉನ್ನಿಕೃಷ್ಣನ್ ಪ್ರಕರಣದ ಸಂಬಂಧ 1993ರಲ್ಲಿ ನೀಡಿದ ತೀರ್ಪಿನಲ್ಲಿ ಸೂಕ್ತ ನಿಯಮಗಳನ್ನು ರೂಪಿಸು ವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

ಅನಿವಾರ್ಯವಾಗಿ ಕೆಲ ನಿಯಮಗಳನ್ನು ಜಾರಿಗೆ ತಂದ ಮೊಯಿಲಿ ಸರಕಾರ ‘ಸಿಇಟಿ” ತನ್ನ ಕಲ್ಪನೆಯ ಕೂಸೆಂಬಂತೆ ಬೀಗಿತು. ಪತ್ರಿಕೆಗಳೂ ಅದೇ ಸತ್ಯವೆಂದು ಬರೆದವು. ಇತ್ತ ಸಿಇಟಿ ಮಾತ್ರ ಗೊಂದಲದ ಗೂಡಾಗಿಯೇ ಉಳಿಯಿತು. ಪ್ರವೇಶ ಪರೀಕ್ಷೆಯಾಗಲಿ, ಸೀಟು ಹಂಚಿಕೆಯಾಗಲಿ ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ. ಎಲ್ಲ ವರ್ಗಗಳಿಗೂ ಸರಿಯಾದ ಮೀಸಲು ಇರಲಿಲ್ಲ. ಆದರೆ 1996ರಲ್ಲಿ ಉನ್ನತ ಶಿಕ್ಷಣ ಸಚಿವರಾದ ಸೋಮಶೇಖರ್ ಸಿಇಟಿಯಲ್ಲಿನ ಗೊಂದಲ ನಿವಾರಣೆಗೆ ಮುಂದಾದರು. ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜನ್ನು ಆಯ್ದುಕೊಳ್ಳಲು ಅವಕಾಶ ಮಾಡಿಕೊಡುವ ಸಲುವಾಗಿ ‘ಕೌನ್ಸೆಲಿಂಗ್” ಆರಂಭಿಸಿದ್ದೇ ಅವರು! ಅಷ್ಟೇ ಅಲ್ಲ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿಗಳು ಸಿಇಟಿ ಮೂಲಕ ಸೀಟು ಪಡೆದುಕೊಂಡ ನಂತರವೂ ಶುಲ್ಕ ಕಟ್ಟಲು ತಡಕಾಡಬೇಕಾಗಿತ್ತು. ಸರ ಕಾರದ ಸಹಾಯ ಬರುವುದು ಯಾವ ಕಾಲಕ್ಕೋ ಎಂಬ ಪರಿಸ್ಥಿತಿ ಇತ್ತು. ಇಂತಹ ಸಮಸ್ಯೆಯನ್ನು ಮನಗಂಡ ಸೋಮಶೇಖರ್ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯಾದ ಮರುಕ್ಷಣವೇ ಅವರ ಶುಲ್ಕವನ್ನು ಸರಕಾರವೇ ಸಿಇಟಿ ಸೆಲ್‌ಗೆ ಪಾವತಿಸುವ ವ್ಯವಸ್ಥೆ ಮಾಡಿ ದರು. ಇವತ್ತು ಪರಿಶಿಷ್ಟ ಜಾತಿ/ವರ್ಗಗಳ ವಿದ್ಯಾರ್ಥಿಗಳು ಫೀ ಕಟ್ಟುವ ಬಗ್ಗೆ ತಲೆಕೆಡಿಸಿಕೊಳ್ಳದೆ ಓದುವಂತಾಗಿದ್ದರೆ ಅದರ ಹಿಂದೆ ಸೋಮಶೇಖರ್ ದೂರದೃಷ್ಟಿಯಿದೆ.

ಈ ಸೋಮಶೇಖರ್ ಮಹಾ ಕಿಲಾಡಿಯೂ ಹೌದು!1996ರಲ್ಲಿ ಅದೃಷ್ಟ ಖುಲಾಯಿಸಿ ‘ಫ್ರೀ ಲೊಟ್ಟೋ ಲಾಟರಿ” ಥರ ಬಂದ ಪ್ರಧಾನಿಗಾದಿಯನ್ನು ಬಾಚಿ ತಬ್ಬಿಕೊಂಡ ದೇವೇಗೌಡರಿಗೆ ‘ಗೌರವ ಡಾಕ್ಟರೇಟ್” ಪದವಿ ಕೊಟ್ಟು ಮೆಚ್ಚುಗೆಗೆ ಪಾತ್ರರಾಗಲು ಬೆಂಗಳೂರು ವಿವಿಯ ಆಗಿನ ಕುಲಪತಿ ಎನ್.ಆರ್. ಶೆಟ್ಟಿಯವರು ತಯಾರಿ ನಡೆಸಿದ್ದರು. ಆದರೆ ಸೋಮಶೇಖರ್‌ಗೆ ಈ ವಿಷಯ ಗೊತ್ತಾದ ಕೂಡಲೇ “ಡಾಕ್ಟರೇಟ್ ಕೊಡುವುದಕ್ಕೂ ಒಂದು ಅರ್ಹತೆ, ಮಾನದಂಡ ಅನ್ನುವುದು ಬೇಕು. ರಾಜಕೀಯ ಹಿತಾಸಕ್ತಿಗಳನ್ನಿಟ್ಟುಕೊಂಡು ಗೌರವ ಡಾಕ್ಟರೇಟ್ ಕೊಟ್ಟರೆ ಪದವಿಯ ಮಾನ’ದಂಡ”ವಾಗುತ್ತದೆ” ಎಂದು ಬಹಿರಂಗ ಹೇಳಿಕೆಕೊಟ್ಟು ಬಿಟ್ಟರು!! “ಪ್ರೊ ಚಾನ್ಸೆಲರ್” ಕೂಡ ಆಗಿರುವ ಉನ್ನತ ಶಿಕ್ಷಣ ಸಚಿವರೇ ವಿರೋಧ ವ್ಯಕ್ತಪಡಿಸಿದ ಕಾರಣ ಎನ್.ಆರ್. ಶೆಟ್ಟಿಯವರು ತಮ್ಮ “ಯೋಜನೆ”ಯನ್ನೇ ಕೈಬಿಡಬೇಕಾಯಿತು. ಆದರೇನಂತೆ, ದೇವೇಗೌಡರನ್ನು “ಡಾಕ್ಟರ್ ಎಚ್.ಡಿ. ದೇವೇಗೌಡ” ಅಂತ ಕರೆಯುವ “ಭಾಗ್ಯ”ವನ್ನು ತಪ್ಪಿಸಿದ್ದಕ್ಕಾಗಿಯಾದರೂ ಸೋಮಶೇಖರ್‌ಗೆ ನಾವು ಥ್ಯಾಂಕ್ಸ್ ಹೇಳಬೇಕಲ್ಲವೆ?!

ಇದೇನೇ ಇರಲಿ, ಸೋಮಶೇಖರ್ ಅವರು ಸಮಸ್ಯೆಗೆ ಸಿಲುಕಿಸಿದ್ದೂ ಇದೆ.ಸ್ವಂತ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿ ಸಲು ಹವಣಿಸುತ್ತಿದ್ದ ಕೆಲ ಕ್ಯಾಬಿನೆಟ್ ಸಹೋದ್ಯೋಗಿಗಳ ಬೇಡಿಕೆಯನ್ನು ಈಡೇರಿಸದ ಸೋಮಶೇಖರ್ ವಿರುದ್ಧ 1997ರಲ್ಲಿ ‘ಕಾಪಿ ಹಗರಣ” ಸೃಷ್ಟಿಸಲಾಯಿತು. ಕಾನೂನು ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸೋಮಶೇಖರ್ ಕಾಪಿ ಮಾಡಿದ್ದರು ಎಂಬ ಹುಸಿ ಆರೋಪ ಹೊರಿಸಿದರು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಖಾತೆ ಬದಲಾಯಿಸಿ ಕೊಡುತ್ತೇನೆ, ಅಧಿಕಾರದಲ್ಲಿಯೇ ಮುಂದುವರಿ ಅಂತ ಮುಖ್ಯಮಂತ್ರಿ ಪಟೇಲರು ಹೇಳಿದರೂ ಮಣಿಯದೆ ರಾಜೀನಾಮೆ ನೀಡಿ ಹೊರಬಂದ ಸೋಮಶೇಖರ್ ಸದನವನ್ನುದ್ದೇಶಿ ಮಾಡಿದ ಭಾಷಣ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು:

“ಸಭಾಧ್ಯಕ್ಷರೇ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮೇಲೇರಬಹುದು. ಆದರೆ ಅಲಂಕರಿಸುವ ಹುದ್ದೆಯಿಂದ ಯಾರೂ ದೊಡ್ಡ ವ್ಯಕ್ತಿಗಳಾಗುವುದಿಲ್ಲ. ಪ್ರತಿಭೆಯಿಂದ ಮೇಲೆ ಬರಬೇಕು” ಅಂತ ಸೋಮಶೇಖರ್ ಹೇಳುತ್ತಿದ್ದರೆ ರಮೇಶ್ ಕುಮಾರ್, ನಾಣಯ್ಯ, ನಾಗೇಗೌಡರ ಮುಖಗಳು ಸಣ್ಣಗಾಗಿದ್ದವು! ಸ್ವಯಿಚ್ಛೆಯಿಂದ ನ್ಯಾಯಾಂಗ ತನಿಖೆ ಎದುರಿಸಿದ ಸೋಮಶೇಖರ್ ಮೂರು ತಿಂಗಳಲ್ಲೇ ದೋಷಮುಕ್ತರಾಗಿ ಮತ್ತೆ ಸಂಪುಟ ಸೇರಿ ಕಂದಾಯ ಸಚಿವರಾದರು. ಅಲ್ಲೂ ಸುಮ್ಮನೆ ಕೂರಲಿಲ್ಲ. ಪಹಣಿ, ಪಟ್ಟಾದಂಥ ಭೂದಾಖಲೆಗಳನ್ನು ಗಣಕೀಕರಣ ಮಾಡುವ ‘ಭೂಮಿ” ಯೋಜನೆಯನ್ನು ಆರಂಭಿಸಿದ್ದೂ ಸೋಮಶೇಖರ್  ಅವರೇ ಎಂದರೆ ನಂಬುತ್ತೀರಾ?

ಫಾರ್ಮ್ 53, 77ಎ ವಿತರಿಸುವ ಮೂಲಕ ಬಡವರ ತುಂಡುಭೂಮಿಯನ್ನು ಸಕ್ರಮಗೊಳಿಸಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ದಲಿತರ ಉದ್ಧಾರ ಎಂದರೆ ಬರೀ ಮೀಸಲು ಸೌಲಭ್ಯ ನೀಡುವುದಲ್ಲ. ಅವರಲ್ಲಿ “ಸ್ವಾಭಿಮಾನ”ವನ್ನು ಬೆಳೆಸ ಬೇಕೆಂದು ಬಹಳ ಜನ ಹೇಳುತ್ತಾರೆ. ಆದರೆ ದಲಿತ ನೊಬ್ಬನಿಗೆ ಯಾವುದು ಸ್ವಾಭಿಮಾನ ಎನಿಸುತ್ತೋ ಅದು ಸವರ್ಣೀಯರಿಗೆ ‘ಅಹಂಕಾರ”ವಾಗಿ ಕಾಣುತ್ತದೆ. ಸೋಮ ಶೇಖರ್ ಅವರನ್ನು ಅಹಂಕಾರಿ ಅಂತ ಕರೆಯುವುದರ ಹಿಂದೆಯೂ ಇಂತಹ ಮನಸ್ಥಿತಿಯಿದೆ. ಆದರೆ ದಲಿತ ಸಮುದಾಯದಲ್ಲಿ, ಬಡವರ ಹಟ್ಟಿಯಲ್ಲಿ ಹುಟ್ಟಿದರೂ ಪ್ರತಿಭೆಯಿಂದ ಮೇಲೆ ಬಂದಿರುವ ಸೋಮಶೇಖರ್, ಸುಳ್ಳದ ಅಂಗಾರ, ಗಂಡಸಿ ಶಿವರಾಂ, ಗುರುಪಾದ ಸ್ವಾಮಿ, ಏಕಾಂತಯ್ಯ, ನಜೀರ್ ಸಾಬ್, ಎಸ್.ಕೆ. ಕಾಂತಾ, ಎಚ್.ಜಿ. ಗೋವಿಂದೇಗೌಡ, ಪ್ರೊ. ಲಕ್ಷ್ಮೀ ಸಾಗರ್, ಪಾನ ನಿಷೇಧವನ್ನು ರದ್ದುಪಡಿಸಿದ್ದನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಶೋಧರ ದಾಸಪ್ಪನವರಂತಹ ನಾಯಕರು ನಮಗೇ ಬೇಕೇ ಹೊರತು ಮೂವರು ಸಲಹೆಗಾರರನ್ನು ಇಟ್ಟುಕೊಂಡು ರಾಜ್ಯವಾಳುವ ಯಾರೋ ಪರರಾಜ್ಯದಿಂದ ಬಂದ ರಾಜ್ಯಪಾಲನಲ್ಲ. ಇದನ್ನು  ಕರ್ನಾಟಕದ ಮತದಾರ ಅರ್ಥಮಾಡಿಕೊಳ್ಳಬೇಕು.


Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: