Voice against mining : URA right or wrong? – ದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!

ನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು ಹೀಗೆ ತೆಗೆಯುತ್ತಾ ಹೋದರೆ ಮುಂದೊಂದು ದಿನ ಪ್ರಕೃತಿಯ ಒಡಲು ಬರಿದಾಗುತ್ತದೆ. ಹಾಗಾಗಬಾರದು ಅನ್ನುವುದು ಅನಂತಮೂರ್ತಿಗಳ ಉದ್ದೇಶ.

ಅವರ ಮಾತನ್ನು ಮತ್ತಷ್ಟು ವಿಸ್ತರಿಸಿ ನೋಡುವುದಾದರೆ ಬರೀ ಅದಿರು ಅಂತಲ್ಲ, ಒಟ್ಟಾರೆಯಾಗಿ ನಮಗೆ ಪ್ರಾಕೃತಿಕ ಸಂಪತ್ತಿನ ಬಗ್ಗೆ, ಅದರ ಉಪಯುಕ್ತತೆಯ ಬಗ್ಗೆ, ಅದನ್ನು ನಾಶ ಮಾಡುತ್ತ ಹೋದರೆ ಭವಿಷ್ಯ ಎಷ್ಟು ಕರಾಳವಾಗಲಿದೆ ಅನ್ನುವ ಬಗ್ಗೆ ಕರ್ನಾಟಕ ಅಂತಲ್ಲ, ದೇಶದ ತೊಂಬತ್ತೈದಕ್ಕೂ ಹೆಚ್ಚಿನ ಭಾಗ ಜನರಿಗೇ ಗೊತ್ತಿಲ್ಲ.

ನೀವೇ ನೋಡುತ್ತಾ ಹೋಗಿ, ಕರ್ನಾಟಕದ ಪಿನಾಕಿಸಿ ನದಿ ವರ್ಷಾನುಗಟ್ಟಲೆ ಕಾಲದಿಂದ ತನ್ನ ಒಡಲಲ್ಲಿರುವ ಮರಳನ್ನು ಕಳೆದುಕೊಳ್ಳುತ್ತಾ, ಕಳೆದುಕೊಳ್ಳುತ್ತಾ ಬರಿದಾಗಿರುವ ಬಗ್ಗೆ, ಸಕಲೇಶಪುರದ ಅರಣ್ಯದಿಂದ ದೋಚುತ್ತಿರುವ ಕೆಂಪು ಹರಳುಗಳ ಬಗ್ಗೆ, ಸಿಕ್ಕ ಸಿಕ್ಕ ಹಾಗೆ ಹೀರುತ್ತಿರುವ ನೀರಿನ ಬಗ್ಗೆ ಹೀಗೆ ಯಾವುದೆಂದರೆ ಯಾವುದರ ಬಗ್ಗೆಯೂ ತುಂಬ ಜನರಿಗೆ ಅರಿವೇ ಇಲ್ಲ.

ನದೀ ಪಾತ್ರದ ಮರಳನ್ನು ತೆಗೆಯುತ್ತಾ, ತೆಗೆಯುತ್ತಾ ಅದರ ಒಡಲನ್ನು ಬರಿದು ಮಾಡಿದ ಕಾರಣಕ್ಕಾಗಿ ಎಷ್ಟೋ ನದಿಗಳು ಪಾತ್ರವೇ ಬದಲಾದ ಉದಾಹರಣೆಗಳಿವೆ. ಎಷ್ಟೋ ನದಿಗಳು ಕಣ್ಮರೆಯೇ ಆದ ಉದಾಹರಣೆಗಳಿವೆ. ಆದರೆ ನಮ್ಮ ಪಿನಾಕಿನಿ ನದಿಯ ಬಗ್ಗೆ ದುಃಖಿಸಲು ಯಾರಿಗೂ ಪುರುಸೊತ್ತಿಲ್ಲ.

ಅದಿರಲಿ, ಈ ಮಿನರಲ್ ವಾಟರ್ ಅಂತ ಕಂಡ ಕಂಡ ನೀರಿನ ಮೂಲಗಳನ್ನು ಬಳಸಿಕೊಳ್ಳುತ್ತಿರುವ ಮಾಫಿಯಾ ಏನಿದೆ? ಅದರ ಬಗ್ಗೆ ಯಾವುದಾದರೂ ಸರ್ಕಾರ ಚಕಾರವೆತ್ತಿದೆಯಾ? ಕೇಳಿ ನೋಡಿ. ನಿಜ ಹೇಳಬೇಕೆಂದರೆ ಈ ಮಿನರಲ್ ವಾಟರ್ ಕಂಪನಿಗಳ ಪೈಕಿ ಅನೇಕವು ಸರ್ಕಾರಕ್ಕೆ ಕನಿಷ್ಠ ಪಕ್ಷ ತೆರಿಗೆ ಕಟ್ಟುವ ಕೆಲಸ ಕೂಡಾ ಮಾಡುತ್ತಿಲ್ಲ. ಕೇಳಿ ನೋಡಿದರೆ ಸಾಕು, ಸರ್ಕಾರದ ಮಂತ್ರಿಗಳದು ಒಂದೇ ಬೊಂಬಡ. ಇಂತಹ ಮಿನರಲ್ ವಾಟರ್ ಕಂಪನಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳುತ್ತೇವೆ. ಸುಮ್ಮನೆ ಬಿಡುವುದಿಲ್ಲ ಎಂಬ ಬಭ್ರುವಾಹನ ಪೌರುಷ. ಇನ್ನು ಅರಣ್ಯ ಸಂಪತ್ತು ಯಾವ ಪರಿ ಲೂಟಿ ಮಾಡಲಾಗಿದೆ, ಮಾಡಲಾಗುತ್ತಿದೆ ಅಂದರೆ ಇವತ್ತು ಕರ್ನಾಟಕದಲ್ಲಿ ಉಳಿದಿರುವ ಅರಣ್ಯ ಸಂಪತ್ತು ದೇಶದಲ್ಲಿರುವ ಅರಣ್ಯ ಸಂಪತ್ತಿನ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆ. ಇದು ಇವತ್ತಿನ ಸ್ಥಿತಿ. ಇಂತಹ ಕಾಲದಲ್ಲಿ ಅನಂತಮೂರ್ತಿಗಳು ಗಣಿಗಾರಿಕೆ ವಿರುದ್ಧ ದೊಡ್ಡ ಹೋರಾಟ ನಡೆಯಬೇಕು ಅಂದಿದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಯಾವ ವೇದಿಕೆಯ ಮೇಲೆ ನಿಂತು ಮಾತನಾಡುತ್ತಿದ್ದಾರೆ? ಅಂತ ನೋಡಿದರೆ ಗಣಿಗಾರಿಕೆ ವಿರುದ್ಧ ಅವರು ಸಾರಲು ಬಯಸಿರುವ ಸಮರ ತುಂಬ ದಿನ ನಡೆಯುತ್ತದಾ? ಅನ್ನುವುದೇ ಅನುಮಾನವಾಗಿ ಹೋಗಿದೆ.

ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅನಂತಮೂರ್ತಿ ಪದೇ ಪದೆ ಕಾಣಿಸಿಕೊಳ್ಳುತ್ತಿರುವುದು ಮಾಜಿ ಪ್ರಧಾನಿ ದೇವೆಗೌಡರ ಜೊತೆ, ಹತ್ತುತ್ತಿರುವುದು ಅದೇ ದೇವೆಗೌಡರ ನೇತೃತ್ವದ ಜೆಡಿಎಸ್ ವೇದಿಕೆಗೆ. ಹಾಗವರು ಯಾಕೆ ಜೆಡಿಎಸ್ ವೇದಿಕೆ ಹತ್ತುತ್ತಿದ್ದಾರೆ ಎಂದರೆ ಅವರಿಗೀಗ ಅರ್ಜೆಂಟಾಗಿ ಕೋಮುವಾದಿ ಬಿಜೆಪಿ ವಿರುದ್ಧ ಸೆಕ್ಯುಲರ್ ಶಕ್ತಿಗಳನ್ನು ಒಂದು ಮಾಡುವ ತವಕ. ಅದಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಒಂದಾಗಬೇಕು ಕಣ್ರೀ ಅಂತ ಸಮಯ ಸಿಕ್ಕಾಗಲೆಲ್ಲ ಹೇಳುತ್ತಲೇ ಇರುತ್ತಾರೆ. ಅನಂತಮೂರ್ತಿಗಳು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುವುದೇ ಆದರೆ, ಅದು ಯಶಸ್ವಿಯಾಗುವ ದೃಷ್ಟಿಯಿಂದ ಒಂದು ವಿಷಯವನ್ನು ಅವರು ಕ್ಲಿಯರ್ ಮಾಡಲೇಬೇಕಾಗುತ್ತದೆ. ಅದೆಂದರೆ ಕೋಮುವಾದಿ ಭ್ರಷ್ಟರ ವಿರುದ್ಧ ಹೋರಾಡಲು ತಾವು ಜಾತ್ಯತೀತ ಭ್ರಷ್ಟರ ಜೊತೆ ಸೇರಲು ರೆಡಿ ಅಂತ ಹೇಳಬೇಕಾಗುತ್ತದೆ. ಯಾಕೆಂದರೆ ಗಣಿಗಾರಿಕೆಯೇ ಅವ್ಯವಹಾರ ಅಂದರೆ ಗಣಿಗಾರಿಕೆ ಮಾಡುವ ಯಾವುದೇ ಪಕ್ಷದವನಿರಲಿ, ಅವನ ವಿರುದ್ಧ ಹೋರಾಡುವುದು ಅನಂತಮೂರ್ತಿಯವರಿಗೆ ಅನಿವಾರ್ಯವಾಗುತ್ತದೆ.

ಇವತ್ತು ಕರ್ನಾಟಕದಲ್ಲಿ ಗಣಿಗಾರಿಕೆ ಲಾಬಿ ಅಂತ ಬೆಳೆಯಲು ಕಾರಣ ಪುರುಷರಾದವರೇ ಕಾಂಗ್ರೆಸ್ ಮಹಾನುಭಾವರು. ಐದು ವರ್ಷಗಳ ಹಿಂದೆ ಎಸ್.ಎಂ.ಕೃಷ್ಣ ತರಾತುರಿಯಲ್ಲಿ ಬಳ್ಳಾರಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಅಂತ ನೂರಾರು ಎಕರೆ ಜಾಗ ಕೊಟ್ಟರು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗಣಿ ಲಾಬಿ ಅಂತ ಶುರುವಾಗಲು ಕೃಷ್ಣ ನೀಡಿದ ಈ ಕೊಡುಗೆ ದೊಡ್ಡದು. ಇದಾದ ಐದು ವರ್ಷಗಳಲ್ಲಿ ಏನಾಗಿದೆ ನೋಡಿ. ಕಾಂಗ್ರೆಸ್ ನಲ್ಲೇ ಘಟಾನುಘಟಿ ಗಣಿ ಧಣಿಗಳಿದ್ದಾರೆ. ಈ ಸಲದ ಉಪಚುನಾವಣೆಯಲ್ಲಿ ಅವರ ಪಕ್ಷದ ಕ್ಯಾಂಡಿಡೇಟಾಗಿ ಕಾರವಾರದಿಂದ ಸ್ಪರ್ಧಿಸಿದ ಸತೀಶ್ ಸೈಲ್ ಯಾರು? ಗಣಿ ಉದ್ಯಮಿ ತಾನೆ? ಇನ್ನು ಅನಿಲ್ ಲಾಡ್ ಸೇರಿದಂತೆ ಘಟಾನುಘಟಿ ಗಣಿ ಧಣಿಗಳು ಕಾಂಗ್ರೆಸ್ ಪಕ್ಷದ ಪಡಸಾಲೆಯಲ್ಲಿದ್ದಾರೆ.

ಉಳಿದಂತೆ ಜೆಡಿಎಸ್ [^]‌ನ ವಿಷಯಕ್ಕೆ ಬರೋಣ. ಮಾಜಿ ಪ್ರಧಾನಿ [^] ದೇವೆಗೌಡರ ಮನೆಯಲ್ಲಿರುವವರೇ ಇವತ್ತು ಗಣಿಗಾರಿಕೆ ಉದ್ಯಮದಲ್ಲಿದ್ದಾರೆ. ಪಾರ್ಟ್‌ನರ್‌ಗಳ ರೂಪದಲ್ಲೋ ಅಥವಾ ಇನ್ಯಾವ ರೂಪದಲ್ಲೋ ಇರಬಹುದು. ಒಟ್ಟಿನಲ್ಲಿ ಅವರಿಗೂ, ಗಣಿಗಾರಿಕೆಗೂ ಹತ್ತಿರದ ನಂಟು.

ಇನ್ನು ಕುಮಾರಸ್ವಾಮಿ ಬಿಜೆಪಿಯವರಿಗೆ ಅಧಿಕಾರ ಕೊಡದೇ ನಾಟಕವಾಡಿ ಇನ್ನೇನು ಸರ್ಕಾರ ಉರುಳಬೇಕು ಅನ್ನುವ ಕಾಲದಲ್ಲಿ ತಮ್ಮ ಪಕ್ಷದ ಯಾವ್ಯಾವ ಶಾಸಕರಿಗೆ ಗಣಿಗಾರಿಕೆ ಲೈಸೆನ್ಸ್ ಕೊಟ್ಟರು ತೆಗೆದು ನೋಡಿ. ತುಮಕೂರು ಜಿಲ್ಲೆಯ ನಾಲ್ಕು ಮಂದಿ ಶಾಸಕರಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ಶಾಸಕರಿಗೆ, ಬಳ್ಳಾರಿಯ ಒಬ್ಬರಿಗೆ, ತಮಗೆ ಯಾರ್ಯಾರು ಬೇಕೋ ಅವರಿಗೆಲ್ಲ ಈ ಗಣಿಗಾರಿಕೆ ಲೈಸೆನ್ಸ್ ಕೊಟ್ಟರು ಕುಮಾರಸ್ವಾಮಿ.

ಅಂದ ಹಾಗೆ, ಅವರು ಗಣಿಗಾರಿಕೆ ಲೈಸೆನ್ಸ್ ಯಾರ್ಯಾರಿಗೆ ಕೊಟ್ಟರೋ ಆ ಪೈಕಿ ಇಬ್ಬರು ಶಾಸಕರು ಇವತ್ತು ಕಾಂಗ್ರೆಸ್ ಪಡಸಾಲೆಯಲ್ಲಿದ್ದಾರೆ. ಇಬ್ಬರು ಮೊನ್ನೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಅರ್ಥಾತ್ ಇವತ್ತು ಗಣಿಗಾರಿಕೆ ಮಾಡುವುದು ಅವ್ಯವಹಾರ ಎಂದರೆ ಅನಂತಮೂರ್ತಿಗಳು ತಾವು ಕಾಣಿಸಿಕೊಳ್ಳುತ್ತಿರುವ ವೇದಿಕೆಯಿಂದ ಕೆಳಗಿಳಿಯುವುದು ಅನಿವಾರ್ಯವಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಅನಂತಮೂರ್ತಿಗಳಂತಹ ಹಿರಿಯರು ಈ ದೇವೆಗೌಡರಂತಹ ಪಕ್ಕಾ ರಾಜಕಾರಣಿ ಜೊತೆ, ಸೆಕ್ಯುಲರಿಸಂ ಅಂದರೆ ಏನು ಅಂತ ಗೊತ್ತಿಲ್ಲ ಎಂದು ಸಿಎಂ ಆಗಿದ್ದಾಗಲೇ ಉಡಾಫೆಯಿಂದ ಹೇಳಿದ್ದ ಕುಮಾರಸ್ವಾಮಿಯಂಥವರ ಜೊತೆ ಕಾಣಿಸಿಕೊಳ್ಳುವುದು ಅವರಿಗೆ ಶೋಭೆ ತರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂಥವರ ಜೊತೆ ಸೇರಿ ಅನಂತಮೂರ್ತಿಗಳಿಗೆ ಆಗಬೇಕಾಗಿರುವುದೇನು? ಸಾಹಿತ್ಯ ಕ್ಷೇತ್ರದ ಅತ್ಯಂತ ದೊಡ್ಡ ಗೌರವವನ್ನು ಅವರು ಪಡೆದಿದ್ದಾಗಿದೆ. ಇನ್ನು ನೋಬೆಲ್‌ನಂತಹ ಪ್ರಶಸ್ತಿ ಬೇಕೆಂದರೆ ಅದಕ್ಕೆ ಗೌಡರ ಜೊತೆ ಸೇರಿ ಹೋರಾಟ ನಡೆಸುವ ಅಗತ್ಯ ಇಲ್ಲ. ಯಾಕೆಂದರೆ ಮೂರು ನಾಮ ಇಟ್ಟುಕೊಂಡು ದೇವೇಗೌಡರು ತಿರುಪತಿಯ ಬೆಟ್ಟ ಹತ್ತಿದರೂ ಅನಂತಮೂರ್ತಿಗಳಿಗೆ ನೋಬೆಲ್ ಅವಾರ್ಡು ಕೊಡಿಸಲು ಸಾಧ್ಯವಿಲ್ಲ. ಅಂದ ಮೇಲೆ ಅವರ ಪಕ್ಷದ ವೇದಿಕೆಯ ಮೇಲೆ ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳಬೇಕು ಅನಂತಮೂರ್ತಿ?

ನಿಜ ಹೇಳಲಾ? ಅನಂತಮೂರ್ತಿ ಅವರಂತಹ ಹಿರಿಯರು ಯಾವುದೇ ಪಕ್ಷದ ವೇದಿಕೆಯ ಮೇಲೆ ಹತ್ತದೆ, ಸ್ವತಂತ್ರವಾಗಿ ನಿಂತು ಗಣಿ ಹೋರಾಟದ ಬಗ್ಗೆ ಕರೆ ಕೊಡಲಿ, ಅವರನ್ನು ಬೆಂಬಲಿಸುವ ಜನರಿದ್ದಾರೆ. ಮುಂದಿನ ಜನಾಂಗಕ್ಕಾಗಿ ದೇಶದ ಸಂಪತ್ತನ್ನು ಉಳಿಸೋಣ ಅಂದರೆ ಥಟ್ಟಂತ ಸ್ಪಂದಿಸುವ ಜನರಿದ್ದಾರೆ. ಅನಂತಮೂರ್ತಿಗಳು ಯಾವುದೇ ಹೋರಾಟಕ್ಕೆ ಕರೆ ಕೊಡುವ ಮುನ್ನ ಈ ಕೆಲಸ ಮಾಡಲಿ. ಇಲ್ಲದಿದ್ದರೆ ಅವರ ಶ್ರಮ ದೇವೆಗೌಡರ ಮಕ್ಕಳಿಗೆ ಅಧಿಕಾರ ಕೊಡಿಸಲು ಬಳಕೆಯಾಗುತ್ತದೆ, ವ್ಯರ್ಥವಾಗುತ್ತದೆ. ನಾಡು ಮೆಚ್ಚುವ ಜ್ಞಾನಪೀಠಿ ಇದನ್ನು ಕುರಿತು ಒಂದು ಸಲ ಯೋಚಿಸಲಿ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: