ಆವು ಈವಿನ ನಾವು ನೀವಿಗೆ

ಆವು ಈವಿನ ನಾವು ನೀವಿಗೆ
ಆನು ತಾನಾದ ತನನನ
ನಾವು ನೀನಿನ ಈನೀನಾನಿಗೆ
ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ
ಘನಘನಿತ ಚತುರಸ್ವನಾ
ಹತವೊ ಹಿತವೊ ಆ ಅನಾಹತಾ
ಮಿತಿ ಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ
ಮನನವೇ ಸಹಿತಸ್ತನಾ.

ಗೋವಿನ ಕೊಡುಗೆಯ ಹಡಗದ ಹುಡುಗಿ
ಬೆಡಗಿಲೆ ಬಂದಳು ನಡುನಡುಗಿ;
ಸಲಿಗೆಯ ಸುಲಿಗೆಯು ಬಯಕೆಯ ಒಲುಮೆ
ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ ನಲುವಿನ ನಾಲಿಗೆ
ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ ಸನಿಹ ಹನಿ;
ಬೆಚ್ಚಿದ ವೆಚ್ಚವು ಬಸುರಿನ ಮೊಳಕೆ
ಬಚ್ಚಿದ್ದಾವುದೊ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ
ಮೊಲೆ ಊಡಿಸುವಳು ಪ್ರತಿಭೆ ನವ.

ಚಿತ್ತೀಮಳಿ, ತತ್ತಿ ಹಾಕತ್ತಿತ್ತು ಸ್ವಾತಿಮುತ್ತೀನೊಳಗ
ಸತ್ತಿಯೋ ಮಗನ ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಈ ಜಗ ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ ಶ್ರೀ ಗುರುದತ್ತ ಅಂದ

‘ನಾನು’ ‘ನೀನು’ ‘ಆನು’ ‘ತಾನು’
ನಾಕು ನಾಕೇ ತಂತಿ.
ಸೊಲ್ಲಿಸಿದರು ನಿಲ್ಲಿಸಿದರು
ಓಂ ದಂತಿ!
ಗಣನಾಯಕ ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು
ಧಾತು ಮಾತು ಕೂಡಿ.

About sujankumarshetty

kadik helthi akka

Posted on ಆಗಷ್ಟ್ 9, 2009, in ನಾಕುತಂತಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮ ಟಿಪ್ಪಣಿ ಬರೆಯಿರಿ