ದೀಪ
ಬಂತಿದೊ ಸೃಂಗಾರ ಮಾಸ
ಕಂತು ನಕ್ಕ ಚಂದ್ರಹಾಸ
ಎಂತು ತುಂಬಿತಾsಕಾಶ
ಕಂಡವರನು ಹರಸಲು.
ಕಿರಿಬೆರಳಲಿ ಬೆಳ್ಳಿ ಹರಳು
ಕರಿ ಕುರುಳೊಳೊ ಚಿಕ್ಕೆ ಅರಳು
ತೆರದಳಿದೊ ತರಳೆ ಇವಳು
ತನ್ನರಸನನರುಸಲು.
ಹಂಗೆ ಯಮುನೆ ಕೂಡಿ ಹರಿದು
ಸಂಗಮ ಜಲ ಬಿಳಿದು ಕರಿದು
ತಿಂಗಳ ನಗೆ ಮೇರೆವರಿದು
ಬೇರೆ ಮಿರುಗು ನೀರಿಗು.
ಪಂಥದಿಂದ ಮನೆಯ ತೊರೆದು
ಪಾಂಥ ನೆನೆದನತ್ತು ಕರೆದು;
ಇಂಥ ಸಮಯ ಬೇರೆ ಬರದು
ದಂಪತಿಗಳಿಗಾರಿಗು!
ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವೇ?
ದೀಪ ತೇಲಿ ಬಿಟ್ಟೆವು.
Advertisements
Posted on ಆಗಷ್ಟ್ 9, 2009, in ನಾದಲೀಲೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.
ನಿಮ್ಮ ಟಿಪ್ಪಣಿ ಬರೆಯಿರಿ
Comments 0