ಸೀಮಂತಿನಿ

ಸೀಮಂತಿನಿ….ಕವನ ಸಂಕಲನ – ವೃತ್ತ.
—————————————
ಯಾರಿವಳು?
ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?
ಗಂಡನೆಂಬವನನ್ನ ಕಂಡ ಕಂಡಂತೆಯೇ
ಕಂದ ಎಂಬಂತೆ ಮಮತೆಯಲಿ ಮಾತಾಡುವಳು!
ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ
ಉಡಿಯಲ್ಲಿ ಹಾಕಿ ಶಮಿಸಿದವಳು
ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ
ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ
ಬೆನ್ನ ಬಳಿ ಬಂದು ಕೊರಳಿಗೆ ತೂಗುತಿದ್ದವಳು?
ಕೈಯ ಪುಸ್ತಕವನ್ನು ಕಿತ್ತು ಗೂಡೊಳಗೆಸೆದು
ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು!
ಕೆನ್ನೆಯಲಿ ಬೆರಳಿಟ್ಟು
ಕೊರಳ ಸರ ತುಟಿಗಿಟ್ಟು
ಏನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು?
ಈಗ ಅದೆ ಹುಡುಗಿ
ಬೇಸಿಗೆಯ ಉರಿಗಣ್ಣ
ಬೆಳುದಿಂಗಳಲಿ ತೊಳೆದು
ಗರ್ಭಗುಡಿ ಹಣತೆಯನು ಹಚ್ಚಿರುವಳು;
ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ
ಜಗದಂಬೆ ಭಾವಕ್ಕೆ ಸಂದಿರುವಳು!

ಒಲೆ ಮೇಲೆ ಅನ್ನ ಸೀಯುತ್ತಲಿದೆ ಮೊನ್ನೆ;
ಎದುರಿಗೇ ಕುಳಿತು
ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ
ನೆಲಕಿಳಿಸಿ ಹರಿಯಬಿಡುತಿದ್ದಾಳೆ, ಒಂದೊಂದೆ!
ಪೊರಕೆ ತುದಿಯಲಿ ಹಿಂದೆ
ಜಿರಲೆಗಳ ಬಡಿದವಳು ಇವಳೆ?
‘ಪಾಪ’ ಎಂದರೆ – ‘ಅಹ! ಶುದ್ದ ಕನ್ನಡಿಗ’
ಎಂದು ಛೇಡಿಸಿದವಳು!
ಈಗ ಹೊರಳಿದೆ ಕರಳು,
ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ
ಬೆಣ್ಣೆ ಬೆರಳು.

ಎಲ್ಲಿ ತರೆಮರೆಸಿಕೊಂಡುವೊ ಏನೊ ಈಗಿವಳ
ಸಿನಿಮ ಹೋಟೆಲುಗಳಿಗೆ ಅಲೆವ ಚಪಲ,
ಆಗೀಗ(ನನ್ನನೂ ಜೊತೆಗೆಳೆದುಕೊಂಡು!)
ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲ!
ಮುಡಿತುಂಬ ಹಣೆತುಂಬ ಕೈತುಂಬ ತನ್ನೆಲ್ಲ
ಮಾಂಗಲ್ಯ ಸೌಭಾಗ್ಯ ಮೆರೆಸಿ,
ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ,
ಇವಳೀಗ ಕಾರ್ತೀಕದಾಗಸದ ಹಾಡು,
ಕಣ್ಣೊ, ಹುಣ್ಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ
ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಟು,
ಈಗ? ಎಂಬಂತೆ ಹುಬ್ಬೆತ್ತರಿಸಿ ನಕ್ಕು ಸ್ಪರ್ಧಿಸಿದ್ದವಳು
ಈಗೆಲ್ಲ ಅಬ್ಬರ ಬಿಟ್ಟು
ಕಾಲೆಳೆಯುವಳು ಏಕೊ ತೀರ.
ಕನಸುಗಣ್ಣೆಗೆ ದಾರಿಯಲ್ಲು ಏನೋ ಧ್ಯಾನ,
ಮೈ ಮಾತ್ರ ಇಲ್ಲಿ, ಮನಸೆಲ್ಲೊ ಹೊರಟಿದೆ ಯಾನ,
ಅಡಿಗಡಿಗು ಒಂದೊಂದು ಗುಡಿಕಟ್ಟಿ ಬಾಗಿಲಲಿ
ಹೊರಳಿ ಬೇಡಿದೆ ಮಗುವಿಗಭಯದಾನ.
ಎಲ್ಲ ಬಾಳಲಿ ಎಂಬ ಭಾವ
ಚೆಲ್ಲುತಿದೆ ಕಣ್ಣು ಅಲುಗಿದೆ ಹೊಟ್ಟೆಯೊಳಗಿರಿವ ಪುಟ್ಟ ಜೀವ;
ಗಟ್ಟಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು
ಉಸಿರಾಡುತಿದೆ ಮಣ್ಣ ತೇವ!

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕವನ, ವೃತ್ತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: