D R Benre | R S Mugali | Mouna Yoga – ವರಕವಿ ಬೇಂದ್ರೆಯವರ ಮೌನಯೋಗ-1

D R Bendre
ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು ‘ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ ‘ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :
“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿ
ಮೂಕ-ಮೌನವು ಒಂದು ಶಾಪದೊಲು
ತಾಪವ ಕೊಡುವುದು, ತಾ ಪರಿಹರಿಸದು
ಜೀವಯಾತನೆಯನ್ನು ಅದು ಎಂದಿಗು”
ಬೇಂದ್ರೆಯವರು ತಮ್ಮ ಬಾಳಸಖಿಗೆ ಹೇಳುವ ಮಾತುಗಳು ಎಷ್ಟು ಅರ್ಥಗರ್ಭಿತವಾಗಿವೆ ನೋಡಬಹುದು. ಗಂಡಹೆಂಡತಿ ಎಷ್ಟೋಸಲ ಮನಸ್ತಾಪವಾದಾಗ ಮೌನ ಆಚರಿಸುವುದುಂಟು. ಆದರೆ ಆ ಮೌನದಲ್ಲಿ ಕೂಡ ಮಾತಿನ ಧ್ವನಿ ಇರಬೇಕೆಂದು ಕವಿ ಹೇಳುತ್ತಾರೆ. ಅವರ ಪ್ರಕಾರ ಮೂಕ-ಮೌನ ಒಂದು ಶಾಪವಿದ್ದಂತೆ.

ಬೇಂದ್ರೆಯವರು ಗೆಳೆಯರಗುಂಪಿನ ಮಿತ್ರರೊಂದಿಗೆ ಮಾತಿನಮಂಟಪ ರಚಿಸಿದ್ದುಂಟು. ಅವರೊಂದಿಗೆ ಮೌನಯೋಗದ ಅನುಷ್ಠಾನವನ್ನೂ ನಡೆಸಿದ ದಾಖಲೆ ದೊರೆತಿದೆ. ಡಾ| ದ.ರಾ.ಬೇಂದ್ರೆ ಸಂಶೋಧನಾ ಸಂಸ್ಥೆ (ಗೋಕುಲ ರೋಡ್, ವಿಶ್ವಶ್ರಮ ಚೇತನ, ಹುಬ್ಬಾಳ್ಳಿ-30) ಪ್ರಕಟಿಸಿದ “ಮೌನಯೋಗ ಎಂಬ ಡಾ| ವಾಮನ ಬೇಂದ್ರೆಯವರು ಸಂಪಾದಿಸಿದ ಗ್ರಂಥವು ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ, ಹಲವಾರು ಹೊಸ ಬಾಗಿಲುಗಳನ್ನು ತೆರೆದು ಬೇಂದ್ರೆ ಕಾವ್ಯದ ಅಭ್ಯಾಸಿಗಳಿಗೆ ಹೊಸ ಬೆಳಕನ್ನು ನೀಡುತ್ತದೆ. ವರಕವಿ ಬೇಂದ್ರೆಯವರು ತಮ್ಮ ಶಿಷ್ಯಮಿತ್ರರೊಂದಿಗೆ (ವಿನಾಯಕ ಗೋಕಾಕ, ರಂಗನಾಥ ಮುಗಳಿ, ವಿನೀತ ರಾಮಚಂದ್ರರಾವ್, ಸೇತುರಾಮ ಮಳಗಿ,, ನರಸಿಂಗರಾವ ದೀಕ್ಷಿತ, ಗ.ಕೃ.ಗದ್ರೆ ಅವರೊಂದಿಗೆ ಬೇಸಿಗೆಯ ಮೇ ರಜೆಯಲ್ಲಿ, ಧಾರವಾಡ ಮತ್ತು ಉಗಾರಗಳಲ್ಲಿ 1948 ಹಾಗೂ 1949ರಲ್ಲಿ ಮೌನವಾರ ಅಚರಿಸಿದ್ದರು. ಅಗ ಮಿತ್ರರೆಲ್ಲ ರಚಿಸಿದ ತಮ್ಮ ಅನುಭವಗಳ ಸಮಗ್ರ ಲೇಖನಗಳ ಸಂಗ್ರಹ ಇಲ್ಲಿದೆ. ಈ ಕೃತಿಯಲ್ಲಿ ಬೇಂದ್ರೆಯವರು ಬರೆದ 21 ಲೇಖನಗಳು ಮತ್ತು 7 ಕವನಗಳು, ಗೆಳೆಯರು ಬರೆದ 14 ಲೇಖನಗಳು ಇವೆ. ಇವೆಲ್ಲ ಅಪ್ರಕಟಿತವಾಗಿ ಉಳಿದಿದ್ದವು. ಇವರಲ್ಲಿ ನನಗೆ ತಿಳಿದ ಮಟ್ಟಿಗೆ ಒಬ್ಬರು ಮಾತ್ರ ಜೀವಿಸಿದ್ದಾರೆ. ಅವರ ಹೆಸರು ಪ್ರೊ.ಸೇತುರಾಮ ಮಳಗಿ. ಅವರಿಗೀಗ 99 ವರ್ಷ.

ಗೆಳೆಯರಗುಂಪಿನ ಹಿರಿಯ ಸದಸ್ಯ ಮುಗಳಿಯವರನ್ನು ನಾವು ಮರೆಯುವಂತಿಲ್ಲ. ಗುಂಪು ವಿಘಟನೆಗೊಂಡಾಗ ಅದರ ಶಾಖೆಯಂತಿದ್ದ ಮನೋಹರ ಗ್ರಂಥ ಮಾಲೆಯ ಸಾಹಿತ್ಯಿಕ ಸಲಹೆಗಾರರಾಗಿದ್ದವರು ಬೇಂದ್ರೆ-ಗೋಕಾಕ-ಮುಗಳಿಯವರು. (ಅಧ್ಯಾತ್ಮಿಕವಾಗಿ ಬೇಂದ್ರೆ-ಗೋಕಾಕ-ಮಧುರಚೆನ್ನರು ತ್ರಿಮೂರ್ತಿಗಳಾಗಿದ್ದರು.) ವರಕವಿ ಬೇಂದ್ರೆಯವರ ಪುತ್ರ ಡಾ| ವಾಮನ ಬೇಂದ್ರೆಯವರು ತಮ್ಮ ಪಿ.ಎಚ್.ಡಿ.ಪ್ರಬಂಧವನ್ನು ಡಾ| ಮುಗಳಿಯವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ್ದರು.

ಬೇಂದ್ರೆಯವರ 96ನೆಯ ಜನ್ಮದಿನಾಚರಣೆಯನ್ನು ಕವಿಗಳ ಮನೆಯಲ್ಲಿ ಆಚರಿಸಿದಾಗ (31-1-1991) ಡಾ| ಮುಗಳಿಯವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಬೇಂದ್ರೆಯವರು ಮಲಗುವ ಮಂಚದ ಮೇಲೆ ಕುಳಿತು ಹಳೆಯ ದಿನಗಳನ್ನು ಸ್ಮರಿಸುತ್ತಿರುವಾಗ ತಮ್ಮ ಶಿಷ್ಯ ವಾಮನರಿಗೆ ಒಂದು ಅಪೂರ್ವ ಹಸ್ತಪ್ರತಿಯನ್ನು ಕೊಟ್ಟು, ‘ನೀನಿದನ್ನು ಪ್ರಕಟಿಸಬೇಕು ಎಂದು ಕೇಳಿದ್ದರಂತೆ. ಎರಡು ಮೌನವಾರಗಳ ಬಗ್ಗೆ ಇದ್ದ 14 ಲೇಖನಗಳನ್ನು, ಮೌನ ಸಪ್ತಾಹದ ಹಿನ್ನೆಲೆಯ ಬಗ್ಗೆ ತಾವು ಬರೆದ ಮೌಲಿಕ ಲೇಖನವನ್ನು ಅದರಲ್ಲಿ ಇರಿಸಿದ್ದರು. ಅವೆಲ್ಲ ಬಹಳ ಜೀರ್ಣಾವಸ್ಥೆಯಲ್ಲಿದ್ದವು. 42 ವರ್ಷ ಅವನ್ನು ಜೋಪಾನವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಬೇಂದ್ರೆಯವರು ಮೌನದ ಬಗ್ಗೆ ಬರೆದ ಇತರ ಲೇಖನಗಳ ಹಸ್ತಪ್ರತಿಯನ್ನು ವಾಮನ ಬೇಂದ್ರೆಯವರು ಹುಡುಕಿದರು. ಅದಕ್ಕೆ ಸಂಬಂಧಿಸಿದ ಕವನಗಳನ್ನು ಒಟ್ಟುಗೂಡಿಸಿದರು. ಸಂಪಾದಕರ ಭೂಮಿಕೆಯಲ್ಲಿ ಬೇಂದ್ರೆಯವರ ಮೌನಯೋಗದ ಸಿದ್ಧಾಂತದ ಪರಿಚಯ ಮಾಡಿಕೊಡುತ್ತಾರೆ. ಉಪನಿಷತ್ತುಗಳಲ್ಲಿ, ಗೀತೆಯಲ್ಲಿ, ವೀರಶೈವ ಹಾಗೂ ಜೈನ ಸಾಹಿತ್ಯದಲ್ಲಿ ಬರುವ ಮೌನದ ವಿಚಾರದ ಬಗ್ಗೆ ಕೂಡ ಬರೆಯುತ್ತಾರೆ. ಬೇಂದ್ರೆಯವರು ಮೌನವನ್ನು ಒಂದು ವ್ರತದಂತೆ ಆಚರಿಸಿದರು. ಒಂದೆಡೆ ಮೌನವನ್ನು ಯಜ್ಞವೆಂದೂ ಬೇಂದ್ರೆ ಕರೆದಿದ್ದಾರೆ.

ಶ್ರೀಅರವಿಂದ, ಶ್ರೀಮಾತೆ, ಶ್ರೀರಮಣ, ಶ್ರೀ ಜೆ.ಕೃಷ್ನಮೂರ್ತಿಯವರಿಗೆ ಮೌನವು ಸಾಧನೆಯ ಸೋಪಾನವಾಗಿತ್ತು. ಸುಪ್ರಮಾನಸ ಶಕ್ತಿಯ ಅವತರಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ‘ಮೌನಯೋಗದ ಸಾಧನೆ ಮಾಡುವುದು ಅವಶ್ಯ ಎಂಬುದು ಬೇಂದ್ರೆಯವರ ನಿಲುವಾಗಿತ್ತು. ಸಾಕ್ಷಿಪುರುಷನ ಅಸ್ತಿತ್ವದ ಅನುಭವವು ಬರಬೇಕಾದರೆ ಮೌನದ ತಪಸ್ಸು ಅವಶ್ಯ ಎಂಬುದು ಬೇಂದ್ರೆಯವರ ನಂಬಿಕೆಯಾಗಿತ್ತು. ಮೌನ ತಪಸ್ಸಿನ ರಹಸ್ಯ ಸಂಖ್ಯೆಯನ್ನು ಬೇಂದ್ರೆ ಹೇಗೆ ಕಂಡು ಹಿಡಿದಿದ್ದರು ಎಂಬ ವಿವರ ವಾಮನ ಬೇಂದ್ರೆ ಕೊಡುತ್ತಾರೆ. ‘ಶಬ್ದ್ದ ಶ್ರುತಿಯಾದಾಗ, ಮಾತು ಕೃತಿಯಾದೀತು ಎಂದು ಹೇಳಿದವರು ಬೇಂದ್ರೆ. ಶಬ್ದ ಶ್ರುತಿಯಾಗಬೇಕಾದರೆ ಹೃದಯ ಗುಹೆಯ ಮೌನ ಪ್ರವೇಶ ಅವಶ್ಯ ಎಂದೂ ಬೇಂದ್ರೆ ಹೇಳುತ್ತಾರೆ.

ಡಾ| ಕೆ.ಎಸ್.ಶರ್ಮಾ ಅವರು “ಮೌನ ಅಂತರ್ದಶನ ಎಂಬ ಅಭ್ಯಾಸಪೂರ್ಣ ಲೇಖನವನ್ನು ಬರೆದು ಮೌನವಾರದಲ್ಲಿ ಭಾಗವಹಿಸಿದ ದ.ರಾ.ಬೇಂದ್ರೆಯವರ ಹಾಗೂ ಅವರ ಗೆಳೆಯರ ಒಳಮನದ ದೃಷ್ಟಿಯ ಮೇಲೆ ಬೆಳಕು ಚೆಲ್ಲುತ್ತಾರೆ. ಬೇಂದ್ರೆಯವರೇ ಎರಡು ಮೌನವಾರಗಳ ಬಗ್ಗೆ ಬರೆದ ಎರಡು ಲೇಖನಗಳ (ಮೌನದ ಜಾಡು, ಮೌನ-ವಿವೇಕ) ಮಹತ್ವದ ಬಗ್ಗೆ ಬರೆಯುತ್ತಾರೆ. ಮೌನ ಅಂತರ್ದರ್ಶನದ ಐದು ಆಯಾಮಗಳನ್ನು ವಿಶ್ಲೇಷಿಸುತ್ತಾರೆ.

1) ಬೇಂದ್ರೆ ಮೌನ ದರ್ಶನ : (ಬೇಂದ್ರೆಯವರು ಮೌನದ ಕುರಿತಾಗಿ ಬರೆದ 8 ಲೇಖನಗಳ ಸಂಕ್ಷಿಪ್ತ ಪರಿಚಯ ನೀಡುತ್ತಾರೆ. ಮೌನದ ಜಾಡು ಎಂಬ ಲೇಖನ ಮೌನ ನಡೆದು ಬಂದ ದಾರಿಯನ್ನು ಹೇಗೆ ತೋರುತ್ತದೆ, ‘ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ , ‘ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮನದ ಅವಸ್ಥಾ ಶಿಖರ ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ ! ಧವಲಗಿರಿ ಎಂಬ ಬೇಂದ್ರೆಯವರ ಉಕ್ತಿಗಳನ್ನು ವಿಶ್ಲೇಷಿಸುತ್ತಾರೆ. ಮೌನದ ವ್ಯುತ್ಪತ್ತಿ, ಸಾಮೂಹಿಕ ಮೌನ, ಮೌನದ ನೆಲೆವೀಡು ಮೊದಲಾದ ಲೇಖನಗಳನ್ನು ಚರ್ಚಿಸುತ್ತಾರೆ.)

2) ಬೇಂದ್ರೆ ಕಾವ್ಯದರ್ಶನ :
(ಮೌನ ಸಪ್ತಾಹದಲ್ಲಿ ಬೇಂದ್ರೆಯವರು ಬರೆದ ಕವನಗಳನ್ನು ವಿಶ್ಲೇಷಿಸುತ್ತಾರೆ. ‘ಮಾತು ಮೌನದ ಪ್ರತಿಮೆ | ಮೌನ ಮಾತಿನ ದೈವ. ‘ಸುಮ್ಮನಿರು ಓ ಮಾತೆಯಲ್ಲಿ ಮಾತು ಹಾಗೂ ಮೌನದ ಸಂಬಂಧ ಮಾರ್ಮಿಕವಾಗಿ ಅಭಿವ್ಯಕ್ತಗೊಂಡಿದೆ ಎನ್ನುತ್ತಾರೆ.)

3) ಬೇಂದ್ರೆ ವಿಲಕ್ಷಣ ದರ್ಶನ : (ಬೇಂದ್ರೆಯವರ 13 ಲೇಖನಗಳ ಪಕ್ಷಿನೋಟ ನೀಡುತ್ತಾರೆ. ದೇವಜಾತಿಯ ಬಗ್ಗೆ, ನವಭಾರತ ನಿರ್ಮಿತಿ ಹಾಗೂ ನವ ಮಾನವನ ಬಗ್ಗೆ ಬರೆಯುತ್ತಾರೆ. ಮನುಷ್ಯನು ಭಗವಂತನೊಂದಿಗೆ ಅವಿಭಕ್ತ ಸಂಬಂಧವನ್ನು ಮೌನದಿಂದ ಸಾಧಿಸುವ ಸಾಧನೆ ಮಾಡಿದಾಗ ಮಾತ್ರ ಅವನು ನವಮಾನವನಾಗಬಲ್ಲ ಎನ್ನುತ್ತಾರೆ ಬೇಂದ್ರೆ.)

4) ಗೆಳೆಯರ ಮೌನದರ್ಶನ :
(ಗೆಳೆಯರ ಮೌನ ಸಾಧನೆಯ ಬಗ್ಗೆ ಬೇಂದ್ರೆಯವರ ಅಭಿಪ್ರಾಯವಿಲ್ಲಿದೆ.)
5) ಮೌನ ಚಿಂತನದ ತುಲನಾತ್ಮಕ ದರ್ಶನ :
(ಮೌನ ಸಪ್ತಾಹದಲ್ಲಿ ರಚಿತವಾದ ಮಿತ್ರರ ಸಾಹಿತ್ಯದ ಗ್ಗೆ ಬೇಂದ್ರೆಯವರ ತುಲನಾತ್ಮಕ ವಿವರಣೆ ಇಲ್ಲಿದೆ.)

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: