Dr Vasundhara Bhupathi | Ayurvedic consultant | Food and health | Ayurveda – ಆಹಾರ ಮತ್ತು ಆರೋಗ್ಯ : ಡಾ. ವಸುಂಧರಾ ಭೂಪತಿ

Dr. Vasundhara Bhupathi, Ayurvedic consultant

ಆಯುರ್ವೇದ ತಜ್ಞರಾದ ಡಾ. ವಸುಂಧರಾ ಭೂಪತಿ ಬರೆದಿರುವ ‘ಆಹಾರ ಮತ್ತು ಆರೋಗ್ಯ’ ಪುಸ್ತಕ ಪರಿಚಯ ಇಲ್ಲಿದೆ. ವಸುಂಧರಾ ಹೇಳುವಂತೆ, ಆಹಾರದಲ್ಲಿ ಬರಿ ಸಿಹಿರಸ ಆರೋಗ್ಯಕ್ಕೆ ಒಳ್ಳೆಯದಲ್ಲ. ನಮ್ಮ ಆಹಾರ ಸಂತುಲಿತವಾಗಿರಬೇಕು, ಅಂದರೆ ಷಡ್ರಸದಿಂದ ಕೂಡಿರಬೇಕು. ಮಧುರ, ಆಮ್ಲ, ಲವಣ, ಕಟು, ತಿಕ್ತ, ಕಷಾಯ (ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಇವೇ ಆರು ರಸಗಳು.

`ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಇದೆ. ಎಂತಹ ಸತ್ಯ ಇದರಲ್ಲಿ ಅಡಗಿದೆ. ಇಂದು ಆರೋಗ್ಯ ಒಂದು ದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಜನ ಸಾಮಾನ್ಯರಲ್ಲಿ ಇರುವ ಅಜ್ಞಾನವೇ ಬಹಳ ದೊಡ್ಡ ಕಾರಣವಾಗಿದೆ. ಶರೀಫ ಸಾಹೇಬರ ಒಂದು ಹಾಡು ನೆನಪಾಗುತ್ತದೆ, ಸೋರುತಿಹುದು ಮನೆಯ ಮಾಳಿಗೆ | ಅಜ್ಞಾನದಿಂದ | ಸೋರುತಿಹುದು ಮನೆಯ ಮಾಳಿಗೆ. ಆರೋಗ್ಯ ಎಂದೊಡನೆ ನನಗೆ ನೆನಪಾಗುವ ಇಬ್ಬರು ಡಾಕ್ಟರ್ ಮಿತ್ರರೆಂದರೆ ಡಾ| ಬಿ.ಟಿ.ರುದ್ರೇಶ ಮತ್ತು ಡಾ| ವಸುಂಧರಾ ಭೂಪತಿ. ಒಬ್ಬರು ಹೋಮಿಯೋಪತಿಯಲ್ಲಿ ತಜ್ಞರಾಗಿದ್ದಾರೆ ಇನ್ನೊಬ್ಬರು ಆಯುರ್ವೇದದಲ್ಲಿ ಪರಿಣತರು.

ಡಾ| ವಸುಂಧರಾ ಭೂಪತಿಯವರು ಸಂಪಾದಿಸಿದ “ಆಹಾರ ಮತ್ತು ಆರೋಗ್ಯ ಎಂಬ ಪುಸ್ತಕವನ್ನು ಓದಿದಾಗ ನನಗೆ ಬಹಳ ಆನಂದವಾಯ್ತು. ಒಂಭತ್ತು ಜನ ಮಹಿಳಾ ಡಾಕ್ಟರರು (ಹೆಚ್ಚಾಗಿ ಎಲ್ಲರೂ ಆಯುರ್ವೇದ ತಜ್ಞರು) ಬರೆದ 12 ಲೇಖನಗಳ ಪುಸ್ತಕವಿದು. ಅದರಲ್ಲಿ ಸಿಂಹಪಾಲು (ನಾಲ್ಕು ಲೇಖನ) ಡಾ| ವಸುಂಧರಾ ಅವರೇ ಬರೆದಿದ್ದಾರೆ, ಪುಸ್ತಕದ ಸಂಪಾದಕಿಯೂ ಆಗಿದ್ದಾರೆ.

ಯೋಗ ಮತ್ತು ಆಯುರ್ವೇದ ಎಂದರೆ ನನಗೆ ವಿಶೇಷ ಪ್ರೀತಿ. ಕಾರಣ ಇವುಗಳಿಂದ ಪಾರ್ಶ್ವ ಪರಿಣಾಮಗಳಿಲ್ಲ. ಭಾರತ ಜಗತ್ತಿಗೆ ನೀಡಿದ ಕೊಡುಗೆ ಅಂದರೆ ಯೋಗ ಮತ್ತು ಆಯುರ್ವೇದ. ಆಯುರ್ವೇದ ಕಲಿಸುವಾಗ ಅಲೋಪತಿಯನ್ನೂ ಕಲಿಸಲಾಗುತ್ತದೆ. ಆದರೆ ದುರ್ದೈವದ ವಿಷಯವೆಂದರೆ ಹೆಚ್ಚಿನ ವೈದ್ಯರು ಡಾಕ್ಟರರಾಗಿಬಿಡುತ್ತಾರೆ, ಹಣದ ಮೋಹದಿಂದ ಆಯುರ್ವೇದ ಬಿಟ್ಟು ಅಲೋಪತಿ ಬೆನ್ನು ಹತ್ತುತ್ತಾರೆ. ಇಂದು ಯೋಗ ಮತ್ತು ಆಯುರ್ವೇದದ ಬಹಳ ದೊಡ್ದ ಪ್ರಚಾರಕರೆಂದರೆ ಸ್ವಾಮಿ ರಾಮದೇವ ಹಾಗೂ ಅವರ ಸಹಚರ ಶ್ರದ್ಧೇಯ ಬಾಲಕೃಷ್ಣರು. ಅವರ ಪ್ರಭಾವ ಎಲ್ಲೆಡೆ ಕಂಡುಬರುತ್ತಿದೆ. ಒಂದು ಸಣ್ಣ ಉದಾಹರಣೆ ಕೊಡುವೆ. ಆರು ವರ್ಷದ ನನ್ನ ಮೊಮ್ಮಗಳು ತನ್ನ ಸ್ನೇಹಿತೆಯೊಂದಿಗೆ ಮಾತಾಡುತ್ತಿದ್ದಳು. “ನೀನು ಕೊಕಾಕೊಲಾ ಕುಡಿಯುತ್ತಿಯಾ?” ಎಂಬ ಸ್ನೇಹಿತೆಯ ಪ್ರಶ್ನೆಗೆ ನನ್ನ ಮೊಮ್ಮಗಳ ಉತ್ತರ, “ಇಲ್ಲ ನಾನು ಕುಡಿಯುವುದಿಲ್ಲ. ಅದು ಟೊಯಲೆಟ್ ಕ್ನೀನರ್ ನಿನಗೆ ಗೊತ್ತಿಲ್ಲವೆ?” ನನಗೆ ಆಶ್ಚರ್ಯವಾಯಿತು. ಈ ಮಾತು ಸ್ವಾಮಿರಾಮದೇವ ಹೇಳಿದ್ದು.

ಈ ಪುಸ್ತಕದ ಬಗ್ಗೆ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಬರೆಯುತ್ತಾರೆ, “ಇತ್ತೀಚಿನ ದಿನಗಳಲ್ಲಿ ಕೃಷಿ ಲೋಕದಲ್ಲಿ ಅಧಿಕ ಇಳುವರಿಯ ಮೋಹದಿಂದುಂಟಾಗಿರುವ ದುಷ್ಪರಿಣಾಮದ ಫಲ ನಾವು ತಿನ್ನುವ ಅನ್ನದಲ್ಲಿ ವಿಷಯುಕ್ತ ಅಂಶ ಸಾಕಷ್ಟಿರುತ್ತದೆ. ಅಲ್ಲದೆ, ನಿಸರ್ಗದ ಪಂಚಭೂತಗಳ ಮೇಲೆ ಆಗುತ್ತಿರುವ ಆಕ್ರಮಗಳಿಂದಾಗಿ ಕುಡಿಯುವ ನೀರು ಸೇವಿಸುವ ಗಾಳಿ ತಿನ್ನುವ ಅನ್ನ ಎಲ್ಲ ಕಲುಷಿತವಾಗಿದೆ. ಪರಿಣಾಮ ಹೆಸರಿರದ ರೋಗ ರುಜಿನಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆ. ನಗರ ಜೀವನದ ಒತ್ತಡ ಕೂಡ ಮನುಷ್ಯನ ಮಾನಸಿಕ ಸ್ಥಿತಿಯನ್ನು ದೈಹಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಹೀಗಾಗಿ ಇಂಥ ಆತಂಕಕಾರಿ ವಾತಾವರಣದಲ್ಲಿ ಬದುಕುವಾಗ ಆರೋಗ್ಯದ ಬಗ್ಗೆ ಮನುಷ್ಯ ಎಚ್ಚರ ವಹಿಸುವ ಅಗತ್ಯವಿದೆ. ಡಾ|| ವಸುಂಧರಾ ಭೂಪತಿಯವರು ಸಂಪಾದಿಸಿದ ‘ಆಹಾರ ಮತ್ತು ಆರೋಗ್ಯ’ ಕೃತಿ ದೈನಂದಿನ ಬದುಕಿನಲ್ಲಿ ಎಲ್ಲರೂ ಓದಬೇಕಾದ ಕೃತಿ.”

ಈ ಪುಸ್ತಕದಲ್ಲಿ ಹನ್ನೆರಡು ಲೇಖನಗಳಿವೆ. ಅದರಲ್ಲಿ ನಾಲ್ಕು ಲೇಖನಗಳನ್ನು ಡಾ| ವಸುಂಧರ ಅವರು ಬರೆದಿದ್ದಾರೆ. ಅವುಗಳನ್ನು ಪರಿಶೀಲಿಸೋಣ.
ಮೊದಲನೆಯ ಲೇಖನ ಪುಸ್ತಕದ ಶೀರ್ಷಿಕೆ, `ಆಹಾರ ಮತ್ತು ಆರೋಗ್ಯ. ನಾಲಿಗೆಗೆ ರುಚಿಕರವಾಗಿರುವ ತಿಂಡಿ, ಬಹಳ ಸಲ ಹೊಟ್ಟೆಗೆ ಹಿತಕಾರಿಯಾಗಿರುವುದಿಲ್ಲ. ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿಯಾಗಿರುವ ಸಾಧ್ಯತೆ ಇದೆ. (ಅಧರಕ್ಕೆ ಕಹಿ ಉದರಕ್ಕೆ ಸಿಹಿ ನಮ್ಮ ಕೂಡಲ ಸಂಗಮದೇವ ಎಂದ ಬಸವಣ್ಣ.) ಬೇಕರಿ ತಿಂಡಿಗಳು, ಐಸ್‌ಕ್ರೀಂ, ಭೇಲ್‌ಪುರಿ, ಗೋಬಿ ಮಂಚೂರಿ ಮೊದಲಾದವು ಬಾಯಿಗೆ ರುಚಿಕರ ಆದರೆ ಹೊಟ್ಟೆಗೆ ಹಿತಕರವಲ್ಲ ಎನ್ನುತ್ತಾರೆ. ಯಾವಗಲಾದರೂ ಒಮ್ಮೆ ತಿನ್ನಬಹುದು, ಆದರೆ ಮಕ್ಕಳು ಇದನ್ನೇ ನಿತ್ಯ ಬಯಸುತ್ತಾರೆ. ಇದು ಆಧುನಿಕ ಜೀವನದ ವಿಪರ್ಯಾಸ. ಸಿಹಿತಿಂಡಿ, ಚಾಕೊಲೆಟ್, ಚ್ಯುಯಿಂಗ್ ಗಮ್- ಇವುಗಳಿಂದ ಹಲ್ಲು ಹಾಳಾಗುತ್ತವೆ ಎಂಬುದು ಸಿದ್ಧವಾಗಿದೆ. ಊಟಮಾಡುವಾಗ ನೀರು ಕುಡಿಯುವ ಬದಲು ಕೆಲವರು ಪೆಪ್ಸೀ, ಕೋಕಾಕೋಲಾ ಕುಡಿಯುತ್ತಾರೆ. ಅವುಗಳಲ್ಲಿರುವ ಕೀಟನಾಶಕ ಅಂಶಗಳು ರೋಗಕ್ಕೆ ಆಹ್ವಾನ ನೀಡುತ್ತವೆ ಎಂದು ಬರೆಯುತ್ತಾರೆ.

ಆಯುರ್ವೇದದಲ್ಲಿ ಪಂಚಭೂತಗಳಿಗೆ ಅನುಗುಣವಾಗಿ ಆಹಾರವನ್ನು ವರ್ಗೀಕರಿಸಲಾಗಿದೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ತತ್ವಕ್ಕೆ ಅನುಗುಣವಾಗಿ ಆಹಾರವಿರುತ್ತದೆ. ಈ ಆಹಾರದ ಅತಿ ಬಳಕೆ ಹಾನಿಕರ, ಕಡಿಮೆ ಬಳಕೆ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಭೂಮಿತತ್ವದ ಆಹಾರವೆಂದರೆ ಅಕ್ಕಿ, ಗೋಧಿ, ಕಾಳು, ತರಕಾರಿ ಮುಂ. ನೀರಿನ ತತ್ವಕ್ಕೆ ಸೇರಿದ ಆಹಾರವೆಂದರೆ ನೀರು, ಮಜ್ಜಿಗೆ, ಹಣ್ಣಿನರಸ, ತರಕಾರಿ ಸೂಪ್, ಮುಂ. ಬೆಂಕಿಯ ತತ್ವದ ಆಹಾರವೆಂದರೆ ಮೆಣಸಿನಕಾಯಿ, ಮೆಣಸು, ಶುಂಠಿ, ಹಿಪ್ಪಲಿ ಮುಂ. ಗಾಳಿಯ ತತ್ವಕ್ಕೆ ಸೇರಿದ ಆಹಾರ ಹಳದಿಬಣ್ಣದ ಬೇಳೆಕಾಳುಗಳು. ಆಕಾಶತತ್ವದ ಅಹಾರವೆಂದರೆ ಹುರಿದ ಮತ್ತು ಕರಿದ ಪದಾರ್ಥಗಳು. ಇವುಗಳ ಸೇವನೆ ಸರಿಪ್ರಮಾಣದಲ್ಲಿರಬೇಕೆನ್ನುತ್ತಾರೆ. ಆಹಾರದಲ್ಲಿ ಬರಿ ಸಿಹಿರಸ ಆರೋಗ್ಯಕ್ಕೆ ಒಳ್ಳೆಯದಲ್ಲ. ನಮ್ಮ ಆಹಾರ ಸಂತುಲಿತವಾಗಿರಬೇಕು, ಅಂದರೆ ಷಡ್ರಸದಿಂದ ಕೂಡಿರಬೇಕು. ಮಧುರ, ಆಮ್ಲ, ಲವಣ, ಕಟು, ತಿಕ್ತ, ಕಷಾಯ (ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಇವೇ ಆರು ರಸಗಳು. ಒಂದೊಂದಕ್ಕೂ ಬೇರೆ ಗುಣಗಳಿರುತ್ತವೆ.

ಮಧುರ(ಸಿಹಿ) ರಸದಲ್ಲಿ ಪೃಥ್ವಿ ಮತ್ತು ಆಪ್ ತತ್ವಗಳಿವೆ. ರಕ್ತ, ಮಾಂಸಖಂಡ,, ಮೇದಸ್ಸು, ಮೂಳೆ, ಶುಕ್ರ, ಆರ್ತವ ಮತ್ತು ಓಜಸ್ಸಿಗೆ ಕಾರಣವಾಗುತ್ತದೆ. ಪಿತ್ತ, ವಾತದೋಷ ನಿವಾರಿಸುತ್ತದೆ. ಇದು ಅತಿಯಾದರೆ ಕಫದೋಷದ ತೊಂದರೆ ಉಂಟಾಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ, ಆಲಸ್ಯ, ಅತಿನಿದ್ರೆ, ನೆಗಡಿ, ವಾಂತಿ ಬೇಧಿ, ಜ್ವರ ತರುತ್ತದೆ, ಮೂತ್ರಪಿಂಡ, ರಕ್ತನಾಳ, ಗಂಟಲು ಮತ್ತುಕಣ್ಣಿನ ರೋಗ ತರುತ್ತದೆ. (ಅಕ್ಕಿ, ಬೆಲ್ಲ, ಹಾಲು, ತುಪ್ಪ, ಎಣ್ಣೆ, ಬ್ರೆಡ್ ಮುಂ.)

ಆಮ್ಲರಸದಲ್ಲಿ ಅಗ್ನಿ ಮತ್ತು ಪೃಥ್ವಿ ತತ್ವಗಳಿವೆ. ಇದರ ಸೇವನೆಯಿಂದ ಹಸಿವು ಹೆಚ್ಚುತ್ತದೆ, ಜೀರ್ಣಶಕ್ತಿ ವೃದ್ಧಿಸುತ್ತದೆ. ಶರೀರಕ್ಕೆ ಶಕ್ತಿ ನೀಡುತ್ತದೆ. ಇದರ ಸೇವನೆ ಹೆಚ್ಚಾದಾಗ ಬಾಯಾರಿಕೆ, ದೇಹದಲ್ಲಿ ಸಡಿಲತೆ, ಊತ ವುಂಟಾಗುತ್ತದೆ. ಗಂಟಲಲ್ಲಿ ಎದೆಯಲ್ಲಿ ಉರಿ ಉಂಟಾಗುತ್ತದೆ. (ನಿಂಬೆ, ಹುಣಸೆ, ಮಾದಳ, ಕಿತ್ತಳೆ ಮುಂ.) ಲವಣ(ಉಪ್ಪು) ರಸದಲ್ಲಿ ಜಲ ಮತ್ತು ಅಗ್ನಿ ತತ್ವಗಳಿವೆ. ಆಹಾರಕ್ಕೆ ರುಚಿ ಕೊಡುತ್ತದೆ. ಪಿತ್ತ, ಕಫ ದೋಷ ಹೆಚ್ಚಿಸುತ್ತದೆ. ಅಧಿಕ ಸೇವನೆಯಿಂದ ಪಿತ್ತ, ರಕ್ತದೋಷವನ್ನು ವಿಕಾರಗೊಳಿಸುತ್ತದೆ. ಚರ್ಮವ್ಯಾಧಿ ತರುತ್ತದೆ. (ಲವಣ, ಸೈಂಧಲವಣ ಮುಂ).

ಕಟು(ಖಾರ)ರಸದಲ್ಲಿ ಅಗ್ನಿ ಮತ್ತು ವಾಯು ತತ್ವಗಳಿವೆ. ಇದು ಜೀರ್ಣಶಕ್ತಿಯನ್ನು ಪ್ರಚೋದಿಸುತ್ತದೆ. ರಕ್ತ ಹೆಪ್ಪುಗಟ್ಟುವದನ್ನು ನಿವಾರಿಸುತ್ತದೆ, ಪರಿಚಲನೆ ಹೆಚ್ಚಿಸುತ್ತದೆ, ಕಫ ನಿವಾರಿಸುತ್ತದೆ. ಅಧಿಕ ಪ್ರಮಾಣದ ಸೇವನೆ ಲೈಂಗಿಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ನಿರಾಸಕ್ತಿ, ಮಾನಸಿಕ ದುರ್ಬಲತೆಗೆ ಕಾರಣವಾಗುತ್ತದೆ. (ಶುಂಠಿ, ಮೆಣಸು, ಮೆಣಸಿನಕಾಯಿ.)

ತಿಕ್ತ(ಕಹಿ)ರಸದಲ್ಲಿ ಆಕಾಶ ಮತ್ತು ವಾಯು ತತ್ವಗಳಿವೆ. ಹೊಟ್ಟೆಯಲ್ಲಿ ಜಂತುಹುಳ ನಿವಾರಿಸುತ್ತದೆ. ತಲೆಸುತ್ತು ನಿವಾರಿಸುತ್ತದೆ. ಚರ್ಮವ್ಯಾಧಿಗೆ ಇದು ಉತ್ತಮ. ಅಧಿಕ ಸೇವನೆಯಿಂದ ದೇಹಬಲ ಕಡಿಮೆ, ತೂಕ ಕಡಿಮೆ, ಮಾನಸಿಕ ಅಸಂತೋಲನ ಉಂಟಾಗುತ್ತದೆ. (ಹಾಗಲಕಾಯಿ).

ಕಷಾಯ(ಒಗರು)ರಸದಲ್ಲಿ ಪೃಥ್ವಿ ಮತ್ತು ವಾಯು ತತ್ವಗಳಿವೆ. ಇದರ ಗುಣಗಳು ಗುರುತ್ವ, ಶೀತತ್ವ, ರೂಕ್ಷತ್ವ. ಅಧಿಅಕ ಸೇವನೆ ಬಾಯಿಯನ್ನು ಒಣಗಿಸುತ್ತದೆ. ಲೈಂಗಿಕ ಬಲಹೀನತೆ ತರುತ್ತದೆ. ಅಪಾನವಾಯು ಹೆಚ್ಚಿಸುತ್ತದೆ.

ಎಲ್ಲ ರಸಗಳಿಂದ ಯುಕ್ತವಾದ ಆಹರ ಸೇವಿಸಬೇಕು. ಹೊಟ್ಟೆಯ ಅರ್ಧಭಾಗವನ್ನು ಆಹಾರದಿಂದ, ಕಾಲುಭಾಗವನ್ನು ನೀರಿನಿಂದ, ಇನ್ನುಳಿದ ಭಾಗವನ್ನು ಹವೆಯಿಂದ ತುಂಬಬೇಕು. ಜೀವಿಸಲಿಕ್ಕೆ ತಿನ್ನಬೇಕೇ ಹೊರತು ತಿನ್ನಲಿ ಜೀವಿಸಿಬಾರದು ಎನ್ನುತ್ತಾರೆ.

ಉಪವಾಸ ಅನೇಕ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ವಿದೇಶಗಳಲ್ಲಿ ರೋಗಿಗಳಿಗೆ ಉಪವಾಸದಿಂದಿರಲು ಕ್ಲಿನಿಕ್‌ಗಳನ್ನು ತೆರೆದಿರುತ್ತಾರಂತೆ. ಹದಿನೈದು ದಿನಕೊಮ್ಮೆ (ಏಕಾದಶಿ) ಉಪವಾಸ ಮಾಡಬಹುದು. ವಿರುದ್ಧ ಆಹಾರದಿಂದ ಆರೋಗ್ಯಕ್ಕೆ ಹಾನಿಯಾಗುವುದರ ಬಗ್ಗೆ ಬರೆಯುತ್ತಾರೆ. ಒಮ್ಮೆ ತಯಾರಿಸಿದ ಆಹಾರವನ್ನು ಮತ್ತೊಮ್ಮೆ ಬಿಸಿ ಮಾಡಬಾರದು. ಜೇನುತುಪ್ಪ, ಮೊಸರು, ಹಾಲು, ಎಣ್ಣೆ ಹಾಗೂ ನೀರಿನ ಮಿಶ್ರಣ ಮಾಡಬಾರದು. ಹುಳಿಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸಬಾರದು. ಜೇನುತುಪ್ಪ ಬಿಸಿಮಾಡಬಾರದು. ವಿರುದ್ಧ ಆಹಾರದಿಂದ ಚರ್ಮರೋಗ, ಬಂಜೆತನ, ಮನೋವಿಕಲತೆ ಉಂಟಾಗುತ್ತದೆ ಎನ್ನುತ್ತಾರೆ.

ಪುಸ್ತಕ : ಆಹಾರ ಮತ್ತು ಆರೋಗ್ಯ
ಲೇಖಕಿ : ಡಾ. ವಸುಂಧರಾ ಭೂಪತಿ, ಆಯುರ್ವೇದ ತಜ್ಞೆ
ಪ್ರಕಾಶನ : ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-2.
ಪುಟಗಳು : 8+146.
ಬೆಲೆ : ರೂ.60.

ಮುದ್ರಿತವಾದ ಪ್ರತಿಗಳು 1000 ಮಾತ್ರ. ಇಂತಹ ಉತ್ತಮ ಪುಸ್ತಕಗಳು ಹತ್ತು ಸಾವಿರ ಪ್ರತಿ ಪ್ರಕಟಿಸಬೇಕಾಗಿತ್ತು. ಪ್ರತಿ ಶಾಲೆಕಾಲೇಜುಗಳಿಗೆ ಹಂಚಬೇಕಾಗಿತ್ತು ಅನ್ನುವುದು ನನ್ನ ಅಭಿಪ್ರಾಯ.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: