GV in 5th AKKA World Kannada Conference – ‘ಅಕ್ಕ’ ಸಮ್ಮೇಳನಕ್ಕಾಗಿ ಮೂರನೇ ಬಾರಿ ಪಯಣ

Stephens Convention Center, Chicago
ಶಿಕಾಗೋದಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆದ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡ ಅಂಕಣಕಾರ ಡಾ. ‘ಜೀವಿ’ ಕುಲಕರ್ಣಿಯವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಕ್ಕ’ ಸಂಸ್ಥೆ 5ನೆಯ ವಿಶ್ವ ಕನ್ನಡ ಸಮ್ಮೇಳನವನ್ನು ಈ ಸಲ ಅಮೇರಿಕೆಯಲ್ಲಿ, ಶಿಕಾಗೋದ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದೊಂದಿಗೆ, (ಅಗಸ್ಟ್ 29ರಿಂದ 31) ಆಯೋಜಿಸಿದ್ದಾರೆಂದು ತಿಳಿದಾಗ ನನಗೂ ಭಾಗವಹಿಸುವ ಇಚ್ಛೆಯಾಯಿತು. ನಾನು ಈ ಮೊದಲೇ ಕೈಕೊಂಡ ಎರಡು ಪ್ರವಾಸಗಳಲ್ಲಿ, ಅನಿವಾಸಿ ಕನ್ನಡ ಸಾಹಿತಿ ಮಿತ್ರರ ಬಳಗ ಬೆಳೆದಿತ್ತು, `ದಟ್ಸ್‌ಕನ್ನಡ…’ ಅಂತರ್ಜಾಲ ಪತ್ರಿಕೆಯಲ್ಲಿ ನನ್ನ ಅಂಕಣ ಪ್ರಾರಂಭವಾದಂದಿನಿಂದ ಮಿತ್ರರ ಸಂಖ್ಯೆ ಅಧಿಕಗೊಂಡಿತ್ತು. ನನ್ನ ಹಿರಿಯ ಮಗ ಅಮೇರಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದರಿಂದ ಅದನ್ನು ನೋಡುವುದೂ ಒಂದು ಮಹತ್ವದ ಆಕರ್ಷಣೆಯಾಗಿತ್ತು.

ಅಗಸ್ಟ್ ತಿಂಗಳು ಪ್ರವಾಸಕ್ಕೆ ಅನುಕೂಲವಾದ ಮಾಸವಲ್ಲ. ಈ ಸಮಯದಲ್ಲಿ ಅಮೇರಿಕನ್ ವಿಶ್ವವಿದ್ಯಾಲಯಗಳಿಗೆ ಉಚ್ಚ ಶಿಕ್ಷಣಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಭಾರತ ವಿದ್ಯಾರ್ಥಿಗಳು ಹೋಗುತ್ತಾರೆ. ನಮಗೆ ಅನುಕೂಲವಾದ ಏರ್ ಟಿಕೆಟ್ ದೊರೆಯುವುದು ಕಷ್ಟದ ಕೆಲಸ. ಮೊದಲನೆಯ ಸಲ ನಾನು ಅಮೇರಿಕೆಗೆ ಪ್ರಯಾಣ ಮಾಡಿದಾಗ ನನಗೆ ಅನುಕೂಲವಾದ ಏರ್‌ಲೈನ್ಸ್‌ನಲ್ಲಿ ಸೀಟು ಸಿಗಲಿಲ್ಲವೆಂದು ಆಲಿಟಾಲಿಯಾ ಏರ್ ಲೈನ್ಸ್‌ದಿಂದ ಪ್ರವಾಸ ಮಾಡಿದ್ದೆ. ಆಗ ನನಗೆ ದಾರಿಯಲ್ಲಿ ಎರಡು ಕಡೆಗಳಲ್ಲಿ, ಮಿಲಾನ್ ಹಾಗೂ ಡೆಟ್ರಾಯಿಟ್ ವಿಮಾನ ನಿಲ್ದಾಣಗಳಲ್ಲಿ, ವಿಮಾನು ಬದಲಾಯಿಸಬೇಕಾಯಿತು. ಡೆಟ್ರಾಯಿಟ್ ನಾನಿಳಿದ ಮೊದಲ ಅಮೇರಿಕೆಯ ನಗರವಾದುದರಿಂದ (ಫರ್ಸ್ಟ್ ಪೋರ್ಟ್ ಆಫ್ ಎಂಟ್ರಿ) ನನ್ನ ಲಗೇಜ್ ಚೆಕಿಂಗ್ ಆಯಿತು, ಅಲ್ಲಿ ಎಮಿಗ್ರೇಶನ್ ಅಧಿಕಾರಿಗಳ ಮುದ್ರೆ ಪಡೆಯಬೇಕಾಯ್ತು. ನನ್ನ ಲಗೇಜ್ ಎಲ್ಲಾ ನಾನೇ ಇಳಿಸಿಕೊಂಡು ನಂತರದ ಫ್ಲೈಟ್‌ಗೆ ಚೆಕ್‌ಇನ್ ಮಾಡಿಸಬೇಕಾಯಿತು. ಇದೆಲ್ಲಾ ಬಹಳ ಕಷ್ಟಕರವಾಗಿತ್ತು. ಎರಡನೆಯ ಸಲ ಕೆಎಲ್‌ಎಮ್ ಮತ್ತು ನಾರ್ಥವೆಸ್ಟ್ ಏರ್‌ಲೈನ್‌ಗಳ ಮುಖಾಂತರ ಪ್ರವಾಸ ಮಾಡಿದಾಗ ಒಂದೇ ಕಡೆಗೆ ವಿಮಾನ ಬದಾಲಾಯಿಸುವುದಿತ್ತು. ಅದು ಕೂಡ ಆಮ್‌ಸ್ಟರ್‌ಡ್ಯಾಮ್‌ನಲ್ಲಿ. ಅದು ಡಚ್ ಏರ್‌ಪೋರ್ಟ್ ಆದುದರಿಂದ ಮತ್ತೆ ನಮ್ಮ ಬ್ಯಾಗೇಜ್ ತೆರೆದು ಚಕ್‌ಮಾಡಿಸುವ ತೊಂದರೆ ಇರಲಿಲ್ಲ. ನೇರವಾಗಿ ಮುಂಬೈಯಿಂದ ನಮ್ಮ ಲಗೇಜು ಮಿನಿಯಾಪೊಲಿಸ್‌ಗೆ ತಲುಪಿತ್ತು. ಈ ಸಲದ ಪ್ರವಾಸದಲ್ಲಿ ಕೂಡ ಮಿತ್ರ ಮುಕುಂದ ಕುಲಕರ್ಣಿಯವರು ಡಚ್ ಏರ್ ಲೈನ್ ಮುಖಾಂತರ ಏರ್‌ಟಿಕೆಟ್ ಪಡೆಯಲು ಸಹಕರಿಸಿದರು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಏಳು ತಾಸು ತಡೆದು ಎರಡನೆಯ ಕನೆಕ್ಟಿಂಗ್ ಫ್ಲೈಟ್ ಹಿಡಿದರೆ ಐದು ಸಾವಿರ ರೂಪಾಯಿ ಉಳಿತಾಯ ಮಾಡಬಹುದೆಂಬ ಸಲಹೆ ಕೊಟ್ಟರು. `ನನಗೆ ಕಾಯುವುದು ಬೇಸರ ತರುವುದಿಲ್ಲ, ಯಾಕೆಂದರೆ ಆ ಸಮಯವನ್ನು ನಾನು ಒಂದು ಪುಸ್ತಕ ಓದಲು ಬಳಸಿಕೊಳ್ಳುವೆ’ ಎಂದಿದ್ದೆ.

ನನಗೆ ವೀಸಾದ ಸಮಸ್ಯೆ ಇರಲಿಲ್ಲ. ಪ್ರವಾಸ ಮತ್ತು ಆರೋಗ್ಯದ ವಿಮಾ ಅವಶ್ಯವೆಂದು ಮಿತ್ರರು ಸಲಹೆ ನೀಡಿದರು. ಅದನ್ನು ಪಡೆಯಲು ಮಿತ್ರ ಆನಂದ ಪೈ ಸಹಕರಿಸಿದರು. ಲಗೇಜ್ ಎರಡು ಬ್ಯಾಗ್ ಚೆಕ್-ಇನ್ ಮಾಡಬಹುದು. ಪ್ರತಿಯೊಂದರ ತೂಕ 23 ಕಿಲೋ ಮೀರಬಾರದೆಂದು ಕೇಳಿದ್ದೆ. ಕಳೆದ ಸಲ ಬ್ಯಾಗ್ ಒಯ್ದು ರದ್ದಿ ಪೇಪರ್‌ವಾಲನ ಕಡೆಗಿದ್ದ ತಕ್ಕಡಿಯಲ್ಲಿ ತೂಕ ಮಾಡಿಸಿದ್ದೆ. ಈ ಸಲ ನನ್ನ ಮಗನು ಮನೆಯಲ್ಲಿ ಒಂದು ವೇಯಿಂಗ್ ಮಶೀನ್ ತಂದಿಟ್ಟು ಕೆಲಸ ಸುಲಭಗೊಳಿಸಿದ್ದ. ನಾನು (ಬುಧವಾರ 20 ಅಗಸ್ಟ್) ತಯಾರಾಗಿ ಕುಳಿತಾಗ ಮಗ ಹರ್ಷವರ್ಧನ ನನ್ನನ್ನು ಬಿಡಲು ಸಹಾರ ವಿಮಾನ ನಿಲ್ದಾಣಕ್ಕೆ ಬಂದ. ಈಗ ಹೊಸ ಕಟ್ಟಡದ ನಿರ್ಮಾಣ ಕಾರ್ಯ ನಡೆದಿದೆ. ಒಳಗೆ ಜೊತೆಗೆ ಯಾರನ್ನೂ ಬಿಡುವುದಿಲ್ಲ. ಆದ್ದರಿಂದ ನಾನು ಏನೆಲ್ಲಾ ಮಾಡಬೇಕೆಂಬುದನ್ನು ನನ್ನ ಮಗ ವಿವರಿಸಿದ. ಅವನು ತನ್ನ ಚಿತ್ರ ನಿರ್ದೇಶನದ ಕೆಲಸಕ್ಕಾಗಿ ಹತ್ತಾರು ಸಲ ವಿದೇಶ ಪ್ರಯಾಣ ಮಾಡಿದ್ದ ಅನುಭವದಿಂದ, ನಾನು ಮರೆತಿರುವ ಕಲವು ಸಂಗತಿಗಳನ್ನು ನೆನಪಿಸಿಕೊಟ್ಟ. ಒಳಗೆ ಜನಜಾತ್ರೆಯೇ ಇತ್ತು. ಯಾವುದೇ ಸಮಸ್ಯೆ ಇಲ್ಲದೆ ನಾನು ಚೆಕ್-ಇನ್ ಮಾಡಿದೆ. ನಾನು ಜೇಷ್ಠ ನಾಗರಿಕ (ಸೀನಿಯರ್ ಸಿಟಿಝನ್) ಆದ್ದರಿಂದ ಯಾವುದೇ ಕ್ಯೂ ಇಲ್ಲದೆ ನನ್ನ ಕಲಸ ಪೂರೈಸಲು ಇತರರು ಸಹಕಾರ ತೋರಿದರು. ಇನ್ನೂ ಎರಡು ಗಂಟೆ ಕಾಯಬೇಕಾಗಿತ್ತು. ಅಲ್ಲಿಂದ ಫೊನ್ ಮಾಡಲು ನನ್ನ ಮಡದಿ ಹೇಳಿದ್ದಳು. ಮರಾಠಿ ಮಾತಾಡುವ ಒಂದು ತರುಣ ದಂಪತಿ ಬೇರೆ ಎಲ್ಲಿಯೋ ಹೋಗುತ್ತಿದ್ದರು. ಅವರಿಗೆ ನನ್ನ ಸಾಮಾನು ನೋಡಿಕೊಳ್ಳುವುದಕ್ಕೆ ವಿನಂತಿಸಿ ನಾನು ಫೋನ್ ಬೂಥ್ ಹುಡುಕುತ್ತ ನಡೆದೆ. “ಅಂಕಲ್, ಬಹಳ ದೂರ ಹೋಗಬೇಕಾಗುತ್ತದೆ. ನೀವು ನನ್ನ ಸೆಲ್ ಫೊನ್ ಬಳಸಿ ಮಾತಾಡಿ” ಎಂದು ಆ ತರುಣಿ ನನಗೆ ಹೇಳಿದಳು. ನಾನು ಅವಳ ಫೋನ್ ಬಳಸಿ ನನ್ನ ಮಗನೊಂದಿಗೆ, ನಂತರ ನನ್ನ ಮಡದಿಯೊಂದಿಗೆ ಮಾತಾಡಿದೆ. ಅವಳಿಗೆ ಥ್ಯಾಕ್ಸ್ ಹೇಳಿದೆ. ಅವಳಿಗೆ ಪ್ಲೇನು ಸಿದ್ಧವಾಗಿದೆ ಎಂಬ ಕಾಲ್ ಬಂತು. ಅವಳು ಪತಿಯೊಂದಿಗೆ ಹೊರಟಳು. “ಅಂಕಲ್ ಟಾಟಾ” ಎಂದಳು. ನಾನು ಅವಳಿಗೆ ಒಂದು ಪ್ರಶ್ನೆ ಕೇಳಿದೆ. “ನೀನು ತಪ್ಪು ತಿಳಿಯದಿದ್ದರೆ ಒಂದು ಪ್ರಶ್ನೆ ಕೇಳುವೆ. …ನನ್ನ ಬಗ್ಗೆ ಇಷ್ಟೊಂದು ಮಮತೆ ತೋರಲು ಕಾರಣವೇನು? ”. ಅವಳು ನಸುನಗುತ್ತ ಅಂದಳು, “ನಿಮ್ಮ ಬ್ಯಾಗೇಜ್ ಮೇಲೆ ಕುಲಕರ್ಣಿ ಎಂದು ಬರೆದಿದೆ. ನನ್ನ ತವರು ಮನೆಯ ಹೆಸರೂ ಕುಲಕರ್ಣಿ” ಎಂದಳು. ನಮಸ್ಕರಿಸಿದಳು. `ಶುಭಾಸ್ತೇ ಪಂಥಾನಃ’ ಎಂದು ಹರಸಿದೆ.

ರಾತ್ರಿ ಹನ್ನೊಂದುವರೆಗೆ ನಮಗೆ ಕರೆನೀಡಿ ನಮ್ಮ ವಿಮಾನ ಸಿದ್ಧವಿದೆ ಎಂದು ಸಾರಲಾಯ್ತು. ಅಲ್ಲಿಯೂ ಜನಜಾತ್ರೆ. ಆದರೆ ಮಕ್ಕಳಿದ್ದವರು ಮತ್ತು ಹಿರಿಯರಿಗೆ ಮೊದಲು ಪ್ರವೇಶ. ಒಬ್ಬ ಅಟೆಂಡೆಂಟ್ ನನ್ನ ಸಾಮನು ಹೊತ್ತುಕೊಂಡು ಬಂದ, ನನ್ನನ್ನು ಸೀಟಿನವರೆಗೆ ಬಂದು ಕೂಡಿಸಿದ. ಬುಧವಾರ ರಾತ್ರಿ, ಗುರುವಾರ ಬೆಳಿಗ್ಗೆ 12.30ಕ್ಕೆ ಸರಿಯಾಗಿ ನಮ್ಮ ವಿಮಾನ ಮುಂಬೈ ನೆಲವನ್ನು ಬಿಟ್ಟಿತ್ತು. ಕಿತ್ತಳೆಹಣ್ಣಿನ ರಸ ಲಘುಖಾದ್ಯ ಸಿದ್ಧವಾಗಿತ್ತು. ನಾವು ಆಮ್‌ಸ್ಟರ್‌ಡ್ಯಾಂ ತಲುಪಿದಾಗ ಬೆಳಗಿನ 6.30. ಆದರೆ ನನ್ನ ವಾಚ್ 9.30 ತೋರುತ್ತಿತ್ತು. ಅಲ್ಲಿ ನನ್ನ ಮುಂದಿನ ಏರ್ ಟಿಕೆಟ್ ಕೊಟ್ಟರು. ಅಲ್ಲಿಂದ 22ನೆಯ ಗೇಟಿಗೆ ಹೋಗಲು ಸಲಹೆ ಕೊಟ್ಟರು. ಒಂದು ಚಿಕ್ಕ ಗಾಲಿಯಿದ್ದ ಬ್ಯಾಗು ಎಳೆಯುತ್ತ ಮತ್ತೊಂದು ಚಿಕ್ಕ ಬ್ಯಾಗು ಹೆಗಲಿಗೆ ಹಾಕಿ ಸಾಗಿದೆ. ನಡೆಯುವ ಪ್ರಸಂಹ ಬರಲಿಲ್ಲ. ನಿಂತಲ್ಲೇ ಜಾರಿ ಮುಂದೆ ಹೋಗುವ ಸಾಧನಗಳಿದ್ದವು. ಅಲ್ಲಿ ನಾನು ಕಾಯಬೇಕಾದ ಸಮಯದಲ್ಲಿ ಡಾ| ಗುರುಪ್ರಸಾದ ಕಾಗಿನೆಲೆ ಅವರ ಕಾದಂಬರು “ಬಿಳಿಯ ಚಾದರ” ಓದಿ ಮುಗಿಸಿದೆ. ಈ ಕಾದಂಬರಿಯನ್ನು ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ್ದಾರೆ. ಅದಕ್ಕೆ ಡಾ|ಯು.ಆರ್. ಅನಂತಮೂರ್ತಿಯವರ ಮುನ್ನುಡಿ ಇದೆ. ಕಾದಂಬರಿಯ ಮುಕ್ತಾಯ ಸ್ವಲ್ಪ ಅವಸರದಿಂದಾಯಿತು ಎನಿಸಿತು. ಮಿನಿಯಾಪೊಲಿಸ್‌ನಲ್ಲಿ ಲೇಖಕ-ಡಾಕ್ಟರರನ್ನು ಕಂಡಾಗ ಚರ್ಚಿಸಿದರಾಯಿತು ಎಂದುಕೊಂಡೆ.

ಮಧ್ಯಾಹ್ನ 1.30ಕ್ಕೆ ಹೊರಟ ವಿಮಾನ ಮಿನಿಯಾಪೊಲಿಸ್ ತಲುಪಿದಾಗ ಮಧ್ಯಾಹ್ನ 3.30 ಆಗಿತ್ತು. ನಾವು ವಿಮಾನದ ಪ್ರವಾಸದಲ್ಲಿ 9 ತಾಸು ಗಳಿಸಿದ್ದೆವು. ನನ್ನ ಗಡಿಯಾರದಲ್ಲಿ ರಾತ್ರಿ ಎರಡು ಗಂಟೆಯಾಗಿತ್ತು. ಭಾರತಕ್ಕೂ ಮಿನಿಯಾಪೊಲಿಸ್‌ಗೂ ಹತ್ತುವರೆ ತಾಸಿನ ಅಂತರವಿತ್ತು. ನಂತರ ನನ್ನ ಗಡಿಯಾರ ಸರಿಪಡಿಸಿಕೊಂಡೆ. ಹಿಂದಿನ ಸಲ ನಾನು ಬಂದಾಗ ಟ್ರಾಲಿಗಾಗಿ ಮೂರು ಡಾಲರ್ ಹಾಕಬೇಕಾಗುತ್ತಿತ್ತು. ಮುಂಬೈಯಿಂದ ಹೊರಡುವಾಗ ಯಾವ ಬ್ಯಾಂಕಿನಲ್ಲಿಯೂ ಎಕ್ಸ್‌ಚೇಂಜ್ ಮಾಡಬೇಕೆಂದರೆ ಒಂದು ಡಾಲರಿನ ನೋಟು ಇರಲಿಲ್ಲ. ನಂತರ ನನ್ನ ಮಗನೇ ಎಲ್ಲಿಂದಲೋ ಒಂದು ಡಾಲರಿನ ಐದು ನೋಟುಗಳನ್ನು ತಂದು ಕೊಟ್ಟ. ಮಿನಿಯಾಪೊಲಿಸ್ ತಲುಪಿದಾಗ ಅದರ ಅವಶ್ಯಕತೆ ಬೀಳಲಿಲ್ಲ. ಮುಂಬೈಯಂತೆ ಇಲ್ಲಿ ಕೂಡ ಉಚಿತವಾಗಿ ಟ್ರಾಲಿ ದೊರೆಯಿತು. ಇಮಿಗ್ರೇಶನ್ ಸಿಕ್ಕಾ ಪಡೆದೆ. ನಮ್ಮ ಬ್ಯಾಗು ನೋಡಿ, `ಉಪ್ಪಿನಕಾಯಿ, ಆಹಾರ ಇಲ್ಲವೆ ಯಾವುದೇ ಧಾನ್ಯ ತಂದಿದ್ದೀರಾ?’ ಎಂದು ಕೇಳಿದಾಗ, `ಇಲ್ಲ’ ಎಂದೆ. ಹೊರಗೆ ಬಂದಾಗ ಮೊಮ್ಮಕ್ಕಳು (ಋತುಷಾ, ಅಕ್ಷರಾ) ನನ್ನನ್ನು ಗುರುತಿಸಿ, `ಅಜ್ಜಾ’ ಎಂದು ಕೂಗಿದರು. ಅರ್ಧ ಗಂಟೆಯಲ್ಲಿ ಎಪಲ್ ವ್ಯಾಲಿ ಎಂಬ ಪ್ರದೇಶದಲ್ಲಿದ್ದ ಮಗನ ಮನೆಯನ್ನು ತಲುಪಿದೆ. ಸುತ್ತಲೂ ಹಚ್ಚಗಿನ ಹಸಿರು ಹುಲ್ಲು, ಎದುರು ನೀರಿನ ಸರೋವರವಿತ್ತು. ಮೊದಲಿನ ಮನೆ ಎರಡು ಸಾವಿರ ಚದರು ಫೂಟ್ ಇತ್ತು. ಈಗಿನದು ಮೂರುವರೆ ಸಾವಿರ ಚದರು ಫೂಟ್ ಇದೆ. ನೆಲಮನೆಯಲ್ಲಿ ದೊಡ್ಡ ಹಾಲ್ ಇದೆ. ನೂರು ಜನರ ಸಭೆ ಸೇರಿಸಬಹುದು. ಅಲ್ಲೆ ಬಹು ದೊಡ್ಡ ಸ್ಕ್ರೀನ್ ಉಳ್ಳ ಟಿವಿ ಇದೆ. ಪ್ರವೇಶವಾದೊಡನೆ ದೊಡ್ದ ಹಾಲ್, ಕಿಚನ್, ಡ್ರಾಯಿಂಗ ರೂಮ ಮತ್ತು ದೇವರ ಕೋಣೆ ಇದೆ. ಮೇಲಂತಸ್ತಿನಲ್ಲಿ ನಾಲ್ಕು ಬೆಡ್ ರೂಂಗಳಿವೆ. ಮಕ್ಕಳಿಗೆ ಪ್ರತ್ಯೇಕ ಕೋಣೆ ಅತಿಥಿಗಳಿಗೆ ಕೋಣೆಗಳಿವೆ. ಮಗನ ಪ್ರಗತಿ ಕಂಡು ಸಂತಸವಾಯಿತು.

ಎರಡು ದಿನ ಜೆಟ್‌ಲ್ಯಾಗ್. ಹಗಲು ನಿದ್ದೆ ರಾತ್ರಿ ಎಚ್ಚರವಿರುವ ಸ್ಥಿತಿ. ಶನಿವಾರ ಮನೆಯಲ್ಲಿ ಸತ್ಸಂಗವಿತ್ತು. ಶ್ರೀಶ್ರೀ ರವಿಶಂಕರ್ ಅವರು ಅಮೇರಿಕೆಯಲ್ಲಿ ಬಹಳ ಹೆಸರು ಮಾಡಿದ್ದಾರೆ. ಅವರ `ಆರ್ಟ್ ಆಫ್ ಲಿವಿಂಗ್’ ಕೋರ್ಸ್ ಇಲ್ಲಿ ಜನಪ್ರಿಯವಾಗಿದೆ. ನನ್ನ ಮಗ ಸೊಸೆ ಇಬ್ಬರೂ ಆ ಕೋರ್ಸ್ ಮಾಡಿದ್ದಾರೆ. ಇಪ್ಪತ್ತು ಜನ ಮಿತ್ರರು ಬಂದಿದ್ದರು. ಸಹಭೋಜನ, ಹರಿಕೀರ್ತನೆ ಮತ್ತು ವಿಚಾರವಿನಿಮಯ ಕಾರ್ಯಕ್ರಮವಿತ್ತು. ಬಂದವರೆಲ್ಲ ಭಾರತೀಯರು, ಬಹು ಭಾಷೆ ಮಾತಾಡುವವರು. ಎಲ್ಲರೂ ಉಚ್ಚ ಪದವೀಧರರು ಮತ್ತು ದೊಡ್ದ ಹುದ್ದೆಗಳಲ್ಲಿರುವವರು. ತೆಲಗು-ಬಂಗಾಲಿ, ತಮಿಳು-ಪಂಜಾಬಿ, ಹಿಂದಿ-ತಮಿಳು, ಕನ್ನಡ-ಮರಾಠಿ ದಂಪತಿಗಳು, ಮತ್ತೆ ಕೆಲವು ಅವಿವಾಹಿತರು ಇದ್ದರು. ಅವರ ಒಡನಾಟ ಚೆನ್ನಾಗಿತ್ತು. ಒಬ್ಬರು ಯೋಗ ಕಲಿಸಲು ಹ್ಯೂಸ್ಟನ್‌ನಿಂದ ಬಂದಿದ್ದರು. ಅಲ್ಲಿ ಸ್ವಾಮಿ ರಾಮದೇವ ಅವರ ಯೋಗಶಿಬಿರ ಸೇರಿದ್ದರಂತೆ. ಆಸನ ಪ್ರಾಣಾಯಾಮ ಯೋಗಮುದ್ರೆಗಳ ಬಗ್ಗೆ ಅವರೊಂದಿಗೆ ಮಾತಾಡಿದೆ.

ಶುಕ್ರವಾರ ಸಂಜೆ ಶಿಕಾಗೋದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಕಾರ್‌ನಿಂದ ಹೋಗಲು ನಿಶ್ಚಯಿಸಲಾಗಿತ್ತು. ಶರದ್, ದಿನೇಶ್, ನಾನು ಮತ್ತು ನನ್ನ ಮಗ ರಾಘವೇಂದ್ರ ಬೆಳಿಗ್ಗೆ ಬ್ರೆಕ್-ಫಾಸ್ಟ್ ಮಾಡಿ ಹೊರಟೆವು. 7 ತಾಸಿನ ಡ್ರೈವ್ ಇತ್ತು. ಮಧ್ಯದಲ್ಲಿ ಒಂದು ತಂಗುದಾಣ. ಅಲ್ಲಿ ಡಾಕ್ಟರ್ ಗುರುಪ್ರಸಾದ್ ಕಾಗಿನೆಲೆ ಪರಿವಾರ, ಅವರ ತಮ್ಮನ ಪರಿವಾರ, ಮಿತ್ರ ರಮೇಶ ಅವರ ಪರಿವಾರ ಸೇರಿ ಊಟ ಮಾಡಿದೆವು. ಇದು ಒಂದು ಪಿಕ್-ನಿಕ್ ತರಹ ಇತ್ತು. ದಾರಿಯುದ್ದಕ್ಕೂ ಸಂಗೀತದ ಕೆಸೆಟ್, ಬೇಸರ ಬಂದಾಗ ಸಾಹಿತ್ಯ ಚರ್ಚೆ ಸಾಗಿತ್ತು. ನಾವು ಶಿಕಾಗೊ ತಲುಪಿದಾಗ ಸಂಜೆ ಐದು ಗಂಟೆ. ಎಂಬಸಿ ಹೊಟೆಲ್‌ನಲ್ಲಿ ನಮಗೆ ರೂಂ ಇತ್ತು. ಅದರ ಎದುರಿಗೆ ಇರುವ ಡೊನಾಲ್ಡ್ ಸ್ಟೀವನ್ಸ್ (ರೋಸ್‌ಮೌಂಟ್) ಕನ್‌ವೆನ್ಶನ್ ಸೆಂಟರ್‌ನಲ್ಲಿ ನಮ್ಮ ಸಮ್ಮೇಳನ ನಡೆದಿತ್ತು. ಮೊದಲು ರಿಸೆಪ್ಶನ್ ಬಳಿ ಸೊವಿನಿಯರ್ ಹಾಗೂ ನಮ್ಮ ಬ್ಯಾಚ್ ಪಡೆದು, ಅಲ್ಪೋಪಹಾರ ಸೇವಿಸಿ, ಹಾಲ್ ಪ್ರವೇಶಿಸಿದೆವು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭಾಷಣ ನಡೆದಿತ್ತು.

(ಮುಂದುವರಿಯುತ್ತದೆ)

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: