Healing power in Vishnu Sahasranama (part 3) – ಭವರೋಗ ನಿವಾರಕ ಸ್ತೋತ್ರ ವಿಷ್ಣುಸಹಸ್ರನಾಮ (ಭಾಗ 3)

“ಜೀವೋಲ್ಲಾಸಮನತಿಶಯ-
ಭಾವೋಲ್ಲಾಸಮೆನೆ ಸಮೆದು ಯೋಗದೆ ಕಾವ್ಯೋ-
ಧ್ಭಾವಕ ಸತ್ತ್ವಮನರಳಿಪ
`ಜೀವಿಯವರ್ಗಿತ್ತೆನೀ ಹರಿಸಹಸ್ರಕೃತಂ||

ನಾನು ಅಮೇರಿಕೆಯ ಪ್ರವಾಸದಲ್ಲಿದ್ದಾಗ ಫಿಲೆಡೆಲ್ಫಿಯಾದ ಎಲೆನ್‌ಟೌನ್‌ನ ಸಮೀಪದಲ್ಲಿರುವ `ಆರ್ಷ ವಿದ್ಯಾ ಗುರುಕುಲವನ್ನು ಸಂದರ್ಶಿಸುವ ಅವಕಾಶ ದೊರೆತಿತ್ತು. ಅದನ್ನು ನೋಡಿದಾಗ ಸ್ವಾಮಿ ದಯಾನಂದ ಸರಸ್ವತಿಯವರ ಬೃಹತ್ ಸಾಧನೆಯ ಅರಿವಾಯಿತು. ಅವರು ಬರೆದ `ವಿಷ್ಣುಸಹಸ್ರನಾಮ ಗ್ರಂಥ ಮನೆಯಲ್ಲೇ ಇತ್ತು. ಆದರೆ ಓದುವ ಅವಕಾಶ ಈಗ ದೊರೆಯಿತು. ಅವರು ಭಾರತದಲ್ಲಿರುವ ತಮ್ಮ ಆಶ್ರಮಗಳಲ್ಲಿಯ (ಕೊಯಿಮತ್ತೂರು, ಋಷೀಕೇಶ) ವಿದ್ಯಾರ್ಥಿಗಳಿಗೆ ಹೇಳಿದ ಪಾಠಗಳ ಟಿಪ್ಪಣಿಗಳನ್ನು ಸಂಗ್ರಹಿಸಿ, ಉತ್ತಮವಾಗಿ ಸಂಪಾದಿಸಿ, ಗ್ರಂಥರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಪ್ರಸ್ತಾವನೆ ಮತ್ತು ಸ್ತೋತ್ರದ ಹಿನ್ನೆಲೆ ಇದೆ. ಎರಡನೆಯದರಲ್ಲಿ ಸ್ತೋತ್ರವಿದೆ. ಇದನ್ನು ದೇವನಾಗರಿ ಹಾಗೂ ರೋಮನ್ ಲಿಪಿಯಲ್ಲಿ ಕೊಡಲಾಗಿದೆ. (ಡಯಕ್ರಿಟಿಕಲ್ ಮಾರ್ಕ್ ವಿಧಾನ ಬಳಸಲಾಗಿದೆ). ಸಾವಿರ ನಾಮಗಳ ಅರ್ಥವಿವರಣೆಯೂ ಇದೆ, ಮೂರನೆಯ ಭಾಗದಲ್ಲಿ ಫಲಶ್ರುತಿ [^] ಇದೆ. ಶ್ರೀಶಂಕರಾಚಾರ್ಯರ ಭಾಷ್ಯವನ್ನು ಇವರು ಅನುಸರಿಸುತ್ತಾರೆ. ಇದೊಂದು ಸಂಗ್ರ್ರಾಹ್ಯ ಪುಸ್ತಕ. ಆಸಕ್ತರು ಓದಬೇಕು.

ಸಾವಿರ ನಾಮಗಳಲ್ಲಿ 88 ನಾಮಗಳ ಪುನರುಕ್ತಿ ಇದ್ದಂತೆ ತೋರುತ್ತದೆ. (77 ನಾಮಗಳು ಎರಡು ಸಲ, 7 ನಾಮಗಳು ಮೂರು ಸಲ, ಒಂದು ನಾಮ ನಾಲ್ಕು ಸಲ ಬಂದಿದೆ). ಅದರೆ ಇವುಗಳ ಅರ್ಥಗಳು ಬೇರೆಬೇರೆಯಾಗಿವೆ ಎನ್ನುವುದು ಗ್ರಂಥವನ್ನು ಓದಿದಾಗ ನಮ್ಮ ಗಮನಕ್ಕೆ ಬರುತ್ತದೆ. ಉದಾಹರಣೆಗೆ `ಅನಲ ಎಂಬ ನಾಮ ಎರಡು ಸಲ ಬಂದಿದೆ. ಅದರ ಅರ್ಥ 1) ಅನಲ ಅಂದರೆ ಅಗ್ನಿ. ಅಲಂ ಎಂದರೆ ಸಾಕು. ಅನಲ ಎಂದರೆ ಸಾಕು ಎನ್ನದವ. ಅಗ್ನಿಯೊಳಗೆ ಏನು ಹಾಕಿದರೂ ಅದು ಸ್ವಾಹಾ ಮಾಡಿಬಿಡುತ್ತದೆ. ಭಗವಂತನೂ ಹಾಗೆಯೇ- ಅವನಿಗೆ ಯಾವುದೂ ಸಾಕು ಎನಿಸುವುದಿಲ್ಲ. 2) ಅನಲ ಎಂದರೆ ಯಾವುದೇ ಮಿತಿ ಇಲ್ಲದವ ಎಂದೂ ಅರ್ಥವಿದೆ. (ಅಲಂ ಪರ್ಯಾಪ್ತಿಃ ನ ಅಸ್ಯ ವಿದ್ಯತೇ).

`ಅಜಃ ಎಂಬ ನಾಮ ಮೂರು ಸಲ ಬಂದಿದೆ (95, 204, 521). 1) ಯಾವನು ಹುಟ್ಟಿಲ್ಲವೋ ಅವನು. (ನ ಜಾಯತೇ ಇತಿ ಅಜಃ). ಯಾವನಿಗೆ ಹುಟ್ಟು ಇಲ್ಲವೋ ಅವನಿಗೆ ಸಾವೂ ಇಲ್ಲ. 2) ಯಾವಾಗಲೂ ಚಲಿಸುತ್ತಿರುವವನು. (ಅಜತಿ ಗಚ್ಛತಿ ಇತಿ ಅಜಃ). 3) ಪ್ರೀತಿಯ ದೇವತೆ ಕಾಮದೇವ. ಅಜನಾದ ವಿಷ್ಣುವಿನಲ್ಲಿ ಜನಿಸಿದವನಿವ. `ಪ್ರಾಣದಃ ಎಂಬ ನಾಮ ನಾಲ್ಕು ಸಲ ಬಂದಿದೆ. (65, 321, 408, 956). 1) ಪ್ರಾಣವನ್ನು ಕೊಡುವವ (ಪ್ರಾಣಾನ್ ದದಾತಿ ಚೇಷ್ಟಯತಿ ಇತಿ ಪ್ರಾಣದಃ). 2) ಶಕ್ತಿಯನ್ನು ಕೊಡುವವನು. 3) ಸೃಷ್ಟಿಯ ಕಾಲಕ್ಕೆ ಎಲ್ಲ ಪ್ರಾಣಿಗಳಲ್ಲಿ ಜೀವನ ಜೀವ ತುಂಬುವವನು. 4) ವಾಯುರೂಪದಲ್ಲಿ ಪಂಚಪ್ರಾಣಗಳನ್ನು ಕೊಡುವವನು.

ಕನ್ನಡದಲ್ಲಿಯೂ ವಿಷ್ಣು ಸಹಸ್ರನಾಮದ ಬಗ್ಗೆ ಸಾಕಷ್ಟು ಗ್ರಂಥಗಳು ಪ್ರಕಟವಾಗಿವೆ. ಫಲಿಮಾರು-ಭಂಡಾರಕೇರಿ ಮಠಗಳ ಶ್ರೀ ವಿದ್ಯಾಮಾನ್ಯತೀರ್ಥರು ವಿವರವಾಗಿ ಅರ್ಥ ಬರೆದಿದ್ದಾರೆಂದು (ನಾಲ್ಕು ಸಂಪುಟಗಳಿವೆಯೆಂದು) ಕೇಳಿರುವೆ. `ಶ್ರೀವಿಷ್ಣುಸಹಸ್ರನಾಮ ಪ್ರತಿಪದಾರ್ಥಚಂದ್ರಿಕಾ ಎಂಬ ಪಂ| ಸಗ್ರಿ ರಾಘವೇಂದ್ರ ಉಪಾಧ್ಯಾಯ ಅವರು ಸಂಪಾದಿಸಿದ ಗ್ರಂಥ ನನ್ನ ಬಳಿ ಇದೆ. ಇಲ್ಲಿ ಪ್ರತಿ ನಾಮದ ಅರ್ಥಗಳೊಂದಿಗೆ ಕೆಲವು ವಿದ್ವಾಂಸರು ಬರೆದ ಪ್ರಬಂಧಗಳೂ ಇವೆ. (ವಿಷ್ಣುಸಹಸ್ರನಾಮದ ವೈಶಿಷ್ಟ್ಯ, ವಿ.ಸ.ನಾ. ಮತ್ತು ಶ್ರೀ ಕೃಷ್ಣ, ವಿ.ಸ.ನಾ. ಮತ್ತು ಭೀಷ್ಮರು, ವಿ.ಸ.ನಾ. ಮತ್ತು ಗೀತಾ, ಉಪನಿಷತ್ತು, ಬ್ರಹ್ಮಸೂತ್ರ ಮುಂತಾದ ಲೇಖನಗಳಿವೆ.) ಇಲ್ಲಿ ಬೃಹತೀಸಹಸ್ರಕ್ಕೂ ವಿಷ್ಣುಸಹಸ್ರ ನಾಮಕ್ಕೂ ಇರುವ ಸಂಬಂದದ ಬಗ್ಗೆ ವಿವೇಚನೆ ಇದೆ. (ವಿಷ್ಣೋಃ ಸಹಸ್ರ ನಾಮಸ್ತು ಯದ್ ತದ್ ರೂಪ ಸಹಸ್ರಕಮ್ | ಬೃಹತೀಸಹಸ್ರಮೇತಚ್ಚ ತದ್ ವಕ್ತಿ ಹಿ ಪೃಥಕ್ ಪೃಥಕ್||) ಮನುಷ್ಯನ ನೂರು ವರ್ಷದ ಆಯುಷ್ಯದಲ್ಲಿ 36000 ಹಗಲುಗಳು, ರಾತ್ರಿಗಳು ಇವೆ, ಬೃಹತೀಸಹಸ್ರದಲ್ಲಿ 36000 ಸ್ವರಾಕ್ಷರಗಳು, ವ್ಯಂಜನಾಕ್ಷರಗಳು ಇವೆ. ಹಗಲು ರಾತ್ರಿಗಳಿಗೆ ನಿಯಾಮಕ 36000 ಭಗವದ್ರೂಪಗಳನ್ನು ಒಂದು ಸಾವಿರ ರುಕ್‌ಗಳು ಸ್ತೋತ್ರಮಾಡುತ್ತವೆ. ವಿಷ್ಣುಸಹಸ್ರನಾಮದ ಸಾವಿರ ನಾಮಗಳಿಂದ ಪ್ರತಿಪಾದ್ಯವಾದ ಸಾವಿರ ರೂಪಗಳನ್ನು ಅವು ಸ್ತುತಿಸುತ್ತಿವೆ. ಶ್ರೀಮಧ್ವಾಚಾರ್ಯರು ತಮ್ಮ ಐತರೇಯ ಭಾಷ್ಯದಲ್ಲಿ ಬೃಹತೀಸಹಸ್ರದ ಮಹತ್ವದ ಬಗ್ಗೆ, ಅದರೊಂದಿಗೆ ವಿಷ್ಣುಸಹಸ್ರನಾಮದ ಅನ್ಯೋನ್ಯತೆಯ ಬಗ್ಗೆ ಬರೆದಿದ್ದಾರೆ.

ಶ್ರೀವಿಷ್ಣುಸಹಸ್ರನಾಮದ 108 ಶ್ಲೋಕಗಳಿಗೂ ಪಾರಾಯಣ ಮಾಡುವವರ ಜನ್ಮ ನಕ್ಷತ ಹಾಗೂ ಪಾದಗಳಿಗೂ ಸಂಬಂಧದವಿದೆ ಎಂದು ಬಗ್ಗೆ ಅಂತರ್ಜಾಲದಿಂದ ಪರಿಚಯ ಬೆಳೆಸಿದ ಮಿತ್ರರೊಬ್ಬರು (ವೆಂಕಟೇಶ ಸಿರಾ) ನನ್ನ ಗಮನ ಸೆಳೆದಿದ್ದಾರೆ. ಹೆಚ್ಚಾಗಿ ವಿಷ್ಣುಸಹಸ್ರನಾಮದ ಪುಸ್ತಕಗಳಲ್ಲಿ 107 ಶ್ಲೋಕಗಳಿಗೆ ಸಾವಿರ ನಾಮ ಪೂರ್ತಿಗೊಳ್ಳುತ್ತವೆ. ನನ್ನ ಬಳಿ ಇದ್ದ ಎರಡೂ ಇಂಗ್ಲಿಷ್ ಗ್ರಂಥಗಳಲ್ಲಿ ಉತ್ತರ ಪೀಠಿಕಾ ಶ್ಲೋಕ “ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಮದಕೀ | ಶ್ರೀಮಾನ್ ನಾರಾಯಣೋ ವಿಷ್ಣುರ್ವಾಸುದೇವೋಭಿರಕ್ಷತು || ಇದನ್ನು 108ನೆ ಶ್ಲೋಕವೆಂದು ಪರಿಗಣಿಸಿದ್ದಾರೆ. ಅಶ್ವಿನಿಯಿಂದ ರೇವತಿಯ ವರೆಗೆ 27 ನಕ್ಷತ್ರಗಳು ಇವೆ. ಅವುಗಳಲ್ಲಿ ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳು(ಚರಣಗಳು) ಇವೆ. ಇವುಗಳ ಗುಣಾಕಾರ 108 ಆಗುತ್ತದೆ. ಇದರ ಪ್ರಕಾರ ಪ್ರತಿಯೊಬ್ಬನ ಜನ್ಮ ನಕ್ಷತ್ರ ಹಾಗೂ ಪಾದಕ್ಕೆ ಅನುಸರಿಸಿ ಒಂದೊಂದು ಶ್ಲೋಕವನ್ನು ಗುರುತಿಸಿ ಆಯಾವ್ಯಕ್ತಿ ಆ ಶ್ಲೋಕ ಪಾರಾಯಣ ಮಾಡಿದರೆ ವಿಶೇಷ ಲಾಭವಿದೆ ಎನ್ನುವವರಿದ್ದಾರೆ. (ರೋಹಿಣಿ ಮೊದಲಾದ 27 ಕನ್ಯೆಯರೇ ದಕ್ಷಬ್ರಹ್ಮನ ಪುತ್ರಿಯರು, ಇವರೇ ಚಂದ್ರನ ನಕ್ಷತ್ರ ರೂಪದ ಪತ್ನಿಯರು ಎಂಬದು ಪುರಾಣದಲ್ಲಿ ಬರುವ ಕತೆ.) ಇದರ ಬಗ್ಗೆ ವಿವರ ಕೇಳಿದಾಗ ಮಿತ್ರರು `wikipedia.orgನ ಲಿಂಕ್ ಕಳಿಸಿದರು. ಅಲ್ಲಿ ನಕ್ಷತ್ರಗಳ ಪಟ್ಟಿಯೇ ದೊರೆಯುತ್ತದೆ, ಜನ್ಮನಾಮಗಳ ಪ್ರಾರಂಭದ ಅಕ್ಷರವೂ ದೊರೆಯುತ್ತದೆ. ಉದಾಹರಣೆಗೆ ರೋಹಿಣೀ ನಕ್ಷತ್ರಕ್ಕೆ ನಾಲ್ಕು ಪಾದಗಳು. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಜನ್ಮನಾಮ `ಚು, ಚೆ, ಚೋ, ಲಾದಿಂದ ಪ್ರಾಂಭವಾಗುತ್ತದೆ. 1ರಿಂದ ನಾಲ್ಕು ಶ್ಲೋಕ. ಕೊನೆಯ ನಕ್ಷತ್ರ ರೇವತಿ. ಇದರಲ್ಲಿ ನಾಲ್ಕು ಪಾದಗಳ ಅಕ್ಷರಗಳು `ದೇ, ದೋ, ಚ, ಚೀ ಶ್ಲೋಕಗಳ ಸಂಖ್ಯೆ 105ರಿಂದ 108. ತಮ್ಮ ಜನ್ಮನಾಮ ಮತ್ತು ನಕ್ಷತ್ರಕ್ಕೆ ಹೊಂದುವಂತಹ ಶ್ಲೋಕವನ್ನು ಆರಿಸಿ ಪಾರಾಯಣ ಮಾಡಬಹುದು. ನಾನು ಮಿತ್ರರಿಗೆ ಬರೆದೆ, “ಮೃಗಶಿರಾ ನಕ್ಷತ್ರ, ಮೂರನೆಯ ಪಾದ, ಅಂದರೆ `ಕಾ ಜನ್ಮನಾಮ ಇರುವವರು ಯಾವ ಶ್ಲೋಕ ಪಠಸಬೇಕು, ತಿಳಿಸಿರಿ. ಎಂದು. ಮೃಗಶೀರ್ಷ 5ನೆಯ ನಕ್ಷತ್ರ. 17ರಿಂದ 20 ಶ್ಲೋಕ ಈ ನಕ್ಷತ್ರಕ್ಕೆ ಇವೆ. 3ನೆಯ ಪಾದ ಎಂದರೆ 19ನೆಯ ಶ್ಲೋಕ. “ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ | ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್|| ಈ ಶ್ಲೋಕ ಪಾರಯಣ ಮಾಡಲು ತಿಳಿಸಿದರು. `ಇದರ ಬಗ್ಗೆ ನಿಮಗೆ ಹೇಳಿದವರಾರು? ಎಂದು ಕೇಳಿದಾಗ `ಜಿಯರ್ ಎಜ್ಯುಕೇಶನ್ ಟ್ರಸ್ಟ್ ಯುಎಸ್‌ಎ ಸ್ಥಾಪಿಸಿದ ಶ್ರೀಮನ್ನಾರಾಯಣ ರಾಮನುಜ ಚಿನ್ನ ಜಿಯರ್ ಸ್ವಾಮಿಗಳು ಎಂದೂ, `ಒಂದು ಪ್ರವಚನದಲ್ಲಿ ಈ ವಿಷಯ ತಿಳಿಸಿದ್ದರು ಎಂದೂ ಬರೆದರು. ಅಸಕ್ತಿ ಇದ್ದವರು ತಮ್ಮ ಜನ್ಮ ನಕ್ಷತ್ರಕ್ಕೆ ಸರಿಹೊಂದುವ ಶ್ಲೋಕವನ್ನು ಆರಿಸಿ ಪಾರಾಯಣ ಮಾಡಿ ಅದರ ಪರಿಣಾಮವನ್ನು ಸ್ವತಃ ಪರೀಕ್ಷಿಸಬಹುದಾಗಿದೆ. ಜನ್ಮನಾಮ ಗೊತ್ತಿದ್ದರೆ ಯಾವುದೇ ಪಂಚಾಂಗದಲ್ಲಿ ನಕ್ಷತ್ರ ಹಾಗೂ ಪಾದಗಳ ವಿವರ ಪಡೆಯಬಹುದು.

ನನ್ನ ಲೇಖನ ಓದಿ ಅನೇಕರು ವಿಷ್ಣುಸಹಸ್ರನಾಮ ಪಾರಾಯಣ ಪ್ರಾರಂಭಿಸಲು ಸ್ಫೂರ್ತಿ ಪಡೆದಿದ್ದಾರೆಂಬುದನ್ನು ತಿಳಿದು ನನಗೆ ಸಂತಸವಾಗಿದೆ. ಒಬ್ಬರು ಆಮ್ಸ್‌ಟರ್‌ಡ್ಯಾಮ್‌ನಿಂದ ಪತ್ರ ಬರೆದರು. `ಮದುವೆಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿರುವೆ, ಯಾವ ಶ್ಲೋಕ ಪಠಿಬೇಕು ತಿಳಿಸುವಿರಾ? ಎಂದು ಕೇಳಿದರು. ನಾನು ಅರಳುಮಲ್ಲಿಗೆಯವರ ಪುಸ್ತಕ ನೋಡಿ 32ನೆಯ ಶ್ಲೋಕ 11 ಸಲ ಪಠಿಸಲು ತಿಳಿಸಿದೆ. (ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ ||). ಜ್ಞಾನದ ಬೆಳಕು ಹೀಗೆಯೇ ಎಲ್ಲೆಡೆ ಹರಡುತ್ತಿರಲಿ.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: