Kannada Shakespear, Vinayak Krishna Gokak – ಕನ್ನಡದ ಷೇಕ್ಸ್‌ಪಿಯರ್ ವಿಕೆ ಗೋಕಾಕ್

Kannada Shakespear, Vinayak Krishna Gokak
ಸಮರಸ, ಸಮನ್ವಯ, ಸಂಕೀರ್ಣತೆ ಈ ಮೂರೂ ಕ್ಷೇತ್ರಗಳಲ್ಲಿ ತಮ್ಮ ವಾಮನ ಪಾದ ಇಟ್ಟು ತ್ರಿವಿಕ್ರಮರಾಗಿ ಬೆಳೆದುನಿಂತವರು ಗೋಕಾಕ. ಜೀವನದಲ್ಲಿ ಸಮರಸ, ವಿಮರ್ಶೆಯಲ್ಲಿ ಸಮನ್ವಯ, ಹಾಗೂ ರಚನಾತ್ಮಕ ಬರವಣಿಗೆಯಲ್ಲಿ ಸಂಕೀರ್ಣತೆಯನ್ನು ಗೋಕಾಕರು ಅಳವಡಿಸಿಕೊಂಡಿದ್ದರು. ಕನ್ನಡದ ಷೇಕ್ಸ್‌ಪಿಯರ್ ಎಂದೇ ಖ್ಯಾತರಾಗಿದ್ದ ಸಮನ್ವಾಚಾರ್ಯ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಕವಿಗಳ ಸ್ಮರಣೆ ಭಾಗ 7.
ಗೋಕಾಕರ ಬೆಂಗಳೂರು ವಾಸ್ತವ್ಯದ ಬಗ್ಗೆ ಬರೆಯುವಾಗ ಗೋಕಾಕ – ಪಾವಟೆ ಇವರ ಮೈತ್ರಿಯನ್ನು ನೆನೆಯಬೇಕು. ಪಾವಟೆಯವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಉಪಕುಲಪತಿಯ ಆಯ್ಕೆಯ ಸಮಿತಿಯಲ್ಲಿದ್ದರು. ಆಗ ಹೈದ್ರಾಬಾದ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಗೋಕಾಕರನ್ನು ಭೇಟಿಯಾಗಿ ಗೋಕಾಕರಿಗೆ ಆಶ್ಚರ್ಯವನ್ನುಂಟುಮಾಡಿದ್ದರು. ಗೋಕಾಕರನ್ನು ಬಹುಕಾಲದ ಮೇಲೆ ಕಂಡಾಗ ಅವರ ತಲೆಯಲ್ಲಿ ಒಂದು ವಿಚಾರ ಹೊಳೆಯಿತು. ಗೋಕಾಕರು ಒಂದು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ಯೋಗ್ಯರಾಗಿದ್ದಾರಲ್ಲ ನಾವೇಕೆ ಅವರನ್ನು ಶಿಫಾರಸ್ಸು ಮಾಡಬಾರದು ಎಂದು. ಮುಂದೆ ಕೆಲವೇ ತಿಂಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಯಾಗಿದ್ದ ಲೊರೆನ್ಸ್‌ರು ತೀರಿಕೊಂಡಿದ್ದರಿಂದ ಆ ಜಾಗೆ ಖಾಲಿಯಾಗಿತ್ತು. ಆಗ ಕರ್ನಾಟಕ ರಾಜ್ಯದ ವಿದ್ಯಾಮಂತ್ರಿಯಾಗಿದ್ದ ಕಂಠಿಯವರಿಗೆ, ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪನವರಿಗೆ ಗೋಕಾಕರ ಹೆಸರನ್ನು ಪಾವಟೆಯವರು ಸೂಚಿಸಿದರು. ಗೋಕಾಕರಿಗೆ ಈ ಗೌರವ ಹುದ್ದೆ ಸ್ವೀಕರಿಸಲು ಆಮಂತ್ರಣ ಬಂದಾಗ ಆಶ್ಚರ್ಯವಾಯಿತು. ಕರ್ನಾಟಕಕ್ಕೆ ಮತ್ತೆ ಮರಳುವ ಯೋಗ ಬಂತು ಎಂಬ ಆನಂದವೂ ಉಂಟಾಯಿತು.

ಗೋಕಾಕರು ಹಿಂದೆ ಧಾರವಾಡದಲ್ಲಿ ಪ್ರಿನ್ಸಿಪಾಲರಾಗಿದ್ದಾಗ ಒಬ್ಬ ಐಎಎಸ್ ಅಧಿಕಾರಿ, ಗೋಕಾಕರ ಸಾಹಿತ್ಯ ಮೆಚ್ಚಿದ ಸಹೃದಯಿ ಇವರಿಗೆ ಬೆಂಗಳೂರಿನಲ್ಲಿ ಒಂದು ಸೈಟ್ ಪಡೆಯಲು ಅರ್ಜಿ ಸಲ್ಲಿಸಲು ಸಲಹೆ ನೀಡಿದರು. ಮುಂದೆ ಅನುಕೂಲವಾದಾಗ ಮನೆ ಕಟ್ಟಿಸಬಹುದು ಎಂದೂ ಹೇಳಿದ್ದರು. ಗೋಕಾಕರು ಒಂದು ಸೈಟ್ ಪಡೆದರು. ಅಷ್ಟೇಅಲ್ಲ, ಮಿತ್ರರಾದ ಒಬ್ಬ ಆರ್ಕಿಟೆಕ್ಟ್‌ರಿಗೆ ಮನೆಕಟ್ಟಿಸುವ ಕೆಲಸ ವಹಿಸಿದ್ದರು. ಇವರು ಹೈದರಾಬಾದನಲ್ಲಿರುವಾಗ ಮನೆಯ ಕೆಲಸ ಮುಕ್ತಾಯದ ಹಂತದಲ್ಲಿತ್ತು. ಆದರೆ ಗೋಕಾಕರು ಅದನ್ನು ನೋಡಿರಲಿಲ್ಲ. ಪಾವಟೆಯವರು ಗೋಕಾಕರಿಗೆ ಒಮ್ಮೆ ಬೆಂಗಳೂರಿನಲ್ಲಿದ್ದ ತಮ್ಮ ಮನೆ ತೋರಿಸಲು ಕರೆದುಕೊಂಡು ಹೋದರು. ಗೋಕಾಕರಿಗೆ ಆ ಪ್ರದೇಶ ಪರಿಚಿತವಿದ್ದಂತೆ ತೋರಿತು. ಇಲ್ಲೇ ಎಲ್ಲೋ ನನ್ನದೂ ಒಂದು ಪ್ಲಾಟ್ ತೆಗೆದುಕೊಂಡ ನೆನಪು ಇದೆ, ಮನೆ ನಿರ್ಮಾಣದ ಹಂತದಲ್ಲಿರಬೇಕು ಎಂದರು ಗೋಕಾಕರು. ನಂತರ ಪಾವಟೆಯವರ ಮನೆ ನೋಡಿದರು. ಬದಿಯಲ್ಲಿ ಒಂದು ಬಂಗ್ಲೆ ಕಟ್ಟುವ ಕೆಲಸ ಭರದಿಂದ ಸಾಗಿತ್ತು. ಇದು ಯಾರ ಮನೆಯೆಂದು ಕೆಲಸಗಾರರನ್ನು ಕೇಳಿದರು. ಅವರು, ಇದು ಪ್ರಿನ್ಸಿಪಾಲ್ ಗೋಕಾಕರ ಬಂಗಲೆ ಎಂದು ಉತ್ತರಿಸಿದಾಗ ಇಬ್ಬರಿಗೂ ಆಶ್ಚರ್ಯವಾಯಿತು. ಆಗ ಪಾವಟೆಯವರ ಬಾಯಿಯಿಂದ ಬಂದ ಉದ್ಗಾರ ಹೀಗಿತ್ತು ಷೇಕ್ಸ್‌ಪಿಯರ್ ಮತ್ತು ಯುಕ್ಲೀಡ್ ಬೆನ್ನಿಗೆ ಬೆನ್ನು ಹಚ್ಚಿಯೇ ನಿಂತಿದ್ದಾರೆ. ಗೋಕಾಕರ ಪ್ರಿಯ ಲೇಖಕ ಷೇಕ್ಸ್‌ಪಿಯರ್ ಆಗಿದ್ದರೆ, ಪಾವಟೆಯವರ ಪ್ರಿಯ ಗಣಿತಜ್ಞ ಯುಕ್ಲೀಡ್ ಆಗಿದ್ದರು.

ಗೋಕಾಕರು ಬೆಂಗಳೂರಲ್ಲಿ ಇರುವಾಗ ಸತ್ಯಸಾಯಿಬಾಬಾ ಇವರಿಗೆ ಇನ್ನಷ್ಟು ಹತ್ತಿರದವರಾದರು. ಬಾಬಾ ವೈಟ್‌ಫೀಲ್ಡ್‌ಗೆ ಬಂದಾಗ ಗೋಕಾಕರು ಅವರನ್ನು ಕಾಣಲು ಹೋಗುತ್ತಿದ್ದರು. ಅವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಗೋಕಾಕರ 60 ವರ್ಷದ ಶಾಂತಿ ಬೆಂಗಳೂರಲ್ಲಿಯೇ ನಡೆಯಿತು. ವೈಸ್ ಚಾನ್ಸ್‌ಲರ್ ಇರುವ ಬಂಗಲೆಯಲ್ಲಿ (ಕಾರ್ಲ್‌ಟನ್ ಹೌಸ್) ಎರಡುದಿನ ಹೋಮ-ಹವನ ನಡೆದವು. ಆಗ ಎರಡು ದಿನ ಸಾಯಿಬಾಬಾ ಅಲ್ಲಿಯೇ ತಂಗಿದ್ದರು. ಗೋಕಾಕರ ಮೊಮ್ಮಗನ ಉಪನಯನ ಅದೇ ವೇಳೆಗೆ ನಡೆದಾಗ ಬಾಬಾ ಅವರು ಗಾಯತ್ರಿ ಮಂತ್ರೋಪದೇಶ ಮಾಡಿದ್ದರು. ಒಮ್ಮೆ ಪುಟ್ಟಪುರ್ತಿಯಲ್ಲಿ ಶಿವರಾತ್ರಿಯ ಪೂಜೆಯ ವೇಳೆಗೆ ಶಿವಲಿಂಗೋದ್ಭವ ಮಾಡಿದ ಸನ್ನಿವೇಶಕ್ಕೆ ಬಾಬಾ ಅವರೇ ಗೋಕಾಕ ದಂಪತಿಗಳನ್ನು ಕರೆಸಿಕೊಂಡು ದಿವ್ಯದರ್ಶನ ಕೊಟ್ಟರು. ಅದರ ಬಗ್ಗೆ ಶಾರದಾ ಗೋಕಾಕರು ಬರೆಯುತ್ತಾರೆ. ಸೋಮೇಶ್ವರ ದೇವಾಲಯಕ್ಕೆ ಜಾಮ್ ನಗರದ ರಾಣಿ ಸಾಹೇಬರು ಅರ್ಪಿಸಿದ ಬೆಳ್ಳಿಯ ಮಹಾದ್ವಾರದ ಉದ್ಘಾಟನೆಗೆ, ನಂತರ ದ್ವಾರಕೆಗೆ, ಸತ್ಯಸಾಯಿಬಾಬಾರವರು ಹೋಗುವವರಿದ್ದರು. ವಿಶೇಷ ವಿಮಾನದಲ್ಲಿ ಪ್ರಯಾಣಿಸುವಾಗ ಜೊತೆಗೆ ಗೋಕಾಕ ದಂಪತಿಗಳನ್ನು ಕರೆದುಕೊಂಡು ಹೋದದ್ದು ವಿಶೇಷ. ಜಾಮ್ ನಗರದ ಬಳಿಯ ಸಮುದ್ರತೀರದಲ್ಲಿ ಬಾಬಾ ಅವರು ಇಷ್ಟವಾದ ದೇವತೆಯ ಪ್ರತಿಮೆಯನ್ನು ಸೃಷ್ಟಿಸಿ ಭಕ್ತರಿಗೆ ಕೊಡುತ್ತಿದ್ದರು. ಗೋಕಾಕರಿಗೆ ಗಣಪತಿಯ ಮೂರ್ತಿಯನ್ನು ಕೊಟ್ಟರು. ಇದನ್ನೆಲ್ಲ ಶಾರದಾ ಗೋಕಾಕರು ನೆನೆಯುತ್ತಾರೆ. (ಒಲವೆ ನಮ್ಮ ಬದುಕು).

ಬೆಂಗಳೂರಿನಲ್ಲಿ ಸಂತೋಷ ತಂದ ಇನ್ನೊಂದು ಅಂಶವೆಂದರೆ, ಅವರು ಸಂಪಾದಿಸಿದ ಸಮನ್ವಯ ಎಂಬ ಸಾಹಿತ್ಯಿಕ ಮಾಸಪತ್ರಿಕೆ. ಅಡಿಗರ ಸಾಕ್ಷಿ, ಜಿ.ಬಿ. ಜೋಶಿಯವರ ಮನ್ವಂತರ, ಹೇಮಂತರ ಸೃಜನವೇದಿ, ಅನಂತಮೂರ್ತಿಯವರ ರುಜುವಾತು ಪತ್ರಿಕೆಗಳಂತೆ ಇದು ಒಂದು ಮಹತ್ವದ ಪತ್ರಿಕೆಯಾಗಿತ್ತು. ಆದರೆ ಒಂಭತ್ತು ತಿಂಗಳಿಗೇ ಇದು ನಿಂತುಹೋಯಿತು. ಅದರ ಸಂಪುಟಗಳು ಇಂದಿಗೂ ಸಂಗ್ರಾಹ್ಯವಾಗಿವೆ. ಸಮರಸ, ಸಮನ್ವಯ, ಸಂಕೀರ್ಣತೆ ಈ ಮೂರೂ ಕ್ಷೇತ್ರಗಳಲ್ಲಿ ತಮ್ಮ ವಾಮನ ಪಾದ ಇಟ್ಟು ತ್ರಿವಿಕ್ರಮರಾಗಿ ಬೆಳೆದುನಿಂತವರು ಗೋಕಾಕ. ಜೀವನದಲ್ಲಿ ಸಮರಸ, ವಿಮರ್ಶೆಯಲ್ಲಿ ಸಮನ್ವಯ, ಹಾಗೂ ರಚನಾತ್ಮಕ ಬರವಣಿಗೆಯಲ್ಲಿ ಸಂಕೀರ್ಣತೆಯನ್ನು ಗೋಕಾಕರು ಅಳವಡಿಸಿಕೊಂಡಿದ್ದರು. ಅವರು ಸಮನ್ವಯ ಪತ್ರಿಕೆಗೆ ಬರೆದ ಒಂಭತ್ತು ವಿಮರ್ಶಾತ್ಮಕ ಲೇಖನಗಳು ಅವರ ವಿಮರ್ಶೆಯ ಸಮನ್ವಯ ಭಾಷ್ಯಗಳಾಗಿವೆ. ಪ್ರತಿ ಸಂಚಿಕೆಗೂ ಒಂದೊಂದು ಹೊಸ ಪದ್ಯ ಬರೆದರು.

ಮೊದಲನೆಯ ಸಂಚಿಕೆಯಲ್ಲಿ ಬರೆದ ನಾಗರಹೆಡೆಯ ಕೆಲವು ಸಾಲುಗಳು ಹೀಗಿವೆ :
ಸತ್ ಯಾವುದೇ ಇರಲಿ
ಕೈಹಾಕಿದೊಡನಲ್ಲಿ
ಒಂದು ಹುತ್ತ
ಹುತ್ತದೊಳಗೊಂದು
ಹೆಡೆಯೆತ್ತಿರುವ ನಾಗರ,
ಪ್ರಶ್ನೆಯಾಕಾರ
ದಂಗುವಡಿದಿದೆ ಚಿತ್ತ

ಐದನೆಯ ಸಂಚಿಕೆಯಲ್ಲಿ ಪ್ರಕಟವಾದ ಪಂಡಿತಾಃ ಸಮದರ್ಶಿನಃ ಎಂಬ ಪದ್ಯ ಆತ್ಮವೃತ್ತಾಂತದ ಪಯಣವನ್ನು ಧ್ವನಿಸುತ್ತದೆ.
ಓಂ ನಮಃ ಶಿವಾಯ
ಪಾಟಿ ಕೈಯೊಳು ಬಂತು
ಅಕ್ಷರ ಬರೆದು ತಂದೆ
ಅಂದಿಗಾರಂಭವಾಯ್ತೆನ್ನ ದೀರ್ಘ ಪ್ರವಾಸ.

ಪ್ರಥಮ ದರ್ಜೆಯ ಟಿಕೆಟ್ ಪಡೆದು ರೈಲು ಪ್ರಯಾಣಗೈಯುತ್ತಾರೆ. (ಇದು ಅವರು ಪಡೆದ ಪ್ರಥಮ ವರ್ಗ ನೆನಪಿಸುತ್ತದೆ). ಇವರ ಮಾರ್ಗದಲ್ಲಿ ಬಂದ ನಿಲ್ದಾಣಗಳು :
ಕೋಳಿವಾಡ, ಮುಧೋಳ, ಬನವಾಸಿ, ಕಲ್ಯಾಣ
ಶಾಂತಿನಿಕೇತನ, ಆಕ್ಸ್‌ಫರ್ಡ್, ಲಂಡನ್, ಕ್ಯಾಂಟರ್‌ಬರಿ

ಅವರ ಕಾಲ್ಪನಿಕ ರೈಲು ನಿಲ್ದಾಣದ ಹೆಸರುಗಳು ನಮಗೆ ಅಚ್ಚರಿಯನ್ನುಂಟು ಮಾಡುತ್ತವೆ. ಕೆಲವು ನಿಲ್ದಾಣಗಳೇ ಅಲ್ಲ, ಇದರ ಅರ್ಥವನ್ನು ನಾವು ಹೀಗೆ ಮಾಡಬೇಕು. ಕೋಳಿವಾಡ (ಕುಮಾರವ್ಯಾಸ), ಮುಧೋಳ (ರನ್ನ), ಬನವಾಸಿ (ಪಂಪ), ಕಲ್ಯಾಣ (ಬಸವಣ್ಣ), ಶಾಂತಿನಿಕೇತನ (ರವೀಂದ್ರನಾಥ ಟಾಗೋರ), ಉಜ್ಜಯಿನಿ (ಕಾಳಿದಾಸ), ವಾರಣಾಸಿ (ಜಗನ್ನಾಥ ಪಂಡಿತ), ಸ್ಟ್ರ್ಯಾಟ್‌ಫರ್ಡ್ (ಷೇಕ್ಸ್‌ಪಿಯರ್), ಆಕ್ಸ್‌ಫರ್ಡ್ (ಶೆಲ್ಲಿ), ಲಂಡನ್ (ಮಿಲ್ಟನ್), ಕ್ಯಾಂಟರ್‌ಬರಿ (ಚಾಸರ್) ಇವು ನಿಲ್ದಾಣಗಳಲ್ಲ. ಅವರ ಜೀವನದಲ್ಲಿ ಬಂದ ಕವಿಗಳ ಸ್ಥಾನಗಳು. ಎಂಥ ಅದ್ಭುತ ಕಲ್ಪನೆ. ಈ ಕವಿತೆಯ ಅರ್ಥಮಾಡಲು ಕಷ್ಟವಾದರೂ, ಗೂಢಾರ್ಥ ಮಾರ್ಮಿಕವಾಗಿದೆ.

ಮೂರು ವರ್ಷ ಗೋಕಾಕರು ಬೆಂಗಳೂರಲ್ಲಿ ಉಪಕುಲಪತಿಗಳಾಗಿದ್ದರು. ಮತ್ತೆ ಮೂರು ವರ್ಷ ಮುಂದುವರಿಸಲು ಸರಕಾರ ಆಮಂತ್ರಿಸಿತ್ತು. ಆದರೆ ಗೋಕಾಕರಿಗೆ ಬೇಸರ ತಂದ ಅನೇಕ ಘಟನೆಗಳು ನಡೆದಿದ್ದವು. ಅವರು ಅಲ್ಲಿ ಮುಂದುವರಿಯಲಿಲ್ಲ. ಅವರು ಸಿಮ್ಲಾಗೆ ತೆರಳಿದರು. ಅಲ್ಲಿ ಅವರ ದೈವ ಹೊಸ ಬಾಗಿಲು ತೆರೆದಿತ್ತು.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: