Vinayak Krishna Gokak birth centenary (part 6) – ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕರ ಸ್ಮರಣೆ (ಭಾಗ 6)

Vinayak Krishna Gokak birth centenary
ಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ ‘ಜೀವಿ’ ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.
ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು ದೈವ ನಿಯೋಜಿತವಾಗಿತ್ತು. ಅನೇಕ ದೃಷ್ಟಿಯಿಂದ ಅವರ ಜೀವನದಲ್ಲಿ ಇದು ಮಹತ್ವದ್ದಾಗಿದೆ. ಅಖಿಲ ಭಾರತ ಮಟ್ಟದ, ಕೇಂದ್ರ ಸರಕಾರದ ಆಡಳಿತಕ್ಕೊಳಪಟ್ಟ, ಒಂದು ಹಿರಿಯ ವಿದ್ಯಾ ಸಂಸ್ಥೆಯ ನಿರ್ದೇಶಕರಾಗಿರುವ ಭಾಗ್ಯ ಅವರಿಗೆ ಲಭಿಸಿತ್ತು. ಈ ಹುದ್ದೆಗೆ ಇವರಷ್ಟು ಯೋಗ್ಯರು ಭಾರತದಲ್ಲಿ ಇನ್ನಾರೂ ಇರಲಿಲ್ಲ ಎನ್ನುವುದು ಕೂಡ ಇವರ ಆಯ್ಕೆಗೆ ಕಾರಣವಾಗಿತ್ತು. ಇಲ್ಲಿ ಅವರ ಪಾಂಡಿತ್ಯ ಹಾಗೂ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯಿತು. ಇಂಗ್ಲಿಷ್ ಭಾಷೆಯ ಬೋಧನೆಯ ಸರ್ವೋಚ್ಚ ಪೀಠ ಇದಾಗಿತ್ತು. ಭಾರತದಾದ್ಯಂತ ಎಲ್ಲ ರಾಜ್ಯಗಳ, ಎಲ್ಲ ವಿಶ್ವವಿದ್ಯಾಲಯಗಳ ಇಂಗ್ಲಿಷ್ ಪ್ರಾಧ್ಯಾಪಕರು ಇಲ್ಲಿ ಪ್ರಶಿಕ್ಷಣ ಪಡೆಯಲು ಬರುತ್ತಿದ್ದರು. ಕೆಲವರು ಇಲ್ಲಿ ನಡೆಯುವ ಸೆಮಿನಾರ್‌ಗಳಲ್ಲಿ ಭಾಗವಹಿಸಲು ಬಂದರೆ, ಕೆಲವರು ಇಲ್ಲಿ ಬೇಸಿಗೆ ರಜೆಯ ಶಿಬಿರಾರ್ಥಿಗಳಾಗಿ ಬರುತ್ತಿದ್ದರು. ಇಂಗ್ಲಿಷ್ ಭಾಷೆಯನ್ನು ಕಲಿಸುವ ಬಗೆಯನ್ನು ಇಲ್ಲಿ ಹೇಳಿಕೊಡಲಾಗುತ್ತಿತ್ತು. ಇಲ್ಲಿಯ ನಿರ್ದೇಶಕ ಹುದ್ದೆ ಗೋಕಾಕರಿಗೆ ಅಧಿಕ ಸ್ಥಾನಮಾನ ಕಲ್ಪಿಸಿಕೊಟ್ಟಿತು ಎನ್ನುವುದಕ್ಕಿಂತ, ಆ ಸ್ಥಾನಕ್ಕೆ ಗೋಕಾಕರಿಂದ ಹೆಚ್ಚಿನ ಗೌರವ ದೊರೆಯಿತು ಎನ್ನುವವರೂ ಇದ್ದಾರೆ.

ಅದೇನೇ ಇರಲಿ, ಪ್ರಾರಂಭದಲ್ಲಿ ಅವರಿಗೆ ಸಂಘರ್ಷ ಎದುರಿಸುವ ಪ್ರಸಂಗ ಬಂತು. ಹೋದಲ್ಲೆಲ್ಲ ಅವರ ಸತ್ವಪರೀಕ್ಷೆ ನಡೆದೇಯಿದೆ. ಆದರೆ, ಅವರು ಎಲ್ಲೆಡೆ ಪರೀಕ್ಷೆಯಲ್ಲಿ ಸದಾ ವಿಜಯಿಯಾಗಿದ್ದಾರೆ ಎಂಬುದು ಸತ್ಯ ಸಂಗತಿ. ಗೋಕಾಕರಿಗೆ ಬರಿಯ ಆಡಳಿತದಲ್ಲಿ ಆಸಕ್ತಿ ಇರಲಿಲ್ಲ, ಅವರಿಗೆ ಕಲಿಸುವುದರಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಇಲ್ಲಿಯವರೆಗೆ ಈ ಸಂಸ್ಥೆಯ ನಿರ್ದೇಶಕರು ವಿದೇಶೀಯರಾಗಿದ್ದರು. ತರಬೇತಿ ನೀಡಲು ಬರುವ ಭಾಷಾ ತಜ್ಞರು ಇಂಗ್ಲೆಂಡದಿಂದ, ಹೆಚ್ಚಾಗಿ ಬ್ರಿಟಿಶ ಕೌನ್ಸಿಲ್‌ನಿಂದ ಬರುತ್ತಿದ್ದರು. ಅವರಲ್ಲಿ ಒಬ್ಬರು ನಿರ್ದೇಶಕರಾಗಿರುತ್ತಿದ್ದರು. ಗೋಕಾಕರು ಬಂದ ಹೊಸತರಲ್ಲೇ ಅಭ್ಯಾಸ ಕ್ರಮದಲ್ಲಿ ಕೆಲ ಬದಲಾವಣೆ ಮಾಡಲು ಬಯಸಿದರು. ಆಗ ಬ್ರಿಟಿಶ್ ಕೌನ್ಸಿಲ್ ಸ್ಕಾಲರ್ ಪ್ರೊ.ಬ್ರೂಟನ್ ಎಂಬವರು ಇವರನ್ನು ವಿರೋಧಿಸಿದರು. ಇವರು ಕೇವಲ ಆಡಳಿತ ಮಾಡಬೇಕು; ಕಲಿಸುವುದರಲ್ಲಿ, ಪಾಠಕ್ರಮದಲ್ಲಿ, ತಲೆಹಾಕಬಾರದು ಎಂಬುದು ಅವರ ವಾದವಾಗಿತ್ತು. “ಸಾರ್ವಜನಿಕರೊಡನೆ ಸಂಸ್ಥೆಯ ವಿಶ್ವಾಸ, ಕೀರ್ತಿ ಬೆಳೆಸುವುದು ನಿಮ್ಮ ಕೆಲಸ. ನಾನು ಡೈರೆಕ್ಟರ್ ಆಫ್ ಸ್ಟಡೀಜ್, ಇಲ್ಲಿಯ ಪಾಠಕ್ರಮ ಹಾಗೂ ವಿದ್ಯಾಭ್ಯಾಸದ ವಿಷಯವನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ. ಎಂದು ಬ್ರೂಟನ್ ಗೋಕಾಕರಿಗೆ ಹೇಳಿದಾಗ ಗೋಕಾಕರು ಸ್ಪಷ್ಟವಾಗಿ ಹೇಳಿದ್ದರು, “ನಾನಿಲ್ಲಿ ಬಂದಿರುವುದು ಕಲಿಸಲಿಕ್ಕಾಗಿ ಹಾಗೂ ಶಿಕ್ಷಣಕ್ರಮವನ್ನು ರೂಪಿಸುವುದಕ್ಕಾಗಿ. ಇದು ಸಾಧ್ಯವಾಗದಿದ್ದರೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಮರಳಿಹೋಗುತ್ತೇನೆ. ಎಂದು (ಗೋಕಾಕರು ಕರ್ನಾಟಕ ರಾಜ್ಯದ ಕೆಲಸದಲ್ಲಿದ್ದರು. ಕೇಂದ್ರಕ್ಕೆ ಅವರ ಸೇವೆ ಕಡವಾಗಿ ಕೊಡಲಾಗಿತ್ತು.) ಅಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಗೋಕಾಕರಿಗೆ ಭಾಷಾಶಾಸ್ತ್ರವೇನು ಗೊತ್ತು ಎಂದು ಪ್ರಶ್ನಿಸಲಾಗಿತ್ತು. ಬ್ರಿಟಿಶ್ ಸ್ಕಾಲರ್ಸ್ ಭಾಷಾವಿಜ್ಞಾನದಲ್ಲಿ ತಜ್ಞರಾಗಿದ್ದರು. ಗೋಕಾಕರು ತಾವು ಬರೆದ ಪುಸ್ತಕ “ದಿ ಪೊಯೆಟಿಕ್ ಅಪ್ರೋಚ್ ಟು ಲ್ಯಾಗ್ವೇಜ್ (ವಿಲ್‌ಸನ್ ಫೈಲಾಲೊಜಿಕಲ್ ಲೆಕ್ಚರ್ಸ್) ಆಕ್ಸ್‌ಫ್‌ರ್ಡ್ ವಿಶ್ವವಿದ್ಯಾಲಯದಿಂದ ಪ್ರಕಟವಾದ(1952ರಲ್ಲಿ) ಬಗ್ಗೆ ಹೇಳಿದರೆ, ಬ್ರಿಟಿಶ್ ಸ್ಕಾಲರರು `ಅದು ಈಗ ಔಟ್‌ಡೇಟೆಡ್ ಆಗಿದೆ ಎನ್ನುತ್ತ ತಾವು ಕಲಿಸುವ ಅತ್ಯಾಧುನಿಕ ಭಾಷಾಶಾಸ್ತ್ರ ತಮಗೆ ಗೋತ್ತೇ? ಎಂದು ಪ್ರಶ್ನೆ ಕೇಳಿದರು. ಆಗ ಗೋಕಾಕರು ಹದಿನೈದು ದಿನ ಸಮಯ ಕೇಳಿದರು. ಲೈಬ್ರರಿಯಲ್ಲಿರುವ ಎಲ್ಲ ಹೊಸ ಪುಸ್ತಕ ಅರೆದು ಕುಡಿದು ಪಾಠಮಾಡಲು ಪ್ರಾರಂಭಿಸಿದರು. ವಿದ್ಯಾರ್ಥಿಗಳೆಲ್ಲ ಮಂತ್ರಮುಗ್ದರಾದರು. ಇವರ ಪ್ರಸಿದ್ಧಿಯನ್ನು ಸಹಿಸಲು ಇತರರಿಗೆ ಸಾಧ್ಯವಾಗಲಿಲ್ಲ. ಬ್ರಿಟಿಶ್ ಸ್ಕಾಲರ್‌ಗಳು ಸಂಸ್ಥೆಯ ಚೇರ್‌ಮನ್ ಸಿದ್ಧಾಂತಿಯವರಿಗೆ ತಕರಾರು ಪತ್ರ ಬರೆದರು. ಬೋರ್ಡ ಮೀಟಿಂಗಿನಲ್ಲಿ ಈ ವಿಷಯದ ಚರ್ಚೆಯಾಯಿತು. “ಅಭ್ಯಾಸಕ್ರಮ ರೂಪಿಸುವಲ್ಲಿ ಡೈರೆಕ್ಟರರೇ (ಗೋಕಾಕರೇ) ಮೇಲಧಿಕಾರಿ ಎಂದು ನಿರ್ಣಿತವಾಯಿತು. ಇಲ್ಲಿಗೆ ಶೀತಲ ಸಮರ ಮುಗಿಯಿತು. ಒಂದು ದಿನ ಬ್ರೂಟನ್ ಗೋಕಾಕರ ರೂಮ್ ಪ್ರವೇಶಿಸಿದರು. “ನೀವೇ ಇಲ್ಲಿಯ ಮುಖ್ಯಸ್ಥರು. ನೀವು ಹೇಳಿದಂತೆ ನಾವು ನಡೆಯುತ್ತೇವೆ ಎಂದರು. ಗೋಕಾಕರು ವಿಜಯ ಸಾಧಿಸಿದ್ದರು. ಆದರೆ, ಅವರು ವಿನಯದ ಸಾಕಾರ ಮೂರ್ತಿಯಾಗಿದ್ದರು. ಅವರೆಂದರು,“ನೀವು ಮೂವರು ಇಲ್ಲದೆ ನಾನೊಬ್ಬನೆ ಏನು ಮಾಡಬಲ್ಲೆ? ನಿಮಗೆ ಅನೇಕ ದೇಶಗಳ ಶಿಕ್ಷಣ ಪದ್ಧತಿಯ ಅರಿವಿದೆ. ನಿಮ್ಮ ಅನುಭವದಿಂದ ನಾವು ಕೂಡ ಕಲಿಯಬಹುದು, ಸಂಶಯವಿಲ್ಲ. ನಂತರ ಬ್ರೂಟನ್ನರು ಗೋಕಾಕರ ಪರಮ ಸ್ನೇಹಿತರಾದರಂತೆ. (`ನಾಕಂಡ ಗೋಕಾಕ, ಪು.186).

ಹೈದ್ರಾಬಾದ್‌ನಲ್ಲಿ ನಡೆದ ಮಹತ್ವದ ಘಟನೆ ಅಂದರೆ ಗೋಕಾಕರಿಗೆ ಸತ್ಯಸಾಯಿಬಾಬಾ ಅವರ ಸಂಪರ್ಕ ಬಂತು. ಬಾಬಾ ಅವರ ಬಗ್ಗೆ ಗೋಕಾಕರು ಕೇಳಿದ್ದರು. ಗೋಕಾಕ ದಂಪತಿಗಳಿಗೆ ಅವರನ್ನು ಕಾಣುವ ಆಸೆಯಾಗಿತ್ತು. ಒಂದು ಸಾರ್ವಜನಿಕ ಸಭೆಯಲ್ಲಿ ಸಾಯಿಬಾಬಾ ಅವರು ದರ್ಶನ ನೀಡುವವರಿದ್ದರು. ಆ ಸಭೆಯಲ್ಲಿ ಕೆಲವು ಪ್ರತಿಷ್ಠಿತರ ಭಾಷಣಗಳನ್ನು ಏರ್ಪಡಿಸಲಾಗಿತ್ತು. ಗೋಕಾಕರಿಗೂ ಆಮಂತ್ರಣವಿತ್ತು. ಬಾಬಾ ಅವರು ಗೋಕಾಕರ ಭಾಷಣವನ್ನು ಬಹುವಾಗಿ ಮೆಚ್ಚಿದರು. ಇದೇ ಅವರ ಭೆಟ್ಟಿಗೆ ನಾಂದಿಯಾಯಿತು. ಗೋಕಾಕರಿಗೆ ಕೇಂದ್ರ ಸರಾಕಾರದ ಗೌರವ `ಪದ್ಮಶ್ರೀ ದೊರೆಯಿತು. `ಕಾಮನ್‌ವೆಲ್ಥ ನೇಶನ್ಸ್ ಇಂಗ್ಲಿಷ್ ಲ್ಯಾಂಗ್ವೇಜ್ ಕಾನ್‌ಫರನ್ಸ್ಗೆ ಭಾರತವನ್ನು ಗೋಕಾಕರು ಪ್ರತಿನಿಧಿಸಿದರು. ಹನ್ನೆರಡು ದಿನ ಯುಗಾಂಡಾ(ಆಫ್ರಿಕಾ)ದಲ್ಲಿ ನಡೆದ ಸಮ್ಮೇಲನದ ಉಪಾಧ್ಯಕ್ಷರಾಗಿ ಗೋಕಾಕರು ಅವಿರೋಧವಾಗಿ ಆಯ್ಕೆಗೊಂಡರು. ಗೋಕಾಕರ ಮೂರು ಮಕ್ಕಳ ಮದುವೆ ಹೈದ್ರಾಬಾದ್‌ನಲ್ಲಿ ನಡೆಯಿತು. (ಹಿರಿಯ ಮಗಳ ಮದುವೆ ಧಾರವಾಡದಲ್ಲಿ ನಡೆದಿತ್ತು.) ಮಗ ಅನಿಲಕುಮಾರ ಐಎಎಸ್ ಪಾಸಾದರು. ಒಂದೆರಡು ದುಃಖದ ಘಟನೆಗಳೂ ನಡೆದವು. ಅವರಿಗೆ ಪಿತೃವಿಯೋಗವಾಯಿತು. ಎರಡನೆಯ ಮಗಳು ಸಾವನ್ನಪ್ಪಿದಳು. ಇದರ ವಿವರಗಳೆಲ್ಲ ಶಾರದಾ ಗೋಕಾಕರ `ಒಲವೆ ನಮ್ಮ ಬದುಕು ಪುಸ್ತಕದಲ್ಲಿವೆ.

ಹೈದ್ರಬಾದ್‌ನಲ್ಲಿ ಬೇಸರ ತರುವ ಘಟನೆಗಳು ನಡೆದ ನಂತರ ಗೋಕಾಕರಿಗೆ ಈ ಊರನ್ನು ಬಿಡುವ ಮನಸ್ಸಾಗಿರಬೇಕು. ಅದಕ್ಕೆ ದೈವಾನುಕೂಲ ಒದಗಿ ಬಂತು. ಬೆಂಗಳೂರ್ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಗೋಕಾಕರ ಹೆಸರು ಸೂಚಿತವಾಯ್ತು. ಮತ್ತೆ ಕರ್ನಾಟಕಕ್ಕೆ ಮರಳಿ ಬರುವ ಸಂಭ್ರಮ ಗೋಕಾಕ ಪರಿವಾರಕ್ಕೆ ಒದಗಿ ಬಂತು. ಗೋಕಾಕರು ಕೊಲ್ಲಾಪುರ ರಾಜಾರಾಮ ಕಾಲೇಜಿನಿಂದ ಧಾರವಾಡದ ಕರ್ನಾಟಕ ಕಾಲೇಜಿಗೆ ಬರಲು ಸಹಾಯ ಮಾಡಿದ್ದರು. ಈಗ ಬೆಂಗಳೂರಿಗೆ ಬರಲು ಅವರೇ ಕಾರಣವಾಗಿದ್ದರು. ಇದರಿಂದಾಗಿ ಗೋಕಾಕ ಹಾಗೂ ಪಾವಟೆಯವರ ಮೈತ್ರಿ ಇನ್ನಷ್ಟು ಗಾಢವಾಯಿತು. ಗೋಕಾಕರಿಗೆ ಬೆಂಗಳೂರಲ್ಲಿ ಮನೆ ಮಾಡಲು ಕೂಡ ಪಾವಟೆಯವರೇ ಸ್ಫೂರ್ತಿಪ್ರದರಾಗಿದ್ದರು.

ಬೆಂಗಳೂರಲ್ಲಿ ಸಾಹಿತ್ಯಿಕ ವಾತಾವರಣದಲ್ಲಿ ಗೋಕಾಕ ಬೆರೆತರು. `ಸಮನ್ವಯ ಎಂಬ ಸಾಹಿತ್ಯಿಕ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರಿಗೆ 60 ವರ್ಷ ತುಂಬಿದಾಗ ಡಾ| ಹಾ.ಮಾ.ನಾಯಕ ಮತ್ತು ಸಿಂಧುವಳ್ಳಿ ಅನಂತಮೂರ್ತಿಯವರು ಗೋಕಾಕರ ಅಭಿನಂದನಾ ಗ್ರಂಥವನ್ನು ಸಂಪಾದಿಸಿದರು. ಅದುವೆ `ವಿನಾಯಕ ವಾಙ್ಮಯ. ಅದರಲ್ಲಿ ನಾನೂ ಒಂದು ಲೇಖನ ಬರೆದೆ. ವಿಷಯ `ಗೋಕಾಕರ ಮುನ್ನುಡಿಗಳು. ನಾನು ಮಂಬೈಯಲ್ಲಿ ವಾಸಿಸುವುದರಿಂದ ಈ ವಿಷಯ ಕಷ್ಟಕರವಾಗಿದೆ, ಬೇರೆ ವಿಷಯ ಕೊಡಿರಿ ಎಂದು ನಾನು ಸಂಪಾದಕ ಹಾಮಾನಾ ಅವರಿಗೆ ಬರೆದೆ. “ಈ ವಿಷಯ ವಿನಾಯಕರೇ ಸೂಚಿಸಿದ್ದಾರೆ ಎಂದು ಬರೆದರು. ನನಗೆ ಗೋಕಾಕರು ಮುನ್ನುಡಿ ಬರೆದ ಪುಸ್ತಕಗಳೆಲ್ಲ ಮುಂಬೈಯಲ್ಲಿ ದೊರೆಯಲಿಲ್ಲ ಎಂದು ಧಾರವಾಡಕ್ಕೆ ಬರಬೇಕಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಕುಳಿತು ನನ್ನ ಪ್ರಬಂಧ ಸಿದ್ಧಪಡಿಸಿದೆ. ಕೊನೆಯ ದಿನ ಗೋಕಾಕರು ಬೆಂಗಳೂರಿಂದ ಧಾರವಾಡಕ್ಕೆ ಬಂದಿದ್ದಾರೆಂಬ ಸುದ್ದಿ ತಿಳಿಯಿತು. ಅವರು ವಿಶ್ವವಿದ್ಯಾಲಯದ ಗೆಸ್ಟಹೌಸ್‌ನಲ್ಲಿ ತಂಗಿದ್ದರು. ನನ್ನ ಪ್ರಬಂಧವನ್ನು ಅವರಿಗೆ ತೋರಿಸಿದೆ. `ಎಲ್ಲ ಮುನ್ನುಡಿ ಓದಲು ಸಾಧ್ಯವಾಗಲಿಲ್ಲ ಎಂದೆ. ಗೋಕಾಕರು ನನ್ನ ಪ್ರಬಂಧ ಓದಿ, “ಚೆನ್ನಾಗಿದೆ. ನಾನು ಅಪೇಕ್ಷಿಸಿದ್ದಕ್ಕಿಂತ ನೀನು ಚೆನ್ನಾಗಿ ಬರೆದಿದ್ದೀ. ನೀನು ಯಾವಾಗಲೂ ಹೇಳುತ್ತಿದ್ದಿ, ನನ್ನ ಮುನ್ನುಡಿ `ಪ್ರ್ಯಾಕ್ಟಿಕಲ್ ಕ್ರಿಟಿಸಿಜಂ ಇದ್ದಂತೆ ಎಂದು. ಅದಕ್ಕೇ ನಿನ್ನ ಹೆಸರು ಸೂಚಿಸಿದ್ದೆ ಎಂದರು. ಆಗ ನಾನು ಇತರ ವಿಷಯ ಮಾತಾಡುತ್ತ ಅವರನ್ನು ಸಲುಗೆಯಿಂದ ಕೇಳಿದೆ, “ದಾದಾ, ನೀವು ಶ್ರೀ ಅರವಿಂದರ ಶಿಷ್ಯರು. ಈಗ ಸಾಯಿ ಬಾಬಾ ಅವರ ಕಡೆ ಒಲಿದಿದ್ದೀರಿ. ಅವರ ಕಡೆಗೆ ಒಲಿಯಲು ಏನಾದರೂ ಘಟನೆ ನಡೆಯಿತೇ? ಎಂದು ಕೇಳಿದಾಗ ಗೋಕಾಕ ಉತ್ತರಿಸಿದ್ದರು. ಒಮ್ಮೆ ಸಾಯಿಬಾಬಾ ಅವರು ಗೋಕಾಕರ ಮನೆಗೆ ಬಂದಿದ್ದರಂತೆ. ನಿಮ್ಮ ಮನೆತನದ ಗುರುಗಳಾರು ಎಂದು ಕೇಳಿದರಂತೆ. ಗೋಕಾಕರು ಬೆಳಗಾವಿಯ ಪಂತ ಮಹಾರಾಜರ ಬಗ್ಗೆ ಹೇಳಿದರಂತೆ. ಅವರ ಫೋಟೋ ತೋರಿಸಲು ಬಾಬಾ ಕೇಳಿದರಂತೆ. ಗೋಕಾಕರ ಬಳಿ ಫೋಟೋ ಇರಲಿಲ್ಲ. ಮುಂದಿನ ಸಲ ಭೇಟಿಯಾದಾಗ ಫೋಟೋ ತರಿಸಿ ಇಡುವೆ, ತೋರಿಸುವೆ, ಎಂದಿದ್ದರಂತೆ. ಬಾಬಾ ಅವರು ಮೂರು ತಿಂಗಳು ತಡೆಯುವ ಕಾರಣವಿಲ್ಲವೆಂದು ಗುರುಗಳ ಫೋಟೋ ಸೃಷ್ಟಿಸಿ ಕೊಟ್ಟರಂತೆ. ಆ ಚಮತ್ಕಾರವನ್ನು ಗೋಕಾಕರು ಬಣ್ಣಿಸಿದ ವಿವರ `ನಾಕಂಡ ಗೋಕಾಕ ಪುಸ್ತಕದಲ್ಲಿ ಬರೆದಿರುವೆ.

ಬೆಂಗಳೂರಿನಲ್ಲಿ ಮೂರು ವರ್ಷದ ಕುಲಪತಿ ಟರ್ಮ್ ಮುಗಿದ ಮೇಲೆ ಸರಕಾರದವರು ಇನ್ನೊಂದು ಟರ್ಮ ಮುಂದು ವರಿಸಲು ಗೋಕಾಕರಿಗೆ ಕೇಳಿದರೂ ಗೋಕಾಕರು ಒಪ್ಪದೆ ವಿಶ್ರಾಂತರಾದರು. ಅವರಿಗಾಗಿ ಇನ್ನೊಂದು ಕೆಲಸ ಕಾಯುತ್ತಿತ್ತು. ಸಿಮ್ಲಾದಲ್ಲಿರುವ `ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಎಡ್ವಾನ್ಸ್ ಸ್ಟಡೀಜ್ನ ಡೈರೆಕ್ಟರರಾಗಿ ಸಿಮ್ಲಾಕ್ಕೆ ಪ್ರಯಾಣ ಬೆಳಸಿದರು.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: