Vishnu sahasranama has the power of ailment -ಭವರೋಗ ನಿವಾರಕ ಸ್ತೋತ್ರ ವಿಷ್ಣುಸಹಸ್ರನಾಮ

aralumallige parthasarathy
ಶ್ರೀವಿಷ್ಣುವೇ ಪರಮ ದೈವತವೆಂದು ಹರಿವಂಶವು ಸಾರುತ್ತದೆ. ವೇದಗಳು, ರಾಮಾಯಣ, ಮಹಾಭಾರತ ಮತ್ತು ಎಲ್ಲ ಪುರಾಣಗಳು ವಿಷ್ಣುವಿನ ಹಿರಿಮೆಯನ್ನು ಕೊಂಡಾಡುತ್ತವೆ. ಅಥರ್ವಣ ಉಪನಿಷತ್ತು `ಪರಾವಿದ್ಯಾ’ ಮತ್ತು `ಅಪರಾವಿದ್ಯಾ’ಗಳ ಬಗ್ಗೆ ಹೇಳುವಾಗ, ವಿಷ್ಣುವಿನ ಬಗ್ಗೆ ಹೇಳದೇ ಇದ್ದ ವಿದ್ಯೆಯೆಲ್ಲಾ `ಅಪರಾವಿದ್ಯಾ’ ಎಂದು ಸಾರುತ್ತದೆ. ಮಹಾಭಾರತವು ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದಾದ ಶ್ರೀಕೃಷ್ಣನ ಹಿರಿಮೆ ಹಾಗೂ ಲೀಲೆಯಿಂದಾಗಿ ಮಹತ್ವದ್ದಾಗಿದೆ.
ಮಹಾಭಾರತವನ್ನು ಬರೆದವರು ಮಹರ್ಷಿ ವೇದವ್ಯಾಸರು, ಅರ್ಥಾತ್ ಕೃಷ್ಣದ್ವೈಪಾಯನರು. ಅವರು ಕೂಡ ಕೃಷ್ಣನ ಅವತಾರವೇ ಆಗಿದ್ದಾರೆ. ಮಹತ್ವದಲ್ಲಿಯೂ ಭಾರದಲ್ಲಿಯೂ ಅದು ಮಹತ್ವದ ಗ್ರಂಥ ಮಹಾಭಾರತ. ಅದರಲ್ಲಿ ಭಗವಾನ್ ಶ್ರೀ ಕೃಷ್ಣನ ಸಂದೇಶ ಸಾರುವ `ಭಗವದ್ಗೀತೆ’ ಇದೆ, ಪರಮದೈವತ ವಿಷ್ಣುವಿನ ಗುಣಗಾನ ಮಾಡುವ `ವಿಷುಸಹಸ್ರನಾಮ’ದಂಥ ಪರಮ ಪವಿತ್ರ ಪಾರಾಯಣ ಸ್ತೋತ್ರವೂ ಇದೆ. ವೇದಗಳಿಗೆ ಮೂರು ಅರ್ಥಗಳಿವೆ, ಮಹಾಭಾರತಕ್ಕೆ ಹತ್ತು ಅರ್ಥಗಳಿವೆ, ಆದರೆ ವಿಷ್ಣು ಸಹಸ್ರನಾಮದ ಪ್ರತಿಯೊಂದು ನಾಮಕ್ಕೂ ನೂರು ಅರ್ಥಗಳಿವೆ ಎಂದು ಹೇಳಲಾಗಿದೆ. ಶ್ರೀ ಮಧ್ವಾಚಾರ್ಯರು ವಿಷ್ಣು ಸಹಸ್ರನಾಮದ ಮೊದಲ ನಾಮ `ವಿಶ್ವಂ’ ಎಂಬುದಕ್ಕೆ ನೂರು ಅರ್ಥಗಳನ್ನು ಹೇಳಿದರೆಂಬ ಸಂಗತಿ ಅವರ ಚರಿತ್ರೆ `ಸುಮಧ್ವವಿಜಯ’ದಲ್ಲಿ ಬರುತ್ತದೆ.

‘ವಿಷ್ಣುಸಹಸ್ರನಾಮ’ದ ಬಗ್ಗೆ ವ್ಯಾಖ್ಯಾನ ಬರೆದು ಶ್ರೀಶಂಕರಾಚಾರ್ಯರು ಅದರಲ್ಲಿ ಅದ್ವೈತ ತತ್ತ್ವವನ್ನು ಕಂಡಿದ್ದಾರೆ. ಶ್ರೀ ರಾಮಾನುಜಾಚಾರ್ಯರ ಶಿಷ್ಯರಾದ ಶ್ರೀ ಪರಾಶರಭಟ್ಟರು ವ್ಯಾಖ್ಯಾನ ಬರೆದು, ಇದರಲ್ಲಿ ಅಡಗಿರುವ ವಿಶಿಷ್ಟಾದ್ವೈತ ತತ್ತ್ವವನ್ನು ತೋರಿದ್ದಾರೆ. ಶ್ರೀ ಮಧ್ವಮತಾನುಯಾಯಿಗಳಾದ ಶ್ರೀಸತ್ಯಸಂಧತೀರ್ಥರು ಹಾಗೂ ಶ್ರೀರಾಘವಸೂರಿಗಳು ಬರೆದ ವ್ಯಾಖ್ಯಾನಗಳಲ್ಲಿ ದ್ವೈತಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಎಲ್ಲ ಪಂಥದವರು ಅತ್ಯಂತ ಭಕ್ತಿಯಿಂದ ಪಾರಾಯಣ ಮಾಡುವ ಸ್ತೋತ್ರ `ವಿಷ್ಣುಸಹಸ್ರನಾಮ’. ಕನ್ನಡದಲ್ಲಿ ಹಾಗೂ ಇಂಗ್ಲೀಷಿನಲ್ಲಿ ಹಲವಾರು ಗ್ರಂಥಗಳು `ವಿಷ್ಣು ಸಹಸ್ರನಾಮ’ದ ಬಗ್ಗೆ ಇವೆ. ಅದರಲ್ಲಿ ಒಂದು ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಇಂಗ್ಲೀಷಿನಲ್ಲಿ ಬರೆದ ಗ್ರಂಥ, ಅದನ್ನು ಬೆಂಗಳೂರಿನ `ವಿಷ್ಣುಸಹಸ್ರನಾಮ ಟ್ರಸ್ಟ್’ನವರು 2007ರಲ್ಲಿ ಪ್ರಕಾಶನ ಮಾಡಿದ್ದಾರೆ.

ವಿದ್ಯಾವಚಸ್ಪತಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು ವೃತ್ತಿಯಿಂದ ಉದ್ಯಮ ಹಾಗೂ ಆಡಳಿತ ಕ್ಷೇತ್ರದಲ್ಲಿ ಪ್ರಧ್ಯಾಪಕರಾಗಿದ್ದರೂ ಪ್ರವೃತ್ತಿಯಿಂದ ಕನ್ನಡ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿಗಳು. ಕನ್ನಡ ಹರಿದಾಸ ಸಾಹಿತ್ಯದ ಶೋಧ ಹಾಗೂ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿದ್ದಾರಲ್ಲದೆ ಕರ್ನಾಟಕ ಹಾಗೂ ಭಾರತೀಯ ಸಂಸ್ಕೃತಿಯ ಹರಿಕಾರರಾಗಿ ವಿಶ್ವದ ಎಲ್ಲ ಪ್ರಮುಖ ದೇಶಗಳನ್ನು ಸುತ್ತಾಡಿದ್ದಾರೆ, ಬಹುಶ್ರುತತ್ವದಿಂದ, ಪಾಂಡಿತ್ಯದಿಂದ, ಅಸ್ಖಲಿತ ವಾಣಿಯಿಂದ ಹೋದಲ್ಲೆಲ್ಲ ಶ್ರೋತೃಗಳನ್ನು ಬೆರಗುಗೊಳಿಸಿದ್ದಾರೆ. ಕನ್ನಡದಲ್ಲಿ ಹಾಗೂ ಆಂಗ್ಲಭಾಷೆಯಲ್ಲಿ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ನನ್ನನ್ನು ಆಕರ್ಷಿಸಿದ ಗ್ರಂಥ ಅವರು ಇಂಗ್ಲೀಷಿನಲ್ಲಿ ಬರೆದ “ವಿಷ್ಣುಸಹಸ್ರನಾಮ” ಗ್ರಂಥ. ಈ ಪುಸ್ತಕಕ್ಕೆ ರಾಜ್ಯಪಾಲ ಟಿ. ಎನ್. ಚತುರ್ವೇದಿಯವರ ಪೀಠಿಕೆ ಇದೆ. ಭಾರತದ ವರಿಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಎಂ. ಎನ್. ವೆಂಕಟಾಚಲಯ್ಯನವರ ಪ್ರಸ್ತಾವನೆ ಇದೆ. ಈ ಪುಸ್ತಕ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಇರುವ ವಿದೇಶೀಯರಿಗೆ, ಅನಿವಾಸಿ ಭಾರತೀಯರಿಗೆ, ವಿಶೇಷವಾಗಿ ಇಂಗ್ಲೀಷಿನಲ್ಲಿ ವ್ಯಾಸಂಗ ಮಾಡಿದ ತರುಣರಿಗೆ ಕೈಪಿಡಿಯಂತಿದೆ.

ಇತ್ತೀಚಿನ ದಿನಗಳಲ್ಲಿ ಶ್ರೀ ಪಾರ್ಥಸಾರಥಿಯವರು `ವಿಷ್ಣುಸಹಸ್ರನಾಮ’ದ ಸಾಮೂಹಿಕ ಪಾರಾಯಣದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದ್ದಾರೆ, ದೇಶವಿದೇಶಗಳಲ್ಲಿ ಸಾಮೂಹಿಕ ಪಾರಾಯಣ ಸತ್ರಗಳನ್ನು ಬಹಳ ಯಶಸ್ವಿಯಾಗಿ ನಡೆಸಿದ್ದಾರೆ, ಅದರ ಲಾಭ ಜನಸಾಮಾನ್ಯರಿಗೆ ದೊರೆಯುವಂತೆ ಭಗವದ್ಭಕ್ತರನ್ನು ಸಂಘಟಿಸಿದ್ದಾರೆ. ಅವರ ಬಗ್ಗೆ ಅಜಿತಕುಮಾರ್ (ಅಧ್ಯಕ್ಷರು, ಲಿವರ್ಪೂಲ್ ಸೆಂಟರ್ ಫಾರ್ ಓರಿಯಂಟಲ್ ಸ್ಟಡೀಜ್, ಯು.ಕೆ.) ಬರೆಯುತ್ತಾರೆ, “ 1996ರಲ್ಲಿ ಅರಳುಮಲ್ಲಿಗೆ ಪಾರ್ಥಸಾರಥಿಯವರು ದಕ್ಷಿಣ ಭಾರತದ ಹರಿದಾಸರ ಭಕ್ತಿಸಾಹಿತ್ಯವನ್ನು ಪರಿಚಯಿಸಲು ಇಂಗ್ಲಂಡಿಗೆ ಬಂದಾಗ ನಾನು ಅವರ ಭಾಷಣಗಳನ್ನು ಲಿವರ್ಪೂಲ್, ಲಂಡನ್, ಬರ್ಮಿಂಗ್‌ಹ್ಯಾಮ್ ಹಾಗೂ ಮೆಂಚಿಸ್ಟರ್‌ಗಳಲ್ಲಿ ಆಯೋಜಿಸಿದ್ದೆ.

ಅವರು ಪ್ರವಚನಗಳ ಜೊತೆಗೆ ಹರಿದಾಸ ಪ್ರಣೀತವಾದ `ವಿಷ್ಣುಸಹಸ್ರನಾಮ’ದ ಸಾಮೂಹಿಕ ಪಠನವು ಎಷ್ಟೊಂದು ಪ್ರಭಾವಿಯಾಗಿದೆ ಎಂಬುದನ್ನು ಪ್ರಾಯೋಗಿಕವಾಗಿ ಡಾಕ್ಟರರ ಒಂದು ಗುಂಪಿಗೆ ತೋರಿಸಿಕೊಟ್ಟರು. ನಂತರ ಅವರು ಹಲವಾರು ಸಲ ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡಿದಾಗ ಅನಿವಾಸಿ ಭಾರತೀಯರ ಮೇಲೆ, ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಇರುವ ಯುರೋಪಿಯನ್ ಸಮಾಜದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದರು. 2001ರಲ್ಲಿ ಅವರು ತಮ್ಮ ಶ್ರೀಮತಿ ರಾಜಲಕ್ಷ್ಮಿಯವರೊಂದಿಗೆ ಲಿವರ್‌ಪೂಲ್ ಸಂದರ್ಶಿಸಿದ್ದರು. ಕ್ನೋಸ್ಲೆ ಸಿಟಿಯ ಕಮ್ಯುನಿಟಿ ಹಾಲ್‌ನಲ್ಲಿ ಅಕ್ಟೋಬರ್ 2ರಂದು ಅವರ ಭಾಷಣವಿತ್ತು.

ವಿಷಯ, “ಭಾರತ, ನನ್ನ ಭಾರತ”. ಅವರ ಭಾಷಣ ಕೇಳಲು ಬಂದವರಲ್ಲಿ ಲಿವರ್ಪೂಲ್ ಮೇಯರ್ ಜಾಕ್ ಸ್ಪ್ರಿಂಗ್ಸ್, ಕ್ನೋಸ್ಲೆಯ ಮೇಯರ್ ಥಾಮಸ್ ರಸೆಲ್, ಮತ್ತು ಬ್ರಿಟಿಶ್ ಪಾರ್ಲಿಮೆಂಟಿನ ಸದಸ್ಯರಾದ ಗೌರವಾನ್ವಿತ ಜಾರ್ಜ ಹಾವರ್ಥ ಅವರೂ ಉಪಸ್ಥಿತರಿದ್ದರು. ಪಾರ್ಥಸಾರಥಿಯವರ ಭಾಷಣ ಮುಗಿದಾಗ ಆಮಂತ್ರಿತ ಪ್ರತಿಷ್ಠಿತರೆಲ್ಲರೂ ಉತ್ತಿಷ್ಠರಾಗಿ ಹರ್ಷೋದ್ಗಾರ ತೆಗೆದರು(ಸ್ಟ್ಯಾಂಡಿಂದ ಒವೇಶನ್ ಪ್ರದರ್ಶಿಸಿದರು), ಅಷ್ಟೊಂದು ಅವಿಸ್ಮರಣೀಯವಾಗಿತ್ತು ಅವರ ಭಾಷಣ.”

ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು ಬಾಲ್ಯದಿಂದಲೂ ವಿಷ್ಣುಸಹಸ್ತನಾಮ ಪಾರಾಯಣದ ವಾತಾವರಣದಲ್ಲಿ ಬೆಳೆದವರು. 1998ರಲ್ಲಿ ಅವರು ಸಾಮೂಹಿಕ ಪಾರಾಯಣಕ್ಕೆ ಒಂದು ರೂಪಕೊಟ್ಟರು. ಹನ್ನೊಂದು ಮನೆಯವರು ಕೂಡಿ, ಹನ್ನೊಂದು ದಿನಗಳವರೆಗೆ, ಒಂದು ಮನೆಯಲ್ಲಿ ಅಥವಾ ಹನ್ನೊಂದು ಮನೆಗಳಲ್ಲಿ ವಿಷ್ಣುಸಹಸ್ರನಾಮವನ್ನು ಹನ್ನೊಂದು ಸಲ ಪಾರಾಯಣ ಮಾಡುವ ಉಪಕ್ರಮ ಹಾಕಿಕೊಟ್ಟರು. ಇದು ಬೆಂಗಳೂರಲ್ಲಿ ಎಲ್ಲೆಡೆ ಹರಡಿತು, ಅಷ್ಟೇ ಅಲ್ಲ, ವಿದೇಶಗಳಲ್ಲಿ ಕೂಡ (ಸಿಂಗಾಪೂರ್, ಅರಬ್ ರಾಜ್ಯಗಳು, ಯು.ಕೆ., ಯು.ಎಸ್.ಎ., ಆಸ್ಟ್ರೇಲಿಯಾ ಮುಂ.) ಇದು ಪ್ರಚಾರ ಪಡೆಯಿತು. ನಾನು ಕಳೆದ ವರ್ಷ ಬೆಂಗಳೂರಿಗೆ ಹೋದಾಗ ಅವರು ಶ್ರೀಮತಿ ನಾಗರತ್ನಮ್ಮ/ಶ್ರೀ ಗುಂಡಣ್ಣ ಅವರ ಮನೆಯಲ್ಲಿ ಸಾಮೂಹಿಕ ಪಾರಾಯಣ ನಡೆಸುತ್ತಿದ್ದರು. ಅವರೊಂದಿಗೆ ನಾನೂ ಅಲ್ಲಿಗೆ ಹೋದೆ. ಅಲ್ಲಿ ನನಗೆ ಪ್ರೇಕ್ಷಕನಾಗುವ, ಭಾಗವಹಿಸುವ ಅವಕಾಶ ಲಭಿಸಿತು. ಕೊನೆಯಲ್ಲಿ “ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ | ಶ್ರೀಮಾನ್ ನಾರಾಯಣೋ ವಿಷ್ಣುರ್ವಾಸುದೇವೋಽಭಿರಕ್ಷತು ||” ಎಂಬ ನುಡಿ ಪಠಿಸುವಾಗ ಮನೆಯ ವಾತವರಣವೇ ಬದಲಾಗಿತ್ತು. ಎಲ್ಲರ ಮೈಯಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗಿತ್ತು. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: