Deepavali Customs in Malenadu -ಮಲೆನಾಡು ದೀಪಾವಳಿಯ ಸೊಗಸು

Deepavali Customs in Malenadu, img:Prakash ulepadi
ಒಂದೊಂದು ರಾಜ್ಯದಲ್ಲಿ ದೀಪಾವಳಿ ಆಚರಣೆ ಒಂದೊಂದು ಬಗೆ. ಅಷ್ಟೇ ಅಲ್ಲ, ಒಂದೊಂದು ರಾಜ್ಯದೊಳಗೆ ಒಂದೊಂದು ಬಗೆ. ನಮ್ಮ ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ ಮಲೆನಾಡು ಪ್ರಾಂತ್ಯಗಳಲ್ಲಿ ಹಬ್ಬ ಹಾಡುವ ಪಾರಂಪರಿಕ ಆಚರಣೆಯ ಸೊಗಸೇ ಬೇರೆ. ತಮ್ಮ ಊರ ದೀಪಾವಳಿ ಬಗೆಗೆ ಹೆಮ್ಮೆಯಿಂದ ಮತ್ತು ಕ್ರಮೇಣ ಸೊಗಸುಗಳು ಹೇಳದೇಕೇಳದೆ ಕಣ್ಮರೆಯಾಗುತ್ತಿರುವ ಬಗ್ಗೆ ಬೇಸರದಿಂದ ಬರೆಯಿಸಿಕೊಂಡ ಅಕ್ಷರ ದೀಪ.
ಎಲ್ಲೆಡೆ ದೀಪಸಾಲುಗಳು ಮತ್ತು ನಕ್ಷತ್ರ ಚಿತ್ತಾರಗಳದೇ ಕಾರುಬಾರು. ಬೆಂಗಳೂರಿನ ಗಲ್ಲಿಗಳಲ್ಲಿ ನಡೆಯುವವರಿಗೆ ಯಾವಾಗ ಎತ್ತಕಡೆಯಿಂದ ರಾಕೇಟು ತೂರಿಬರುವುದೋ ಅನ್ನುವ ಹೆದರಿಕೆ, ಹೊಸ ಶರ್ಟು ಹಾಳಾದರೆ ಅನ್ನುವ ಸಂಕಟ!. ಮನೆ ಬಾಗಿಲು ಗಟ್ಟಿ ಮುಚ್ಚಿ ಕುಳಿತರೂ ಕಿವಿ ತೂತಾಗುವಷ್ಟು ಸದ್ದು ಗದ್ದಲ. ರಸ್ತೆ ತುಂಬ ಗಂಧಕದ ಘಮಲು, ಹರಿದು ಬಿದ್ದ ಕೆಂಪು ಹಸಿರು ಬಿಳಿ ಕಾಗದದ ಚೂರುಗಳು. ಬೈದುಕೊಳ್ಳುತ್ತ ರಸ್ತೆ ಗುಡಿಸುವ ನಗರ ಸಭೆಯ ಕೆಲಸಗಾರರು.. ನಾನು ಆ ಸಂಕಟಗಳಿಂದೆಲ್ಲ ಪಾರಾಗುವ ಸಲುವಾಗಿ ಊರಿಗೆ ಬಂದು ಕೂತಿದ್ದೇನೆ ತಣ್ಣಗೆ, ಮತ್ತು ನಿಮ್ಮ ಬಳಿ ಈ ಬಾರಿ ಮಲೆನಾಡಿನ ಒಂದೆರಡು ವಿಶಿಷ್ಟ ದೀಪಾವಳಿ ಆಚರಣೆಯ ಬಗ್ಗೆ ಹರಟುತ್ತೇನೆ.

ಉತ್ತರ ಕನ್ನಡ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ , ದೀಪಾವಳಿ ಆಚರಣೆ ಜೋರು. ಬೂರೆ ನೀರು, ಗೋಪೂಜೆ ಇತ್ಯಾದಿಗಳೆಲ್ಲ ಅಲ್ಲಿಯದೇ ಭಿನ್ನ ಆಚರಣೆಗಳು. ಅಲ್ಲಿನ ಕೆಲ ಜನಾಂಗಗಳು, ದೀಪಗಳ ಹಬ್ಬಕ್ಕೆ ವಿಶಿಷ್ಟ ಸಂಪ್ರದಾಯವೊಂದನ್ನು ಹೊಂದಿವೆ. ಅದೇ, “ಹಬ್ಬಾಡುವುದು” ಅಥವ ಹಬ್ಬ ಹಾಡುವುದು. ಒಂದೊಂದು ಪ್ರದೇಶಗಳಲ್ಲಿ ಇದಕ್ಕೆ ಒಂದೊಂದು ಹೆಸರಿದ್ದರೂ, ಆಚರಣೆಯ ರೀತಿ ಒಂದೇ ತರ. ಮಲೆನಾಡಿನ ಹಳ್ಳಿಗಳಲ್ಲಿ, ದೀಪಾವಳಿಯ ಕಾರ್ತೀಕ ಶುದ್ಧ ಪಾಡ್ಯ. ಬಿದಿಗೆ ಮತ್ತು ತದಿಗೆಯ ಮೂರು ದಿನ ಈ ವಿಶೇಷ ಆಚರಣೆ.

ಊರಿನ ಯುವಕರ ಎರಡು ಗುಂಪು ಹತ್ತಿಪ್ಪತ್ತು ಜನರದು ಚಿಳ್ಳೆಗಳಿಂದ ಹಿಡಿದು ಮಧ್ಯವಯಸ್ಕರವರೆಗೆ, ಕಾರ್ತೀಕ ಶುದ್ಧ ಪಾಡ್ಯದ ರಾತ್ರಿ ತಯಾರಾಗುತ್ತದೆ. ಎರಡೂ ಗುಂಪಿಗೊಂದೊಂದು ದೀಪ. ಈ ದೀಪಗಳಿಗೆ ಕಾಮನ ದೀಪ ಮತ್ತು ಕಟ್ಟಿನ ದೀಪ ಅಂತ ಹೆಸರು. ರಾತ್ರಿಯ ಊಟ ಮುಗಿಸಿ ಈ ಎರಡೂ ಗುಂಪುಗಳೂ ನಿಶ್ಚಿತ ಪ್ರದೇಶದಿಂದ ಊರು ತಿರುಗಾಟಕ್ಕೆ ಹೊರಡುತ್ತವೆ. ಹೊರಟ ಮೇಲೆ ದೀಪ ಆರಬಾರದು ಎನ್ನುವುದು ಒಂದು ನಂಬಿಕೆಯಾದರೆ, ಮಧ್ಯ ಎಲ್ಲೂ ಈ ಎರಡು ಗುಂಪುಗಳು ಪರಸ್ಪರ ಎದುರಾಗಬಾರದು ಎನ್ನುವುದು ಮತ್ತೊಂದು ನಂಬಿಕೆ. ಹಾಗೆಲ್ಲಾದರೂ ಎದುರಾದರೆ ಊರಿಗೆ ಅಪಶಕುನವಂತೆ.

ಹೀಗೆ ಹೊರಟ ತಂಡಗಳು ಜಾನಪದ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಹಾಡುತ್ತ ಊರಿನ ಮನೆ ಮನೆಗಳಿಗೆ ತೆರಳುತ್ತವೆ. ಸ್ಥಳದಲ್ಲೇ ಹಾಡು ಕಟ್ಟುತ್ತ, ಆ ಹಾಡುಗಳಿಗೆ ಗುಂಪಿನೆಲ್ಲರೂ ದನಿಗೂಡಿಸುತ್ತ, ನಡೆಯುತ್ತ ಸಾಗುತ್ತಾರೆ. “ಧಿಮಿಸಾಲನಿರಣ್ಣ ಧಿಮಿಸಾಲನಿರೋ” ಅನ್ನುವುದು ಹಾಡಿನ ಪ್ರತಿ ಚರಣದ ಕೊನೆಗೆ ಬರುವ ಪಲ್ಲವಿ.

ಇನ್ನೊಂದು ವಿಷಯವೆಂದರೆ, ದೀಪ ಹೊತ್ತ ತಂಡ ಯಾರದೇ ಮನೆಯೆದುರು ಬಂದಾಗ ಮನೆ ಬಾಗಿಲು ತೆರೆದಿರುವಂತಿಲ್ಲ! ಆ ತಂಡದವರೇ ಬಂದು, ಬಾಗಿಲು ತೆಗಿರೋ ಅಂತ ಏಕಕಂಠದಿಂದ ಕೂಗಿದ ಮೇಲೆಯೇ ಮನೆಯವರು ಬಾಗಿಲು ತೆಗೆಯಬೇಕು. ಆಮೇಲೆ ತಂಡದ ಬೇಡಿಕೆಗಳು ಒಂದೊಂದಾಗಿ ಎದುರು ಬರುತ್ತವೆ. ದುಡ್ಡು, ತೆಂಗಿನಕಾಯಿ, ದೀಪಕ್ಕೆ ಎಣ್ಣೆ ಹೀಗೆ.. ತಂಡದ ಹಿರಿಯ ಸದಸ್ಯರುಗಳು ಈ ಬಗ್ಗೆ ತಲೆಬಿಸಿ ಮಾಡಿಕೊಂಡಿದ್ದರೆ, ಸಣ್ಣ ಹುಡುಗರು, ಅಮ್ಮಾ, ಅಕ್ಕಾ ಅಂತ ಅವರ ಹಿಂದೆ ಬಿದ್ದು ಹಬ್ಬದ ಹೋಳಿಗೆಗೋ, ಮತ್ಯಾವುದಾದರೂ ವಿಶೇಷ ತಿಂಡಿಗೋ ಸ್ಕೆಚ್ಚು ಹಾಕುತ್ತಿರುತ್ತಾರೆ. “ಢುಂಸಾಲ್ಗ್ಯೋ, ಹಬ್ಬಕ್ ಮೂರ್ ಹೋಳ್ಗ್ಯೋ” ಅನ್ನೋ ಘೋಷಣೆ ಬೇರೆ!

ಇಲ್ಲಿ ಯಾರಿಗೂ ಅಸಮಾಧಾನವಾಗುವುದಿಲ್ಲ. ಒಂದು ಮನೆಯಲ್ಲಿ ಸಿಕ್ಕಿದ್ದು ತೆಗೆದುಕೊಂಡು ಮತ್ತೆ ಮುಂದಿನ ಮನೆಗೆ ಸವಾರಿ ತೆರಳುತ್ತದೆ. ಮತ್ತೆ ದಾರಿ ಮಧ್ಯ ದೊಡ್ಡ ದನಿಯಲ್ಲಿ ಹಾಡುಗಬ್ಬಗಳು.. ಮತ್ತೊಂದು ತಂಡ ಅಡ್ಡ ಬರದಿರಲಿ ಎಂಬ ಮುನ್ನೆಚ್ಚರಿಕೆ ಜೊತೆಗೆ, ಮುಂದಿನ ಮನೆಯವರು ಉಂಡು ಮಲಗಿದ್ದರೆ, ಎಚ್ಚರಾಗಲಿ ಅನ್ನುವುದು ಮತ್ತೊಂದು ಉದ್ದೇಶ. ಹೀಗೇ ಬೆಳಗಿನ ಜಾವದವರೆಗೂ ಈ ತಂಡಗಳ ಸಂಚಾರ ಮುಂದುವರೆಯುತ್ತದೆ.

ನಮ್ಮ ಹಬ್ಬಗಳ ವಿಭಿನ್ನ ಸಾಧ್ಯತೆಗಳ ಬಗ್ಗೆ ಯೋಚಿಸಿದಾಗ ಅಚ್ಚರಿಯಾಗುತ್ತದೆ. ದಿನವೂ ಸಾಮಾನ್ಯ ಕೆಲಸ ಮಾಡಿಕೊಂಡಿದ್ದವರೆಲ್ಲ, ಈ ಮೂರು ದಿನ ಧಿಡೀರ್ ಕವಿಗಳು- ಹಾಡುಗಾರರು. ಈ ತಂಡಗಳಲ್ಲಿ ಎಲ್ಲರೂ ಹಾಡುವವರು, ಎಲ್ಲರೂ ಕುಣಿಯುವವರು. ತಾವು ಹೋದ ಮನೆಗೆ ಸಂಬಂಧಿಸಿದ ಹಾಡುಗಳು ಅಲ್ಲಲೇ ರಚಿಸಲ್ಪಡುತ್ತವೆ. ಮನೆಯಲ್ಲಿ ಹೊಸ ಮದುಮಕ್ಕಳಿದ್ದರೆ ಅವರ ಮೇಲೆ, ಯಜಮಾನ ಭಟ್ಟರ ಮೇಲೆ, ಸೊಸೈಟಿ ಅಧ್ಯಕ್ಷರ ಮೇಲೆ- ಹೀಗೆ! ಮತ್ತೆ ತಮ್ಮ ಮೂಲ ಸ್ಥಾನಕ್ಕೆ ಬರುವ ತಂಡಗಳು ಆವತ್ತಿನ ತಿರುಗಾಟ ಮುಗಿಸಿ ಮನೆಗೆ ತೆರಳುತ್ತವೆ.

ಅಂದು ರಾತ್ರಿ ಮತ್ತೆ ತಿರುಗಾಟ. ಅವರದೇ ಭಾಷೆಯಲ್ಲಿ ಹೇಳುವುದಾದರೆ, ಪಾಡ್ಯ, ಹಾಡ್ಯ ಮತ್ತು ವರ್ಷತೊಡಕು- ಮೂರು ದಿನಗಳವರೆಗೆ ಈ ತಿರುಗಾಟಗಳು ಮುಂದುವರೆಯುತ್ತವೆ. ವರ್ಷತೊಡಕು ಎನ್ನುವುದು, ಪ್ರಾಯಶಃ ವರ್ಷವನ್ನು ತೊಡಗು- ಆರಂಭಿಸು ಅನ್ನುವುದರ ಅಪಭ್ರಂಶ. ನಮ್ಮ ಜಾನಪದರು, ದೀಪಾವಳಿಯ ನಂತರ ವರ್ಷಾರಂಭ ಅನ್ನುವ ಕಲ್ಪನೆಯನ್ನು ಇಟ್ಟುಕೊಂಡಂತೆ ಕಾಣುತ್ತದೆ. ಪೈರು ಬೆಳೆದು, ಕಟಾವಾಗಿ ಅಥವ ಕಟಾವಿಗೆ ಸಿದ್ಧವಿರುವ ಸಂದರ್ಭ ದೀಪಾವಳಿಯದು. ಹೀಗಾಗಿ, ಮತ್ತೆ ಹೊಸದಾಗಿ ,ಹೊಸ ವರ್ಷ, ಹೊಸ ಬದುಕು ಆರಂಭಿಸಬೇಕು ಎನ್ನುವ ಕಾರಣಕ್ಕೆ ದೀಪಾವಳಿಯನ್ನು ವರ್ಷಾಂತ್ಯ ಅಂತಲೇ ಪರಿಗಣಿಸಿದ್ದರೇನೋ.. ಮುಂದೆ ಯಾವತ್ತೋ ಕಾಲಗರ್ಭಕ್ಕೆ ಸೇರಿರಬೇಕು ಇದು.

ಮೂರುದಿನಗಳ ತಿರುಗಾಟ ಮುಗಿದ ಮೇಲೆ, ಎರಡೂ ತಂಡಗಳೂ ಸೇರಿ, ತಮಗೆ ಬಂದ ಆದಾಯದಿಂದ ಅನ್ನ ಸಂತರ್ಪಣೆ ಮಾಡುವುದೋ, ಇಲ್ಲಾ ದುಡ್ಡನ್ನ ಯಾವುದಾದರೂ ದೇವಸ್ಥಾನಕ್ಕೆ ಕೊಡುವುದೋ ಮಾಡುತ್ತಾರೆ. ತಮಗೆ ಅಂತ ಏನನ್ನೂ ಇಟ್ಟಿಕೊಳ್ಳುವುದಿಲ್ಲ! ಸಿಕ್ಕ ಭಕ್ಷ್ಯಗಳೇ ಲಾಭ.

ಇನ್ನು ಬಲೀಂದ್ರ ಪೂಜೆ ಪ್ರಾಯಶಃ ಕೃಷಿ ಭೂಮಿ ಇರುವ ಎಲ್ಲ ಕಡೆಗಳಲ್ಲು ಇರುವ ಸಂಪ್ರದಾಯವಿರಬೇಕು. ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಬಲೀಂದ್ರ ನ ಪೂಜೆಯನ್ನು ಭಿನ್ನವಾಗಿ ಅಚರಿಸುತ್ತಾರೆ. ದಕ್ಷಿಣ ಕನ್ನಡದಲ್ಲಿ ಕಾರ್ತೀಕ ಪಾಡ್ಯದಂದು ಗದ್ದೆಗಳಲ್ಲಿ ದೀಪ ಹಚ್ಚಿ, ಬಲೀಂದ್ರನಿಗೆ ಪೂಜೆ ಮಾಡಿ ಕೂ ಹಾಕಿ, ಆತನನ್ನ ಮತ್ತೆ ಬಾ ಎಂದು ಕರೆದು, ಕಳುಹಿಸಿಕೊಡಲಾಗುತ್ತದೆ. ಆ ಪೂಜೆ ಮಾಡುವಾಗ ಬಲೀಂದ್ರನನ್ನು ಬಗ್ಗೆ ಹೇಳುವ ನುಡಿಗಟ್ಟು ಕೂಡ ಸೊಗಸಾಗಿರುತ್ತದೆ.

ಇನ್ನು ಮಲೆನಾಡಿನಲ್ಲಿ ಬಲೀಂದ್ರನ್ನು ಕಳುಹಿಸಿಕೊಟ್ಟ ನಂತರ ಹೇಳೋ ಮಾತುಗಳು ನಿಜಕ್ಕೂ ಮಾರ್ಮಿಕ.
“ಹಬ್ಬ ಹಬ್ಬ ಮಲ್ಲಣ್ಣಾ
ಹಬ್ಬಕ್ ಮೂರ್ ಹೋಳಿಗೇ
ಹಬ್ಬ ಕಳ್ಸಿದ್ ಮರುದಿವ್ಸಾ
ರಾಗೀ ರಬ್ಬಳಿಗೇ”

ಹಬ್ಬದ ಆಚರಣೆಯ ಸುಖ, ಅ ಎರಡು ಮೂರು ದಿನಗಳು ಮಾತ್ರ. ಹಬ್ಬ ಮುಗಿದ ಮಾರನೇ ದಿನದಿಂದ ಮತ್ತೆ ರಾಗಿ ರಬ್ಬಳಿಗೆಯೇ ಗತಿ ಎನ್ನುವಲ್ಲಿ , ಬಡತನದ ಅಸಹಾಯಕತೆ ಎಷ್ಟು ಚೆನ್ನಾಗಿ ಚಿತ್ರಿತವಾಗಿದೆ! ತಮ್ಮನ್ನು ತಾವೇ ವ್ಯಂಗವಾಡಿಕೊಂಡು, ಹಬ್ಬದಾಚರಣೆಯ ನಂತರದ ದಿನಗಳಿಗೆ ತಮ್ಮನ್ನ ತಾವು ಸಿದ್ಧಪಡಿಸಿಕೊಳ್ಳುವ ರೀತಿ, ಅವರುಗಳು ಬದುಕನ್ನು ಸ್ವೀಕರಿಸಿದ ರೀತಿಗೆ ಕನ್ನಡಿ ಹಿಡಿಯುತ್ತದೆ.

ಇಂದು ಈ ಹಾಡುಗಬ್ಬಗಳು ಹಳೆಯ ಅಜ್ಜಂದಿರ ಗಂಟಲಲ್ಲೇ ಹೂತುಹೋಗುತ್ತವೆ. ಕತ್ತಲನೋಡಿಸುವ ಹಣತೆ ಹೊತ್ತು ಸಾಗುವ ಹುಡುಗರ ತಂಡಗಳು ಇಲ್ಲವಾಗುತ್ತಿವೆ. ಅಲ್ಲೊಂದು, ಇಲ್ಲೊಂದು ಇರಬಹುದಾದ “ಹಬ್ಬಾಡುವ” ತಂಡಗಳ ಸರಿ ರಾತ್ರಿಯ ಹಾಡುಗಳು ಅಲ್ಲೇ ಕಾಡುಗಳಲ್ಲಿ ಪ್ರತಿಧ್ವನಿಸಿ ಮರೆಯಾಗುತ್ತವೆ. . . ಇವುಗಳನ್ನ ನೆನಪು ಮಾಡಿಕೊಂಡಾದರೂ ಸಂತಸ ಪಡಬೇಕಾಗಿದೆ. ಒಳ್ಳೆಯ ದಿನಗಳು ಮತ್ತೆ ಮರಳಲಿ ಎನ್ನುವ ಆಶಯದೊಂದಿಗೆ, ಶುಭ ದೀಪಾವಳಿ.

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಶ್ರೀನಿಧಿ ಡಿಎಸ್ - ಕಾಡುಹರಟೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: