Kannada idioms and phrases – ಕನ್ನಡ ನುಡಿಗಟ್ಟು : ಬಾದರಾಯಣ ಸಂಬಂಧ

ಆಷ್ಟಕ್ಕೂ ಹಳೆಯ ಕಥೆಗಳನ್ನು ಹೇಳಲು ಇಂದು ಅಜ್ಜ ಅಜ್ಜಿಯರಿಲ್ಲ, ಕೇಳಲು ಮೊಮ್ಮಕ್ಕಳೂ ಇಲ್ಲ. ಹೀಗಾಗಿ, ಅದೆಷ್ಟೋ ಚಂದ ಕಥೆಗಳೆಲ್ಲ ಚಂದಿರನೊಳಗೆ ಸೇರಿ ಹೋಗಿವೆ, ಮರಳಿ ಬಾರದ ಹಾಗೆ. ನಾವು ನಮ್ಮ ಬ್ಯುಸಿ ಜೀವನ ಎಂಬ ವಿಷಯಕ್ಕೇ ಎಲ್ಲ ಆರೋಪಗಳನ್ನೂ ಹೊರಿಸಿ, ನಿರಾಳವಾಗಿದ್ದೇವೆ. ಇವತ್ತು, ಒಂದು ಚಂದದ ನುಡಿಗಟ್ಟಿನ ಹಿಂದಿನ ಅಷ್ಟೇ ಸೊಗಸಾದ ಕಥೆ ನಿಮಗಾಗಿ.

ನಮ್ಮ ಪುರಾಣಗಳ ಮೂಲಕ ಮತ್ತು ಜಾನಪದ ಕಥೆಗಳ ಮೂಲಕ, ಅದೆಷ್ಟೋ ನುಡಿಗಟ್ಟುಗಳು ನಮ್ಮ ದೈನಂದಿನ ವ್ಯವಹಾರದಲ್ಲಿ ಪ್ರಚಲಿತವಾಗಿ ಹೋಗಿದೆ. ಲಕ್ಷ್ಮಣ ರೇಖೆ, ಸುಗ್ರೀವಾಜ್ಞೆ, ರಾಮಬಾಣ, ಭೀಷ್ಮ ಪ್ರತಿಜ್ಞೆ, ಹೀಗೆ ವ್ಯಕ್ತಿ ವಿಶೇಷಣ ಹೊತ್ತ ಅದೆಷ್ಟೋ ನುಡಿಗಟ್ಟುಗಳು ನಮ್ಮ ನಡುವೆ ಹಾಸುಹೊಕ್ಕಾಗಿವೆ. ಮಹಾಭಾರತ, ರಾಮಾಯಣಗಳಂತಹ ಮಹಾನ್ ಗ್ರಂಥಗಳಿಂದ ಆಯ್ದುಕೊಂಡ ಮೇಲಿನ ನುಡಿಗಟ್ಟುಗಳಿಗೆ ಸಂಬಂಧಿಸಿದ ಕಥೆಯೂ ಹೆಚ್ಚಿನವರಿಗೆ ತಿಳಿದಿರುತ್ತದೆ. ಕಥೆಗಳನ್ನು ಓದದಿದ್ದರೂ, ಟೀವೀ ಸೀರಿಯಲ್‌ಗಳ ಮೂಲಕವಾದರೂ ಇವುಗಳ ಪರಿಚಯ ಆಗೇ ಆಗುತ್ತದೆ. ಆದರೆ ಇನ್ನು ಕೆಲ ಶಬ್ದ ಪುಂಜಗಳು, ಯಾವುದೋ ಜಾನಪದ ಮೂಲಗಳಿಂದ ಬಂದವು, ತಮ್ಮ ಹಿಂದಿನ ಕಥೆಯನ್ನು ಕಳೆದುಕೊಂಡು, ಕೇವಲ ನುಡಿಗಟ್ಟಿಗಷ್ಟೇ ಸೀಮಿತವಾಗಿ ಬಿಡುತ್ತವೆ.

ಆಷ್ಟಕ್ಕೂ ಹಳೆಯ ಕಥೆಗಳನ್ನು ಹೇಳಲು ಇಂದು ಅಜ್ಜ ಅಜ್ಜಿಯರಿಲ್ಲ, ಕೇಳಲು ಮೊಮ್ಮಕ್ಕಳೂ ಇಲ್ಲ. ಹೀಗಾಗಿ, ಅದೆಷ್ಟೋ ಚಂದ ಕಥೆಗಳೆಲ್ಲ ಚಂದಿರನೊಳಗೆ ಸೇರಿ ಹೋಗಿವೆ, ಮರಳಿ ಬಾರದ ಹಾಗೆ. ನಾವು ನಮ್ಮ ಬ್ಯುಸಿ ಜೀವನ ಎಂಬ ವಿಷಯಕ್ಕೇ ಎಲ್ಲ ಆರೋಪಗಳನ್ನೂ ಹೊರಿಸಿ, ನಿರಾಳವಾಗಿದ್ದೇವೆ. ಇರಲಿ, ಎಲ್ಲರೂ ಹೇಳಿದ್ದನ್ನೇ ಮತ್ತೆ ಚರ್ವಿತ ಚರ್ವಣ ಮಾಡುವುದು ಬೇಡ. ಇವತ್ತು, ಒಂದು ಚಂದದ ನುಡಿಗಟ್ಟಿನ ಹಿಂದಿನ ಅಷ್ಟೇ ಸೊಗಸಾದ ಕಥೆ ನಿಮಗಾಗಿ.

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ, ಒಂದು ಮನೆ ಇತ್ತು. ಆ ಮನೆಯಲ್ಲಿ ಹೊಸದಾಗಿ ಮದುವೆ ಆದ ಗಂಡ ಹೆಂಡತಿ ಇದ್ದರು. ಇಬ್ಬರೂ ಏನೋ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಅಭಿಪ್ರಾಯ ಭೇದಗಳು, ಇದ್ದೇ ಇರತ್ತೆ ನೋಡಿ.. ಎರಡು ಮೂರು ದಿನಗಳಾದರೂ ಇಬ್ಬರೂ ಮಾತಾಡಿಕೊಂಡಿರಲಿಲ್ಲ. ಹೀಗಿರುವಾಗ ಒಂದು ದಿನ, ಇಳಿ ಬೆಳಗಿನ ಹೊತ್ತು, ಮನೆಯೆದುರು ಎತ್ತಿನ ಗಾಡಿಯೊಂದು ಬಂದು ನಿಂತಿತು. ಹೆಂಡತಿ ಹೊರಗೇನೋ ಕೆಲಸ ಮಾಡುತ್ತಿದ್ದವಳು ಹೋಗಿ ನೋಡಿದರೆ, ಗಾಡಿಯೊಳಗಿಂದ ಒಬ್ಬ ಇಳಿದು ಮನೆಯೆಡೆಗೇ ಬರುತ್ತಿದ್ದ. ಅವಳಿಗೆ ಅವನ ಪರಿಚಯ ಇರಲಿಲ್ಲ. ಗಂಡನ ಕಡೆಯ ಸಂಬಂಧಿ ಯಾರೋ ಇರಬೇಕು ಅಂದುಕೊಂಡು, “ಬನ್ನಿ , ಕುಳಿತುಕೊಳ್ಳಿ, ಬಾಯಾರಿಕೆಗೇನು ಬೇಕು” ಅಂತೆಲ್ಲಾ ಉಪಚಾರ ಮಾಡಿದಳು.

ಗಂಡ ಹೊರಗೆಲ್ಲೋ ಹೋದವನು ಬಂದು ನೋಡಿದ. ಹೆಂಡತಿ ಚಾವಡಿಯಲ್ಲಿ ಕೂತಿರುವ ಯಾರಿಗೋ ನೀರು, ಬೆಲ್ಲ ಕೊಡುತ್ತಿದ್ದಾಳೆ, ಚೆಂದಕೆ ಮಾತಾಡುತ್ತಿದ್ದಾಳೆ. ಹೋ, ಯಾರೋ ಇವಳ ಕಡೆಯ ನೆಂಟನಿರಬೇಕು ಅಂದುಕೊಂಡ. ಯಾರು ಅಂತ ಕೇಳಿದರೆ ಮರ್ಯಾದೆ ಪ್ರಶ್ನೆ. ಮದುವೆಲೆಲ್ಲಾದರೂ ನೋಡಿದ್ದೇನೋ ಅಂತ ನೆನಪು ಮಾಡಿಕೊಂಡ. ಊಹೂಂ, ಆಗುತ್ತಿಲ್ಲ. ಎಲ್ಲೆಲ್ಲಿಂದಲೋ ಯಾರ್ಯಾರೋ ಬಂದಿದ್ದರು, ನೆನೆಪೆಂತು ಉಳಿದೀತು? ಮತ್ತೆ ಹೆಂಡತಿಯ ಬಳಿ ಕೇಳಿದರಾಯಿತು ಅಂದುಕೊಂಡು ಸುಮ್ಮನಾದ.

ಹೆಂಡತಿಯ ಬಳಿ ಗಲಾಟೆ ಮಾಡಿಕೊಂಡಿದ್ದರೇನಂತೆ, ಬಂದ ಅತಿಥಿಯನ್ನು ಮಾತನಾಡಿಸಬೇಕಾದ್ದು ಮನೆ ಯಜಮಾನನ ಧರ್ಮ. ಹಾಗಾಗಿ ಅದೂ ಇದೂ ಉಭಯ ಕುಶಲೋಪರಿ ಮಾತುಗಳ ವಿನಿಮಯವಾದವು. ಅಷ್ಟು ಹೊತ್ತಿಗೆ ಹೆಂಡತಿ ಅಡುಗೆ ಸಿದ್ಧಪಡಿಸಿಯೂ ಆಯಿತು. ಭೋಜನಕ್ಕೆ ಬಂದ ಅತಿಥಿಯನ್ನು ಕರೆದ ಯಜಮಾನ. ಆತ ಇವನ ಬಳಿಯೇ ಕೇಳಿಕೊಂಡು, ಕೊಟ್ಟಿಗೆಗೆ ಹೋಗಿ ಹುಲ್ಲು ಎತ್ತಿಕೊಂಡು ಬಂದು ತನ್ನ ಎತ್ತುಗಳಿಗೆ ಅವಷ್ಟನ್ನೂ ಹಾಕಿ, ಕೈಕಾಲು ತೊಳೆದುಕೊಂಡು ಒಳಗೆ ಬಂದ.

ಹೆಂಡತಿ ಗಂಡನ ಕಡೆಯ ಸಂಬಂಧಿ, ಮದುವೆಯಾದ ಮೇಲೆ ಮನೆಗೆ ಬಂದ ಮೊದಲ ಅತಿಥಿ ಅನ್ನುವ ಕಾರಣಕ್ಕೆ ಜೋರಾಗೇ ಅಡುಗೆ ಮಾಡಿದ್ದಳು. ಎಲೆ ತುಂಬ ಬಗೆ ಬಗೆಯ ಖಾದ್ಯಗಳು. ಎರಡು ಮೂರು ದಿನಗಳಿಂದ ಜಗಳದ ಕಾರಣಕ್ಕಾಗಿ ಸಪ್ಪೆ ಅಡುಗೆ ಉಂಡಿದ್ದ ಗಂಡನಿಗೆ ಭಲೇ ಖುಷಿಯಾಯಿತು. ಇವಳ ನೆಂಟ ಬಂದ ಕಾರಣಕ್ಕಾಗಿಯಾದರೂ ತನಗೆ ಒಳ್ಳೇ ಊಟ ಮಾಡುವ ಭಾಗ್ಯ ಲಭಿಸಿತಲ್ಲ ಅಂತ ಮನಸ್ಸಲೇ ಬಂದ ಪುಣ್ಯಾತ್ಮನಿಗೆ ನಮಸ್ಕರಿಸಿದ.

ಊಟ ಮಾಡುವಾಗ ಮನೆ ಯಜಮಾನನಿಗೆ ಏಕೋ ಅನುಮಾನ ಬರಲಾರಂಭಿಸಿತು. ಹೆಂಡತಿ ಆತನ ಬಳಿ ಹೆಚ್ಚೇನೂ ಮಾತಾಡುತ್ತಿಲ್ಲ, ಬರೀ ಬೇಕು, ಸಾಕುಗಳಷ್ಟೇ. ಊರ ಕಡೆ ಸುದ್ದಿ ಮಾತಾಡುತ್ತಿಲ್ಲ. ಅಪ್ಪ ಅಮ್ಮನ ಬಗ್ಗೆ ಮಾತಿಲ್ಲ.. ಹೆಂಡತಿಗೂ ಹಾಗೆ ಅನ್ನಿಸತೊಡಗಿತು, ಇದೇನು ತನ್ನ ಗಂಡನ ಬಳಿ ಈ ವ್ಯಕ್ತಿ ಏನೂ ಮಾತೇ ಆಡುತ್ತಿಲ್ಲವಲ್ಲ, ಇವರೂ ಏನೂ ಕೇಳುತ್ತಿಲ್ಲ ಅಂತ. ಅತಿಥಿ ಉಂಡು ಕೈತೊಳೆದು ಚಾವಡಿಗೆ ತೆರಳಿದ. ಹೆಂಡತಿ ಗಂಡನ ಕೈಗೆ ನೀರು ಹನಿಸುವಾಗ ಕೇಳಿಯೇ ಬಿಟ್ಟಳು, ಯಾರವರು ಅಂತ. ಗಂಡನಿಗೆ ಸಂಶಯ ನಿವಾರಣೆಯಾಗಿ ಹೋಯಿತು, ಈತ ನಮ್ಮಿಬ್ಬರ ಸಂಬಂಧಿಕನೂ ಅಲ್ಲ ಗೊತ್ತಾಯಿತು.

ಆದರೆ ಸೀದಾ ವಿಚಾರಣೆ ಮಾಡುವುದು ತಪ್ಪಾಗುತ್ತದಲ್ಲ? ಬಂದ ಅತಿಥಿ ಹೊರಗೆ ಜಗಲಿಯಲ್ಲಿ ವೀಳ್ಯದೆಲೆ, ಅಡಿಕೆ, ಸುಣ್ಣ, ಲವಂಗ ಇತ್ಯಾದಿಗಳನ್ನು ಹಾಕಿದ ತಾಂಬೂಲ ಮೆಲ್ಲುತ್ತ ಕುಳಿತಿದ್ದ. ಮನೆಯಜಮಾನ ಮೆಲ್ಲನೆ ಆತನ ಬಳಿ ಬಂದು ಕುಳಿತು, ತಾನೂ ಕೈಗೊಂದು ವೀಳ್ಯದೆಲೆ ಎತ್ತಿಕೊಂಡು, ಮೆಲ್ಲನೆ ಆ ಎಲೆಯ ಹಿಂದಿನ ನಾರನ್ನು ಉಗುರಿಂದ ಎತ್ತುತ್ತ, ಹೇಗೆ ಕೇಳುವುದಪ್ಪಾ ಅನ್ನುವ ತಳಮಳದೊಳಗೇ “ಸ್ವಾಮೀ, ನಿಮಗೆ ಯಾವೂರಾಯಿತು, ನಮಗೂ ನಿಮಗೂ ಹೇಗೆ ಸಂಬಂಧವಾಯಿತು ಅನ್ನುವುದು ತಿಳಿಯಲಿಲ್ಲ, ಬೇಜಾರು ಮಾಡಿಕೊಳ್ಳಬೇಡಿ, ಮನ್ನಿಸಿ” ಅಂದ.

ಬಂದ ಆ ನೆಂಟ, “ಒಂದು ನಿಮಿಷ” ಅಂದವನೇ, ಮೆಲ್ಲನೆ ತನ್ನ ಧೋತ್ರದಂಚು ಹಿಡಿದು, ಮೆಟ್ಟಿಲಿಳಿದು, ಬಾಯಿ ತುಂಬ ತುಂಬಿದ್ದ ತಾಂಬೂಲದ ರಸವನ್ನು ಬಾಳೇ ಗಿಡದ ಬಳಿ ಉಗಿದು ಬಂದು, ನಮ್ಮದೂ ನಿಮ್ಮ ಸಂಬಂಧ ಹೀಗಿದೆ ಅಂತ ಈ ಮಾತು ಹೇಳಿದ.

ಅಸ್ಮಾಕಂ ಬದರೀ ಚಕ್ರಂ, ಯುಷ್ಮಾಕಂ ಬದರೀ ತರು:
ಬಾದರಾಯಣ ಸಂಬಂಧಾಧ್ಯೂಯಂ ಯೂಯಂ ವಯಂ ವಯಂ

ಹೀಗಂದರೇನಪಾ ಅಂದ್ರೆ, ನನ್ನ ಎತ್ತಿನ ಗಾಡಿಯ ಚಕ್ರ ಬದರೀ ಮರದಿಂದ ಮಾಡಲ್ಪಟ್ಟಿದ್ದು, ನಿಮ್ಮ ಮನೆ ಮುಂದೂ ಒಂದು ಬದರೀ ಮರವಿದೆ! ಹೀಗಾಗಿಯೇ ಬಾದರಾಯಣ ಸಂಬಂಧದಿಂದ ನೀವು ನೀವೇ ಮತ್ತು ನಾನು ನಾನೇ ಅಂತ!

ಆತ ಎಲ್ಲಿಗೋ ಹೊರಟಿದ್ದ ಯಾತ್ರಿ. ದಾರಿಯಲ್ಲೆಲ್ಲಾದರೂ ಆಶ್ರಯ ಬೇಕಿತ್ತು, ಸುಮ್ಮನೇ ಹೋಗುತ್ತಿದ್ದವನಿಗೆ ಬದರೀ ಮರ, ಮತ್ತು ಅದರ ಪಕ್ಕಕ್ಕಿದ್ದ ಮನೆ ಕಂಡಿತು. ಒಂದು ಸಂಬಂಧವೂ ಆದಂತಾಯಿತು. ಮನೆಯ ಗಂಡ ಹೆಂಡಿರ ಗಲಾಟೆ, ಈತನಿಗೆ ಲಾಭವಾಗೇ ಪರಿಣಮಿಸಿತು. ಆವತ್ತಿನಿಂದ ಎಲ್ಲೆಂದೆಲ್ಲಿಗೋ ಸಂಬಂಧ ಕಲ್ಪಿಸಲು ಯಾರಾದರೂ ಯತ್ನಿಸಿದರೆ ಬಾದರಾಯಣ ಸಂಬಂಧ ಅನ್ನುವ ನುಡಿಗಟ್ಟೂ ಹುಟ್ಟಿಕೊಂಡಿತು.

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಶ್ರೀನಿಧಿ ಡಿಎಸ್ - ಕಾಡುಹರಟೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: