Kannada TV serials, a nostalgia – ಕಾಲಚಕ್ರ ಹಿಂದಕ್ಕೆ ಉರುಳಿ ಹೋಗಬಾರದೆ?

Mayamruga , Kannada tv serial
ದೂರದರ್ಶನದಲ್ಲಿ ಕನ್ನಡ ಪ್ರಾರಂಭವಾದ ಸಮಯದಲ್ಲಿ ಧಾರಾವಾಹಿ, ಧಾರಾವಾಹಿ ಪ್ರಾರಂಭವಾಗುವ ಮುನ್ನ ಬರುವ ಹಾಡು, ಮಧ್ಯೆ ಮಧ್ಯೆ ಬರುವ ಜಾಹೀರಾತು, ಕಲಾವಿದರ ಆ ಮುಖಗಳು ಪ್ರತಿಯೊಂದು ಅಪ್ಯಾಯಮಾನವಾಗೇ ಇರುತ್ತಿತ್ತು. ಆದರೆ ಇಂದಿನ ಧಾರಾವಾಹಿಗಳನ್ನು ನೋಡಬೇಕೆಂಬ ಅಂಥ ಅದಮ್ಯ ಕಾಂಕ್ಷೆ ಇಂದು ಕಣ್ಮರೆಯಾಗುತ್ತಿದೆ. ಘಟಾನುಘಟಿ ನಿರ್ದೇಶಕರೂ ಸವಕಲಾಗುತ್ತಿದ್ದಾರೆ. ಕಾಲಚಕ್ರ ಹಿಂದಕ್ಕೆ ಉರುಳಿ ಹಳೆ ಕಾಲದ ಧಾರಾವಾಹಿಗಳೆಡೆಗೆ ಹೋಗಬಾರದೆ ಎಂದೆನಿಸುತ್ತದೆ.
ನಮ್ಮ ಮನೆಗೆ ಟಿವಿ ಬಂದಿದ್ದು, ನಾನು ಮೂರನೇ ಕ್ಲಾಸಲ್ಲಿದ್ದಾಗಲೇ. ಅ ಮಟ್ಟಿಗೆ ನಾನು ಪುಣ್ಯವಂತ ಎಂತಲೇ ಅನ್ನಬಹುದು. ಏಕೆಂದರೆ ಅ ಕಾಲಕ್ಕೆ ನನ್ನ ಹೆಚ್ಚಿನ ಕ್ಲಾಸ್ ಮೇಟುಗಳ ಮನೆಗಳಲ್ಲಿ ಟಿವಿ ಇರಲಿಲ್ಲ, ಮತ್ತು ನಾನು ದಿನಾ ಬಂದು ಹೇಳುತ್ತಿದ್ದ ದೂರದರ್ಶನದ ಕಥೆಗಳನ್ನು ನನ್ನ ಮಿತ್ರರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು. ಸತ್ಯ ಹೇಳಬೇಕೆಂದರೆ ಆ ಕಥೆಗಳು- ನಾನು ಬಾಯಿ ಬಿಟ್ಟುಕೊಂಡು ಟಿವಿಯನ್ನ ಏನೂ ಅರ್ಥವಾಗದೇ ಸುಮ್ಮನೇ ದಿಟ್ಟಿಸುತ್ತಿದ್ದಾಗ ಪಾಪ ಅನ್ನಿಸಿ, ಅಥವಾ ಪದೇ ಪದೇ ಪೀಡಿಸುತ್ತಿದ್ದಾಗ ನನ್ನಪ್ಪ ಹೇಳಿದವೇ ಅಗಿದ್ದವು. ನನಗೆಲ್ಲಿಂದ ಹಿಂದಿ ಅರ್ಥವಾಗಬೇಕು?

ಕೆಲಬಾರಿ ಟಿವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ. ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.

ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು. ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?

ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ ‘ಗುಡ್ಡದ ಭೂತ’ ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ ‘ಡೆನ್ನಾನ ಡೆನ್ನಾನ…’ ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.

ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.

ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.

ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ‘ತಿರುಗುಬಾಣ’ ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ‘ಕ್ರೇಝಿ ಕರ್ನಲ್’ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ‘ಅಜಿತನ ಸಾಹಸಗಳು’ ಪತ್ತೇದಾರಿ. ಅಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಆನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ – ಸಂಪೂರ್ಣ ಅಯೋಮಯವಾಗಿ ಹೋಗಿತ್ತು!

ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.

ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರಹ ‘ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು’, – ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ ಟಿಎನ್ ಸೀತಾರಾಂ ಅವರ ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ…

ಮಾಯಾಮೃಗ ಪ್ರಸಾರವಾಗುತ್ತಿದ್ದಾಗ ನಾನು ಹತ್ತನೇ ತರಗತಿ ಓದುತ್ತಿದ್ದೆ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.

ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.

ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು, ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ‘ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ’ ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. ನಾನು ಓಡಿ ಹೋಗಿ, ಟಿ.ವಿ ಹಾಕಿ….

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಶ್ರೀನಿಧಿ ಡಿಎಸ್ - ಕಾಡುಹರಟೆ. Bookmark the permalink. 1 ಟಿಪ್ಪಣಿ.

  1. ಹಾಯ್.. ನಿಮ್ಮ ಧಾರಾವಾಹಿ ಕುರಿತ ಲೇಖನ ಓದಿ ನನಗೆ ಖುಷಿಯಾಯಿತು. ನಾನು ಜನಶ್ರಿ ವಾಹಿನಿಯಲ್ಲಿ ಧಾರಾವಾಹಿ ಕುರಿತ ಕಾರ್ಯಕ್ರಮವೊಂದನ್ನ ಮಾಡುತ್ತಿದ್ದೆನೆ. ‘ಸೀ-ರಿಯಲ್ ಇದು ಧಾರಾವಾಹಿ ದುನಿಯಾ’ ಅಂತ. – ನನಗೆ ನಿಮ್ಮೊಂದಿಗೆ ಮಾತನಾಡಬೇಕು. ದಯವಿಟ್ಟು ನನಗೆ ನಿಮ್ಮ ಪೋನ್ ನಂ ಕೊಡಿ.

    ಪುನೀತ್ ಬಾರ್ಕೂರ್
    ಜನಶ್ರೀ ಟಿ ವಿ
    7760999704

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: