Nick Vujicic is a giant of a man – ಕೈ ಇಲ್ಲ, ಕಾಲಿಲ್ಲ, ಚಿಂತೆನೂ ಇಲ್ಲ!

Nick Vujicic is a giant of a man
ಸಾವು ಮತ್ತು ಸೋಲು- ಇವೆರಡನ್ನೂ ಕ್ಷಣಕ್ಷಣವೂ ಸೋಲಿಸುತ್ತ ಬಂದಿರುವ ರಾಮ್‌ನರೇಶ್ ಕರುತರ ಎಂಬಾತನ ಬದುಕಿನ ಕಥೆಯನ್ನು ಕಳೆದ ವಾರ ಓದಿದ್ದೀರಿ. ಈ ವಾರ ನಿಮ್ಮೆದುರು ತೆರೆದುಕೊಳ್ಳಲಿರುವುದು ನಿಕ್ ಜಿಸಿಕ್ ಎಂಬ ಇನ್ನೊಬ್ಬ ಧೀರನ ಕಥೆ. ಸ್ವಾರಸ್ಯವೆಂದರೆ ಈತನಿಗೆ ಕೈಗಳಿಲ್ಲ, ಕಾಲುಗಳೂ ಇಲ್ಲ! ಹಾಗಿದ್ದೂ ಈತ ಒಂದಲ್ಲ, ಎರಡು ಡಿಗ್ರಿ ಪಡೆದಿದ್ದಾನೆ! ದೇಶ ವಿದೇಶ ಸುತ್ತಿದ್ದಾನೆ! ಅದೆಷ್ಟೋ ದೇಶಗಳ ಪ್ರಮುಖ ನಾಯಕರನ್ನು ಭೇಟಿಯಾಗಿದ್ದಾನೆ. ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಮಾತಾಡುವುದರಲ್ಲಿ; ಸೂರ್ತಿದಾಯಕ ಭಾಷಣ ಬಿಗಿಯುವುದರಲ್ಲಿ ಜಗತ್ತಿನ ನಂಬರ್ ಒನ್ ಆಸಾಮಿ ಎಂದು ಹೆಸರು ಮಾಡಿದ್ದಾನೆ!
ಅಲ್ಲ, ಕೈ-ಕಾಲುಗಳೇ ಇಲ್ಲದಿದ್ದರೂ ಆತ ಇಂಥದೊಂದು ಸಾಧನೆ ಮಾಡಲು ಸಾಧ್ಯವಾದದ್ದು ಹೇಗೆ? ಅಂಗವೈಕಲ್ಯದ ನೋವು, ಜತೆಗಿದ್ದವರ ವ್ಯಂಗ್ಯ, ಬಂಧುಗಳ ‘ಪಾಪ ಕಣ್ರೀ’ ಎಂಬಂಥ ನೋಟ, ಕುತೂಹಲಿಗಳ ಅರ್ಥವಿಲ್ಲದ ಪ್ರಶ್ನೆ, ಒಂದು ಡಿಪ್ರೆಷನ್, ವಿಚಿತ್ರ ದೇಹ ಪ್ರಕೃತಿಯ ಕಾರಣದಿಂದಲೇ ಜತೆಯಾಗುವ ಕಾಯಿಲೆಗಳು ಅವನನ್ನು ಹೆದರಿಸಲಿಲ್ವ? ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿಬಿಡಲಿಲ್ವ? ಇಂಥವೇ ಕುತೂಹಲಕರ ಪ್ರಶ್ನೆಗಳನ್ನು ಜತೆಗಿಟ್ಟುಕೊಂಡು ಕುಳಿತರೆ, ಅದಕ್ಕೆ ಉತ್ತರವಾಗಿ ನಿಕ್ ಜಿಸಿಕ್‌ನ ಬದುಕಿನ ಕಥೆ ಈರುಳ್ಳಿಯ ಪಕಳೆಗಳಂತೆ ಬಿಚ್ಚಿಕೊಳ್ಳತೊಡಗುತ್ತದೆ.

***
ನಿಕ್‌ಜಿಸಿಕ್ ಹುಟ್ಟಿದ್ದು 1982ರಲ್ಲಿ, ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ. ಈತ ಪಾಸ್ಟರ್ ಬೋರಿಸ್-ದಸ್ಕಾ ಜಿಸಿಕ್ ದಂಪತಿಯ ಮೊದಲ ಮಗ. ನಿಕ್‌ನ ತಾಯಿ ದಸ್ಕಾ, ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದಾಕೆ. ವಿಪರ್ಯಾಸಗಳು ಹೇಗಿರುತ್ತವೆ ನೋಡಿ; ಆಕೆ ನರ್ಸ್ ಆಗಿದ್ದರೂ ಕೂಡ, ಚೊಚ್ಚಲ ಹೆರಿಗೆಯ ಸಂಭ್ರಮದಲ್ಲಿ ಥರಾವರಿ ಚೆಕಪ್ ಮಾಡಿಸಿದರೂ ಕೂಡ, ತನಗೆ ಅಂಗವಿಕಲ ಮಗು ಹುಟ್ಟಲಿದೆ ಎಂಬುದು ಆಕೆಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಆಕೆಯನ್ನು ಮೇಲಿಂದ ಮೇಲೆ ಚೆಕ್ ಮಾಡುತ್ತಲೇ ಬಂದ ಡಾಕ್ಟರುಗಳಿಗೂ ಗೊತ್ತಿರಲಿಲ್ಲ. ಅವರೆಲ್ಲ ‘ಏನೂ ತೊಂದರೆಯಿಲ್ಲ. ನಾರ್ಮಲ್ ಡೆಲಿವರಿ ಆಗುತ್ತೆ’ ಅಂದಿದ್ದರು. ಹಾಗೆಯೇ ಆಯಿತು ಕೂಡಾ. ಆದರೆ ತಾಯಿ ಗರ್ಭದಿಂದ ಹೊರಬಂದ ಮಗುವನ್ನು ಕಂಡಾಗ ಆಸ್ಪತ್ರೆಯ ಅಷ್ಟೂ ವೈದ್ಯರು ಬೆಚ್ಚಿಬಿದ್ದರು. ಯಾಕೆಂದರೆ, ದಷ್ಟಪುಷ್ಪವಾಗಿ ಬೆಳೆದು ಮುದ್ದು ಮುದ್ದಾಗಿದ್ದ ಆ ಮಗುವಿಗೆ ಕೈಕಾಲುಗಳೇ ಇರಲಿಲ್ಲ! ಹೊಟ್ಟೆಯಿಂದ ಒಂದಿಷ್ಟು ಕೆಳಕ್ಕೆ ಒಂದು ಬೆರಳಿನಷ್ಟು ಉದ್ದಕ್ಕೆ ಸ್ಪಂಜಿನಂಥ ಎಡಪಾದವಿತ್ತು. ಅದಕ್ಕೆ ಬೆರಳುಗಳಿದ್ದವು ನಿಜ. ಆದರೆ ಅದನ್ನು ಕಾಲು ಎಂದು ಕರೆಯಲು ಯಾರೂ ಸಿದ್ಧರಿರಲಿಲ್ಲ.

ಮಗು, ಅಳುತ್ತ ಅಳುತ್ತಲೇ ತನ್ನನ್ನು ತಬ್ಬಿಕೊಳ್ಳಲಿ, ಪುಟಾಣಿ ಕೈಗಳಿಂದ ಹಾಗೇ ಒಮ್ಮೆ ಕೆನ್ನೆ ತಟ್ಟಲಿ, ಜಡೆ ಎಳೆಯಲಿ. ಪುಟ್ಟ ಕಾಲುಗಳಿಂದ ತೊಟ್ಟಿಲು ಒದೆಯಲಿ, ಹಾಲಿನ ಬಾಟಲಿಗೆ ಒದ್ದು ಬೀಳಿಸಲಿ, ಕಡೆಗೆ ಅವೇ ಪುಟ್ಟ ಕಾಲುಗಳಿಂದ ಗಂಡನ ಕೆನ್ನೆಗೋ, ಎದೆಗೋ ಒದ್ದು ಒಂದು ಸಂತೋಷದ ಘಳಿಗೆಗೆ ಸಾಕ್ಷಿಯಾಗಲಿ… ಇಂಥ ಸೆಂಟಿಮೆಂಟು ಜಗತ್ತಿನಲ್ಲಿ ಯಾವ ತಾಯಿಗೆ ತಾನೇ ಇರುವುದಿಲ್ಲ ಹೇಳಿ?

ಹೆರಿಗೆಗೂ ಮುನ್ನ ನಿಕ್‌ನ ತಾಯಿ ದಸ್ಕಾಗೂ ಇಂಥವೇ ಆಸೆಗಳಿದ್ದವು. ಮಗುವಿನ ಬಗ್ಗೆ, ಅದರ ಭವಿಷ್ಯದ ಬಗ್ಗೆ ಸಾವಿರ ಕನಸುಗಳಿದ್ದವು. ಆದರೆ ಮಡಿಲಿಗೆ ಬಂದ ಮಗುವಲ್ಲದ ಮಗುವನ್ನು ಕಂಡು ಆಕೆಗೆ ಅದೆಷ್ಟು ಸಂಕಟವಾಯಿತೋ- ಭಗವಂತ ಬಲ್ಲ. ವಿಶೇಷವೇನೆಂದರೆ, ಉಸಿರಾಡುತ್ತಿದೆ ಎಂಬುದನ್ನು ಬಿಟ್ಟರೆ ಅದು ಮಗುವೇ ಅಲ್ಲ ಎಂಬಂತಿದ್ದ ಮಗುವನ್ನು ಕಂಡು ಆಕೆ ಅಳುತ್ತಾ ಕೂರಲಿಲ್ಲ. ಹರಕೆಗೆ ಮುಂದಾಗಲಿಲ್ಲ. ತನ್ನ ಹಣೆ ಬರಹವನ್ನು ಹಳಿಯಲಿಲ್ಲ. ವಿಧಿಯನ್ನು ಶಪಿಸಲಿಲ್ಲ. ಬದಲಿಗೆ, ಪಾಲಿಗೆ ಬಂದದ್ದೇ ಪಂಚಾಮೃತ ಅಂದುಕೊಂಡಳು. ಆಕೆಯೇ ಸ್ವತಃ ನರ್ಸ್ ಆಗಿದ್ದಳಲ್ಲ? ಹಾಗಾಗಿ ಒಂದು ಅಂಗವಿಕಲ ಮಗುವನ್ನು ಹೇಗೆ ಬೆಳೆಸಬೇಕು ಎಂಬುದು ಉಳಿದೆಲ್ಲರಿಗಿಂತ ಚೆನ್ನಾಗಿ ಆಕೆಗೆ ಗೊತ್ತಿತ್ತು. ನಿಕ್‌ಗೆ ಮೂರು ವರ್ಷವಾದ ತಕ್ಷಣವೇ ಕಂಡೂ ಕಾಣದಂತಿದ್ದ ಎಡಗಾಲಿನ ಬೆರಳುಗಳ ಮಧ್ಯೆ ಚಾಕ್‌ಪೀಸ್ ಇಟ್ಟು ಅಕ್ಷರಾಭ್ಯಾಸ ಮಾಡಿಸಿಯೇ ಬಿಟ್ಟಳು.

ಮುಂದೆ ನಿಕ್‌ನನ್ನು ಸ್ಕೂಲಿಗೆ ಸೇರಿಸಲು ಹೋದರು ನೋಡಿ, ನಿಜವಾದ ಸಮಸ್ಯೆ ಶುರುವಾದದ್ದೇ ಆಗ. ಏಕೆಂದರೆ ಕೈಕಾಲುಗಳಿಲ್ಲದ ಈ ಮಗುವಿಗೆ ಪ್ರವೇಶ ನೀಡಲು ಯಾವ ಶಾಲೆಗಳ ಜನರೂ ಒಪ್ಪಲಿಲ್ಲ. ವಿಚಿತ್ರ ಸೃಷ್ಟಿ ಎಂಬಂತಿರುವ ಈ ಮಗುವನ್ನೇ ಉಳಿದ ಎಲ್ಲಾ ಮಕ್ಕಳೂ ನೋಡುತ್ತ ಕುಳಿತು ಓದನ್ನೇ ಮರೆಯಬಹುದು. ಈ ವಿಕಲಾಂಗ ಮಗು ಎಲ್ಲರಿಗೂ ಸಮಸ್ಯೆಯಾಗಬಹುದು. ‘ನಾನೇಕೆ ಉಳಿದವರಂತಿಲ್ಲ’ ಎಂಬ ಭಾವವೇ ಆ ಮಗುವನ್ನು ಡಿಪ್ರೆಷನ್‌ಗೆ ಈಡು ಮಾಡಬಹುದು. ಬರೆಯಲು ಆಗಲ್ಲವಲ್ಲ, ಹಾಗಾಗಿ ಪರೀಕ್ಷೆಯಲ್ಲೂ ಇವನಿಗೆ ರಿಯಾಯಿತಿ ಕೊಡಿ ಎಂದೂ ಕೇಳಬಹುದು ಎಂದೆಲ್ಲ ಯೋಚಿಸಿ, ಈ ಮಗುವಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು.

ಆದರೆ, ನಿಕ್‌ನ ತಾಯಿ ತಂದೆ ಈ ವಾದವನ್ನು ಒಪ್ಪಲಿಲ್ಲ. ನಮ್ಮ ಮಗು Mentally disabled ಅಲ್ಲ Just physically Handicapped. ನಾವು ಯಾವುದೇ ರಿಯಾಯಿತಿ ಕೇಳುತ್ತಿಲ್ಲ. ಹಾಗಿದ್ದರೂ ಶಾಲೆಗೆ ಪ್ರವೇಶವಿಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿ ಕೋರ್ಟ್‌ಗೇ ಹೋದರು. ಅವರ ಬೆಂಬಲಕ್ಕೆ ನಿಂತ ಕೋರ್ಟು, ನಿಕ್ ಥರದವರಿಗಾಗಿ ಶಿಕ್ಷಣ ರಂಗದಲ್ಲಿನ ಶಿಸ್ತಿನಲ್ಲಿ ಒಂದಷ್ಟು ಸಡಿಲ ನೀತಿ ಅನುಸರಿಸಿ ಎಂದು ಆದೇಶ ಹೊರಡಿಸಿತು.

ಮುಂದಿನದೆಲ್ಲ ನಿಕ್‌ನ ದಿಗ್ವಿಜಯದ ಕಥೆ. ಈ ಬದುಕಿನ ಮೇಲೆ, ಸೋಲಿನ ಮೇಲೆ ಅದ್ಯಾವುದೋ ಜನ್ಮಾಂತರದ ದ್ವೇಷವಿದೆ ಎಂಬಂತೆ ಆತ ಬದುಕಿಬಿಟ್ಟ. ಇಡೀ ತರಗತಿಗೆ ಓದುವುದರಲ್ಲಿ ಅವನೇ ಮೊದಲಿಗನಾದ! ಬಿಗಿಯಾಗಿ ಒಂದೇಟು ಹಾಕಿದರೆ ಅಪ್ಪಚ್ಚಿಯಾಗುವಂತಿದ್ದ ಎಡಗಾಲಿನ ಬೆರಳುಗಳ ಮಧ್ಯೆ ಪೆನ್ನು ಸಿಕ್ಕಿಸಿಕೊಂಡೇ ನೋಟ್ಸ್ ಬರೆದ. ಪರೀಕ್ಷೆ ಬರೆದ. ಸ್ಕೂಲ್‌ನ ಮ್ಯಾಗಜಿನ್‌ಗೆ ಲೇಖನ ಬರೆದ. ಅಷ್ಟೇ ಅಲ್ಲ, ಏಳನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಆ ಶಾಲೆಯ ಇತಿಹಾಸದಲ್ಲೇ ನಡೆದಿರಲಿಲ್ಲ ಎಂಬಂಥ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ.

ನಿಕ್ ಹೈಸ್ಕೂಲು ದಾಟಿ ಕಾಲೇಜಿಗೆ ಬರುವ ವೇಳೆಗೆ, ಮಗನಿಗೆ ಈಜು ಕಲಿಸಿದರೆ ಅವನ ಆರೋಗ್ಯಕ್ಕೆ ಒಳ್ಳೆಯದು ಅನಿಸಿತು. ನಿಕ್‌ನ ತಂದೆ ತಡ ಮಾಡಲಿಲ್ಲ. ಕೃತಕ ಕೈಕಾಲುಗಳನ್ನು ಖರೀದಿಸಿ, ಅವುಗಳನ್ನು ನಿಕ್‌ನ ದೇಹಕ್ಕೆ ಫಿಕ್ಸ್ ಮಾಡಿ, ಮಗನಿಗೆ ಎಲ್ಲ ಪೂರ್ವ ಸೂಚನೆಯನ್ನೂ ಕೊಟ್ಟು ಈಜು ಕಲಿಸಿಯೇಬಿಟ್ಟ! ಹಿಂದೆಯೇ ‘ಈ ಕೃತಕ ಕೈಗಳಿಂದಲೇ ಬರೆಯಲು ಪ್ರಯತ್ನಿಸು’ ಎಂದ. (ಅದಕ್ಕೂ ಮೊದಲೇ ಅದೇ ಕೃತಕ ಕೈ ಕಾಲು ಬಳಸಿ ಶೌಚಾಲಯದಲ್ಲಿ ಸ್ನಾನದ ಸಂದರ್ಭದಲ್ಲಿ ಬೇರೆಯವರಿಗೆ ಹೊರೆಯಾಗದಂತೆ ಬದುಕಲೂ ನಿಕ್‌ನ ತಂದೆ ಹೇಳಿಕೊಟ್ಟಿದ್ದ!)

ಅಪ್ಪ ಹೇಳಿದಂತೆಯೇ ಮಾಡಿದ ನಿಕ್‌ಗೆ ಬರೆಯುತ್ತ ಬರೆಯುತ್ತಲೇ ಕುತ್ತಿಗೆಯ ಸುತ್ತ ನೋವು ಕಾಣಿಸಿಕೊಂಡಿತು. ತಕ್ಷಣವೇ ಕೃತಕ ಕೈಗಳನ್ನು ಕಿತ್ತು ಬಿಸಾಕಿ ಮತ್ತೆ ಸ್ಪಂಜಿನಂಥ ಎಡಗಾಲಿಗೇ ಪೆನ್ನು ಸಿಕ್ಕಿಸಿಕೊಂಡು ಕಾಲೇಜಿಗೆ ಬಂದ. ಅಂಥ ಅಂಗವೈಕಲ್ಯದ ಮಧ್ಯೆಯೂ ಕಾಮರ್ಸ್‌ನಂಥ ಕಷ್ಟದ ಕೋರ್ಸು ಆಯ್ಕೆ ಮಾಡಿಕೊಂಡ. ಒಂದಲ್ಲ, ಎರಡು ಡಿಗ್ರಿ ಪಡೆದೂಬಿಟ್ಟ. ಮತ್ತು ಈ ಅವಧಿಯಲ್ಲಿ ಅಂತರ ಕಾಲೇಜು ಭಾಷಣ ಸ್ಪರ್ಧೆಗಳಲ್ಲಿ ಸತತವಾಗಿ ಮೂರು ಬಾರಿ ಮೊದಲ ಬಹುಮಾನ ಪಡೆದುಕೊಂಡ!

ಕೇಳಿ, ಡಿಗ್ರಿ ಪಡೆದನಲ್ಲ? ಆವರೆಗಿನ ಅವಧಿಯಲ್ಲಿ ತನ್ನ ಹೀನ ಬದುಕನ್ನು ನೆನಪಿಸಿಕೊಂಡು ಒಂದೇ ಒಂದು ಬಾರಿ ಕೂಡ ನಿಕ್ ಕಣ್ಣೀರು ಹಾಕಲಿಲ್ಲವಂತೆ. ಅವನ ಜತೆಗಿದ್ದವರಿಗೆ ಇದೇ ಒಂದು ಅಚ್ಚರಿ. ಇವನನ್ನು ಜಗತ್ತಿನ ಎಂಟನೇ ಅದ್ಭುತ ಎಂಬಂತೆ ನೋಡುತ್ತ ಅವರೆಲ್ಲ ಕೇಳಿದರಂತೆ: ‘ಅಲ್ಲಪ್ಪಾ, ಕೈ-ಕಾಲು ಎರಡೂ ಇಲ್ಲ. ಹಾಗಿದ್ರೂ ನೀನು ನಗುನಗ್ತಾನೇ ಇದೀಯಲ್ಲ? ಅದರ ಹಿಂದಿರುವ ಗುಟ್ಟೇನು? ನಿಂಗೆ ಕಣ್ಣೀರೇ ಬರೋದಿಲ್ವ?’

ಈ ಪ್ರಶ್ನೆಗಳಿಗೆ ನಿಕ್ ಹೇಳಿದ್ದಿಷ್ಟು: ಗೆಳೆಯರು, ಬಂಧುಗಳು, ಆಪ್ತರು ಬಳಿ ಬಂದಾಗ ಅವರ ಕೈಕುಲುಕಬೇಕು. ತಮಾಷೆಯಾಗಿ ಒಂದೇಟು ಹಾಕಬೇಕು. ಕೈಬೀಸಬೇಕು… ಇಂಥದೇ ಅಸೆಗಳು ನನಗೂ ಇವೆ. ಆದರೆ ನಾನಿರುವ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಇಷ್ಟಕ್ಕೂ ಇಲ್ಲದಿರುವುದನ್ನು ನೆನೆದು ಕಣ್ಣೀರು ಹಾಕಿದರೆ ಅಂಗವೈಕಲ್ಯ ಸರಿಯಾಗಿಬಿಡುತ್ತಾ? ಇಲ್ಲ ತಾನೆ? ಅಂದ ಮೇಲೆ ಅತ್ತು ಪ್ರಯೋಜನವೇನು? ದಿನ ನಿತ್ಯದ ಬದುಕಿನಲ್ಲಿ ಒಂದೆರಡು ಸಂದರ್ಭ ಬಿಟ್ಟರೆ ಕೈ ಕಾಲುಗಳ ಅಗತ್ಯ ನನಗಂತೂ ಕಂಡುಬರುತ್ತಿಲ್ಲ. ಅನಿವಾರ್ಯ ಅನ್ನಿಸಿದಾಗ ಕೃತಕ ಕೈ-ಕಾಲು ಬಳಸ್ತಾ ಇದೀನಿ. ನನ್ನ ಮಟ್ಟಿಗೆ ಹೇಳುವುದಾದರೆ ಕೈ, ಕಾಲು ಇಲ್ಲದಿರುವುದರಿಂದ ನನಗೆ ಸಮಸ್ಯೆ ಇಲ್ಲವೇ ಇಲ್ಲ. ಈಗಿನ ದೇಹ ಪ್ರಕೃತಿಯಿಂದ ನನಗೆ ಕೆಟ್ಟದ್ದಕ್ಕಿಂತ ಒಳ್ಳೆಯದೇ ಆಗಿದೆ…’

****
ನಿಕ್‌ಗೆ ಈಗ ಇಪ್ಪತ್ತಾರು ವರ್ಷ. ಅವನು ಹೇಗಿದ್ದಾನೆ ಎಂಬುದಕ್ಕೆ ಮೇಲಿನ ಚಿತ್ರ ಸಾಕ್ಷಿ. ಆಸ್ಟ್ರೇಲಿಯಾ ಸರ್ಕಾರ ಅವನನ್ನು ದೇಶದ ‘ಯುವರತ್ನ’ ಎಂದು ಕರೆದು ಗೌರವಿಸಿದೆ. ಆತನ ಹೋರಾಟದ ಬದುಕಿನ ಕಥೆ ಜಗತ್ತಿನುದ್ದಕ್ಕೂ ಮನೆಮಾತಾಗಿದೆ. ವೆಬ್‌ಸೈಟ್‌ನಲ್ಲಿ ಅವನ ಬದುಕಿನ ಕಥೆ ನೂರಾರು ಪುಟಗಳಲ್ಲಿ ದಾಖಲಾಗಿದೆ. ಸಿಎನ್‌ಎನ್-ಬಿಬಿಸಿ ಸೇರಿದಂತೆ, ಎಲ್ಲ ಹೆಸರಾಂತ ಛಾನೆಲ್‌ಗಳೂ ಅವನ ಸಂದರ್ಶನ ಪ್ರಸಾರ ಮಾಡಿವೆ. ಅವನಿಂದ ಕೈಕಾಲುಗಳನ್ನು ಕಿತ್ತುಕೊಂಡ ದೈವ (?) ಅದಕ್ಕೆ ಪ್ರತಿಯಾಗಿ ಅದ್ಭುತವಾಗಿ ಮಾತಾಡುವ ವರವನ್ನು ಅವನಿಗೆ ನೀಡಿದೆ. ಪರಿಣಾಮ, ವ್ಯಕ್ತಿತ್ವ ವಿಕಸನದ ಬಗ್ಗೆ ಪರಮಾದ್ಭುತ ಎಂಬಂತೆ ಮಾತಾಡುವದರಲ್ಲಿ ನಿಕ್ ಉಳಿದೆಲ್ಲರನ್ನೂ ಮೀರಿಸಿದ್ದಾನೆ. ಕೃತಕ ಕೈಗಳ ನೆರವಿಂದಲೇ ಕಂಪ್ಯೂಟರ್ ಬಳಸುತ್ತಾನೆ. ಗೇಮ್ಸ್ ಆಡುತ್ತಾನೆ. ಮೊಬೈಲ್‌ಗೆ ದನಿಯಾಗುತ್ತಾನೆ ಮತ್ತು, ಅಂಥ ಅಂಗವೈಕಲ್ಯದ ಮಧ್ಯೆಯೂ ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ಹೋಗಿ ಉಪನ್ಯಾಸ ಕೊಟ್ಟು ಬಂದಿದ್ದಾನೆ.

ಈ ವರ್ಷ, ನಿಕ್‌ನ ಷೆಡ್ಯೂಲ್ ಗಮನಿಸಿದರೆ ಗಾಬರಿಯಾಗುತ್ತದೆ. ಯಾಕೆಂದರೆ ಅವನು ಬ್ಯುಸಿಬ್ಯುಸಿಬ್ಯುಸಿ. ಒಂದೆರಡಲ್ಲ, ಇಪ್ಪತ್ತು ದೇಶಗಳು ಅವನನ್ನು ಉಪನ್ಯಾಸ ನೀಡುವಂತೆ ಆಹ್ವಾನಿಸಿವೆ. ಈತ ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ. ಹಾಗೆ ಹೋದ ಕಡೆಯಲ್ಲೆಲ್ಲ ನಿಕ್ ನಿರುದ್ವಿಗ್ನ ದನಿಯಲ್ಲಿ ತನ್ನದೇ ಬದುಕಿನ ಕಥೆ ಹೇಳುತ್ತಾನೆ. ಗೆಲ್ಲಬೇಕು ಎಂಬುದೇ ನಿಮ್ಮ ಮನದಲ್ಲಿದ್ದರೆ ಯಾವ ದೇವರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನನ್ನಂಥ ಪೆಕರನೇ ಈ ಲೆವೆಲ್‌ಗೆ ಬಂದಿರುವಾಗ ನಿಮ್ಮಂಥ ಪ್ರಚಂಡರು ಎಷ್ಟೆಲ್ಲ ಸಾಧನೆ ಮಾಡಬಹುದೋ ಯೋಚಿಸಿ ಅನ್ನುತ್ತಾನೆ. ಎಲ್ಲರ ಕಷ್ಟ ವಿಚಾರಿಸುತ್ತಾನೆ. ಅದಕ್ಕೆ ತನ್ನದೇ ಶೈಲಿಯಲ್ಲಿ ಉತ್ತರ ಹೇಳುತ್ತಾನೆ. ನೊಂದವರ ಕಂಬನಿ ಒರೆಸುತ್ತಾ ‘ಸ್ಮೈಲ್ ಪ್ಲೀಸ್’ ಎಂದು ಕಣ್ಣು ಹೊಡೆಯುತ್ತಾನೆ. ಅವನ ಅಮ್ಮನಂಥ ಮಾತು ಕೇಳುತ್ತ ಕುಳಿತರೆ ನಮಗೇ ಗೊತ್ತಿಲ್ಲದಂತೆ ಕಣ್ಣೀರು ಕೆನ್ನೆ ತೋಯಿಸಿರುತ್ತದೆ.

ಈ ಬ್ಯುಸಿ ಷೆಡ್ಯೂಲಿನ ಮಧ್ಯೆಯೂ no limbs, no legs, no worries (ಕೈ ಇಲ್ಲ, ಕಾಲಿಲ್ಲ, ಚಿಂತೆಯೂ ಇಲ್ಲ) ಎಂಬ ಪುಸ್ತಕ ಬರೆವ ಸನ್ನಾಹದಲ್ಲಿದ್ದಾನೆ ನಿಕ್. ಅವನ ಸಾಹಸದ ಬದುಕಿನ ಸಮಗ್ರ ವಿವರಣೆ ಬೇಕಿದ್ದರೆ ಇಂಟರ್‌ನೆಟ್‌ನಲ್ಲಿ ಗೂಗಲ್‌ಗೆ ಹೋಗಿ nick vujicic ಎಂದು ಸರ್ಚ್ ಮಾಡಿ. ನಿಮಗೆ ನಿಕ್‌ನ ವಿವರಗಳು ಮಾತ್ರವಲ್ಲ, ಆತ ಈಜು ಹೊಡೆಯುವ ಅಪರೂಪದ ದೃಶ್ಯ ಕೂಡ ನೋಡಲು ಸಿಗುತ್ತದೆ. ಈ ಜಗತ್ತಿನಲ್ಲಿ ನಿಜವಾದ ಹೀರೋಗಳು ಅಂದರೆ ನಿಕ್‌ನಂಥವರು. ಅಂಥವರ ಮುಂದೆ ಎಲ್ಲ ಇದ್ದೂ, ಸಣ್ಣದೊಂದು ಸಮಸ್ಯೆ ಬಂದರೂ ಗೊಳೋ ಎಂದು ಅಳುತ್ತಾ ಕೂರುವ ನಾವೆಲ್ಲಾ ಜೀರೋಗಳು ಅನಿಸೋದಿಲ್ವ?

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: