Old memories : From one home to another – ಮನೆಯಿಂದ ಮನೆಗೆ..

From one home to another
ಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ.
ವರುಷ ತುಂಬಿದರೆ ಹೊರಮನೆಯಿಂದ ಹೊರಮನೆಗೆ
ವರ್ಗ. ವರ್ಗವೆಂದರೆ ಮತ್ತೆ
ಗಂಟು ಮೂಟೆಯ ಬಿಗಿತ, ಇನ್ನಷ್ಟು ಆಯಾಸ.
ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು,
ಜರಡಿ, ತೊಟ್ಟಿಲು, ಒನಕೆ – ಇವುಗಳದೆ ಮೆರವಣಿಗೆ!

ಹೀಗೆ ಒಂದು ಮನೆಯಿಂದ ಮತ್ತೊಂದು ಮನೆಗೆ ಮೆರವಣಿಗೆ ಹೋಗುವ ಕಷ್ಟವನ್ನ ಕನ್ನಡದ ಹಿರಿಯ ಕವಿ ಕೆ.ಎಸ್.ನರಸಿಂಹ ಸ್ವಾಮಿ ತಮ್ಮ ಕವನದಲ್ಲಿ ತೋಡಿಕೊಂಡಿದ್ದಾರೆ. ನನ್ನ ಈ ಬರಹದ ಶೀರ್ಷಿಕೆ ಅವರ ಕವನದ್ದೇ. ಕವಿಯಂತೆ ನನ್ನಪ್ಪನಿಗೆ ವರ್ಗದ ಚಿಂತೆ ಇರಲಿಲ್ಲವಾದರೂ, ಮನೆಗಳನ್ನು ಬದಲಾಯಿಸುವ ತಲೆಬಿಸಿ ತಪ್ಪಿರಲಿಲ್ಲ. ನನಗೆ ಬುದ್ಧಿ ತಿಳಿದಾಗಿಂದಲೂ ಕಾಲಕಾಲಕ್ಕೆ ನಾವು ಗಂಟುಮೂಟೆ ಕಟ್ಟಿಕೊಂಡು ಮನೆಯಿಂದ ಮನೆಗೆ ಲಾಗ ಹಾಕುತ್ತಲೇ ಇದ್ದೆವು. ಪ್ರತಿ ಮನೆಗೆ ಬಂದಾಗಲೂ, ಈ ಮನೆಯಲ್ಲಿ ನಾಲ್ಕೈದು ವರ್ಷಗಳಾದರೂ ಇರುತ್ತೇವೆ ಅನ್ನುವ ಆತ್ಮವಿಶ್ವಾಸದಿಂದಲೇ ಬರುವುದೂ, ವರುಷ ಕಳೆಯುವುದರೊಳಗೆ ಮತ್ತೆ ಟ್ರಂಕಿಳಿಸುವುದು ಮಾಮೂಲಾಗಿ ಹೋಗಿತ್ತು.

ಮನೆ ಬದಲಾಯಿಸುವುದು ಅನ್ನುವುದು ನನಗಂತೂ ಭಾರೀ ಇಷ್ಟದ ಕ್ರಿಯೆ. ಅಪ್ಪ ತಿಂಗಳಿಡೀ ಅಲೆದು, ಎಲ್ಲಾದರೊಂದು ಮನೆ ನೋಡಿರುತ್ತಿದ್ದರು. ಆ ಕಷ್ಟಗಳೇನೂ ನನಗೋ, ಆಮ್ಮನಿಗೋ, ತಂಗಿಗೋ ಹೆಚ್ಚಿಗೆ ತಿಳಿಯುತ್ತಿರಲಿಲ್ಲ. ಯಾವುದಾದರೊಂದು ಭಾನುವಾರ ಮನೆ ಖಾಲಿ ಮಾಡುವ ಕೆಲಸ. ಒಂದು ಮೆಟಾಡೋರು ವ್ಯಾನು ಮನೆ ಮುಂದೆ ಬರುತ್ತಿತ್ತು. ಅಪ್ಪನ ಸ್ನೇಹಿತರು ನಾಲ್ಕೆಂಟು ಜನ ತಮ್ಮ ಬೈಕು, ಸ್ಕೂಟರುಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ಇಡೀ ಮನೆಯ ಸಮಸ್ತ ಬೇಕು ಬೇಡಗಳನ್ನೂ ಆ ವ್ಯಾನಿನೊಳಗೆ ಯಥಾ ಸಾಧ್ಯ ತುಂಬುವುದು ಎಲ್ಲರ ಧ್ಯೇಯ. ಆ ವ್ಯಾನಿನವನಿಗೆ ಯಾಕೆ ಹೆಚ್ಚಿಗೆ ದುಡ್ಡು ಕೊಡಬೇಕು ಅನ್ನುವ ಕಾರಣಕ್ಕೆ, ಒಂದೇ ಟ್ರಿಪ್ಪಿಗೆ ಅಷ್ಟೂ ಸಾಮಾನುಗಳೂ ಹೋಗಿ ಬಿಡಬೇಕು, ಉಳಿದದ್ದು ಬೈಕಲ್ಲಿ, ಸ್ಕೂಟರಲ್ಲಿ ತಂದರಾಯಿತು ಅನ್ನುವ ಮಾತುಕತೆ ಪ್ರತಿ ಮನೆ ಶಿಫ್ಟಿಂಗಿನಲ್ಲೂ ಕೇಳಿ ಬರುತಿತ್ತು. ಮತ್ತು ಹಾಗೆ ಒಂದೇ ಟ್ರಿಪ್ಪಲ್ಲಿ ಸರಂಜಾಮುಗಳೆಲ್ಲ ಹೋದ ದಾಖಲೆ ಯಾವತ್ತಿಗೂ ಇಲ್ಲ ಅನ್ನುವುದು ಬೇರೆ ವಿಚಾರ.

ಮೊದಲಿಗೆ ಕನ್ನಡಿ ಕಪಾಟು, ಅದರ ಕನ್ನಡಿ ಒಡೆಯದ ಹಾಗೆ ಬೆಡ್ ಒತ್ತಿಟ್ಟು ಪಕ್ಕದಲ್ಲಿ ಅಡ್ಡಡ್ಡಕ್ಕೆ ಮಂಚ, ಅದರ ಪಕ್ಕ ಇನ್ನೊಂದು ಗಾದ್ರೇಜ್, ಹಿಂದೆ ಮುಂದೆ ಪುಸ್ತಕಗಳ ಕಟ್ಟು, ಅದರ ಮೇಲೆ ಅಡುಗೆ ಮನೆ ಸಾಮಗ್ರಿಗಳು, ಆಮೇಲೆ ಸ್ವಲ್ಪ ಮುಂದೆ ಟೀಪಾಯಿ ಅದರ ಕೆಳಗೆ ಕೊಡಪಾನಗಳು, ಬೆಡ್‌ಶೀಟುಗಳು, ಬಟ್ಟೆಗಂಟು, ಕುರ್ಚಿಗಳು, ಎಲ್ಲಕ್ಕೂ ಮುಂದೆ ಒರಳುಕಲ್ಲು, ಸಿಲಿಂಡರು.. ಹೀಗೆ ಜೀವವಿದ್ದರೆ ಅವೆಲ್ಲ ಸಾಮೂಹಿಕವಾಗಿ ಉಸಿರುಗಟ್ಟಿ ಸಾಯುವಷ್ಟು ಒತ್ತೊತ್ತಾಗಿ ಎಲ್ಲವನ್ನ ತುಂಬಿಸಲಾಗುತ್ತಿತ್ತು. ಸಾಸಿವೆ ಬೀಳಲೂ ಜಾಗವಿಲ್ಲದಷ್ಟು ಪ್ಯಾಕ್ ಆಗುತ್ತಿತ್ತು ವ್ಯಾನು. ವ್ಯಾನಿನ ಡ್ರೈವರು ತನ್ನ ಗಾಡಿಯ ಕ್ಯಪಾಸಿಟಿಯನ್ನು ಕಣ್ತುಂಬ ತುಂಬಿಕೊಳ್ಳುತ್ತ ಕೆಳಗೆ ನಿಂತಿರುತ್ತಿದ್ದ. ಅವನಿಗೆ ಬೈಯುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ!

ಅಮ್ಮ ಮನೆ ಬಿಡುವ ದಿನ ಈ ಜಂಜಾಟದಲ್ಲಿ ಸಿಕ್ಕಿಕೊಳ್ಳುತ್ತಿರಲಿಲ್ಲ. ಹೋಗಿ ಬರುತ್ತೇವೆ ಅಂತ ಹೇಳಲು ಅಕ್ಕ ಪಕ್ಕದ ಮನೆಗಳಿಗೆಲ್ಲ ವಿಸಿಟ್ ಕೊಟ್ಟು, ಕಣ್ಣೆಲ್ಲ ಕೆಂಪು ಮಾಡಿಕೊಂಡು ಬರುತ್ತಿದ್ದಳು. ವ್ಯಾನಿನ ಮುಂದಿನ ಸೀಟಲ್ಲಿ ಕೂತು, ಬಂಗಾರ, ಮಿಕ್ಸರ್ರು ಇತ್ಯಾದಿ  ವ್ಯಾಲುಯೇಬಲ್ಲುಗಳನ್ನು ಹಿಡಿಕೊಂಡು ಕೂರುತ್ತಿದ್ದಳು. ನಾನು ಮೊದಮೊದಲು ಕನ್ನಡಿ, ಸೌಟು, ಕೊಡಪಾನ ಸಾಗಿಸುವ ಅಳಿಲು ಸೇವೆ ಮಾಡುತ್ತಿದ್ದವನು ಕಾಲಕ್ರಮೇಣ ವ್ಯಾನಿನ ಇಂಚಿಂಚೂ ತುಂಬಿಸುವ ಕೆಲಸಕ್ಕೆ ಬಡ್ತಿ ಹೊಂದಿದೆ.

ಏನಾದರೂ ಉಳಿದಿದೆಯೇ ಎಂದು ಒಬ್ಬರಲ್ಲ ಒಬ್ಬರು ಹತ್ತನೇ ಸಲ ಕೊನೆಯ ಬಾರಿ ನೋಡಿಕೊಂಡು ಬಂದಮೇಲೆ ವ್ಯಾನು ಹೊರಡುತ್ತಿತ್ತು. ಮಾಸಿದ ಗೋಡೆಯ, ಕಿತ್ತು ಹೋದ ಹಂಚಿನ “ಹೊಸ ಮನೆ”ಯೆದುರು ವ್ಯಾನಿನ ಹೆರಿಗೆಯಾದ ಮೇಲೆ, ಸ್ವಲ್ಪ ರೆಸ್ಟು. ಅಮ್ಮ ಅಲ್ಲೇ ಅಂಗಳದಲ್ಲಿ ಸಿಲಿಂಡರು-ಗ್ಯಾಸು ಫಟ್ ಅಂತ ಫಿಟ್ ಮಾಡಿ, ಚಾ ಮಾಡುತ್ತಿದ್ದಳು, ಅಪ್ಪ ಅವಲಕ್ಕಿ ಕಲಸಿದರೆ, ಕವುಚಿಟ್ಟ ಹಂಡೆ ಮೇಲೆ, ಇಷ್ಟೆತ್ತರ ಪೇಪರು ರಾಶಿಯ ಮೇಲೆ, ಒರಳು ಕಲ್ಲು, ಪುಸ್ತಕದ ಕಟ್ಟು, ಬಟ್ಟೆ ಗಂಟು- ಹೀಗೆ ಸದ್ಯಕ್ಕೆ ಯಾವುದೇ ಅಸ್ತಿತ್ವವಿಲ್ಲದ ವಸ್ತುಗಳ ಮೇಲೆ ಕೂತು ಎಲ್ಲರದೂ ಉಪಹಾರ ಸೇವನೆ. ಆಮೇಲೆ ಎಲ್ಲ ಸೇರಿ ಸದ್ಯಕ್ಕೆ ಅವಶ್ಯಕತೆ ಇರುವ ಸಾಮಗ್ರಿಗಳ ಪ್ರತಿಷ್ಠಾಪನೆ ಮಾಡಿ ಹೊರಡುತ್ತಿದ್ದರು.

ಮೊದಲಿನ ಮನೆಗಿಂತ ಅಪ್ಪ ನೋಡಿರುತ್ತಿದ್ದ ಹೊಸ ಮನೆ ದೊಡ್ಡದಾಗಿರುತ್ತಿತ್ತು. ಅಷ್ಟಿದ್ದರೂ, ಅಮ್ಮ ಮಾತ್ರ ಒರಳು ಕಲ್ಲಿಡಲು ಸರಿಯಾದ ಜಾಗವಿಲ್ಲವೆಂತಲೋ, ಮಂಚ ಇಟ್ಟ ಮೇಲೆ ಕಾಲಿಡಲೂ ಸಾಧ್ಯವಿಲ್ಲ ಅಂತಲೋ ಕಯ್ಯ ಪಯ್ಯ ಮಾಡುತ್ತ ನಾಲ್ಕು ದಿನ ಓಡಾಡಿಯೇ ಸಿದ್ದ. ಮತ್ತೊಂದು ಸೋಜಿಗ ಅಂದರೆ, ಹಳೆ ಮನೆಯಲ್ಲಿ ಇನ್ನೂ ಕಡಿಮೆ ಜಾಗ ತಿನ್ನುತ್ತಿದ್ದ ಸರಂಜಾಮುಗಳೆಲ್ಲ ಇಲ್ಲಿ ಮತ್ತೂ ಹೆಚ್ಚಿನ ಸ್ಪೇಸ್ ಬೇಡುತ್ತಿದ್ದವು! ಹೊಸ ಮನೆ ಇಡೀ, ಮೊದಲ ಮನೆಯ ಎರಡಷ್ಟಿದ್ದರೂ, ಮತ್ತೆ ಕಿಷ್ಕಿಂದೆಯಾಗೇ ಸಿದ್ಧ.

ತಂಗಿಗೂ ನನಗೂ ಕೆಲದಿನ ಖಾಲಿ ಖಾಲೀ ಭಾವ. ಹಳೆಯ ಗೆಳೆಯ-ಗೆಳತಿಯರಿಗೆಲ್ಲ ಖೋ ಕೊಟ್ಟು ಬಂದ ಮೇಲೆ, ಇಲ್ಲಿ ಹೊಸಬರನ್ನು ಹುಡುಕಿಕೊಳ್ಳಬೇಕು. ಹೊಸ ಮುಖಗಳೋ, ನಮ್ಮನ್ನ ಕುತೂಹಲದ ಕಣ್ಣುಗಳಲ್ಲಿ ನೋಡುತ್ತ, ಆರೋಗ್ಯಕರ ದೂರ ಕಾಪಾಡಿಕೊಳ್ಳುತ್ತಿದ್ದವು. ನಾನು ಅವರುಗಳು ಕ್ರಿಕೆಟ್ ಆಡುವಾಗ ದೂರ ಕೂತು ನೋಡಿ, ಬಾಲ್ ಹೆಕ್ಕಿಕೊಟ್ಟು, ಮೆಲ್ಲನೆ ನಕ್ಕು, ನನಗೂ ಆಡಲು ಬರುತ್ತದೆ ಅನ್ನುವುದನ್ನ ತಿಳಿಸಿ, ಅವರೊಳಗೊಂದಾಗಬೇಕಿತ್ತು. ಪ್ರತಿ ಬಾರಿಯೂ ಅದದೇ ರೀತಿಯ ಘಟನೆಗಳು ಪುನರಾವರ್ತನೆಗೊಳ್ಳುತ್ತಿದ್ದುದರಿಂದ ಹೆಚ್ಚಿನ ಸಮಸ್ಯೆಯೇನೂ ಆಗುತ್ತಿರಲಿಲ್ಲ.

ಅಪ್ಪನಂತೂ ಹೊಸ ಉತ್ಸಾಹದಲ್ಲಿ ಕೆಲಸ ಹಚ್ಚಿಕೊಳ್ಳುತ್ತಿದ್ದರು. ಮನೆ ಹಿತ್ತಿಲ ತೆಂಗಿನ ಗಿಡಕ್ಕೆ ನೀರು ಹೋಗುವಂತೆ ಮಾಡುವುದು, ಮಾವಿನ ಗಿಡಕ್ಕೆ ಗೊಬ್ಬರ ಹಾಕಿಸುವುದು ಹೀಗೆ. ಹೇಗಂದರೂ ಇನ್ನು ಮೂರು ವರುಷ ನಮ್ಮದೇ ಮನೆ ಅನ್ನುವ ವಿಶ್ವಾಸ. ಮಾವಿನ ಗಿಡದಲ್ಲಿ ಕಾಯಿ ಗೊಂಚಲು ಬರುವುದಕ್ಕೆ ಸರಿಯಾಗಿ, ತೆಂಗಿನ ಮರದಲ್ಲಿ 25 ಕಾಯಿಯ ಗೊನೆ ಜೋತಾಡುವ ಸಮಯಕ್ಕೆ, ಮನೆ ಯಜಮಾನ ಬರುತ್ತಿದ್ದ, ಮಾಸ್ಟ್ರೇ, ನಮ್ಮ ಮಗ ದುಬಾಯಿಯಿಂದ ಬರುತ್ತಾನೆ, ಇಲ್ಲಿಯೇ ಸೆಟ್ಲು ಆಗ್ತಾನಂತೆ, ನೀವು ಇನ್ನು ಒಂದು ತಿಂಗಳಿಗೆ.. ಅಪ್ಪ ಭಾವನೆಗಳನ್ನ ಅಡಗಿಸಿಟ್ಟು, “ಹೂಂ” ಅನ್ನುತ್ತಿದ್ದರು. ಅಮ್ಮ ಅಟ್ಟದ ಮೇಲಿಂದ ದೊಡ್ಡ ಬ್ಯಾಗು ತೆಗೆದು ಧೂಳು ಝಾಡಿಸುತ್ತಿದ್ದಳು.

ಅಪ್ಪ ಮತ್ತು ನಾನು, ಅವರ ಯಾವುದೇ ಸಹೋದ್ಯೋಗಿಗಳ ಮನೆ ಶಿಫ್ಟಿಂಗ್ ಸಮಯದ ಖಾಯಂ ಸಹಾಯಕರು. ವ್ಯಾನಿಗೆ ಸರಂಜಾಮು ತುಂಬಿಸುವುದರಿಂದ ಹಿಡಿದು ಮತ್ತೇನಾದರೂ ಟೆಕ್ನಿಕಲ್ ಸಮಸ್ಯೆಗಳಿದ್ದರೆ, ಅಪ್ಪನೇ ಪರಿಹಾರ ಸೂಚಿಸಬೇಕಿತ್ತು. ಅತಿ ಹೆಚ್ಚು ಮನೆ ಬದಲಾವಣೆ ಮಾಡಿದ್ದರಿಂದ, ಎಂತಹ ತೊಂದರೆಗಳಿಗಾದರೂ  ಸಣ್ಣ ಬಾಗಿಲಲ್ಲಿ ದೊಡ್ಡ ಕಪಾಟನ್ನ ಯಾವ ರೀತಿ ಒಳ ಸಾಗಿಸಬೇಕು, ಇಬ್ಬರೇ ಯಮತೂಕದ ಒರಳಕಲ್ಲು ಸಾಗಿಸುವ ಸುಲಭವಿಧಾನ ಹೇಗೆ, ಗಾಜಿನ ವಸ್ತುಗಳು ಒಡೆಯದಂತೆ ಪ್ಯಾಕಿಂಗ್ ಮಾಡೋದು ಯಾವ ತರ- ಸೊಲ್ಯೂಶನ್ನು ಸಿದ್ಧವಿರುತ್ತಿತ್ತು. ಇಂದು ಅಪ್ಪನೂ ಸೇರಿದಂತೆ ಅವರ ಹೆಚ್ಚಿನ ಸಹೋದ್ಯೋಗಿಗಳದು ಸ್ವಂತ ಮನೆ. ಆದರೂ ಆವಾಗೀವಾಗ ಯಾರಾದರೂ ಬಾಡಿಗೆ ಮನೆ ಖಾಲಿ ಮಾಡುತ್ತಾರೆ. ಮತ್ತಿದೇ ಕೆಲಸ ಕಾರ್ಯಗಳು ಪುನರಾವರ್ತನೆಯಾಗುತ್ತದೆ.

ಇತ್ತೀಚೆಗೆ ನಮ್ಮ ಪಕ್ಕದ ಮನೆಯವರು ತಮ್ಮ ಮನೆ ಶಿಫ್ಟಿಂಗ್ ಮಾಡಿದರು. ಮೂವರ್ಸ್ ಅಂಡ್ ಪ್ಯಾಕರ್ಸಿನದೊಂದು ಲಾರಿ ಬಂತು. ಪಟಾಪಟ್ ಅಂತ ಒಂದಿಷ್ಟು ಜನ ಕೆಲಸದಾಳುಗಳು ಲಾರಿಗೆ ಮನೆಸಾಮಾನುಗಳನ್ನ ತುಂಬಿದರು, ಹೊರಟರು. ನನ್ನಮ್ಮನ ಹಾಗೆ ಆ ಮನೆಯ ಹೆಂಗಸೇನೂ ಹೋಗಿ ಬರುತ್ತೇವೆ ಅನ್ನಲು ಬರಲಿಲ್ಲ, ಅವರ ಸ್ನೇಹಿತರು ಯಾರೂ ಬಂದಂತೆ ಕಾಣಲಿಲ್ಲ. ಹೊಸ ಮನೆಗೆ ಹೋಗಿರುತ್ತಾರಲ್ಲ, ಅಲ್ಲಿ ಕೆಲಸದಾಳುಗಳುಗಳಿಗೆ ಟೀ ಮಾಡಿಕೊಟ್ಟಿರೋದೂ ಡೌಟೇ, ಅಲ್ವಾ?

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಶ್ರೀನಿಧಿ ಡಿಎಸ್ - ಕಾಡುಹರಟೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: