Paradise regained – Kannada Fiction -ಸಣ್ಣಕತೆ :ಬೆಂಗಳೂರ್ ಟು ಮೈಸೂರ್

Paradise regained - Kannada Fiction
ಪ್ರಯಾಣದ ಸಮಯದಲ್ಲಿ ಸಣ್ಣಸಣ್ಣ ಸಂಗತಿಗಳು ದೊಡ್ಡದಾಗಿ, ದೊಡ್ಡ ಸಂಗತಿಗಳು ಸಣ್ಣಸಣ್ಣದಾಗಿ ಕಾಣಿಸಲಾರಂಭಿಸುತ್ತವೆ. ಅದು ಯಾಕೆ ಹೀಗೆ ಎಂದು ನೋಡಿದರೆ..
ಈ ಹುಡುಗ ದಿಢೀರನೆ ಕಿಟಕಿ ತೆಗೆದು-ಹೊರಗೆ ಕೈ ಹಾಕಿ ‘ಅಪ್ಪಾ, ಮಳೆ, ಮಳೆ, ಮಳೆ ಹನೀ ಕೈ ಮೇಲೆ ಬಿದ್ದು ಬಿಡ್ತೂ” ಎಂದು ಉದ್ವೇಗದಿಂದ ಚೀರಿದ. ಅದೇ ವೇಳೆಗೆ ಕಿಟಕಿಯಿಂದ ತೂರಿಬಂದ ಹತ್ತಿಪ್ಪತ್ತು ಹನಿಗಳು ಇವನ ಎದುರು ಕುಳಿತಿದ್ದ ಬೆಡಗಿಯ ರೇಷ್ಮೆ ಸೀರೆಯ ಮೇಲೆ ಬಿದ್ದುಬಿಟ್ಟವು..

ಪ್ಯಾಸೆಂಜರ್ ರೈಲಿನ ಪ್ರಯಾಣ ಆ ಭಗವಂತನಿಗೇ ಪ್ರೀತಿ. ಆ ಜನ, ಆ ರಶ್ಶು, ಅಲ್ಲಿನ ಕೊಳಕು, ನೀರು ಕಾಣದ ಟಾಯ್ಲೆಟ್ಟು, ಭಿಕ್ಷುಕರ ಚೀರಾಟ, ಕಾಫಿ, ಟೀ ಮಾರುವವರ ಹಾರಾಟ, ಪ್ರತಿ ಬೋಗಿಯಲ್ಲೂ ದಂಡಿಯಾಗಿ ಬಿದ್ದಿರುವ ಕಸ.. ಉಫ್, ಬೇಡಪ್ಪಾ, ಷಟಲ್ ಟ್ರೈನ್‌ನ ಸಹವಾಸವೇ ಬೇಡ. ಹೋದ್ರೆ ಐವತ್ತು ರೂ. ತಾನೆ? ಹೋಗ್ಲಿ. ಆರಾಮಾಗಿ ಎಕ್ಸ್‌ಪ್ರೆಸ್ ಟ್ರೈನ್‌ನಲ್ಲೇ ಹೋಗೋದು ಸರಿ. ಟಿಕೆಟ್ ರೇಟು ಜಾಸ್ತಿ ಅಲ್ವಾ? ಹಾಗಾಗಿ ರಶ್ಶಂತೂ ಇರಲ್ಲ. ಆರಾಮಾಗಿ ಹೋಗಬಹುದು.. ಇಂಥದೊಂದು ನಂಬಿಕೆಯಿಂದಲೇ ಎಲ್ಲರೂ ರೈಲು ಹತ್ತಿದ್ದರು. ಆದರೆ ಅವರ ನಂಬಿಕೆ ಉಲ್ಟಾ ಆಗಿ ಬಿಟ್ಟಿತ್ತು.

ರೈಲಲ್ಲಿ ವಿಪರೀತ ರಶ್ ಇತ್ತು. ಆ ರಷ್‌ನಲ್ಲೂ ಎಲ್ಲರಿಗೂ ಸೀಟು ಸಿಕ್ಕಿತ್ತು ಎಂಬುದೇ ಸಮಾಧಾನದ ಸಂಗತಿ. ಹಿಂದಿನಿಂದ ಆರನೇ ಬೋಗಿಯಲ್ಲಿ ಏನಾಗಿತ್ತೆಂದರೆ-ಅಜಮಾಸು 50 ದಾಟಿದ ವ್ಯಕ್ತಿಯೊಬ್ಬ ಕುಳಿತಿದ್ದ. ಅವನಿಗೆ ಎದುರಾಗಿಯೇ ಹೊಸಬಟ್ಟೆ ಧರಿಸಿದ್ದ ಇಪ್ಪತ್ತೈದರ ಹುಡುಗನೂ ಇದ್ದ. ಈ ಐವತ್ತರ ವೃದ್ಧನ ಪಕ್ಕ, ಹೊಸ ರೇಷ್ಮೆ ಸೀರೆ ಉಟ್ಟ ಬೆಡಗಿಯೊಬ್ಬಳು ಕೂತಿದ್ದಳು. ಎಲ್ಲರ ಹಸಿದ ಕಣ್ಣೂ ಅವಳ ಮೇಲೇ! ಅವಳು ಪ್ರತಿ ಹತ್ತು ನಿಮಿಷಕ್ಕೊಮ್ಮೆ ಕತ್ತೆತ್ತಿ ನೋಡುವುದು, ತನ್ನನ್ನೇ ಯಾರಾದರೂ ತಿನ್ನುವಂತೆ ನೋಡುತ್ತಿದ್ದರೆ ಛಕ್ಕನೆ ಸೆರಗು ಸರಿ ಮಾಡಿಕೊಳ್ಳುವುದು..ಹೀಗೇ ಮಾಡುತ್ತಿದ್ದಳು.

ಹೀಗಿದ್ದಾಗಲೇ ಜೋರಾಗಿ ವಿಷಲ್ ಹಾಕಿ ರೈಲು ಹೊರಟು ಬಿಟ್ಟಿತು. ಒಂದೆರಡು ನಿಮಿಷದ ನಂತರ ವೃದ್ಧನ ಎದುರಿಗಿದ್ದ ಆ ಹುಡುಗ ಇಷ್ಟಗಲಕ್ಕೆ ಕಣ್ಣು ಅಗಲಿಸಿ-‘ಅಪ್ಪಾ, ರೈಲು ಎಷ್ಟೊಂದು ಚನ್ನಾಗಿದೆ ಅಲ್ವ? ಭಾಳಾ ಜೋರಾಗಿ ಓಡ್ತಾಯಿದೆ” ಅಂದುಬಿಟ್ಟ. ಈ ಮಾತು ಕೇಳಿದ್ದೇ, ಆ ಬೋಗಿಯಲ್ಲಿ ಕೂತಿದ್ದವರೆಲ್ಲ ಒಮ್ಮೆ ಈ ಹುಡುಗನನ್ನೂ, ಅವನಿಗೆ ಎದುರಾಗಿ ಕೂತಿದ್ದ ಆ ತಂದೆಯನ್ನೂ ಅಚ್ಚರಿಯಿಂದ ನೋಡಿದರು. ಆ ಮುದುಕನ ಪಕ್ಕ ಕುಳಿತಿದ್ದ ಸುಂದರಿ, ಓದುತ್ತಿದ್ದ ಮ್ಯಾಗಜೀನ್‌ನಿಂದ ಸುಮ್ಮನೇ ಒಮ್ಮೆ ಇವರತ್ತ ನೋಡಿ ಮುಸಿಮುಸಿ ನಕ್ಕಳು.

ರೈಲು ಕೆಂಗೇರಿಗೆ ಬಂದು ನಿಂತದ್ದೇ ತಡ- ಸಪೋಟ, ಮೂಸಂಬಿ, ಕಡ್ಲೆಕಾಯಿ ಮಾರುವವರು ಹತ್ತಿಕೊಂಡರು. ಹಿಂದೆಯೇ ಕಾಫಿ ಮಾರುವ ಹುಡುಗರೂ. ಕಾಫಿ, ಕಾಫೀ, ಬಿಸ್ಸಿಬಿಸೀ ಕಾಫಿ.. ಎಂದು ಕೂಗಿಕೊಂಡು ಅವರು ಬಂದರಲ್ಲ, ಆ ಕ್ಷಣವೇ ಈ ಹುಡುಗ ಅದೇ ಜೋರು ದನಿಯಲ್ಲಿ-ಅಪ್ಪಾ, ಕಾಫಿ ಮಾರುವವರು ಕಾಫಿ ಕಲರ್ ಡ್ರೆಸ್‌ನಲ್ಲೇ ಇದಾರಲ್ಲ, ನೋಡಪ್ಪ ಆ ಕಡೆಗೇ…” ಅಂದ. ಸುತ್ತ ಕುಳಿತವರು ಮತ್ತೆ ಮುಖ ಮುಖ ನೋಡಿಕೊಂಡರು. ಕೆಲವರಂತೂ ಸಂಜ್ಞೆಯಲ್ಲೇ ಎಲ್ಲೋ ಮೆಂಟಲ್ ಪಾರ್ಟಿ ಇರಬೇಕು ಎಂದು ತೋರಿಸಿಯೂಬಿಟ್ಟರು. ಈ ಹುಡುಗನ ಅಪ್ಪ ಅದೇನನ್ನೂ ನೋಡಲಿಲ್ಲ. ಈ ಹುಡುಗನಿಗೋ, ನೋಡಿದ್ದೇನೂ ಅರ್ಥವಾಗಲಿಲ್ಲ.

ಒಂದೆರಡು ನಿಮಿಷ ಕಳೆದಿರಬೇಕು. ಆಗಲೇ ‘ಹತ್ರುಪಾಯ್ಗೆ ಐದು, ಐದಕ್ಕೆ ಹತ್ರುಪಾಯ್. ತಾಜಾ ತಾಜಾ ಸಪೋಟ ಸ್ವಾಮೀ” ಎಂದುಕೊಂಡೇ ಹೆಂಗಸೊಬ್ಬಳು ಬುಟ್ಟಿ ಇಳಿಸಿದಳು. ಅದರೊಳಗೆ ನಾಜೂಕಾಗಿ ಜೋಡಿಸಿದ ಸಪೋಟಾ ಇದ್ದವು. ಈ ಹುಡುಗ ಆ ಬುಟ್ಟಿಯನ್ನೇ ಆಸೆಯಿಂದ ನೋಡಿದವನು ಕೂತ ಜಾಗದಿಂದ ದಿಢೀರನೆ ಎದ್ದು, ಒಂದಿಬ್ಬರನ್ನು ಎಡವಿ ಛಕ್ಕನೆ ಆ ಬುಟ್ಟಿಯತ್ತ ಕೈ ಚಾಚಿದ್ದಕ್ಕೂ, ದಿಢೀರ್ ವೇಗ ಪಡೆದುಕೊಂಡ ರೈಲು ಒಂದು ಜೆರ್ಕ್ ಪಡೆದುಕೊಂಡಿದ್ದಕ್ಕೂ ಸರಿ ಹೋಯಿತು. ಈ ಸಂದರ್ಭದಲ್ಲಿ ಹಣ್ಣಿಗೆ ತಾಗಬೇಕಿದ್ದ ಅವನ ಕೈ ತುಸು ಜೋರಾಗಿ ಬುಟ್ಟಿಗೇ ತಾಗಿಬಿಟ್ಟಿತು. ಅಷ್ಟೆ, ಬುಟ್ಟಿಯೊಳಗಿದ್ದ ಹಣ್ಣುಗಳು ಬೋಗಿಯಲ್ಲೆಲ್ಲಾ ಚೆಲ್ಲಾಡಿದವು. ಆ ಹೆಂಗಸು ತಕ್ಷಣವೇ ದುರ್ಗಿಯ ಗೆಟಪ್ಪಿನಲ್ಲಿ ನಿಂತು- ‘ಅಯ್ಯೋ ನಿನ್ ಮನೆ ಹಾಳಾಗ. ಬುಟ್ಟೀಲಿದ್ದ ಹಣ್ಣೆಲ್ಲ ಚೆಲ್ಲಿದೆಯಲ್ಲೋ. ಎತ್ತಿಕೊಡೋಕೆ ನಿಮ್ ತಾತಾ ಬರ್‍ತಾನಾ? ಬೋಣಿ ವ್ಯಾಪಾರವೇ ಹೀಗಾಯ್ತು. ಮುಂದೆ ಇಡೀ ದಿನ ನಿನ್ನಂಥ ತರ್‍ಲೆ ಮುಂಡೇವೇ ಸಿಕ್ತವೆ. ಥೂ ಥೂ… ನಡಿ ಅತ್ಲಾಗೆ” ಎಂದು ಗದರಿಸಿಬಿಟ್ಟಳು. ಈ ಹುಡುಗ ಪೆಚ್ಚಾದ. ಅವನ ತಂದೆ ಏನೋ ಹೇಳಲು ಹೋದವರು ಅದೇಕೋ ಸುಮ್ಮನಾಗಿಬಿಟ್ಟರು.

ರೈಲು ಚನ್ನಪಟ್ಟಣಕ್ಕೆ ಬಂದಿತ್ತು. ಅಲ್ಲಿದ್ದ ಬೋರ್ಡನ್ನೇ ಮತ್ತೆ ಮತ್ತೆ ಗಮನಿಸಿದ ಹುಡುಗ- ‘ಮೇಲಿರುವುದು ಕನ್ನಡ, ಕೆಳಗಿರುವುದು ಇಂಗ್ಲಿಷ್ ಅಲ್ವೇನಪ್ಪಾ” ಅಂದುಬಿಟ್ಟ. ಮ್ಯಾಗಝಿನ್ ಹಿಡಿದಿದ್ದ ರೇಷ್ಮೆ ಸೀರೆಯ ಬೆಡಗಿ ಡಿಸ್ಟರ್ಬ್ ಆದಂತಾಗಿ ಕೂತಲ್ಲೇ ಕೊಸರಾಡಿದಳು. ಈ ತಂದೆ ಆ ಮಗನಿಗೆ ಅದೇನೋ ಸೂಚನೆ ಕೊಟ್ಟರು. ಅವನು ಅದೇನನ್ನೂ ಗಮನಿಸದೆ ಸುಮ್ಮನೇ ಎದ್ದು ನಡೆದು ಹೋದ. ಐದು ನಿಮಿಷದ ನಂತರ ಮರಳಿ ಬಂದವನು ತನ್ನ ಜಾಗದಲ್ಲಿ ಕೂತು-‘ಅಪ್ಪಾ, ಈ ಬೋಗೀಲಿ ಒಂದಲ್ಲ, ನಾಲ್ಕು ಟಾಯ್ಲೆಟ್ ಇವೆ. ಎರಡಕ್ಕೆ ನೀರು ಹಾಕಿಲ್ಲ. ಇನ್ನೆರಡು ಚನ್ನಾಗಿವೆ. ಈಗ ಹೋಗಿಬಂದೆ” ಅಂದೇಬಿಟ್ಟ.

ಈ ಮಾತಿಗೆ ಆ ಬೋಗಿಯಲ್ಲಿದ್ದ ಗಂಡಸರೆಲ್ಲ ಮುಸಿ ಮುಸಿ ನಕ್ಕರು. ಆದರೆ ಈ ರೇಷಿಮೆ ಸೀರೆಯ ಬೆಡಗಿ ‘ಇಶ್ಶೀ….” ಅಂದುಬಿಟ್ಟಳು. ಅಷ್ಟು ಹೊತ್ತಿಂದ ಅವಳ ಒಂದು ನಗೆಗಾಗಿ ಕಾದು ಕೂತಿದ್ದವರೆಲ್ಲ ಛಕ್ಕನೆ ತಾವೂ ಮಾತಿನ ಗೆಟಪ್ ಬದಲಿಸಿ ‘ಇಶ್ಶೀ” ಅನ್ನುತ್ತಾ ಮೂಗು ಒರೆಸಿಕೊಂಡರು. ಈ ಹುಡುಗಿಯ ಮುಂದೆ ಹೀರೋ ಆಗಬೇಕು ಎಂಬ ಮಹದಾಸೆಯಿಂದಲೇ ಒಂದಿಬ್ಬರು ‘ಈ ಹುಡುಗ ಎಲ್ಲೋ ಮೆಂಟ್ಲು. ಈ ಮುದುಕ ಮೋಸ್ಟ್‌ಲೀ ಕಿವುಡ. ಇಬ್ರೂ ಸೇರ್ಕೊಂಡು ಈ ಪಾಪದ ಮೇಡಂಗೆ ಕಿರಿಕಿರಿ ಮಾಡ್ತಾ ಇದಾರೆ” ಅಂದೂಬಿಟ್ಟರು. ಆಗ ಕೂಡ ಆ ಮುದುಕ ಪ್ರತಿಕ್ರಿಯಿಸಲಿಲ್ಲ.

ಅಷ್ಟರಲ್ಲೇ ಶಿಂಷಾ ನದಿಯ ಬ್ರಿಡ್ಜ್ ಬಂತಲ್ಲ, ಈ ಹುಡುಗ ಕಿಟಕಿಯಿಂದ ಕೆಳಗೆ ನೋಡಿ ‘ಅಪ್ಪಾಜೀ… ಕೆಳಗೆ ನದಿ ಹರೀತಿದೆ. ಮೇಲೆ ರೈಲು, ಬೊಂಬಾಟ್, ಬೊಂಬಾಟ್” ಎಂದು ಚೀರಿಕೊಂಡ. ಈ ಮಧ್ಯೆಯೇ ಒಮ್ಮೆ ಬೋಗಿಯಲ್ಲಿದ್ದ ಲೈಟು ಆರಿಸುವುದು, ಫ್ಯಾನ್‌ನ ಸ್ವಿಚ್ ಅದುಮಿ ನಿಲ್ಲಿಸುವುದು, ಒಂದೆರಡು ನಿಮಿಷಗಳ ನಂತರ ಛಕ್ಕನೆ ಲೈಟ್ ಹಾಕಿ ಆ ಬೆಳಕನ್ನೇ ಬೆರಗಿನಿಂದ ನೋಡುವುದು… ಹೀಗೇ ಮಾಡುತ್ತಿದ್ದ. ಈ ಹುಡುಗನ ಚಿಲ್ಲರೆ ವರ್ತನೆಯಿಂದ ಆ ಬೋಗಿಯಲ್ಲಿದ್ದ ಎಲ್ಲರಿಗೂ ವಿಪರೀತ ಸಿಟ್ಟು ಬಂದಿತ್ತು ನಿಜ. ಆದರೆ ಆ ಮುದುಕನ ಮುಖ ನೋಡಿಕೊಂಡು ಎಲ್ಲರೂ ತೆಪ್ಪಗಿದ್ದರು.

ರೈಲು ಮದ್ದೂರು ದಾಟಿ ಐದಾರು ನಿಮಿಷಗಳಾಗಿದ್ದವು ಅಷ್ಟೆ. ಇದ್ದಕ್ಕಿದ್ದಂತೆಯೇ ಮಳೆ ಸುರಿಯತೊಡಗಿತು. ಎಲ್ಲರೂ ದಡಬಡನೆ ಕಿಟಕಿ ಹಾಕಿಕೊಂಡರು. ಒಂದೆರಡು ನಿಮಿಷದ ನಂತರ-ಈ ಹುಡುಗ ದಿಢೀರನೆ ಕಿಟಕಿ ತೆಗೆದು-ಹೊರಗೆ ಕೈ ಹಾಕಿ- ‘ಅಪ್ಪಾ, ಮಳೆ, ಮಳೆ, ಮಳೆ ಹನೀ ಕೈ ಮೇಲೆ ಬಿದ್ದು ಬಿಡ್ತೂ” ಎಂದು ಉದ್ವೇಗದಿಂದ ಚೀರಿದ.ಅದೇ ವೇಳೆಗೆ ಕಿಟಕಿಯಿಂದ ತೂರಿ ಬಂದ ಹತ್ತಿಪ್ಪತ್ತು ಹನಿಗಳು ಇವನ ಎದುರು ಕುಳಿತಿದ್ದ ಬೆಡಗಿಯ ರೇಷ್ಮೆ ಸೀರೆಯ ಮೇಲೆ ಬಿದ್ದುಬಿಟ್ಟವು. ಮರುಕ್ಷಣವೇ ದನಿ ಎತ್ತರಿಸಿದ ಆಕೆ ‘ರೀ ಮಿಸ್ಟರ್, ನಿಮ್ಮ ಮಗನಿಗೆ ತಲೆ ನೆಟ್ಟಗಿಲ್ಲ ಅನಿಸುತ್ತೆ. ಅಷ್ಟು ಹೊತ್ತಿಂದ ನೋಡ್ತಾ ಇದೀನಿ. ಹುಚ್ಚುಚ್ಚಾಗಿ ಆಡ್ತಾ ಇದಾನೆ. ಮೊದ್ಲು ನಿಮ್ಹಾನ್ಸ್‌ಗೆ ಸೇರಿಸಿ. ಈಗ ರೇಷ್ಮೆ ಸೀರೆ ಹಾಳಾಯ್ತಲ್ರೀ, ಹೊಚ್ಚ ಹೊಸಾದು ಕಣ್ರೀ ಸೀರೆ” ಎಂದು ಜೋರು ಮಾಡಿದಳು.

ಹೇಗಾದರೂ ಸರಿಯೆ, ಆ ಸುಂದರಿಯ ಕಣ್ಣಲ್ಲಿ ಹೀರೋಗಳು ಅನ್ನಿಸಿಕೊಳ್ಳಲು ಕಾದಿದ್ದವರಿಗೆ ಇಷ್ಟು ನೆಪ ಸಾಕಾಯಿತು. ಅವರೆಲ್ಲ ಎದ್ದು ಬಂದು ಮುದುಕನನ್ನು ತರಾಟೆಗೆ ತೆಗೆದುಕೊಂಡರು. ಒಬ್ಬನಂತೂ ಹೊಡೆಯಲು ಕೈ ಎತ್ತಿಬಿಟ್ಟ. ಆಗ ತಕ್ಷಣವೇ  ಸಾರ್, ಒಂದು ವಿಷಯ ಹೇಳ್ತೀನಿ. ಕೇಳಿ. ಆಮೇಲೆ ಧಾರಾಳವಾಗಿ ಹೊಡೀರಿ ಅನ್ನುತ್ತಾ ಆ ಮುದುಕ ಹೇಳಿದ: ಇವನು ನನ್ನ ಮಗ. ಹುಟ್ಟು ಕುರುಡನಾಗಿದ್ದ. ಕೆಲ ದಿನಗಳ ಹಿಂದಷ್ಟೇ ಅವನ ಕಣ್ಣು ಆಪರೇಷನ್ ಆಗಿದೆ. ಈವರೆಗೆ ಅದೆಷ್ಟೋ ಬಟ್ಟೆ ಕೊಡಿಸಿದ್ದೇನೆ. ಅದನ್ನ ಅವನು ನೋಡಿಲ್ಲ. ಈಗ ನೋಡಲಿ ಅಂತಾನೇ ಹೊಸ ಬಟ್ಟೆ ಕೊಡಿಸಿದ್ದೀನಿ. ನಿನ್ನೆಯಿಂದಷ್ಟೇ ಅವನಿಗೆ ಹೊರಗಿನ ಪ್ರಪಂಚ ಕಾಣಿಸ್ತಾ ಇದೆ. ಪ್ರತಿಯೊಂದು ವಸ್ತುವನ್ನ; ಇಡೀ ಜಗತ್ತನ್ನ ಆತ ಬೆರಗಿನಿಂದ ನೋಡ್ತಾ ಇದಾನೆ ಸಾರ್. ಅದಕ್ಕೇ ರೋಮಾಂಚನದಿಂದ ಹಾಗೆಲ್ಲಾ ಆಡ್ತಾ ಇದಾನೆ. ನಿಮ್ಗೆ ತುಂಬಾ ತೊಂದರೆಯಾಯ್ತೇನೋ.. ಕ್ಷಮಿಸಿಬಿಡಿ ಸಾರ್” ಎಂದು ಮಾತು ನಿಲ್ಲಿಸಿದ. ಈ ಮಾತು ಕೇಳಿದ್ದೇ ಆ ರೇಷ್ಮೆ ಸೀರೆಯ ಸುಂದರಿ, ಅದೇ ಸೀರೆಯ ಸೆರಗನ್ನು ಕಣ್ಣಿಗೊತ್ತಿಕೊಂಡಳು. ಜಗಳಕ್ಕೆ ಬಂದವರ ದೃಷ್ಟಿಗಳು ಕಿಟಕಿ ಆಚೆ ನೆಟ್ಟವು!

* * * *
ಅಮ್ಮನಂಥ ಗೆಳತಿಯೊಂದಿಗೆ ‘ಹೀಗೇ ಸುಮ್ಮನೆ” ಸುಖ ದುಃಖ ಹೇಳಿಕೊಳ್ಳುತ್ತಿದ್ದಾಗ ‘ಹಾಗೇ ಸುಮ್ಮನೆ” ಹೊಳೆದ ಕಥೆ ಇದು.
ಯಾಕೋಪ್ಪ, ಇದು ಕಥೆಯಲ್ಲ, ಬದುಕಿನ ವ್ಯಥೆ ಅನ್ನಿಸಿತು. ನಿಮ್ಮೊಂದಿಗೆ ಹೇಳ್ಕೋಬೇಕು ಅನ್ನಿಸ್ತು.ಅಂದಹಾಗೆ ನಾನು ಕ್ಷೇಮ. ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ, ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: