Sad story of a lake in Karnataka – ನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?

Sad story of a lake in Karnataka
ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ ದೇವಸ್ಥಾನ. ಬದಿಯಲ್ಲೇ ಹೂವಿನ ಗಿಡಗಳು. ಕೆರೆ ಎಷ್ಟೋ ಹೆಕ್ಟೇರುಗಟ್ಟಲೇ ಉದ್ದವಿದೆ- ಅಗಲವಿದೆ ಅಂತ ಏರಿಯ ಮೇಲೆ ನೆಟ್ಟ ಓಬೀರಾಯನ ಕಾಲದ ಬೋರ್ಡು ಹೇಳುತ್ತದೆ.

ಸಾಗರದಿಂದ ಸಿದ್ದಾಪುರಕ್ಕೆ ಹೋಗುವ ಒಳದಾರಿಯಲ್ಲಿ ನಿಮಗೆ ನಾನು ಹೇಳುತ್ತಿರುವ ಈ ಕೆರೆ ಕಾಣಿಸುತ್ತದೆ. ಕಾನಲೆ ಊರಿನ ಹೆಸರು. ಕಾನ್ಲೆ ಕೆರೆ ಅಂತಲೇ ಪ್ರಸಿಧ್ಧ ಇದು. ಅಲ್ಲಿನ ತಾವರೆ ಹೂವುಗಳೂ ಸಹ. ಬಹಳ ಒತ್ತೊತ್ತಾಗಿ, ಸೊಂಪಾಗಿ ಬೆಳೆದಿವೆ ಇವುಗಳು. ಮೊದಲ ಬಾರಿಗೆ ಈ ಕಮಲಗಳನ್ನ ಕಂಡ ಯಾರೇ ಆದರೂ ಮೋಹಗೊಳ್ಳಲೇಬೇಕು. ಬೆಳಗ್ಗೆ, ನಡು ಮಧ್ಯಾಹ್ನ, ಸಂಜೆ ಯಾವಾಗ ಬೇಕಾದರೂ ನೋಡಿ ಇಲ್ಲಿ- ಬೇಸಗೆ, ಮಳೆಗಾಲ, ಚಳಿ ಅಂತಿಲ್ಲದೇ ಒಂದಿಷ್ಟು ಮಕ್ಕಳು ಈಜುತ್ತಲೋ, ಈಜು ಕಲಿಯುತ್ತಲೋ ಇರುತ್ತಾರೆ. ಅಮವಾಸ್ಯೆ, ಹುಣ್ಣಿಮೆಗಳ ಆಸುಪಾಸು ಬಿಟ್ಟು.

ಕೆರೆಯಲ್ಲಿ ಈಗ ಹಿಂದಿನ ಚೈತನ್ಯವಿಲ್ಲ. ಸುತ್ತ ಪಾಚಿ, ಕಳೆ ಗಿಡಗಳು ಆವರಿಸಿಕೊಂಡಿವೆ ಅನ್ನುವುದು ಊರ ಹಿರಿಯರ ಗೊಣಗು. ಆದರೆ ಆ ಗೊಣಗಾಟ ಯುವಕರಿಗೆ ಕೇಳುವುದಿಲ್ಲ. ತುಂಬಿದ, ತುಂಬುತ್ತಿರುವ ಹೂಳು ಅವರಿಗೆ ಕಾಣಿಸುತ್ತಿಲ್ಲ. ಹಿಂದೆಲ್ಲ ಎರಡು ಮೂರು ವರ್ಷಗಳಿಗೊಮ್ಮೆ ಕೆರೆಯ ಹೂಳನ್ನ ಊರವರೆಲ್ಲ ಸೇರಿ ತೆಗೆದು, ತೋಟ, ಗದ್ದೆಗಳಿಗೆ ಕೊಂಡೊಯ್ದು ಹಾಕುತ್ತಿದ್ದರಂತೆ, ಒಳ್ಳೇ ಗೊಬ್ಬರವಾಗುತ್ತಿತ್ತು ಆ ಹೂಳು. ಅದು ಇವರಿಗ್ಯಾರಿಗೂ ಅರ್ಥವಾಗುವುದಿಲ್ಲ. ಸ್ನಾನ ಮಾಡಲು, ಬಟ್ಟೆ ತೊಳೆಯಲು ಒಂದಿಷ್ಟು ಜಾಗವಿದ್ದರೆ ಸಾಕು ಕೆರೆಯಲ್ಲಿ.

ಅಲ್ಲಿ ಸಂಗ್ರಹವಾದ ನೀರು ಸುತ್ತ ಮುತ್ತಲಿನ ತೋಟಗಳಿಗೆ ಸಾಗಲು ಕಾಲುವೆ, ತೂಬುಗಳಿದ್ದವು ಅಂತ ಯಾರೋ ಹೇಳುತ್ತಿದ್ದರು. ಎಲ್ಲಿದ್ದಾವೋ ಏನೋ ಅವು, ಈ ತಲೆಮಾರಿನವರಿಗೆ ಇವ್ಯಾವುವೂ ದೇವರಾಣೆಯಾಗಿಯೂ ತಿಳಿದಿಲ್ಲ. ಅಲ್ಲಿನ ನೀರನ್ನ ಕುಡಿಯುತ್ತಿದ್ದರಂತೆ ಹಿಂದೆ. ಊಹೂ, ಈಗ ಮನೆ ಮನೆಗೆ ಬಾವಿಗಳಿವೆ, ಬೋರ್ ವೆಲ್ ಗಳಿಗೂ ಬರವಿಲ್ಲ. ಮನೆಯಲ್ಲಿ ಬಾವಿ ಇಲ್ಲದ, ನೀರಿನ ತತ್ವಾರದ ಬೇಸಗೆಯಲ್ಲಿ ಮಾತ್ರ ಕೆರೆಯ ಆಶ್ರಯ. ಅಷ್ಟು ದೊಡ್ಡ ಕೆರೆಯಿದ್ದರೂ, ಸೆಖೆ ತಡೆಯಲಸಾಧ್ಯ. ತಂಪುಗಾಳಿ ದಿನವಿಡೀ ಬೀಸುತ್ತಿರುತ್ತಿತ್ತು ಅಂತ ಹಳೇ ತಲೆಮಾರು ಹೇಳುತ್ತಿದ್ದರೆ, ನಂಬುವುದು ಹೇಗೆ ಅದನ್ನ?

ಬ್ರಿಟೀಷು ಸರಕಾರದ ಕಾಲದಲ್ಲಿ ಎರಡು ಸುತ್ತ ಕೂರಲು ಒಳ್ಳೆಯ ಪಾವಟಿಗೆಗಳು ಇದ್ದವಂತೆ. ಈಗ ಕಾಣುವುದಿಲ್ಲ. ಒಂದು ಬದಿಯ ಕಲ್ಲಿನ ಮೆಟ್ಟಿಲುಗಳು ಜರಿಯುತ್ತ ಬಂದಿದೆ. ಮತ್ಯಾರದೋ ಮನೆಯ ಮೆಟ್ಟಿಲ ಹಾಸು ಆಗಿದ್ದರೂ ಆಗಿರಬಹುದು ಇಲ್ಲಿಯ ಕಲ್ಲು. ಯಾರು ನೋಡಿದವರು? ಒಂದು ಕಡೆ ಈಗ ಕೆಲವು ಜನ ತ್ಯಾಜ್ಯ ಹಾಕಲೂ ಶುರು ಮಾಡಿದ್ದಾರೆ, ಆದರೆ ಚಿಂತೆ ಮಾಡುವ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ ಬಿಡಿ. ಕಸ ಹಾಕಲು ಬೇರೆ ಕಡೆಗೆ ತೊಟ್ಟಿಯೊಂದನ್ನ ಮಾಡಬೇಕೆಂದು ಕಸದ ರಾಶಿ ನೋಡಿ ಮಾತಾಡಿಕೊಳ್ಳುತ್ತಾರೆ ಒಂದಿಷ್ಟು ಜನ. ಇನ್ನೂ ಮಾಡಿಲ್ಲ.

ಮೀನುಗಳು ಏನು ಸೊಗಸು ಗೊತ್ತಾ ಇಲ್ಲಿಯವು? ಆದರೆ ಅಷ್ಟು ಸುಲಭಕ್ಕೆ ನಿಮಗವು ಕಾಣಲಾರವು. ಊರ ಜನರು ಬಳಸುವ ಬಟ್ಟೆ ಸೋಪು, ವಾಶಿಂಗ್ ಪೌಡರ್, ತರಹೇವಾರೀ ಮೈ ಸೋಪುಗಳು ನೀರಿನಲ್ಲಿ ಬೆರೆತು ಉಂಟಾಗುವ ವಾಸನೆಯ ಮಿಶ್ರಣಕ್ಕೆ ಹೆದರಿ ನಡು ಕೆರೆಯಲ್ಲಿ ಅಡಗಿಕೊಂಡಿವೆ ಅವೆಲ್ಲ. ಕೆರೆ ದಡದ ಅಕ್ಕಿಕಾಳಿಗೆ ಬರುವುದಿಲ್ಲ ಈಗವು. ಆಗೀಗ ಒಂದೆರಡು ಮೀನುಗಳು ದಡಕ್ಕೆ ಬರುತ್ತವೆ, ಹೊಟ್ಟೆಯ ಮೇಲ್ಮುಖ ಮಾಡಿಕೊಂಡು, ತೇಲುತ್ತಾ. ಯಾರಾದರೂ ಕಂಡವರು ಎತ್ತಿ ಎಸೆಯುತ್ತಾರೆ.

ತಾವರೆಗಳು ಬಹಳ ಚೆನ್ನಾಗಿ ನಳನಳಿಸುತ್ತಿವೆ ಇಲ್ಲಿ. ಅದಕ್ಕೂ ಕಾರಣವಿದೆ. ಹೂಳಿನ ಹೆದರಿಕೆಯಿಂದ ಯಾರೂ ದೂರದವರೆಗೆ ಹೋಗಿ ಹೂವನ್ನ ಕೀಳುವುದಿಲ್ಲ. ದಡದ ಹತ್ತಿರದ, ಕೈಗೆ ಸಿಗುವ ಪೀಚಲು ತಾವರೆಗಳಿಗೇ ಸಂತೃಪ್ತಿ ಪಡಬೇಕು ಜನ. ಯಾರಾದರೂ ಬಾಜಿ ಕಟ್ಟಿದರೆ ಒಂದೆರಡು ಗಟ್ಟಿ ಧೈರ್ಯದ ಹುಡುಗರು ತೊಡೆವರೆಗೆ ಕೆಸರಲ್ಲಿ ಹೂತು, ಮತ್ತೂ ಮುಂದೆ ಬಗ್ಗಿ ಚೆಂದದ ಹೂವ ಕಿತ್ತು ತಂದಾರು ಅಷ್ಟೆ. ನಡು ನೀರವರೆಗೆ ಈಜಿ, ಅಲ್ಲಿಂದ ಕಮಲದ ಹೂ ತಂದ ಹಳೆಯ ಕಥೆಗಳೆಲ್ಲ ಎಲ್ಲೋ ಹೂಳಿನ ಮಧ್ಯೆ ಉಸಿರುಗಟ್ಟಿ ಕುಸಿಯುತ್ತಿವೆ, ಆಳಕ್ಕೆ.

ಹಳೆಯ ಸೌಂದರ್ಯ ಕಳೆದುಕೊಂಡಂತೆ ಕಾಣುತ್ತಿದ್ದರೂ ಕೆರೆ ಊರನ್ನ ಮೊದಲಿನಂತೆಯೇ ಬೆಸೆದುಕೊಂಡಿದೆ. ಕೆರೆ ಕಟ್ಟೇ ಮೇಲೆ ಹಳಬರು- ಹೊಸಬರೆಲ್ಲ ದಿನವೂ ಸಂಜೆ ಕೂತು ವಿನೋದವಾಡುತ್ತಾರೆ, ಗಾಳಿ ಸೇವನೆ ಮಾಡುತ್ತಾರೆ. ಆಟವಾಡುತ್ತಾರೆ. ಹಿರಿಯರ ಸಾಹಸದ ಕಥೆಗಳನ್ನ ಕೇಳಿ ಮುಸಿ ನಗುತ್ತ ಕುಳಿತ ಹುಡುಗು ಬುದ್ಧಿಯವರು ಕಾಣುತ್ತಾರೆ. ಹೆಂಗಳೆಯರು ಅಲ್ಲಿನ ಅರಳೀ ಮರದಡಿಗೆ ಕೂತು ತಮ್ಮ ಮನೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಊರ ಜಾತ್ರೆಗೆ ಏನು ಕಾರ್ಯಕ್ರಮ ಮಾಡಬೇಕು, ರಾಮಣ್ಣನ ಮಗಳ ಮದುವೆಗೆ ಚಪ್ಪರ ಹೇಗೆ ಹಾಕಬೇಕು, ಸಾಮೂಹಿಕ ಸತ್ಯನಾರಾಯಣ ಕಥೆಯ ವಂತಿಗೆ ಕಲೆಕ್ಷನ್ನು ಯಾವಾಗಿಂದ ಶುರು ಮಾಡಿಕೊಳ್ಳಬೇಕು ಮುಂತಾದ ಊರಿನ ಹಿತಾಸಕ್ತಿ ವಿಷಯಗಳನ್ನ ಮಾತಾಡಲು ಕೆರೆ ಕಟ್ಟೆಯೇ ವೇದಿಕೆ.

ಒಂದು ಸಂಗತಿಯೆಂದರೆ ಪ್ರತೀದಿನವೆಂಬಂತೆ ಒಬ್ಬರಲ್ಲ ಒಬ್ಬರು ಆ ಕೆರೆಯ ಉದ್ಧಾರದ ಬಗ್ಗೆ ಮಾತು ಆಡಿಯೇ ಆಡುತ್ತಾರೆ. ಹೂಳು ತೆಗೆಸುವುದು, ಕಳೇ ಕೀಳುವುದು, ಕಾಲುವೆ ಮತ್ತೆ ಹೊಡೆಸುವುದು, ಹೀಗೆ. ಈ ಮಾತುಗಳನ್ನ ಆ ಕೆರೆ ಸುಮಾರು ಹತ್ತೈವತ್ತು ವರುಷಗಳಿಂದ ಕೇಳುತ್ತ ಬಂದಿದೆ, ಸುಮ್ಮನಿದೆ. ಇನ್ನೇನು ನಾಳೆಯೇ ಕೆಲಸ ಶುರು ಅಂತ ಮಾತಾಡಿ, ಮತ್ತೆ ಅದರ ಸುದ್ದಿಯೇ ಮರೆತು ಹೋದಂತೆ ಆಡುವವರೂ ಇದ್ದಾರೆ. ತಮ್ಮಲ್ಲೇ ಸಂಘ ಅದೂ ಇದೂ ಮಾಡಿಕೊಳ್ಳಬೇಕು ಕೆರೆ ಜೀರ್ಣೋದ್ಧಾರಕ್ಕೆ ಅಂತಲೂ ಕೆಲವರು ನೀಲನಕ್ಷೆ ತಯಾರಿಸಿದ್ದಾರೆ. ಹುಟ್ಟುವ ಮೊದಲೇ ಭಿನ್ನಮತ ತೋರಿದ್ದರಿಂದ ಸಂಘದ ಪರಿಕಲ್ಪನೆ ಕಾಗದದಲ್ಲೇ ಉಳಿದಿದೆ.

ವರುಷಾ ವರುಷಾ ಅಲ್ಲಿನ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಕೆರೆಗೆ ಒತ್ತಿಕೊಂಡೇ ಇರುವ ದೇವಾಲಯ ಆದ್ದರಿಂದ ಸೊಬಗು ಮತ್ತೂ ಜಾಸ್ತಿ. ಆವತ್ತು ತಾವರೆ ಹೂಗಳಿಗೂ ಜಾಸ್ತಿ ಬೇಡಿಕೆ. ಜಾತ್ರೆಯುಂಗಡಿಗಳು ಕೆರೆಯ ಸುತ್ತ ತೆರೆದುಕೊಂಡು ಕೆರೆಗೊಂದು ಶೋಭೆ ತಂದುಕೊಡುತ್ತವೆ. ಅಂದ ಹಾಗೆ ಕೆರೆಯ ಪಕ್ಕದ ತೋಟಕ್ಕೆ ಈಗಲೂ ಇದೇ ನೀರೇ ಗತಿ. ಸಣ್ಣ ಹಳ್ಳದ ಮುಖಾಂತರ ನೀರು ತೋಟಕ್ಕೆ ಹರಿದು ಹೋಗುತ್ತವೆ. ಆ ಹಳ್ಳದ ಆಸುಪಾಸಿನಲ್ಲಿ ಹಕ್ಕಿಗಳ ಕಲರವ, ಮರದ ತಂಪು.

ಅಕ್ಟೋಬರು ತಿಂಗಳಾದರೆ ಎಲ್ಲಿಂದಲೋ ಹಾರಿ ಬಂದ ಬಿಳಿ ಕಂದು ಬಣ್ಣದ ಹಕ್ಕಿಗಳು ಕೆರೆಯ ನಡುವಿನ ಜೊಂಡಿನಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ. ಹಾಗಂತ ರಂಗನ ತಿಟ್ಟು, ಕೊಕ್ಕರೆ ಬೆಳ್ಳೂರಿನ ಹಾಗೆ ರಾಶಿ ರಾಶಿ ಸಂಖ್ಯೆಯಲ್ಲಿ ಬರುವುದಿಲ್ಲ, ಸ್ವಲ್ಪೇ ಸ್ವಲ್ಪ. ಈ ಕೆರೆಗೆ, ಇದೇ ಒಂಥರಾ ಚಂದ. ಇನ್ನೂ ಹೆಚ್ಚಿಗೆ ಬಂದಿದ್ದರೆ ಹೇಸಿಗೆಯಾಗಿ ಬಿಡುತ್ತಿತ್ತೇನೋ! ತಾವರೆ ಯಾವುದು – ಹಕ್ಕಿ ಯಾವುದು ಅಂತ ಗೊತ್ತಾಗದೇ ಇರುವ ಸಾಧ್ಯತೆಗಳೂ ಇರುತ್ತವೆ ಕೆಲವೊಮ್ಮೆ, ದೂರದಿಂದ ನೋಡುವವರಿಗೆ. ಈ ಹಕ್ಕಿಗಳ ಬಗ್ಗೆ ಸಂಶೊಧನೆ ಮಾಡಿದವರು ಯಾರೂ ಇಲ್ಲ, ಇಲ್ಲಿನವರಿಗೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೂ ಇಲ್ಲ. ಹಾಗಾಗಿಯೇ ಹೊರಗಿನವರು ಯಾರನ್ನೂ ಇಲ್ಲಿಯ ಜನ ಬನ್ನಿ ಅಧ್ಯಯನ ಮಾಡಿ ಎಂದು ಆಹ್ವಾನಿಸಿಯೂ ಇಲ್ಲ.

ಇನ್ನು ನೀವು ಅಪ್ಪಿ ತಪ್ಪಿ ಮಳೆಗಾಲದಲ್ಲಿ ಬಂದಿರೋ, ಮುಗಿದೇ ಹೋಯಿತು. ಬರೆದ ನನ್ನನ್ನ ಹುಡುಕಿಕೊಂಡು ಬಂದು ಹೊಡೆದು ಬಿಡುತ್ತೀರಿ. ಅಷ್ಟು ಚೆನ್ನಾಗಿರುತ್ತದೆ, ಇಲ್ಲಿನ ನೋಟ. ಕಿಲೋಮೀಟರುಗಟ್ಟಲೇ ವಿಸ್ತಾರವಾಗಿ ಹರಡಿಕೊಂಡಂತೆ ಕಾಣುವ ನೀರ ರಾಶಿ, ಸಣ್ಣಗೆ ಏಳುತ್ತಿರುವ ಅಲೆಗಳು, ಸುತ್ತ ಹಸಿರ ಪದರಿನ ಭೂಮಿ. ಬೇರೇನು ಬೇಕು ಒಂದೂರಿನ ಭಾಗ್ಯಕ್ಕೆ? ಕೆರೆಯ ನೈದಿಲೆಗಳು ಮತ್ತೂ ದಿವಿನಾಗಿ ಕಂಗೊಳಿಸುತ್ತ ನಿಂತಿರುತ್ತವೆ, ಕೊಳೆ- ಕಸಗಳು ಎಲ್ಲೋ ಕೊಚ್ಚಿ ಹೋಗಿರುತ್ತವೆ. ಮೀನುಗಳು ನಿಮ್ಮ ಪುಣ್ಯವಿದ್ದರೆ ಕಂಡರೂ ಕಾಣಬಹುದು.

ಯಾವಾಗಲಾದರೂ ಈ ಕಡೆ ಬರುತ್ತೀರಲ್ಲ, ಆಗೊಮ್ಮೆ ನಿಮ್ಮ ಕಾರೋ, ಬೈಕೋ ನಿಲ್ಲಿಸಿ ಸುಮ್ಮನೇ ಕೆರೆ ನೋಡಿ ಸಂತಸ ಪಡಿ. ಅಲ್ಲಿ ಯಾರಾದರೂ ಈಜುವ ಮಕ್ಕಳು ಕಂಡರೆ ನಿಮಗೊಂದು ತಾವರೆ ಹೂ ತಂದು ಕೊಡಲು ಹೇಳಿ, ಖುಷಿಯಲ್ಲಿ ತಂದು ಕೊಟ್ಟಾರು. ಬೇಡವೆ? ಅವು ಅಲ್ಲೇ ನಗುತ್ತ ಇರಲಿ ಅನ್ನುತ್ತೀರಾ? ಅದು ಮತ್ತೂ ಚೆನ್ನ, ಮೆಲ್ಲನೆ ಕೆರೆಗೊಂದು ಶುಭ ವಿದಾಯ ಹೇಳಿ ಹೊರತು ಬಿಡಿ, ನೀವು ಮತ್ತೇನು ಮಾಡಲು ಸಾಧ್ಯ?

ಮರೆತ ಮಾತೇನು ಅಂದರೆ, ಇದನ್ನ ಬರಿಯ ಕಾನಲೆಯ ಕೆರೆಗೆ ಮಾತ್ರ ಹೇಳಿದ್ದು ಅಂದುಕೊಂಡು ಬಿಡಬೇಡಿ ಮತ್ತೆ!

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಶ್ರೀನಿಧಿ ಡಿಎಸ್ - ಕಾಡುಹರಟೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: