Trekking is fun for us, not for them – ‘ಕಾಡಿನ’ ಮಕ್ಕಳ ಕಾಡುವ ದಿನಚರಿ

ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ. ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!

“ದಿನಕ್ಕೆಷ್ಟು ಸಂಬಳ ನಿನಗೆ?” ಸುಮ್ಮನೆ ಕೇಳಿದೆ ಆತನ ಬಳಿ, ಹೋಗುವ ದಾರಿ ಸಾಗಲು ಏನಾದರೂ ಮಾತನಾಡಬೇಕಿತ್ತು.
“125 ರೂಪಾಯಿ” ಥಟ್ಟಂತ ಉತ್ತರ ಕೊಟ್ಟ. ಕಾಡು ದಾರಿ. ತರಗಲೆ ಸರಪರ ಸದ್ದು, ಬಿಟ್ಟರೆ ಹಿಂದೆಲ್ಲೋ ಬರುತ್ತಿರುವ ಸಂಗಡಿಗರ ದನಿ.
“ಸಾಕಾಗತ್ತನೋ ಸಂಬಳ” ಸುಮ್ಮನೆ ಕೇಳಿದೆ- ಅವನ ಕೈಲಿದ್ದ ಕಳ್ಳಭಟ್ಟಿಯ ಬಾಟಲು ನೋಡುತ್ತ. ಹುಂ, ಸಾಕಾಗುತ್ತದೆ, ಆದರೆ 100 ರೂಪಾಯಿ ಕುಡೀಯೋಕೆ ಬೇಕು”.
“ಅರೇ, ನೂರು ರೂಪಾಯಿ ಕುಡಿಯೋಕೆ ಬೇಕು ಅಂತೀಯಲ್ಲೋ, ಮತ್ತೆ ಸಾಕಾಗೋದು ಹೇಗೆ ಮಾರಾಯ?”

ಅವನು ಸ್ವಲ್ಪ ಹೊತ್ತು ಮಾತಾಡದೇ ಹಾಗೇ ಮುಂದುವರಿಯುತ್ತಿದ್ದ. ನಾನು ಅವನ ಯಮವೇಗಕ್ಕೆ ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನ ಮಾಡುತ್ತ ಜೋರಾಗಿ ಹೆಜ್ಜೆ ಹಾಕಿದೆ.

ನಮಗೊಂದಿಷ್ಟು ಜನಕ್ಕೆ ಚಾರಣದ ಹುಚ್ಚು. ತಿಂಗಳಿಗೆ ಎರಡು ತಿಂಗಳಿಗೆ ಒಂದು ಬಾರಿಯಾದರೂ ಬೆಟ್ಟ-ಗುಡ್ಡ, ನದಿಕೊಳ್ಳ ಅಂತ ಓಡಾಡದಿದ್ದರೆ, ಉಂಡ ಅನ್ನ ಕರಗುವುದಿಲ್ಲ, ಸರಿ ನಿದ್ರೆ ಬರುವುದಿಲ್ಲ. ಹೀಗಾಗಿ, ಎಲ್ಲ ಮಾತಾಡಿಕೊಂಡು, ಎಂದಿನಂತೆ ಯಾವುದೋ ದೂರದೂರಿಗೆ, ಯಾವುದೋ ಬೆಟ್ಟ ಹತ್ತಲು ಹೋಗಿದ್ದೆವು. ಬೆಟ್ಟದ ಕೆಳಗಿನೂರಿನ ಇಬ್ಬರು ಯುವಕರು ನಮ್ಮ ಜೊತೆಗೆ ಬಂದಿದ್ದರು, ಗೈಡುಗಳಾಗಿ. ಐದಾರು ತಾಸು ನೆತ್ತಿಸುಡುವ ಬಿಸಿಲು ಮತ್ತು ಸುಸ್ತು. ಅವರಿಬ್ಬರು ಉತ್ಸಾಹ ತುಂಬದಿದ್ದರೆ, ನಾವ್ಯಾರು ಮೇಲೆ ಹತ್ತಲು ಸಾಧ್ಯವೇ ಇರಲಿಲ್ಲ.

ನನ್ನ ಜೊತೆಗೆ ಮಾತಾಡುತ್ತಿದ್ದವನ ಹೆಸರನ್ನು ರಾಜೀವ ಅಂತಿಟ್ಟುಕೊಳ್ಳಿ. ಮೂವತ್ತು ವರ್ಷವಿರಬಹುದು. ಚುರುಕು ನಡಿಗೆ, ತೇಜಸ್ವಿ ಕಾದಂಬರಿಯಿಂದ ಸಟಕ್ಕನೆ ಹೊರಗೆದ್ದು ಬಂದ ಹಾಗಿನವನು. ರಾತ್ರಿ ಕುಡಿಯದಿದ್ದರೆ ಆಗದು ಅಂತ, ಬೆಟ್ಟದ ಮತ್ತೊಂದು ತುದಿ ಇಳಿದು, 2-2 ತಾಸು ನಡೆದು ಕಳ್ಳಭಟ್ಟಿ ತಂದುಕೊಂಡವನು.

ರಾತ್ರಿಯಿಡೀ ಬೆಟ್ಟದ ಶಿಖರದಲ್ಲಿ ಕಳೆದು ಮಾರನೇ ದಿನ ಬೆಳಗ್ಗೆ ಅವರೋಹಣದಲ್ಲಿ ತೊಡಗಿದ್ದಾಗ ಈ ರಾಜೀವನ ಬಳಿ ಮಾತಿಗೆ ತೊಡಗಿದ್ದೆ. ಮೈ ಕೈ ನೋವು ನಮಗೆಲ್ಲ. ಈ ಯುವಕರಿಬ್ಬರು ಮಾತ್ರ ಗಟ್ಟಿಯಾಳುಗಳು. ಲವಲವಿಕೆಯಿಂದ ಕುಣಿಯುತ್ತ, ಆರಾಮಾಗಿ ಬರುತ್ತಿದ್ದರು ನಮ್ಮ ಜೊತೆ, ಕಳ್ಳಭಟ್ಟಿ ಕಾರಣವಿದ್ದರೂ ಇರಬಹುದು, ಬೇರೆ ವಿಚಾರ.

ರಾಜೀವನ ಬಳಿ ಮತ್ತೆ ಕೇಳಿದೆ, ನೂರು ರೂಪಾಯಿಯ ಖರ್ಚು ಕುಡೀಯೋಕೆ ಆದರೆ, ಹೊಟ್ಟೆ-ಬಟ್ಟೆಗೇನೋ ಅಂತ. ಅಯ್ಯ, ಅದೇನು ದೊಡ್ಡ ವಿಚಾರ ಅನ್ನುವ ಹಾಗೆ ಒಮ್ಮೆ ಹಿಂತಿರುಗಿ ನೋಡಿದವನೇ ತಾನು ಮತ್ತು ತನ್ನಂತವರು ಹೇಗೆ ಬದುಕುತ್ತಿದ್ದೇವೆ ಅನ್ನುವುದನ್ನು ವಿಸ್ತಾರವಾಗಿ ಹೇಳಿದ.

ಅದೇನೋ ಮರದ ಎಣ್ಣೆಯಂತೆ, ಕಿಲೋಗೆ 500 ರೂಪಾಯಿ, ವಾರದಲ್ಲಿ ಒಂದು ದಿನ ನಾಲಾರು ಜನ ಸೇರಿ ಕಾಡಲೆದು, ಎಣ್ಣೆಮರ ಹುಡುಕಿ, 3-4 ಕೇಜಿ ಎಣ್ಣೆ ಸಂಪಾದಿಸುತ್ತಾರಂತೆ,(ಕೊನೆಗೂ ಆ ಮರದ ಹೆಸರು ಹೇಳಲಿಲ್ಲ ಆಸಾಮಿ) ಇನ್ನು ಉಳಿದದಿನ ಧೂಪ, ಸೀಗೇಕಾಯಿ, ದಾಲ್ಚಿನ್ನಿ, ಜೇನು, ರಾಮಪತ್ರೆ- ಹೀಗೆ ಒಂದಲ್ಲ ಎರಡಲ್ಲ- ಕೇಜಿ 10ರಿಂದ ಹಿಡಿದು 300ರವರೆಗೆನ ಉತ್ಪನ್ನಗಳು ಕಾಡಲ್ಲೇ ಲಭ್ಯ. ಇವುಗಳನ್ನೆಲ್ಲ ಕಷ್ಟ ಪಟ್ಟು ಒಟ್ಟು ಮಾಡಿ ಮಾರಿದರೆ, ಆರಾಮಾಗಿ ಜೀವನ ಸಾಗಿಸಲು ಸಾಧ್ಯವಾದಷ್ಟು ದುಡ್ಡು ಗ್ಯಾರೆಂಟಿ. ಇವ್ಯಾವುದೂ ಇಲ್ಲದೇ ಹೋದರೆ, ದಿನಗೂಲಿ ಕೆಲಸ-125ರೂಪಾಯಿಗಳು.

ಹೇಗೆ ದುಡ್ಡು ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿರುವ ಆತನಿಗೆ, ಇಷ್ಟೆಲ್ಲ ಆದರೂ ಕಾಲದೇಶಗಳ ಬಗೆಗಿನ ಪರಿವೆಯೇ ಇರಲಿಲ್ಲ ಎಂಬುದು ನಮಗೆ ನಮ್ಮ ಪ್ರಯಾಣದ ಆರಂಭದಲ್ಲೇ ಗೊತ್ತಾಗಿತ್ತು. ಕಿಲೋಮೀಟರು ಎಂಬ ಮಾಪನದ ಅರಿವೇ ರಾಜೀವನಿಗೆ ಇರಲಿಲ್ಲ. ಹತ್ತಿರದ ದೊಡ್ಡ ಊರಿಗೆ 8 ರೂಪಾಯಿಯ ದೂರ, ಮತ್ತೂ ದೊಡ್ಡ ಪಟ್ಟಣಕ್ಕೆ 50 ರೂಪಾಯಿ ದೂರ!

ಜಗತ್ತಿನ ಇತರ ಯಾವುದೇ ಆಗುಹೋಗುಗಳ ಬಗೆಗಿನ ಚಿಂತೆ ರಾಜೀವನಿಗಾಗಲೀ, ಮತ್ತೊಬ್ಬನಿಗಾಗಲೀ ಅಗತ್ಯವೇ ಇರಲಿಲ್ಲ. ರಾಜೀವನ ಅಂದಾಜಲ್ಲಿ ಪ್ರಧಾನಮಂತ್ರಿ ಇನ್ನುಕೂಡ ವಾಜಪೇಯಿಯೇ. ನಾನು ಅವನನ್ನು ತಿದ್ದ ಹೊರಟರೂ, ಇರ್ಲಿ ಬಿಡಿ- ಯಾರಾದರೇನು ಅನ್ನುವ ಧಾಟಿಯ ಉತ್ತರ ಬಂತು.ಸುಮ್ಮನಾದೆ.

ಆ ಪುಟ್ಟ ಊರಿನಲ್ಲಿ ಬದುಕುವ ಅವರುಗಳಿಗೆ, ವಾರದಕೊನೆಯಲ್ಲಿ ಬೆಂಗಳೂರಿನಂತಹ ನಗರಗಳಿಂದ ಬರುವ ಬೆಟ್ಟ ಹತ್ತುವವರು, ಮನರಂಜನೆ ಮತ್ತು ಆದಾಯದ ಇನ್ನೊಂದು ಮೂಲವೂ ಹೌದು. ನಮಗೆ ಅವರ ಊರೆದುರಿನ ಬೆಟ್ಟ ಒಂದು ಚಾರಣಯೋಗ್ಯ ಸ್ಥಳ. ಅವರಿಗೋ, ಅದೊಂದಕ್ಕೆ ಬಿಟ್ಟು ಮತ್ತೆ ಉಳಿದೆಲ್ಲಕ್ಕೂ ಯೋಗ್ಯ. ಬ್ಯಾಗು ಹೊತ್ತು ಏದುಸಿರು ಬಿಡುತ್ತ ಸಾಗುವ ನಾವುಗಳು ಅವರ ಕಣ್ಣಿಗೆ ಪೆಕರಗಳು. ಏನೇ ಆದರೂ, ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ.

ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!

Advertisements

About sujankumarshetty

kadik helthi akka

Posted on ಆಗಷ್ಟ್ 10, 2009, in ಶ್ರೀನಿಧಿ ಡಿಎಸ್ - ಕಾಡುಹರಟೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: