Ashadha masa | Newly married couple | Romance | Separation – ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರಮಾಡೋದ್ಯಾಕೆ?

Why married couple are separated during Ashadha?

ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರಮಾಡೋದ್ಯಾಕೆ? ತಲೆತಲಾಂತರದಿಂದಲೂ ಆಚರಿಸಿಕೊಂಡು ಬರುತ್ತಿರುವ ಆಚರಣೆ ಇಂದೂ ಪ್ರಸ್ತುತವೆ? ಮಳೆಗಾಲವೇ ದಿಕ್ಕಾಪಾಲಾಗಿ ಓಡಿದೆ, ರೈತರನೇಕರು ಗುಳೆಯೆದ್ದು ನಗರಿಗೆ ಬಂದು ನೆಲೆಕಂಡಿದ್ದಾರೆ, ‘ಆಧುನಿಕ’ ಅತ್ತೆಯರಿಗೂ ಸೊಸೆ ಮನೇಲಿದ್ದರೆ ಅಂಥ ಬೇಸರವೇನಿಲ್ಲ. ಆದರೂ ನವ ಜೋಡಿಹಕ್ಕಿಗಳನ್ನು ಆಷಾಢದಲ್ಲಿ ಬೇರ್ಪಡಿಸುವುದೇಕೆ? ಅಥವಾ ದೂರ ಮಾಡಿದಷ್ಟೂ ಪ್ರೀತಿ ಹೆಚ್ಚಾಗುತ್ತದೆಯಾ?

ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ.

`ಏನಾಯ್ತೋ, ಟ್ವೆಂಟಿ-20 ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ- ಒಳಗೊಳಗೇ ನಗುತ್ತ ಹೀಗೆಂದ: `ಗೊತ್ತಿದೆಯಲ್ವನಿಂಗೂ? ಆಷಾಢ ಶುರುವಾಗಿದೆ. ಅದೇ ಕಾರಣಕ್ಕೆ ಹೆಂಡತಿ ಹೋಗಿ ಅಣ್ಣನ ಮನೆ ಸೇರ್‍ಕೊಂಡಿದಾಳೆ. ಅವಳ ಜೊತೆ ದಿನಕ್ಕೆ ಒಂದೆರಡಲ್ಲ, 48 ಬಾರಿ ಫೋನ್ ಮಾಡ್ತಿದ್ದೆ ನಿಜ. ಆದ್ರೂ ಸಮಾಧಾನ ಆಗ್ತಾ ಇರಲಿಲ್ಲ. ನಿನ್ನೆ ಸಂಜೆ ಸೀದಾ ಅವಳ ಅಣ್ಣನ ಮನೆಗೇ ಹೋದೆ. ಸಂಪ್ರದಾಯದ ನೆಪದಲ್ಲಿ ಅವರು ಅರ್ಧಗಂಟೆ ವಾಕ್ ಹೋಗೋಕೂ ಬಿಡಲ್ಲ ಅನ್ನಿಸ್ತು. ಅದಕ್ಕೇ ಉಪಾಯ ಮಾಡ್ದೆ, ದೇವಸ್ಥಾನಕ್ಕೆ ಬರುವಂತೆ ಅವಳಿಗೆ ಐಡಿಯಾ ಕೊಟ್ಟೆ. ದೇವಸ್ಥಾನದಲ್ಲಿ ಐದು ನಿಮಿಷ ಇದ್ದು ಸೀದಾ ಮಲ್ಟಿಪ್ಲೆಕ್ಸ್‌ಗೆ ಸಿನಿಮಾಕ್ಕೆ ಹೋದ್ವಿ. ಅಲ್ಲಿ ಇಬ್ರೂ ಪರಸ್ಪರ ಭೇಟಿ ಯಾಗಿದ್ದೂ ಆಯ್ತು. ಬೇಟೆ ಆಡಿದ್ದೂ ಆಯ್ತು! ನಮ್ಮ ಮದುವೆಯಾಗಿ ಇನ್ನೂ ಹದಿನೈದು ದಿನ ಕಳೆದಿಲ್ಲ. ಹಾಗಿರುವಾಗ ಸಂಪ್ರದಾಯದ ನೆಪದಲ್ಲಿ ದೂರ ಮಾಡೋಕೆ ನೋಡಿದ್ರೆ ನಾವಾದ್ರೂ ಹೇಗೆ ಇರೋ ಕಾಗ್ತದೆ ಹೇಳು…. ಈ ಆಷಾಢದ ಮನೆ ಹಾಳಾಗ! ‘ಹೀಗೆಂದವನೇ, ಗೆಳೆಯ ಮಾತು ನಿಲ್ಲಿಸಿದ.

* * *
`ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು’ ಎಂಬ ಮಾತು ಗೆಳೆಯನ ನೆಪದಲ್ಲಿ ಮತ್ತೆ ನೆನಪಾಯಿತು. ಹಿಂದೆಯೇ, ನಮ್ಮ ಮಧ್ಯೆ ಇವತ್ತಿಗೂ ವ್ರತದಂತೆ ಆರಣೆಯಲ್ಲಿರುವ- `ಆಷಾಢದಲ್ಲಿ ಹೊಸ ಮನೆ ಖರೀದಿಸಬಾರದು, ಮನೆ ಬದಲಿಸಬಾರದು, ವಾಹನ ಕೊಳ್ಳಬಾರದು, ಆಸ್ತಿ ಮಾರಬಾರದು, ಮನೆ ನಿರ್ಮಾಣಕ್ಕೆ ಪಾಯ ಹಾಕಬಾರದು, ಮದುವೆಯೂ ಸೇರಿದಂತೆ ಯಾವೊಂದು ಶುಭ ಕಾರ್ಯವೂ ಆಷಾಢ ಮಾಸದಲ್ಲಿ ನಡೆಯಬಾರದು…’ ಎಂಬಿತ್ಯಾದಿ ಮಾತುಗಳೆಲ್ಲ ಸಾಲು ದೀಪದ ಬೆಳಕಿನಂತೆ ಕಣ್ಮುಂದೆ ಬಂದು ಹೋದವು. ಆಗಲೇ ಹುಟ್ಟಿಕೊಂಡದ್ದು ಈ ಪ್ರಶ್ನೆಗಳ ಗುಚ್ಛ: ಅಲ್ಲ, ಆಷಾಢದಲ್ಲಿ ಅದ್ಯಾಕೆ ಮದುವೆಯಾಗಬಾರದು? ಯಾಕೆ ಹೊಸ ಮನೆ ಕಟ್ಟಿಸಬಾರದು ಖರೀದಿಸಬಾರದು? ಗಂಡ-ಹೆಂಡತಿ ಜೊತೆಯಾಗಿದ್ದರೆ ಈ ಆಷಾಢಕ್ಕೇನು ಕಷ್ಟ? ಈ ಮಾಸದಲ್ಲಿ ಕೂಡ ಅದದೇ ಭಾನುವಾರ, ಸೋಮವಾರ, ಮಂಗಳವಾರ… ವಗೈರೆಗಳೇ ಇದ್ದರೂ ಹೊಸದಾಗಿ ವಾಹನ ಖರೀದಿಸಬಾರದು ಎಂದರೆ ಏನರ್ಥ? ಆಷಾಢದಲ್ಲೂ ದಿನಸಿ, ಸಾಂಬಾರ ಪದಾರ್ಥಗಳು ಹಾಗೂ ತರಕಾರಿಯನ್ನು ದಿನ ದಿನವೂ ಖರೀದಿಸುವ ಜನ, ಆಸ್ತಿ ಖರೀದಿಯ ವಿಷಯ ಬಂದಾಗ ಮಾತ್ರ ಹಾವು ತುಳಿದವರಂತೆ ಬೆಚ್ಚುವುದೇಕೆ? ಒಂದು ವೇಳೆ ಯಾರಾದರೂ ಕಿಲಾಡಿಗಳು, ಈ ಆಷಾಢ ಮಾಸ ತುಂಬಾ ಕೆಟ್ಟದು. ಹಾಗಾಗಿ ಒಂದಿಡೀ ತಿಂಗಳು ಯಾರೂ ಊಟ ಮಾಡಬಾರದು, ಸ್ನಾನ ಮಾಡಬಾರದು ಮತ್ತು ಉಸಿರಾಡಲೂಬಾರದು ಎಂದು ಹೇಳಿಬಿಟ್ಟರೆ…?!

ಇಂಥದೊಂದು ಯೋಚನೆ ಬಂದೊಡನೆ ನಗು ಬಂತು. ಹಿಂದೆಯೇ ಆಷಾಢದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲ ಜನ ಹಾಗೂ ಪರಿಸರದ `ಬದಲಾದ ಚಿತ್ರವೂ’ ಕಣ್ಮುಂದೆ ಹಾದು ಹೋಯಿತು; ಬ್ಲಾಕ್ ಅಂಡ್ ವೈಟ್ ಸಿನಿಮಾದ ದೃಶ್ಯಗಳ ಹಾಗೆ…

ಹೌದಲ್ಲವಾ? ಉಳಿದೆಲ್ಲ ಸಂದರ್ಭಗಳಲ್ಲೂ ಆಕಾಶ ಶುಭ್ರವಾಗಿರುತ್ತದೆ. ಸ್ವಚ್ಛವಾಗಿರುತ್ತದೆ. ಆದರೆ, ಆಷಾಢ ಮಾಸ ಬಂತೆಂದರೆ ಸಾಕು, ಆಕಾಶವೆಂಬೋ ಆಕಾಶ ಕೂಡ ಸ್ವಲ್ಪ ಮಂಕಾಗುತ್ತದೆ, ಮಸುಕಾದಂತೆ ಕಾಣಿಸುತ್ತದೆ. ರೈಲಿನ ಎಂಜಿನ್‌ನಿಂದ ಹೊರಟ ಹೊಗೆಯಂತೆ ಕಾಣುವ ಕಡುಗಪ್ಪು ಮೋಡಗಳು ಆಕಾಶದ ಚೆಲುವನ್ನೇ ಹಾಳು ಮಾಡಿರುತ್ತವೆ. ಈ ಮೋಡಗಳಲ್ಲಿರುವ ಅಷ್ಟೂ ಮಳೆ ನೀರನ್ನು ಸುರಿಸಿ, ದುಗುಡ, ದುಮ್ಮಾನವನ್ನು ಕಳೆದುಕೊಳ್ಳಬೇಕೆಂಬ ಬಯಕೆ ಆಗಸಕ್ಕಿರುತ್ತದೆ, ನಿಜ. ಆದರೆ, ತುಂಬ ಸಂದರ್ಭದಲ್ಲಿ ಮೋಡಗಳು ಮಳೆ ಸುರಿಸುವುದೇ ಇಲ್ಲ. ಬದಲಿಗೆ, ಅಮ್ಮನೊಂದಿಗೆ `ಠೂ’ ಬಿಟ್ಟು ಮನೆಯ ಇನ್ನೊಂದು ಮೂಲೆಗೆ ಬಂದು ಮುಖ ಊದಿಸಿಕೊಂಡು ಕೂರುವ ಮಗುವಿನಂತೆ, ಅದೇ ಆಗಸದ ಇನ್ನೊಂದು ತುದಿಗೆ ಬಂದು ಕೂತುಬಿಡುತ್ತವೆ. ಪರಿಣಾಮ, ಈ ಆಷಾಢದ ಸಂದರ್ಭದಲ್ಲಿ ಆಕಾಶದಂಥ ಆಕಾಶ ಕೂಡ ಎಲ್ಲ ಇದ್ದರೂ ಏನೂ ಇಲ್ಲ ಎಂಬಂಥ ನೋವಿನಿಂದ ಕಂಗಾಲಾಗಿರುತ್ತದೆ. ಅದಕ್ಕೇ ಹೇಳಿದ್ದು- ಆಷಾಢ ಎಂದರೆ ಖಿನ್ನತೆ. ಆಷಾಢ ಎಂದರೆ ಯಾತನೆ, ಆಷಾಢ ಎಂದರೆ ದುಗುಡ ಮತ್ತು ಆಷಾಢವೆಂದರೆ ವಿರಹ! ಹೀಗೆ ಅಂದಾಕ್ಷಣ ಮನಸ್ಸು ಮತ್ತೆ ಅದೇ ಹಳೆಯ ಪ್ರಶ್ನೆಗೇ ಬರುತ್ತದೆ: `ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರಮಾಡೋದ್ಯಾಕೆ?’

ಹಿರಿಯರ ಜಾಣತನವನ್ನೇ ಅಂದಾಜು ಮಾಡಿಕೊಂಡು ಹೇಳುವುದಾದರೆ- ಮದುವೆಗಳ ಸೀಜನ್ ಆರಂಭವಾಗುವುದೇ ಜೇಷ್ಠ ಮಾಸದಲ್ಲಿ. ಆ ತಿಂಗಳು- ಮದುವೆ, ನಂತರದ ಒಂದಿಷ್ಟು ಶಾಸ್ತ್ರ, ದೇವಸ್ಥಾನ, ಗೆಳೆಯರ ಮನೆಗಳಿಗೆ ಯಾತ್ರೆ ಇತ್ಯಾದಿಗಳಲ್ಲೇ ಮುಗಿದು ಹೋಗುತ್ತದೆ. ಈ ಮಧ್ಯೆಯೇ `ಹೊಸ ಬದುಕಿನ ರಸಮಯ ಕ್ಷಣಗಳ’ ರುಚಿ ಗಂಡ-ಹೆಂಡತಿ, ಇಬ್ಬರಿಗೂ ಆಗಿರುತ್ತದೆ. ಪರಿಣಾಮ, ಇಬ್ಬರೂ `ನಿನ್ನ ಅರೆಗಳಿಗೆಯೂ ನಾನು ಬಿಟ್ಟಿರಲಾರೆ…’ ಎಂಬ ಉನ್ಮಾದದ ಸ್ಥಿತಿಗೆ ಬಂದಿರುತ್ತಾರೆ. ಹೀಗಿದ್ದಾಗಲೇ ಕಳ್ಳನಂತೆ, ಒಂದೊಂದೇ ಹೆಜ್ಜೆ ಇಡುತ್ತ ಬಂದೇ ಬಿಡುತ್ತದೆ ಆಷಾಢ. ಒಂದು ವೇಳೆ ಹಸಿಬಿಸಿ ಆಸೆಗಳಿಂದ ಹುಚ್ಚಾದ ನವ ದಂಪತಿಗಳನ್ನು ಈ ತಿಂಗಳು ಜೊತೆಯಾಗಿರಲು ಬಿಟ್ಟರೆ, ಬಿರು ಬೇಸಿಗೆಯ ಕಾಲಕ್ಕೆ ಹೆರಿಗೆಯಾಗಿ ಬಿಡುವ ಸಾಧ್ಯತೆಗಳಿರುತ್ತವೆ. ಬಿಸಿಲಿನ ತಾಪಕ್ಕೆ ಕೆಲವೊಮ್ಮೆ ದಿಢೀರನೆ ಜ್ವರ ಬಂದು ಬಿಡುವ ಸಾಧ್ಯತೆಗಳಿರುತ್ತದೆ. ಈ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆಯನ್ನು ತಪ್ಪಿಸಬೇಕೆಂಬ ಆಶಯದಿಂದಲೇ ಒಂದು ತಿಂಗಳ ಮಟ್ಟಿಗೆ ಗಂಡ-ಹೆಂಡತಿಯನ್ನು ತಾತ್ಕಾಲಿಕವಾಗಿ ದೂರ ಇರಿಸಲಾಗುತ್ತದೆ.

ಅಂತೆಯೇ, ಆಷಾಢದ ಸಂದರ್ಭದಲ್ಲಿ, ಆಗಷ್ಟೇ ಮಳೆ ಬಿದ್ದು ಬಿತ್ತನೆ, ಕಳೆ ಕೀಳುವುದೂ ಸೇರಿದಂತೆ ರೈತರಿಗೆ ಕೈ ತುಂಬ ಕೆಲಸ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಮನೆ ಕಟ್ಟಿಸುವ/ ಖರೀದಿಸುವ ಕೆಲಸಕ್ಕೆ ನಿಂತರೆ ಮೈಮರೆವಿನ ಕಾರಣಕ್ಕೆ ಕೃಷಿ ಕೆಲಸ ಕೆಡಬಹುದು ಎಂಬ ಇನ್ನೊಂದು ಕಾರಣ ಕೂಡ `ಆಷಾಢದಲ್ಲಿ ಶುಭಕಾರ್ಯಗಳಿಗೆ ನಿಷಿದ್ಧ’ ಎಂಬ ಘೋಷಣೆಯ ಹಿಂದಿರಬಹುದೇನೋ ಅನಿಸುತ್ತದೆ.

ಇಂಥದೊಂದು ಸಮಜಾಯಿಷಿ ಕೊಟ್ಟ ನಂತರವೂ ಆಷಾಢ ಎಂದಾಕ್ಷಣ `ನವದಂಪತಿಯ’ ಇರುಳಿನ ಸಂಕಟವೇ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಮನಸ್ಸು, ಹದಿನೈದಿಪ್ಪತ್ತು ವರ್ಷ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಗಳ ಹಿಂದೆ ಯಾತ್ರೆ ಹೊರಡುತ್ತದೆ. ತುಂಟ ಕಂಗಳು ಅದನ್ನು ಹಿಂಬಾಲಿಸುತ್ತವೆ… ಯಾರು ಏನೇ ಹೇಳಲಿ, ಹಳೆಯ ದಿನಗಳ ಆಚರಣೆಯೇ ಚೆಂದವಿತ್ತು. ಆಗೆಲ್ಲ- ಆಷಾಢ ಇನ್ನೂ ನಾಲ್ಕೈದು ದಿನವಿದೆ ಎನ್ನುವಾಗಲೇ ಗಂಡನ ಮನೆಯಿಂದ ತಂಗಿಯನ್ನು ಕರೆ ತರಲು ಅಣ್ಣ ತಯಾರಿ ನಡೆಸುತ್ತಿದ್ದ. ಈ ಕಡೆ- ಆಷಾಢದಲ್ಲಿ ಅತ್ತೆ-ಸೊಸೆ ಒಂದೇ ಮನೇಲಿದ್ರೆ ಕೆಡುಕು ತಪ್ಪಿದ್ದಲ್ಲ ಎಂಬ ಹಳೆಯ ಮಾತನ್ನು ನಂಬಿ, ಸೊಸೆ ಅನ್ನಿಸಿಕೊಂಡಾಕೆ ಕೂಡ ಅಪ್ಪನ ಮನೆಗೆ ಹೊರಟು ನಿಲ್ಲುತ್ತಿದ್ದಳು. ಅಣ್ಣ ಬರುವುದು ಒಂದೆರಡು ದಿನ ತಡವಾದರೂ ಸಾಕು; ಹೆಣ್ಣು ಮಕ್ಕಳಿಗೆ `ಆಷಾಢ ಮಾಸ ಬಂದೀತಮ್ಮ/ ತೌರಿಂದ ಅಣ್ಣ ಬರಲಿಲ್ಲ/ ಎಷ್ಟು ನೆನೆಯಲಿ ಅಣ್ಣನ ದಾರಿ/ ಸುವ್ವೋ ಲಾಲಿ ಸುವ್ವಾಲಾಲಿ’ ಎಂಬ ಹಾಡು ನೆನಪಾಗಿಬಿಡುತ್ತಿತ್ತು.

About sujankumarshetty

kadik helthi akka

Posted on ಆಗಷ್ಟ್ 11, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: