Good health | Fever psychosis | Ageing syndrome | – ದಿನಕ್ಕೊಂದು ಸೇಬು, ಖಾಲಿಯಾಗದೆ ಜೇಬು!

An apple a day keeps doctor away

ಒಂದು ಮಾತಂತೂ ಸತ್ಯ. ಆರೋಗ್ಯದ ಬಗೆಗೆ ಸಾವಿರ ಎಚ್ಚರಿಕೆಗಳನ್ನು ಕೊಟ್ಟರೂ ಜ್ವರ ಬಂದು ಎದೆ ಬಾಗಿಲು ತಟ್ಟುವ ತನಕ ನಾವು ಜಾಗೃತರಾಗುವ ಪೈಕಿ ಅಲ್ಲ. ಹಾಗಂತ ಆರೋಗ್ಯ ಸಮಾಧಾನಗಳನ್ನು ಹೇಳಬಾರದೆಂಬ ನಿಯಮವಿಲ್ಲ. ಏಕೆಂದರೆ ಕೇಳಿಸಿಕೊಳ್ಳುವುದಕ್ಕೆ ನೀವಿದ್ದೀರಲ್ಲ!

ಈಗ ಕಾಲ ಚೆನ್ನಾಗಿಲ್ಲ. ಏಕೆಂದರೆ, ನಾವೆಲ್ಲ ಈಗ ಭಯದ ಮಧ್ಯೆ, ಅಪನಂಬಿಕೆಯ ಮಧ್ಯೆ, ಅನುಮಾನದ ಮಧ್ಯೆಯೇ ಬದುಕುವಂತಾಗಿದೆ. ಇವತ್ತು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಸಂಕಟಗಳು ಎದುರಾಗುತ್ತವೆಯೋ ಹೇಳಲು ಬರುವುದಿಲ್ಲ. ಬೆಳಗ್ಗೆ ನಗುನಗುತ್ತಾ ಆಫೀಸಿಗೆ ಹೊರಟವರು ಸಂಜೆ ಅದೇ ನಗೆಯೊಂದಿಗೆ ಮನೆಗೆ ಹಿಂದಿರುಗುತ್ತಾರೆ ಎಂಬ ಗ್ಯಾರಂಟಿ ಯಾರಿಗೂ ಇಲ್ಲ. ಮಧ್ಯಾಹ್ನದ ವೇಳೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ತಲೆನೋವು, ನಂತರ ವಾರವಿಡೀ ಉಳಿಯಬಹುದು. ವಿಕ್ಸ್, ಅಮೃತಾಂಜನ್, ಮಾತ್ರೆ, ಇಂಜಕ್ಷನ್‌ಗಳಿಗೆ ಜಗ್ಗದೆ ಹತ್ತಾರು ಬಗೆಯ ಟೆಸ್ಟ್ ಮಾಡಿಸಿಕೊಳ್ಳಲು; ಆ ಮೂಲಕ ಜೇಬನ್ನೂ ಬರಿದುಮಾಡಿಕೊಳ್ಳಲು ತಲೆನೋವೇ ಕಾರಣವಾಗಬಲ್ಲದು. ಅಷ್ಟೇ ಅಲ್ಲ; ನಲವತ್ತು ವರ್ಷ ತುಂಬಿತೆಂಬ ಖುಷಿಗೆ ಪಾರ್ಟಿ ಮಾಡಿಕೊಂಡು ಒಂದೆರಡು ಪೆಗ್ ಜಾಸ್ತಿ ಕುಡಿದು, ಆ ಕಾರಣಕ್ಕೇ ಜ್ವರವೆಂದು ಆಸ್ಪತ್ರೆಗೆ ಬಂದವನನ್ನು ಐದಾರೇಳೆಂಟು ಚೆಕಪ್‌ಗೆ ಒಳಪಡಿಸುವ ವೈದ್ಯರು- `ಇದೇನ್ರೀ ನಿಮ್ಗೆ ಬೀಪಿ, ಶುಗರ್ ಎರಡೂ ಇದೆ’ ಎಂದು ಹೇಳಿ ಶಾಕ್ ಕೊಡಬಹುದು! ಈಗ, ಕಾಲ ಚೆನ್ನಾಗಿಲ್ಲ ಅಂದದ್ದು ಅದಕ್ಕೇ.

ಹೌದಲ್ಲವಾ? ಹಿಂದೆ ಹೀಗಿರಲಿಲ್ಲ. ಆಗೆಲ್ಲ ಜ್ವರ-ಕೆಮ್ಮು-ತಲೆನೋವಿಗೆ ಜನ ಕೇರ್ ಮಾಡುತ್ತಿರಲಿಲ್ಲ. ತಲೆ ನೋವಿದ್ದರೆ ಸ್ಟ್ರಾಂಗ್ ಕಾಫಿ ಕುಡಿದು- `ಇನ್ನರ್ಧ ಗಂಟೇಲಿ ಈ ಶನಿ ಬಿಟ್ಟು ಹೋಗುತ್ತೆ’ ಅನ್ನುತ್ತಿದ್ದರು. ಆಗಲೂ ಬಿಡದಿದ್ದರೆ ಹಣೆಯ ಮೇಲೆ ಹಾಗೂ ಕಿವಿಗಳ ಸನಿಹವೇ ಇರುವ ನರಗಳ ಮೇಲೆ ಅಮೃತಾಂಜನ ತಿಕ್ಕಿ ಹತ್ತು ನಿಮಿಷ ಮಲಗುತ್ತಿದ್ದರು. ಆಗಲೂ ಬಿಡದಿದ್ದರೆ ಸಿಟ್ಟಿಗೆದ್ದು- ದರಿದ್ರದ ತಲೆನೋವೇ, ನಿಂಗೆ ಮಾಡ್ತೀನಿರು ಎಂದುಕೊಂಡು ಒಂದು ಮಾತ್ರೆ ನುಂಗುತ್ತಿದ್ದರು. ಆಗಂತೂ ತಲೆನೋವು ಖಂಡಿತ ಹೋಗಿಬಿಡುತ್ತಿತ್ತು. ಹೀಗೆಯೇ ಜ್ವರಕ್ಕೆ ಸಾರಿಡಾನ್, ಕೆಮ್ಮು- ಶೀತಕ್ಕೆ ಕೋಲ್ಡ್ರಿನ್ ಥರದ ಮಾತ್ರೆಗಳಿದ್ದವು. ಒಂದೆರಡಲ್ಲ, ಭರ್ತಿ ನಾಲ್ಕು ದಿನ ಮಾತ್ರೆ ನುಂಗಿದರೂ ಜ್ವರ ಬಿಡದಿದ್ದಾಗ ಮಾತ್ರ ಡಾಕ್ಟರ್ ಬಳಿಗೆ ಹೋಗಿ ಇಂಜೆಕ್ಷನ್ ಹಾಕಿಸಿಕೊಳ್ಳುತ್ತಿದ್ದರು. ಒಂದು ಸ್ವಾರಸ್ಯವೆಂದರೆ, ಆ ದಿನಗಳಲ್ಲಿ ಹೆಚ್ಚಾಗಿ ನಲವತ್ತೈದು ವರ್ಷ ದಾಟಿದ ನಂತರವಷ್ಟೆ ಸ್ವಲ್ಪ ಅಪಾಯಕಾರಿ ಅನ್ನುವಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಶುಗರ್/ಬಿಪಿ ಏನಿದ್ದರೂ ಐವತ್ತರ ನಂತರವಷ್ಟೇ ಎಂಬ ನಂಬಿಕೆ ಹಲವರಿಗಿತ್ತು.

ಆದರೆ, ಈಗ ಹಾಗಿಲ್ಲ. `ಎರಡು ದಿನದಿಂದ ಜ್ವರ’ ಎಂಬ ಮಾತು ಕೇಳಿದರೆ- ಡಾಕ್ಟರೇ ಗಾಬರಿಯಾಗುತ್ತಾರೆ. ಬ್ಲಡ್ ಚೆಕ್ ಮಾಡಿಸಿ. ಬಿ.ಪಿ./ಶುಗರ್ ಲೆವೆಲ್‌ನ ಚೆಕ್ ಮಾಡಿಬಿಡೋಣ ಅನ್ನುತ್ತಾರೆ. `ನಾಲ್ಕು ದಿನಗಳಿಂದಲೂ ಜ್ವರ ಇದೆ’ ಎಂದೇನಾದರೂ ಹೇಳಿದರೆ; ಕೈಕಾಲಿನ ಬೆರಳುಗಳೆಲ್ಲಾ ನೋಯುತ್ತಿವೆ ಅಂದರೆ- `ನಿಮ್ಗೆ ಡೆಂಗ್ಯೂ ಇರಬಹುದು ಕಣ್ರೀ’ ಎಂದು ಹೇಳಿ ಆತಂಕ ಹೆಚ್ಚಿಸುತ್ತಾರೆ. ಜ್ವರ ಬಂದಾಗ ಜಾಸ್ತಿ ಸುಸ್ತಾಗ್ತಾ ಇರುತ್ತಾ ಎಂದು ಪ್ರಶ್ನೆ ಕೇಳಿ- `ಒಂದ್ಸಲ ಎಚ್‌ಐವಿ ಟೆಸ್ಟ್ ಕೂಡ ಮಾಡಿಸಿಬಿಡೋಣ. ಏನಂತೀರಿ? ಆರೋಗ್ಯದ ದೃಷ್ಟಿಯಿಂದ ಇದೆಲ್ಲ ಅನಿವಾರ್ಯ’ ಎಂಬ ಬುದ್ಧಿ ಮಾತನ್ನೂ ಹೇಳುತ್ತಾರೆ.

ಅದರರ್ಥ ಇಷ್ಟೆ; ಕಾಲ ಈಗ ಮೊದಲಿನಂತಿಲ್ಲ. ಅಪಾಯಕಾರಿ ಅನಿಸುವಂಥ ಕಾಯಿಲೆಗಳು ಈಗ ನಲವತ್ತೈದು ತುಂಬುವ ತನಕ ಕಾಯುತ್ತಾ ಕೂರುವುದಿಲ್ಲ. ಬದಲಿಗೆ, ಮೂವತ್ತು ವರ್ಷ ತುಂಬಿದ ಮರುಕ್ಷಣವೇ ಅದು ಹೇಗೋ ಓಡಿ ಬಂದು `ದೇಹವೆಂಬ ಮನೆಯ ಮನಸಿನ ನಡುಮನೆಯೊಳಗೆ ಜಾಗ ಮಾಡಿಕೊಂಡು ಕೂತುಬಿಡುತ್ತವೆ. ಪರಿಣಾಮ ಏನಾಗಿದೆಯೆಂದರೆ, ಮೂವತ್ತೈದು ದಾಟುತ್ತಿದ್ದಂತೆಯೇ ಪ್ರತಿ ಆರು ತಿಂಗಳಿಗೊಮ್ಮೆ ಬಿಪಿ, ಶುಗರ್, ಬ್ಲಡ್ ಚೆಕಪ್ ಮಾಡಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಾವಾಗ ಯಾವ ಕಾಯಿಲೆ ಅಮರಿಕೊಂಡೀತೋ, ಎಂಬ ಕಾರಣದಿಂದಲೇ ಎಲ್ಲರೂ ಭಯದ ಮಧ್ಯೆಯೇ ಬದುಕುವಂತಾಗಿದೆ; ಸಂಕಟದಿಂದಲೇ ದಿನ ತಳ್ಳುವಂತಾಗಿದೆ.

ಹೌದು. ಸಾವೆಂಬುದು ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ, ನಾವೆಲ್ಲ ಇವತ್ತಲ್ಲ ನಾಳೆ ಸಾಯೋದು ಗ್ಯಾರಂಟಿ ಎಂದು ಎಲ್ಲರಿಗೂ ಗೊತ್ತಿದೆ. ಈ ಸರಳ ಸತ್ಯದ ಅರಿವಿದ್ದರೂ- ಕಾಯಿಲೆ ತಾನೇ? ಬರಲಿ ಬಿಡ್ರಿ. ನಾಳೆ ಹೋಗೋರು ಇವತ್ತೇ ಹೋಗಿ ಬಿಡೋಣ ಎನ್ನಲು ಯಾರೊಬ್ಬರೂ ತಯಾರಿಲ್ಲ. ಎಷ್ಟೇ ಕಷ್ಟವಾದರೂ ಸರಿ; ಇನ್ನೊಂದೈದು ವರ್ಷ ಬದುಕಬೇಕು ಎಂದೇ ಎಲ್ಲರೂ ಆಸೆ ಪಡುತ್ತಾರೆ. ರೋಗಗಳಿಂದ ದೂರ ಇರುವುದು ಹೇಗೆ ಎಂದು ಸದಾ ಯೋಚಿಸುತ್ತಿರುತ್ತಾರೆ! ಸದ್ಯದ ಸಂದರ್ಭಕ್ಕೆ ಅನ್ವಯಿಸಿ ಹೇಳುವುದಾದರೆ-ನಲವತ್ತು ವರ್ಷ ಎಂಬುದು ನಮ್ಮ ಒಟ್ಟು ಜೀವಿತಾವಯಲ್ಲಿ ಶೇ.60ರಷ್ಟು ಆಯಸ್ಸು ಮುಗಿದು ಹೋಗಿದೆ ಎಂದು ಸೂಚಿಸುವ ಕ್ಷಣ. ಆನಂತರವೂ ಸಂಭ್ರಮದಿಂದ, ಸಂತೋಷದಿಂದ, ಹುಡುಗರಷ್ಟೇ ಖುಷಿಯಿಂದ ಬದುಕುವುದು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ. ಇವುಗಳನ್ನು `ಹೆಲ್ತ್ ಟಿಪ್ಸ್’ ಎಂದೂ ಕರೆಯಬಹುದೇನೋ…

***
* ದಿನಕ್ಕೊಂದು ಸೇಬು ತಿಂದರೆ, ಏಕಕಾಲಕ್ಕೆ ವೈದ್ಯ ಹಾಗೂ ರೋಗದಿಂದ ದೂರವಿರಬಹುದು ಎಂಬ ಮಾತಿದೆ. ಹಾಗೆಯೇ ಉಪಹಾರದ ಬದಲು ತರಕಾರಿಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಇನ್ನೊಂದು ಮಾತೂ ಇದೆ. ಸ್ವಾರಸ್ಯವೆಂದರೆ, ಯಾವುದಾದರೂ ಕಾಯಿಲೆ ಅಮರಿಕೊಂಡು, ಡಾಕ್ಟರ್ ಬಳಿಗೆ ಹೋದಾಗ ಅವರು ಮುನ್ನೂರು ರೂಪಾಯಿಗೆ ಮಾತ್ರೆ ಬರೆದು, ನಂತರ- `ಜಾಸ್ತಿ ಹಣ್ಣು ತಿನ್ನಿ’ ಅನ್ನುವವರೆಗೂ ನಮಗೆ ಸೇಬು, ಮೂಸಂಬಿ, ಸಪೋಟ, ಸೀತಾಫಲಗಳ ನೆನಪೇ ಬಂದಿರುವುದಿಲ್ಲ. ಮಾರ್ಕೆಟ್ಟಿಗೆ ಹೋದಾಗಲೆಲ್ಲ ಕೇಜಿಗೆ ಎಷ್ಟ್ರೀ ಎಂದು ಸೇಬನ್ನೇ ಆಸೆಯಿಂದ ನೋಡುತ್ತಾ ಪ್ರಶ್ನೆ ಹಾಕಿರುತ್ತೇವೆ ನಿಜ. ಆದರೆ, ಅಂಗಡಿಯವನು ಒಂದು ರೇಟ್ ಹೇಳಿದರೆ, ತಕ್ಷಣವೇ ಬೆಚ್ಚಿಬಿದ್ದು- `ಆ ಆ ಆ… ಅಷ್ಟೊಂದಾ?’ ಎಂದು ಉದ್ಗರಿಸಿ ಮನೆಗೆ ಬಂದಿರುತ್ತೇವೆ.

ಆದರೆ, ನೆನಪಿಡಿ: ಒಂದು ರೋಗ ಕೊಡುವ ಮಾನಸಿಕ ಹಿಂಸೆಗಿಂತ; ಕೆಲವು ಸಂದರ್ಭಗಳಲ್ಲಿ ವೈದ್ಯರ ಬಿಲ್ ನೀಡುವ ಶಾಕ್‌ಗಿಂತ ಹಣ್ಣು- ತರಕಾರಿಯ ಬೆಲೆ ಖಂಡಿತ ಹೆಚ್ಚಿರುವುದಿಲ್ಲ. ಹಾಗಾಗಿ, ನಲವತ್ತು ಸಮೀಪಿಸುತ್ತದೆ ಎನ್ನುವ ಮೊದಲೇ ಅಕ್ಕಿಯಿಂದ ತಯಾರಿಸಿದ ಆಹಾರ ಸೇವನೆಯನ್ನು ಇಷ್ಟಿಷ್ಟೇ ಕಡಿಮೆ ಮಾಡಿ ಉಪಾಹಾರದ ವೇಳೆಯಲ್ಲಿ ಒಂದು ಲೋಟ ನೀರಿಗೆ ನಾಲ್ಕು ಸ್ಪೂನ್ ಜೇನುತುಪ್ಪ ಸೇರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಗೆ ಎಟುಕುವಂತಹ ಹಣ್ಣು-ತರಕಾರಿ ತಿನ್ನುವುದನ್ನೂ ರೂಢಿ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಅದೆಷ್ಟೋ ರೋಗಗಳನ್ನು ಖಂಡಿತ ದೂರ ಇರಿಸಬಹುದು.

* ದಿನವೂ, ತಪ್ಪದೇ ಹತ್ತು ನಿಮಿಷಗಳ ಮಟ್ಟಿಗಾದರೂ ವ್ಯಾಯಾಮ ಮಾಡುವುದು; ಅಷ್ಟೇ ನಿಮಿಷಗಳವರೆಗೆ ಧ್ಯಾನ-ಯೋಗದಲ್ಲಿ ತೊಡಗುವುದರಿಂದಲೂ ರೋಗಗಳನ್ನು ದೂರವಿಡಬಹುದು. `ಅಯ್ಯೋ, ನಮ್ದು ಬಾಡಿಗೆ ಮನೆ ಕಣ್ರೀ. ಅಲ್ಲಿ ವ್ಯಾಯಾಮ ಮಾಡಲು ಜಾಗ ಇಲ್ಲ’ ಎಂದು ರಾಗ ಎಳೆಯುವವರಿಗೆ ಒಂದು ಆಪ್ತ ಸಲಹೆ. ವ್ಯಾಯಾಮ ಮಾಡಲು ಆಗದವರು, ಬೆಳಗ್ಗೆ ಹಾಗೂ ಸಂಜೆ ತಪ್ಪದೇ ಅರ್ಧ ಕಿಲೋಮೀಟರು ನಡೆದರೂ ಸಾಕು; ಬಂದು ಸ್ಟಾಪ್ ಹಿಂದೆಯೇ ಬಸ್ ಇಳಿದು ನಡೆದು ಹೋದರೂ ಸಾಕು, ಅದೇ ಒಳ್ಳೆಯ ವ್ಯಾಯಾಮವಾಗುತ್ತದೆ.

ಇಲ್ಲಿ ಒಂದು ಮಾತು: ಡಾಕ್ಟರ್ ಏನಾದರೂ- `ಇನ್ಮೇಲೆ ದಿನವೂ ವಾಕ್ ಮಾಡಿ. ಬಿ.ಪಿ. ಹತೋಟಿಗೆ ಬರುತ್ತೆ’ ಎಂದು ಹೇಳಿದರೆ ಸಾಕು; ನಮ್ಮ ಜನ ಮೊದಲ ನಾಲ್ಕು ದಿನ ಹಟಕ್ಕೆ ಬಿದ್ದವರಂತೆ ಭರ್ತಿ ನಾಲ್ಕು ಕಿಲೋಮೀಟರುಗಳ ದೂರದವರೆಗೆ (`ಅನುಭವ’ ಚಿತ್ರದ ಕಾಶೀನಾಥ್ ಥರಾ) ನಡೆದುಬಿಡುತ್ತಾರೆ! ಐದನೇ ದಿನ ಹಾಸಿಗೆಯಿಂದ ಏಳುವುದಕ್ಕೂ ಆಗದ ಸ್ಥಿತಿ! ಅವತ್ತೇ ತೀರ್ಮಾನಿಸುತ್ತಾರೆ: ಈ ವಾಕಿಂಗೂ ಬೇಡ, ಈ ಹಿಂಸೆಯೂ ಬೇಡ!

ನಿಜ ಹೇಳಬೇಕೆಂದರೆ, ವಾಕ್ ಮಾಡಿ ಎಂದರೆ, ಒಂದೇ ದಿನ ನಾಲ್ಕು ಕಿಲೋಮೀಟರ್ ನಡೆಯಿರಿ ಎಂದರ್ಥವಲ್ಲ. ಬದಲಿಗೆ ಕೈಕಾಲು ಗಟ್ಟಿಯಾಗಿರುವ ಕ್ಷಣದವರೆಗೂ ದಿನವೂ ಹದಿನೈದಿಪ್ಪತ್ತು ನಿಮಿಷ ನಡೆಯುತ್ತಿರಿ ಎಂದಷ್ಟೇ ಅರ್ಥ. ಹೀಗೆ ವಾಕ್ ಮಾಡುವ ಸಂದರ್ಭದಲ್ಲಿ ವ್ಯಾಪಾರದಲ್ಲಿ ಆದ ನಷ್ಟ, ಬಾಸ್ ಜತೆ ಮಾಡಿಕೊಂಡ ಜಗಳ, ಗೆಳೆಯನೊಂದಿಗೆ ಮಾಡಿಕೊಂಡ ಕಿರಿಕಿರಿ, ಕಟ್ಟಬೇಕಿರುವ ಚೀಟಿದುಡ್ಡಿನ ಮೊತ್ತ, ಮಕ್ಕಳು ಸ್ಕೂಲಿನಲ್ಲಿ `ಬಿ’ ಗ್ರೇಡ್ ಪಡೆದಿರುವ ವಿಚಾರ, ಊರಲ್ಲಿ, ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಅಪ್ಪ-ಅಮ್ಮ… ಇತ್ಯಾದಿಯ ಬಗ್ಗೆ ಯೋಚಿಸಬೇಡಿ. ಈ ಸಂದರ್ಭದಲ್ಲಿ ಮನಸ್ಸು ನೆಮ್ಮದಿಯಿಂದಿರಲಿ. ದುಗುಡದಿಂದ, ಚಿಂತೆಗಳಿಂದ ಮುಕ್ತವಾಗಿರಲಿ. ಮನಸ್ಸನ್ನು ಹೀಗಿಟ್ಟುಕೊಂಡು ದಿನವೂ ವಾಕ್ ಮಾಡಿದರೆ, ರೋಗಗಳನ್ನು ದೂರ ಇಡಬಹುದು, ತೂಕ ಇಳಿಸಿಕೊಳ್ಳಬಹುದು, ಬಿಪಿಯಿಂದಲೂ ಬಚಾವಾಗಬಹುದು!

* ಚಿತ್ರರಂಗಕ್ಕೆ ಬಂದಾಗಿನಿಂದ ಇವತ್ತಿನವರೆಗೂ ಫ್ರೆಶ್‌ಫ್ರೆಶ್ ಚೆಲುವೆ ಎಂಬಂತಿರುವಾಕೆ ನಟಿ ರಮ್ಯ. ನಿಮ್ಮ ಸೌಂದರ್ಯ ಕಳೆದ ಐದು ವರ್ಷಗಳಿಂದಲೂ ಒಂದಿಷ್ಟೂ ಬದಲಾಗದೆ ಇದೆಯಲ್ಲ? ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಯಾರೇ ಕೇಳಿದರೂ ಆಕೆ ಸಂಭ್ರಮದಿಂದ ಹೇಳುತ್ತಾರೆ: `ನಾನು ಜಾಸ್ತಿ ನೀರು ಕುಡೀತೀನಿ. ಕಡಿಮೆ ಸ್ವೀಟ್ ತಿಂತೀನಿ. ಅಷ್ಟು ಬಿಟ್ರೆ ಸೌಂದರ್ಯ ಕಾಪಾಡಿಕೊಳ್ಳಲು ಯಾವ ಕಸರತ್ತನ್ನೂ ನಾನು ಮಾಡೋದಿಲ್ಲ…’

ನಾವೆಲ್ಲ ಮರೆತಿರುವ ಸತ್ಯವೊಂದಿದೆ. ಏನೆಂದರೆ, ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ನಾವೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಪರಿಶುದ್ಧವಾದ ನೀರು ಕುಡಿಯಬೇಕು. ಸ್ವಲ್ಪ ಜಾಸ್ತಿಯೇ ನೀರು ಕುಡಿದರೂ ಅದರಿಂದ ಒಳ್ಳೆಯದೇ ವಿನಃ ಕೆಟ್ಟದಿಲ್ಲ. ಆದರೆ, ಇವತ್ತು ಬ್ಯುಸಿ ಬದುಕಿನ ಗೊಂದಲದಲ್ಲಿ ಮುಳುಗಿರುವ ನಾವೆಲ್ಲ- `ಅಯ್ಯೋ, ಜಾಸ್ತಿ ನೀರು ಕುಡಿದ್ರೆ ನಾವೆಲ್ಲ ಆಫೀಸಿನಲ್ಲಿ ಪದೇ ಪದೆ ಟಾಯ್ಲೆಟ್‌ಗೆ ಹೋಗಬೇಕಾಗ್ತದೆ. ಅದೆಲ್ಲ ಸುಮ್ನೆ ಹಿಂಸೆ’ ಎನ್ನುತ್ತಾ ಗುಟುಕು ನೀರು ಕುಡಿದು ಓಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. Nature call is more important than national call ಎಂದು ಗಾಂಜಿಯವರೇ ಹೇಳಿದ್ದಾರಂತೆ. ಆದರೂ ನಮಗೆ ಜಾಸ್ತಿ ನೀರು ಕುಡಿದು ಆಫೀಸಿಗೋ/ಶಾಲೆ ಕಾಲೇಜಿಗೋ ಹೋಗಲು ಏನೋ ಸಂಕೋಚ!

ನೆನಪಿರಲಿ: ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುವುದೂ ಸೇರಿದಂತೆ ಹಲವು ಬಗೆಯ ಕಾಯಿಲೆಗಳು ಸಣ್ಣದೊಂದು ಸುಳಿವನ್ನೂ ಕೊಡದೆ ಬಂದುಬಿಡಬಹುದು; ಆ ಮೂಲಕ ನಲವತ್ತರ ನಂತರದ ಬದುಕು `ನರಕ’ವಾಗುವಂತೆ ಮಾಡಬಹುದು. ಅಂಥದೊಂದು ಪರಿಸ್ಥಿತಿ ಎದುರಾಗಬಾರದು ಎಂದರೆ, ಚೆನ್ನಾಗಿ ನೀರು ಕುಡಿಯಿರಿ. ನಿರಾಳವಾಗಿರಿ.

* ಇವತ್ತಿನ ಬ್ಯುಸಿ ಬದುಕಿನಲ್ಲಿ ಕಳೆದುಹೋಗಿರುವವರಿಗೆ ಈ ವಿವರಣೆ ಓದಿ ನಗು ಬರಬಹುದು; ಆದರೆ, ಬೆಳಗಿನ ಹಾಗೂ ಸಂಜೆಯ ವೇಳೆ ಬಿಸಿಲಿಗೆ ಮೈ ಒಡ್ಡುವುದರಿಂದ ನಮ್ಮ ದೇಹಕ್ಕೆ ಸ್ವಲ್ಪ ಮಟ್ಟಿಗಿನ ರೋಗ ನಿರೋಧಕ ಶಕ್ತಿ ಬರುತ್ತದೆ ಎಂಬುದು ದಿಟ. (ನೆನಪಿಡಿ: ಹಳ್ಳಿಗಳಲ್ಲಿ ಈಗಲೂ ಮಕ್ಕಳಿಗೆ ಬಿಸಿಲು ಕಾಯಿಸುತ್ತಾರೆ!) ನಾವು ಬೆಳಗ್ಗೆ 10ಗಂಟೆಗೆ ಆಫೀಸಿನ ಒಳಗೆ ಹೋದರೆ, ಹೊರಗೆ ಬರೋದೇ ಸಂಜೆ ಆರೂವರೆಗೆ. ಅಷ್ಟರೊಳಗೆ ಸೂರ್ಯ ಮುಳುಗಿರ್‍ತಾನೆ. ಹಾಗಿರುವಾಗ ಬಿಸಿಲಿಗೆ ಮೈ ಒಡ್ಡುವುದಾದ್ರೂ ಹೇಗೆ ಎಂದು ಪ್ರಶ್ನೆ ಹಾಕುವವರಿಗೆ ಒಂದು ಸರಳ ಉತ್ತರವಿದೆ: ಬೆಳಗ್ಗೆಯ ಹೊತ್ತು ಮನೇಲಿರುವಾಗ ಅದೆಷ್ಟೇ ಬ್ಯುಸಿ ಅನ್ನಿಸಿಕೊಂಡ ಆಸಾಮಿಯೂ ಮುಕ್ಕಾಲು ಗಂಟೆಯನ್ನು ಸುಮ್ಮನೇ ಕಳೆದಿರುತ್ತಾನೆ. ಆ ಅವಧಿಯಲ್ಲಿ ಕೇವಲ ಹತ್ತೇ ಹತ್ತು ನಿಮಿಷ ಬಿಸಿಲಲ್ಲಿ ಬಂದು ನಿಂತರೆ ನಷ್ಟವೇನಿದೆ?

* ಎಲ್ಲರಿಗೂ ಗೊತ್ತಿರುವಂತೆ ಊಟ, ತಿಂಡಿ, ನೀರಿನಷ್ಟೇ ಮುಖ್ಯವಾದದ್ದು ನಿದ್ರೆ. ನಲವತ್ತು ದಾಟಿದ ನಂತರವೂ ತುಂಬು ಆರೋಗ್ಯದಿಂದ ಬದುಕಬೇಕು ಅನ್ನುವವರು ದಿನವೂ ಕಡ್ಡಾಯವಾಗಿ 6ರಿಂದ 7 ಗಂಟೆಗಳ ಕಾಲ ನಿದ್ರಿಸಬೇಕು. ಆದರೆ ನಲವತ್ತು ದಾಟಿದ ದಿನವೇ- `ಸೈಟು ತಗೊಳ್ಳಲಿಲ್ಲ, ಮನೆ ಕಟ್ಟಿಸಲಿಲ್ಲ, ಸಾಲ ಮುಗಿಯಲಿಲ್ಲ, ಮಗ ಸರಿಯಿಲ್ಲ, ಹೆಂಡತಿ(ಗಂಡ) ಹೇಳಿದ ಮಾತು ಕೇಳುವುದಿಲ್ಲ. ಒಡವೆ ಮಾಡಿಸಿಕೊಳ್ಳಲಿಲ್ಲ, ಸಂಬಂಧಿಕರಿಗೆ ಸರಿಸಮವಾಗಿ ಬದುಕಲು ಸಾಧ್ಯವಾಗಿಲ್ಲ… ಇಂಥ ಚಿಲ್ಲರೆ ಯೋಚನೆಗಳೇ ಹಲವರನ್ನು ಹಣ್ಣು ಮಾಡುತ್ತವೆ. ಪರಿಣಾಮ, ಅವರೆಲ್ಲ ನಿದ್ರಿಸುವ ಬದಲು ಯೋಚನೆಗೆ ತಲೆ ಕೊಡುತ್ತಾರೆ. ಮುಂದೆ ಅದೇ ಒಂದು ಚಿಂತೆಯಾಗುತ್ತದೆ. ಕೊರಗಾಗಿ ಪರಿಣಮಿಸುತ್ತದೆ. ಕಡೆಗೆ, ಆ ಚಿಂತೆಯ ಕಾರಣದಿಂದಲೇ ಯಾವುದೋ ಕಾಯಿಲೆ ಜತೆಯಾಗಿ…

ನಲವತ್ತಲ್ಲ, ಐವತ್ತರ ನಂತರವೂ ಚಿಂತೆಯಿಲ್ಲದೆ, ರೋಗಗಳ ತಂಟೆಯಿಲ್ಲದೆ ನೆಮ್ಮದಿಯಿಂದ ಬದುಕಬೇಕು ಎಂಬ ಹಿರಿಯಾಸೆ ಎಲ್ಲರಿಗೂ ಇದೆ. ಆದರೆ ಅಂಥ ಆಸೆಗೇ ಬ್ರೇಕ್ ಹಾಕಲು ಹೆಸರು- ಕುಲವೇ ಗೊತ್ತಿಲ್ಲದ ರೋಗಗಳು ಕ್ಯೂ ನಿಂತಿವೆ. ಅವುಗಳಿಂದ ಪಾರಾಗಲು ಇರುವ ಸುಲಭದ ಮಾರ್ಗಗಳ ವಿವರಣೆಯಷ್ಟೆ ಇಲ್ಲಿದೆ. ಅಂದ ಹಾಗೆ, ನಿಮಗಿದು ಇಷ್ಟವಾಯಿತಾ?

Advertisements

About sujankumarshetty

kadik helthi akka

Posted on ಆಗಷ್ಟ್ 11, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. 1 ಟಿಪ್ಪಣಿ.

  1. ಸೇಬಿನಲ್ಲಿ ೮೫-೯೦ ರಷ್ಟು ಪೆಸ್ಟಿಸೈಡ್ಸ್ ಇದೆ ಅನ್ನುತ್ತಾರೆ. ಹೌದೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: