Katie Kirkpatrick | Nick Godwin | Beautiful | Love for life – ಅವಳ ಮೇಲೆ ಸಾವಿಗೂ ಮೋಹವಿತ್ತು!

Katie Kirkpatrick weds Nick Godwin

ಕೆಲವರ ಬದುಕಿನ ಕಥೆಗಳೇ ಹಾಗೆ ; ಅವು ವಿನಾಕಾರಣ ಇಷ್ಟವಾಗುತ್ತವೆ. ಪದೇ ಪದೆ ನೆನಪಾಗುತ್ತವೆ. ಅವರ ಕಷ್ಟಗಳಿಗೆ ಮರುಗುವಂತೆ, ಸಂತೋಷಕ್ಕೆ ನಲಿಯುವಂತೆ, ಸಂಕಟಕ್ಕೆ ಕಣ್ಣೀರಿಡುವಂತೆ ಮಾಡಿಬಿಡುತ್ತವೆ. ಹೀಗೆ, ಒಂದು ಕಥೆಯ ನೆಪದಲ್ಲಿ `ಮನಸ್ಸಿಗೆ’ ಬಂದವರು ನಮ್ಮ ಬಂಧುಗಳಲ್ಲ, ಗೆಳೆಯರಲ್ಲ, ಪರಿಚಿತರಲ್ಲ, ನೆಂಟರಲ್ಲ, ನಮ್ಮ ಕೇರಿಯವರಲ್ಲ, ಊರಿನವರೂ ಅಲ್ಲ. ಕಡೆಗೆ, ನಮ್ಮ ದೇಶದವರೂ ಸಹ ಆಗಿರುವುದಿಲ್ಲ. ಆದರೂ ಅಂಥ ಕೆಲವರು ನೆನಪಾದಾಗ ಮನಸ್ಸು- `ಅಯ್ಯೋ ಪಾಪ’ ಎನ್ನುತ್ತದೆ. We miss you ಎಂದು ಚೀರುತ್ತದೆ; ಸಂಕಟದಿಂದ!

ನಮ್ಮ ಕಥಾನಾಯಕಿ ಅಮೆರಿಕಾದವಳು. ಹೆಸರು ಕಾಟಿ ಕಿರ್ಕ್ ಪ್ಯಾಟ್ರಿಕ್. ಆಕೆ ಎಂಥ ಅರಸಿಕನೂ ಒಮ್ಮೆ ಕದ್ದು ನೋಡಬೇಕು ಎಂದು ಹಂಬಲಿಸುವಂಥ ಸುಂದರಿ. ಇನ್ನೂ ವಿವರಿಸಿ ಹೇಳಬೇಕು ಅಂದರೆ, ಹತ್ತು ವರ್ಷದ ಹಿಂದೆ ನಮ್ಮ ಐಶ್ವರ್ಯಾ ರೈ ಇದ್ದಳಲ್ಲ; ಅಂಥ ಚೆಲುವು ಕಾಟಿ ರೆರ್ಕ್ ಪ್ಯಾಟ್ರಿಕ್‌ಳದ್ದು. ಹುಡುಗರಂತೂ ಅವಳನ್ನು `ಕಾಟಿ’ ಎಂದು ಕರೆಯುವ ಬದಲು you naughtyyyy ಎಂದು ಕರೆಯುತ್ತಿದ್ದರು. ತುಂಬು ಸೌಂದರ್ಯದ ಹುಡುಗಿಯರಿಗೆ, ಅದೇ ಕಾರಣಕ್ಕೆ ವಿಪರೀತ ಅನ್ನುವಷ್ಟು ಅಹಂಕಾರವಿರ್ತದಂತೆ. ಆದರೆ `ಕಾಟಿ’ಯ ವಿಷಯದಲ್ಲಿ ಆ ಮಾತು ಸುಳ್ಳಾಗಿತ್ತು. ಆಕೆ ಕಡಿಮೆ ಮಾತಿನ, ವಿಪರೀತ ನಾಚಿಕೆಯ, ತುಂಬಾ ಸಂಕೋಚದ ಹುಡುಗಿ. ಆಕೆಯ ಬದುಕೆಂಬ ಡಿಕ್ಷನರಿಯಲ್ಲಿ `ಅಹಂಕಾರ’ ಎಂಬ ಪದಕ್ಕೆ ಜಾಗವೇ ಇರಲಿಲ್ಲ.

ಹುಡುಗಿಯ ತಂದೆಯ ಹೆಸರು ಡೇವ್ ಕಿರ್ಕ್ ಪ್ಯಾಟ್ರಿಕ್. ತಾಯಿ ನಿಕಿ. ಒಬ್ಬಳೇ ಮಗಳೆಂಬ ಕಾರಣಕ್ಕೋ ಏನೋ, ಅವರು ಕಾಟಿಯನ್ನು ವಿಪರೀತ ಮುದ್ದಿನಿಂದ, ಆದರೆ ಅಷ್ಟೇ ಶಿಸ್ತಿನಿಂದ ಬೆಳೆಸಿದ್ದರು. ಅವರ ಮನೆಯಲ್ಲಿ ಸಂತೋವೆಂಬುದು ಮಲ್ಲಿಗೆಯ ಪರಿಮಳದಂತೆ ಹರಡಿಕೊಂಡಿತ್ತು. ಅಮೆರಿಕದಂಥ ಸ್ವಚ್ಛಂದ ಮನೋಭಾವದ ದೇಶದಲ್ಲಿ ಹುಟ್ಟಿ ಬೆಳೆದರೂ ಹದಿಹರೆಯದ ಆಸೆಗಳಿಗೆ ಬಲಿಯಾಗದೇ ಉಳಿದುಬಿಟ್ಟಳು ಕಾಟಿ. ಹುಡುಗರ ಎಲ್ಲ ಬಗೆಯ ಮಾತುಗಳಿಗೂ ಆಕೆಯ ಮೌನವೇ ಉತ್ತರವಾಗಿತ್ತು. ಆಕೆ ನಮ್ಮನ್ನು ಪ್ರೀತಿಸದಿದ್ದರೆ, ನಮ್ಮ ಪ್ರೀತಿಯನ್ನು ಒಪ್ಪದೇ ಹೋದರೆ ಅಷ್ಟೇ ಹೋಯಿತು. ಸುಮ್ಮನೇ ಒಮ್ಮೆ ಬಯ್ದುಬಿಡಲಿ, `ಏನಂತ ತಿಳ್ಕಂಡಿದೀಯೋ ನನ್ನಾ …’ ಎಂದು ಒಮ್ಮೆ ಜಗಳವನ್ನಾದರೂ ಮಾಡಲಿ ಎಂದು ಆಸೆಪಟ್ಟ ಹುಡುಗರಿದ್ದರು. ಆದರೆ ಅಂಥವರ ನೋಟಕ್ಕೆ, ರೇಗಿಸುವ ಮಾತುಗಳಿಗೆ, ಹೆಸರಿಲ್ಲದ ಪ್ರೇಮ ಪತ್ರಗಳಿಗೆ, ಈ ಕಾಟಿ ಎಂಬ `ನಾಟಿ ಸುಂದರಿ’ ಕನಸಲ್ಲೂ ಪ್ರತಿಕ್ರಿಯಿಸಲಿಲ್ಲ. ಈ ಮಧ್ಯೆಯೇ ಇವಳ ಹೈಸ್ಕೂಲು ಮುಗಿಯಿತು. ಕಾಲೇಜಿನ ಮೆಟ್ಟಿಲೇರುವ ಮೊದಲೇ ಕಾಟಿ, ಮೇಲಿಂದ ಮೇಲೆ ಅನಾರೋಗ್ಯಕ್ಕೆ ಈಡಾದಳು. ಜ್ವರ, ತಲೆನೋವು, ತಲೆ ಸುತ್ತು, ವಾಂತಿ- ಎಲ್ಲವೂ ವಿಪರೀತವೇ. ಇದನ್ನು ಕಂಡ ಅವಳ ತಂದೆ-ತಾಯಿ-ಅರರೆ, ಇಷ್ಟು ದಿನ ತೆಪ್ಪಗಿದ್ದ ಮಗಳು ಈಗ ಎಡವಟ್ಟು ಮಾಡಿಕೊಂಡಳಾ ಎಂದು ಯೋಚಿಸಿದರು. ಆಕೆಯನ್ನೇ ಹಾಗೆ ಕೇಳಲು ಇಬ್ಬರಿಗೂ ಧೈರ್ಯ ಬರಲಿಲ್ಲ. ಕಡೆಗೊಂದು ದಿನ ಡಾಕ್ಟರ್ ಬಳಿ ಚೆಕ್ ಮಾಡಿಸಿಯೇ ಅನುಮಾನ ಪರಿಹರಿಸಿಕೊಳ್ಳೋಣ ಎಂದುಕೊಂಡು ಮಿಚಿಗನ್‌ನ ಮೆಕ್ ಲಾರೆನ್ ಆಸ್ಪತ್ರೆಗೆ ಹೋದರು. ಕಾಟಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಡೇವ್ ದಂಪತಿಯ ಬಳಿ ಬಂದು ತುಂಬ ನೋವಿನಿಂದ ಹೇಳಿದರು: `ನಿಮ್ಮ ಮಗಳಿಗೆ ಬ್ರೈನ್ ಟ್ಯೂಮರ್ ಆಗಿದೆ. ತಕ್ಷಣವೇ ಚಿಕಿತ್ಸೆ ಆಗಬೇಕು. ಆಪರೇಷನ್ ಮಾಡ್ತೇನೆ. ಆದರೆ, ಆಕೆ ತುಂಬ ವರ್ಷ ಬದುಕ್ತಾಳೆ ಅಂತ ಗ್ಯಾರಂಟಿ ಕೊಡಲಾರೆ. ಕ್ಷಮಿಸಿ…’

`ಕಡೆಗಾಲದಲ್ಲಿ ತಮ್ಮ ಬದುಕಿಗೆ ಆಧಾರವಾಗುತ್ತಾಳೆ ಎಂದು ಕೊಂಡಿದ್ದಂಥ ಮಗಳಿಗೆ ಬ್ರೈನ್ ಟ್ಯೂಮರ್ ಎಂದು ಗೊತ್ತಾದಾಗ ಯಾವ ತಾಯ್ತಂದೆಯರಿಗೆ ತಾನೆ ಎದೆಯೊಡೆಯದಿರುತ್ತೆ ಹೇಳಿ? ವಿಷಯ ತಿಳಿದಾಕ್ಷಣ ಕಾಟಿಯ ಅಪ್ಪ-ಅಮ್ಮ ಕಣ್ಣೀರು ಬತ್ತಿ ಹೋಗುವಷ್ಟು ಅತ್ತರು. `ಜೀಸಸ್, ಈ ಒಂದೇ ಒಂದು ವಿಷಯದಲ್ಲಿ ಕರುಣೆ ತೋರಲಾರೆಯಾ’ ಎಂದು ಬೇಡಿಕೊಂಡರು. ಮಗಳ ಕಾಯಿಲೆ ಮಂಗಮಾಯವಾಗಲಿ ಎಂದು ಹರಕೆ ಕಟ್ಟಿಕೊಂಡರು. ದಿನಕ್ಕೆರಡು ಬಾರಿ ಪ್ರಾರ್ಥನೆಗೆ ನಿಂತರು. ಈ ಮಧ್ಯೆಯೇ ಕಾಟಿಗೆ ಆಪರೇಷನ್ ಆಗಿಹೋಯಿತು.

ಕಷ್ಟವೆಂದರೆ ಏನೆಂದೇ ತಿಳಿಯದೆ ಬೆಳೆದಿದ್ದವಳು ಕಾಟಿ. ರೋಗಿಗಳ ಆರ್ತನಾದ, ಸಾವಿನ ಕ್ರೌರ್ಯ, ಔಷಗಳ ಕಮಟುವಾಸನೆ, ಶಸ್ತ್ರಚಿಕಿತ್ಸೆಗಳ ಅನಿವಾರ್ಯತೆ, ಆ ಕ್ಷಣದ ಹೃದಯ ಹಿಂಡುವಂಥ ಯಾತನೆ ಇದೆಲ್ಲಾ ಅವಳಿಗೆ ಹೊಸ ಅನುಭವ. ಆಪರೇಷನ್‌ನ ನೆಪದಲ್ಲಿ ಅವಳು ಐಸಿಯುನಲ್ಲಿ ಇದ್ದಳಲ್ಲ? ಆಗ ಅಕ್ಕಪಕ್ಕದ ಬೆಡ್‌ಗಳಲ್ಲೇ ಇದ್ದ ಒಂದಿಬ್ಬರು ನೋಡನೋಡುತ್ತಲೇ ಸತ್ತು ಹೋಗಿದ್ದರು. `ಕಡೆಯ ಕ್ಷಣದ ತನಕ ಹೆಣಗಾಡುವುದು, ಕಡೆಯ ಕ್ಷಣದ ಬಳಿಕ ಹೆಣವಾಗುವುದು… ಬದುಕೆಂದರೆ ಇಷ್ಟೇನೇ’ ಎಂದು ಅವಳಿಗೆ ಆಗಲೇ ಅರ್ಥವಾಗಿ ಹೋಯಿತು. ತನಗೆ ಬ್ರೈನ್ ಟ್ಯೂಮರ್ ಇದೆ. ಆದರೆ ಈ ಸಂಗತಿಯನ್ನು ಅಪ್ಪ-ಅಮ್ಮ, ಬೇಕೆಂದೇ ಮುಚ್ಚಿಟ್ಟಿದ್ದಾರೆ ಎಂಬ ವಿಷಯ ಕೂಡ ತಿಳಿದುಹೋಯಿತು. ಎದೆಯೊಳಗಿನ ನೋವು ಹಾಗೇ ಇರಲಿ, ಮೇಲ್ನೋಟಕ್ಕೆ ನಾನು ನಗುತ್ತಲೇ ಇರಬೇಕು ಅಂದುಕೊಂಡಳು ಕಾಟಿ. ಈ ಸಂಕಟವನ್ನೆಲ್ಲ ಮರೆಯಬೇಕಾದರೆ `ಮೆಡಿಟೇಷನ್’ ಕಲಿಯಬೇಕು ಅನ್ನಿಸಿತು, ಸಂತರೇ ಬೆರಗಾಗುವಂತೆ ಅದನ್ನು ಕಲಿತೂಬಿಟ್ಟಳು.

ಶಸ್ತ್ರಚಿಕಿತ್ಸೆಯ ನಂತರ, ಹೊಸ ಹುಟ್ಟು ಪಡೆದವಳಂತೆ ಕಾಲೇಜಿಗೆ ನಡೆದು ಬಂದಳು ಕಾಟಿ. ಆಗಲೂ ಅಷ್ಟೆ. ಅವಳ ಒಂದು ಕುಡಿ ನೋಟಕ್ಕೆ, ಪಿಸುಮಾತಿಗೆ, ಹುಡುಗರು ಕ್ಯೂ ನಿಂತಿದ್ದರು. ಆಕೆ ಒಮ್ಮೆ `ಐ ಲವ್ ಯೂ’ ಅಂದುಬಿಟ್ಟರೆ- ಜೀವ ಪಾವನವಾದಂತೆ ಎಂದು ಭಾವಿಸಿದ್ದ ಪಡ್ಡೆಗಳೂ ಇದ್ದರು. ಉಳಿದ ಹುಡುಗರೆಲ್ಲ ಕಾಟಿ ಎಂಬ ನಾಟಿ ಸುಂದರಿಗೆ ಪ್ರೊಪೋಸ್ ಮಾಡುವುದು ಹೇಗೆ ಎಂದು ಗೊತ್ತಾಗದೆ ಒದ್ದಾಡುತ್ತಿದ್ದಾಗಲೇ ಅವಳದೇ ತರಗತಿಯ ನಿಕ್‌ಗಾಡ್‌ವಿನ್ ಎಂಬ ಸುಂದರಾಂಗ 2002ರ ಫೆಬ್ರವರಿ 14ರಂದು ಒಂದೇ ಒಂದು ಗುಲಾಬಿಯೊಂದಿಗೆ ಅವಳೆದುರು ನಿಂತು ಹೇಳೇಬಿಟ್ಟ: i love you! ಅವತ್ತು, ಅವತ್ತು ಮಾತ್ರ ಅದೇನಾಯ್ತೋ ಏನೋ; ಕಾಟಿಯ ಎದೆಯೊಳಗಿದ್ದ ಆಸೆಯ ಕಾಮನಬಿಲ್ಲು ಝೇಂಕರಿಸಿತು. `ಅವನೊಂದಿಗೆ’ ಅವಳ ಕಣ್ಣು ಮಾತಾಡಿದವು. ತುಟಿಗಳು, ಅವಳಿಗೂ ಕೇಳಿಸದಷ್ಟು ಮೆತ್ತಗೆ `ಐ ಲವ್ ಯು ಟೂ’ ಅಂದೇ ಬಿಟ್ಟವು!

ನಂತರದ ಒಂದೆರಡೇ ದಿನಗಳಲ್ಲಿ ನಿಕ್ ಗಾಡ್‌ವಿನ್‌ನ ಮನಸ್ಸು ಎಂಥದೆಂದು ಕಾಟಿಗೆ ಅರ್ಥವಾಗಿ ಹೋಯಿತು. ಆಕೆ ಅವನಿಗೆ ತನ್ನ ಸಂಕಟದ ಕಥೆ ಹೇಳಿದಳು. `ನಾನು ಜಾಸ್ತಿ ದಿನ ಬದುಕಲ್ಲ ಅಂತ ಗೊತ್ತಿದ್ದೂ ಪ್ರೀತಿಸ್ತೀಯಾ? ಬೇಡ ಕಣೋ’ ಅಂದಳು. ಇವನು ಒಪ್ಪಲಿಲ್ಲ. ನಿಂಗೇನೂ ಆಗಿಲ್ಲ. ಈಗ ಎಲ್ಲ ಕಾಯಿಲೆಗೂ ಔಷಧ ಇದೆ. ನಿನ್ನನ್ನ ಹೇಗಾದ್ರೂ ಮಾಡಿ ಬದುಕಿಸಿಕೊಳ್ತೇನೆ. ಹೆದರಬೇಡ ಸುಮ್ನಿರು’ ಅಂದ. ಈ ಮಾತನ್ನೇ ಕಾಟಿಯ ಅಪ್ಪ- ಅಮ್ಮನಿಗೂ ಹೇಳಿದ. ಮುಂದೆ ಇವರ ಪ್ರೇಮ ಪರಾಕಾಷ್ಠೆಗೆ ತಲುಪುವ ವೇಳೆಗೇ ಕಾಟಿ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಳು. ಹತ್ತಾರು ಥರದ ಟೆಸ್ಟ್ ಮಾಡಿದ ವೈದ್ಯರು ಕಡೆಗೊಮ್ಮೆ ವಿಷಾದದಿಂದ ಹೀಗೆಂದರು: `ಒಂದೊಂದು ಕಾಯಿಲೆ ಇಂಥದೇ ಕಾರಣಗಳಿಂದ ಬರುತ್ತೆ ಎಂದು ವೈದ್ಯಶಾಸ್ತ್ರ ಹೇಳುತ್ತೆ. ಆದರೆ ಕೆಲವೊಂದು ಕಾಯಿಲೆಗಳು ಕಾರಣವೇ ಇಲ್ಲದೆ ಬಂದುಬಿಡ್ತವೆ. ಕಾಟಿಗೆ ಆಗಿರುವುದೂ ಹಾಗೇನೇ. ಆಕೆಗೆ ಶ್ವಾಸಕೋಶದ ಕ್ಯಾನ್ಸರ್ ಅಮರಿಕೊಂಡಿದೆ. ಅದೇನೇ ಚಿಕಿತ್ಸೆ ನೀಡಿದರೂ ಆಕೆ ಹೆಚ್ಚು ದಿನ ಬದುಕೋದಿಲ್ಲ. ಇದ್ದಷ್ಟು ದಿನ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ. ಇಂಥ ಮಾತು ಹೇಳೋಕೆ ನನಗೂ ಸಂಕಟ ಆಗ್ತಾ ಇದೆ. ಐಯಾಮ್ ವೆರಿ ಸಾರಿ…’

ಆನಂತರದಲ್ಲಿ ಕಾಟಿಗೆ ಆಸ್ಪತ್ರೆಯೇ ಮನೆಯಾಯಿತು. ಹೇಳಿ ಕೇಳಿ ಶ್ವಾಸಕೋಶದ ಕ್ಯಾನ್ಸರ್ ಅಲ್ಲವೇ? ಹಾಗಾಗಿ ತುಂಬ ಸಂದರ್ಭದಲ್ಲಿ ಉಸಿರಾಡುವುದೇ ಕಷ್ಟವಾಗುತ್ತಿತ್ತು. ಹಾಗೂ ಹೀಗೂ ಉಸಿರಾಟದ ಸಮಸ್ಯೆಯಿಲ್ಲ ಎಂದುಕೊಂಡರೆ ಮೈಯ ಮೂಳೆಗಳೆಲ್ಲಾ ಮುರಿದೇ ಹೋದವೇನೋ ಎಂಬಂಥ ನೋವು! ಉಸಿರಾಟದ ತೊಂದರೆ ಎಂದಾಗ ಆಕ್ಸಿಜನ್ ಪೈಪು, ಅಸಹನೀಯ ನೋವು ಎಂದಾಗಲೆಲ್ಲ ಮೆಹರ್‌ಫಿನ್ ಮಾತ್ರೆ. ನಿದ್ರೆ ಬರುತ್ತಿಲ್ಲ ಎಂದಾಗ ಅದಕ್ಕೂ ಒಂದು ಮಾತ್ರೆ! ಹೀಗೆ ಶುರುವಾಯಿತು ಯಾತನೆಯ ಬದುಕು.

ಈ ಸಂದರ್ಭದಲ್ಲಿ ಭಗವಂತನೇ ನಾಚುವಷ್ಟರ ಮಟ್ಟಿಗೆ ಕಾಟಿಯನ್ನು ನೋಡಿಕೊಂಡವನು ನಿಕ್ ಗಾಡ್‌ವಿನ್. ಆತ ಹಗಲು ಕಾಲೇಜಿಗೆ ಹೋಗುತ್ತಿದ್ದ. ಸಂಜೆಯಾದರೆ ಸಾಕು, ಆಸ್ಪತ್ರೆಗೆ ಓಡಿಬಂದು ಕಾಟಿಯ ಸೇವೆಗೆ ನಿಲ್ಲುತ್ತಿದ್ದ. ಅವನಿಗೆ ಇಡೀ ರಾತ್ರಿ ಜಾಗರಣೆ. ನಡುರಾತ್ರಿಯಲ್ಲಿ ನೋವಿಂದ ಆಕೆ ಮಗ್ಗಲು ಬದಲಿಸಿದರೂ ಸಾಕು, ಈತ ಚುಕ್ಕು ತಟ್ಟುತ್ತಿದ್ದ. `ನಾನಿದ್ದೇನೆ, ಹೆದರಬೇಡ’ ಅನ್ನುತ್ತಿದ್ದ. ಕಾಟಿಯ ಅಪ್ಪ-ಅಮ್ಮನ ಕಂಬನಿ ಒರೆಸುತ್ತಿದ್ದ ಎಷ್ಟೋ ಬಾರಿ ವೈದ್ಯರಿಗೂ ಧೈರ್ಯ ಹೇಳುತ್ತಿದ್ದ. ಈ ಹುಡುಗನ ನಿರ್ಮಲ ಪ್ರೀತಿ, ಕ್ಯಾನ್ಸರ್‌ನ ಕ್ರೌರ್ಯದಿಂದ ಕಾಟಿ ಎಂಬ ಸುಂದರಿ ಅನುಭವಿಸುತ್ತಿರುವ ಸಂಕಟ ಅಮೆರಿಕದಾದ್ಯಂತ ಸುದ್ದಿಯಾಯಿತು. ಆಕೆಗೆ ಒಳಿತು ಕೋರಿ ಚರ್ಚ್‌ಗಳಲ್ಲಿ ಪ್ರಾರ್ಥನೆಗಳಾದವು. ಈ ಹುಡುಗನ ಒಳ್ಳೆಯತನಕ್ಕೆ ಮೆಚ್ಚು ಮಾತುಗಳು ಕೇಳಿಬಂದವು. ಕಾಟಿಯ ಚಿಕಿತ್ಸೆಗೆಂದು ಅದೆಷ್ಟೋ ಮಂದಿ ಉದಾರವಾಗಿ ಹಣ ಕಳುಹಿಸಿದರು. ಈ ಸಂದರ್ಭದಲ್ಲಿಯೇ ಕಾಟಿ ವಿಪರೀತ ಮಂಕಾಗುತ್ತಿದ್ದುದನ್ನು ಕಂಡ ವೈದ್ಯರು ಮತ್ತೆ ಪರೀಕ್ಷಿಸಿ ತೀರ್ಪು ಕೊಟ್ಟರು: `ನೋವು ನಿವಾರಕ ಮಾತ್ರೆಗಳನ್ನು ವಿಪರೀತ ನುಂಗಿದ ಕಾರಣದಿಂದ ದೇಹದ ಇತರೆ ಗ್ರಂಥಿಗಳಿಗೂ ಕ್ಯಾನ್ಸರ್ ಹರಡಿದೆ. ಸಾವು ಯಾವ ಕ್ಷಣದಲ್ಲಿ ಬೇಕಾದರೂ ಬಂದು ಬಿಡಬಹುದು. ಕಾಟಿಯ ಮೇಲಿನ ಆಸೆಯನ್ನು ಎಲ್ಲರೂ ಬಿಟ್ಟು ಬಿಡೋದು ಒಳ್ಳೆಯದು…’

ಒಂದೆರಡು ನಿಮಿಷ ಕಾಲ ಅಲ್ಲಿ ಸ್ಮಶಾನ ಮೌನ. ನಂತರ, ಸರಸರನೆ ವೈದ್ಯರ ಬಳಿಗೆ ಹೋದ ನಿಕ್ ಗಾಡ್ವಿನ್ ಹೀಗೆಂದ: `ಡಾಕ್ಟರ್, ನಾನು ಕಾಟಿಯನ್ನು ಮದುವೆಯಾಗ್ತೇನೆ. ಅವಳು ಜಾಸ್ತಿ ದಿನ ಬದುಕೋದಿಲ್ಲ ಅಂತ ಗೊತ್ತಿದ್ದು ಮದುವೆ ಆಗಲು ತಯಾರಾಗಿದೀನಿ. ಮದುವೆಯಾದೆ ಎಂಬ ಖುಷಿ ಅವಳದಾಗಲಿ. ಇದ್ದಷ್ಟು ದಿನ ಆಕೆ ಆಕ್ಸಿಜನ್ ಪೈಪ್ ಮೂಲಕವೇ ಉಸಿರಾಡಿಕೊಂಡಿರಲಿ. ಆಕೆಗೆ ಇನ್ನು ಎರಡು ವರ್ಷ ಬದುಕ್ತೀಯ ಅಂತ ಮಾತ್ರ ಒಂದೇ ಒಂದು ಸುಳ್ಳು ಹೇಳಿ’ ಅಂದ.

ಈ ಹುಡುಗನ ಪ್ರೀತಿ, ಸಾಯುವವಳಿಗೂ ಬದುಕು ಕೊಡಬೇಕೆಂಬ ಅವನ ಆದರ್ಶ ಕಂಡು ಡಾಕ್ಟರ್‌ಗೆ ಕಣ್ತುಂಬಿ ಬಂತು. ಮೆಲ್ಲಗೆ ಅವನ ಕೆನ್ನೆ ತಟ್ಟಿ `ಹಾಗೇ ಆಗಲಿ’ ಎಂದರು. ನಂತರದ ನಾಲ್ಕನೇ ದಿನಕ್ಕೇ ಆಸ್ಪತ್ರೆಯಲ್ಲೇ ಮದುವೆ ಎಂದು ನಿರ್ಧರಿಸಿದ್ದಾಯಿತು. ಅಲ್ಲಿನ ವೈದ್ಯರು, ದಾದಿಯರೇ ಬಂಧುಗಳಂತೆ ಓಡಾಡಿದರು. ಕಾಟಿಗೆ ಆಕ್ಸಿಜನ್ ಪೈಪ್‌ನಲ್ಲಿ ಉಸಿರಾಟದ ವ್ಯವಸ್ಥೆ ಮಾಡಲಾಯಿತು. ಪಾದ್ರಿಗಳು ಆಸ್ಪತ್ರೆಗೇ ಬಂದರು. ಅವತ್ತು ಸಿಂಡ್ರೆಲಾಳೇ ನಾಚುವಷ್ಟು ಚೆಂದಗೆ ಕಾಣುತ್ತಿದ್ದ ಕಾಟಿಯನ್ನು ಕಂಡು ದೃಷ್ಟಿ ನಿವಾಳಿಸಿದವರಿಗೆ ಲೆಕ್ಕವಿಲ್ಲ. ಮದುವೆ ಮುಗಿದ ನಂತರ ಪಾದ್ರಿಯಂಥ ವ್ಯಕ್ತಿ ಕೂಡ ಗದ್ಗದಿತನಾಗಿ ಪ್ರಾರ್ಥಿಸಿಬಿಟ್ಟ: ಜೀಸಸ್, ಈ ಹುಡುಗಿಗೆ ಸಾವು ಬಾರದಿರಲಿ…’

ಮದುವೆಯ ವಿಧಿವಿಧಾನಗಳು ಮುಗಿದವಲ್ಲ? ಅದೇ ವೇಳೆಗೆ ಕಾಟಿಯ ಗೆಳತಿಯರೆಲ್ಲ ಬಂದರು. ಗಾಡ್ವಿನ್‌ನ ಗೆಳೆಯರೂ ಜತೆ ಯಾದರು. ಮದುವೆಯಾದ ಖುಷಿಗೆ `ಡ್ಯಾನ್ಸು ಮಾಡೋ’ ಅಂದರು. ಇನ್ಯಾರೋ `ಹಾಡು ಹೇಳಪ್ಪಾ’ ಅಂದರು. ಈ ಎರಡರಿಂದಲೂ ಕಾಟಿಗೆ ಖುಷಿಯಾಗುತ್ತದೆ ಅನಿಸಿದ್ದರಿಂದ ಗಾಡ್ವಿನ್ ಹಾಗೇ ಮಾಡಿದ. ಅದೇ ಸಂದರ್ಭದಲ್ಲಿ ಕಾಟಿ ಬದುಕುವುದು ಇನ್ನು ಕೆಲವೇ ಕ್ಷಣ ಎಂದು ನೆನಪಾಗಿ, ನಿಂತಲ್ಲೇ ಬಿಕ್ಕಳಿಸಿದ. ಹಾಡುತ್ತ ಹಾಡುತ್ತಲೇ ಕಣ್ಣೀರಾದ.

ಅವತ್ತಿಗೆ ಮದುವೆಯಾಗಿ ನಾಲ್ಕನೇ ದಿನ. ಆಗಲೂ ಆಸ್ಪತ್ರೆಯಲ್ಲೇ ಇದ್ದಳು ಕಾಟಿ. ಈ ಗಾಡ್ವಿನ್ ಎದುರಿಗೇ ಕುರ್ಚಿ ಹಾಕಿಕೊಂಡು ಕೂತಿದ್ದ. ಅವನ ಕಂಗಳಲ್ಲಿ ಎಂಥದೋ ಹೊಳಪು. ಅದೇನೋ ಆಕರ್ಷಣೆ. ಈ ಹುಡುಗನಿಗೆ ನನ್ನಿಂದ ಸಿಕ್ಕಿದ್ದೇನು? ನನ್ನನ್ನು ಮದುವೆಯಾಗಿ ಇವನಾದರೂ ಏನು ಸುಖಪಟ್ಟ? ಬೈ ಛಾನ್ಸ್ ನಾಳೆಯೋ ನಾಡಿದ್ದೋ ನಾನು ಸತ್ತು ಹೋದರೆ… ಹೀಗೆಲ್ಲ ಯೋಚಿಸಿದ ಕಾಟಿ, ಅರೆ ಮಂಪರಿನಲ್ಲಿದ್ದಾಗಲೇ ಹಾಗೆಲ್ಲಾ ಬಡಬಡಿಸಿಬಿಟ್ಟಳು. ಈ ಹುಡುಗ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಹಿಡಿದು, ಅವಳಿಗೆ ಗೊತ್ತಾಗದಂತೆ ಚುಕ್ಕುತಟ್ಟಿ, ಅವಳ ತುಟಿಯ ಅದುರು ನಿಲ್ಲಿಸಿ ತನಗೇ ಎಂಬಂತೆ ಹೇಳಿಕೊಂಡ: `ಕಾಟೀ, ನಿನ್ನನ್ನು ತುಂಬ ಪ್ರೀತಿಸ್ತೀನಿ, ನೀನು ಸತ್ತು ಹೋದ ನಂತರವೂ…’

ಅವತ್ತು 2005ರ ಜನವರಿ 15. ಅವತ್ತು ಕಾಟಿ ತುಂಬ ಗೆಲುವಾದಂತೆ ಕಂಡಳು. ಆಕ್ಸಿಜನ್ ಪೈಪ್ ಹಾಕಿಕೊಂಡೇ ಒಂದಿಷ್ಟು ಜಾಸ್ತಿಯೇ ಮಾತಾಡಿದಳು. `ನಿಕೀ, ಹನಿಮೂನ್‌ಗೆ ಹೋಗಿಬರೋಣ್ವಾ’ ಎಂದಳು. `ಕೆನ್ನೆಗೊಂದು ಮುತ್ತಿಡೋ’ ಎಂದು ಕೇಳಿದಳು. ಅದೇನೋ ಏನೋ, ಅವನ ಕೈ ಹಿಡಿದು ಕಣ್ಣಿಗೊತ್ತಿಕೊಂಡಳು ನೋಡಿ; ಮರುಕ್ಷಣವೇ ಈ ಹುಡುಗ ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟ. ಅವತ್ತು ಅವಳೇ ಸಮಾಧಾನ ಮಾಡಿ, ಹಾಗೇ ನಿದ್ದೆ ಹೋದವಳು. ಬೆಳಗಿನ ಜಾವಕ್ಕೇ ಎದ್ದ ಕಾಟಿ, ಗಾಡ್ವಿನ್‌ಗೆ ಹತ್ತಿರ ಬಾ ಎಂಬಂತೆ ಸಂಜ್ಞೆ ಮಾಡಿದಳು. ಈತ ದಡಬಡಿಸಿ ಹೋದ. ಯಾಕೋ ಉಸಿರಾಡೋಕೆ ಕಷ್ಟ ಆಗ್ತಿದೆ ಅಂದವಳೇ ಅವನ ಎದೆಗೆ ಒರಗಿಕೊಂಡಳು. ಈತ ಅಮ್ಮನಂತೆ ಅವಳ ನೆತ್ತಿ ನೇವರಿಸಿದ. ನಂತರ ಅವಳೊಮ್ಮೆ ಬಿಕ್ಕಳಿಸಿದಂತಾಯಿತು. ಇವನು ಏನೋ ಹೇಳಲು ಹೋದ. ಅಷ್ಟರಲ್ಲಿಯೇ ಆಕೆಯ ಕತ್ತು ಎಡಕ್ಕೆ ವಾಲಿಕೊಂಡಿತು. ಕಥೆಯಾಗಿ ಹೋದಳು ಕಾಟಿ.

Advertisements

About sujankumarshetty

kadik helthi akka

Posted on ಆಗಷ್ಟ್ 11, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: