Maharshi Kanva | Divine Vision | Dushyant Shankuntala story | ತ್ರಿಕಾಲ ಜ್ಞಾನಿ ಕಣ್ವರ ಕಣ್ಣಲ್ಲಿ ಶಕುಂತಲೆ ಕಥೆ

ಪುರಾಣದಲ್ಲಿ ಬರುವ ಋಷಿಗಳನ್ನಾಗಲಿ, ದೇವತೆಗಳನ್ನಾಗಲಿ ಪ್ರತ್ಯಕ್ಷ ಕಂಡವರಿಲ್ಲ. ಆದರೆ, ಋಷಿ ಮುನಿಗಳು ಹಾಗೂ ದೇವತೆಗಳಿಗೆ ದೂರದೃಷ್ಟಿ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿದ್ದರೂ, ಅದೆಷ್ಟೋ ಸಂದರ್ಭದಲ್ಲಿ ಋಷಿಗಳು ಮತ್ತು ದೇವತೆಗಳು ನಮ್ಮ ನಿಮ್ಮಂತೆಯೇ ವರ್ತಿಸುವುದು ಏಕೆ? ತಿಳಿವವರಿಗೆ ತಿಳಿದವರು ಹೇಳಲಿ…

ಕಣ್ವರ ದೂರದೃಷ್ಟಿಗೆ ಕಷ್ಟವೇಕೆ ಕಾಣಿಸಲಿಲ್ಲ?

ವಿಶ್ವಾಮಿತ್ರ, ಋಷಿಯಾಗುವ ಮೊದಲು ರಾಜನಾಗಿದ್ದ. ಅವನಿಗೆ ಕೌಶಿಕ ದೊರೆ ಎಂದೇ ಹೆಸರಿತ್ತು. ದೊರೆಯ ಆಸ್ಥಾನಕ್ಕೆ ಒಮ್ಮೆ ವಶಿಷ್ಠ ಮಹರ್ಷಿಗಳು ಬಂದಿದ್ದರು. ಅವರ ಬಳಿ ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವಿತ್ತು. ಕೌಶಿಕ ದೊರೆ ಅದನ್ನೇ ಬಯಸಿದ. ವಶಿಷ್ಠರು ನಿರಾಕರಿಸಿದರು. ಇದರಿಂದ ಅಪಮಾನಿತನಾದ ದೊರೆ, ವಶಿಷ್ಠರಂತೆಯೇ ಋಷಿಯಾಗಬಯಸಿದ. ರಾಜ್ಯ ತೊರೆದ. ತಪಸ್ಸಿಗೆ ಕೂತ. ಕಡೆಗೆ ವಶಿಷ್ಠ ಮಹರ್ಷಿಗಳಿಂದಲೇ ವಿಶ್ವಾಮಿತ್ರ ಅನ್ನಿಸಿಕೊಂಡ.

ಆನಂತರವೂ ವಿಶ್ವಾಮಿತ್ರ ಆಗಿಂದಾಗ್ಗೆ ತಪಸ್ಸಿಗೆ ಕೂರುತ್ತಲೇ ಇದ್ದ. ಈ ಋಷಿಯ ತಪಸ್ಸಿನಿಂದ ತನ್ನ ಇಂದ್ರ ಪದವಿಗೆ ಭಂಗ ಉಂಟಾದರೆ ಎಂಬ ಭಯ ಇಂದ್ರನಿಗೆ. ಋಷಿಯ ತಪಸ್ಸು ಕೆಡಿಸಲು ಆತ ಹತ್ತು ಹಲವು ಬಗೆಯಲ್ಲಿ ಪ್ರಯತ್ನಿಸಿ, ವಿಫಲನಾದ. ಕಡೆಯ ಪ್ರಯತ್ನ ಎಂಬಂತೆ- ಸುರ ಸುಂದರಿ ಮೇನಕೆಯನ್ನು ಕಳಿಸಿದ. ತನ್ನೆದುರು ನಿಂತ ಮೇನಕೆಯನ್ನು, ಆಕೆಯ ತುಂಬು ಸೌಂದರ್ಯವನ್ನು ಕಂಡ ವಿಶ್ವಾಮಿತ್ರನಿಗೆ ಮೋಹ ಜತೆಯಾಯಿತು. ಆಸೆ ಕೈ ಹಿಡಿಯಿತು ಆತ ಮರುಕ್ಷಣವೇ ತಪಸ್ಸು ಮರೆತ. ಲೋಕ ಮರೆತ. ಮೈಮರೆತ. ಮೇನಕೆಯ ಮೈಮಾಟ, ಕುಡಿಮಿಂಚಿನ ಕಣ್ಣ ನೋಟ, ತುಂಬು ಲಾವಣ್ಯದ ಚೆಲುವಿಗೆ ವಿಶ್ವಾಮಿತ್ರ ಮನಸೋತ. ದಾಂಪತ್ಯ ಬದುಕು ಆರಂಭಿಸಿದ.

ನಂತರದ ಕೆಲವೇ ದಿನಗಳಲ್ಲಿ ಮೇನಕೆ ಗರ್ಭಿಣಿಯಾದಳು. ಆಕೆಗೆ ಹೆಣ್ಣು ಮಗು ಜನಿಸಿತು ಮಗಳನ್ನು ಕಂಡಾಗ ವಿಶ್ವಾಮಿತ್ರನಿಗೆ ಋಷಿಯಾಗಲಿಲ್ಲವಾ? ಊಹುಂ, ಅಂಥ ಯಾವ ವಿವರಣೆಯೂ ಪುರಾಣ ಕತೆಗಳಲ್ಲಿ ಇರುವಂತೆ ಕಾಣೆ. ಆದರೆ, ‘ಓಹ್, ನನ್ನ ತಪೋಭಂಗವಾಯಿತು’ ಎಂಬ ಅರಿವು ವಿಶ್ವಾಮಿತ್ರನಿಗೆ ಬಂದದ್ದಂತೂ ಆಗಲೇ. ತಕ್ಷಣವೇ ಆತ ಮೇನಕೆಯಿಂದ ದೂರವಾದ. ಈ ಮೇನಕೆ, ನಾನು ಬಂದ ಕೆಲಸವಾಯ್ತು ಅಂದುಕೊಂಡವಳೇ, ತನ್ನ ಮಗುವನ್ನು ಕಾಡಿನಲ್ಲಿ, ಒಂದು ಮರದ ಕೆಳಗೆ ಮಲಗಿಸಿ ಏನಾದ್ರೂ ಮಾಡ್ಕೋ? ಅಂತ ದೇವಲೋಕಕ್ಕೆ ಹೋಗಿಬಿಟ್ಟಳು.

ಮರದ ಕೆಳಗೆ ಅನಾಥವಾಗಿ ಮಲಗಿದ್ದ ಮಗುವಿಗೆ ಅಲ್ಲಿದ್ದ ಶಕುಂತ ಪಕ್ಷಿಗಳೇ ತಾಯ್ತಂದೆಯರಾದವು. ಮಗುವಿಗೆ ಗುಟುಕು ತಿನ್ನಿಸಿದವು. ಹುಶಾರಾಗಿ ನೋಡಿಕೊಂಡವು. ಕೆಲದಿನಗಳ ನಂತರ ಕಾರ್ಯನಿಮಿತ್ತ ಆ ದಾರಿಯಲ್ಲಿ ಬಂದ ಕಣ್ವ ಋಷಿಗಳು ಮುದ್ದಾದ ಆ ಮಗುವನ್ನು ನೋಡಿದರು. ಅದು ವಿಶ್ವಾಮಿತ್ರ-ಮೇನಕೆಯರ ಪ್ರಣಯದ ಫಲ ಎಂದು ದಿವ್ಯದೃಷ್ಟಿಯಿಂದ ತಿಳಿದರು. ಶಕುಂತ ಪಕ್ಷಿಗಳು ಸಾಕುತ್ತಿದ್ದವಲ್ಲ ಅದೇ ಕಾರಣಕ್ಕೆ ಆಕೆಗೆ ‘ಶಕುಂತಲೆ’ ಎಂದು ಹೆಸರಿಟ್ಟರು. ಆ ಮಗುವನ್ನು ತಾವೇ ಸಾಕಲು ನಿರ್ಧರಿಸಿದರು.

ಆ ನಂತರ ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಶಕುಂತಲೆಯನ್ನು ನೋಡಿಕೊಳ್ಳುತ್ತಾರೆ ಕಣ್ವ ಮಹರ್ಷಿ. ಆಕೆಗೆ ವಿದ್ಯೆ ಕಲಿಸುತ್ತಾರೆ. ನಾಟ್ಯ ಕಲಿಸುತ್ತಾರೆ. ಹಾಡು ಹೇಳಿ ಕೊಡುತ್ತಾರೆ. ಮುಂದೆ ಆಕೆ ಪ್ರಾಪ್ತ ವಯಸ್ಕಳಾಗುತ್ತಾಳೆ. ಮುಂದೊಮ್ಮೆ ಕಣ್ವರು ಆಶ್ರಮದಲ್ಲಿ ಇಲ್ಲದಿದ್ದಾಗ ಅಲ್ಲಿಗೆ ಬಂದ ದುಷ್ಯಂತ ಮಹಾರಾಜ, ಶಕುಂತಲೆಯನ್ನು ಮೋಹಿಸುತ್ತಾನೆ. ಆಕೆಯ ಒಪ್ಪಿಗೆ ಪಡೆದೇ ಗಾಂಧರ್ವ ವಿವಾಹವಾಗುತ್ತಾನೆ. ಆಕೆಯ ಸಂಗಸುಖ ಪಡೆದು, ಶೀಘ್ರವೇ ಆಕೆಯನ್ನು ಕರೆಸಿಕೊಳ್ಳುವುದಾಗಿ ಹೇಳಿ, ತನ್ನ ನೆನಪಿಗೆ ಉಂಗುರವೊಂದನ್ನು ನೀಡಿ ಹೋಗಿಬಿಡುತ್ತಾನೆ.

ಇದೂ ಸಹ ಕಣ್ವ ಮಹರ್ಷಿಗಳಿಗೆ ದಿವ್ಯ ದೃಷ್ಟಿಯಿಂದ ತಿಳಿಯುತ್ತದೆ. ಕೆಲ ದಿನಗಳ ನಂತರ ಶಕುಂತಲೆ ಗರ್ಭವತಿಯಾದಾಗ ಕಣ್ವರು ಆಕೆಯನ್ನು ದುಷ್ಯಂತನ ರಾಜ್ಯಕ್ಕೆ ಕಳಿಸಿಕೊಡುತ್ತಾರೆ. ಆಗ ಶಕುಂತಲೆ ನದಿ ದಾಟುವಾಗ ದುಷ್ಯಂತನ ನೆನಪಿನಲ್ಲೇ ಮೈಮರೆತು, ನದಿಯ ನೀರೊಳಗೆ ಕೈ ಆಡಿಸುತ್ತಾ ಉಂಗುರ ಕಳೆದುಕೊಳ್ಳುವುದು, ಅದನ್ನು ಒಂದು ಮೀನು ನುಂಗುವುದು, ದುಷ್ಯಂತನಿಗೆ ಶಕುಂತಲೆಯ ಗುರುತೇ ಸಿಗದಿರುವುದು, ಆಕೆಯನ್ನು ವಾಪಸ್ ಕಳಿಸುವುದು… ಮತ್ತು ಆನಂತರ ಆಕಸ್ಮಿಕವಾಗಿ ದುಷ್ಯಂತ ಮಹಾರಾಜನಿಗೆ ಉಂಗುರ ಸಿಕ್ಕಿ ಎಲ್ಲವೂ ‘ಶುಭಂ’ ಆಗುವುದು ಲೋಕಕ್ಕೇ ಗೊತ್ತಿರುವ ಕಥೆ.

ಇಲ್ಲಿ ಪ್ರಶ್ನೆಯೆಂದರೆ – ಕಣ್ವರು ಋಷಿಗಳು. ಅವರು ದೈವಾಂಶ ಸಂಭೂತರು. ಹಿಂದೆ ನಡೆದದ್ದು ; ಮುಂದೆ ನಡೆಯಲಿರುವುದು ಎರಡನ್ನೂ ತಿಳಿಯಬಲ್ಲ ಶಕ್ತಿ ಇದ್ದವರು. ಶಕುಂತಲೆಯನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡವರು. ಇಷ್ಟಿದ್ದೂ, ತಮ್ಮ ಮುದ್ದಿನ ಮಗಳಿಗೆ ದುಷ್ಯಂತ ಹೇಗೆ ಅನುಮಾನಿಸಬಹುದು. ನಂತರ ಆಕೆಗೆ ಯಾವ ಯಾವ ಕಷ್ಟ ಎದುರಾಗಬಹುದು ಎಂಬುದು ಅವರಿಗೇಕೆ ಅರ್ಥವಾಗಲಿಲ್ಲ?

ಅಥವಾ, ಕಣ್ವರಿಗೆ ಇದ್ದ ದಿವ್ಯದೃಷ್ಟಿ ಹಿಂದೆ ನಡೆದದ್ದನ್ನು ಅರಿಯುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿತ್ತೆ? ಕಣ್ವರೇ ಹಿಂದಿನದು ಮತ್ತು ಮುಂದಿನದನ್ನೆಲ್ಲ ಗ್ರಹಿಸಿ ಬಿಟ್ಟರೆ ದುಷ್ಯಂತ – ಶಕುಂತಲೆಯರ ಅಮರಾ ಮಧುರ ಕತೆ ಲೋಕದ ಮಂದಿಗೆ ಸಿಗಲಾರದು ಎಂಬ ನೆಪದಿಂದಲೇ ‘ಕವಿ’ ಹೀಗೆ ಗೊಂದಲ ಸೃಷ್ಟಿಸಿದನೆ? ಇದ್ದರೂ ಇರಬಹುದು!!

Advertisements

About sujankumarshetty

kadik helthi akka

Posted on ಆಗಷ್ಟ್ 11, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: