Open letter to shameless politicians – ನಗೆಯು ಬರುತಿದೆ ನಮಗೆ ನಗೆಯು ಬರುತಿದೆ…

Open letter to shameless politicians

ಸಂಸದರಾಗುವ ಕನಸಿನೊಂದಿಗೇ ಓಡಾಡುತ್ತಿರುವ ನಾಯಕರುಗಳಿಗೆ-ನಮಸ್ಕಾರ.

ಮಹನೀಯರೆ, ಚುನಾವಣೆ ನಡೆವ ದಿನ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿಯೇ ನೀವು ಮನೆ ಮನೆಯ ಬಾಗಿಲು ತಟ್ಟುತ್ತಿದ್ದೀರಿ. ದೊಡ್ಡವರು, ಚಿಕ್ಕವರು, ಮುದುಕರು, ಮಕ್ಕಳಿಗೂ ಡೈವ್ ಹೊಡೆಯುತ್ತಿದ್ದೀರಿ. ಅಪರಿಚಿತರಿಗೂ ಕೈ ಮುಗಿಯುತ್ತಿದ್ದೀರಿ. ಕಂಡವರ ಮುಂದೆಲ್ಲಾ ಇಷ್ಟಗಲ ಹಲ್ಲು ಕಿಸಿದು, ಅವರ ಕೈ ಹಿಡಿದು- `ಇದನ್ನು ಕಾಲು ಅಂತ ತಿಳ್ಕೊಳ್ಳಿ. ಮನೆ ಬಾಗಿಲಿಗೆ ಬಂದು ಭಿಕ್ಷೆ ಕೇಳ್ತಾ ಇದೀನಿ. ಇಲ್ಲ ಅನ್ನಬೇಡಿ. ನಿಮ್ಮ ಅಮೂಲ್ಯ ಮತವನ್ನು ನನಗೇ ಕೊಡಿ. ಈ ಸಲ ನೀವು ಗೆಲ್ಲಿಸಿಬಿಟ್ರೆ ನಂತರದ ಐದು ವರ್ಷ ನೀವು ಹೇಳಿದಂತೆ ಕೇಳ್ತೀನಿ. ಒಂದು ಕೂಗು ಹಾಕಿದ್ರೆ ಸಾಕು, ಛಕ್ಕಂತ ಓಡಿ ಬರ್‍ತೀನಿ. ನೀವು ಹೇಳಿದ ಕೆಲ್ಸಾನೆಲ್ಲಾ ಮಾಡ್ತೀನಿ. ನಿಮ್ಮ ಮಕ್ಕಳಿಗೆ ಸರಕಾರಿ ನೌಕರಿ ಕೊಡಿಸ್ತೀನಿ. ಮನೆ ಮುಂದೆ ನಲ್ಲಿ ಹಾಕಿಸ್ತೀನಿ. ಊರಿಗೆ ರಸ್ತೆ ಮಾಡಿಸ್ತೀನಿ. ಬಸ್ಸು ಬಿಡಿಸ್ತೀನಿ. ಜತೆಗೆ ದಿಲ್ಲೀಲಿ ಅವೇಶನ ನಡೆಯುತ್ತಲ್ಲ? ಆಗೆಲ್ಲ ನಿಮ್ಮ ಸಂಕಟದ ಬಗ್ಗೆ ದನಿಯೆತ್ತಿ ಮಾತಾಡಿ, ಎಲ್ಲ ಕಷ್ಟಗಳೂ ಪರಿಹಾರ ಆಗುವ ಹಾಗೆ ನೋಡ್ಕೋತೀನಿ’ ಎಂದೆಲ್ಲ ರೈಲು ಬಿಡ್ತಾ ಇದೀರ.

ತಮಾಷೆ ಗೊತ್ತ? `ಮತದಾರ ಪ್ರಭುಗಳು’ ಅನ್ನಿಸಿಕೊಂಡವರೆಲ್ಲ ನಿಮ್ಮ ಮಾತು ಕೇಳಿ `ಸರಿ ಸರಿ’ ಎನ್ನುತ್ತಿದ್ದಾರೆ. ಬಂದವರಿಗೆಲ್ಲ- `ಆಯ್ತು ಸ್ವಾಮಿ, ನಿಮ್ಗೇ ಓಟು ಹಾಕೋಣ’ ಎಂದು ಮಾತಾಡಿ ಒಳಗೆ ಹೋಗುತ್ತಿದ್ದಾರೆ. ನಿಜ ಹೇಳಲಾ? ಇವತ್ತು ಮತ ಯಾಚನೆ ಅನ್ನೋ ನಾಟಕ ನಡೀತಿದೆಯಲ್ಲ? ಅದನ್ನು ಕಂಡರೆ- ಅಸಹ್ಯವಾಗುತ್ತೆ. ನಗು ಬರುತ್ತೆ. ನಿಮ್ಮ ಆಶ್ವಾಸನೆ, ಗಿಮಿಕ್ಕು, ಆರ್ಭಟ, ಪರಸ್ಪರ ದೋಷಾರೋಪ, ಅದರ ಹಿಂದಿರುವ ಸತ್ಯವನ್ನು ಕಂಡಾಗ- ಚುನಾವಣೆಗೆ ನಿಂತಿರುವವರೆಲ್ಲ ಒಂದೇ ಬ್ರ್ಯಾಂಡಿನ ಕಳ್ಳರು’ ಅನ್ನಿಸಿಬಿಡುತ್ತೆ. ಖದೀಮರಿಗೆ ಮತ ಹಾಕುವ ಬದಲು ತೆಪ್ಪಗಿದ್ದು ಬಿಡೋದೇ ವಾಸಿ ಅನಿಸುತ್ತೆ. ಅದೇ ಸಂದರ್ಭಕ್ಕೆ ರಾಜಕೀಯವಾಗಿ ಉದ್ಧಾರವಾಗಲು ನೀವು ಅನುಸರಿಸುವ ರೀತಿ-ನೀತಿ ಕಂಡರೆ ನಗು ಬರುತ್ತೆ. ಇಶ್ಶೀ ಅನಿಸುತ್ತೆ. ನೀವೇನೋ ರಾಷ್ಟ್ರನಾಯಕನ ಗೆಟಪ್ಪಿನಲ್ಲಿ ನಿಂತ್ಕೊಂಡು ಭಾಷಣ ಹೊಡೀತೀರ ನಿಜ. ಆದ್ರೆ ಅದು ಬಫೂನ್ ಪಾತ್ರಧಾರಿಯ ಡೈಲಾಗ್ ಥರಾನೇ ಇರುತ್ತೆ. ಮಾತುಗಳಲ್ಲಿ ಕಪಟ ಇರುತ್ತೆ. ನಾಟಕೀಯತೆ ತುಂಬಿರುತ್ತೆ. ಅರ್ಧಗಂಟೆಯ ಭಾಷಣದಲ್ಲಿ ನಂಬುವಂಥ ಮಾತು ಒಂದೇ ಒಂದೂ ಇರಲ್ಲ. ಹೇಳ್ರಿ, ಇದನ್ನೆಲ್ಲ ಕಂಡು ನಗದೇ ಇರುವುದಾದ್ರೂ ಹೇಗೆ?

ಇನ್ನು ನಿಮ್ಮ ಪಕ್ಷಾಂತರ ರಾಜಕಾರಣದ ಬಗ್ಗೆ ಹೇಳುವುದೇ ಬೇಡ. ಚುನಾವಣೆ ಬರೋತನಕ ಯಾವುದೋ ಒಂದು ಪಕ್ಷದಲ್ಲಿ ಗುಮ್ಮನ ಗುಸುಕನ ಥರಾ ಇರ್‍ತೀರಿ. ಆ ಪಕ್ಷದಿಂದ ಸಿಗಬಹುದಾದ ಎಲ್ಲ ಸವಲತ್ತುಗಳನ್ನೂ ಪಡ್ಕೋತೀರಿ. ಸಂದರ್ಭ ಸಿಕ್ಕಾಗಲೆಲ್ಲ- `ನಮ್ದು ಮಹಾ ಮಹಿಮರು ಕಟ್ಟಿದ ಪಕ್ಷ ಕಣ್ರೀ. ಈ ಪಕ್ಷದಲ್ಲಿ ನಾನು ನಿಮಿತ್ತ ಮಾತ್ರ. ಈ ಪಕ್ಷದ ಬಾವುಟ ಹಿಡ್ಕೊಳ್ಳೋದೇ ನನ್ನ ಸೌಭಾಗ್ಯ. ನನ್ನ ಜೀವದ ಕೊನೆಯುಸಿರು ಇರುವವರೆಗೂ ಇದೇ ಪಕ್ಷದಲ್ಲಿ ಇರ್‍ತೀನಿ. ನನ್ನ ಮಕ್ಕಳ ಮೇಲಾಣೆ, ನಾನು ಮಾತಿಗೆ ತಪ್ಪೋದಿಲ್ಲ’ ಎಂದಿರುತ್ತೀರಿ. ಆದರೆ, ಚುನಾವಣೆಯ ದಿನ ಹತ್ತಿರ ಬಂದರೆ ಸಾಕು, ವರಸೆ ಬದಲಿಸ್ತೀರಿ. ಇನ್ನೊಂದು ಪಕ್ಷದವರು ಕಾಸು-ಕರಿಮಣಿಯ ಆಸೆ ತೋರಿಸಿದರೆ, ನಿಮಗೆ ಮಂತ್ರಿ ಪದವಿ ಕೊಡ್ತೀವಿ ಬನ್ನಿ ಎಂದು ಪೂಸಿ ಹೊಡೆದರೆ- ಕೆಲವೇ ತಿಂಗಳ ಹಿಂದೆ ಮಾಡಿದ್ದ ಆಣೆ, ಪ್ರಮಾಣವನ್ನು ಮರೆತು ಬೇರೊಂದು ಪಕ್ಷಕ್ಕೆ ಜಂಪ್ ಹೊಡೀತೀರಿ. ನಂತರ ಹಿಂದಿನ ದಿನದವರೆಗೂ ನಿಮ್ಮನ್ನು ಉಗಿದು ಉಪ್ಪು ಹಾಕ್ತಾ ಇದ್ರಲ್ಲ ನಾಯಕರು, ಅವರ ಜತೇಲೇ ಉಣ್ಣಲು ಕೂತುಬಿಡ್ತೀರಿ! ಆಮೇಲಾದ್ರೂ ಸುಮ್ನೆ ಇರಬೇಕೋ ಬೇಡವೋ? ನಿಮ್ಮ ಹಳೇ ಪಕ್ಷವನ್ನು, ಅಲ್ಲಿದ್ದ ಹಳೆಯ ಯಜಮಾನರುಗಳನ್ನು ಹಿಗ್ಗಾ ಮುಗ್ಗಾ ಬಾಯಿಗೆ ಬಂದಂತೆ ಬೈತೀರಿ. `ಅವರಿಂದಾನೇ ಕಣ್ರೀ ಪಕ್ಷ ಹಾಳಾಗ್ತಾ ಇರೋದೂ…’ ಎಂಬ ಸ್ಟೇಟ್‌ಮೆಂಟು ಕೊಡ್ತೀರಿ. ಮುಂದುವರಿದು- `ಆ ಪಕ್ಷದಲ್ಲಿ ಉಸಿರುಗಟ್ಟಿಸುವಂಥ ವಾತಾವರಣ ಇತ್ತು. ನಿಷ್ಠೆಗೆ ಅಲ್ಲಿ ಬೆಲೆ ಸಿಗಲ್ಲ ಅನ್ನಿಸ್ತು. ಹಾಗಾಗಿ ಎದ್ದು ಬಂದಿದ್ದೀನಿ…’ ಎಂದು ಬೊಂಬಡಾ ಹೊಡೀತೀರಿ.

ನಿಜ ಏನೆಂದರೆ, ನಿಷ್ಠೆ ಅನ್ನೋದು ನಿಮ್ಮ ಜಾತಕದಲ್ಲೇ ಇರೋದಿಲ್ಲ. ಒಂದು ಪಕ್ಷದಲ್ಲಿದ್ದು ಅದೆಷ್ಟು ಕಾಸು ಹೊಡೆಯಬಹುದೋ ಅಷ್ಟನ್ನೂ ಹೊಡೆದುಕೊಂಡಿರುತ್ತೀರಿ. ಇನ್ನು ಆ ಪಕ್ಷದಲ್ಲಿ ಸಿಪ್ಪೆ ಕೂಡ ಸಿಗಲ್ಲ ಅಂತ ಗ್ಯಾರಂಟಿಯಾದ ಮೇಲೆ ಮಹಾತ್ಯಾಗಿಯ ಗೆಟಪ್ಪಿನಲ್ಲಿ ನಿಂತು, ಆಕಾಶವೇ ತಲೆ ಮೇಲೆ ಬಿದ್ದು ಹೋಯ್ತು ಅನ್ನುವಂತೆ ಮಾತಾಡಿ; ನಂಗಿಲ್ಲಿ ಅನ್ಯಾಯವಾಗೋಯ್ತು ಅಂತ ಒದರಾಡಿ ಪಕ್ಷ ಬಿಡ್ತೀರಿ. ಮಹರಾಯರೆ, ಕ್ಷಣ ಕ್ಷಣವೂ ಬಣ್ಣ ಬದಲಿಸುವ ನಿಮ್ಮ ಬುದ್ಧಿ ಕಂಡು, ನಾಚಿಕೆಯಾಗಿ ಗೋಸುಂಬೆಗಳೆಲ್ಲ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿವೆ!

ಮತಯಾಚನೆಯ ಸಂದರ್ಭದಲ್ಲಿ, ಪ್ರಚಾರ ಭಾಷಣದ ನೆಪದಲ್ಲಿ ನೀವು ಆಡಿದ ಮಾತುಗಳಿವೆಯಲ್ಲ- ಅವು ನಿಮ್ಮ `ಲೆವೆಲ್’ ಏನು ಅಂತ; ನಿಮ್ಮ ಸಂಸ್ಕಾರ ಎಂಥಾದ್ದು ಅಂತ ತೋರಿಸಿಕೊಟ್ಟಿವೆ. ಅವನ್ಯಾವನೋ ಒಬ್ಬ ಹಿಂದುತ್ವ ವಿರೋಸಿದರೆ ಕೈ ಕತ್ತರಿಸ್ತೀವಿ ಅಂತಾನೆ. ಇನ್ಯಾವನೋ ಹುಂಬ ನಮ್ಮ ತಂಟೆಗೆ ಬಂದ್ರೆ ನಾಲಿಗೆ ಕೀಳ್ತೀನಿ ಅಂತಾನೆ. ಮತ್ತೊಬ್ಬ ಬಾಯಿಬಡುಕ- ನಮ್ಮ ಪಕ್ಷವನ್ನು ವಿರೋಸಿದ್ರೆ ತಿಥಿ ಮಾಡ್ತೀನಿ ಅಂದಿದ್ದಾನೆ. ಮಗದೊಬ್ಬ ಹುಚ್ಚ, ಕೈ ಕಡಿಯಲು ಬಂದ್ರೆ ರುಂಡ ಹಾರಿಸ್ತೀನಿ ಅಂದು ಮೀಸೆ ತಿರುವಿದ್ದಾನೆ! ಒಂದಷ್ಟು ಹಿರಿಯರು ಅನ್ನಿಸಿಕೊಂಡವರಂತೂ- ಮಾನ ಮರ್‍ಯಾದೆ ಬಿಟ್ಟವರ ಥರಾ ಎದುರು ಪಕ್ಷದವರನ್ನು `ಕುರಿಗಳು’ ಎಂದು ಕರೆದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ- `ನಾವು ಟಗರುಗಳು ಕಣ್ರೀ. ಕುರಿಗಳಿಗೆ ಏನು ಮಾಡ್ಬೇಕು’ ಅಂತ ನಮ್ಗೆ ಗೊತ್ತಿದೆ’ ಎಂದೂ ಸೇರಿಸಿದ್ದಾರೆ.

ಸಂಸದರಾಗುವ ಅವಸರದಲ್ಲಿರುವ ಅಣ್ಣಂದಿರೆ, ನೀವೇ ಹೇಳಿ: ಇವೆಲ್ಲ ಮಾನವಂತರು ಆಡುವ ಮಾತಾ? ಕೈಕಡೀರಿ, ಕಾಲು ಮುರೀರಿ, ರುಂಡ ಹಾರಿಸಿ, ತಿಥಿ ಮಾಡಿ ಅಂತ ಹೇಳುವ ಬದಲು ನಿಮಗೆ ಯಾರು ಇಷ್ಟವೋ ಅವರಿಗೆ ಮತಹಾಕಿ ಅಂದಿದ್ರೆ ನೀವು ಹೀರೋ ಆಗ್ತಿದ್ರಿ ಅಲ್ವ? ಹೀಗೆ ಹೊಡಿ, ಬಡಿ ಅನ್ನುವಂಥ ಹೇಳಿಕೆ ನೀಡಿ ನೀವು ಸಾಸೋದೇನು? ಮತ ಕೇಳುವ ನೆಪದಲ್ಲಿ ಒಂದೂರಿನ ಜನರನ್ನೇ ಇಬ್ಭಾಗ ಮಾಡೋಕೆ ಹೊರಟಿದ್ದೀರಲ್ಲ ಸಾರ್, ಇವೇನಾ ನೀವು ಕಲಿತ ಸಂಸ್ಕಾರ? ಹೀಗೆಲ್ಲ ಮಾತಾಡಿದಾಗ ನಿಮ್ಮ ಬಗ್ಗೆ ನಿಮಗೇ ನಾಚಿಕೆ ಅನಿಸೋದಿಲ್ವ? ಒಂದು ಜಿಲ್ಲೆಯನ್ನು ಪ್ರತಿನಿಸುವ ಮನುಷ್ಯ ಹೀಗೆಲ್ಲ ಮಾತಾಡಬಾರದು ಎಂಬ ಕಾಮನ್‌ಸೆನ್ಸ್ ಕೂಡ ನಿಮಗೆ ಇಲ್ವ?

ಇನ್ನು, ನಿಮ್ಮ ಪಕ್ಷಗಳು ಹೊರತಂದ ಪ್ರಣಾಳಿಕೆಗಳಿವೆಯಲ್ಲ? ಅದಕ್ಕಿಂತ ದೊಡ್ಡ ತಮಾಷೆ ಬೇರೆ ಯಾವ್ದೂ ಇಲ್ಲ. ಏಕೆಂದರೆ- ಪ್ರತಿಯೊಂದು ಪಕ್ಷವೂ ಎರಡು ರೂಪಾಯಿಗೆ ಅಕ್ಕಿ ಕೊಡ್ತೀವಿ. ಕೇಳಿದಷ್ಟು ಸಾಲ ಕೊಡ್ತೀವಿ. ಕೆಲಸ ಇಲ್ಲದವರಿಗೆ ತಿಂಗಳಿಗಿಷ್ಟು ಅಂತ ಪಾಕೆಟ್ ಮನಿ ಕೊಡ್ತೀವಿ. ಮನೆ ಕಟ್ಟಿಸಿಕೊಡ್ತೀವಿ. ಮದುವೆ ಮಾಡಿಸ್ತೀವಿ. ಈವರೆಗೆ ಮಾಡಿರೋ ಸಾಲವನ್ನೆಲ್ಲ ಮನ್ನಾ ಮಾಡಿ ಈ ಬಡಭಾರತವನ್ನು ರಾಮರಾಜ್ಯವನ್ನಾಗಿ ಮಾಡಿಬಿಡ್ತೀವಿ ಎಂದೆಲ್ಲ ಹೇಳಿಕೊಂಡಿವೆ. ಸ್ವಾರಸ್ಯವೆಂದರೆ- ಪ್ರತಿ ಬಾರಿಯ ಚುನಾವಣೆಯಲ್ಲೂ ಇದೇ ಸವಕಲು ಆಶ್ವಾಸನೆಗಳು ರಿಪೀಟ್ ಆಗ್ತಾ ಇರ್‍ತವೆ.

ಸ್ವಾರಸ್ಯ ಏನೆಂದರೆ, ಚುನಾವಣೆ ಮುಗಿದು, ಫಲಿತಾಂಶ ಹೊರಬಂದು, ಸರಕಾರ ರಚನೆ ಆಗುತ್ತೆ ನೋಡಿ, ಅವತ್ತೇ ಎಲ್ಲ ಪ್ರಣಾಳಿಕೆಗಳ, ಎಲ್ಲ ಆಶ್ವಾಸನೆಗಳ ತಿಥಿ ಆಗಿಬಿಡುತ್ತೆ. ಮತ ಯಾಚನೆಯ ಸಂದರ್ಭದಲ್ಲಿ `ನಿಮ್ಮ ಒಂದೇ ಒಂದು ಮತದ ಮೇಲೆ ನನ್ನ ಭವಿಷ್ಯ ನಿಂತಿದೆ ಸ್ವಾಮೀ’ ಎಂದು ಗೋಗರೆದ ನೀವೇ ಗೆದ್ದ ಮೇಲೆ ಕೈಗೆ ಸಿಗದೆ ಓಡಾಡ್ತೀರ. ಮೊಬೈಲು ನಾಟ್ ರೀಚಬಲ್‌ನಲ್ಲಿರ್‍ತದೆ. ಯಾವಾಗಾದ್ರೂ ಭಾಷಣಕ್ಕೆ ನಿಂತ್ರೆ ಜನ ನಿಮ್ಗೆ ನೆನಪಾಗೋದೇ ಇಲ್ಲ. ಬದಲಿಗೆ, ಇದು ನನ್ನ ಪರಿಶ್ರಮಕ್ಕೆ, ಸಂದ ಜಯ. ಈ ಗೆಲುವಿನ ಯಶಸ್ಸು ಪಕ್ಷದ ನಾಯಕರಿಗೆ ಹೋಗಬೇಕು ಎಂದು ಪ್ಲೇಟು ಬದಲಿಸಿಬಿಡ್ತೀರ. ಆಮೇಲೆ ಏನಾಗುತ್ತೆ ಅಂದರೆ, ನಿಮ್ಮದೇ ಪಕ್ಷದ ಸರಕಾರ ಬಜೆಟ್ ಮಂಡನೆಯ ನೆಪದಲ್ಲಿ ಯದ್ವಾತದ್ವಾ ಬೆಲೆ ಏರಿಸುತ್ತೆ. ರೈತರು ಸಾಲ ತಗೊಂಡಿದಾರಲ್ಲ? ಅದನ್ನು ಒದ್ದು ವಸೂಲಿ ಮಾಡಿ ಅಂತ ಗುಟ್‌ಗುಟ್ಟಾಗಿ ಆದೇಶ ಹೊರಡಿಸುತ್ತೆ. ಪ್ರತಿಭಟನೆಯ ನೆಪದಲ್ಲಿ-ಬೀದಿಗಳಿದವರ ಮೇಲೆ ಗುಂಡು ಹೊಡೆಸುತ್ತೆ. ಅಂಥ ಸಂದರ್ಭದಲ್ಲಿ ನೀವು ದಿಲ್ಲೀಲಿ ಆರಾಮಾಗಿ ಕೂತಿರ್ತೀರ. `ಪಕ್ಷದ ಮೀಟಿಂಗ್ ನಡೀತಾ ಇದೆ. ಹಾಗಾಗಿ ಆ ಕಡೆ ಬರೋಕಾಗ್ತಾ ಇಲ್ಲ. ಆದ್ರೆ ನನ್ನ ಜನರನ್ನು ನಾನು ಯಾವತ್ತೂ ಬಿಟ್ಟು ಕೊಡೋದಿಲ್ಲ’ ಎಂದು ಬೂಸಿ ಬಿಡ್ತೀರ. ನಮ್ಮ ಜನ ಅದೆಂಥ ಅಮಾಯಕರು ಅಂದ್ರೆ- ನಿಮ್ಮ ಮಾತನ್ನೆಲ್ಲ ನಂಬ್ತಾರೆ! ಅಥವಾ ಗೆಲ್ಲಿಸಿ ಕಳಿಸಿದ್ದಾಯ್ತು. ದಿಲ್ಲೀಲಿರೋ ಖದೀಮರು ಹೇಗೆ ಬೊಗಳಿದ್ರೂ ಸಹಿಸಿಕೊಳ್ಳಲೇಬೇಕು’ ಅಂದ್ಕೊಂಡು ಸುಮ್ಮನಾಗಿಬಿಡ್ತಾರೆ.

ಇಷ್ಟಾಯಿತಲ್ಲ? ಗೆದ್ದು ಹೋಗಿ ದಿಲ್ಲೀಲಿ ನೀವು ದರ್ಬಾರು ಮಾಡ್ತೀರಲ್ಲ? ಅದನ್ನು ಕಂಡ್ರೆ ಮೈ ಉರಿದುಹೋಗುತ್ತೆ. ಯಾಕೆ ಗೊತ್ತ? ಪಾರ್ಲಿಮೆಂಟ್‌ನಲ್ಲಿ ನಿಮಗೆ ಮಾತಾಡೋಕೆ ಆಸಕ್ತಿ ಇರಲ್ಲ. ಅಲ್ಲಲ್ಲ, ಮಾತಾಡೋಕೇ ಬರಲ್ಲ! ನಿಮ್ಮ ಸ್ಥಾನಮಾನದ ಅರಿವೂ ಇರೋದಿಲ್ಲ. ಹಾಗಾಗಿ, ಗಹನವಾದ ವಿಚಾರ ಚರ್ಚೆಗೆ ಬಂದಿರುವಾಗ ನೀವು ಗಡದ್ದಾಗಿ ನಿದ್ದೆ ಹೊಡೀತಾ ಇರ್‍ತೀರ. ಇಲ್ಲದಿದ್ರೆ ಅವೇಶನಕ್ಕೆ ಚಕ್ಕರ್ ಹೊಡೆದು ಯಾರ್‍ಯಾರ ಜತೇನೋ ಮಜಾ ಉಡಾಯಿಸ್ತಾ ಇರ್‍ತೀರ. ಕ್ಷೇತ್ರದ ಅಭಿವೃದ್ಧಿಗೆ ಅಂತ ಅದೆಷ್ಟೋ ಕೋಟಿ ರೂ. ಮಂಜೂರಾದಾಗ ಮಾತ್ರ- ಅದರಲ್ಲಿ ದೊಡ್ಡ ಗಂಟನ್ನೇ ಮನೆಗೆ ಸಾಗಿಸಿಬಿಡ್ತೀರ. ಆಮೇಲೆ ಒಂದೆರಡು ರಸ್ತೆಗಳಿಗೆ ಕಾಟಾಚಾರಕ್ಕೆ ಮೇಲ್ಮೇಲೆ ಟಾರು ಹಾಕಿಸಿ, ಒಂದೆರಡು ಕಡೆ ಶಾಲಾ ಕಟ್ಟಡ ನಿರ್ಮಿಸಿ, ಯಾರೋ ಒಂದಿಬ್ಬರಿಗೆ ನಾನೂರು ರೂಪಾಯಿ ಮಾಸಾಶನ ಕೊಡಿಸಿ- ಹಂ, ಎಂ.ಪಿ. ಫಂಡು ಪೂರ್ತಾ ಖರ್ಚಾಗಿ ಹೋಯ್ತು ಅಂತ ತಿರುಪತಿ ದೇವರ ಹೆಸರು ಹೇಳಿಯೇ ಪ್ರಮಾಣ ಮಾಡಿಬಿಡ್ತೀರಿ. ಚುನಾವಣೆಗೆ ಮೊದಲು ಅಬ್ಬೇಪಾರಿಯ ಥರಾ ಇದ್ದವರು, ಗೆದ್ದ ಎರಡೇ ತಿಂಗಳಿಗೆ ಐವತ್‌ಕೋಟಿಗೆ ಬಾಳ್ತೀರಿ, ಈಗ ಹೇಳಿ, ನಿಮ್ಮನ್ನು ಖದೀಮರು ಅನ್ನಬೇಕೋ ಬ್ಯಾಡವೋ…

ಇನ್ನು ಚುನಾವಣಾ ಆಯೋಗಕ್ಕೆ ನೀವು ಕೊಟ್ಟಿರೋ ಮಾಹಿತಿ ಇದೆಯಲ್ಲ? ಅದು ಇನ್ನೊಂದು ಜೋಕು. ಈಗ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ ಪ್ರತಿಯೊಬ್ಬನೂ ಐವತ್ತೈವತ್ತು ಕಾರು ಇಟ್ಟಿರ್‍ತಾನೆ. ಇಪ್ಪತ್ತು ಕೊಟಿಯನ್ನಾದ್ರೂ ಖರ್ಚು ಮಾಡ್ತಾನೆ. ಹಾಗಿದ್ರೂ ನೀವು- ನನ್ನ ಆಸ್ತಿ ಅಂತ ಇರೋದು ಐದೇ ಲಕ್ಷ. ನಂಗೆ ಸ್ವಂತ ಕಾರೇ ಇಲ್ಲ. ಬೈಕೂ ಇಲ್ಲ. ಮನೆ ಕೂಡ ಇಲ್ಲ. ಬ್ಯಾಂಕ್ ಅಕೌಂಟಲ್ಲಿ ಇರೋದೇ ನಲವತ್ತು ಸಾವಿರ ಅಂತೆಲ್ಲ ಬಾಂಡ್ ಬರೆದು ಕೊಡ್ತೀರಿ. ಆದ್ರೆ ಸ್ವಾಮೀ, ನಿಮ್ಮ ಕೊರಳಲ್ಲಿ ನಾಯಿ ಕಟ್ತೀವಲ್ಲ? ಅಷ್ಟು ದಪ್ಪದ ಚಿನ್ನದ ಚೈನ್ ಇರುತ್ತೆ. ಕೈಯಲ್ಲಿ ಕಾಲು ಕೇಜಿ ತೂಕದ ಬಂಗಾರದ ಬ್ರೇಸ್‌ಲೆಟ್ ಇರುತ್ತೆ. ನಿಮ್ಮ ಹೆಂಡ್ತಿ ಮಕ್ಕಳ ಹೆಸರಲ್ಲಿ ಕೋಟಿ ಮೌಲ್ಯದ ಆಸ್ತಿ ಇರುತ್ತೆ! ಇಷ್ಟೆಲ್ಲ ಇದ್ರೂ ನೀವು ಕತೆ ಹೊಡೆಯೋಕೆ, ಸುಳ್ ಸುಳ್ಳೇ ಮಾತಾಡಿ ಮತದಾರರ ಕಿವಿಮೇಲೆ ಹೂ ಇಡೋಕೆ ಬರ್‍ತೀರಲ್ಲ? ಹೇಳ್ರಿ, ಅದನ್ನು ಕಂಡು ನಗದೇ ಇರೋದಾದ್ರೂ ಹೇಗೆ?

ಸಿಟ್ಟಿನಿಂದ, ಬೇಸರದಿಂದಲೇ ಎಲ್ಲ ಮತದಾರರ ಪರವಾಗಿ ಹೇಳ್ತಿದೀನಿ ಕೇಳಿ: ನೀವು ಮತ ಕೇಳುವ ನೆಪದಲ್ಲಿ ಮನೆ ಒಡೆಯುವ, ಮನಸ್ಸುಗಳನ್ನೂ ಒಡೆಯುವ ಕೆಲಸ ಮಾಡ್ತಾ ಇದೀರ. ಇದರಿಂದ ನಿಮಗೇನೋ ಲಾಭ ಆಗಬಹುದು. ಆದರೆ, ನಮ್ಮ ನೆಮ್ಮದಿ ಹಾಳಾಗ್ತಾ ಇದೆ. ಸಂಬಂಧ, ಬಾಂಧವ್ಯ ಎಕ್ಕುಟ್ಟಿ ಹೋಗ್ತಾಯಿದೆ. ಹಾಗಾಗಿ ಆವೇಶದ ಭಾಷಣ ಹೊಡೆಯೋದು ನಿಲ್ಸಿ. ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿ ಕಟ್ಟುವುದನ್ನು ತಕ್ಷಣ ನಿಲ್ಸಿ. ಪುಗಸಟ್ಟೆ ಆಶ್ವಾಸನೆಗೆ ಬ್ರೇಕ್ ಹಾಕಿ. ಇಷ್ಟಾದ ಮೇಲೆ- ಸೀದಾ ಮತದಾರರ ಬಳಿ ಬಂದು- `ವೋಟು ಹಾಕೋದು ನಿಮ್ಮ ಕರ್ತವ್ಯ, ಹಕ್ಕು ಕಣ್ರೀ. ನನಗೇ ಹಾಕಿ ಅಂತ ಕೇಳಲ್ಲ. ನಿಮ್ಗೆ ಯಾರು ಪ್ರಾಮಾಣಿಕರು ಅನಿಸುತ್ತೋ ಅವರಿಗೆ ಹಾಕಿ. ನನ್ನನ್ನೂ ಬೆಂಬಲಿಸಿ’ ಅಂತ ಕೇಳಿ ನೋಡಿ, ಜನ ಖಂಡಿತ ನಿಮ್ಮ ಪ್ರಾಮಾಣಿಕತೇನ ಮೆಚ್ಚುತ್ತಾರೆ. ಮರೆಯದೇ ಕೈ ಹಿಡೀತಾರೆ.

ಆದ್ರೆ, ನೀವು ಆ ಥರಾ ಯೊಚನೆ ಮಾಡೋದೇ ಇಲ್ಲ. ಹೇಗಾದ್ರೂ ಸರಿ, ಈ ಸಲ ಗೆಲ್ಬೇಕು ಅಂತ ಈಗಾಗಲೇ ನಿರ್ಧರಿಸಿಬಿಟ್ಟಿದೀರಿ. ವೋಟ್ ಪಡೆಯೋಕೆ ಅಂತಾನೇ ನೋಟು ಚೆಲ್ತಾ ಇದೀರಿ. ಮನೆ ಮನೆಗೂ ಸೀರೆ, ರವಿಕೆ, ಹೆಂಡ, ವಾಚು, ಉಂಗುರ ಹಂಚ್ತಾ ಇದೀರಿ. ರೌಡಿಗಳನ್ನು ಮುಂದೆ ಬಿಟ್ಟು- ವೋಟ್ ಹಾಕ್ದಿದ್ರೆ ಕಾಲು ಮುರೀತೀನಿ ಹುಶಾರ್ ಎಂದು ಬೆದರಿಕೆ ಹಾಕಿಸ್ತಾ ಇದೀರ. ಅಷ್ಟೇ ಅಲ್ಲ, ಗೆದ್ದರೆ, ಈಗ ಖರ್ಚು ಮಾಡಿರೋ ಹಣವನ್ನು ನಾಲ್ಕು ಪಟ್ಟು, ಐದು ಪಟ್ಟು ಮಾಡಿಕೊಳ್ಳೋದು ಹೇಗೆ ಅಂತ ಯೋಚಿಸ್ತಾ ಇದೀರ. ಟ್ರಾನ್ಸ್‌ಫರ್ ಬಿಜಿನೆಸ್‌ನಿಂದ ಎಷ್ಟು ಕೇಳಬಹುದು, ಕೆಲ್ಸ ಕೊಡ್ಸಿದ್ರೆ ಎಷ್ಟು ಹೊಡೀಬಹುದು! ಫ್ಯಾಕ್ಟರಿ ತೆಗೆದ್ರೆ ಎಷ್ಟು ನುಂಗಬಹುದು ಎಂದೆಲ್ಲಾ ಆಗಲೇ ಗುಣಾಕಾರ, ಭಾಗಾಕಾರ ಮಾಡಿಬಿಟ್ಟಿದೀರಿ. ಜನಗಳ ಮುಂದೆ ಮಾತ್ರ `ಅಮ್ಮಾ ತಾಯಿ’ ಗೆಟಪ್ಪಿನಲ್ಲಿ ನಿಂತು `ಮತದಾನ ಮಾಡಿ, ನಮ್ಮನ್ನು ಕಾಪಾಡಿ’ ಎಂದು ರಾಗ ಎಳೀತಾ ಇದೀರ! ಆತ್ಮಸಾಕ್ಷಿ ಅನ್ನೋದೇನಾದ್ರೂ ಇದ್ರೆ, ಅದನ್ನು ಕೇಳಿಕೊಂಡು ಉತ್ತರ ಹೇಳಿ: ನಾವೇನೋ ಮತದಾನ ಮಾಡಲು ರೆಡಿ. ಆದರೆ ನಮ್ಮ ಮತ ಪಡೆಯುವ ಯೋಗ್ಯತೆ ನಿಮಗಿದೆಯಾ?

Advertisements

About sujankumarshetty

kadik helthi akka

Posted on ಆಗಷ್ಟ್ 11, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: