Youth love | Infatuation | Betrayal | – ಯಾವ ಮೋಹನ ಮುರಳಿ ಕರೆಯಿತು…

Love or infatuation?

ಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ ತಟ್ಟಿದೆಯೋ ಗೊತ್ತಿಲ್ಲ; ನಮ್ಮ ತಾತನ ಕಾಲದಿಂದ್ಲೂ ಬಡತನ, ಬಡತನ, ಬಡತನ! ಗೊತ್ತಲ್ಲ ಸಾರ್ ನಿಮ್ಗೂ? ಮಂಗ್ಳೂರಲ್ಲಿ ವರ್ಷಕ್ಕೆ ಹತ್ತಿಪ್ಪತ್ತು ಬಾರಿ ಹಿಂದೂ ಮುಸ್ಲಿಂ ಫೈಟಿಂಗು ನಡೀತದೆ. ಈ ಕಡೆ ಕೋಮುಗಲಭೆ, ಆ ಕಡೆ ಬಡತನ! ಹೀಗಿರುವಾಗ ಊರಲ್ಲಿದ್ದು ಮಾಡೋದೇನು ಅಂದ್ಕೊಂಡೇ ಬೆಂಗಳೂರಿಗೆ ಬಂದೆ. ಓದಿದ್ದು ಬರೀ ಏಳನೇ ಕ್ಲಾಸು ನೋಡಿ, ಹಾಗಾಗಿ ಒಂದು ಹೋಟೆಲಲ್ಲಿ ಕೆಲ್ಸ ಸಿಕ್ತು. ನಿಮ್ಮ ಜತೆ ಸುಳ್ಳು ಹೇಳೋದಿಲ್ಲ ಸಾರ್. ಹೀಗೆ, ಒಂದು ಕೆಲ್ಸ ಹಿಡಿದೆನಲ್ಲ? ಆಗ ನನಗೂ ಹತ್ತೊಂಬತ್ತು ತುಂಬಿತ್ತು. ಬೆಳಗ್ಗೆ, ಧರ್ಮಸ್ಥಳದ ಮುಂಜನಾಥಸ್ವಾಮಿಯ ಫೋಟೊ ನೋಡ್ಕೊಂಡೇ- `ನಂಗೆ ಕೆಟ್ಟ ಬುದ್ಧಿ ಕೊಡಬೇಡ ದೇವ್ರೇ’ ಅಂದ್ಕೊಂಡೇ ಏಳ್ತಿದ್ದೆ ನಿಜ. ಆದರೆ, ಹೋಟೆಲಿಗೆ ಬರ್‍ತಿದ್ದ ಕಲರ್ ಕಲರ್ ಹುಡುಗೀರನ್ನ ನೋಡ್ತಿದ್ದ ಹಾಗೇ ಮನಸ್ಸು ಕಂಟ್ರೋಲ್ ತಪ್ತಿತ್ತು.

ಮೊನ್ನೆ ಏನಾಯ್ತು ಅಂದ್ರೆ, ಕಾಫಿಗೇಂತ ಬಂದಿದ್ದ ಹುಡುಗಿಯೊಬ್ಬಳು ಪರ್ಸ್ ಮರೆತು ಹೋಗ್ತಾ ಇದ್ಲು. ನಾನು ಸರಸರಾಂತ ಅವಳ ಹಿಂದೆ ಹಿಂದೇನೇ ರಸ್ತೆ ತನಕ ಓಡಿ ಹೋಗಿ `ಪರ್ಸ್ ಬಿಟ್ಟಿದೀರ. ತಗೊಳ್ಳಿ ಮೇಡಂ’ ಅಂದೆ. ಸುಳ್ಳಲ್ಲ ಸಾರ್, ಆ ಹುಡುಗಿಯ ರೂಪು ಕಂಡು ತಲೆತಿರುಗಿ ಬಿದ್ದು ಹೋಗೋ ಹಾಗೆ ಆಗಿಬಿಟ್ಟಿತ್ತು.

ಅವಳು: ಮೈ ನೇಮ್ ಈಸ್ ಶರ್ಮಿಳಾ. ಸೋ ಸ್ವೀಟ್ ಅಂಡ್ ಟೂ ಕ್ಯೂಟ್ ಅಂತಾರಲ್ಲ; ಅಂಥ ಹುಡುಗಿ ನಾನು. ಅಪ್ಪ-ಅಮ್ಮನ ಒಬ್ಬಳೇ ಮಗಳು. ಇವತ್ತು ಕಾಲೇಜಿನ ಮುಂದಿರೋ ಹೋಟೆಲಿಗೆ ಕಾಫಿಗೇಂತ ಹೋಗಿದ್ದೆ. ಅಲ್ಲಿ ಕಣ್ಣಿಗೆ ಬಿದ್ದನಲ್ಲ- ಆ ಹುಡುಗ ಕಪ್ಪು, ಆದರೆ ಲಕ್ಷಣವಾಗಿದಾನೆ. ನೀಟ್‌ನೆಸ್ಸು, ಡ್ರೆಸ್‌ಸೆನ್ಸು ಎರಡೂ ಇಲ್ಲ. ಅಂದ ಮೇಲೆ ನಮ್ಮ ಜಾತಿಯವನಲ್ಲ ಅನಿಸುತ್ತೆ. ಆದರೆ, ಆ ಹುಡುಗನ ಪ್ರಾಮಾಣಿಕತೆ ಇದೆಯಲ್ಲ? ವಾಹ್, ಅದು ಕೋಟ್ಯಾಪತಿಗಳಲ್ಲೂ ಇರಲ್ಲ. ಅವನ ನಡೆ-ನುಡಿ ಎರಡೂ ಚೆನ್ನಾಗಿದೆ. ತುಂಬ ಪ್ರೀತಿಯಿಂದ, ಗೌರವದಿಂದ ಮಾತಾಡಿಸ್ತಾನೆ. ಅವನನ್ನು ನೊಡೋಕೆ ಅಂತಾನೇ ಐದಾರು ಸಲ ಹೋಟೆಲಿಗೆ ಹೋಗಿ ಬಂದಿದ್ದಾಯ್ತು. ಪುಣ್ಯಾತ್ಮ, ತುಂಬ ಸಂಕೋಚದಿಂದ ವರ್ತಿಸ್ತಾನೆ. ಮೈಕೈ ಸೋಕದ ಹಾಗೆ ನಡ್ಕೋತಾನೆ. ಕಾಲೇಜಿನಲ್ಲಿ ನನ್ನ ಹಿಂದೆ ಹಿಂದೆಯೇ ಸುತ್ತುವ ಮಂಗಗಳಂಥ ಹುಡುಗರಿಗಿಂತ ಇವನು ಸಾವಿರ ಪಟ್ಟು ಮೇಲು.

ಅರೆ, ಇವನು ನಮ್ಮ ಜಾತಿಯವನಲ್ಲ. ನಮ್ಮಷ್ಟು ಆಸ್ತಿವಂತನೂ ಅಲ್ಲ. ನನ್ನ ಚೆಲುವಿಗೆ ಸರಿಸಾಟಿ ಕೂಡ ಅಲ್ಲ. ಆದರೆ, ಆತ ಒಳ್ಳೆಯವನಿದ್ದಾನೆ, ನಂಬಿದವರನ್ನು ಕಾಪಾಡ್ತಾನೆ. ಒಂದು ಸೆಕ್ಯೂರಿಟಿ ಕೊಡ್ತಾನೆ. ಕೈ ಹಿಡಿದವಳಿಗೆ ಮೂರು ಹೊತ್ತಿನ ಊಟವನ್ನಂತೂ ತಪ್ಪದೆ ಹಾಕ್ತಾನೆ ಅಂತ ನನ್ನ ಒಳಮನಸ್ಸು ಹೇಳ್ತಿದೆ. ಅಯ್ಯಯ್ಯೋ, ಅವನ ಬಗ್ಗೆ ನನಗಾದ್ರೂ ಯಾಕಪ್ಪಾ ಇಂಥ ಮಮಕಾರ? ನಾನೇನಾದ್ರೂ ಅವನನ್ನು ಪ್ರೀತಿಸ್ತಾ ಇದೀನಾ? ಛೆ, ಇರಲಾರದು.

ಅವನು: ಶರ್ಮಿಳಾ ಮೇಡಂ ಪರಿಚಯವಾಗಿ ಇವತ್ತಿಗೆ ಐದು ತಿಂಗಳು. ಅವತ್ತೊಂದು ದಿನ ಹೊಸ ಬಟ್ಟೆ ಹಾಕ್ಕೊಂಡಿದ್ದೆ. `ಏನ್ರೀ ವಿಶೇಷ? ಮಿಂಚ್ತಾ ಇದೀರ’ ಅಂದ್ರು. `ನನ್ನ ಬರ್ತ್‌ಡೇ ಮೇಡಂ’ ಅಂದೆ. ಅವತ್ತೇ ಸಂಜೆ ಒಂದು ಗ್ರೀಟಿಂಗ್ ಕಾರ್ಟ್ ಕೊಟ್ರು. ಅದರೊಳಗೆ- `ದಾರಿ ದೂರವಾದರೂ ಪ್ರೀತಿ ಹತ್ತಿರವಾಗಲಿ/ಮನದ ತುಂಬಾ ಮಮತೆಯಿರಲಿ/ತುಟಿಯ ತುಂಬಾ ನಗುವಿರಲಿ/ನೀನು ನಕ್ಕಾಗ ನನ್ನ ನೆನಪಿರಲಿ!’ ಎಂದು ಬರೆದಿದ್ರು. ಅವರನ್ನು ನೋಡ್ತಾ ಇದ್ರೆ ನಂಗೆ ಜಗತ್ತೇ ಮರೆತುಹೋಗುತ್ತೆ. ಮಾತಿನ ಮಧ್ಯೆ ಶರ್ಮೀಳಾ ಮೇಡಂ ವಿಪರೀತ ಇಂಗ್ಲಿಷ್ ಬಳಸ್ತಾರೆ. ಮೊದಮೊದ್ಲು ಅದೆಲ್ಲ ಅರ್ಥ ಆಗ್ತಾನೇ ಇರಲಿಲ್ಲ. ತಕ್ಷಣ ಟ್ಯೂಶನ್‌ಗೆ ಸೇರಿಕೊಂಡೆ. ಇಂಗ್ಲಿಷು ಕಲಿತೆ. ಲೆಕ್ಕ ಕಲಿತೆ. ಲವ್‌ಲೆಟರ್ ಬರೆಯೋದು ಕಲಿತೆ. ಈ ಮಧ್ಯೆ ಒಳಮನಸ್ಸು ಸದಾ ಶರ್ಮಿಳಾ ಮೇಡಂ ಜಪದಲ್ಲಿದೆ. `ಅವರನ್ನು ಪ್ರೀತಿಸು. ಬೇಗ ಪ್ರೊಪೋಸ್ ಮಾಡು’ ಅಂತ ಹೇಳ್ತಿದೆ. ನಮ್ಮಿಬ್ಬರ ಮಧ್ಯೆ ಜಾತಿ-ಅಂತಸ್ತಿನ ತಡೆಗೋಡೆಯಿದೆ. ಹಾಗಿದ್ರೂ ಐ ಲವ್ ಯೂ ಅಂತ ಹೇಳಲೇಬೇಕು ಅನ್ನಿಸ್ತಿದೆ. ಹೇಳಿಬಿಡ್ಲಾ? ಈ ಮಾತಿಗೆ ಅವರು ಕೋಪಿಸಿಕೊಂಡ್ರೆ? ಛಟೀರ್ ಅಂತ ಕೆನ್ನೆಗೆ ಹೊಡ್ದೇಬಿಟ್ರೆ ಅಥವಾ ಮಾತಾಡೋದನ್ನೇ ನಿಲ್ಲಿಸಬಿಟ್ರೆ…?

ಅವಳು: ಎಲ್ಲವೂ ನನ್ನ ನಿರೀಕ್ಷೆ ಮೀರಿ ನಡೆದು ಹೋಗ್ತಾ ಇದೆ. ರಮೇಶ ಒಂದೆರಡಲ್ಲ, ಭರ್ತಿ ನೂರಿಪ್ಪತ್ತೈದು ಲವ್‌ಲೆಟರ್ ಕೊಟ್ಟಿದಾನೆ. ಕೆಲವನ್ನಂತೂ ರಕ್ತದಲ್ಲಿ ಬರೆದಿದ್ದಾನೆ. ತನ್ನ ಬಗ್ಗೆ, ತನ್ನವರ ಬಗ್ಗೆ, ತನ್ನ ಬಡತನದ ಬಗ್ಗೆ, ತನ್ನ ಅಲ್ಪ ಓದಿನ ಬಗ್ಗೆ, ಈಗಿನ ಕಲಿಕೆಯ ಬಗ್ಗೆ, ಕನಸುಗಳ ಬಗ್ಗೆ ಸಂಕೋಚದಿಂದ ಹೇಳ್ಕೊಂಡಿದಾನೆ. ಅವನ ಮಾತುಗಳ ತುಂಬ ಪ್ರಾಮಾಣಿಕತೆಯಿದೆ. ವಿನಂತಿಯಿದೆ. ಕಂಡೂ ಕಾಣದಂಥ ಆಗ್ರಹವಿದೆ. ನನಗಾದ್ರೂ ಯಾಕೆ ಅಂಥ ಮಮಕಾರ? ಗೊತ್ತಾಗ್ತಿಲ್ಲ. ನನ್ನ ಒಂದೇ ಒಂದು ಕುಡಿನೋಟಕ್ಕೆ ಕಾದಿರುವ ನೂರು ಹುಡುಗರಿದ್ದಾರೆ. ಆದ್ರೂ ನನಗೆ ಇವನ ಧ್ಯಾನ! ಅವನು ಬಡವ ಆದ್ರೆ ಏನಂತೆ? ಹೇಗಿದ್ರೂ ನಾನು ಡಬಲ್ ಡಿಗ್ರಿ ಮಾಡಿದೀನಲ್ಲ? ನಾನೂ ದುಡಿದ್ರಾಯ್ತು. ಅವನ ಪ್ರೀತೀನ ಒಪ್ಕೊಂಡು, ಯಾವುದಾದ್ರೂ ದೇವಸ್ಥಾನದಲ್ಲಿ ಮದುವೆಯಾಗಿ, ಹೊಸಬದುಕು ಶುರು ಮಾಡೋದೇ ಸರಿ ಅನ್ನಿಸ್ತಿದೆ. ಅಲ್ಲಿ ಎಷ್ಟು ಫಾಸ್ಟ್ ಆಗಿ ಹೋಗ್ತಾ ಇದೆಯಲ್ಲ ಬದುಕು?

ಅವನು: ಶರ್ಮಿಳಾ ಮೇಡಂ ಪರಿಚಯವಾಗಿ ಆಗಲೇ ನಾಲ್ಕು ವರ್ಷ! ಅವರ ಬರ್ತ್‌ಡೇನ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡ್ದೆ. ಒಂದು ವಾಚು, ಕಿವಿಗೆ ರಿಂಗು, ಪಿಂಕ್ ಕಲರ್‌ನ ಚೂಡಿದಾರ್ ತಂದುಕೊಟ್ಟೆ. ಚಾಕೊಲೇಟ್ ಕೇಕ್‌ನ ಅವರ ಬಾಯಿಗಿಟ್ಟೆನಲ್ಲ? ಅದರ ಮರುಕ್ಷಣವೇ ಮೇಡಂ ಒಂದು ಮುತ್ತು ಕೊಟ್ರು. ನನ್ನೆದೆಗೆ ಒರಗಿ ನಿಂತ್ರು. `ಸಾಯೋ ತನ್ಕ ಹೀಗೇ ಬದುಕಿರೋಣ. ನಿನ್ನ ಪ್ರೀತೀನ ಒಪ್ಕೊಂಡಿದೀನಿ. ಈ ಕೆಲ್ಸ ಬಿಡು. ಹೊಸ ಬಿಜಿನೆಸ್ ಶುರು ಮಾಡು. ಒಂದಿಷ್ಟು ದುಡ್ಡು ಜೋಡಿಸ್ಕೊ. ಮದುವೆಗೆ ಬೇಕಾಗುತ್ತೆ. ಮುಂದೆ ಏನಾಗತ್ತೋ ಏನೋ; ಇವತ್ತೇ ದೇವರ ಮುಂದೆ ನಿಂತು ಹಣೆಗೆ ಕುಂಕುಮ ಇಟ್ಟುಬಿಡು. ಹಾಗೆ ಮಾಡಿದ್ರೆ ಮದುವೆ ಆಯ್ತು ಅಂತಾನೇ ಅರ್ಥ. ಇಬ್ರೂ ಜತೇಗಿರೋ ಫೋಟೊ ತೆಗೆಸ್ಕೊಳ್ಳೋಣ. ಮುಂದೆ ಮನೆಯವರು ನಮ್ಮ ಪ್ರೀತೀನ ವಿರೋಧಿಸಿದ್ರೆ ಆವಾಗ ಇದು ಉಪಯೋಗಕ್ಕೆ ಬರುತ್ತೆ. ಜಾತಿಯ ಮನೆ ಹಾಳಾಗಲಿ…’ ಹೀಗೆಲ್ಲ ಹೇಳಿಹೋದರು ಶರ್ಮಿಳಾ. ಆಮೇಲೆ- `ಇನ್ಮೇಲೆ ನನ್ನನ್ನ ಏಕವಚನದಲ್ಲಿ ಕರೆಯೋ’ ಅಂದ್ರು.

ಅವಳು: ಹೀಗೆಲ್ಲ ಮಾಡಿದ್ದು ಸರಿಯೋ ತಪ್ಪೋ ಗೊತ್ತಾಗ್ಲಾ ಇಲ್ಲ. ನನಗಂತೂ ರಮೇಶನೊಂದಿಗಿನ ಒಡನಾಟ ಬೇಕೇಬೇಕು ಅನ್ನಿಸ್ತಿದೆ. ಅದೇ ಕಾರಣದಿಂದ ದೇವರ ಮುಂದೆ ನಿಂತು ಅರುಶಿನಕೊಂಬು ಕಟ್ಟಿಸ್ಕೊಂಡೆ! ಪಾರ್ಕು, ಸಿನಿಮಾ, ಹೋಟೆಲು ಅಂತೆಲ್ಲಾ ಸುತ್ತಾಡಿದೆ. ಮಾತಲ್ಲಿ ಹೇಳಲಾಗದಂಥ ಹಸಿಬಿಸಿಯ ಏನೇನೋ ನಮ್ಮ ಮಧ್ಯೆ ನಡೀತು. ಅದನ್ನು ನೆನಪು ಮಾಡಿಕೊಂಡ್ರೇ ನಾಚಿಕೆ ಆಗುತ್ತೆ. ಹಿಂದೇನೇ ಆಸೆಯೂ ಕೈ ಜಗ್ಗುತ್ತೆ. ನನ್ನ ಸಾಹಸವನ್ನೆಲ್ಲ ಗೆಳತಿಯರ ಮುಂದೆ ಹೇಳಿಕೊಂಡೆ. ಅವರೆಲ್ಲ ಬೆರಗಾದರು. ರಮೇಶನ ಫೋಟೊ ನೋಡಿ- `ಇವ್ನು ಕರಿಯ. ಒಳ್ಳೇ ಅಬ್ಬೇಪಾರಿ ಥರಾ ಇದಾನೆ. ನೀನು ನೋಡಿದ್ರೆ ತ್ರಿಲೋಕಸುಂದ್ರಿ. ನಿಂಗಿವ್ನು ಸರಿ ನೋಡಿ ಅಲ್ಲ. ಮುಂದುವರೀಬೇಡ. ಅದೂ ಅಲ್ಲದೆ, ಅವ್ನು ಓದಿರೋದು ಏಳನೇ ಕ್ಲಾಸು ಅಂತೀಯ. ಅದೇ ಕಾರಣಕ್ಕೆ ನಿಮ್ಮ ಮಧ್ಯೆ- ಮುಂದೆ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಬರಬಹುದು’ ಅಂದ್ರು. ಅವರ ಬುದ್ಧಿವಾದಕ್ಕೆ ಬೆಂಕಿ ಬೀಳಲಿ. ಹುಡುಗನಷ್ಟೇ ಚೆನ್ನಾಗಿ ಹುಡುಗಿಯೂ ಇರ್‍ಲೇಬೇಕಾ? ಸಾಧಾರಣ ಸುಂದರಾಂಗನೊಂದಿಗೂ ಸಂತೃಪ್ತ ಬದುಕು ನಡೆಸಬಹುದು ಅಂತ ಜಗತ್ತಿಗೇ ತೋರಿಸ್ತೀನಿ. ಅಂದ್ಹಾಗೆ, ಅಮ್ಮನ ಅನುಮಾನದ ಕಣ್ಣು ನನ್ನ ಹಿಂದಿವೆ. ಅವಳಿಗೆ ಇದೆಲ್ಲ ಗೊತ್ತಾಗಿಬಿಡ್ತಾ?

ಅವನು: ಶರ್ಮಿಳಾ ಮೇಡಂ ಮನೇಲಿ ವಿಷಯ ಗೊತ್ತಾಯ್ತಂತೆ. ಹೇಳಿ ಕೇಳಿ ಒಬ್ಬಳೇ ಮಗಳು. ನೀನೂ ನಮ್ಮ ಮಾತು ಮೀರ್‍ತಿಯೇನೇ? ಹಾಗೇನಾದ್ರೂ ಮಾಡಿ ಲವ್ ಮ್ಯಾರೇಜ್ ಆದ್ರೆ ನಾವು ವಿಷ ಕುಡೀತೀವಿ ಹುಶಾರ್ ಅಂದ್ರಂತೆ ಅವಳ ಅಪ್ಪ-ಅಮ್ಮ. `ಪರ್ವಾಗಿಲ್ಲ. ಇದಕ್ಕೆಲ್ಲ ನೀನು ಹೆದರಬ್ಯಾಡ’ ಅಂದಿದಾರೆ ಮೇಡಂ. ಆದ್ರೂ ಹೆದರಿಕೆ ಆಗ್ತಿದೆ. ಯಾಕಂದ್ರೆ ಬಿಜಿನೆಸ್ಸು ಕೈ ಹಿಡೀತಿಲ್ಲ. ಒಳ್ಳೇ ಸಂಬಳದ ಕೆಲಸವೂ ಸಿಕ್ತಾ ಇಲ್ಲ. ಮೊದಲಿನ ಹಾಗೆ ಶರ್ಮಿಳಾ ಜತೆ ಮಾತಾಡೋಕೂ ಆಗ್ತಾ ಇಲ್ಲ. ಅವರ ಮನೆಗೇ ಫೋನ್ ಮಾಡಿದ್ರೆ ಮೇಡಂ ತಂದೇನೇ ಫೋನ್ ತಗೋತಾರೆ. ನನ್ನ ಹೆಸರು ಕೇಳಿದಾಕ್ಷಣ, ರಾಂಗ್‌ನಂಬರ್ ಅಂದು ಕುಕ್ಕಿ ಬಿಡ್ತಾರೆ. ಕಾಲೇಜಿನ ಹತ್ರಾನೇ ಒಂದೆರಡು ಸಾರಿ ಹೋಗಿ ಎಲ್ಲವನ್ನೂ ಹೇಳ್ಕೊಂಡೆ. ಹಣೆಗೆ ಕುಂಕುಮ ಇಟ್ಟಿದೀನಿ. ತಾಳೀನೂ ಕಟ್ಟಿದೀನಿ. ನಮ್ಮ ಪ್ರೀತಿ ಗೆಲ್ಲುತ್ತೆ ಅಲಾ, ಅಂದು ಬಿಕ್ಕಳಿಸಿದೆ. `ಏನೂ ಆಗಲ್ಲ ಸುಮ್ನಿರು ‘ ಅಂದಳು ಶರ್ಮಿಳಾ. ಈಗ ಹತ್ತು ದೇವರಿಗೆ ಹರಕೆ ಕಟ್ಕೊಂಡಿದೀನಿ. ದೇವರು ನನ್ನ ಕೈ ಬಿಡಲಾರ.

****
ಅವಳು: ಪ್ರಾಯದ ಹಮ್ಮಿನಲ್ಲಿ ನಾನು ತಪ್ಪು ಮಾಡಿಬಿಟ್ಟೆನಾ? ಈಗೇಕೋ ಹಾಗೇ ಅನ್ನಿಸ್ತಾ ಇದೆ. ಫ್ರೆಂಡ್ಸ್ ಹೇಳಿದ್ದೇ ಸರಿ. ರಮೇಶ್ ನಂಗೆ ಸರಿ ಜೋಡಿಯಲ್ಲ. ಅವನನ್ನು ಮದುವೆಯಾದ್ರೆ ಎದುರಾಗುವ ಸಮಸ್ಯೆಗಳು ಒಂದಾ ಎರಡಾ? ಮೊದಲನೆಯದಾಗಿ, ಅಪ್ಪ ಅಮ್ಮಂಗೆ ಕೆಟ್ಟ ಹೆಸರು ಬರುತ್ತೆ. ಬಂಧುಗಳು ದೂರ ಆಗ್ತಾರೆ. ಆಮೇಲೆ ಕೂಡ ಸಿಕ್ಕಾಗೆಲ್ಲ ಅಣಕಿಸ್ತಾರೆ. ಅಷ್ಟೇ ಅಲ್ಲ. ರಮೇಶನನ್ನೇ ಮದುವೆಯಾಗಿ ಮುಂದೊಂದು ದಿನ ಪಾರ್ಟಿಗೆ ಹೋದ್ರೆ ಆಗ ಕೂಡ ಜನ ಒಂಥರಾ ನೋಡ್ತಾರೆ. ಹೌದು, ಈಗ ದುಡುಕಿ ಮುಂದೆ ಪಶ್ಚಾತ್ತಾಪ ಪಡಬಾರದು. ಈಗಿಂದಲೇ ರಮೇಶನನ್ನು ಅವಾಯ್ಡ್ ಮಾಡಬೇಕು. ಅಪ್ಪ-ಅಮ್ಮ ಹೇಳಿದಂಗೆ ಕೇಳಬೇಕು. ಮುಂದಿನದು ನನ್ನ ಹಣೇಲಿ ಬರೆದಂತೆ ಆಗಲಿ.

ಅವನು: ಉಹುಂ, ಹೀಗೆಲ್ಲ ಆಗುತ್ತೆ ಅಂತ ನಾನು ಕನಸೂ ಕಂಡಿರಲಿಲ್ಲ. `ಹುಡುಗಾ, ನಿನ್ನ ಹೃದಯದ ಬಡಿತವಾಗಿ, ಜತೆಜತೆಯ ಹೆಜ್ಜೆಯಾಗಿ, ಕಣ್ಣೊಳಗಿನ ಬೆಳಕಾಗಿ, ಹಾಲಲ್ಲಿ ಜೇನಾಗಿ ಜತೆಗಿರ್‍ತೀನಿ ಕಣೋ’ ಎಂದಿದ್ದ ಶರ್ಮಿಳಾ; ನನಗೋಸ್ಕರ ವಾರವಾರವೂ ಅರ್ಚನೆ ಮಾಡಿಸಿದ್ದ ಶರ್ಮಿಳಾ; ನೋಟ್ ಬುಕ್ಕಿನ ಪ್ರತಿ ಹಾಳೆಯಲ್ಲೂ ನನ್ನ ಹೆಸರು ಬರೆದಿದ್ದ ಶರ್ಮಿಳಾ; ನನ್ನ ಅಂಗೈ ಮೇಲಿನ ಹಚ್ಚೆಯಾಗಿ ಮೆರೆದಿದ್ದ ಶರ್ಮಿಳಾ; ಕಳೆದ ಆರು ವರ್ಷಗಳಲ್ಲಿ ನನ್ನ ಆತ್ಮ ಬಂಧುವೇ ಆಗಿದ್ದ ಶರ್ಮಿಳಾ- ಈಗ ನನ್ನಿಂದ ದೂರಾಗುವ ಮಾತಾಡ್ತಾ ಇದಾಳೆ. ಉಹುಂ, ಅವಳೇ ಇಲ್ಲದ ಮೇಲೆ ಯಾರಿಗಾಗಿ ಬದುಕಲಿ? ಸತ್ತುಹೋದ್ರೆ ಹೇಗೆ? ಯೋಚಿಸ್ತಾ ಇದೀನಿ.

ಅವಳು: ಹೌದು, ಈಗ ನನ್ನ ನಿರ್ಧಾರ ಇನ್ನಷ್ಟು ಗಟ್ಟಿಯಾಗಿದೆ. ಹಳೆಯದನ್ನೆಲ್ಲ ಕೆಟ್ಟ ಕನಸು ಅಂತ ಮರೆತುಬಿಡಬೇಕು. ನಾನು ತಪ್ಪು ಮಾಡಿದ್ದು ಹೌದು. ಹಾಗೆ ನೋಡಿದ್ರೆ ತಪ್ಪು ಮಾಡದವ್ರು ಯಾರವ್ರೆ? ಗಾಂಧಿಯಂಥ ಗಾಂಧಿ ಕೂಡ ಲವ್ ಮಾಡಲಿಲ್ವೆ? ಆಮೇಲೂ ನೂರಾರು ತಪ್ಪು ಮಾಡಲಿಲ್ವೆ? ಆನಂತರ ಕೂಡ ಮಹಾತ್ಮ ಅಂತ ಕರೆಸಿಕೊಳ್ಳಲಿಲ್ವೆ? ಪ್ರಾಯದ ದಿನಗಳಲ್ಲಿ ಮಾಡಿದ ಎಲ್ಲ ತಪ್ಪುಗಳಿಗೂ ಕ್ಷಮೆ ಇದೆಯಂತೆ. ಇಷ್ಟೆಲ್ಲ ಗೊತ್ತಿದ್ದ ಮೇಲೂ ಸುಮ್ನೆ ಯಾಕೆ ರಿಸ್ಕ್ ತಗೊಳ್ಳೋದು? ರಮೇಶ ಬಿಸಿನೆಸ್ ಮಾಡಿ, ಅದು ಸಕ್ಸಸ್ ಆಗಿ, ಅದರಿಂದ ಲಾಭ ಬಂದು… ಓಹ್, ಅದೆಲ್ಲ ಆಗದ ಹೋಗದ ವಿಚಾರ. ನನಗಿಂತ ಜಾಸ್ತಿ ಓದಿರುವ, ನನಗಿಂತ ಚೆನ್ನಾಗಿರುವ, (ನಮಗಿಂತ ಶ್ರೀಮಂತರೂ ಆದ) ಹುಡುಗನ ಕಡೆಯವರು ಬಂದಿದ್ರಂತೆ. ಅಪ್ಪ-ಅಮ್ಮ ಒಪ್ಕೊಂಡಿದಾರೆ. ಮಗಳಿಗೆ ಒಳ್ಳೇದಾಗ್ಲಿ ಅಂತ ತಾನೆ ಅವರು ಇಷ್ಟೆಲ್ಲ ಮಾಡ್ತಿರೋದು? ನಾನು, ಅವರು ಹೇಳಿದಂತೆಯೇ ಕೇಳೋದು ವಾಸಿ.

ಅವನು: ಅಂತೂ ಈ ಬದುಕಿನ ಬಂಡಿ ಮುಳುಗಿಹೋಯ್ತು ಸಾರ್. ಆ ಹುಡುಗನನ್ನೇ ಮದುವೆಯಾದ್ರೆ ನಾವು ವಿಷ ಕುಡೀತೀವಿ ಅಂತ ಮತ್ತೆ ಹೇಳಿದ್ರಂತೆ ಶರ್ಮಿಳಾನ ತಂದೆ-ತಾಯಿ. ಅದನ್ನೇ ನೆಪ ಮಾಡಿ ಆಕೆ `ಹಳೇದನ್ನೆಲ್ಲ ಮರ್ತುಬಿಡು. ಬೇರೆ ಮದುವೆ ಮಾಡ್ಕೊ. ಖುಷಿಯಾಗಿರು. ನಾನೂ ಅಷ್ಟೆ. ಅಪ್ಪ-ಅಮ್ಮ ಹೇಳಿದಂತೆ ಕೇಳ್ತೇನೆ. ಬದುಕು ಬಂದ ಹಾಗೆ ಬರಲಿ ಅನ್ನಬೇಕೇ ಹೊರತು ನಮ್ಮ ಇಷ್ಟದಂತೆಯೇ ಇರಲಿ ಅನ್ನಬಾರ್‍ದು’ ಎಂದೆಲ್ಲಾ ಬುದ್ಧಿ ಹೇಳಿ ಹೋದಳು. ಹೀಗೆ ಹೇಳೋದ್ರಲ್ಲೂ ಒಂದು ಸಾಫ್ಟ್ ವಿಧಾನ ಇರ್‍ತದೆ ಅಲ್ವ? ಉಹುಂ, ಶರ್ಮಿಳಾಳ ಮಾತಲ್ಲಿ ಆ ವಿನಯ ಕಾಣಲಿಲ್ಲ!

ಅವಳು: ಅಬ್ಬ, ಕಡೆಗೂ ಅವನನ್ನು ಸಾಗಹಾಕಿದ್ದಾಯ್ತು. ಮುಂದೆ ಇಂಥ ತಪ್ಪು ಮಾಡಬಾರ್‍ದು. ಅವನು ಓಡಾಡೋ ಜಾಗದಲ್ಲಿ ಸುಳಿಯಲೂಬಾರದು. ಸುಳಿದರೂ ಮಾತಾಡಬಾರ್‍ದು. ಅಂದ್ಹಾಗೆ, ಮೊನ್ನೆ ಬಂದಿದ್ದ ಹುಡುಗ, ಸೈಡ್ ಆಂಗಲ್‌ನಿಂದ ನೋಡಿದ್ರೆ ಸೈಫ್ ಆಲಿ ಖಾನ್ ಥರಾನೇ ಇದಾನೆ. ಅವನನ್ನು ಒಪ್ಪಿದ್ದಾಯ್ತು. ಅಪ್ಪ-ಅಮ್ಮಂಗೆ ಬೇಗ ಹೇಳಿಬಿಡಬೇಕು…

***
ಉಪಸಂಹಾರ: ಈಗ ಏನಾಗಿದೆ ಅಂದರೆ, ರಮೇಶ, ಹಳೆಯ ದಿನಗಳ ನೆನಪಲ್ಲಿ ಬಿಕ್ಕಳಿಸ್ತಾ ಇದಾನೆ. ಈ ಕಲರ್ ಕಲರ್ ಹುಡುಗಿ ಶರ್ಮಿಳಾ, ಹೊಸ ಗೆಳೆಯನ ಜತೆ ಬೆಂಗ್ಳೂರು ಸುತ್ತುತ್ತಾ ಕಿಲಕಿಲಕಿಲ ನಗ್ತಾ ಇದಾಳೆ. ಅವಳ ಅಪ್ಪ-ಅಮ್ಮ-ಸದ್ಯ, ದೊಡ್ಡ ಕಂಟಕ ತಪ್ಪಿತು ಎಂದು ಖುಷಿ ಪಡ್ತಾ ಇದಾರೆ. ಮಗಳಿಗೆ ಮದುವೆ ಮಾಡಲು ಛತ್ರ ಹುಡುಕ್ತಾ ಇದಾರೆ. ಅಂದಹಾಗೆ, ಇದು ಕಾಲ್ಪನಿಕ ಕಥೆ ಅಲ್ಲ. ನಾಡಿನ ಪ್ರತಿ ಬೀದಿಯಲ್ಲೂ ವಿಫಲ ಪ್ರೇಮದಿಂದ ಬಿಕ್ಕುತ್ತಿರುವ ರಮೇಶನಂಥ ಹುಡುಗರಿದ್ದಾರೆ. ಹೊಸ ಪ್ರೇಮದ ಅಮಲಲ್ಲಿ ನಗುತ್ತಿರುವ ಶರ್ಮಿಳಾ ಥರದ ಬೆಡಗಿಯರೂ ಇದಾರೆ. ಇಲ್ಲಿ ಪಾತ್ರಗಳು ಅದಲು ಬದಲಾಗಬಹುದು. ಆದರೆ ಪ್ರೀತಿಸಿದ ಮನಸ್ಸಿನಿಂದ ಎದ್ದು ಹೋಗುವ ಮುನ್ನ ಎಲ್ಲರೂ ಹೇಳುವ ಕಾರಣಗಳು ಮಾತ್ರ ಹೀಗೇ ಇರ್‍ತವೆ. ನಿಜ, ಅಲ್ವ?

Advertisements

About sujankumarshetty

kadik helthi akka

Posted on ಆಗಷ್ಟ್ 11, 2009, in ಎ.ಆರ್. ಮಣಿಕಾಂತ್ - ಉಭಯ ಕುಶಲೋಪರಿ ಸಾಂಪ್ರತ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: