ಆಗುಂಬೆಯ ಆಗಂತುಕ! – The Agumbe Intruder

ಬಹುಕಾಲ ಕಾಡುವ ಈ ಕತೆಯಲ್ಲಿ ಥ್ರಿಲ್,ಫಿಕ್ಷನ್ ಮತ್ತು ಸಸ್ಪೆನ್ಸ್ ಇನ್ನು ಏನೇನೋ? ಓದುಗರಿಗೊಂದು ಹೊಸ ಅನುಭವ..

The Agumbe Intruder, a short story in Kannada by Satyavrata Hosabettuಅದು ನನ್ನ ಖಯಾಲಿ.

ರಜಾದಿನಗಳಲ್ಲಿ ಹೆಗಲಿಗೊಂದು ರುಕ್ಸಾಕ್ ಬ್ಯಾಗು ತಗುಲಿಸಿಕೊಂಡು ಗುರುತು ಪರಿಚಯವಿಲ್ಲದ ಊರಿಗೆ ಹೊರಟುಬಿಡುವುದು. ಹಾಗೆ ಹೊರಡುವ ಊರಲ್ಲಿ ಒಂದಷ್ಟು ಕಾಡು ಇದ್ದರೆ ಸಾಕು, ಅಲ್ಲಿ ಉಳಿದುಕೊಳ್ಳುವುದಕ್ಕೆ ಮನೆಯಿದೆಯೋ ಗೆಳೆಯರಿದ್ದಾರೋ ಅನ್ನುವುದನ್ನೆಲ್ಲ ನಾನು ಯೋಚಿಸುತ್ತಿರಲಿಲ್ಲ. ಒಂದು ಸಾರಿ ಹೋದ ಜಾಗಕ್ಕೆ ಮತ್ತೊಂದು ಸಾರಿ ಹೋಗಬಾರದು ಅಂದುಕೊಂಡರೂ ನಾನು ಮತ್ತೊಮ್ಮೆ ಭೇಟಿ ನೀಡುತ್ತಿದ್ದ ಊರುಗಳಲ್ಲಿ ಆಗುಂಬೆಯೂ ಒಂದು. ಅಲ್ಲಿ ಅಂಥದ್ದೇನಿದೆ ಅನ್ನುವ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿಲ್ಲ. ಇವತ್ತಿಗೂ ಆಗುಂಬೆ ನನ್ನನ್ನು ಆಕರ್ಷಿಸಿದ್ದು ಅದರ ನಿಗೂಢತೆಯಿಂದಾಗಿ.

ನಾನು 3ನೇ ಸಾರಿ ಆಗುಂಬೆಗೆ ಕಾಲಿಡುವ ಹೊತ್ತಿಗೆ ಅಲ್ಲಿನ ಅಡಕೆ ತೋಟದವರೊಬ್ಬರು ನನಗೆ ಗೆಳೆಯರಿದ್ದರು. ಅವರಿಗೂ ನನಗೂ ಕೆಲವೂ ಸಮಾನ ಆಸಕ್ತಿಗಳಿದ್ದವು. ಹೀಗಾಗಿ ನಾವಿಬ್ಬರೂ ಹೆಗಲಿಗೊಂದು ಕ್ಯಾಮರಾ ನೇತು ಹಾಕಿಕೊಂಡು ಆಗುಂಬೆಯ ಸಮೀಪದ ಕಾಡುಗಳಲ್ಲಿ, ತೀರ್ಥಹಳ್ಳಿ ಸುತ್ತ ಮುತ್ತಲಿನ ಗುಡ್ಡಗಳಲ್ಲಿ ಅಲೆಯುತ್ತಿದ್ದೆವು. ಅವರ ಊರಿನ ಹೆಸರು ಮುತ್ತವಳ್ಳಿ. ಅವರ ಹೆಸರು ಮಹೇಶ್ವರ. ನಾನು ಆಗುಂಬೆಗೆ ಹೋದಾಗಲೆಲ್ಲ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ.

ಹೀಗಿರಬೇಕಾದರೆ ಒಂದು ದಿನ ಮಹೇಶ್ವರ ನಮ್ಮ ಮನೆಗೆ ಬಂದೇಬಿಟ್ಟರು. ನಿಮ್ಮ ಫೋನು ಸತ್ತಿದೆ ಅಂತ ಕಾಣುತ್ತೆ. ಎರಡು ದಿವಸದಿಂದ ಪ್ರಯತ್ನಿಸುತ್ತಿದ್ದೇನೆ. ತಕ್ಷಣ ಹೊರಡಿ. ಅಲ್ಲೊಂದು ವಿಶೇಷವುಂಟು ಎಂದವರೇ ಅವಸರಿಸಿದರು. ತಮ್ಮ ಹಳೆಯ ಮಹೀಂದ್ರಾ ಜೀಪಿಗೆ ನನ್ನನ್ನು ಹತ್ತಿಸಿಯೇ ಬಿಟ್ಟರು.

‘ಏನದು ವಿಶೇಷ ಹೇಳಿ….’ ದಾರಿಯಲ್ಲಿ ನಾನು ನಾಲ್ಕೈದು ಬಾರಿ ಅವರನ್ನು ಒತ್ತಾಯಿಸಿದೆ. ‘ನೀವು ಕಂಡೇ ಅರಿಯಬೇಕು. ನಾನು ಹೇಳಿದರೆ ನೀವು ನಂಬುವುದಿಲ್ಲ. ಯಾಕೆಂದರೆ ನೀವೆಲ್ಲ ನಾಸ್ತಿಕರು. ನಾನು ಹೇಳುವುದಲ್ಲಿ ನಂಬಿಕೆ ಇರುವುದಿಲ್ಲ ನಿಮಗೆ’ ಎಂದು ನನ್ನ ಬಾಯಿ ಮುಚ್ಟಿಸಿದರು. ‘ಸದ್ಯಕ್ಕೆ ಇದನ್ನು ಓದುತ್ತಿರಿ’ ಎಂದು ಹಳೆಯ ಪತ್ರಿಕೆಗಳ ಕಟ್ಟೊಂದನ್ನು ಕೈಗಿತ್ತರು.

ಪತ್ರಿಕೆಗಳಿಂದ ಕತ್ತರಿಸಿದ ಸುದ್ದಿಗಳನ್ನೆಲ್ಲ ನೀಟಾಗಿ ಅಂಟಿಸಿದ್ದ ಕ್ಲಿಪಿಂಗ್ ಅದು. ಅದರಲ್ಲಿದ್ದ ಸುದ್ದಿಗಳೆಲ್ಲ ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದ್ದು. ಆತನ ಹೆಸರು ರಾಜಶೇಖರ ಪಟ್ವಾಡಿ. ಆಗುಂಬೆಯ ಕಣಿವೆಯಲ್ಲಿ ಹತ್ತೆಕರೆ ತೋಟದ ಮಾಲಿಕ. ಆತ ಸಣ್ಣಮಟ್ಟಿಗಿನ ವಿಜ್ಞಾನಿಯೂ ಆಗಿದ್ದ. ತಾನೇ ವಿದ್ಯುತ್ ಉತ್ಪಾದಿಸುತ್ತಿದ್ದ. ತಾನೇ ಕಂಡುಹಿಡಿದ ರೇಡಿಯೋ ಬಳಸುತ್ತಿದ್ದ. ಸೂರ್ಯನ ಬೆಳಕನ್ನು ಹಿಡಿದಿಡುವ ಯಾವುದೋ ಲೋಹ ಕಂಡುಹಿಡಿದಿದ್ದ ಎಂದೆಲ್ಲ ಆ ಪತ್ರಿಕೆಯಲ್ಲಿ ವರದಿಯಾಗಿತ್ತ್ತು. ಆತ ಮಹತ್ವದ ಸಂಶೋಧನೆಯಲ್ಲಿ ತೊಡಗಿದ್ದಾನೆ ಎಂದೂ ಬರೆದಿತ್ತು.

ಅವೆಲ್ಲ ಮಾಮೂಲಿ ಸುದ್ದಿಗಳು ಅಂದುಕೊಂಡು ನಾನು ಸುಮ್ಮನಾದೆ. ಆದರೆ ಆ ಕಟ್ಟಿನ ಕೊನೆಯಲ್ಲಿದ್ದ ಸುದ್ದಿ ಮಾತ್ರ ನನ್ನನ್ನು ನಿಜಕ್ಕೂ ಗಾಬರಿಗೊಳಿಸಿತು. ರಾಜಶೇಖರ ಪಟ್ವಾಡಿ ಸತ್ತ ಸುದ್ದಿ ಅದು. ಅವ ತನ್ನ ಲೈಬ್ರರಿಯಲ್ಲೇ ಹೃದಯಘಾತಕ್ಕೆ ಒಳಗಾಗಿ ಸತ್ತಿದ್ದ. ಆತನ ಮನೆಯಲ್ಲಿದ್ದ 3 ಜನ ಕೆಲಸದಾಳುಗಳು ಹಾಗೂ ದೂರದ ಪೂನಾದಲ್ಲಿದ್ದ ಆತನ ತಂಗಿ ಅವನ ಶವಸಂಸ್ಕಾರ ಮಾಡಿದ್ದರು.

ಅಷ್ಟನ್ನೂ ಓದಿದ ನಂತರ ನಾನು ಮಹೇಶ್ವರರ ಮುಖ ನೋಡಿದೆ. ಅವರ ಮುಖದಲ್ಲಿ ಆತಂಕವಿತ್ತು. ‘ಈಗ ಅಲ್ಲಿ ಯಾರಿದ್ದಾರೆ ಕೇಳಿದೆ’ ಪಟ್ಟಾಡಿಯವರ ತಂಗಿ ಆ ಜಾಗವನ್ನು ಮಾರಲು ಯತ್ನಿಸಿದಳು. ಯಾರೂ ಕೊಳ್ಳಲು ಮುಂದೆ ಬಾರದ ಕಾರಣ ಅದು ಹಾಗೇ ಪಾಳುಬಿದ್ದಿದೆ. ಕೆಲಸದವರು ಬೇರೆಲ್ಲೋ ಹೊರಟುಹೋದ ನಂತರ, ಮನೆಯೊಳಗೆ ಜೇಡರ ಬಲೆ ತುಂಬಿ ಭೂತಬಂಗಲೆಯ ಥರ ಕಾಣುತ್ತಿದೆ. ಒಂದು ಸಾರಿ ಅಲ್ಲಿಗೆ ದನ ಹುಡುಕಿಕೊಂಡು ಹೋಗಿದ್ದವನೊಬ್ಬ ಅಲ್ಲಿ ಏನೋ ಕಂಡಂತಾಗಿ ಓಡಿ ಬಂದು ನೆತ್ತರು ಕಾರಿ ಸತ್ತನಂತೆ. ಆವತ್ತಿನಿಂದ ಆ ಮನೆಯತ್ತ ಯಾರೂ ಕಾಲು ಹಾಕುವುದಿಲ್ಲ’ ಎಂದರು ಮಹೇಶ್ವರ.

ಅದಕ್ಕೂ ನಮಗೂ ಏನು ಸಂಬಂಧ ಎಂಬಂತೆ ಅವರ ಮುಖ ನೋಡಿದೆ. ‘ನಾವು ಅಲ್ಲಿಗೇ ಹೋಗುತ್ತಿದ್ದೇವೆ’ ತಣ್ಣಗೆ ಹೇಳಿದರು.

ಕಾಡಿನ ನಡುವೆ ಅದೊಂದು ಸುಂದರವಾದ ಮನೆ. ಪ್ರಶಾಂತ ಸ್ಥಳದಲ್ಲಿತ್ತು. ಅದನ್ನು ನೋಡಿದ ತಕ್ಷಣ ಅಲ್ಲೇನೂ ವಿಲಕ್ಷಣವಾದದ್ದು ನನಗೆ ಕಾಣಿಸಲಿಲ್ಲ. ಅದನ್ನು ಹೇಗಾದರೂ ಮಾಡಿ ಕೊಂಡುಕೊಳ್ಳಬೇಕೆಂದು ನನಗೆ ಆ ಕ್ಷಣ ಅನ್ನಿಸಿತು. ಹೋಗುವುದಕ್ಕೆ ನೆಟ್ಟಗೆ ಹಾದಿಗಳೇ ಇಲ್ಲದ ಕಾಡಿನ ನಡುವೆ ಅಷ್ಟೊಂದು ದೊಡ್ಡ ಮನೆಯನ್ನು ಕಟ್ಟುವುದಕ್ಕೆ ಪಟ್ವಾಡಿ ಎಷ್ಟು ಕಷ್ಟಪಟ್ಟಿರಬಹುದು ಎನ್ನುವುದು ಊಹಿಸುವುದೂ ಕಷ್ಟವಾಗಿತ್ತು.

ಮನೆಯಿಂದ ಒಂದಷ್ಟು ದೂರದಲ್ಲೇ ಜೀಪು ನಿಲ್ಲಿಸಿದ್ದರು ಮಹೇಶ್ವರ. ‘ಇಲ್ಲಿಂದ ನಡೆದುಹೋಗೋಣ’ ಎಂದವರೇ ಥಟ್ಟನೆ ಕೆಳಗೆ ಜಿಗಿದರು. ಅವರ ಹಾಗೆ ಜಿಗಿಯುವ ಹೊತ್ತಿಗೆ ಅವರ ತೋಳಿಗೆ ಕಟ್ಟಿಕೊಂಡಿದ್ದ ಹಳದಿ ದಾರದ ತಾಯಿತ ನನ್ನ ಕಣ್ಣಿಗೆ ಬಿದ್ದು ನಗೆ ಬಂತು. ‘ನಿಮ್ಮ ಹಾಗಲ್ಲ ನಾನು, ಸೇಫ್ಟೀಗೆ ಅಂತ ಕಟ್ಟಿಕೊಂಡೆ’ ಎಂದು ನನ್ನ ನಗು ಅರ್ಥವಾದವರಂತೆ ವಿವರಣೆ ಕೊಟ್ಟರು.

ಮನೆ ಮುಂದೆ ಬಂದು ನಿಂತೆವು. ಕೆತ್ತನೆಗಳಿದ್ದ ತೇಗದ ಬಾಗಿಲು. ಪಾಳು ಬಿದ್ದಿದ್ದರೂ ಕುಂಬಾಗಿರಲಿಲ್ಲ. ಮಹೇಶ್ವರ ಜೇಬಿಂದ ಬೀಗದ ಕೈ ತೆಗೆಯುತ್ತಾರೆ ಅಂದುಕೊಂಡೆ. ಅದಕ್ಕೆ ಬದಲಾಗಿ ಅವರು ಬಾಗಿಲನ್ನು ಎರಡು ಸಾರಿ ಕುಟ್ಟಿದರು. ಅವರ ಮುಖ ನೋಡಿದೆ, ಸುಮ್ಮನಿರುವಂತೆ ಸನ್ನೆ ಮಾಡಿದರು. ಎರಡು ನಿಮಿಷದ ನಂತರ ಯಾವ ಸದ್ದೂ ಮಾಡದೆ ಬಾಗಿಲು ತೆರೆದುಕೊಂಡಿತು. ತೆರೆದ ಬಾಗಿಲಾಚೆಗೆ ರಾಜಶೇಖರ ಪಟ್ವಾಡಿ ನಿಂತಿದ್ದರು!

ನಾನು ಅದುರಿಬಿದ್ದೆ.

‘ಪರವಾಗಿಲ್ಲ…ಬನ್ನಿ…’ ಒಳಗೆ ಕರೆದರು ಪಟ್ವಾಡಿ. ನಾವ್ಬಿರೂ ಒಳಗೆ ಕಾಲಿಟ್ಟೆವು. ಸಿಡುಬು ಮೋರೆಯ ಪಟ್ವಾಡಿ ಸುಮಾರು ಐವತ್ತು ವರುಷದ ಅಜಾನುಬಾಹು. ಮುಖದ ತುಂಬ ಸಿಡುಬಿನ ಕಲೆಗಳಿದ್ದವು ಅನ್ನುವುದನ್ನು ಬಿಟ್ಟರೆ ಸಾಕಷ್ಟು ಲಕ್ಷಣವಾಗೇ ಇದ್ದರು. ದಪ್ಪ ಮೀಸೆಯಡಿ ಒಂದು ಆರ್ದ್ರ ನಗುವಿತ್ತು. ನಗುವಿನಲ್ಲಿ ಕೃತ್ರಿಮವಿರಲಿಲ್ಲ. ಅವರು ನಮ್ಮನ್ನು ತೀರ ಪರಿಚಿತರೋ ಎಂಬಂತೆ ಉದ್ದದ ಕಿರಿದಾದ ಜಗಲಿಯ ಮೂಲಕ ಒಳಗಿನ ಕೋಣೆಗೆ ಕರೆದೊಯ್ದರು.

ನಾವು ಹಾದುಹೋಗುವ ಪ್ಯಾಸೇಜಿನ ಗಾಳಿಯಲ್ಲಿ ತುಂಬಿದ್ದ ಸಾವಿನ ವಾಸನೆಯನ್ನು ನಾನು ಗಮನಿಸದೇ ಇರಲಾಗಲಿಲ್ಲ. ತಕ್ಷಣ ಅಲ್ಲಿಂದ ಓಡಿಹೋಗಬೇಕು ಅನ್ನಿಸಿತು. ಪಟ್ವಾಡಿ ನಡೆಯುತ್ತಿದ್ದಾಗ ಆತನನ್ನೇ ಸೂಕ್ಮವಾಗಿ ಅವಲೋಕಿಸಿದೆ. ಅವನ ನಡಿಗೆಯಲ್ಲಿ ಒಂದು ರೀತಿಯ ನಿರಾತಂಕವಿತ್ತು. ಅದು ಜಗತ್ತಿಗೆ ಸೇರಿದವರ ನಿರಾತಂಕ ಎಂದು ನನಗೆ ಅನ್ನಿಸಲಿಲ್ಲ.

ನಾವು ತಣ್ಣಗಿನ ನಡುಮನೆಯನ್ನು ದಾಟಿ ಒಳಗೆ ಹೋದೆವು. ಅಲ್ಲಿ ಪಟ್ವಾಡಿಯ ಲೈಬ್ರರಿಯಿತ್ತು. ಜಗತ್ತಿನ ಎಲ್ಲ ಭಾಷೆಗಳ ಎಲ್ಲ ವಿಷಯಗಳ ಕುರಿತು ಪುಸ್ತಕಗಳು ಅಲ್ಲಿ ತುಂಬಿದ್ದವು. ಅಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಪಟ್ವಾಡಿ ಯಾವ ಮುನ್ಸೂಚನೆಯೂ ಇಲ್ಲದೆ ಮಾತಿಗಾರಂಭಿಸಿದರು.

ನನ್ನದೊಂದು ಸಿದ್ಧಾಂತವಿತ್ತು. ನಿಮ್ಮ ಪಕ್ಕದಲ್ಲಿ ಒಂದು ಬೊಗಸೆ ಮನುಷ್ಯನ ರಕ್ತವನ್ನಿಟ್ಟುಕೊಂಡು ಅವನನ್ನೇ ಧ್ಯಾನಿಸುತ್ತಾ ಏಕಾಂತದಲ್ಲಿ ರಾತ್ರಿಗಳನ್ನು ಕಳೆದರೆ ಆ ವ್ಯಕ್ತಿ ನಿಮಗೆ ಕಾಣಿಸುತ್ತಾನೆ ಮತ್ತು ನಿಮ್ಮ ಜೊತೆ ಮಾತಾಡುತ್ತಾನೆ. ಅದನ್ನೇ ನಾನು ಪ್ರಯೋಗ ಮಾಡುತ್ತಿದ್ದದ್ದು. ಆದರೆ ಅದು ಯಶಸ್ವಿಯಾಗುವ ಮೊದಲೇ ಹೀಗಾಯಿತು.

ನನಗೊಂದು ಅರ್ಥವಾಗಲಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ಪಟ್ವಾಡಿಯ ಸಾವಿನ ಸುದ್ದಿ ಸುಳ್ಳೋ, ಆತ ಬದುಕಿರುವುದು ಸುಳ್ಳೋ. ನನ್ನನೇಕೆ ಈ ಮಹೇಶ್ವರ ಇಲ್ಲಿಗೆ ಕರೆದುತಂದಿದ್ದಾನೆ. ಮಹೇಶ್ವರನ ಮುಖ ನೋಡಿದೆ. ನನ್ನ ಯೋಚನೆ ಅರ್ಥವಾದವರಂತೆ ಅವರೆಂದರು: ‘ಮೊದಲು ಪಟ್ವಾಡಿಯ ಕತೆ ಕೇಳಿ.’ ಪಟ್ವಾಡಿ ತನ್ನ ಕತೆ ಆರಂಭಿಸಿದ.

ಆ ಕ್ಷಣ ನನಗೆ ಏನನ್ನಿಸಿತು ಅನ್ನುವುದು ನೆನಪಿಲ್ಲ. ಈಗ ಯೋಚಿಸಿದರೆ ನನ್ನನ್ನು ನಮ್ಮೂರಿಗೆ ಬಂದು ಕರೆದೊಯ್ದ ಮಹೇಶ್ವರ ಯಾರು….ಪಟ್ವಾಡಿ ಸತ್ತಿದ್ದು ನಿಜವೋ ಸುಳ್ಳೋ. ನನ್ನಿಂದ ಅವರೇನು ಬಯಸಿದ್ದರು? ಅವರು ಜೀಪಿನಲ್ಲಿ ಬಂದಿದ್ದು ಕನಸೇ…?
The Agumbe Intruder(Part-2), a short story in Kannada by Satyavrata Hosabettuಪಟ್ವಾಡಿ ಹೇಳಿದ ಕತೆ.ಆವತ್ತು ರಾತ್ರಿಯೂ ನಾನು ಪಕ್ಕದಲ್ಲಿ ಒಂದು ಬೊಗಸೆ ರಕ್ತವನ್ನಿಟ್ಟುಕೊಂಡು ಪ್ರಯೋಗ ಮಾಡುತ್ತಿದ್ದೆ. ರಾತ್ರಿ 3ಗಂಟೆ ಇರಬಹುದು. ಇದ್ದಕ್ಕಿದ್ದಂತೆ ತುಂಬ ಸುಸ್ತಾದಂತೆ ಅನ್ನಿಸಿತು. ಅಡುಗೆಯ ಸೋಮರಾಜುವನ್ನು ಕೂಗಿ ಕರೆದೆ. ಆತ ಮಲಗಿದ್ದ ಅಂತ ಕಾಣುತ್ತದೆ. ನಾನೇ ಎದ್ದು ಒಂದಷ್ಟು ಟೀ ಮಾಡಿಕೊಳ್ಳೋಣ ಎಂದು ಅಡುಗೆ ಮನೆಗೆ ಹೋದೆ. ಅಲ್ಲಿ ಎಂದಿನಂತೆ ಮನೆ ಕೆಲಸದ ಸುಂದರ ಮತ್ತು ಅವನ ಹೆಂಡತಿ ಸುಶೀಲ ಮಲಗಿದ್ದರು. ಕತ್ತಲೆಯಲ್ಲಿ ನಾನು ಸುಶೀಲಳ ಕಾಲು ತುಳಿದೆ. ಸದ್ಯ ಆಕೆ ಎಚ್ಚರಗೊಳ್ಳಲಿಲ್ಲ. ಆ ಕ್ಷಣ ಟೀ ಬೇಡ ಎನ್ನಿಸಿತು. ವಾಪಸ್ಸು ಲೈಬ್ರರಿಗೆ ಬಂದೆ. ಸುಮ್ಮನೆ ಕುಳಿತುಕೊಂಡೆ. ಇದ್ದಕ್ಕಿದ್ದಂತೆ ಸುಸ್ತು ಮಾಯವಾಯಿತು. ನಿದ್ದೆಯೂ ಮಾಯವಾಯಿತು. ಎಲ್ಲಿಲ್ಲದ ಉತ್ಸಾಹ ಮೈತುಂಬಿಕೊಂಡಿತು. ಆಗ ಶಬ್ದ ಕೇಳಿಸಿತು. ಗೆಜ್ಜೆ ಶಬ್ದ. ಕಣ್ಣೆತ್ತಿ ನೋಡಿದರೆ ಸುಶೀಲ ಒಳಗೆ ಬರುತ್ತಿದ್ದಳು. ಒಳಗೆ ಬಂದವಳೇ ಕಿಟಾರನೆ ಚೀರಿಕೊಂಡಳು. ರಕ್ತ ರಕ್ತ ಎಂದು ಅರಚಿದಳು.

’ಅದು ನಾನೇ ಇಟ್ಟದ್ದು. ಗಲಾಟೆ ಮಾಡಬೇಡ, ತೊಲಗಾಚೆ’ ಎಂದು ನಾನು ಸಿಟ್ಟಿನಿಂದ ಕಿರುಚಿದೆ. ನನ್ನ ಮಾತೇ ಕೇಳದವಳಂತೆ ಆಕೆ ತನ್ನ ಪಾಡಿಗೆ ತಾನು ಕಿರುಚುತ್ತಲೇ ಓಡಿ ಹೋದಳು. ಅವಳು ಹೋದ ಮರುಕ್ಷಣವೇ ಸೋಮರಾಜು, ಸುಂದರಂ ಬಂದರು. ಅವರೂ ನನ್ನ ಮುಂದೆ ಕುಳಿತು ಬೋರೆಂದು ಅಳತೊಡಗಿದರು. ಯಾತಕ್ಕೆ ಅಳುತ್ತಿದ್ದಾರೆ ಅನ್ನೋದೇ ಗೊತ್ತಾಗದೇ ಸುಂದರಂ ಹತ್ತಿರ ಹೋಗಿ ಗದರಿಸಿ ಕೇಳಿದೆ. ಆತ ನನ್ನ ಮಾತನ್ನೇ ಕೇಳದವನಂತೆ ಅಳುವುದನ್ನು ಮುಂದುವರಿಸಿದ. ಅವನ ಮುಖದಲ್ಲಿ ಒಂದು ರೀತಿಯ ಗಾಬರಿಯಿತ್ತು.

ಅಷ್ಟು ಹೊತ್ತಿಗೆ ಸೋಮರಾಜು ಎಲ್ಲಿಗೋ ಓಡಿಹೋಗುವುದು ಕಾಣಿಸಿತು. ಸುಶೀಲ ಹಾಗು ಸುಂದರಂ ಏನನ್ನೋ ಕಷ್ಟಪಟ್ಟು ಎತ್ತಿಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದರು. ಅವರ ನನ್ನನ್ನೇ ಹೊತ್ತೊಯ್ದರು ಅನ್ನೋದು ನನಗೆ ಕಾಣಿಸಿರಲಿಲ್ಲ. ನನಗೋ ಅವರಿಬ್ಬರು ಮೂಕಾಭಿನಯ ಮಾಡುತ್ತಿದ್ದಾರೆ ಅನ್ನಿಸಿತು. ಇದೇನು ನಾಟಕ ಎಂದು ಅವರನ್ನು ಗದರಿಕೊಂಡೆ. ಅವರು ನನ್ನ ಮಾತೇ ಕೇಳದವರಂತೆ ಓಡಾಡುತ್ತಿದ್ದರು.

ಅಷ್ಟು ಹೊತ್ತಿಗೆ ಡಾಕ್ಟರ್ ಬಂದರು. ಮಂಚದ ಪಕ್ಕ ಬಾಗಿ ಕುಳಿತರು. ಅವರನ್ನು ನೋಡಿ ನನಗೆ ಸಮಾಧಾನವಾಯ್ತು. ಆತ ನನ್ನ ಗೆಳೆಯ. ಆದರೆ ಆತ ನನ್ನನ್ನು ನೋಡಲೇ ಇಲ್ಲ . ಪಕ್ಕದಲ್ಲಿ ನಿಂತಿದ್ದರೂ ಗಮನಿಸದೇ ಮಂಚವನ್ನೇ ನೋಡುತ್ತಾ ‘ಎಲ್ಲ ದೈವೇಚ್ಛೆ. ನಾನೇನೂ ಮಾಡಲಾರೆ’ ಎಂದ. ಸುಂದರಂ ಸೋಮರಾಜು ಇಬ್ಬರೂ ಆಕಾಶ ಅರುಚುವಂತೆ ಅಳತೊಡಗಿದರು. ಎಷ್ಟು ಒಳ್ಳೆಯ ಧಣಿ, ಸತ್ತು ನಮ್ಮನ್ನು ಅನಾಥರನ್ನಾಗಿ ಮಾಡಿದರಲ್ಲಾ… ಎಂದು ಕಿರುಚಿದರು.

ಆಗಲೇ ನನಗೆ ಅವರ ನಾಟಕ ಅರ್ಥವಾದದ್ದು. ನಾನು ಸತ್ತಿಲ್ಲ ಕಣ್ರೋ ಎಂದು ನನ್ನಿಂದಾದಷ್ಟೂ ಕೂಗಿ ಹೇಳಿದೆ. ಅವರಿಗೆ ಆ ಪರಿವೆಯೇ ಇರಲಿಲ್ಲ. ಕೊನೆಗೆ ಗೆಳೆಯ ಡಾಕ್ಟರ್ ಕೂಡ ಮೋಸ ಮಾಡಿದ ಎನ್ನಿಸಿ ಅವನ ಮೂತಿಗೆ ಒಂದೇಟು ಹೊಡೆದೆ. ಆತ ಏನೂ ಆಗದವನಂತೆ ನಿಂತೇ ಇದ್ದ. ‘ಅವನ ತಂಗಿಗೆ ಹೇಳಿಕಳಿಸಿ’ ಎಂದು ಸೋಮರಾಜುವಿಗೆ ಸೂಚಿಸಿದ. ಇದೆಲ್ಲ ರಗಳೆಗಳಿಂದ ಹೇಸಿಗೆಯಾಗಿ ನಾನು ನನ್ನ ಲೈಬ್ರರಿಗೆ ಹೊರಟುಹೋದೆ.ಅಲ್ಲಿ ಅದೆಷ್ಟು ಹೊತ್ತು ಓದುತ್ತಾ ಕುಳಿತಿದ್ದೆನೋ ನನಗೆ ಗೊತ್ತಿಲ್ಲ. ಹಸಿವೆ ನನ್ನನ್ನು ಬಾಧಿಸಲೇ ಇಲ್ಲ, ನಿದ್ರೆಯಂತು ಹತ್ತಿರ ಸುಳಿಯಲಿಲ್ಲ. ಓದುವುದಕ್ಕೆ ಬೇಸರವೂ ಆಗಲಿಲ್ಲ. ಕೊನೆಗೆ ನಾನೇ ಎದ್ದು ಹೊರಗೇನು ನಡೆಯುತ್ತದೋ ನೋಡೋಣ ಎಂದು ಆಚೆಗೆ ಬಂದೆ. ನೋಡಿದರೆ ನನ್ನ ತಂಗಿ ಬಂದಿದ್ದಳು. ಅವಳೂ ಮಂಚದ ಮೇಲೆ ಕುಳಿತು ಬಿಕ್ಕಿಬಿಕ್ಕಿ ಅಳುತಿದ್ದಳು. ಬಗ್ಗಿ ಆಗಾಗ ಏನೋ ಹೇಳುತ್ತಿದ್ದಳು. ಅವಳೂ ನಾಟಕ ಮಾಡುತ್ತಿರುವುದು ನೋಡಿ ಅಸಹ್ಯ ಅನ್ನಿಸಿತು.

ಮತ್ತೆ ಲೈಬ್ರರಿಗೆ ಹೋಗಿ ಕುಳಿತುಕೊಂಡೆ. ಪಕ್ಕದಲ್ಲಿದ್ದ ರಕ್ತ ಒಣಗಿ ಹೆಪ್ಪುಗಟ್ಟಿತ್ತು.ಮುಂದೇನಾಯಿತೋ ನನಗೆ ಗೊತ್ತಿಲ್ಲ. ಮತ್ತೆ ನಾನು ಹೊರಗೆ ಬರುವಷ್ಟರಲ್ಲಿ ಕೆಲಸದವರೆಲ್ಲ ಹೊರಟುಹೋಗಿದ್ದರು. ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಿದ್ದರು. ನಾನು ಹಿಂಬಾಗಿಲು ತೆಗೆದುಕೊಂಡು ಹೊರಗೆ ಹೋಗಿ ನೋಡಿದರೆ ತೋಟ ಒಣಗಿ ನಿಂತಿತ್ತು. ನೀರು ಹಾಕುವ ಆಸಕ್ತಿ ನನಗಿರಲಿಲ್ಲ.ಇದಾದ ಒಂದು ವಾರದ ನಂತರ ಮನೆಗೆ ಮತ್ತಷ್ಟು ಮಂದಿ ಅಪರಿಚಿತರು ಬಂದರು ಮನೆಯನ್ನೆಲ್ಲ ಮೆಚ್ಚಿಕೊಂಡರು. ಲೈಬ್ರರಿಗೂ ಕಾಲಿಟ್ಟು ಅಲ್ಲಿಟ್ಟಿದ್ದ ರಕ್ತ ನೋಡಿ ಹೌಹಾರಿದರು. ಪುಸ್ತಕಗಳನ್ನೆಲ್ಲ ಎತ್ತಿ ನೋಡಿ ಅರ್ಥವಾಗದೇ ಹೊರಟುಹೋದರು. ಯಾರೂ ನನ್ನನ್ನು ಮಾತಾಡಿಸಲೇ ಇಲ್ಲ.

ಆ ನಂತರ ನನ್ನನ್ನು ಮಾತಾಡಿಸಿದವರೆಂದರೆ ನೀವಿಬ್ಬರು ಮಾತ್ರ.

ಅಷ್ಟು ಹೇಳಿ ಪಟ್ವಾಡಿ ಮುಖವನ್ನು ತನ್ನ ಬೊಗಸೆಯಲ್ಲಿ ಹುದುಗಿಸಿಕೊಂಡು ಭೋರೆಂದು ಅತ್ತರು. ನಾನು ಆ ಅಳುವಿನಿಂದ ಮುಜುಗರವಾಗಿ ಮನೆಯನ್ನೆಲ್ಲ ಒಂದು ಸುತ್ತುಹಾಕಿ ಬರುವುದಾಗಿ ಹೇಳಿ ಹೊರಟೆ. ಅಡುಗೆ ಮನೆಯಲ್ಲಿ ಒಲೆ ಉರಿಸದೇ ತಿಂಗಳುಗಳೇ ಕಳೆದಿದ್ದವು ಅಂತ ಕಾಣುತ್ತದೆ. ಅಲ್ಲೆಲ್ಲಾ ಇಲಿಗಳು ಓಡಾಡುತ್ತಿದ್ದವು. ನಡುಮನೆ ಮತ್ತು ಲೈಬ್ರರಿ ಬಿಟ್ಟರೆ ಮತ್ತೆಲ್ಲಾ ಕಡೆ ಕಸಕಡ್ಡಿಗಳೇ ತುಂಬಿದ್ದವು. ಹೊರಗೆ ತೋಟ ಕೂಡ ಪಾಳುಬಿದ್ದಿತ್ತು. ತೋಟದ ಹಾದಿಯಲ್ಲಿ ನನಗೊಂದು ರಕ್ತದಲ್ಲಿ ಅದ್ದಿದಂತಿದ್ದ ಕುಂಚವೂ ಅದರ ಪಕ್ಕದಲ್ಲೇ ಹಳೆಯ ಕಾಲದ ನಾಣ್ಯವೂ ಸಿಕ್ಕಿತು. ಅದನ್ನು ಎತ್ತಿಕೊಂಡು ಮನೆಗೆ ಬಂದೆ.

ಅಲ್ಲಿ ಪಟ್ವಾಡಿ ಇರಲಿಲ್ಲ. ಮಹೇಶ್ವರನೂ ಇರಲಿಲ್ಲ.ಹೊರಗೆ ಬಂದು ನೋಡಿದರೆ ನಾವು ಬಂದ ಜೀಪೂ ಕಾಣಿಸಲಿಲ್ಲ. ಬಹುಶಃ ಅಡುಗೆ ಸಾಮಾನು ತರಲಿಕ್ಕೆಂದು ಅಂಗಡಿಗೆ ಹೋಗಿರಬೇಕೆಂದುಕೊಂಡು ಮತ್ತಷ್ಟು ಹೊತ್ತು ಅಡ್ಡಾಡಿದೆ. ಸಂಜೆಯಿಳಿದು ಕತ್ತಲಾಗುತ್ತಿತ್ತು. ಒಂದು ವಿಲಕ್ಷಣ ಭಯ ನನ್ನ ನರನಾಡಿಗಳಲ್ಲಿ ಸಂಚರಿಸಿತು. ಮನಸ್ಸು ಏನೋ ತಪ್ಪಾಗಿದೆ ಎಂದು ಸಾರಿಸಾರಿ ಹೇಳುತ್ತಿತ್ತು. ಅಂಗಳಕ್ಕೆ ಬಂದು ನಿಂತು ಮನೆಯನ್ನೇ ದಿಟ್ಟಿಸಿದೆ. ಯಾವುದೇ ಹಳೆಯ ಪೇಟಿಂಗಿನಂತೆ ಕಾಣಿಸಿತು. ಸ್ವಲ್ಪ ಹೊತ್ತು ಅಲ್ಲೇ ಕಾದೆ. ಮರಳಿ ಹೋಗುವ ದಾರಿ ನನಗೂ ಸರಿಯಾಗಿ ಗೊತ್ತಿರಲಿಲ್ಲ. ಆಗಿನ್ನೂ ಈಗಿನಂತೆ ಕಾಡು ಪೂರ್ತಿ ಮಾಯವಾಗಿರಲಿಲ್ಲ.

ನನ್ನ ಸಿಟ್ಟು ಏರಿತ್ತು. ಮಹೇಶ್ವರನನ್ನು ಶಪಿಸುತ್ತಾ ಕಾಡಿನಿಂದ ನಿಧಾನವಾಗಿ ಹೊರಬಿದ್ದೆ. ಅವರಿಬ್ಬರೂ ಎಲ್ಲಿಗೆ ಹೋಗಿರಹುದೆಂಬ ಪ್ರಶ್ನೆಗಿಂತ ನನ್ನನ್ನು ಆ ಕಾಡಿನಲ್ಲಿ ಒಂಟಿಯಾಗಿ ಯಾಕೆ ಬಿಟ್ಟುಹೋದ ಎಂಬುದೇ ನನ್ನನ್ನು ಕಾಡುತ್ತಿತ್ತು. ಹೇಗೋ ಮೈಕೈ ಪರಚಿಕೊಂಡು ನಖಶಿಖಾಂತ ನಡುಗುತ್ತಾ ಆಗುಂಬೆ ತಲುಪಿದೆ. ಅಲ್ಲಿದ್ದ ಬ್ರಿಟಿಷರ ಕಾಲದ ಪ್ರವಾಸಿ ಮಂದಿರದಲ್ಲಿ ರಾತ್ರಿ ಕಳೆದೆ. ಬೆಳಗ್ಗೆ ಅಷ್ಟು ಹೊತ್ತಿಗೇ ಎಂದು ಮುತ್ತವಳ್ಳಿಯಲ್ಲಿರುವ ಮಹೇಶ್ವರನ ಮನಗೆ ಹೋದೆ.

ಅಲ್ಲಿ ಮಹೇಶ್ವರನಿರಲಿಲ್ಲ. ನನ್ನನ್ನು ಸ್ವಾಗತಿಸಿದ್ದು ಮಹೇಶ್ವರನ ಹೆಂಡತಿ ಸರಸ್ವತಿ. ಅವಳ ಮುಖದಲ್ಲಿ ಏನೋ ವಿಲಕ್ಷಣತೆ ಕಾಣಿಸಿತು. ಅವಳನ್ನು ನೋಡಿದ ತಕ್ಷಣವೇ ನನ್ನ ಅರ್ಧ ಸಿಟ್ಟು ಇಳಿದುಹೋಯ್ತು.

ನನ್ನನ್ನು ನೋಡಿದ್ದೇ ಆಕೆಯ ಕಣ್ಣಾಲಿಗಳಲ್ಲಿ ನೀರಾಡಿದವು. ‘ಹೇಗಿದ್ದೀರಿ ಚಂದ್ರಣ್ಣಾ’ ಕೇಳಿದಳು. ‘ಚೆನ್ನಾಗಿದ್ದೀನಿ… ಎಲ್ಲಿ ಮಹೇಶ್ವರ’ ನಾನು ಕುತೂಹಲದಿಂದ ಕೇಳಿದೆ.‘ಅವರೆಲ್ಲಿದ್ದಾರೆ… ನಮ್ಮನ್ನು ಬಿಟ್ಟುಹೋಗಿ ಎರಡು ತಿಂಗಳಾಯ್ತು’ ಸರಸ್ವತಿ ಸಶಬ್ದವಾಗಿ ಅತ್ತಳು. ಅವಳ ಹಣೆಯಲ್ಲಿ ಕುಂಕುಮ ಇಲ್ಲದಿದ್ದುದೇ ನನಗೆ ಕಾಣಿಸಿದ ವಿಲಕ್ಷಣತೆ ಅನ್ನೋದು ಆಗ ಗೊತ್ತಾಯಿತು.

ಕೊನೆಗೆ….ಆ ಕ್ಷಣ ನನಗೆ ಏನನ್ನಿಸಿತು ಅನ್ನುವುದು ನೆನಪಿಲ್ಲ. ಈಗ ಯೋಚಿಸಿದರೆ ನನ್ನನ್ನು ನಮ್ಮೂರಿಗೆ ಬಂದು ಕರೆದೊಯ್ದ ಮಹೇಶ್ವರ ಯಾರು….ಪಟ್ವಾಡಿ ಸತ್ತಿದ್ದು ನಿಜವೋ ಸುಳ್ಳೋ. ನನ್ನಿಂದ ಅವರೇನು ಬಯಸಿದ್ದರು? ಅವರು ಜೀಪಿನಲ್ಲಿ ಬಂದಿದ್ದು ಕನಸೇ…?ಇವತ್ತಿಗೂ ಗೊತ್ತಿಲ್ಲ. ಆದರೆ ಮಹೇಶ್ವರ ಸತ್ತ ಸುದ್ದಿ ಕೇಳುತ್ತಲೇ ನಾನು ಬೆವರಿದ್ದಷ್ಟೇ ನೆನಪಿದೆ.

ಸತ್ಯವ್ರತ ಹೊಸಬೆಟ್ಟು

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: