ಪ್ರೀತಿ, ಏನಿದು ನಿನ್ನಯ ಶಕ್ತಿ? – Love is AK 47

ದಾಂಪತ್ಯದಲ್ಲಿ ಸದಾ ಗಂಡನೇ ಖಳನಾಯಕನೆಂಬ ಸಿದ್ಧಮಾದರಿಯನ್ನು ಸಮಾಜ ಅಂಗೀಕರಿಸಿದೆ. ಹೆಂಡತಿಯಿಂದಲೂ ಸಂಸಾರ ಸಾರಹೀನವಾಗುತ್ತದೆ. ಓದಿ, ವಾರಾಂತ್ಯದಲ್ಲೊಂದು ಆಧುನಿಕ ನೀತಿ ಕತೆ.
ಮಾವೆಂಸ ಪ್ರಸಾದ್ನಾನು ವೃತ್ತಿಯಲ್ಲಿ ಖ್ಯಾತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ. ಅದು ಹೊಟ್ಟೆಪಾಡು. ಬರವಣಿಗೆ ನನ್ನ ಹವ್ಯಾಸ.ಬರೆಯುವವರಿಗೆ ಕ್ರಿಯೇಟಿವಿಟಿಗೆ ಅದೆಷ್ಟು ಅವಕಾಶ? ಈಗೀಗ ದಿನಪತ್ರಿಕೆಗಳೇ ಹೆಚ್ಚಿನ ಹೊಸತನಕ್ಕೆ ಮಾರ್ಗ ಕಲ್ಪಿಸುತ್ತವೆ. ಇಂತದ್ದೇ ಒಂದು ಸಂದರ್ಭದಲ್ಲಿ ನಾನು ರಾಜ್ಯಮಟ್ಟದ ದೈನಿಕದಲ್ಲಿ ಆಧುನಿಕ ನೀತಿಕತೆಗಳು ಎಂಬ ಅಂಕಣ ಬರೆಯಲಾರಂಭಿಸಿದ್ದೆ. ಹಿಂದೆ ವೈಕುಂಠ ರಾಜು ಇಂತದ್ದೇ ಕತೆ ಬರೆದಿದ್ದುಂಟು. ಅಡುಗೋಲಜ್ಜಿ ಕಾಲದ ಕತೆಗಳ ಪಾಕದಲ್ಲೇ ಈಗಿನ ಜೀವನದ ಸತ್ಯ ನಿತ್ಯಗಳ ಕಾಲ್ಪನಿಕ ಕತೆಗಳು ಓದುಗರನ್ನು ರಂಜಿಸತೊಡಗಿದ್ದವು. ಕತೆ ಸೃಷ್ಟಿಗೆಂದು ಬರೆಯಲು ಜಾಗವೆಂದು ನಾನು ಆಯ್ದುಕೊಂಡಿದ್ದು ಕಲ್ಯಾಣಮ್ಮನ ದೇವಸ್ಥಾನ.

ಬೆಂಗಳೂರಲ್ಲಿ ಗೌಜು ಗೂಡು ಕಟ್ಟಿದ್ದರೂ ದೇವಸ್ಥಾನಗಳು ಮಾತ್ರ ಶಾಂತಿಧಾಮ. ಕೂಗಾಡುತ್ತಲೇ ಬಂದವರೂ ದೇವಸ್ಥಾನದಲ್ಲಿ ಮೌನವಾಗಿಬಿಡುವುದು ವಿಚಿತ್ರ. ಧಾರ್ಮಿಕ ಮನೋಭಾವ ನನ್ನದಲ್ಲದಿದ್ದರೂ ದೇವಸ್ಥಾನ ನನಗಿಷ್ಟವಾಗುವುದೇ ಅದಕ್ಕೆ. ಅಲ್ಲಿ ಬರುವ ನಾನಾತರದ ಜನ, ಗೋಳು ನಲಿವುಗಳ ಘಟನೆಗಳು ನನ್ನ ಆಧುನಿಕ ಕತೆಗಳಲ್ಲಿ ಪಾತ್ರ ವಹಿಸಿವೆ.

ಈ ನಡುವೆ ಹಲವು ದಿನಗಳಿಂದ ನನಗವಳು ಕಣ್ಣಿಗೆ ಬೀಳುತ್ತಲೇ ಇದ್ದಳು. ಇಳಿಸಂಜೆಯಲ್ಲಿ ಹೂಹಣ್ಣು ತಂದವಳು ಪೂಜಾರಿಯ ಕೈಯಲ್ಲಿತ್ತವಳು ಹತ್ತೇಹತ್ತು ನಿಮಿಷಗಳ ಧ್ಯಾನ. ಗಂಡುಗಳಿಗೆ ಬರ ಬರಲಿ ಎಂಬಂತೆ ಟೈಟ್ ಜೀನ್ಸ್‌ಪ್ಯಾಂಟ್, ಮಿನಿ ಶರ್ಟ್ ಹಾಕುವ ಹುಡುಗಿಯರಂತಲ್ಲ. ಸರಳ ಅಲಂಕಾರ, ಸದಾ ಸೀರೆ. ಮುಖದಲ್ಲಿ ತಂಪು ಖಳೆ. ನನ್ನನ್ನು ಸೆಳೆದುಬಿಟ್ಟಿತು.

ಆ ಕ್ಷಣಕ್ಕೆ ಲವ್ವು ಪವ್ವು ಮಾಡಲಾಗಲಿಲ್ಲ. ಪತ್ರಕರ್ತನ ಬುಧ್ದಿ ಉಪಯೋಗಿಸಿದೆ. ಅವಳ ವಿಳಾಸವನ್ನು ಪೂಜಾರಿಗಳಿಂದ ಗಿಟ್ಟಿಸಿಕೊಂಡೆ. ಮನಸ್ಸು ಮದುವೆಯಾಗುವತ್ತ ಒಲಿದಿತ್ತು. ಅವಳ ತಂದೆ ತಾಯಿಯರನ್ನು ಭೆಟ್ಟಿಯಾಗಿ ನೇರವಾಗಿ ವಿಷಯ ತಿಳಿಸಿದೆ. ನನ್ನ ಬಗ್ಗೆ ವಿವರಿಸಿದೆ. ಒಂದು ದಿನ “ಹೆಣ್ಣು ನೋಡುವ ಶಾಸ್ತ್ರ”ವೂ ಆಯಿತು. ಕಾಫಿ ಕೊಡುವಾಗ ಅವಳ ಕೈ ನಡುಗುತ್ತಿತ್ತು. ಮುಖದಲ್ಲಿ ಆತಂಕ. ಟಿಪಿಕಲ್ ಭಾರತೀಯ ನಾರಿಯನ್ನು ನೋಡಿದಂತಾಯಿತು. ಅದೆಲ್ಲ ಬಿಡಿ, ತಿಂಗಳೊಪ್ಪತ್ತಿನಲ್ಲಿ ನಾವಿಬ್ಬರು ದಂಪತಿಗಳು!

ಅಬ್ಬಾ, ಈ ಪ್ರೀತಿಯೇ!? ಇದರ ಶಕ್ತಿಯ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಹೇಗೆ ಗೊತ್ತಿರಬೇಕು? ಅನಾಥಾಲಯದ ಮಕ್ಕಳಿಗೆ ರೇಷನ್ನಿನಂತೆ ಒಂದಿಷ್ಟು ಪ್ರೀತಿ ಸಿಕ್ಕಿರಬಹುದು. ಅವತ್ತು ಸಿಕ್ಕಿದ ಪ್ರೀತಿ ಯಥಾವತ್ ರೇಷನ್ನಿನ ರೂಪದಲ್ಲೇ..! ಅಂದರೆ ಅಕ್ಕಿ ಜೊತೆ ಕಲ್ಲು, ಹುಳು! ಅಂತವನಿಗೆ ಪ್ರೀತಿಯ ರುಚಿ ತೋರಿಸಿದ್ದು ಇವಳೆ. ಹೆಂಡತಿಯ ಪ್ರೀತಿಯ ಉತ್ಕಟತೆಗೆ ಸಾಕ್ಷಿ ಇವಳು. ಕಣ್ಣಿನ ರೆಪ್ಪೆಯಂತೆ ನನ್ನನ್ನು ನೋಡಿಕೊಳ್ಳತೊಡಗಿದಳು. ನನ್ನಿಷ್ಟಕ್ಕೆ ಒಂದಿನಿತು ಚ್ಯುತಿ ಬರದ ತಿಂಡಿ-ಊಟ, ಹೆಜ್ಜೆಹೆಜ್ಜೆಗೂ ನನ್ನ ನೆರಳಾಗಿ ನಡೆಯುವ ಗುಣ, ನನ್ನ ಅಗತ್ಯಗಳಿಗೆ ಹೇಳುವ ಮೊದಲೇ ಸ್ಪಂದಿಸುವ ಚಾಕಚಕ್ಯತೆ. ಈಗ ನನ್ನ ಆಯ್ಕೆಯ ಬಗ್ಗೆ ನಾನೇ ಹೆಮ್ಮೆ ಪಟ್ಟುಕೊಳ್ಳಬಹುದಿತ್ತು.

ಇಷ್ಟರ ಜೊತೆಗೆ ಅವಳ ಪೊಸೆಸಿವ್ ಗುಣವನ್ನು ನಾನು ಒಪ್ಪಿಕೊಳ್ಳಬೇಕಾಗಿತ್ತು!ಕರ್ಮ, ಶುಕ್ರವಾರದ ಸಿನೆಮಾ ಪುರವಣಿಯಲ್ಲಿನ ಚೆಂದದ ಹುಡುಗಿಯರನ್ನೊ, ಅವರ ಮೈಮಾಟ, ಹೊಕ್ಕಳನ್ನೋ ನೋಡುವಂತಿರಲಿಲ್ಲ.’ನೀವು ಅದನ್ನೆಲ್ಲ ಯಾಕೆ ನೋಡ್ಬೇಕು? ನಂದು ನೋಡ್ತೀರಲ್ಲ, ಸಾಕಾಗಲ್ವಾ?”ಅವಳ ಲೆಕ್ಕದಲ್ಲಿ ದರಿದ್ರ ಮನಸ್ಸು ನನ್ನದು. ಎಲ್ಲಿ ಸೌಂದರ್ಯವಿದೆಯೋ ಅದನ್ನೊಮ್ಮೆ ನೋಡಿ ಎನ್ನುತ್ತದೆ ಈ ಮನಸ್ಸು, ಅಷ್ಟೇ. ಟಿ.ವಿ.ಯಲ್ಲಿ ಸಿನೆಮಾ ಬರುತಿದ್ದಾಗ ಹಾಡು ಬಂದರೆ ಚಾನೆಲ್ ಬದಲಾಗುತ್ತಿತ್ತು. ಹಾಡು ಎಂದರೆ ಹುಡುಗೀರ ಕೈ ಕಾಲು ತಾನೇ? ನನ್ನ ಮೇಲೆ ಅವಳ ಪ್ರೀತಿ ಹೆಚ್ಚಿದಂತೆಲ್ಲ ಪೊಸೆಸಿನೆಸ್ ಮಿತಿ ಮೀರತೊಡಗಿತ್ತು.

ಮನೆಗೆ ಬರುವ ನೆರೆಹೊರೆ ಯುವತಿಯರನ್ನು ದಿಟ್ಟಿಸಿ ನೋಡುವಂತಿಲ್ಲ. ಬರೀ ಅವರೊಂದಿಗೆ ಮಾತಿಗೆ ಕೂರುವಂತಿಲ್ಲ. ಬಂದವರು ತೆರಳಿದ ಮೇಲೆ ಮನೆ ತುಂಬಾ ಶರಂಪರ ಜಗಳ. ಅವಳ ಪೊಸೆಸಿವ್ ಗುಣ ಗೊತ್ತಾಗಿರುವ ನಾನು ಮೌನದ ಮೊರೆ ಹೋದಷ್ಟೂ ಅವಳ ಹುಚ್ಚಾಟ ಹೆಚ್ಚಾಗುತ್ತಿದೆಯೆ? ಅವತ್ತೊಂದು ದಿನ, ” ಆ ರಾಧಿಕಾ ಎಷ್ಟು ಚೆಂದ ಇದ್ದಾಳೆ” ಎಂದು ಬೀದಿಯ ತುದಿ ಮನೆ ಹುಡುಗಿಯ ಬಗ್ಗೆ ಹೇಳಲಾರಂಭಿಸುತ್ತಿದ್ದಂತೆ ‘ಯಾರವಳು? ನೀವು ಅವಳನ್ನು ಇಟ್ಟುಕೊಂಡಿದ್ದೀರ?” ಚೂಪು ಬಾಣಗಳು ಧಾವಿಸತೊಡಗಿದವು. ಪರಿಪರಿ ವಿವರಿಸಿದರೂ ಅವಳಿಗೆ ಊಹ್ಞೂ, ಅರ್ಥವಾಗಲಿಲ್ಲ.

ನನಗ್ಗೊತ್ತು, ಈ ಪೊಸೆಸಿವ್ ಗುಣ ಬೆಳೆಸಿಕೊಂಡವರೆಲ್ಲರ ಕತೆ ಇದು. ಅವರಿಗೆ ಎಲ್ಲಿ ತಮ್ಮ ಪ್ರೀತಿಗೆ ದ್ರೋಹ ಆಗಿಬಿಡುತ್ತದೋ ಎಂಬ ಆತಂಕ. ಪ್ರಪಂಚದಲ್ಲಿ ತಮ್ಮಷ್ಟು ಪ್ರಾಮಾಣಿಕರು ಇನ್ನಾರೂ ಇಲ್ಲ ಎಂಬ ತೀರ್ಮಾನ. ತಮ್ಮ ಆತಂಕ, ಪ್ರಾಮಾಣಿಕತೆಯನ್ನು ಪ್ರೀತಿಸಿದವರ ಮೇಲೆ ಹೇರುತ್ತಾರೆ. ಅವರನ್ನು ತುಚ್ಛವಾಗಿ ಕಾಣುತ್ತಾರೆ. ನಾನು ಇವಳನ್ನು ಕೂರಿಸಿ ಸಮಾಧಾನದಿಂದ ಹೇಳಿದೆ, “ನೋಡು, ಪ್ರೀತಿ ಗಟ್ಟಿಯಾಗಬೇಕಾದರೆ ಪರಸ್ಪರರು ಗೌರವಿಸಬೇಕು. ಸಂಗಾತಿಯನ್ನು ನಂಬಬೇಕು. ಪ್ರೀತಿಯೆಂದರೆ ಅತಿರೇಕ ಪ್ರದರ್ಶನವಲ್ಲ. ಅದು ನಿಶ್ಯಬ್ಧವಾಗಿ ಜೀವನದಲ್ಲಿ ಬೆರತಿರಬೇಕು” ಯಾಕೋ, ಇದಾವುದೂ ಇವಳಿಗೆ ಅರ್ಥವಾದಂತೆ ಕಾಣೆ.

ನನಗಿನ್ನೂ ಚೆನ್ನಾಗಿ ನೆನಪಿದೆ. ಅನಾಥಾಲಯದಲ್ಲಿ ನಮ್ಮನ್ನು ನೋಡಿಕೊಳ್ಳುತ್ತಿದ್ದ ಸಾವಿತ್ರಕ್ಕನಿಗೆ ಕ್ಷಯ ಶುರುವಾಗಿಬಿಟ್ಟಿತ್ತು. ಅನಾಥಾಲಯದ ವ್ಯವಸ್ಥಾಪಕರು ಅವರನ್ನು ಹೊರಗಟ್ಟಿಬಿಟ್ಟಿದ್ದರು. ಸುದ್ದಿ ತಿಳಿದ ತಕ್ಷಣ ಧಾವಿಸಿ ಅವರನ್ನು ಮನೆಗೆ ಕರೆತಂದೆ. ಇದೇ ಸಾವಿತ್ರಕ್ಕ ಅಲ್ಲವೇ ನನ್ನನ್ನು ಬಾಲ್ಯದಲ್ಲಿ ಅದೆಂತದೋ ರೊಮ್ಯಾಟಿಕ್ ಫಿವರ್ ಕಾಯಿಲೆ ಬಂದಾಗ ಅಕ್ಕರೆಯಿಂದ ನೋಡಿ ಬದುಕಿಸಿದ್ದು?ಸಾವಿತ್ರಕ್ಕನಿಗೆ ಆಜುಬಾಜು 50ರ ಪ್ರಾಯ. ಮದುವೆಯನ್ನೇ ಆಗದ ಆಕೆಯನ್ನು ತಟ್ಟನೆ ನೋಡಿದರೆ 40 ವರ್ಷದೊಳಗೆ ಎನ್ನುವಂತಿದ್ದರು. ಅವರಿಗೆ ಆರೈಕೆಯ ಅಗತ್ಯವಿತ್ತು. ನನಗೊಂಚೂರು ಋಣ ಸಂದಾಯಿಸುವ ಧಾವಂತವಿತ್ತು.

“ಯಾರನ್ನು ಕೇಳಿ ಕರೆ ತಂದಿರಿ? ನೋಡಿ, ನೀವು ಮನೆಗೆ ಬರುವುದೇ ರಾತ್ರಿಗೆ. ನನಗೆ ನಿಮ್ಮೊಂದಿಗೆ ಪ್ರೈವೆಸಿ ಬೇಕು. ಅಲ್ಲಾರಿ, ಈಗ ನಾವು ಜಾಲಿಯಾಗಿ ಇರದೆ ವಯಸ್ಸಾದ ಮೇಲೆ ಇರಕ್ಕಾಗತ್ತಾ?” ಎನ್ನುವುದರಿಂದ ಆರಂಭವಾದ ವಾಗ್ದಾಳಿ ‘ಇಷ್ಟು ಚೆಂದ ಇದ್ದಾಳೆ. ಮದುವೆಗಿಂತ ಮೊದಲೇ ನಿಮಗೆ ಸಂಬಂಧ ಇತ್ತಾ” ಎಂಬ ಪ್ರಶ್ನೆವರೆಗೆ ಬಂತು. ನನಗೆ ಹೇಸಿಗೆಯೆನ್ನಿಸಿಬಿಟ್ಟಿತು. ಅದೇ ಮೊದಲ ಬಾರಿ ಇವಳ ಮೇಲೆ ಕೈ ಮಾಡಿದೆ. ಅತ್ತು ಬೋರ್ಗರೆದಳು. ನನಗೆ ಸಿಟ್ಟು ಬಂದಾಗ ಏನು ಹೇಳುತ್ತಿದ್ದೇನೋ ಗೊತ್ತಾಗುವುದಿಲ್ಲ, ಕ್ಷಮಿಸಿ” ಎಂದಳು. ಈ ಪ್ರೀತಿಯ ಬಗ್ಗೆಯೇ ನನಗೆ ರೇಜಿಗೆ ಹುಟ್ಟಿತ್ತು.

ಈಗ ಮನಶ್ಯಾಸ್ತ್ರದ ಪುಸ್ತಕಗಳನ್ನು ತಿರುವಿದೆ. ಹೆಚ್ಚು ಹೆಚ್ಚು ಹವ್ಯಾಸಗಳನ್ನು ಹಚ್ಚುವುದರಿಂದ ಮನಸ್ಸು ಹಾಳುಮೂಳು ಯೋಚಿಸುವುದಿಲ್ಲ. ಪೊಸೆಸಿವ್‌ನೆಸ್ ಹತೋಟಿಗೆ ಬರುತ್ತದೆ ಎಂದೇನೋ ಅಲ್ಲಿ ಸಲಹೆ ಸಿಕ್ಕಿತು. ಆದರೆ ಹೊಸರುಚಿ, ದೇವರಲ್ಲಿ ಮಾತ್ರ ತನ್ನ ರುಚಿ ವ್ಯಕ್ತಪಡಿಸುವವಳಿಗೆ ಹೊಸ ಹವ್ಯಾಸಗಳನ್ನು ಹೇಗೆ ಹಚ್ಚಲಿ? ನಾನು ಸೋತು ಹೋದೆ.

ಅದೊಂದು ದಿನ. ಸಂಜೆ ನಾಲ್ಕರ ವೇಳೆಗೆ ಆಫೀಸ್‌ಗೆ ಫೋನ್ ಮಾಡಿದ್ದಾಳೆ. ಆಫೀಸಿನಲ್ಯಾರೋ ಫೋನ್ ತೆಗೆದುಕೊಂಡಿದ್ದಾರೆ. ಇವರು? ಕೇಳಿದ್ದಾಳೆ. ‘ಅಯ್ಯೋ, ಬೆಳಿಗ್ಗೆ ಹನ್ನೊಂದಕ್ಕೇ ಎಲ್ಲಿಗೋ ಹೋದರಮ್ಮಾ” ಎನ್ನಲಾಗಿದೆ. ಅನುಮಾನ ಬುಸುಗುಟ್ಟಿದೆ. ‘ಮತ್ತೆ ಆ ಮಾಧುರ್ಯ? ಎಂಬ ತನಿಖೆ. “ಇಲ್ರೀ, ಅವರೂ ಒಟ್ಟಿಗೆ ಹೋದಂತಿತ್ತು!” ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ. ಬೆಳಿಗ್ಗಿನಿಂದ ಸಂಜೆಯತನಕ ಮೀಟಿಂಗ್‌ನಲ್ಲಿ ಹೈರಾಣಾಗಿದ್ದೆ. ಮನೆಗೆ ಬಂದು ಒಂದರಘಳಿಗೆ ಮಲಗಬೇಕು ಎಂದರೆ ಎಲ್ಲಿ ಸಾಧ್ಯವಿತ್ತು? ಪೊಸೆಸಿವ್‌ನೆಸ್ ಮತ್ತೆ ಇಲ್ಲಸಲ್ಲದ್ದನ್ನೆಲ್ಲ ಆಡಿಸಿತ್ತು. ನನಗೆ ಮಾತು ವ್ಯರ್ಥ ಎನ್ನಿಸಿಬಿಟ್ಟಿತು.

ನಿನ್ನೆ ಮತ್ತೆ ಸಂಪಾದಕರು ಫೋನ್ ಮಾಡಿದ್ದರು. “ಕಂತನ್ನು ಕಳಿಸಿಕೊಡೀಪ್ಪಾ. ಒಂದು ವರ್ಷ ಕಾಲ ಬರೆಯುತ್ತೇನೆ ಎಂದಿದ್ದಿರಿ. ಈವರೆಗೆ ಖಡಕ್ಕಾಗಿ ತಲುಪಿಸುತ್ತಿದ್ದಿರಿ. ಈಗೇನಾಯ್ತ್ರೀ?” 51 ವಾರಗಳ ಸ್ನೇಹ ಅವರೊಂದಿಗೆ. ಪ್ರತಿ ಆಧುನಿಕ ಕತೆಗೂ ಗಹಗಹಿಸಿ ನಗುತ್ತಿದ್ದರಂತೆ. ಆದರೆ ಈಗ ಇದೊಂದು ‘ಅಂತಿಮ ಕಂತ”ನ್ನು ಮಾತ್ರ ಬರೆಯಲಾಗುತ್ತಿಲ್ಲವಲ್ಲ. ಅತ್ತ ದೇವಸ್ಥಾನದಲ್ಲಿ ಒಪ್ಪತ್ತು ಕೂರಲೂ ಆಗುತ್ತಿಲ್ಲ. ಏನು ಮಾಡಲಿ?

ನನ್ನ – ಇವಳ ನಡುವೆ ನಡೆದ ಘಟನೆಗಳನ್ನೆಲ್ಲ ಹೇಳಲು ಈಗ ಸಮಯವಿಲ್ಲ. ಅಷ್ಟಕ್ಕೂ ಯಾವುದನ್ನು ಹೇಳಲಿ? ಅವತ್ತು ಕಂಪನಿಯಿಂದ ಮಳೆಯಲ್ಲಿ ನೆನೆದು ಅಚಾನಕ್ ಆಗಿ ಬಂದ ಸಹೋದ್ಯೋಗಿ ಸುಚೇತಾಗೆ ಇವಳ ಸೀರೆ ಉಡಲು ಕೊಟ್ಟಿದ್ದೆ. ದೇವಸ್ಥಾನದಿಂದ ಬಂದವಳು ಅವಳೆದುರಿನಲ್ಲಿ ನನ್ನನ್ನು ಹೀನಾಯ ಮಾಡಿದ್ದನ್ನು ಹೇಳಲೇ? ಒಂದು ದಿನ ಸೆಕ್ಸ್ ಬೇಡ ಎಂದರೆ ಯಾವ ಸೂಳೆ ಮನೆಗೆ ಹೋಗಿದ್ದಿರಿ ಎಂದು ಚುಚ್ಚುವುದನ್ನು ನೆನಪಿಸಲೇ? ಛೆ, ಛೇ!

ಯಾಕೋ ಬದುಕೇ ಅಸಹನೀಯವಾಗುತ್ತಿದೆ. ಊಹ್ಞೂ, ಇನ್ನೂ ಹೀಗೆ ಬಾಳಲಾಗುವುದಿಲ್ಲ. ದಿನಂಪ್ರತಿ ಹಿಂಸೆ. ಪ್ರೀತಿಯ ಹಿಂಸೆ. ಡೈವೊರ್ಸ್ ಸರಿಯಾದ ಪರಿಹಾರವಲ್ಲ. ವಿಚ್ಛೇದನದ ಕಾರಣಕ್ಕೆ ಮತ್ತೆ ಇವಳನ್ನೇ ಹೆಸರಿಸಬೇಕು. ಅವಳಾಗಂತೂ ಸಹಿ ಹಾಕಲಾರಳು. ನೋ….ನೋ… ಆ ಪರಿ ಪ್ರೀತಿಸುವುದನ್ನೇ ನಾನು ಅವಮಾನಿಸಬಾರದು. ಅವಳ ನೆಗೆಟಿವ್ ಮುಖ ಪ್ರಪಂಚದ ಕ್ರೂರದೃಷ್ಟಿಗೆ ಗೊತ್ತಾಗುವುದೇ ಬೇಡ. ಅಷ್ಟಕ್ಕೂ ಪ್ರೀತಿಯ ಬಗ್ಗೆ ನಾನು ಮಾತ್ರ ವಿಭಿನ್ನ ವ್ಯಾಖ್ಯಾನ ಮಾಡುವುದೂ ಸರಿಯಲ್ಲ. ಆದರೆ ಈ ಬಂಧನದಲ್ಲಿ ಉಸಿರಾಡಲಾರೆ. ನನ್ನ ಸಾವೇ ನನ್ನನ್ನು ನಿರಾಳನನ್ನಾಗಿಸುತ್ತದೆ. ಹೌದು, ಅದೇ ಸರಿ.

ನನ್ನ ಬದುಕೇ ಒಂದು ಆಧುನಿಕ ನೀತಿ ಕತೆ! ಎಷ್ಟು ದುಡ್ಡಿದ್ದರೇನು, ಎಷ್ಟು ಪ್ರೀತಿಸುವವರಿದ್ದರೇನು? ಇನ್ನು ಬದುಕು ಬೇಕಿಲ್ಲ. ಹೇಗೂ ಸಂಪಾದಕರಿಗೆ ಕತೆ ಒದಗಿಸಬೇಕು. ನನ್ನ ಕತೆ ಅಂಕಣಕ್ಕೆ ಅದ್ಭುತ ಕ್ಲೈಮ್ಯಾಕ್ಸ್. ಕೆ.ಬಾಲಚಂದರ್‌ರ ‘ಮುಗಿಲ ಮಲ್ಲಿಗೆ” ಸಿನೆಮಾದ ಹೀರೋಯಿನ್‌ನಂತೆ ನಾನೂ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತ ಕತೆ ಬರೆಯುತ್ತೇನೆ.

ಕ್ಲೈಮ್ಯಾಕ್ಸ್..ಕಣ್ಣ ರೆಪ್ಪೆಗಳು ಭಾರವಾಗುತ್ತಿವೆ. ಊಹ್ಞೂ, ಇನ್ನು ಬರೆಯಲು ಆಗಲಿಕ್ಕಿಲ್ಲ. ಕೈ ಹಿಡಿತ ಬಲ ಕಳೆದುಕೊಂಡು ಪೆನ್ನು ಮಂಚದ ಆ ಕಡೆ ಬಿತ್ತು. ಬಹುಷಃ ಇನ್ನು ಬದುಕೂ ಹೆಚ್ಚು ಹೊತ್ತು ಇಲ್ಲ!ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ. ಆಹ್, ಈಗ ತುಸು ರೆಪ್ಪೆ ಅಗಲಿಸಲು ಸಾಧ್ಯವಾಗುತ್ತಿದೆ. ಅದೋ ಅಲ್ಲಿ ರೂಮಿನ ಬಾಗಿಲು ತೆರೆಯುತ್ತಿದೆ. ಇವಳು ಒಳಕ್ಕೆ ಬರುತ್ತಿದ್ದಾಳೆ. ಬಹುಷಃ ನಾನು ಹೀಗೆ ಬಿದ್ದಿರುವುದರಿಂದ ಆತಂಕಿತಳಾಗುತ್ತಾಳೆ. ಓಡೋಡಿ ಬರುತ್ತಾಳೆ. ಅವಳಿಗೆ ನನ್ನನ್ನು ಕಳೆದುಕೊಳ್ಳಲು ಸಾಧ್ಯವೇ?

ಛೆ, ನಾನು ಅವಳಿಗಾದರೂ ಬದುಕಿರಬೇಕಿತ್ತು. ನನ್ನಲ್ಲಿ ಜೀವ ಇಟ್ಟುಕೊಂಡಿರುವವಳು. ಒಂದು ಸಣ್ಣ ಗಾಯವಾದರೂ ನಿದ್ರೆ ಬಿಟ್ಟು ನೋಡಿಕೊಳ್ಳುವ ಕಕ್ಕುಲಾತಿ, ಪ್ರೀತಿ ಅವಳದು. ಅವತ್ತು ನನಗೆ ಜಾಂಡೀಸ್ ಆದಾಗ ಡಾಕ್ಟರರು ಹೇಳಿದ್ದಕ್ಕಿಂತ ಜಾಸ್ತಿ ಒಂದು ತಿಂಗಳು ಕಟು ಪಥ್ಯ ಮಾಡಿಸಿದ್ದಳಲ್ಲ. ಸ್ವತಃ ತಾನೂ ಪಥ್ಯ ನನ್ನನ್ನು ಆರ್ದಗೊಳಿಸಿದ್ದಳು.

“ಮೈ ಲವ್, ನಾನು ನಿದ್ರೆ ಮಾತ್ರೆ ತೆಗೆದುಕೊಂಡುಬಿಟ್ಟಿದ್ದೇನೆ. ತಕ್ಷಣ ಡಾಕ್ಟರಿಗೆ ಫೋನ್ ಮಾಡು. ನಾನು ಬದುಕಬೇಕು. ನಿನಗಾಗಿ…. ನನಗಾಗಿ…..” ಧ್ವನಿಯೆತ್ತಲು ಯತ್ನಿಸಿದೆ. ಇಲ್ಲ, ಬಾಯಿ ತೆರೆಯಲೇ ಆಗುತ್ತಿಲ್ಲ. ಹ್ಞಾ, ಈಗ ನನ್ನೆಡೆಗೆ ನೋಡುತ್ತಿದ್ದಾಳೆ.ಅರೆ! ಇವಳ ಮುಖದಲ್ಲಿ ಕಿರುನಗೆ ಕಾಣುತ್ತಿದೆಯೇ? ನನ್ನ ಪಕ್ಕ ಬಂದವಳು ಒಂದಿನಿತೂ ಗಾಬರಿಯಾಗದೆ ಫೋನ್‌ನೆಡೆಗೆ ಸಾಗುತ್ತಿದ್ದಾಳಲ್ಲ. ಹೌದು, ಇದು ಪೈಶಾಚಿಕ ನಗೆ……., ಮತ್ತೆ ಮಾಸಲು ಮಾಸಲು.

ಯಾರಿಗೋ ಫೋನ್ ಮಾಡುತ್ತಿದ್ದಾಳೆ. ಧ್ವನಿ ಮಾತ ಸ್ವಲ್ಪ್ರ ಸ್ಪಷ್ಟ. “ಹಲೋ…. ನನ್ನ ಪ್ಲಾನ್ ಯಶಸ್ವಿಯಾಗಿದೆ ನೋಡಿದೆಯಾ? ಪ್ರೀತಿ – ಈ ಪ್ರೀತಿಯೆಂಬ ಚುಂಬಕ ಶಕ್ತಿಯನ್ನು ಬಳಸಿಯೇ ಇವನಿಗೊಂದು ಅಂತ್ಯ ಕಾಣಿಸುತ್ತಿದ್ದೇನೆ. ಪ್ರೀತಿಯನ್ನು ಹೇಗೂ ಬಳಸಬಹುದು. ನನಗದು ಎಕೆ 47. ಇಷ್ಟವಿಲ್ಲದಿದ್ದರೂ ಇವರನ್ನು ಮದುವೆಯಾಗದಿದ್ದರೆ ಈ ಪರಿ ಆಸ್ತಿ ಬರುತ್ತಿತ್ತೇ? ಅಜೀರ್ಣವಾಗುವಷ್ಟು ಪ್ರೀತಿಸಿದೆ. ಸಹಿಸಲಾಗಲಿಲ್ಲ. ನಿದ್ರೆ ಮಾತ್ರೆ ತಗೊಂಡು ಮೇಲಿನ ಲೋಕಕ್ಕೆ ಹಾರಿಹೋಗಿದ್ದಾರೆ. ಈ ಪ್ರೀತಿಯೇ ಕೊಲೆಗಾರ….. ಕೊಲೆಗಾರ…..”

ಕಿವಿಯಲ್ಲಿ ತುಂಡು ತುಂಡು ಮಾತುಗಳು. ನಗೆಯ ಅಲೆ. ಅಂದರೆ…… ಅಂದರೆ……. ಇವಳು…..?ನನ್ನ ಸುತ್ತ ನಾನು ಬರೆದ ಆಧುನಿಕ ಕತೆಗಳ ಪಾತ್ರಗಳೆಲ್ಲ ಕುಣಿಯಲಾರಂಭಿಸಿದವು. ದೇಹ ಹಗುರವಾಗಿ ತೇಲಿದ ಅನುಭವ ದಟ್ಟವಾಗತೊಡಗಿತು.

ಮಾ.ವೆಂ.ಸ.ಪ್ರಸಾದ್, ಮಾವಿನಸರ

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: