ಬಿ.ಆರ್.ಅಂಬೇಡ್ಕರ್

ಬಿ.ಆರ್. ಅಂಬೇಡ್ಕರ್
ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ಡಿಸೆಂಬರ್ ೬, ೧೯೫೬)- ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.

ವಿದ್ಯಾಭ್ಯಾಸ

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆಯವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಅಲ್ಪ ಸ್ವಲ್ಪ ಕಲಿತಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು. ೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕಾಣಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥ ಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ಪರದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. ೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವವಂಶಶಾಸ್ತ್ರ ಮತ್ತು ರಾಜನೀತಿ ಅಭ್ಯಾಸ ಮಾಡಿದರು. ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡರು. ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟಮೊದಲ ಪ್ರಕಾಶಿತ ಕೃತಿ. ೧೯೧೬ ಜೂನಿನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ’ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.

೧೯೨೦ರವರೆಗೆ ಮುಂಬೈಯ ಕಾಲೇಜೊಂದರಲ್ಲಿ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧ ಬರೆದು , ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು. ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ , ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು.

೧೯೫೨, ಜೂನ್ ೧೫ರೊಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರೊಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.

[ಬದಲಾಯಿಸಿ] ವೃತ್ತಿ ಜೀವನ

ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ , ಅದರೊಂದಿಗೇ ವಕೀಲಿ ವೃತ್ತಿಯನ್ನೂ ಬೆಳೆಸಿಕೊಂಡರು. ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ , ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪುರೇಷೆಗಳ ಬಗ್ಯೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು. ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣಸಂಸ್ಥೆಯನ್ನು ಹುಟ್ಟುಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.

ಅಸ್ಪೃಶ್ಯತೆಯ ವಿರುದ್ದ ಹೋರಾಟ

೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಅಂದೋಳನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು.ಇವುಗಳಲ್ಲಿ ನಾಸಿಕದಲ್ಲಿಯ ಕಾಳಾರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಅಂದೋಳನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ , ಕೆಳವರ್ಗಗಳ ಪರವಾಗಿ ವಿಜಯ ಸಾಧಿಸುವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ ಎಂದು ಅಂಬೇಡ್ಕರ್ ನಂಬಿದ್ದ ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೋ ಎಂಬುದು ಚರ್ಚಾಸ್ಪದ.

ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಸಾಕಷ್ಟು ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತ ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು.

ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಾತ್ಮ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದು ಎಂಬುದು ಅವರ ನಿಲುವಾಗಿತ್ತು. ೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೆಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು. ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತತೊಡಗಿದರು.

ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.

ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು. ತಮ್ಮ ಅನುಯಾಯಿಗಳಿಗೆ ಜೀವನಮಟ್ಟವನ್ನು ಹೆಚ್ಚಿಸಿಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು. ಜೊತೆಗೆ, “ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಮತಾಂತರ ಮಾಡಬೇಕು” ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜದಿಂದ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು: ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಲಾಯಿತು. ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.

ರಾಜಕೀಯ ಜೀವನ

ಮುಂದಿನ ಕೆಲವರ್ಷಗಲಲ್ಲಿ, ಅಂಬೇಡ್ಕರ್ ಸ್ವತಂತ್ರ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, ೧೯೩೫ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು. ಈ ಚುನಾವಣೆಯಲ್ಲಿ ವಿಜಯಿಯಾದ ಅವರು, ಮುಂಬಯಿ ವಿಧಾನ ಸಭೆಯಲ್ಲಿ ( ಲೆಜಿಸ್ಲೇಟಿವ್ ಕೌನ್ಸಿಲ್) ದೊಡ್ಡ ಭೂಹಿಡುವಳಿದಾರಿಕೆಯ ನಿಷೇಧ, ಕೈಗಾರಿಕಾ ಕಾರ್ಮಿಕರಿಗೆ ಮುಷ್ಕರದ ಹಕ್ಕು, ಜನಸಂಖ್ಯಾ ನಿಯಂತ್ರಣ ಜಾರಿ ಇತ್ಯಾದಿ ವಿಷಯಗಳ ಬಗ್ಗೆ ಒತ್ತಾಯಿಸಿ, ಮುಂಬಯಿ ರಾಜ್ಯದ (ಪ್ರೆಸಿಡೆನ್ಸಿ) ವಿವಿಧ ಕಡೆಗಳಲ್ಲಿ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿದರು. ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ, ಅಂಬೇಡ್ಕರ್, ನಾಜಿ ತತ್ವಗಳು ಭಾರತೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವುಗಳು ಎಂಬ ನಿಲುವನ್ನು ತೆಗೆದುಕೊಂಡರು. ಬ್ರಿಟಿಷ್ ಸರಕಾರವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ಅವರು, ಅಸ್ಪೃಶ್ಯರನ್ನು ಭಾರತೀಯ ಸೇನೆಯಲ್ಲಿ ಭರ್ತಿಯಾಗುವಂತೆ ಪ್ರೋತ್ಸಾಹಿಸಿದರು. ೧೯೪೧ರಲ್ಲಿ ಅಂಬೇಡ್ಕರರನ್ನು ರಕ್ಷಣಾ ಸಲಹಾ ಸಮಿತಿಗೆ ( ಡಿಫೆನ್ಸ್ ಅಡ್ವೈಸರೀ ಕಮಿಟಿ) ನೇಮಕ ಮಾಡಲಾಯಿತು. ಮರು ವರ್ಷ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಕಾರ್ಮಿಕ ಸದಸ್ಯ ಎಂದು ನೇಮಕವಾದ ಅವರು, ಈ ಹುದ್ದೆಯಲ್ಲಿ ಮುಂದಿನ ನಾಲ್ಕು ವರ್ಷ ಮುಂದುವರಿದರು. ಇದೇ ಅವಧಿಯಲ್ಲಿ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟವಾಗಿ ಬದಲಾಯಿಸಿದರು; ಪ್ರಜಾ ಶಿಕ್ಷಣ ಸಮಾಜವನ್ನು ( ಪೀಪಲ್ಸ್ ಎಜುಕೇಶನ್ ಸೊಸೈಟಿ) ಸ್ಥಾಪಿಸಿದರು. ಅತ್ಯಂತ ವಿವಾದವನ್ನು ಹುಟ್ಟು ಹಾಕಿದ ಅನೇಕ ಪುಸ್ತಕಗಳನ್ನೂ, ಬಿಡಿಹಾಳೆಗಳನ್ನೂ ( ಪಾಂಪ್ಲೆಟ್ಸ್) ಪ್ರಕಾಶಿಸಿದರು. ಅವುಗಳಲ್ಲಿ ಕೆಲವು “ ಪಾಕಿಸ್ತಾನದ ಬಗ್ಗೆ ವಿಚಾರಗಳು “ ( ಥಾಟ್ಸ್ ಆನ್ ಪಾಕಿಸ್ತಾನ್) , “ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು” ( ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್) ಮತ್ತು “ ಶೂದ್ರರು ಯಾರಾಗಿದ್ದರು?”( ಹೂ ವರ್ ದ ಶೂದ್ರಾಸ್?)

ಭಾರತದ ಸಂವಿಧಾನ ಶಿಲ್ಪಿ

೧೯೪೭ರಲ್ಲಿ ಭಾರತ ಸ್ವತಂತ್ರವಾದ ಮೇಲೆ, ಈಗಾಗಲೇ ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿದ್ದ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ಕೆಲ ವಾರಗಳ ನಂತರ ಸಂಸತ್ತು ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು. ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, ೧೯೪೮ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿದರು. ಸಂಸತ್ತಿನ ವ್ಯವಸ್ಥೆಯಲ್ಲಿ ಇದನ್ನು ಅವರು ಸಮರ್ಥವಾಗಿ ಮುಂದೊಯ್ದ ಪರಿಣಾಮವಾಗಿ, ಕೆಲವೇ ಕೆಲವು ತಿದ್ದುಪಡಿಗಳೊಂದಿಗೆ, ಇದು ಸಂಸತ್ತಿನ ಅಂಗೀಕಾರವನ್ನು ಪಡೆಯಿತು. ಅಂದಿನಿಂದ ಅಂಬೇಡ್ಕರರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದವರು.

೧೯೫೧ರಲ್ಲಿ ಅಂಬೇಡ್ಕರ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅವರ ರಾಜಕೀಯ ಜೀವನಕ್ಕೆ ಬಹುತೇಕ ತೆರೆ ಬಿದ್ದಿತು. ೧೯೫೨ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರುಚುನಾವಣೆಯಲ್ಲೇ ಆಗಲಿ, ಲೋಕಸಭೆಗೆ ಗೆದ್ದು ಬರಲು ವಿಫಲರಾದರು. ಆದರೆ ಮಾರ್ಚ್ ೧೯೫೨ರಲ್ಲಿ ಆಗಿನ ಮುಂಬಯಿ ರಾಜ್ಯದ ಹದಿನೇಳು ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾಗಿ ರಾಜ್ಯಸಭೆಯನ್ನು ಪ್ರವೇಶಿಸಿದರು. ಸರಕಾರದ ಮೇಲೆ ನಿಯಂತ್ರಣವಿಡಲು ಅವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು.

ಬೌದ್ಧ ಧರ್ಮಕ್ಕೆ ಮತಾಂತರ

ಕೊನೆಯವರೆಗೂ ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೂ , ಅಂಬೇಡ್ಕರರ ಶಕ್ತಿ ೧೯೫೨ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚು ಹೆಚ್ಚು ವ್ಯಯವಾಗತೊಡಗಿತು. ೧೯೩೫ರ ದಲಿತ ಸಮ್ಮೇಳನದಲ್ಲಿ (ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್) , “ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ” ಎಂದು ಘೋಷಿಸಿ ಹಿಂದೂಸ್ತಾನಕ್ಕೆ ಅಘಾತ ಉಂಟುಮಾಡಿದ ಅಂಬೇಡ್ಕರ್ , ಆಗಿನಿಂದಲೇ ಮತಾಂತರದ ಬಗ್ಯೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂಧರ್ಮದಲ್ಲಿ ಏಳಿಗೆಯಿಲ್ಲವಾದ್ದರಿಂದ ಮತಾಂತರ ಅನಿವಾರ್ಯ, ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಣಯಕ್ಕೆ ಬಂದರು. ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಆಹ್ವಾನದ ಮೇಲೆ ೧೯೫೦ರಲ್ಲಿ ಶ್ರೀಲಂಕಾ ಪ್ರಯಾಣ ಬೆಳೆಸಿ, ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಭಾಷಣ ಮಾಡಿದ ಅಂಬೇಡ್ಕರ್, ಶ್ರೀಲಂಕಾದ ಅಸ್ಪೃಶ್ಯರಿಗೆ ಬೌದ್ಧಧರ್ಮವನ್ನು ಆಲಂಗಿಸಲು ಕರೆಕೊಟ್ಟರು.ಪುರಾತನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಕಡಿಮೆಯಾಗಲು ಗೌತಮ ಬುದ್ಧನೇ ಕಾರಣ ಎಂಬ ಆರೋಪಕ್ಕೆ ಪ್ರತಿಯಾಗಿ, ಬುದ್ಧನನ್ನು ಸಮರ್ಥಿಸಿ ೧೯೫೧ರಲ್ಲಿ ಲೇಖನವನ್ನು ಬರೆದರು. ಅದೇ ವರ್ಷ, “ಬೌದ್ಧ ಉಪಾಸನಾ ಪಥ” ಎಂಬ ಹೆಸರಿನ ಬೌದ್ಧ ಧರ್ಮೀಯ ಗದ್ಯದ ಸಂಕಲನವನ್ನು ಹೊರತಂದರು.

೧೯೫೪ರಲ್ಲಿ ಅಂಬೇಡ್ಕರ್ ಬರ್ಮಾ ದೇಶವನ್ನು ಎರಡು ಬಾರಿ ಸಂದರ್ಶಿಸಿದರು. ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಮೂರನೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡನೆಯ ಬಾರಿ ಭೇಟಿ ಮಾಡಿದರು. ಭಾರತೀಯ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿ, ಪುಣೆಯ ಸಮೀಪದ ದೇಹು ರೋಡ್ ನ ದೇವಾಲಯವೊಂದರಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ೧೯೫೪ರ ಡಿಸೆಂಬರ್ ೨೫ರಂದು ಪ್ರತಿಷ್ಟಾಪಿಸಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಅಸ್ಪೃಶ್ಯ ಜನಾಂಗದ ಸಭಿಕರೆದುರಿನಲ್ಲಿ , ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಹರಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೋಷಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬೌದ್ಧ ಧರ್ಮದ ಸಾರಸಂಗ್ರಹವನ್ನು ಬರೆದು ಪ್ರಕಟಿಸುವುದಾಗಿಯೂ ಅವರು ಈ ಸಭೆಯಲ್ಲಿ ನಿರ್ಣಯಿಸಿದರು. ಅದರ ಪ್ರಕಾರವೇ “ಬುದ್ಧ ಮತ್ತು ಅವರ ಧಮ್ಮ” (ಬುದ್ಧ ಅಂಡ್ ಹಿಸ್ ಧಮ್ಮ ) ಎಂಬ ಕೃತಿಯನ್ನು ಫೆಬ್ರುವರಿ ೧೯೫೬ರಲ್ಲಿ ಪೂರ್ಣಗೊಳಿಸಿದರು. ಇದಾದ ಸ್ವಲ್ಪ ಕಾಲದಲ್ಲಿಯೇ, ತಾವು ಅದೇ ವರ್ಷದ ಅಕ್ಟೋಬರಿನಲ್ಲಿ ಮತಾಂತರ ಮಾಡುವುದಾಗಿ ಪ್ರಕಟಿಸಿದರು.ನಾಗಪುರದಲ್ಲಿ ಈ ಕಾರ್ಯಕ್ರಮಕ್ಕೆ ವ್ಯವಸ್ಥೆಯಾಯಿತು.

೧೯೫೬ರ ಅಕ್ಟೋಬರ್ ೧೪ರಂದು, ಬುದ್ಧ ಭಿಕ್ಷುವಿನಿಂದ ಸಾಂಪ್ರದಾಯಿಕ ದೀಕ್ಷೆ ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ ೩,೮೦,೦೦೦ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ನಾಗಪುರ ಹಾಗೂ ಚಂದಾದಲ್ಲಿ ಇನ್ನೂ ಕೆಲವು ಇಂಥಾ ಮತಾಂತರ ಸಮಾರಂಭಗಳನ್ನು ನೆರವೇರಿಸಿ ಅಂಬೇಡ್ಕರ್ ದಿಲ್ಲಿಗೆ ಮರಳಿದರು. ಕೆಲವಾರಗಳ ನಂತರ ನೇಪಾಳಕ್ಕೆ ತೆರಳಿ, ಅಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೆಯ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಎಂಬ ವಿಷಯವಾಗಿ ಭಾಷಣಮಾಡಿದರು. ದಿಲ್ಲಿಗೆ ಮರಳುವಾಗ ದಾರಿಯಲ್ಲಿ ಬನಾರಸ್ ಹಾಗು ಬುದ್ಧ ಮೋಕ್ಷ ಪ್ರಾಪ್ತಿಹೊಂದಿದ ಕುಶೀನರ ಎಂಬಲ್ಲಿ ನಿಂತು ಭಾಷಣಗಳನ್ನು ಮಾಡಿದರು. ದಿಲ್ಲಿಗೆ ವಾಪಸಾದ ಮೇಲೆ ಅನೇಕ ಬೌದ್ಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿ, ತಮ್ಮ ಕೃತಿ “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್” ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು.

೧೯೫೬ಡಿಸೆಂಬರ್ ೦೬ನೆಯ ತಾರೀಖು ಅಂಬೇಡ್ಕರ್ ಇಹಲೋಕ ವ್ಯಾಪಾರ ಮುಗಿಸಿದರು. ಅಂಬೇಡ್ಕರ್ ಬೌದ್ಧರಾದಮೇಲೆ , ಕೇವಲ ಏಳು ವಾರ ಮಾತ್ರ ಬದುಕಿದ್ದರೂ, ಆ ಅಲ್ಪಕಾಲಾವಧಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅವರು ಮಾಡಿದಷ್ಟು ಕಾರ್ಯವನ್ನು, ಅಶೋಕನನ್ನು ಬಿಟ್ಟರೆ, ಬಹುಷಃ ಬೇರಾರೂ ಮಾಡಿಲ್ಲ. ಅವರ ಮರಣದ ಹೊತ್ತಿಗಾಗಲೇ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದರಷ್ಟೇ ಅಲ್ಲ, ಈ ಮಹಾನ್ ನಾಯಕನ ಹಠಾತ್ ನಿಧನದಿಂದ ಅನುಯಾಯಿಗಳಲ್ಲಿ ಅನಿಶ್ಚಿತತೆ ಮತ್ತು ಗೊಂದಲ ಉಂಟಾದರೂ ಕೂಡಾ, ಅವರ ಮರಣದ ಕೆಲ ತಿಂಗಳುಗಳಲ್ಲಿ ಇನ್ನೂ ಅನೇಕ ಲಕ್ಷ ಜನ ಬೌದ್ಧಮತೀಯರಾದರು.

ಅಂಬೇಡ್ಕರರ ಮಹಾಕೃತಿ ಎಂದು ಪರಿಗಣಿಸಲಾದ “ಬುದ್ಧ ಅಂಡ್ ಹಿಸ್ ಧಮ್ಮ” ವನ್ನು, ಅವರು ತೀರಿಕಂಡ ಸುಮಾರು ಒಂದು ವರ್ಷದ ನಂತರ , ೧೯೫೭ ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ ವತಿಯಿಂದ ಪ್ರಕಟಿಸಲಾಯಿತು.

ಸ್ಮಾರಕ

ಅಂಬೇಡ್ಕರ್ ದಿಲ್ಲಿಗೆ ವಸತಿ ಬದಲಾಯಿಸಿದ ಮೇಲೆ , ಬಹಳಷ್ಟು ಕಾಲ ಜೀವಿಸಿದ ಹಾಗೂ ಕೊನೆಯುಸಿರೆಳೆದ 26, ಆಲಿಪುರ ರಸ್ತೆಯ ಮನೆಯನ್ನು ಅಂಬೇಡ್ಕರ್ ಸ್ಮಾರಕವಾಗಿ ಕಾದಿಡಲಾಗಿದೆ ( ಪೂರ್ಣ ವಿಳಾಸ: 26,ಆಲಿಪುರ ರಸ್ತೆ, ಐಪಿ ಕಾಲೇಜಿನ ಹತ್ತಿರ, ಸಿವಿಲ್ ಲೈನ್ಸ್, ನವದೆಹಲಿ- 110 054). ದಲಿತ ಸಂಘಟನೆಗಳು ಈ ಸ್ಮಾರಕಕ್ಕಾಗಿ ಸಾಕಷ್ಟು ಹೋರಾಟ ಮಾಡಿದ ಮೇಲೆ , ಸರಕಾರ ,ಈ ಮನೆಯನ್ನು ಅದರ ಮಾಲೀಕರಾದ ಜಿಂದಾಲ್ ಮನೆತನದವರಿಂದ ಪಡೆದುಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿತು.

ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತಿದೆ. ಅವರ ಅನೇಕ ಅಭಿಮಾನಿಗಳು ಆದರದಿಂದ ಅವರನ್ನು “ಬಾಬಾಸಾಹೇಬ್” ಎಂದು ಸಂಬೋಧಿಸುತ್ತಾರೆ. ಅಂಬೇಡ್ಕರರ ಅನುಯಾಯಿಗಳು ಅವರ ಹೆಸರಿಂದ “ಜಯ ಭೀಮ” ಎಂದು ಪರಸ್ಪರ ಅಭಿವಾದಿಸುವುದುಂಟು. ಅಂಬೇಡ್ಕರರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು.

ಬಾಹ್ಯ ಸಂಪರ್ಕಗಳು

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸ್ವಾತಂತ್ರ್ಯ ಹೋರಾಟಗಾರರು. Bookmark the permalink. 1 ಟಿಪ್ಪಣಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: