ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ

ಮೋಹನ್ ದಾಸ್ ಕರಮ್‍ಚಂದ್ ಗಾಂಧಿ (ಅಕ್ಟೋಬರ್ ೨, ೧೮೬೯ಜನವರಿ ೩೦, ೧೯೪೮), ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ.

ಪ್ರಾರಂಭಿಕ ಜೀವನ

ಮೋಹನದಾಸ್ ಕರಮ್‍ಚಂದ್ ಗಾಂಧಿಯವರು ಅಕ್ಟೋಬರ್ ೨, ೧೮೬೯ ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಆಗಿನ ಪೋರಬಂದರಿನ ದಿವಾನರಾಗಿದ್ದ ಕರಮ್ಚಂದ್ ಗಾಂಧಿ ಇವರ ತಂದೆ, ಮತ್ತು ತಾಯಿ ಪುತಲೀಬಾಯಿ. ೧೩ ನೆಯ ವಯಸ್ಸಿನಲ್ಲಿ ಗಾಂಧೀಜಿ ಅದೇ ವಯಸ್ಸಿನ ಕಸ್ತೂರ್ಬಾ ರನ್ನು ವಿವಾಹಗೊಂಡರು. ನಂತರ ಇವರಿಗೆ ನಾಲ್ಕು ಮಕ್ಕಳು: ಹರಿಲಾಲ್ ಗಾಂಧಿ (ಜ: ೧೮೮೮), ಮಣಿಲಾಲ್ ಗಾಂಧಿ (ಜ: ೧೮೯೨), ರಾಮದಾಸ್ ಗಾಂಧಿ (ಜ: ೧೮೯೭) ಮತ್ತು ದೇವದಾಸ್ ಗಾಂಧಿ (ಜ: ೧೯೦೦). ೧೯ ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತು ಪಡೆಯಲು ತೆರಳಿದರು. ಭಾರತಕ್ಕೆ ಮರಳಿದ ನಂತರ ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಹೆಚ್ಚು ಯಶಸ್ಸು ಕಾಣದಿದ್ದರೂ, ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಕ್ಕೆ ಕೆಲಸದ ಮೇಲೆ ತೆರಳಿದರು. ಅಲ್ಲಿ ಭಾರತೀಯ ಮೂಲದ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ ೬, ೧೯೧೩ ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ೧೯೧೦ರಲ್ಲಿ ಟಾಲ್‍ಸ್ಟಾಯ್ ಅವರ ನಿಧನದವರೆಗೂ ಗಾಂಧೀಜಿ ಅವರೊಂದಿಗೆ ಪತ್ರವ್ಯವಹಾರವನ್ನು ಇಟ್ಟುಕೊಂಡಿದ್ದರು. ಟಾಲ್‍ಸ್ಟಾಯ್ ಅವರು ೧೯೦೮ರಲ್ಲಿ ಭಾರತದ ತೀವ್ರವಾದಿ ಸ್ವಾತಂತ್ರ್ಯಹೋರಾಟಗಾರರಿಗೆ ಬರೆದ ಪತ್ರವನ್ನು (ಹಿಂದೂ ಮಿತ್ರನಿಗೊಂದು ಪತ್ರ) ಗಾಂಧೀಜಿಯವರೇ ಭಾಷಾಂತರಿಸಿದರು. ಈ ಪತ್ರದಲ್ಲಿ ಟಾಲ್‍ಸ್ಟಾಯ್ ಅವರು ವೇದಗಳಲ್ಲಿನ ಹಿಂದೂ ತತ್ವಶಾಸ್ತ್ರ ಮತ್ತು ಕೃಷ್ಣನ ಕಥೆಗಳ ಮೂಲಕ ಅಂದಿನ ಭಾರತೀಯ ರಾಷ್ಟ್ರೀಯವಾದದ ಬಗೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಗಾಂಧೀಜಿಯವರು ಅಮೆರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.

ಭಾರತೀಯ ಸ್ವಾತಂತ್ರ್ಯ ಚಳುವಳಿ

ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. ಅಮೃತಸರದಲ್ಲಿ ೧೯೨೦ ರಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ ೧೨, ೧೯೩೦ ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ೧೯೩೧ ರಲ್ಲಿ ಇಂಗ್ಲೆಂಡಿಗೆ ಒಮ್ಮೆ ಭೇಟಿಯಿತ್ತರು. ಮೇ ೮, ೧೯೩೩ ರಂದು ಆರಂಭಗೊಂಡು ೨೧ ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ವ್ರತವನ್ನು ನಡೆಸಿದರು. ಮಾರ್ಚ್ ೩, ೧೯೩೯ ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.

ಎರಡನೆ ಮಹಾಯುದ್ಧ

೧೯೩೯ ರಲ್ಲಿ ಜರ್ಮನಿ ಪೋಲೆಂಡ್ ದೇಶವನ್ನು ಆಕ್ರಮಿಸಿಕೊಂಡಾಗ ಎರಡನೆ ಮಹಾಯುದ್ಧ ಆರಂಭವಾಯಿತು. ಹಿಟ್ಲರನ ತುಳಿತಕ್ಕೆ ಒಳಗಾದ ಜನರಿಗೆ ಸಾಂತ್ವನವನ್ನು ಗಾಂಧೀಜಿ ವ್ಯಕ್ತಪಡಿಸಿದರು. ಆದರೆ ಬ್ರಿಟಿಷರು ಭಾರತೀಯರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವಾಗ ಅವರ ಪರವಾಗಿಯೇ ಹೋರಾಡುವುದರಲ್ಲಿ ಗಾಂಧೀಜಿಯವರು ಅರ್ಥ ಕಾಣಲಿಲ್ಲ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾದಲ್ಲಿ ಅವರ ಸಹಾಯಕ್ಕೆ ತಾವು ನಿಲ್ಲುವುದಾಗಿ ತಿಳಿಸಿದರು. ಆದರೆ ಇದಕ್ಕೆ ಬ್ರಿಟಿಷರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಇದೇ ಕಾಲದಲ್ಲಿಯೇ ಸ್ವಾತಂತ್ರ್ಯ ಚಳುವಳಿಯು ಇನ್ನೂ ತೀವ್ರಗೊಂಡು “ಭಾರತ ಬಿಟ್ಟು ತೊಲಗಿರಿ” ಚಳುವಳಿ ೧೯೪೨ ರಲ್ಲಿ ಆರಂಭವಾಯಿತು. ಆಗಸ್ಟ್ ೯, ೧೯೪೨ ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿದರು.

ಭಾರತದ ವಿಭಜನೆ ಮತ್ತು ಹತ್ಯೆ

ಭಾರತದ ಸ್ವಾತಂತ್ರ್ಯ ಸಮಯದಲ್ಲಿ ಭಾರತವನ್ನು ಎರಡು ದೇಶಗಳಾಗಿ ಒಡೆಯಬೇಕೆಂಬ ಪ್ರಸ್ತಾಪ ಬಂದಿತು. ಈ ಪ್ರಸ್ತಾಪಕ್ಕೆ ಗಾಂಧೀಜಿ ವಿರುದ್ಧವಾಗಿದ್ದರೂ ಭಾರತವನ್ನು ಜಾತ್ಯತೀತ ಭಾರತ ಮತ್ತು ಮುಸ್ಲಿಮ್ ದೇಶವಾದ ಪಾಕಿಸ್ತಾನವಾಗಿ ಒಡೆಯಲಾಯಿತು. ಸ್ವಾತಂತ್ರ್ಯ ದಿನದಂದು ಗಾಂಧೀಜಿ ಮಿಕ್ಕೆಲ್ಲರಂತೆ ಸಮಾರಂಭದಲ್ಲಿ ಉಪಸ್ಥಿತರಾಗಲಿಲ್ಲ. ಭಾರತದ ಬೇರ್ಪಡೆಯ ಬಗ್ಗೆ ಶೋಕಾಚರಣೆ ನಡೆಸಿದರು. ಜನವರಿ ೩೦ ರಂದು, ನಾಥೂರಾಮ್ ಗೋಡ್ಸೆ ಎಂಬ ಹಿಂದೂ ತೀವ್ರವಾದಿ, ಪಾಕಿಸ್ತಾನಕ್ಕೆ ೫೫ ಕೋಟಿ ರೂಪಾಯಿಗಳ ಮೊತ್ತವನ್ನು ಭಾರತ ಸಂದಾಯಿಸಬೇಕೆಂದು ಗಾಂಧೀಜಿ ಒತ್ತಾಯಿಸಿದ್ದಕ್ಕಾಗಿ ಅವರನ್ನು ದೂಷಿಸಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದನು. ಗಾಂಧೀಜಿಯವರ ಕೊನೆಯ ಮಾತುಗಳು “ಹೇ ರಾಮ್!”. ನಂತರ ನಾಥೂರಾಮ್ ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು.

ತತ್ವಗಳು

ಗಾಂಧೀಜಿಯವರ ತತ್ವಗಳು ಭಗವದ್ಗೀತೆ ಮತ್ತು ಜೈನ ಧರ್ಮದಿಂದ ರೂಪುಗೊಂಡಂಥವು. ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ತಮ್ಮ ಆತ್ಮಚರಿತ್ರೆಯಾದ ಸತ್ಯದೊಂದಿಗೆ ನನ್ನ ಪ್ರಯೋಗಗಳು ಪುಸ್ತಕದಲ್ಲಿ ಗಾಂಧಿಜಿ ತಮ್ಮ ತತ್ವಗಳನ್ನು ವಿಶದವಾಗಿ ವಿವರಿಸಿದ್ದಾರೆ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. ೩೬ ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು.ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ.

ನೊಬೆಲ್ ಪ್ರಶಸ್ತಿ

ಶಾಂತಿಗಾಗಿ ಕೊಡಲ್ಪಡುವ ನೊಬೆಲ್ ಬಹುಮಾನ ಗಾಂಧೀಜಿಯವರಿಗೆ ಎಂದಿಗೂ ಲಭಿಸಲಿಲ್ಲ. ೧೯೩೭ ಮತ್ತು ೧೯೪೮ ರ ನಡುವೆ ಗಾಂಧೀಜಿಯವರು ಈ ಪ್ರಶಸ್ತಿಗಾಗಿ ಐದು ಬಾರಿ ಪರಿಗಣಿತರಾಗಿದ್ದರು. ೧೯೮೯ ರಲ್ಲಿ ದಲಾಯ್ ಲಾಮಾ ಅವರಿಗೆ ನೊಬೆಲ್ ಬಹುಮಾನವನ್ನು ಕೊಟ್ಟಾಗ ನೊಬೆಲ್ ಪ್ರಶಸ್ತಿ ಸಮಿತಿಯವರು ಗಾಂಧೀಜಿಯವರಿಗೆ ಈ ಪ್ರಶಸ್ತಿ ಕೊಡದ್ದಕ್ಕಾಗಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಲ್ಲದೆ ದಲಾಯ್ ಲಾಮಾ ಅವರಿಗೆ ಕೊಟ್ಟ ಪ್ರಶಸ್ತಿ ಭಾಗಶಃ ಗಾಂಧೀಜಿಯವರ ಸ್ಮರಣೆಗಾಗಿ ಎಂದು ಘೋಷಿಸಿದರು.

ಸಂಬಂಧಪಟ್ಟ ಲೇಖನಗಳು

ಬಾಹ್ಯ ಸಂಪರ್ಕಗಳು

About sujankumarshetty

kadik helthi akka

Posted on ಆಗಷ್ಟ್ 15, 2009, in ಸ್ವಾತಂತ್ರ್ಯ ಹೋರಾಟಗಾರರು. Bookmark the permalink. 1 ಟಿಪ್ಪಣಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: