Burude – ಬುರುಡೆ

ಕಗ್ಗತ್ತಲ ರಾತ್ರಿ, ಒಂದು ನರಪಿಳ್ಳೆಯೂ ಇಲ್ಲದ ನಿರ್ಜನ ಪ್ರದೇಶ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋಗುತ್ತಿರುವ ನಿಶಾಚರಿ. ತಡೆದು ತಡೆದು ಕೇಳಿಬರುತ್ತಿರುವ ಜೀರುಂಡೆಯೊಂದರ ನಾದದ ಹೊರತಾಗಿ ಇಡೀ ಪ್ರದೇಶ ನೀರವ… ಇದು ದೆವ್ವಗಳ ಸಂಚಾರಕ್ಕೆ ಹೇಳಿಮಾಡಿಸಿದಂಥ ಸಮಯ!
Premshekhar, Pondichery‘‘ಸತ್ಯಘಟನೆ’’ ಎಂಬ ಒಗ್ಗರಣೆಯೊಡನೆ ಮಾಸಪತ್ರಿಕೆಯೊಂದರಲ್ಲಿ ಕಳೆದ ತಿಂಗಳು ಪ್ರಕಟವಾಗಿದ್ದ ಭೂತಪ್ರೇತಗಳಿಗೆ ಸಂಬಂಧಿಸಿದ ಬರಹವೊಂದಕ್ಕೆ ನಾನು ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದೆ. ಈ ವೈಜ್ಞಾನಿಕ ಯುಗದಲ್ಲಿ ದೆವ್ವಭೂತಗಳಂತಹ ಅಂಧಶ್ರದ್ಧೆಗಳಿಗೆ ಪ್ರಚಾರ ನೀಡುತ್ತಿರುವುದಕ್ಕಾಗಿ ಪತ್ರಿಕೆಯನ್ನು ಟೀಕಿಸಿದ್ದೆ. ನಂಬಲನರ್ಹವಾದ ಅಸಂಬದ್ಧ ವಿಚಾರಗಳನ್ನು ಸತ್ಯಘಟನೆ ಎಂದು ಪ್ರಚಾರ ಮಾಡುತ್ತಿರುವುದರ ಬಗ್ಗೆ ಹೀಗೆ ಲೇವಡಿ ಮಾಡಿದ್ದೆ- ‘‘…ನಿಮ್ಮ ಪತ್ರಿಕೆಯ ಹೆಸರನ್ನು ‘’ ಎಂದು ಬದಲಾಯಿಸಿದರೆ ಹೇಗೆ?’’

ಮಾಧವಿಗೆ ಭೂತಪ್ರೇತಗಳ ಬಗ್ಗೆ ಅಪಾರ ನಂಬಿಕೆ. ‘‘ದೇವರು ಇಲ್ಲದಿರಬಹುದು, ಆದರೆ ದೆವ್ವಗಳಂತೂ ಇದ್ದೇ ಇವೆ’’ ಎಂದವಳ ಖಚಿತ ಅಭಿಪ್ರಾಯ. ಒಂದೂವರೆ ತಿಂಗಳ ಹಿಂದೆ ನಮ್ಮ ಮದುವೆಯಾದಾಗಿನಿಂದ ಈ ಬಗ್ಗೆ ನಮ್ಮಲ್ಲಿ ಬಿಸಿಬಿಸಿ ಚರ್ಚೆಗಳು ಸಾಮಾನ್ಯವಾಗಿಬಿಟ್ಟಿದ್ದವು. ಹೊಸಾ ಹೆಂಡತಿಯನ್ನು ರೇಗಿಸಿ ಗೋಳಾಡಿಸುವ ಉದ್ದೇಶದಿಂದಲೇ ನಾನು ದೆವ್ವಗಳ ಅಸ್ತಿತ್ವದ ಬಗ್ಗೆ ಹಗುರವಾಗಿ ಮಾತಾಡುವುದರ ಜತೆಗೆ ಅವಳ ಅಭಿಪ್ರಾಯಗಳನ್ನು ತಮಾಷೆ ಮಾಡುತ್ತಿದ್ದೆ. ಅವಳು ಮುಖ ಊದಿಸಿಕೊಂಡು ಎದ್ದುಹೋಗುತ್ತಿದ್ದಳು.

ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬರಹದ ಬಗ್ಗೆಯೂ ನಮ್ಮಿಬ್ಬರಲ್ಲಿ ವಾದವಿವಾದ ನಡೆದಿತ್ತು. ಮಾಮೂಲಿನಂತೆ ಅವಳ ಅಭಿಪ್ರಾಯ ನನ್ನ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧ. ಆ ಬರಹದ ಪ್ರತಿಯೊಂದು ಅಕ್ಷರವೂ ಸತ್ಯ ಎಂದು ಭಾವಿಸಿದ್ದಲ್ಲದೇ ಹಾಗೆಂದು ವಾದಿಸಿದ್ದಳು ಕೂಡ. ಅಲ್ಲದೇ ಆ ಬರಹವನ್ನು ಮೆಚ್ಚಿ ಪತ್ರಿಕೆಗೆ ಒಂದು ಪತ್ರವನ್ನೂ ಬರೆದಿದ್ದಳು.

ಆದರೆ ಈ ಸಂಪಾದಕ ಮಹಾಶಯರುಗಳ ಮನೋಭಾವವೇ ವಿಚಿತ್ರ. ಅದನ್ನು ನನ್ನ ಮುದ್ದಿನ ಮಡದಿ ಮಾಧವಿಯಂತಹ ಮುಗ್ಧೆ ಇರಲಿ ಪಂಡಿತರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ದೆವ್ವವನ್ನೂ, ದೆವ್ವದ ಮೇಲಿನ ಬರಹವನ್ನೂ ಮನಸಾರೆ ಮೆಚ್ಚಿ ಬರೆದ ಮಾಧವಿಯ ಪತ್ರವನ್ನು ಅಲಕ್ಷಿಸಿ ಬರೀ ಟೀಕೆಗಳಿಂದಲೇ ತುಂಬಿದ್ದ ನನ್ನ ಪತ್ರವನ್ನು ಪ್ರಕಟಿಸಿಬಿಟ್ಟಿದ್ದರು! ಅಲ್ಲಲ್ಲಿ ಕತ್ತರಿಯಾಡಿಸಿದ್ದರೂ ‘‘…ನಿಮ್ಮ ಪತ್ರಿಕೆಯ ಹೆಸರನ್ನು ಎಂದು ಬದಲಾಯಿಸಿದರೆ ಹೇಗೆ?’’ ಎಂಬ ಸಾಲನ್ನು (ಸಲಹೆಯನ್ನು!) ಇದ್ದ ಹಾಗೆಯೇ ಪ್ರಿಂಟು ಮಾಡಿಬಿಟ್ಟಿದ್ದರು.

ಸಂಜೆ ಆ ಪತ್ರಿಕೆ ಕೈಗೆ ಸಿಕ್ಕಿದಾಗಿನಿಂದ ನನಗೆ ಏನೋ ಒಂದು ರೀತಿಯ ಹಿಗ್ಗು. ಆದರೆ ಗೋಳಾಡಿಸಲು ಮಾಧವಿ ಕೈಗೆ ಸಿಗುವಂತಿರಲಿಲ್ಲ. ಇನ್ನೂರೈವತ್ತು ಮೈಲಿ ದೂರದ ತವರಿನಲ್ಲಿ ನೆಮ್ಮದಿಯಾಗಿದ್ದಳು. ನಮ್ಮಿಬ್ಬರ ಮದುವೆ ಫೆಬ್ರವರಿ ಹದಿನಾಲ್ಕರಂದು ಆದದ್ದರಿಂದ ಮದುವೆಯ ನಂತರ ಬಂದ ಮೊದಲ ಹಬ್ಬ ಗೌರಿಹಬ್ಬ ಅಥವಾ ದೀಪಾವಳಿಯಾಗಿರದೇ ಯುಗಾದಿಯಾಗಿತ್ತು. ಏಪ್ರಿಲ್‌ ಒಂಬತ್ತರಂದು ಇರುವ ಯುಗಾದಿ ಹಬ್ಬಕ್ಕೆಂದು ಇವಳು ಹದಿನೈದು ದಿವಸ ಮುಂಚೆಯೇ ತಾಯಿ ಮನೆ ಸೇರಿಕೊಂಡುಬಿಟ್ಟಿದ್ದಳು.

ತಕ್ಷಣ ರಜ ಸಿಗದ ಕಾರಣ ನಾನವಳ ಜತೆ ಹೋಗಲಾಗಿರಲಿಲ್ಲ. ಹಬ್ಬದ ಹಿಂದಿನ ದಿನ ಬರುವುದಾಗಿ ಹೇಳಿ ಕಳುಹಿಸಿದ್ದೆ. ಆದರೆ ಅವಳು ಹೊರಟ ನಾಲ್ಕು ದಿನಕ್ಕೆ ನನಗೆ ಹೊತ್ತು ಹೋಗದಂತಾಯಿತು. ಅದೇನೋ ‘‘ವಿರಹ’’ ಅನ್ನುತ್ತಾರಲ್ಲಾ ಅದು ನನ್ನನ್ನು ಇಡಿಯಾಗಿ ಅಮರಿಕೊಂಡು ಕುಂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಚಡಪಡಿಸುವಂತಾಗಿಬಿಟ್ಟಿತು. ಕೊನೆಗೆ ಡೀನ್‌ ಸಾಹೇಬರನ್ನು ಕಾಡಿ ಬೇಡಿ ಹದಿನೈದು ದಿನಕ್ಕೆ ಇ. ಎಲ್‌. ಸ್ಯಾಂಕ್ಶನ್‌ ಮಾಡಿಸಿಕೊಂಡು ಮಾರ್ಚ್‌ ಮೂವತ್ತೊಂದರ ರಾತ್ರಿ ಹತ್ತುಗಂಟೆಗೆ ಮೈಸೂರಿನ ಬಸ್‌ ಹತ್ತಿದೆ. ಹೊರಡುವ ಮೊದಲು ನನ್ನೊಡನೆ ಹೆಚ್ಚು ಸಲಿಗೆಯಿಂದಿದ್ದ ಕಿರಿಯ ಭಾವಮೈದುನ ಮಧುಗೆ ಫೋನ್‌ ಮಾಡಿ ಊರಿಗೆ ಬರುತ್ತಿರುವುದಾಗಿಯೂ, ಬೆಳಗಿನ ಐದೂವರೆ-ಆರರ ಹೊತ್ತಿಗೆ ಬಸ್‌ ಸ್ಟ್ಯಾಂಡ್‌ನಲ್ಲಿ ನನಗಾಗಿ ಕಾಯಬೇಕೆಂದೂ ಕೇಳಿಕೊಂಡೆ. ನಾನು ಬರುತ್ತಿರುವ ವಿಷಯವನ್ನು ಮಾಧವಿಗೆ ಹೇಳಬಾರದೆಂದೂ ತಿಳಿಸಿದೆ. ಬೆಳಿಗ್ಗೆ ಕಣ್ಣುಜ್ಜಿಕೊಂಡು ಏಳುವವಳ ಮುಂದೆ ದಿಢೀರನೆ ಹೋಗಿ ನಿಂತು ‘ಸರ್‌ಪ್ರೈಸ್‌’ ಮಾಡಬೇಕೆಂದು ಹಂಚಿಕೆ ಹಾಕಿದೆ.

ನನ್ನವಳ ಊರಿಗೆ ಹೋಗಬೇಕಾದರೆ ಮೈಸೂರಿನಿಂದ ಏಳೆಂಟು ಕಿಲೋಮೀಟರ್‌ ಮೊದಲೇ ಸಿಗುವ ಬೃಹದಾಕಾರದ ಜೋಡಿ ಆಲದಮರಗಳ ಬಳಿ ಇಳಿಯಬೇಕು. ಆ ಸ್ಟಾಪಿನ ಹೆಸರೇ ‘‘ಜೋಡಾಲದ ಮರದ ಸ್ಟಾಪು’’ ಅಂತ. ಅಲ್ಲಿ ಇಳಿದು ಎಡಕ್ಕೆ ಸೀಳಿದ್ದ ಮಣ್ಣುಹಾದಿಯಲ್ಲಿ ಒಂದು ಕಿಲೋಮೀಟರ್‌ ನಡೆಯಬೇಕು. ಆ ನಡಿಗೆಯಿಂದ ಪಾರಾಗಲೆಂದೇ ಬಸ್‌ಸ್ಟಾಪ್‌ನಲ್ಲಿ ಬೈಕ್‌ನೊಡನೆ ಕಾದಿರುವಂತೆ ಮಧುಗೆ ಸೂಚನೆ ಕೊಟ್ಟದ್ದು.

ಬಸ್ಸಂತೂ ಭರ್ಜರಿ ರಾಜಹಂಸ. ಸೀಟನ್ನು ಹಿಂದಕ್ಕೆ ವಾಲಿಸಿ ಆರಾಮವಾಗಿ ಒರಗಿ ಕಣ್ಣುಮುಚ್ಚಿದೆ. ಬೆಳಿಗ್ಗೆ ಇದ್ದಕ್ಕಿದ್ದಂತೆ ನನ್ನನ್ನು ನೋಡಿದೊಡನೆ ಮಾಧವಿಯ ಮುಖದಲ್ಲಿ ಮೂಡಬಹುದಾದ ಅಚ್ಚರಿ, ನಂತರದ ಸಂಭ್ರಮ ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾ ನಿದ್ದೆಹೋದೆ.

ಡ್ರೈವರ್‌ ಮಹಾಶಯ ಅದೆಂಥಾ ಪ್ರಚಂಡನೋ ನಾಲ್ಕೂವರೆಗೇ ನನ್ನನ್ನು ಜೋಡಾಲದ ಮರದ ಸ್ಟಾಪಿನಲ್ಲಿ ಒಗೆದು ಓಡಿಬಿಟ್ಟ. ಅಲ್ಲಿ ಇಳಿದವನು ನಾನೊಬ್ಬನೇ. ಜತೆಯಲ್ಲಿ ಒಂದು ನರಪಿಳ್ಳೆಯೂ ಇಲ್ಲ. ಕರೆಂಟ್‌ ಬೇರೆ ಇರಲಿಲ್ಲವೇನೋ. ಬಲಕ್ಕೆ ಐವತ್ತು ಮಾರು ದೂರದಲ್ಲಿದ್ದ ದೊಡ್ಡ ಹಳ್ಳಿ ಕತ್ತಲಲ್ಲಿ ಮುಳುಗಿತ್ತು. ಮಾಧವಿಯ ಊರಿನಲ್ಲೂ ಅದೇ ಗತಿ ಎಂದು ಕಾಣುತ್ತದೆ. ಅತ್ತ ಕಡೆಯ ಯಾವ ದೀಪಗಳೂ ಕಣ್ಣಿಗೆ ಬೀಳಲಿಲ್ಲ. ಬಹಳ ಬೇಗನೆ ನಾನಿಲ್ಲಿಗೆ ಬಂದಿದ್ದರಿಂದ ಮಧು ಸಹಾ ಇನ್ನೂ ಬಂದಿರಲಿಲ್ಲ. ಅವನಿಗೆ ಕರೆ ನೀಡಲೆಂದು ಮೊಬೈಲ್‌ ಕೈಗೆ ತೆಗೆದುಕೊಳ್ಳುತ್ತಿದ್ದಂತೇ ಫಕ್ಕನೆ ನೆನಪಾಯಿತು- ಇಂದು ಏಪ್ರಿಲ್‌ ಒಂದು! ಮೂರ್ಖರ ದಿನ! ಅದು ನೆನಪಾಗುತ್ತಲೇ ಆಲೋಚನೆಯೊಂದು ಮಿಂಚಿನಂತೆ ಸುಳಿಯಿತು. ಅನಿರೀಕ್ಷಿತವಾಗಿ ಕಾಣಿಸಿಕೊಂಡು ಅಚ್ಚರಿ ಉಂಟುಮಾಡುವುದರ ಜತೆಗೇ ಮಾಧವಿಗೆ ಏಪ್ರಿಲ್‌ ಫೂಲ್‌ ಮಾಡಿದರೆ ಹೇಗೆ?

ಒಳ್ಳೆಯ ಯೋಚನೆ!

ಆದರೆ ಹೇಗೆ?

ತಲೆ ಕೆರೆದುಕೊಂಡೆ. ಬಂದ ಒಂದೆರಡು ಯೋಜನೆಗಳು ತೀರಾ ಹಳಸಲು, ಬಾಲಿಶ ಎನಿಸಿದವು. ‘ಥತ್‌ ಏನೂ ಹೊಳೀತಾನೇ ಇಲ್ವಲ್ಲಾ’ ಎಂದುಕೊಂಡು ತಲೆ ಒದರಿಕೊಳ್ಳುತ್ತಿದ್ದಂತೇ ತಲೆಯ ಮೇಲೇ ‘‘ಫಟ್‌ ಫಟ್‌’’ ಎಂಬ ಶಬ್ಧ ಕೇಳಿ ಬೆಚ್ಚಿದೆ. ಗಕ್ಕನೆ ತಲೆಯೆತ್ತಿ ನೋಡಿದಾಗ ಕಂಡದ್ದು ಪಟಪಟ ರೆಕ್ಕೆಬಡಿಯುತ್ತಾ ಹಾರಿಹೋಗುತ್ತಿದ್ದ ಯಾವುದೋ ಇರುಳ್ವಕ್ಕಿಯೊಂದರ ಮಾಸಲು ಆಕಾರ. ಅದನ್ನೇ ಅನುಸರಿಸಿ ಪಶ್ಚಿಮ ದಿಗಂತದತ್ತ ಸರಿದ ದೃಷ್ಟಿಗೆ ಸಿಕ್ಕಿದ್ದು ಕಡುಗಪ್ಪು ಮೋಡದ ಹಿಂದೆ ಸರಿಯುತ್ತಿದ್ದ ಅರ್ಧಚಂದ್ರ. ಮರುಕ್ಷಣ ಎಲ್ಲೆಡೆ ಮುಸುಕಿದ ಕಾರ್ಗತ್ತಲು.

ಕಗ್ಗತ್ತಲ ರಾತ್ರಿ, ಒಂದು ನರಪಿಳ್ಳೆಯೂ ಇಲ್ಲದ ನಿರ್ಜನ ಪ್ರದೇಶ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋಗುತ್ತಿರುವ ನಿಶಾಚರಿ. ತಡೆದು ತಡೆದು ಕೇಳಿಬರುತ್ತಿರುವ ಜೀರುಂಡೆಯೊಂದರ ನಾದದ ಹೊರತಾಗಿ ಇಡೀ ಪ್ರದೇಶ ನೀರವ… ನನ್ನ ಮಾಧವಿ ಹೇಳುವಂತೆ ಇದು ದೆವ್ವಗಳ ಸಂಚಾರಕ್ಕೆ ಹೇಳಿಮಾಡಿಸಿದಂಥ ಸಮಯ!

‘ದೆವ್ವ’ ಎಂಬ ಪದ ಮನದಲ್ಲಿ ಮೂಡಿದಂತೇ ತಂತ್ರವೊಂದು ಮಿಂಚಿನಂತೆ ಹೊಳೆಯಿತು. ಮಾಧವಿಯನ್ನು ಮೂರ್ಖಳನ್ನಾಗಿಸಲು ದೆವ್ವದ ಕಥೆಯೊಂದನ್ನೇಕೆ ಸೃಷ್ಟಿಸಬಾರದು?

ಎರಡು ಕ್ಷಣದಲ್ಲಿ ಇಡೀ ಪ್ಲಾನ್‌ ತಯಾರಾಯಿತು. ಅದು ಯಶಸ್ವಿಯಾಗಬೇಕಾದರೆ ಮಧುವಿನ ಸಹಕಾರ ಅಗತ್ಯ. ಅದ್ಭುತ ಯೋಜನೆಯೊಂದನ್ನು ರೂಪಿಸಲು ನೆರವಾದ ಹಾರಿಹೋದ ಹಕ್ಕಿ, ಮರೆಯಾಗಿ ಹೋದ ಚಂದ್ರ- ಎರಡಕ್ಕೂ ಮನಸ್ಸಿನಲ್ಲೇ ಕೃತಜ್ಞತೆ ಹೇಳುತ್ತಾ ಮಧುವಿನ ಮೊಬೈಲ್‌ನ ಅಂಕೆಗಳನ್ನೊತ್ತಿದೆ. ನಿಮಿಷದ ನಂತರ ಅತ್ತಲಿಂದ ಅವನ ನಿದ್ದೆ ತುಂಬಿದ ದನಿ ಕೇಳಿಬಂತು. ‘‘ಎಲ್ಲಿಂದ ಮಾತಾಡ್ತಿದೀರಿ ಭಾವಾಜೀ’’ ಎಂದು ಅರಚಿದ.

‘‘ಮೆಲ್ಲಗೆ ಮಾತಾಡೋ ಮಾರಾಯಾ.’’ ಗೋಗರೆದೆ. ‘‘ನೋಡಪ್ಪಾ ಈವತ್ತು ಏಪ್ರಿಲ್‌ ಒಂದು. ನಿಮ್ಮಕ್ಕನ್ನ ಫೂಲ್‌ ಮಾಡಿದ್ರೆ ಹೇಗೆ?’’ ಪ್ರಶ್ನಿಸಿದೆ.

ಅವನ ನಿದ್ದೆ ಹಾರಿಹೋದಂತೆ ಕಂಡಿತು. ಆತುರಾತುರವಾಗಿ ದನಿ ಹೊರಡಿಸಿದ. ‘‘ಹ್ಞೂ ಒಳ್ಳೇ ಯೋಚ್ನೆ. ಹೇಗೆ ಮಾಡೋದು?’’

‘‘ನಾನೊಂದು ಪ್ಲಾನ್‌ ಮಾಡಿದ್ದೀನಿ. ನೀನು ಯಾವ್ದಾದ್ರೂ ನೆಪ ಹೇಳಿ ಮಾಧವಿಯನ್ನ ಎಬ್ಬಿಸಿ ಅಂಗಳಕ್ಕೆ ಕರೆತಂದು ಕೂರಿಸಿ ಅದೂ ಇದೂ ಮಾತಾಡ್ತಾ ಇರು. ನಾನು ಇನ್ನು ಹತ್ತು ನಿಮಿಷದಲ್ಲಿ ಅಲ್ಲಿಗೆ ಬರ್ತೀನಿ. ಬರೋನು ಸುಮ್ನೆ ಬರೋದಿಲ್ಲ. ದೆವ್ವವನ್ನ ನೋಡಿದೋನ ಹಾಗೆ, ಅದರ ಕಾಟಕ್ಕೆ ಸಿಕ್ಕಿದೋನ ಹಾಗೆ ಏದುಸಿರು ಬಿಡ್ತಾ ಓಡಿ ಬರ್ತೀನಿ. ಹೆದರಿ ಹಿಪ್ಪೇಕಾಯಿ ಆಗಿರೋನ ಥರಾ ನಡುಗ್ತಾ ‘ದೆವ್ವ ದೆವ್ವಾ’ ಅಂತ ತೊದಲ್ತೀನಿ. ನಾನು ನಿಜವಾಗ್ಯೂ ದೆವ್ವಾನ ನೋಡಿದ್ದೀನಿ ಅಂತ ಮಾಧವಿ ತಿಳೀತಾಳೆ. ‘ನೋಡಿದ್ರಾ ಈಗ್ಲಾದ್ರೂ ದೆವ್ವ ಇದೆ ಅಂತ ಗೊತ್ತಾಯ್ತಲ್ಲಾ’ ಅಂತ ನನ್ನನ್ನ ಅಣಕಿಸ್ತಾಳೆ. ಆಗ ನಾನು ‘ಏಪ್ರಿಲ್‌ ಫೂಲ್‌ ಏಪ್ರಿಲ್‌ ಫೂಲ್‌’ ಅಂತ ಕೂಗಿ ನಕ್ಕುಬಿಡ್ತೀನಿ. ನನ್ನ ಜತೆ ನೀನೂ ದನಿ ಸೇರ್ಸು. ಅವಳು ಫೂಲ್‌ ಆಗಿಹೋಗ್ತಾಳೆ. ಹೇಗಿದೆ ಐಡಿಯಾ?’’ ನನ್ನ ದನಿಯಲ್ಲಿ ಹೆಮ್ಮೆಯಿತ್ತು.

‘‘ಯೆಸ್‌ ಭಾವಾಜೀ, ಭರ್ಜರಿ ಐಡಿಯಾ!’’ ಮಧು ಮೆಚ್ಚುಗೆ ತೋರಿದ. ’’ಅಕ್ಕನ್ನ ಎಬ್ಬಿಸ್ಕೊಂಡು ಅಂಗಳದಲ್ಲಿ ಕಾಯ್ತಾ ಇರ್ತೀನಿ.’’ ಆಶ್ವಾಸನೆ ಇತ್ತ.

ಚಂದ್ರ ಒಮ್ಮೆ ಮೋಡದ ಹಿಂದಿನಿಂದ ಹೊರ ಇಣುಕಿ ಮತ್ತೆ ಮರೆಯಾಗಿಹೋದ. ನಾನು ನಡೆಯತೊಡಗಿದೆ. ಮದುವೆಗೆ ಮೊದಲು ಒಂದೆರಡು ಸಲ ಇಲ್ಲಿ ಹಗಲಿನಲ್ಲಿ ನಡೆದಿದ್ದೆ. ಮದುವೆಯಾದ ಮೇಲೆ ನಡೆಯುವ ಪ್ರಸಂಗವೇ ಒದಗಿರಲಿಲ್ಲ. ಮಧು ಹಾಗೂ ಅವನ ಬೈಕ್‌ ನನ್ನ ಸೇವೆಗೆ ಸದಾ ಸಿದ್ಧವಾಗಿರುತ್ತಿದ್ದವು. ರಸ್ತೆ ನನಗೆ ಸಾಕಷ್ಟು ಪರಿಚಯವಾಗಿಹೋಗಿತ್ತು. ಆದರೂ ಈ ಕಾಳರಾತ್ರಿಯಲ್ಲಿ ಒಂಟಿಯಾಗಿ ನಡೆಯುವಾಗ ಎದೆ ತುಸು ಅಳುಕಿತು. ಬ್ಯಾಗಿನಿಂದ ಟಾರ್ಚ್‌ ಹೊರತೆಗೆದು ಅತ್ತಿತ್ತ ಬೆಳಕು ಹಾಯಿಸುತ್ತಾ ನಡೆಯತೊಡಗಿದೆ.

ರಸ್ತೆಯ ಬಲಕ್ಕೆ ಐದಡಿ ಅಗಲದ ಒಣ ಕಾಲುವೆ. ಅದರಾಚೆ ಬಟಾಬಯಲು. ಅವೆಲ್ಲಾ ಕೊಯ್ಲು ಮುಗಿದಿದ್ದ ಭತ್ತದ ಗದ್ದೆಗಳು. ಎಡಕ್ಕೆ ಏರಿಹೋಗಿದ್ದ ಗುಡ್ಡ ಕರೀ ಕಂಬಳಿ ಹೊದ್ದ ದೈತ್ಯನಂತೆ ಕಾಣುತ್ತಿತ್ತು. ಗುಡ್ಡದ ಆ ಬದಿಯಲ್ಲಿ ಒಂದು ವಿಶಾಲ ಕೆರೆ ಇದೆ ಎಂದು ನನಗೆ ಗೊತ್ತಿತ್ತು. ಗುಡ್ಡವನ್ನು ದಾಟಿ ಮುಂದುವರೆದರೆ ಎಡಕ್ಕೆ ಸ್ಮಶಾನ, ಅದರಾಚೆ ಮಾವಿನ ತೋಪು. ಅದರ ಆಚೆ ಬದಿಯಲ್ಲಿ ಏನಿದೆಯೆಂದು ನನಗೆ ಗೊತ್ತಿಲ್ಲ. ಮಾವಿನ ತೋಪು ದಾಟಿದ ಮೇಲೆ ರಸ್ತೆ ಬಲಕ್ಕೆ ಹೊರಳಿಕೊಳ್ಳುತ್ತಿತ್ತು. ಆ ರಸ್ತೆ ಹಳ್ಳಿಗೆ ಹೋಗುತ್ತದೆ. ಆದರೆ ಅದನ್ನು ಬಿಟ್ಟು ನೇರಕ್ಕಿದ್ದ ಪುಟ್ಟ ಹಾದಿಯಲ್ಲಿ ಎರಡು ನಿಮಿಷ ನಡೆದರೆ ನಮ್ಮ ಮಾವನವರ ತೋಟದ ಮನೆ ಸಿಗುತ್ತದೆ. ನಮ್ಮ ಮದುವೆಗೆ ಒಂದು ತಿಂಗಳ ಹಿಂದೆ ಹೊಸದಾಗಿ ಕಟ್ಟಿಸಿದ ವಿಶಾಲ ಭವನ ಅದು.

ನಡೆಯುತ್ತಾ ಹೋದಂತೆ ಎದೆಯಲ್ಲಿ ಮೂಡಿದ್ದ ಭಯ ಕರಗಿ ಮನಸ್ಸು ಮಾಧವಿಯತ್ತ ತಿರುಗಿತು. ನನ್ನನ್ನು ನೋಡಿದೊಡನೇ ಅವಳಿಗಾಗುವ ಅಚ್ಚರಿ, ನನ್ನ ದೆವ್ವದ ಕಥೆಗೆ ಅವಳ ಪ್ರತಿಕ್ರಿಯೆ, ನಂತರದ ಫೂಲ್‌ ಆದಾಗಿನ ಅವಳ ಮುಖಭಾವ- ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾಹೋದಂತೇ ತುಟಿಯಂಚಿನಲ್ಲಿ ನಸುನಗೆ ಮೂಡಿತು. ಅವಳನ್ನು ನಂಬಿಸಲು ಹೇಗೆ ನಟಿಸಿದರೆ ಚೆನ್ನ, ಯಾವ ಡೈಲಾಗ್‌ ಹೊಡೆದರೆ ಅವಳು ಹಳ್ಳಕ್ಕೆ ಬೀಳುತ್ತಾಳೆ ಎಂದು ಲೆಕ್ಕ ಹಾಕುತ್ತಾ ಹೆಜ್ಜೆ ಸರಿಸಿದೆ.

ಗುಡ್ಡ ದಾಟಿ ಸ್ಮಶಾನ ಸಮೀಪಿಸಿದೆ. ಎತ್ತರದ ಮುಂಡುಗಳ್ಳಿ ಬೇಲಿಯಾಚೆ ನನಗೇನೂ ಯಾವ ಸಮಾಧಿಯೂ ಕಾಣುವಂತಿರಲಿಲ್ಲ. ಆದರೂ ಅಲ್ಲಿ ಸತ್ತವರನ್ನು ಸುಟ್ಟ, ಹೂಳಿದ ಸಮಾಧಿಗಳಿವೆ; ಅದರ ಪಕ್ಕ ನಾನು ಒಂಟಿಯಾಗಿ ನಡೆಯುತ್ತಿದ್ದೇನೆ ಎಂಬ ಅರಿವು ನನ್ನೆದೆಯಲ್ಲಿ ತುಸು ಅಳುಕನ್ನುಂಟುಮಾಡಿತು.

ಸ್ಮಶಾನ ದಾಟುತ್ತಿದ್ದಂತೇ ಮುಂದೆ ತುಸು ದೂರದಲ್ಲಿ ದಾರಿ ಅಸಹಜವಾಗಿದ್ದಂತೆ ಗೋಚರಿಸಿತು. ನಿಂತು ಟಾರ್ಚ್‌ನ ಬೆಳಕನ್ನು ಅತ್ತ ಹಾಯಿಸಿದೆ. ಆಗ ಕಂಡದ್ದು ರಸ್ತೆಗೆ ಅಡ್ಡವಾಗಿ ಸುರಿದಿದ್ದ ಕೆಂಪುಮಣ್ಣಿನ ರಾಶಿ. ಹತ್ತಿರ ಹೋಗಿ ನೋಡಿದಾಗ ಅಲ್ಲೇನು ನಡೆಯುತ್ತಿದೆ ಎಂದು ಅರ್ಥವಾಯಿತು.

ರಸ್ತೆಗೆ ಅಡ್ಡವಾಗಿ ಐದಡಿ ಅಗಲದ ಕಾಲುವೆಯೊಂದನ್ನು ತೋಡಿದ್ದರು. ಕಟ್ಟಬೇಕಾಗಿರುವ ಕಲ್ವರ್ಟ್‌ಗೆಂದು ಕಲ್ಲುಗಳನ್ನೂ, ಮರಳನ್ನೂ ರಾಶಿ ಹಾಕಿದ್ದರು. ಅಲ್ಲೇ ನಿಂತು ಅದನ್ನು ದಾಟಲು ದಾರಿ ಯಾವುದು ಎಂದು ಎಡಬಲ ಟಾರ್ಚ್‌ ಬೆಳಕು ಹರಿದಾಡಿಸಿದೆ. ಎಡಕ್ಕೆ ಸ್ಮಶಾನದ ಬೇಲಿಯನ್ನು ಕತ್ತರಿಸಿದ್ದುದು ಕಂಡುಬಂತು. ಅದರ ಮೂಲಕ ಸ್ಮಶಾನದ ಒಳಗೆ ಹಾದು ನಂತರ ಮತ್ತೆ ಮಣ್ಣುಹಾದಿಗೆ ಇಳಿಯಬಹುದು ಎನಿಸಿತು. ಅತ್ತ ಹೆಜ್ಜೆ ಇಟ್ಟೆ.

ಸ್ಮಶಾನದೊಳಗೆ ಹಾದು ಮತ್ತೆ ರಸ್ತೆಗೆ ಇಳಿಯಬೇಕೆಂದು ನೋಡಿದರೆ ಅಲ್ಲಿ ಕತ್ತರಿಸಿದ ಮುಂಡುಗಳ್ಳಿಗಳ ರಾಶಿ ಅಡ್ಡವಾಗಿತ್ತು. ಮತ್ತೂ ಎಡಕ್ಕೆ ಹಾದುಹೋಗಿದ್ದ ಕಾಲುಹಾದಿಯನ್ನೇ ಅರೆಕ್ಷಣ ದಿಟ್ಟಿಸಿದೆ. ಇದರಲ್ಲಿ ನಡೆದರೆ ಸ್ವಲ್ಪ ದೂರದ ನಂತರ ಮತ್ತೆ ಮಣ್ಣುಹಾದಿ ಸೇರಬಹುದೇ ಅಥವಾ ಈ ಕಾಲುದಾರಿ ನನ್ನನ್ನು ಬೇರೆತ್ತಲೋ ಕರೆದೊಯ್ಯುತ್ತದೆಯೇ? ಪ್ರಶ್ನೆ ಮೂಡಿತು. ಹಾಗೇ ನಿಂತೆ.

ಬೆನ್ನ ಹಿಂದೆ ಯಾರೋ ಕೆಮ್ಮಿದಂತಾಯಿತು!

ಬೆಚ್ಚಿ ಗಕ್ಕನೆ ಹಿಂದೆ ತಿರುಗಿದೆ. ಕರ್ರಗಿನ ಆಕೃತಿಯೊಂದು ನನ್ನತ್ತ ಬರುತ್ತಿತ್ತು! ಅದೇನು ಕರಿಯ ಕಂಬಳಿ ಹೊದ್ದ ಮನುಷ್ಯನೋ ಅಥವಾ…?

ನನ್ನ ಪ್ರಶ್ನೆಗೆ ಮಂಗಳ ಹಾಡುವಂತೆ ಆ ಆಕೃತಿಯಿಂದ ಗೊರಗು ದನಿ ಬಂತು. ‘‘ಹಾಗೇ ಮುಂದಕ್ಕೆ ನಡೀರಿ. ಊರು ಸಿಕ್ತೈತೆ.’’

ಓಹೋ ಇದು ನನ್ನ ಹಾಗೇ ನರಮನುಷ್ಯನೇ! ನೆಮ್ಮದಿಯೆನಿಸಿತು.

‘‘ನೀವೂ ಮಲ್ಲಿಗೆಹಳ್ಳಿಗೆ ಹೋಗ್ತಿದೀರಾ?’’ ಕೇಳಿದೆ.

ಉತ್ತರವಾಗಿ ಬಂದದ್ದು ಕೆಮ್ಮು. ಅದರ ನಡುವೆ ಏನೋ ಗೊಣಗಾಟ. ಅದು ‘‘ಹ್ಞೂಂ’’ ಎಂದೋ ಅಥವಾ ‘‘ಉಹ್ಞುಂ’’ ಎಂದೋ ಗೊತ್ತಾಗಲಿಲ್ಲ. ಮತ್ತೊಮ್ಮೆ ಕೇಳಿದೆ. ಈಗ ಕೆಮ್ಮಿನ ನಡುವೆ ಪದಗಳು ಹೊರಬಂದವು. ‘‘ಹ್ಞೂಂ ಅತ್ಲಾಗೇ ಬತ್ತಾ ಇವ್ನಿ.’’

ಸಮಾಧಾನವೆನಿಸಿತು. ದಾರಿ ತೋರಲು ಒಂದು ನರಪ್ರಾಣಿ ಜತೆಗಿದ್ದರೆ ಗುರಿ ಹತ್ತಿರ, ಬದುಕು ಸರಾಗ.

ಮುಂದೆ ನಡೆದೆ. ಕುರುಚಲು ಗಿಡಗಂಟೆಗಳ ನಡುವೆ ಏರಿಳಿಯುತ್ತಾ ದಾರಿ ಸಾಗಿತ್ತು. ನೆಲವನ್ನೇ ನೋಡುತ್ತಾ ಎಚ್ಚರಿಕೆಯಿಂದ ಹೆಜ್ಜೆ ಹಾಕಿದೆ. ಐದಾರು ನಿಮಿಷ ನಡೆದಿರಬೇಕು. ಕಲ್ಲೊಂದನ್ನೆಡವಿ ಮುಗ್ಗರಿಸಿದೆ. ಜೇಬಿನಿಂದ ಏನೋ ಹೊರಚಿಮ್ಮಿದಂತೆನಿಸಿತು. ಸಾವರಿಸಿಕೊಂಡು ನಿಂತು ಜೇಬಿಗೆ ಕೈ ಹಾಕಿದೆ. ಸೆಲ್‌ ಫೋನ್‌ ಮಾಯವಾಗಿತ್ತು! ಅದೆತ್ತ ಎಗರಿ ಬಿತ್ತೋ ತಿಳಿಯಲಿಲ್ಲ. ಆತುರಾತುರವಾಗಿ ಅತ್ತಿತ್ತ ಟಾರ್ಚ್‌ ಬೆಳಕು ಹಾಯಿಸಿದೆ. ಒಂದಕ್ಕೊಂದು ಹೆಣೆದುಕೊಂಡಿದ್ದ ಮುಳ್ಳುಕಂಟಿ, ಕಾಡುಗಿಡಗಳಲ್ಲಿ ನನ್ನ ಸೆಲ್‌ ಫೋನ್‌ ಕಾಣುವಂತಿರಲಿಲ್ಲ. ‘‘ಇವರೇ… ಇವರೇ… ಸ್ವಲ್ಪ ಇಲ್ಲಿ ಬನ್ನಿ.’’ ಹಿಂತಿರುಗದೇ ಪೊದೆಗಳ ಮೇಲೆ ಕಣ್ಣಿಟ್ಟೇ ಕರೆದೆ.

ಹಿಂದಿನಿಂದ ಉತ್ತರ ಬರಲಿಲ್ಲ!

ಅಚ್ಚರಿಯಾಯಿತು. ಹುಡುಕಾಟ ನಿಲ್ಲಿಸಿ ಹಿಂದೆ ತಿರುಗಿದೆ.

ನನ್ನ ಹಿಂದೆ ಯಾರೂ ಇರಲಿಲ್ಲ!

ಅರೆ! ಕರೀ ಕಂಬಳಿ ಹೊದ್ದ ಮನುಷ್ಯ ಇದೆಲ್ಲಿ ಮಾಯವಾಗಿಹೋದ?

ಅತ್ತಿತ್ತ ಟಾರ್ಚ್‌ ಬೆಳಕು ಹರಿದಾಡಿಸಿದೆ. ಉಹ್ಞುಂ ಅವನು ಕಣ್ಣಿಗೆ ಬೀಳಲಿಲ್ಲ. ಅದ್ಯಾವ ಮಾಯದಲ್ಲೋ ಈ ಕತ್ತಲಿನಲ್ಲಿ ಬಂದಂತೇ ಕರಗಿಹೋಗಿದ್ದ.

ಏರಿ ಇಳಿಯುತ್ತಿದ್ದ ಕಿರಿದಾದ ಅಪರಿಚಿತ ಕಾಲುಹಾದಿ, ಎಡಬಲದಲ್ಲಿ ಕುರುಚಲು ಗಿಡಗಂಟೆಗಳು. ಎಲ್ಲವೂ ನಿಶ್ಚಲ, ನೀರವ. ಕತ್ತಲ ರಾತ್ರಿ. ನನ್ನನ್ನು ಈ ದಾರಿಯಲ್ಲಿ ನಡೆಸಿದ ಮನುಷ್ಯ ಏಕಾಏಕಿ ನಾಪತ್ತೆ!

ನಾನು ಸ್ಥಂಭಿತನಾಗಿ ನಿಂತೆ.

ಹಾಗೊಮ್ಮೆ ಗಾಳಿ ಬೀಸಿತು. ಅದರ ಹಿಂದೆಯೇ ಸಾವಿರಾರು ಎಲೆಗಳ ಸಾಮೂಹಿಕ ಪಟಪಟ ಶಬ್ಧ ಎಡದಿಂದ ಕೇಳಿಬಂತು. ಅತ್ತ ತಿರುಗಿದೆ. ದೈತ್ಯಾಕಾರದ ವೃಕ್ಷವೊಂದು ಕತ್ತಲಿನಲ್ಲಿ ಭಯ ಹುಟ್ಟಿಸುವಂತೆ ನಿಂತಿತ್ತು. ಅದು ಅರಳೀಮರವೇ ಇರಬೇಕು. ನಸುಗಾಳಿ ಬೀಸಿದಾಗ ಹಾಗೆ ಪಟಗುಟ್ಟುವುಧು ಅರಳೀ ಎಲೆಗಳು ಮಾತ್ರ.

ಎಲೆಗಳ ಪಟಗುಟ್ಟುವಿಕೆ ನಿಲ್ಲುತ್ತಿದ್ದಂತೇ ಮಲ್ಲಿಗೆ ಹೂವಿನ ಗಾಢ ಪರಿಮಳ ತೇಲಿಬಂತು! ಹಿಂದೆಯೇ ಗೆಜ್ಜೆಯ ‘‘ರಿkುಲ್‌ ರಿkುಲ್‌’’ ಶಬ್ಧ! ಜತೆಗೆ ಹೆಣ್ಣಿನ ಕುಲುಕುಲು ನಗೆ!

ಬೆಚ್ಚಿ ಎದಬಲ ತಿರುಗಿದೆ. ಯಾರೂ ಕಣ್ಣಿಗೆ ಬೀಳಲಿಲ್ಲ!

ಮಲ್ಲಿಗೆಯ ಪರಿಮಳ ಏಕಾಏಕಿ ಮಾಯ. ಗೆಜ್ಜೆ ಶಬ್ಧ, ಕುಲುಕುಲು ನಗೆ ಎರಡೂ ಥಟ್ಟನೆ ನಿಂತುಹೋದವು. ಮತ್ತೆ ಎಲ್ಲೆಡೆ ನಿಶ್ಶಬ್ಧ.

ಇದೇನು ಭ್ರಮೆಯೇ? ಏನೊಂದೂ ಅರ್ಥವಾಗದೇ ಬೆಪ್ಪನಂತೆ ಅತ್ತಿತ್ತ ನೋಟ ಹೊರಳಿಸಿದೆ. ಅರಳೀಮರದ ಪಕ್ಕದಲ್ಲಿ ಅದಕ್ಕಿಂತಲೂ ಕಪ್ಪಾಗಿ ನಿಂತಿದ್ದ ಮತ್ತೊಂದು ಮರದ ಕೆಳಗೆ ಮಿಣುಕು ಬೆಳಕು ಕಂಡಿತು.

ಅಲ್ಲಿ ಯಾರೋ ಇದ್ದಾರೆ! ಅವರಿಂದ ನನಗೆ ಸರಿಯಾದ ದಾರಿ ತಿಳಿಯಬಹುದು. ಅತ್ತ ನಡೆದೆ. ಬೆಳಕನ್ನು ಸಮೀಪಿಸಿದಂತೆ ಅದೊಂದು ಹಣತೆ ಎಂದು ಗುರುತು ಹತ್ತಿತು. ಆದರೆ ಅಕ್ಕಪಕ್ಕದಲ್ಲಿ ಯಾರೂ ಇಲ್ಲ! ಇದೇನು ಸೋಜಿಗ?

ವಲ್ಪ ದೂರದಲ್ಲಿ ನಿಂತು ‘‘ಯಾರಾದರೂ ಇದ್ದೀರಾ?’’ ಎಂದು ಕೂಗಿದೆ. ನನ್ನ ದನಿ ಪಾತಾಳದಿಂದ ಬಂದಂತೆನಿಸಿತು. ಮತ್ತೊಮ್ಮೆ ಕೂಗಿದೆ. ಉಹ್ಞುಂ ಯಾರ ಪ್ರತಿಕ್ರಿಯೆಯೂ ಇಲ್ಲ.

ಏನೋ ಸೆಳೆತಕ್ಕೊಳಗಾದವನಂತೆ ದೀಪದತ್ತ ಮತ್ತೆರಡು ಹೆಜ್ಜೆ ಇಟ್ಟೆ. ಹಣತೆ ನೆಲದ ಮೇಲಿರದೇ ಯಾವುದೋ ಪುಟ್ಟ ಬಿಳುಪು ವೇದಿಕೆಯ ಮೇಲಿದ್ದಂತೆ ಕಂಡಿತು. ಅದೇನೆಂದು ಕುತೂಹಲವಾಯಿತು. ಮತ್ತೆರಡು ಹೆಜ್ಜೆ ಮುಂದಿಟ್ಟೆ… ಬಿಟ್ಟಕಣ್ಣುಬಿಟ್ಟಂತೇ ನಿಂತುಬಿಟ್ಟೆ.

ಅಲ್ಲಿ ನಾನು ಕಂಡದ್ದು…! ಓಹ್‌ ದೇವರೇ…

ಹಣತೆಯನ್ನಿರಿಸಿದ್ದು ಒಂದು ಮಾನವತಲೆಯ ಮೇಲೆ!

ಅಗಲ ಕಪ್ಪು ಕಣ್ಣಗೂಡುಗಳು, ಮೂಗಿನ ಹಳ್ಳ, ವಿಕಾರ ಹಲ್ಲುಗಳು! ನಸುಗಾಳಿಯಲ್ಲಿ ಓಲಾಡುತ್ತಿದ್ದ ಹಣತೆಯ ಬೆಳಕು ಆ ವಿಕಾರ ತಲೆಯನ್ನು ಒಮ್ಮೆ ಅನಾವರಣಗೊಳಿಸಿದರೆ ಮತ್ತೊಮ್ಮೆ ಕತ್ತಲೆಗೆ ನೂಕಿ ಅಕರಾಳ ವಿಕರಾಳ ದೃಶ್ಯಗಳನ್ನು ಸೃಷ್ಟಿಸುತ್ತಿತ್ತು. ಯ ಮೇಲೆ ಆಡುತ್ತಿದ್ದ ನೆರಳುಬೆಳಕಿನ ಓಲಾಟ ಇಡೀ ದೃಶ್ಯವನ್ನು ಮತ್ತಷ್ಟು ಭೀಬತ್ಸವಾಗಿಸಿತು. ಅದೊಂದು ಭಯಾನಕ ನೋಟ.

ಇದನ್ನು ಇಲ್ಲಿ ಇಟ್ಟವರು ಯಾರು?

ಕತ್ತಲಲ್ಲಿ ಇದ್ದಕ್ಕಿದ್ದಂತೇ ಅವತರಿಸಿ, ಬಂದಂತೇ ಮಾಯವಾಗಿಹೋದ ಕರೀ ಆಕೃತಿ! ಈ ಸುಡುಗಾಡಿನಲ್ಲಿ ತೇಲಿಬಂದ ಮಲ್ಲಿಗೆಯ ಸುವಾಸನೆ! ಹೆಣ್ಣಿನ ಕಿಲಿಕಿಲಿ ನಗು! ತಲೆಯ ಮೇಲೆ ಉರಿಯುತ್ತಿರುವ ಹಣತೆ!

ಇದ್ಯಾವುದೂ ಸಹಜವಾಗಿರಲು ಸಾಧ್ಯವಿಲ್ಲ. ಇದೆಲ್ಲದರ ಹಿಂದೆ ಇರುವುದು…!

ದೆವ್ವದ ಕೈವಾಡವೇ?

ಅಂದರೆ ಭೂತಪ್ರೇತಗಳಿರುವುದು ನಿಜವೇ? ದೆವ್ವದ ಕಥೆ ಹೇಳಿ ಮಾಧವಿಯನ್ನು ಫೂಲ್‌ ಮಾಡಹೊರಟ ನಾನು ಈಗ ನಿಜವಾಗಿಯೂ ದೆವ್ವಗಳ ಕೈಗೆ ಸಿಕ್ಕಿಬಿದ್ದಿದ್ದೇನೆಯೇ? ಭೂತದ ಕತೆ ಪ್ರಕಟಿಸಿದ ಪತ್ರಿಕೆಗೆ ‘‘’’ ಎಂದು ಹೆಸರಿಡಿ ಎಂದ ನನ್ನ ಉದ್ಧಟತನಕ್ಕೆ ಬುದ್ಧಿ ಕಲಿಸಲೆಂದೇ ಈ ಸುಡುಗಾಡಿನ ದೆವ್ವಗಳು ಹಂಚಿಕೆ ಹಾಕಿವೆಯೇ? ‘‘ ಎಂದೆಯಲ್ಲಾ, ಈಗ ನೋಡು ತಲೆಯನ್ನು’’ ಎಂದು ಅಣಕಿಸುತ್ತಿವೆಯೇ?

ಹಾಗೆಯೇ ಇರಬೇಕು.

ದೇವರೇ ಈಗೇನು ಮಾಡುವುದು?

ಆಕಾಶಕ್ಕೆ ತಲೆಯೆತ್ತಿದೆ. ‘‘ಹ್ಞೂಮ್‌’’ ಎಂಬ ಹೂಂಕಾರ ಹತ್ತಿರದಲ್ಲೇ ಕೇಳಿಬಂತು. ಬೆಚ್ಚಿ ಮೇಲೆತ್ತಿದ ತಲೆಯನ್ನು ಕೆಳಗಿಳಿಸುವಷ್ಟರಲ್ಲಿ ಹಣತೆ ಫಕ್ಕನೆ ಆರಿಹೋಯಿತು. ಸುತ್ತಲೂ ಕವಿದ ಗಾಧಾಂಧಕಾರ… ಮರುಕ್ಷಣ ‘‘ಹಹಹಹಾ’’ ಎಂಬ ವಿಕಟ ಅಟ್ಟಹಾಸ ಬೆನ್ನಹಿಂದಿನಿಂದ ಕಿವಿಗಪ್ಪಳಿಸಿತು!

ನಾನು ಬೆಚ್ಚಿದೆ. ಅರೆಕ್ಷಣದಲ್ಲಿ ಜಳಜಳನೆ ಬೆವತುಹೋದೆ. ನರನಾಡಿಗಳಲ್ಲಿ ಅತೀವ ಭಯ ಹಿಮಜಲದಂತೆ ಪ್ರವಹಿಸಿತು. ಒಮ್ಮೆ ‘‘ಅಮ್ಮಾ’’ ಎಂದು ಚೀರಿ ಹೆಗಲಲ್ಲಿದ್ದ ಬ್ಯಾಗನ್ನು ಕೆಳಗೆ ಹಾಕಿ ಕತ್ತಲಲ್ಲಿ ಹುಚ್ಚನಂತೆ ಓಡಿದೆ. ಪೊದೆಗಳಿಗೆ ಕಾಲು ಹಾಕಿ ಬೀಳುವುದನ್ನೂ ಲೆಕ್ಕಿಸದೇ ಜಿಗಿಜಿಗಿದು ಓಡಿದೆ. ಒಂದು ಕ್ಷಣದಲ್ಲಿ ಕೆರೆಯ ಏರಿಯ ಮೇಲೆ ನಿಂತಿದ್ದೆ, ಏದುಸಿರುಬಿಡುತ್ತಾ.

ನನ್ನ ಬೆನ್ನ ಹಿಂದೆ ಕಪ್ಪನೆಯ ಮರಗಿಡಗಳು, ಅದರಾಚೆ ಸ್ಮಶಾನ. ಮುಂದೆ ದಾರಿಗಡ್ಡವಾಗಿ ವಿಶಾಲ ಕೆರೆ. ಮುಂದೆ ಹೋಗಲು ಸಾಧ್ಯವಿಲ್ಲ. ಕೋಟಿ ಕೊಟ್ಟರೂ ನಾನು ಮತ್ತೆ ಹಿಂದೆ ತಿರುಗಿ ಆ ಮರಗಳ ಗುಂಪಿನೊಳಗೆ ಹೋಗಲಾರೆ.

ಅಂದರೆ ಈಗೇನು ಮಾಡುವುದು? ಹಿಂದೆ ತಿರುಗಿ ನೋಡಲು ಭಯವಾಗಿ ನಡುಗುತ್ತಾ ಕೆರೆಯನ್ನೇ ದಿಟ್ಟಿಸಿದೆ.

ವಿಶಾಲ ಕೆರೆಯ ಮೇಲ್ಮೈ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿತ್ತು. ದಡದತ್ತ ತೇಲಿಬರುತ್ತಿದ್ದ ಪುಟ್ಟಪುಟ್ಟ ಅಲೆಗಳು, ಬಲಕ್ಕೆ ಪುಟ್ಟ ಕಾಲುವೆಯೊಂದರಲ್ಲಿ ಹರಿದುಹೋಗುತ್ತಿದ್ದ ನೀರಿನ ಜುಳುಜುಳು ನಿನಾದ, ನಿದ್ರಿಸುತ್ತಿರುವಂತೆ ನಿಶ್ಚಲವಾಗಿ ನಿಂತ ಗಿಡಮರಗಳು… ಮುಂದೆ ಕೆರೆಯಾಚೆ ಮೂಡಲಲ್ಲಿ ಮೂಡುತ್ತಿದ್ದ ಕೆಂಪು…

ಆಗೊಮ್ಮೆ ಲಘುವಾಗಿ ಗಾಳಿ ಬೀಸಿತು. ಅದರೊಡನೆ ತೇಲಿಬಂದ ಮಲ್ಲಿಗೆಯ ಸುವಾಸನೆ!

ನನ್ನೆದೆ ಮತ್ತೆ ಢವಢವ ಹೊಡೆದುಕೊಂಡಿತು. ಮರುಕ್ಷಣ ಬೆನ್ನ ಹಿಂದೆ ಗೆಜ್ಜೆಯ ‘‘ರಿkುಲ್‌ ರಿkುಲ್‌’’ ಸಪ್ಪಳ ಕೇಳಿಬಂತು!

ಗಕ್ಕನೆ ಹಿಂದೆ ತಿರುಗಿದೆ. ಮರಗಟ್ಟಿ ನಿಂತುಬಿಟ್ಟೆ.

ನನ್ನಿಂದ ಹತ್ತು ಗಜಗಳ ದೂರದಲ್ಲಿ ನಿಂತ ಬಿಳಿ ಸೀರೆಯ ಸ್ತ್ರೀ!

ಬಿಳುಪು ದುಂಡುಮುಖ, ಅಗಲ ಕಣ್ಣುಗಳು, ನಗು ಸೂಸುತ್ತಿದ್ದ ಬಾಯಿ, ಗಾಳಿಯಲ್ಲಿ ಅಲೆಯಂತೆ ತೇಲುತ್ತಿದ್ದ ನೀಳಕೇಶರಾಶಿ, ಅಚ್ಚಬಿಳಿಯ ಸೀರೆ ರವಿಕೆ…

ಮೈಗಾಡ್‌! ಇದು ಮೋಹಿನಿಯೇ?

ಅವಳತ್ತ ಭೀತ ನೋಟ ಹೂಡಿದೆ. ಅವಳು ಒಮ್ಮೆ ಕಿಲಕಿಲ ನಕ್ಕಳು. ನಗುತ್ತಾ ಎರಡು ಕೈಗಳನ್ನೂ ಅತ್ತಿತ್ತ ಆಡಿಸುತ್ತಾ ಮುಂದೆ ಅಡಿಯಿಟ್ಟಳು… ಒಂದೊಂದೇ ಹೆಜ್ಜೆಯಿಟ್ಟು ನನ್ನತ್ತ ಬರತೊಡಗಿದಳು!

ಇನ್ನು ನನ್ನ ಕಥೆ ಮುಗಿಯಿತು!

‘‘ಓಹ್‌ ಬೇಡ ಬೇಡಾ’’ ಚೀರಿದೆ. ಗಕ್ಕನೆ ಕೇಳಗೆ ಕೂತುಬಿಟ್ಟೆ. ಮರುಕ್ಷಣ ಎದ್ದುನಿಂತೆ. ಕಾಲುಗಳನ್ನು ನೆಲಕ್ಕೆ ‘‘ಧಪಧಪ’’ ಬಡಿದೆ. ’’ನನ್ನನ್ನ ಮುಟ್ಬೇಡಾ’’ ಹತಾಷೆಯಲ್ಲಿ ಅರಚಿದೆ. ಅವಳ ನಗೆ ದೊಡ್ಡದಾಯಿತು. ವೇಗವಾಗಿ ನನ್ನನ್ನು ಸಮೀಪಿಸಿದಳು…

ನಾನು ಹಿಂದೆ ಒಂದು ಹೆಜ್ಜೆ ಇಟ್ಟೆ. ಇನ್ನೊಂದು… ಮತ್ತೊಂದು… ನಾಲ್ಕನೆಯ ಹೆಜ್ಜೆಗೆ ನೆಲ ಸಿಗಲಿಲ್ಲ. ‘‘ಅಯ್ಯೋ’’ ಎಂದು ಚೀರುತ್ತಾ ಕೆರೆಯೊಳಗೆ ಬಿದ್ದೆ.

ಒಂದುಕ್ಷಣ ಕಣ್ಣಮುಂದೆ ಗಾಢಾಂಧಕಾರ. ಕಿವಿಯಲ್ಲಿ ಅಲೆಗಳ ಮೊರೆತ… ಗಾಬರಿಯಿಂದ ಹೊರಬಂದಂತೇ ಕೇವಲ ಮಂಡಿಯೆತ್ತರದ ನೀರಿನಲ್ಲಿ ನಾನು ಅರೆಮುಳುಗಿ ಬಿದ್ದಿರುವುದು ಅರಿವಿಗೆ ಬಂತು. ಕೈಕಾಲುಗಳಿಂದ ನೆಲವನ್ನು ತಡವುತ್ತಾ ಎದ್ದುನಿಂತೆ. ವೃದ್ಧಿಸುತ್ತಿದ್ದ ಪೂರ್ವದ ಕೆಂಪಿನಲ್ಲಿ ನನ್ನ ಮುಂದಿನ ದೃಶ್ಯ ಸ್ಪಷ್ಟವಾಗಿ ಕಂಡಿತು.

ನನ್ನಿಂದ ನಾಲ್ಕು ಅಡಿ ದೂರದಲ್ಲಿ ಮೋಹಿನಿ ಅದೇ ನಗುಮೊಗದಲ್ಲಿ ನಿಂತಿದ್ದಳು. ಅವಳ ಎಡಬಲದಲ್ಲಿ ನಿಂತಿರುವವರು…

ಅದು… ಅದು… ಮಧು ಮತ್ತು ಮಾಧವಿ!

ಇದೇನು ಕನಸೇ? ಕಣ್ಣಮುಂದಿನ ದೃಶ್ಯವನ್ನೇ ಬೆಪ್ಪನಂತೆ ನೋಡಿದೆ. ಹಾಗೇ ನೋಡುತ್ತಿದ್ದಂತೇ ಮೂವರ ಬಾಯಿಂದಲೂ ಏಕಕಾಲದಲ್ಲಿ ಉದ್ಗಾರ ಹೊರಟಿತು.

‘‘ಏಪ್ರಿಲ್‌ ಫೂಲ್‌! ಏಪ್ರಿಲ್‌ ಫೂಲ್‌!!’’

ನಾನು ದಂಗಾಗಿಹೋಗಿದ್ದೆ. ಇದೆಲ್ಲಾ ಇವರು ಹೂಡಿದ ನಾಟಕ! ದೆವ್ವ, ಮೋಹಿನಿ ಏನೂ ಇಲ್ಲ! ಎಲ್ಲವನ್ನೂ ನಿಜ ಎಂದು ನಂಬಿದ ನಾನು ಭರ್ಜರಿಯಾಗಿ ಫೂಲ್‌ ಆಗಿಹೋಗಿದ್ದೆ!

ಮಧು ಕೆರೆಗಿಳಿದು ನನ್ನ ಕೈ ಹಿಡಿದ. ಮತ್ತೊಂದು ಕೈಯನ್ನು ಮಾಧವಿ ಹಿಡಿದಳು. ಇಬ್ಬರೂ ನನ್ನನ್ನು ದಡ ಹತ್ತಿಸಿದರು. ನನ್ನ ಕಿವಿಗೆ ಹತ್ತಿರದಲ್ಲೇ ‘‘ಏಪ್ರಿಲ್‌ ಫೂಲ್‌’’ ಎಂದು ಒಟ್ಟಾಗಿ ಕೂಗಿದರು. ‘‘ಏನ್ರೀ ನನ್ನನ್ನ ಪೂಲ್‌ ಮಾಡೋದಿಕ್ಕೆ ಪ್ಲಾನ್‌ ಹಾಕಿದ್ರಿ. ಈಗ ಯಾರಪ್ಪಾ ಫೂಲ್‌ ಆದೋರು?’’ ಮಾಧವಿ ಅಣಕಿಸಿದಳು. ಮೋಹಿನಿ ಕಿಲಕಿಲ ನಕ್ಕಳು.

ಕೆರೆಯ ನೀರಿಗೆ ಬಿದ್ದು ಎದ್ದು ಛಳಿಯಲ್ಲಿ ನಡುಗುತ್ತಿದ್ದ ನನ್ನ ಬಾಯಿಂದ ಮಾತುಗಳು ಹೊರಡಲಿಲ್ಲ. ಬದಲಾಗಿ ಹಲ್ಲುಗಳು ಕಟಕಟ ಸದ್ದು ಮಾಡಿದವು.

‘‘ ಹೇಗಿತ್ತು ಭಾವಾಜೀ?’’ ಮಧು ಕೀಟಲೆಯ ದನಿ ತೆಗೆದ. ನನ್ನ ಪೆಚ್ಚುಮುಖವನ್ನು ನೋಡಿ ಮಾತು ಮುಂದುವರೆಸಿದ- ‘‘ಅದನ್ನ ನೋಡಿ ಹೆದರಿಬಿಟ್ರಾ? ಅದು ನಿಜವಾದ ತಲೆ ಅಲ್ಲ ಭಾವಾಜೀ. ನಮ್ಮ ಕಾಲೇಜಿನ ನಾಟಕಕ್ಕೆ ಅಂತ ನಾನು ಥರ್ಮೋಕೋಲ್‌ನಲ್ಲಿ ಮಾಡಿದ್ದು ಅದು.’’

ನಾನು ಕಣ್ಣು ಕಣ್ಣು ಬಿಟ್ಟೆ. ಅವನ ಮಾತು ಮುಂದುವರೆಯಿತು.

‘‘ಊರಿನ ದಾರಿ ಬಿಟ್ಟು ನಿಮ್ಮನ್ನ ಈ ದಾರಿಗೆ ಹತ್ತಿಸಿದ ಕರೀ ಕಂಬಳಿಯ ಮನುಷ್ಯ ನಾನೇ. ‘ಹಹಹಹಾ’ ಅಂತ ನಕ್ಕು ನಿಮ್ಮನ್ನ ಹೆದರಿಸಿದೋನೂ ನಾನೇ. ತಲೆ ಯ ಮೇಲೆ ದೀಪ ಹಚ್ಚಿದೋಳು ಅಕ್ಕ. ನೀವು ಆಕಾಶಕ್ಕೆ ತಲೆ ಎತ್ತಿದಾಗ ದೀಪಾನ್ನ ಆರಿಸಿಬಿಟ್ಟೋಳೂ ಅವಳೇ.’’

ಮಾಧವಿ ಕಿಸಕ್ಕನೆ ನಕ್ಕಳು.

‘‘ನಂಗೇ ಗೊತ್ತೇ ಆಗ್ಲಿಲ್ಲ.’’ ಕಷ್ಟಪಟ್ಟು ಈ ಮೂರು ಪದಗಳನ್ನು ಹೊರಡಿಸಿದೆ.

ಮಾಧವಿ ಮತ್ತೊಮ್ಮೆ ಬಾಯಿ ತೆರೆದು ನಕ್ಕಳು. ನಗುತ್ತಲೇ ಹೇಳಿದಳು- ‘‘ನಿಮಗೆ ಗೊತ್ತಿಲ್ಲದ್ದು ಇನ್ನೂ ಒಂದಿದೆ.’’ ನನ್ನ ಮಂಕುಮುಖವನ್ನು ನೋಡುತ್ತಾ ನಗೆಯೊಡನೆ ಸೇರಿಸಿದಳು- ‘‘ಮಧೂ ಜತೆ ಸೇರ್ಕೊಂಡು ನನ್ನನ್ನ ಫೂಲ್‌ ಮಾಡೋದಿಕ್ಕೆ ನೋಡಿದ್ರಿ. ಆದ್ರೆ ನಿಮಗೆ ತಿಳಿಯದೇ ಇರೋ ವಿಷಯ ಏನು ಅಂದ್ರೆ ಒಬ್ಬ ತಮ್ಮ ತನ್ನ ಅಕ್ಕನ ಜತೆ ಸೇರ್ಕೊಂಡು ಭಾವನ್ನ ಗೋಳಾಡಿಸ್ತಾನೆಯೇ ವಿನಃ ಭಾವನ ಜತೆ ಸೇರ್ಕೊಂಡು ತನ್ನ ಅಕ್ಕನ್ನ ಯಾವತ್ತೂ ಗೋಳಾಡಿಸೋದಿಲ್ಲ.’’ ಅವಳ ನಗೆ ದೊಡ್ಡದಾಯಿತು. ನಾನು ಕಣ್ಣುಕಣ್ಣು ಬಿಟ್ಟೆ.

‘‘ಅಂದಹಾಗೆ ಈ ಮೋಹಿನಿ ಯಾರು ಗೊತ್ತಾ ಭಾವಾಜೀ?’’ ಮಧು ಪ್ರಶ್ನಿಸಿದ. ನನ್ನ ಬೆಪ್ಪುನೋಟವನ್ನು ನೋಡಿ ಒಮ್ಮೆ ನಕ್ಕು ಮುಂದುವರೆಸಿದ- ‘‘ಇವಳು ನಮ್ಮ ಸೋದರಮಾವನ ಮಗಳು ನಾಗಶ್ರೀ. ಮೊನ್ನೆ ತಾನೇ ಭೋಪಾಲ್‌ನಿಂದ ಬಂದ್ಲು. ಬಿಳೀಸೀರೆ ಉಟ್ಕೊಂಡು, ಕಾಲಿಗೆ ಗೆಜ್ಜೆ ಕಟ್ಕೊಂಡು, ಕೂದಲಿಗೆ ಸಾಕಷ್ಟು ಪ್ಯಾರಾಶ್ಯೂಟ್‌ ಜಾಸ್ಮಿನ್‌ ಹೇರ್‌ ಆಯಿಲ್‌ ಹಚ್ಕೊಂಡು ಮಲ್ಲಿಗೆ ಪರಿಮಳ ಸೂಸ್ತಾ ನಿಮ್ಮನ್ನ ಬೆಪ್ಪು ಮಾಡಿ ಹಳ್ಳಕ್ಕೆ… ಅಲ್ಲಲ್ಲಾ ಕೆರೆಗೆ ಬೀಳಿಸಿದ್ಲು.’’

‘‘ಈ ಪ್ರಕರಣಾನ ನಾನು ಯಾವತ್ತೂ ಮರೆಯೋಕೆ ಆಗಲ್ಲಪ್ಪಾ. ಒಳ್ಳೇ ತಮಾಷೆ.’’ ನಾಗಶ್ರೀ ಮೈಕುಲುಕಿಸುತ್ತಾ ನಗತೊಡಗಿದಳು. ಅವಳ ನಗೆಗೆ ಮಧು ಹಾಗೂ ಮಾಧವಿಯ ನಗೆಯೂ ಸೇರಿಕೊಂಡಿತು.

ನಾನು ತಲೆ ತಗ್ಗಿಸಿದೆ.

ಪ್ರೇಮಶೇಖರ, ಪಾಂಡಿಚೆರಿ
cherryprem@rediffmail.com

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: