Grahana – ಗ್ರಹಣ

* ಪ್ರಸಾದ ನಾಯಿಕ

‘ಚಾಂದ ಜೈಸೆ ಮುಖಡೆಪೆ ಬಿಂದಿಯಾ ಸಿತಾರಾ’ ಏಸುದಾಸ್‌ ಹಾಡು ಮನೆಯ ಮುಂದಿನ ಅಂಗಡಿಯಿಂದ ತೇಲಿ ತೇಲಿ ಟೆರೇಸ್‌ ಮೇಲೆ ಕುಳಿತಿದ್ದ ನನ್ನ ಕಿವಿಗೆ ಬೀಳುತ್ತಿದ್ದಂತೆ ಒಂದು ಬಗೆಯ ತಳಮಳ ಪ್ರಾರಂಭವಾಯಿತು. ಮನದಲ್ಲಿ ಸುಳಿದಾಡುತ್ತಿದ್ದ ನೂರಾರು ವಿಚಾರಗಳ ಬೆಂಕಿಗೆ ಇದ್ದಕ್ಕಿದ್ದಂತೆ ತುಪ್ಪ ಸುರಿದ ಅನುಭವ. ಮನೆ ಮುಂದಿನ ಅಂಗಡಿಯ ಮಾಲಿಕ ಆ ಹಾಡಿಗೆ ತಲೆತೂಗುತ್ತಾ ಹಾಡನ್ನು ಮೆಲುಕು ಹಾಕುತ್ತಿದ್ದುದನ್ನು ಕಂಡು ಅಸಹನೆಯಿಂದ ಕುದಿಯಲು ಶುರುಮಾಡಿದೆ.

ಮೆಲ್ಲಗೆ ಸರಿಯುತ್ತಿದ್ದ ಮೋಡಗಳ ಮಧ್ಯದಿಂದ ಇಣುಕಿಣುಕಿ ನೋಡುತ್ತಿದ್ದ ಚಂದ್ರ ನಗುತ್ತಿದ್ದಂತೆ ಭಾಸವಾಗುತ್ತಿದ್ದರೆ ನನ್ನ ಮುಖ ನೋಡಿದವರು ಮಳೆ ಬರುತ್ತಿದೆಯೇನೋ ಎಂದು ಆಕಾಶದೆಡೆ ನೋಡಬೇಕು. ಆದರೆ, ನನಗೆ ಗೊತ್ತು ಕಣ್ಣಿನಿಂದ ಕಪಾಳಕ್ಕಿಳಿಯಲು ಹವಣಿಸುತ್ತಿದ್ದ ನೀರು ಮಳೆಯಂತೂ ಖಂಡಿತವಲ್ಲ. ಆಕಾಶ ಭಾಗಶಃ ಶುಭ್ರವಾಗಿತ್ತು.

ಚಂದ್ರ, ಚಂದ್ರಾಮ, ಚಂದುಮಾಮಾ, ನೀರವ ರಾತ್ರಿಯಲಿ ತಂಪನೆಯ ಬೆಳದಿಂಗಳು ಬೀರುತ್ತಿದ್ದ ಆ ಬಿಳಿ ಬಣ್ಣದ ದುಂಡಗಿನ ಕಾಯ ನನಗೆ ಇನ್ನೆಂದೂ ಹಿತವಾಗಿ ತೋರುವುದಿಲ್ಲ. ಆ ಚಂದ್ರನೊಂದಿಗೆ ಮಿರಿ ಮಿರಿ ಮಿರುಗುತ್ತಿದ್ದ ತಾರೆಗಳು ಎಂದೂ ನನ್ನ ಕಲ್ಪನೆಗಳಿಗೆ ಬಣ್ಣ ಹಚ್ಚುವುದಿಲ್ಲ. ‘‘ಅಲ್ಲಿ ಮೂರು ನಕ್ಷತ್ರ ಕಾಣುತ್ತವಲ್ಲ ಅವು ಯಾವಾಗಲೂ ಒಂದೇ ರೇಖೆಯಲ್ಲಿ ಇರುತ್ತವೆ. ಓ ಅಲ್ಲಿ ಕಾಣುತ್ತದಲ್ಲ ಅದು ಸಪ್ತ ಋಷಿ ಮಂಡಲ.’’ ಸ್ನೇಹಿತರ ಮುಂದೆ ಆಕಾಶಕಾಯಗಳ ವೀಕ್ಷಕ ವಿವರಣೆ ಇನ್ನು ಸಾಧ್ಯವಾಗದೇನೋ. ಮನೆಯ ಮುಂದಿನ ತೆಂಗಿನ ಮರದ ಹಿಂಬದಿಯಿಂದ ಸುಂದರವಾಗಿ ಕಾಣುತ್ತಿದ್ದ ಶುಭ್ರ ಮನಸ್ಸಿನ ಚಂದ್ರ .. ಐ ಹೇಟ್‌ ಹಿಮ್‌.

ಪುಟ್ಟ ಮಗುವಿದ್ದಾಗ ಆ ಚಂದ್ರನನ್ನೇ ತೋರಿಸಿ ಅಲ್ವಾ ಅಮ್ಮ ನನಗೆ ತುತ್ತುಗಳನ್ನು ಗಂಟಲಿಗೆ ಇಳಿಸುತ್ತಿದ್ದುದು. ಇಂದು ಅದೇ ಚಂದ್ರ ನನಗೆ ಬೇಡವಾಗಿದ್ದಾನೆ. ಚೌದವೀ ಕಾ ಚಾಂದ್‌ ಹೊ ಕ್ಯಾ ಆಫ್‌ತಾಬ ಹೊ ಜೋಭಿ ಹೊ ತುಮ್‌ ಖುದಾಕಿಕಸಮ್‌ ಲಾಜವಾಬ ಹೊ.. ಈ ಕವಿಗಳಿಗೆ ಹೊಗಳಲು ಬೇರೆ ಯಾರೂ ಸಿಕ್ಕೇ ಇಲ್ವಾ? ಡ್ಯಾಮಿಟ್‌. ಶುಭ್ರ ಚಂದ್ರ ! ಅವನ ಆಂತರ್ಯದಲ್ಲಿ ಹುದುಗಿರುವ ಆ ಕಲೆಗಳು ಈ ಕವಿಗಳ ಕಣ್ಣಿಗೆ ಕಾಣೋದೆ ಇಲ್ವೆ? ಇಡೀ ಜಗತ್ತಿನಲ್ಲಿ ಚಂದ್ರನನ್ನು ದ್ವೇಷಿಸುತ್ತಿರೋದು ನಾನೊಬ್ಬನೇ ಇರಬೇಕು. ಕಣ್ಣ ಮೇಲೆ ಸಣ್ಣ ಪೊರೆಯಂತೆ ಕೂತಿದ್ದ ನೀರು ಇದ್ದಕ್ಕಿದ್ದಂತೆ ಪ್ರವಾಹ ಬಂದಂತೆ ರಭಸವಾಗಿ ಹೊರಬರತೊಡಗಿತು. ಉಟ್ಟಿದ್ದ ಲುಂಗಿಯ ಅಂಚಿನಿಂದ ಕಣ್ಣೊತ್ತಿಕೊಂಡೆ. ಆ ಹಕ್ಕಿಗಳ ಚಿಲಿಪಿಲಿ, ಮೊಟಾರು ವಾಹನಗಳ ಓಡಾಟದ ಸದ್ದು, ಜನರ ಕೂಗಾಟ, ರೇಡಿಯೋ ಹಾಡು, ನನ್ನ ಬಿಕ್ಕುವಿಕೆಯ ಮೆಲ್ಲ ಸದ್ದುಗಳ ಮಧ್ಯೆ ಚಂದ್ರ ಹುಳ್ಳಗೆ ನಗುತ್ತಿದ್ದ.

***

ಕಣ್ಣುಗಳು ! ಅವು ಬರೀ ಕಣ್ಣುಗಳಷ್ಟೇ ಅಲ್ಲ. ಅವು ನೆನಪುಗಳ, ಸೌಂದರ್ಯದ ಬುಗ್ಗೆ. ಅವನ್ನೇ ನೋಡುತ್ತಿದ್ದರೆ ಎಲ್ಲ ಜಂಜಡಗಳನ್ನು ಮರೆತು ಆನಂದದ ತುತ್ತತುದಿಯನ್ನು ಮುಟ್ಟುತ್ತಿದ್ದೆ ನಾನು. ಬೇರೆಯವರು ಅಂಥ ಕ್ಷಣವನ್ನು ಅದ್ಹೇಗೆ ವರ್ಣಿಸುತ್ತಾರೊ, ಅದ್ಹೇಗೆ ಅನುಭವಿಸುತ್ತಾರೋ ಗೊತ್ತಿಲ್ಲ. ಒಂದು ಪುಟ್ಟ ಮಗುವನ್ನು ನೋಡಿದ ಆನಂದ, ಸ್ಟೆಫಿ ಗ್ರಾಫ್‌ ಎದುರಾಳಿಗಳನ್ನು ಸದೆಬಡಿಯುತ್ತಿದ್ದಾಗ ಸಿಗುತ್ತಿದ್ದ ಸಂತೋಷ, ಎಸ್‌.ಜಾನಕಿ ತನ್ನ ಪರ್ವ ಕಾಲದಲ್ಲಿ ಹಾಡುತ್ತಿದ್ದಾಗ ಸಿಗುತ್ತಿದ್ದ ಆ ಖುಷಿ ಈ ಕಣ್ಣುಗಳನ್ನು ನೋಡುತ್ತಿದ್ದಾಗ ನನಗೆ ಸಿಗುತ್ತಿತ್ತು. ಇದನ್ನು ಅತಿರೇಕ ಅಂದರೂ ಪರವಾಗಿಲ್ಲ.

ಅಂಥ ಕಣ್ಣುಗಳು ಆಕೆಯವು.

ಆಕೆ ಕಣ್ಣು ಮುಚ್ಚಿದ್ದಳು. ತಾರಸಿನ ಮೇಲಿಂದ ಇಳಿದು, ಮುಖ ತೊಳೆದು ಬೆಡ್‌ ರೂಮಿಗೆ ಬಂದಾಗ ಅವಳು ನಿದ್ದೆಗೆ ಜಾರಿದ್ದಳು. ತೆರೆದ ಕಣ್ಣಷ್ಟೇ ಸೌಂದರ್ಯ ಬೀರುತ್ತಿದ್ದ ರೆಪ್ಪೆ ಮುಚ್ಚಿದ ಆ ಕಂಗಳನ್ನು ಒಂದು ಕ್ಷಣ ಎವೆಯಿಕ್ಕದೆ ಹಾಗೇ ನೋಡಿದೆ. ಕಿಟಕಿಯಿಂದ ಶುಭ್ರವಾದ ಚಂದ್ರ ಇಣುಕಿ ನೋಡುತ್ತಿದ್ದ . ಎರಡನ್ನೂ ನೋಡಿ ಹಾಗೇ ಅವಳಿಗೆ ಎದುರಾಗಿ ಮಲಗಿದೆ. ಅಂತರಾಳದಲ್ಲಿ ಯೋಚನಾ ಲಹರಿ ಚಿತ್ತಾರ ಬಿಡಿಸುತ್ತಿತ್ತು. ಹಾಗೇ ನೋಡುತ್ತ ನೋಡುತ್ತ ಖಚಿತ ನಿರ್ಧಾರಕ್ಕೆ ಬರುವ ಹೊತ್ತಿಗೆ ಮುಖ, ಕಿವಿಗಳು ಕೆಂಪೇರಿದ್ದವು. ‘ಪ್ಚ್‌’ ಎಂದು ತಲೆಯಾಡಿಸಿ ಮೆಲ್ಲಗೆ ಕಣ್ಣು ಮುಚ್ಚಿದೆ.

ಆಕೆ ಕಣ್ಣು ತೆರೆದಳು. ತಕ್ಷಣ ನಾನೂ ಕಣ್ಣು ಬಿಟ್ಟೆ. ನನ್ನ ಕೆಂಪಾಗಿದ್ದ ಮುಖ, ಆ ಮುಖದಲ್ಲಿನ ಕಂಗಳ ಪ್ರಖರತೆಯನ್ನು ನೋಡುವುದು ಅವಳಿಂದಾಗಲಿಲ್ಲ. ಎಡಮಗ್ಗುಲಾಗಿ ಮಲಗಿದ್ದವಳು ಬೀಸುತ್ತಿದ್ದ ಸೀಲಿಂಗ್‌ ಫ್ಯಾನಿನತ್ತ ಮುಖ ತಿರುಗಿಸಿದಳು. ಮುಗುಳ್ನಕ್ಕೆ.

ಅವಳ ಮೇಲೆ ಕೈ ಹಾಕಬೇಕೆಂದವನು ಅದನ್ನು ಹಿಂತೆಗೆಯುತ್ತ ವಿಚಿತ್ರವಾದ ಮಂದಹಾಸದೊಂದಿಗೆ ಹೇಳಿದೆ, ‘‘ಶಶಿ .. ನೀನು ಏನು ವಿಚಾರ ಮಾಡುತ್ತಿದ್ದಿಯಾ, ನಿನ್ನ ಮನದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತು.’’ ಶಶಿಯ ಕಣ್ಣು ಕೆಳಗೆ ನೋಡುತ್ತಿದ್ದವು.

‘’ಏನೆಂದು ಕೇಳೊಲ್ಲವಾ ?’’ ಹುಬ್ಬು ಗಂಟಿಕ್ಕಿ, ಕಣ್ಣು ಕಿರಿದು ಮಾಡಿ ಅವಳನ್ನೇ ನೋಡುತ್ತಾ ಕೇಳಿದೆ. ಅವಳ ಕಣ್ಣು ಒಮ್ಮೆ ನನ್ನನ್ನು ನೋಡಿ ಮತ್ತೆ ಕೆಳಗೆ ಸರಿದವು. ಯಾವುದೇ ಉತ್ತರವಿಲ್ಲ. ಅಂಗಾತ ಮಲಗುತ್ತ, ಶೂನ್ಯದಲ್ಲಿ ನೋಡುತ್ತ ತದೇಕಚಿತ್ತದಿಂದ ಯಾವುದೇ ಗಡಿಬಿಡಿಯಿಲ್ಲದೆ ನನ್ನಷ್ಟಕ್ಕೆ ನನಗೇ ಎಂಬಂತೆ ಹೇಳತೊಡಗಿದೆ.

‘‘ನಂಗೊತ್ತು, ನೀನು ಕೇಳಲ್ಲ ಅಂತ ಗೊತ್ತು. ನಿನ್ನ ಮನಸ್ಸಲ್ಲಿನ ಯೋಚನೆಗಳು ನನಗೆ ತಿಳಿದಿದೆ ಅಂತ ನಿನಗೂ ಗೊತ್ತು. ಅದಕ್ಕೇ ಯಾಕೆ ಅಂತ ಕೇಳುತ್ತಿಲ್ಲ. ಇರಲಿ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಿನ್ನಿಂದಾಗದು, ಧೈರ್ಯವಿಲ್ಲ. ಮತ್ತೆ ಕಣ್ಣಲ್ಲೇ ಸೆರೆ ಹಿಡಿದು ಬಿಟ್ಟೇನೆಂಬ ಭಯವೆ? Dont worry. I will not. ಬೆಕ್ಕು…’’

ಏನೋ ಹೇಳಲು ಹೊರಟವನು ಅರ್ಧಕ್ಕೇ ನಿಲ್ಲಿಸಿದೆ. ಶಶಿಯ ಹಣೆಯ ಮೇಲೆ ಬೆವರ ಸಾಲುಗಳು ನನ್ನ ಮನದಾಳದ ವಿಚಾರಧಾರೆಯಷ್ಟೇ ವೇಗವಾಗಿ ಉತ್ಪತ್ತಿಯಾಗುತ್ತಿದ್ದವು. ಅವಳ ಗಂಟಲು ಒಣಗಿದ್ದು ಅವಳು ನುಂಗುತ್ತಿದ್ದ ಉಗುಳಿನ ಮುಖಾಂತರ ಗೊತ್ತಾಗುತ್ತಿತ್ತು. ಏನು ಮಾಡಲು ತೋಚದೆ ಚಟಕ್ಕನೆ ಎದ್ದು ಅಡುಗೆ ಮನೆಗೆ ಹೋದಳು. ಲೋಟಕ್ಕೆ ನೀರು ಬಗ್ಗಿಸಿಕೊಳ್ಳುತ್ತಿದ್ದ ಸಪ್ಪಳ ಆ ನೀರವ ರಾತ್ರಿಯಲ್ಲಿ ಸ್ಪಷ್ಟವಾಗಿ ಕೇಳಿಬಂತು. ಅವಳು ಹೋದ ದಾರಿಯನ್ನೇ ನೋಡುತ್ತಿದ್ದೆ. ಒಂದು ವ್ಯಂಗ್ಯ ನಗು ತನ್ನಷ್ಟಕ್ಕೆ ತಾನೇ ನನ್ನ ಮುಖದಲ್ಲಿ ಮಿಂಚಿ ಮಾಯವಾಯಿತು. ಕಿಟಕಿಯ ಮಗ್ಗುಲಿಗೆ ತಿರುಗಿ ಕಣ್ಣು ಮುಚ್ಚಿದೆ. ಕಿಟಕಿಯಿಂದ ಮರೆಯಾಗಿದ್ದ ಚಂದ್ರನನ್ನು ಹುಡುಕುವ ಪ್ರಯತ್ನವನ್ನು ಕಣ್ಣು ಮಾಡಲಿಲ್ಲ.

ಮತ್ತೆ ಬಳೆಗಳ ಸಪ್ಪಳಕ್ಕೆ ಅತ್ತ ತಿರುಗಿದೆ. ತೊಳೆದುಕೊಂಡು ಬಂದ ಮುಖವನ್ನು ಸೆರಗಿನ ತುದಿಯಿಂದ ಒರೆಸಿಕೊಳ್ಳುತ್ತಿದ್ದಳು. ಮಲಗುವ ಕೋಣೆಗೆ ಬರಲು ಅವಳಿಗೆ ಏನೋ ಭಯ. ಬೇರೆ ದಾರಿ ಕಾಣದೆ ಬಂದು ಮಲಗಿದಳು. ಎದೆ ಬಡಿತ ಜೋರಾಗಿ ಕೇಳಿಬರುತ್ತಿತ್ತು. ಇಬ್ಬರಿಗೂ ನಿದ್ದೆ ಹತ್ತಲೊಲ್ಲದು. ಇಬ್ಬರ ಮನದಲ್ಲೂ ಒಂದೇ ವಿಚಾರ ಮಿಂಚಿನಂತೆ ಫ್ಲಾಷ್‌ ಆಗಿ ಹೋಯಿತು.

ನಾನು ಅವಳನ್ನ ಇನೋಸೆಂಟ್‌ ಅಂತ ತಿಳಿದಿದ್ದೆ.
ನಾನು ಅವನನ್ನು ಇನೋಸೆಂಟ್‌ ಅಂತ ತಿಳಿದಿದ್ದೆ.

ಆಫ್‌ಕೋರ್ಸ್‌ ಇಬ್ಬರ ಕಣ್ಣುಗಳು ಮೊತ್ತ ಮೊದಲ ಬಾರಿ ಸೇರಿದ್ದಾಗ ಇಬ್ಬರೂ ಇನೋಸೆಂಟ್‌. ಅವಳ ಕಣ್ಣುಗಳಲ್ಲಿ ಸೂಜಿಗಲ್ಲಿನ ಸೆಳಕು. ಇಬ್ಬರೂ ಮೆಚ್ಚಿ ಮದುವೆಯಾದ ದಿನ ಆಕಾಶಕ್ಕೆ ಆಕಾಶವೇ ಮೋಡಗಳ ಚಪ್ಪರ ಹಾಕಿತ್ತು. ಆಕಾಶ ಕಳಚಿ ಬಿದ್ದಂತೆ ವರ್ಷಧಾರೆಯಾಗಿತ್ತು. ಕಂಡ ಕನಸಿನ ನವಿಲಿಗೆ ಸಾವಿರ ಬಣ್ಣದ ಗರಿಗಳು. ಮೈಸೂರು, ಬಂಡೀಪುರ, ಊಟಿ ಎಲ್ಲೆಡೆ ಪ್ರಪಂಚದ ಅರಿವಿಲ್ಲದಂತೆ ಪ್ರಣಯ ರಾಗದ ಅಲೆಗಳ ಮೇಲೆ ತೇಲಾಡಿದೆವು.

‘‘ನಿನ್ನ ಫೋಟೋ ತೆಗೆಯೋದಿಕ್ಕೆ ಇಷ್ಟಾನೆ ಇಲ್ಲ. ನಿನ್ನ ಸೆರೆ ಹಿಡಿಯೋದಿಕ್ಕೆ ಕ್ಯಾಮೆರಾ ಬೇಕಾಗಿಲ್ಲ. ನನ್ನ ಕಣ್ಣೇ ಸಾಕು ನಿನ್ನ ಸೆರೆ ಹಿಡಿಯೋದಕ್ಕೆ’’ ಶಶಿ ಮುಗುಳ್ನಕ್ಕಿದ್ದಳು. ನಾನೂ ಆ ಸೌಂದರ್ಯ ರಾಶಿಯಲ್ಲಿ ಮಿಂದಿದ್ದೆ.

‘‘ಆ ಚಂದ್ರ ನೋಡಿ. ತೆಂಗಿನ ಗರಿಗಳೊಂದಿಗೆ ಸಲ್ಲಾಪ ಮಾಡ್ಕೊಂಡು ಎಷ್ಟು ಚೆನ್ನಾಗಿ ಕಾಣ್ತಿದ್ದಾನೆ.’’ ಶಶಿ ಮಾತುಗಳೇ ಹಾಗೆ. ಹುಣ್ಣಿಮೆಯ ಬೆಳದಿಂಗಳಿನಂತೆ ಆಹ್ಲಾದಕರ. ನಿಶ್ಶಬ್ದವಾದ ರಾತ್ರಿಯಲ್ಲಿ ತೇಲಿ ತೇಲಿ ಬಂದು ಮುಖಕ್ಕೆ ತಾಕಿದ ತಂಗಾಳಿಯಂತೆ. ಅವಳ ಮಾತಿನ ಮೋಡಿಗೆ ನಾನು ಸೋತುಹೋಗಿದ್ದೆ.

ಬೆಳದಿಂಗಳ ರಾತ್ರಿಗಳಂದು ಚಂದ್ರನೊಂದಿಗೆ ಆ ತೆಂಗಿನ ಮರದ ಗರಿಗಳು ನಡೆಸುವ ವೈಯಾರ, ಸೊಬಗಿನಾಟ ನೋಡುತ್ತ ನೋಡುತ್ತ ಆರು ತಿಂಗಳು ಕಳೆದಿತ್ತು. ತೆಂಗಿನ ಗರಿ ತನ್ನ ಪ್ರಣಯದಾಟದಲ್ಲಿ ಚಂದ್ರನನ್ನು ಪೂರ್ತಿ ಮುಳುಗಿಸಿ ಹಾಕಿತ್ತು. ಗರಿ-ಚಂದ್ರನ ಗೆಳೆತನದ ಮುಂದೆ ನನ್ನ-ಚಂದ್ರನ ಗೆಳೆತನ ಮಸುಕಾಗಿತ್ತು. ಆ ಗರಿ ನಾನಾಗಿರಲಿಲ್ಲ. ಚಂದ್ರನಿಂದ ಆತ್ಮೀಯತೆಯನ್ನು ಕಿತ್ತುಕೊಂಡಿದ್ದ ಆ ಗರಿಯನ್ನು ಕತ್ತರಿಸಬೇಕೆಂದರೆ ಶಶಿ ಬಿಡಲಿಲ್ಲ.

ಫ್ಲಾಷ್‌ ಬ್ಯಾಕ್‌ನಂತೆ ದೃಶ್ಯಗಳು ಕಣ್ಣ ಮುಂದೆ ಹಾದು ಹೋಗ್ತಾ ಇದ್ರೆ ಮುಖದ ಮೇಲೆ ಒಂದೇ ಸಮ ಸಿಡಿಮಿಡಿ, ಅಸಮಾಧಾನ. ಎತ್ತ ತಿರುಗಿದರೂ ಅದೇ ಚಿತ್ರ. ಛೆ ಕನಸುಗಳು ಕೂಡಾ ನನ್ನ ಅಂಕೆಗೆ ಬರ್ತಾ ಇಲ್ಲ. ಕನಸುಗಳೇ ವಾಸ್ತವ, ವಾಸ್ತವವೇ ಕನಸಾಗಿದೆ. ಕಂಡ ಕನಸುಗಳ ಹೂಮಾಲೆ ಕಗ್ಗಂಟಾಗಿಗೆ, ಬಾಡಿಹೋಗಿದೆ. ವಾಸನೆಯಂತೂ ಕೊಳೆತು ನಾರುತ್ತಿದೆ. ನೋಡೋಣ ಆದದ್ದಾಗಲಿ ಅಂತ ನಿದ್ದೆಗೆ ಜಾರಿದೆ.

***

ಬೆಳಿಗ್ಗೆ ಏಳುತ್ತಿದ್ದಂತೆ ಪಕ್ಕದ ಮನೆಯ ಶಾಸ್ತ್ರಿಗಳ ಮನೆಯಿಂದ ಮಾತುಗಳು ಜೋರಾಗಿಯೇ ಕೇಳಿಬರುತ್ತಿದ್ದವು. ಮಾತುಗಳಲ್ಲಿ ಏನೋ ಸಡಗರ. ಇಂದು ಸಾಯಂಕಾಲ ಚಂದ್ರ ಸಂಭವಿಸಲಿದೆ ಎಂದು ಅವರ ಮಾತುಗಳಿಂದ ವೇದ್ಯವಾಯಿತು. ಬೆಳಗಿನ ಪೇಪರನ್ನು ನೋಡುವ ಅಗತ್ಯವೇ ಇರಲಿಲ್ಲ. ಸಾಯಂಕಾಲ 9ಗಂಟೆ 25 ನಿಮಿಷಕ್ಕೆ ಹಿಡಿಯುವ ರಾತ್ರಿ 11ಗಂಟೆ 45 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂದು ಅವರ ಮಾತುಗಳಿಂದಲೇ ತಿಳಿದುಬಂತು. ಸಾಯಂಕಾಲ ಹಿಡಿದ ನಂತರ ಮತ್ತು ಬಿಟ್ಟ ನಂತರ ಎಲ್ಲರೂ ಸ್ನಾನ ಮಾಡಬೇಕೆಂದು ಹೆಂಡತಿ, ಮಕ್ಕಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದರು. ಮಧ್ಯದ ಸಮಯದಲ್ಲಿ ಮಂತ್ರ ಹೇಳಿಕೊಂಡು ಕಾಲ ಕಳೆಯಬೇಕೆಂದು ಆದೇಶ ನೀಡಿಯಾಯಿತು. ತುಲಾ, ಕರ್ಕ ರಾಶಿಯವರಿಗೆ ಗ್ರಹಗತಿ ಅಷ್ಟು ಚೆನ್ನಾಗಿಲ್ಲ. ಆ ರಾಶಿಯವರು 101 ಸಲ ಹನುಮಾನ್‌ ಸ್ತೋತ್ರ ಅನ್ನಬೇಕೆಂದು ಶಾಸ್ತ್ರಿಗಳು ಹೇಳಿದ್ದು ಹಾಸಿಗೆಯ ಮೇಲೆಯೇ ಕುಳಿತು ಪೇಪರ್‌ ತಿರುವಿ ಹಾಕುತ್ತಿದ್ದ ನನ್ನ ಕಿವಿಗೆ ಬಿತ್ತು. ನನಗೆ ನಗು ಬಂದಿತು. ನನ್ನದೂ ಕರ್ಕ ರಾಶಿ.

ಸಾಯಂಕಾಲವಾಗುತ್ತಿದ್ದಂತೆ ವಾತಾವರಣದಲ್ಲಿ ಏನೋ ಸಡಗರ. ಹಕ್ಕಿಗಳೆಲ್ಲ ಒಂದೇ ಸವನೆ ಚಿಲಿಪಿಲಿಗುಟ್ಟುತ್ತ ಗೂಡು ಸೇರಿಕೊಳ್ಳುತ್ತಿವೆ. ಮನೆ ಮುಂದಿನ ಅಂಗಡಿಯ ಮಾಲಿಕ ಆಗಲೆ ಅಂಗಡಿ ಮುಚ್ಚಿ ಮನೆ ಸೇರಿದ್ದ. ಇಡೀ ಊರಿಗೆ ಊರೇ ಚಂದ್ರ ದ ಆಸ್ವಾದನೆಗೆ ಸಜ್ಜಾಗುತ್ತಿದ್ದಂತೆ ಭಾಸವಾಗುತ್ತಿತ್ತು. ನನ್ನ ಮನಸ್ಸು ಚಂದ್ರನ ಸೆಳೆತದಿಂದ ಉದ್ಭವವಾದ ಸಾಗರದ ಉಬ್ಬರವಿಳಿತದ ಹೊಡೆತಕ್ಕೆ ಸಿಕ್ಕ ನಾವೆ. 9 ಗಂಟೆಯ ಸುಮಾರಿಗೆ ಎಲ್ಲವೂ ಸ್ತಬ್ದ. ಆಅನ್‌ಈಸಿ ಕಾಮ್‌ ನನ್ನನ್ನು ಕಂಗೆಡಿಸಿತ್ತು.

ಮನೆಯಲ್ಲಿನ ಆ ಅಸಹನೀಯ ಮೌನವನ್ನು ತಾಳಲಾರದೆ ಟೆರೇಸಿಗೆ ಬಂದೆ. ಶಶಿಯ ಮನದಲ್ಲೂ ಏನೋ ದುಗುಡ. ಹೇಳಿಕೊಳ್ಳಲಾರದ ತಳಮಳ. ಮೌನ ಕಾದಾಟದಲ್ಲಿ ಮಾತುಗಳು ಸತ್ತುಹೋಗಿವೆ. ನಾನು ಬೇರೆಲ್ಲೋ ಇರಬಹುದೆಂದು ಶಶಿಯೂ ಟೆರೇಸಿಗೆ ಬಂದಳು. ನನ್ನ ಇರುವಿಕೆಯಿಂದ ಆವಾಕ್ಕಾದ ಅವಳು ಹಿಂಜರಿಯುತ್ತಲೇ ಬಳಿ ಬಂದಳು. ಸೀರೆಯ ತುದಿ ಎಡಗೈ ತೋರ್ಬೆರಳನ್ನು ಒಂದೇ ಸವನೆ ಸುತ್ತುತ್ತಿದ್ದರೆ, ನನ್ನ ತಲೆಯಲ್ಲಿ ಗಿರ್ರನೆ ಸುಂಟರಗಾಳಿ.

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: