ನೀನಾರಿಗಾದೆಯೋ ಎಲೆ ಬ್ರಾಹ್ಮಣ? – Evolution of Brahminism!

ಅಖಿಲ ಅಮೆರಿಕ ಬ್ರಾಹ್ಮಣ ಸಂಘದಲ್ಲಿ ಬಾಲಕಿಯಾಬ್ಬಳ ಸವಾಲು :

ಅಮೆರಿಕದಲ್ಲಿ ಇರುವ ಹಲವಾರು ಭಾರತೀಯ ಸಂಘ-ಸಂಸ್ಥೆಗಳ ಪೈಕಿ ಹಲವು, ಜಾತಿಯನ್ನು ಆಧಾರವಾಗಿಟ್ಟುಕೊಂಡು ಕಟ್ಟಿದ ಸಂಘಗಳು. ಬ್ರಾಹ್ಮಣ ಜನಾಂಗದ ಉಪಜಾತಿಗಳನ್ನು ಪ್ರತಿನಿಧಿಸುವ ಹಲವಾರು ಸಂಘಗಳಿವೆ. ಅದೇರೀತಿ, ಅಮೆರಿಕದ ಎಲ್ಲ ಬ್ರಾಹ್ಮಣವರ್ಗಗಳನ್ನೂ (ಭಾಷೆ ಮತ್ತು ಪ್ರಾಂತೀಯ ವ್ಯತ್ಯಾಸಗಳಿಗೆ ಗಮನ ಕೊಡದೇ) ಒಟ್ಟುಗೂಡಿಸುವ ಉದ್ದೇಶದಿಂದ ಹುಟ್ಟಿದ ಬ್ರಾಹ್ಮಣ ಸಂಘವೂ ಒಂದಿದೆ.

ಕಳೆದ ವರ್ಷ ಈ ಬ್ರಾಹ್ಮಣ ಸಂಘ ನ್ಯೂಜೆರ್ಸಿ ಪ್ರಾಂತ್ಯದಲ್ಲಿ ಒಂದು ಸಮಾವೇಶವನ್ನೇರ್ಪಡಿಸಿ ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ನಾನು ಆ ಕಾರ್ಯಕ್ರಮಕ್ಕೆ ಆಹ್ವಾನಿತನಾಗಿದ್ದರೂ ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಅಲ್ಲಿ ನಡೆದ ಕಲಾಪವೊಂದರಲ್ಲಿ, ಅಮೇರಿಕದಲ್ಲಿ ಬೆಳೆದ ಎರಡನೇ ಪೀಳಿಗೆಯ ತರುಣಿಯಾಬ್ಬಳು ಅಲ್ಲಿ ನೆರೆದಿದ್ದ ಬ್ರಾಹ್ಮಣರಿಗೆ ಸವಾಲೊಂದನ್ನೆಸೆದಳು.

‘ನಾನಾಗಲೀ ನೀವಾಗಲೀ ಬ್ರಾಹ್ಮಣರಲ್ಲ’ ಎಂಬೊಂದು ಪ್ರಬಂಧವನ್ನು ಮಂಡಿಸಿ, ಒಂದಿಷ್ಟು ಜನರನ್ನು ಕೊಂಚ ತಿಣುಕುವಂತೆ ಮಾಡಿದಳು. ಅವಳ ಪ್ರಬಂಧ ಮತ್ತೆ ಇದೇ ಸಂಸ್ಥೆಯ ಜಾಲತಾಣದಲ್ಲಿ ಕಾಣಿಸಿಕೊಂಡು ನೂರಾರು ಜನರು ಅದನ್ನು ಓದಿದ್ದಾರೆ. ವಿಶ್ವದ ನಾನಾ ಕಡೆಗಳಿಂದ ಆ ಪ್ರಬಂಧಕ್ಕೆ ಪ್ರತಿಕ್ರಿಯೆಗಳು ಬಂದಿವೆ. ಮುಖ್ಯವಾಗಿ ಅವಳ ಪ್ರಬಂಧದ ಕೇಂದ್ರ ಬಿಂದು – ‘ವ್ಯಕ್ತಿ ಹುಟ್ಟುಮಾತ್ರದಿಂದ ಬ್ರಾಹ್ಮಣನಾಗುತ್ತಾನೆಯೇ (ಅಂದರೆ ತಂದೆ-ತಾಯಿಗಳು ಬ್ರಾಹ್ಮಣರೆಂಬ ಒಂದೇ ಕಾರಣದಿಂದ ಬ್ರಾಹ್ಮಣ್ಯ ಬರುತ್ತದೆಯೇ) ಅಥವಾ ಯಾರು ಬೇಕಾದರೂ ತಮ್ಮ ಸ್ವಂತ ಅಧ್ಯಯನ ಮತ್ತು ಆಚಾರಗಳಿಂದ ಬ್ರಾಹ್ಮಣರಾಗಲು ಸಾಧ್ಯವೇ?’ ಎಂಬ ಪ್ರಶ್ನೆಯಾಗಿತ್ತು.

ಸವಾಲಿನ ಗಾಂಭೀರ್ಯ :

ಪ್ರಪಂಚಕ್ಕೆ ಬ್ರಾಹ್ಮಣರನ್ನು ಕೊಟ್ಟ ಭಾರತದಲ್ಲೇ ಬ್ರಾಹ್ಮಣ್ಯ ಮಾಯವಾಗುತ್ತಿರುವ ಇಂದಿನ ಈ ಯುಗದಲ್ಲಿ ಅಮೆರಿಕದ ಬ್ರಾಹ್ಮಣ ಸಂಘವೊಂದರ ಜಾಲತಾಣದಲ್ಲಿ ಇಲ್ಲಿನ ಎರಡನೇ ಪೀಳಿಗೆಯ ಬಾಲಕಿಯಾಬ್ಬಳು ಈ ಬಗ್ಗೆ ಸವಾಲೆಸದಳೆಂದರೆ ಅದನ್ನು ಕೊಂಚ ಗಂಭೀರವಾಗೇ ಪರಿಗಣಿಸಬೇಕಲ್ಲವೇ? ಜಾತಿಯ ಬಗ್ಗೆ ಮಾತನಾಡುವಾಗ ಅಥವಾ ಬರೆಯುವಾಗ ನಾವು ಆ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಇಂದಿನ ಭಾರತದಲ್ಲಿ ಜಾತಿ ಎಂಬುದು ಬಹು ಮುಖ್ಯಪಾತ್ರವನ್ನು ಹೊಂದಿದೆ.

ಸಾಮಾಜಿಕವಾಗಿ ಭಾರತದ ವಿಶ್ಲೇಷಣೆ ಮಾಡುವಾಗ ಜಾತಿಯನ್ನು ಬಿಟ್ಟು ಮಾತಾಡಲು ಏನಿದೆ? ರಾಜಕೀಯ ದೃಷ್ಟಿಯಿಂದ ನೋಡಿದರೆ, ಭಾರತದ ಇಡೀ ರಾಜಕೀಯವೆಲ್ಲ ಜಾತಿಯ ಆಧಾರದ ಮೇಲೇ ನಿಂತಿದೆ. ಭಾರತೀಯರ ಆರ್ಥಿಕ ಪರಿಸ್ಥಿತಿಗೂ ಜಾತಿಗೂ ನಿಕಟವಾದ ಸಂಬಂಧವಿದೆ. ಬ್ರಿಟಿಷರು ಭಾರತದ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು (ಹೆಚ್ಚಾಗಿ ದುರುಪಯೋಗಿಸಿಕೊಂಡು) ಲಾಭ ಪಡೆದುಕೊಂಡರು. ಹಿಂದೂಗಳಲ್ಲದವರು ತಮ್ಮ ಸ್ವಾರ್ಥಸಾಧನೆಗಳಿಗೆ ಜಾತಿಪದ್ಧತಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಲೇ ಇದ್ದಾರೆ. ಈ ಎಲ್ಲ ಕಾರಣಗಳಿಂದ ಭಾರತದ ಚರಿತ್ರೆಯಲ್ಲಿ, ರಾಜಕೀಯದಲ್ಲಿ ಬೆರೆತುಹೋಗಿರುವ ಈ ಪ್ರಶ್ನೆ ಸಾಧಾರಣವಾದದ್ದಂತೂ ಅಲ್ಲ. ನನ್ನ ಈ ಲೇಖನ ಆ ತರುಣಿ ಎಬ್ಬಿಸಿದ ಚರ್ಚೆಗೆ ಮೀಸಲಷ್ಟೆ, ಭಾರತದ ಜಾತಿಪದ್ಧತಿಯ ವಿಶ್ಲೇಷಣೆಗಲ್ಲ.

ಸವಾಲಿನ ಸಾರಾಂಶ :

ಆಕೆ ಎಸೆದ ಸವಾಲಿನಲ್ಲಿ ಒಂದೆರಡು ಉತ್ತಮಾಂಶಗಳಿದ್ದವು. ಭಾರತೀಯ ಪುರಾಣ ಮತ್ತು ಇತಿಹಾಸಗಳಲ್ಲಿ ಹಾಗೂ ವೇದಾಂತಕ್ಕೆ ಸಂಬಂಧಿಸಿದ ಉಪನಿಷತ್ತುಗಳಲ್ಲಿ ಬ್ರಹ್ಮಜಿಜ್ಞಾಸೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಅಭ್ಯಸಿಸಿದರೆ, ಅವರೆಲ್ಲ ಅಸಾಧಾರಣರು, ಸತ್ಯಾನ್ವೇಶಣೆಯಲ್ಲಿ ತೊಡಗಿದವರು ಎಂಬುದು ಸ್ಪಷ್ಟವಾಗುತ್ತದೆ. ಅವರು ಗುರು-ಹಿರಿಯರ ವಾದವನ್ನು ಕಣ್ಮುಚ್ಚಿ ಒಪ್ಪಿಕೊಳ್ಳದೇ ಸ್ವಂತ ಸಾಧನೆಯ ಬಲದಿಂದ ಆಧ್ಯಾತ್ಮವನ್ನು ಅರಿತುಕೊಂಡವರು.

ಅದರಲ್ಲಿ ಹಲವರು, ಹುಟ್ಟಿನಿಂದ ಬ್ರಾಹ್ಮಣರಲ್ಲದಿದ್ದರೂ ಋಷಿಗಳಾದವರು, ಉದಾಹರಣೆಗೆ ವಾಲ್ಮೀಕಿ ಋಷಿಯಾಗುವ ಮುನ್ನ ಬೇಡನಾಗಿದ್ದ. ಕಠೋಪನಿಷತ್ತಿನಲ್ಲಿ ನಚಿಕೇತ ತಂದೆಗೇ ಸವಾಲು ಹಾಕುತ್ತಾನೆ, ಯಮನೊಂದಿಗೆ ವಾದ ಮಾಡುತ್ತಾನೆ, ಹುಟ್ಟು-ಸಾವುಗಳ ಗೂಢಾರ್ಥಗಳ ಬಗ್ಗೆ ಚರ್ಚೆ ನಡೆಸುತ್ತಾನೆ. ಶಂಕರರು, ರಾಮಾನುಜರು, ಮಧ್ವರು ಮುಂತಾದ ಆಚಾರ್ಯರು ಅವರ ಕಾಲದಲ್ಲಿ ಚಾಲತಿಯಲ್ಲಿದ್ದ ತಮಗೊಪ್ಪಿಗೆಯಾಗದ ತತ್ತ್ವಗಳನ್ನು ಪ್ರಶ್ನಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಆ ತರುಣಿ ಕೇಳುತ್ತಾಳೆ, -‘ನಿಮ್ಮಲ್ಲಿ ಎಷ್ಟು ಜನರಿಗೆ ಹೀಗೆ ಗುರುಹಿರಿಯರನ್ನು, ಮಠದ ಸ್ವಾಮಿಗಳನ್ನು ಪ್ರಶ್ನಿಸುವ ಛಾತಿಯಿದೆ? ವಿಶ್ವಾಮಿತ್ರರು ಹುಟ್ಟಾ ಕ್ಷತ್ರಿಯರಾಗಿದ್ದರೂ ಬ್ರಾಹ್ಮಣ್ಯವನ್ನು ಸಂಪಾದಿಸಿಕೊಂಡು ವಶಿಷ್ಟರಿಂದ ಭಲೇ ಎನ್ನಿಸಿಕೊಳ್ಳುತ್ತಾರೆ, ಬ್ರಹ್ಮರ್ಷಿಯ ಪಟ್ಟ ಕಟ್ಟಿಸಿಕೊಳ್ಳುತ್ತಾರೆ, ಗಾಯತ್ರೀಮಂತ್ರದ ಪ್ರವರ್ತಕರಾಗುತ್ತಾರೆ. ನಿಮ್ಮಲ್ಲಿ ಯಾರ್ಯಾರಿಗೆ ಅಂಥ ಯೋಗ್ಯತೆ ಇದೆ? ಸುಮ್ಮನೆ ಬ್ರಾಹ್ಮಣರಾಗಿ ಹುಟ್ಟಿಬಿಟ್ಟೆವೆಂದು ಏಕೆ ದರ್ಪ ತೋರುತ್ತೀರಿ? ಅರ್ಥಮಾಡಿಕೊಳ್ಳದೇ ಕೆಲವು ವಿಧಿ-ವಿಧಾನಗಳನ್ನು ಆಚರಿಸಿಬಿಟ್ಟಿದ್ದರಿಂದ ನೀವ್ಯಾರೂ ಬ್ರಾಹ್ಮಣರಾಗುವುದಿಲ್ಲ,’ ಎಂಬುದು ಆಕೆಯ ವಾದ.

ಅವಳ ವಾದ ಹಲವರಿಗೆ ಕೋಪ ತರಿಸುವಷ್ಟು ಚುರುಕಾಗಿತ್ತು ಎನ್ನುವುದಕ್ಕೆ ಅನೇಕರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳೇ ಸಾಕ್ಷಿ. ಬ್ರಾಹ್ಮಣನಾಗಲು ಸ್ವತಂತ್ರಚಿಂತನೆ ಅಗತ್ಯ ಎಂಬ ಅಂಶವನ್ನು ಮಂಡಿಸುವ ಉಮೇದಿನಲ್ಲಿ, ಗುರುಹಿರಿಯರಿಗೆ ಸವಾಲೆಸೆಯುವುದೇ ಬ್ರಾಹ್ಮಣನ ಲಕ್ಷಣ ಎನ್ನುವ ವಾದಸರಣಿ ಅವಳ ಪ್ರಬಂಧದ ತರ್ಕದಲ್ಲಿ ತಲೆಹಾಕಿದ್ದರೂ ಇರಬಹುದು, ಇರಲಿ, ಅದು ಮುಖ್ಯವಲ್ಲ. ಅನೇಕರು ಅವಳನ್ನು ಈ ವಿಚಾರದಲ್ಲಿ ವಿರೋಧಿಸಿದರೂ ಇನ್ನು ಕೆಲವರು ಹಾಗೆ ಪ್ರಶ್ನಿಸುವ ಹಕ್ಕು ಅವಳಿಗೂ ಇರಬೇಕು, ಇದು ವ್ಯಕ್ತಿಸ್ವಾತಂತ್ರ್ಯ ಮತ್ತು ಅಭಿಪ್ರಾಯಸ್ವಾತಂತ್ರ್ಯದ ವಿಷಯ ಎಂದು ವಾದಿಸಿದ್ದಾರೆ.

ಬ್ರಾಹ್ಮಣ ಹಾಗೂ ಜಾತಿಬ್ರಾಹ್ಮಣ :

ಸಂಸ್ಕೃತದಲ್ಲಿ ‘ಜಾತಿಬ್ರಾಹ್ಮಣ’ ಎಂಬ ಶಬ್ದವೊಂದಿದೆ. ಹಾಗೆಂದರೆ, ಜಾತಿಯಿಂದ ಬ್ರಾಹ್ಮಣ ಎಂದರ್ಥ, ಆಚರಣೆಯಿಂದ, ಅಧ್ಯಯನದಿಂದ ಅಲ್ಲ. ‘ಜಾತಿ’ ಎಂಬ ಶಬ್ದವೇ ಹುಟ್ಟನ್ನು ತಿಳಿಸುತ್ತದೆ, ‘ಜಾತ ’ ಎಂದರೆ, ಹುಟ್ಟಿದ ಎಂದರ್ಥ. ‘ಜಾತಕ’ ಎಂದರೆ ಹುಟ್ಟಿದ ಘಳಿಗೆ, ತಿಥಿ, ಲಗ್ನ, ರಾಶಿ, ನಕ್ಷತ್ರ ಮುಂತಾದ ವಿಷಯಗಳನ್ನು ತಿಳಿಸುವ ಜನ್ಮಕುಂಡಲಿ, ಇತ್ಯಾದಿ. ಅಂದರೆ ಬ್ರಾಹ್ಮಣನಾಗಿರಲು ಬ್ರಾಹ್ಮಣಜಾತಿಯಲ್ಲಿ (ಅಂದರೆ ಬ್ರಾಹ್ಮಣ ತಂದೆತಾಯಿಗಳಿಗೆ) ಹುಟ್ಟಿರಲೇಬೇಕು ಎಂಬ ವಾದ ‘ಜಾತಿಬ್ರಾಹ್ಮಣ’ನಿಗೆ ಮಾತ್ರ ಸಲ್ಲತಕ್ಕದ್ದು.

ಹುಟ್ಟಿನಿಂದ ಲಭ್ಯವಾಗುವ ಹಲವು ಅನುಕೂಲಗಳಿವೆ, ಉದಾಹರಣೆಗೆ, ಲಕ್ಷಾಧಿಪತಿಯ ಮಗನಾಗಿ ಹುಟ್ಟಿದವ ಹುಟ್ಟಿನಿಂದಲೇ ಹಣವಂತನಾಗಿರುತ್ತಾನೆ. ತಂದೆ ಮರಣಕಾಲದಲ್ಲಿ ಆಸ್ತಿಯನ್ನು ಮಗನಿಗೆ ಬಿಟ್ಟುಹೋದರೆ, ಅವ ದಿಢೀರ್‌ ಲಕ್ಷಾಧಿಪತಿಯಾಗುತ್ತಾನೆ. ಇದು ಅವನ ಅದೃಷ್ಟವಷ್ಟೇ ಹೊರತು ಅವನ ಯೋಗ್ಯತೆಯ ಸೂಚಕವಲ್ಲ. ಹಣವನ್ನು ಸರಿಯಾಗಿ ನಿರ್ವಹಿಸದೇ ಹುಚ್ಚಾಪಟ್ಟೆ ಖರ್ಚುಮಾಡಿ ತಿರುಕನಾಗಿ ಸಾಯಬಹುದು ಅಥವಾ ಉತ್ತಮವಾಗಿ ನಿರ್ವಹಿಸಿ ತನ್ನ ತಂದೆಗಿಂತಲೂ ಹೆಚ್ಚು ಸಂಪಾದಿಸಿ ಹಣವನ್ನು ಇಮ್ಮಡಿಗೊಳಿಸಿ ಮಕ್ಕಳು ಮೊಮ್ಮಕ್ಕಳಿಗೂ ಆಗುವಂತೆ ಆಸ್ತಿಯನ್ನು ಬಿಟ್ಟುಹೋಗಬಹುದು.

ಅಂದರೆ, ಹುಟ್ಟಿನಿಂದ ವಂಶಪಾರಂಪರ್ಯವಾಗಿ ಬಂದದ್ದರ ಜೊತೆಗೆ ಸ್ವಂತ ಸಂಪಾದನೆಯೂ ಇರಬೇಕು, ಇಲ್ಲದಿದ್ದರೆ ಅದು ‘ ಸ್ವಯಾರ್ಜಿತ’ವಾಗುವುದಿಲ್ಲ. ಆದೇ ರೀತಿ, ಬ್ರಾಹ್ಮಣನಾದವನು ಕೇವಲ ಹುಟ್ಟಿನಿಂದ ಬಂದ ‘ಜಾತಿಬ್ರಾಹ್ಮಣ್ಯ’ದಿಂದ ಮುಂದೆ ಸಾಗಬೇಕು. ತಂದೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶ ಮಾಡಿ ಬ್ರಹ್ಮಚರ್ಯೆಯ ಜೀವನಕ್ಕೆ ದೀಕ್ಷೆಕೊಟ್ಟಾಗ ಅವನ ಯಾತ್ರೆ ಪ್ರಾರಂಭವಾಗುತ್ತದೆ. ಗುರುವಿನಿಂದ ಕಲಿಯಬೇಕಾದ್ದನ್ನು ಕಲಿತು, ಶಾಸ್ತ್ರಾಭ್ಯಾಸಮಾಡಿ, ವೇದಾಧ್ಯಯನ ಮಾಡಿ ಕೊನೆಗೆ ಗುರುವಿನ ಮಾತನ್ನು ತಾನೇ ಸ್ವಯಂ ತರ್ಕ ಮಾಡಿಕೊಂಡು ಗ್ರಂಥಗಳಲ್ಲಿ ಹೇಳಿದ ಹಿಂದಿನ ಅನೇಕ ಚಿಂತಕರ ಮಾತುಗಳನ್ನು ಮನನ ಮಾಡಿಕೊಂಡು ಕೊನೆಗೆ ತನ್ನದೇ ಅನುಭವಗಳ ಮಾರ್ಗದರ್ಶನದಿಂದ ಜ್ಞಾನಾರ್ಜನೆ ಮಾಡಿಕೊಂಡು ಜೀವನಪರ್ಯಂತ ಮನನ, ಧ್ಯಾನ, ನಿಧಿಧ್ಯಾಸನಗಳ ಮೂಲಕ ಬೆಳೆಯುತ್ತಲೇ ಹೋದಾಗ, ಆತ ಬ್ರಹ್ಮಜ್ಞಾನಿಯಾಗುವ ಸಂಭವವಿದೆ. ಆಗ ಬ್ರಾಹ್ಮಣನಾಗಲು ಯೋಗ್ಯತೆ ಪಡೆಯುತ್ತಾನೆ. ಇಲ್ಲದಿದ್ದರೆ, ಕೇವಲ ಜಾತಿಬ್ರಾಹ್ಮಣನಾಗೇ ಉಳಿಯುತ್ತಾನೆ. ಇದೆಲ್ಲಕ್ಕೂ ಪೂರ್ವಾರ್ಜಿತ ಕರ್ಮ ಮತ್ತು ಪೂರ್ವಜನ್ಮ ಸಂಸ್ಕಾರಗಳ ಆವರಣಗಳ ಬಂಧನ ಇದ್ದೇ ಇರುತ್ತದೆ ಎಂಬುದು ಹಿಂದೂಜನಾಂಗದ ನಂಬಿಕೆ.

ಶೃತಿ-ಸ್ಮೃತಿಗಳು ಏನೆನ್ನುತ್ತವೆ?:

ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವನೆನ್ನಲಾದ ‘ಚಾತುರ್ವರ್ಣ್ಯಮ್‌ ಮಯಾಸೃಷ್ಟಮ್‌ ಗುಣಕರ್ಮ ವಿಭಾಗಶಃ’ (ಅವರವ ಗುಣ ಮತ್ತು ಕರ್ಮಗಳಿಗನುಸಾರವಾಗಿ ನಾನು ನಾಲ್ಕು ವರ್ಣಗಳನ್ನು ಸೃಷ್ಟಿಸಿದ್ದೇನೆ) ಎಂಬ ಮಾತುಗಳ ಪ್ರಕಾರ, ಈ ‘ವರ್ಣ’ ಗಳು ಮನುಷ್ಯನ ಗುಣ ಮತ್ತು ಕರ್ಮಗಳಿಗನುಸಾರವೇ ಹೊರತು ಹುಟ್ಟಿನ ಚರ್ಚೆ ಅಲ್ಲಿ ಬಂದಿಲ್ಲ.

ಆದೇ ರೀತಿ ಪುರುಷಸೂಕ್ತದ ‘ಬ್ರಾಹ್ಮಣೋಸ್ಯ ಮುಖಮಾಸೀತ್‌’ ಇತ್ಯಾದಿ, ವಾಣಿಯಲ್ಲಿ, ‘ಬ್ರಾಹ್ಮಣನು (ಪುರುಷನ)ಮುಖದಿಂದಲೂ, ಕ್ಷತ್ರಿಯನು ತೋಳಿನಿಂದಲೂ, ವೈಶ್ಯನು ತೊಡೆಯಿಂದಲೂ ಮತ್ತು ಶೂದ್ರನು ಪಾದಗಳಿಂದಲೂ ಉತ್ಪನ್ನರಾದರು’ ಎಂಬ ಮಾತಿನ ಒಂದು ವಿವರಣೆ ಹೀಗೂ ಇದೆ ಎಂದು ಕೇಳಿಬಲ್ಲೆ: ಪ್ರತಿ ಮನುಷ್ಯನಲ್ಲೂ ಮಿದುಳಿನ ಚಿಂತನಾಶಕ್ತಿ, ತೋಳಿನ ಬಲ ಎಂದರೆ ರಕ್ಷಿಸಿಕೊಳ್ಳುವ ಸಾಮರ್ಥ್ಯ, ತೊಡೆಯ ‘ಜಂಘಾಬಲ’ ಎಂದರೆ ಬದುಕಿಗೆ ಬೇಕಾದ ವ್ಯಾಪಾರ, ವ್ಯವಸಾಯ ಮುಂತಾದ ಚಾಕಚಕ್ಯತೆ, ಹಾಗೂ ಕಾಲಿನಮೇಲೆ ನಿಲ್ಲುವ ಸ್ಥಿರತೆ ಮತ್ತು ನಿಂತು ದುಡಿಯುವ ಸಾಮರ್ಥ್ಯ, ಇವೆಲ್ಲ ಬೇರೆಬೇರೆ ಮಿಶ್ರಣವಾಗಿ ವ್ಯಕ್ತಪಡುತ್ತವೆ. ಇವುಗಳಲ್ಲಿ ಹಲವು ಹೆಚ್ಚು ಬಲವಾಗಿ ಮತ್ತೆ ಹಲವು ಬಲಹೀನವಾಗಿರುತ್ತವೆ. ಯಾವ ಗುಣಕ್ಕೆ ಒತ್ತು ಸಿಕ್ಕುತ್ತದೋ, ಎಂತೆಂಥ ಅವಕಾಶಗಳು ದೊರಕುತ್ತವೋ, ಎಂತೆಂಥ ತಂದೆತಾಯಿಗಳು, ಗುರುಗಳು ದೊರಕುತ್ತಾರೋ, ಎಂತೆಂಥ ಶಾಲೆಗಳ ಮತ್ತು ಸಮಾಜದ ವಾತಾವರಣದ ಫಲ ದೊರಕುತ್ತದೋ ಅದರಂತೆ ಮನುಷ್ಯನ ಪ್ರತಿಭೆ ಅರಳುತ್ತದೆ.

ಒಂದೇ ರೀತಿಯ ಅವಕಾಶ ಮತ್ತು ವಾತಾವರಣ ಸಿಕ್ಕರೂ ಬೇರೆಬೇರೆ ಪ್ರಮಾಣದ ಫಲಿತಾಂಶಗಳು ದೊರಕುವುದಕ್ಕೆ ಕಾರಣ ನಮ್ಮ ಪೂರ್ವಜನ್ಮ ಸಂಸ್ಕಾರಗಳು ಮತ್ತು ಪೂರ್ವಾರ್ಜಿತ ಕರ್ಮಗಳೇ ಇರಬೇಕು ಎಂಬುದು ಹಿಂದೂಗಳ ನಂಬಿಕೆ. ಅಂದರೆ ಹುಟ್ಟುವಾಗ ಎಲ್ಲರೂ ನಾಲ್ಕೂ ವರ್ಣಗಳ ಮಿಶ್ರಗುಣಗಳಿಂದ ಪ್ರಾರಭಿಸಿ ಯಾವುದೋ ಒಂದು ಗುಣವನ್ನು ರೂಢಿಸಿಕೊಳ್ಳುತ್ತಾರೆ, ಹಲವರು ಬ್ರಾಹ್ಮಣರಾಗುತ್ತಾರೆ, ಹಲವರು ಕ್ಷತ್ರಿಯರಾಗುತ್ತಾರೆ, ಇನ್ನು ಕೆಲವರು ವೈಶ್ಯರಾಗುತ್ತಾರೆ ಮಿಕ್ಕವರು ಶೂದ್ರರಾಗುತ್ತಾರೆ.

ಈ ಸವಾಲು ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ :

ಆ ತರುಣಿ ‘ನಾನಾಗಲೀ ನೀವಾಗಲೀ ಯಾರೂ ಬ್ರಾಹ್ಮಣರಲ್ಲ’ ಎಂದಂತೆ, ‘ನೀವ್ಯಾರೂ ಕ್ಷತ್ರಿಯರಲ್ಲ,’ ‘ನೀವ್ಯಾರೂ ವೈಶ್ಯರಲ್ಲ’ ಅಥವಾ ಶೂದ್ರರಲ್ಲ ಮುಂತಾಗಿ ಸವಾಲುಗಳನ್ನು ಎಸೆಯಬಹುದು. ಉದಾಹರಣೆಗೆ, ಕ್ಷತ್ರಿಯರೆಂದರೆ ತಮ್ಮ ತೋಳ್ಬಲದಿಂದ ರಾಜ್ಯವನ್ನು ಕಟ್ಟುವ, ಇತರ(ಶತ್ರು) ರಾಜ್ಯಗಳನ್ನು ಆಕ್ರಮಿಸಿ ಗೆಲ್ಲುವ ಅಥವಾ ರಣರಂಗದಲ್ಲಿ ಮಡಿದು ವೀರಸ್ವರ್ಗ ಸೇರುವ ಜನ. ಇವರು ಯುದ್ಧಮಾಡುವ ಕಲೆಯಲ್ಲಿ ನೈಪುಣ್ಯಹೊಂದಿ ಶಸ್ತ್ರಾಸ್ತ್ರಗಳ ಉಪಯೋಗದಲ್ಲಿ ಪರಿಣತಿ ಪಡೆದಿರಬೇಕು.

ಮಹಾರಾಷ್ಟ್ರದ ಮರಾಠರಲ್ಲಿ, ರಾಜಾಸ್ಥಾನದ ರಾಜಪುತ್ರರಲ್ಲಿ ಈಗಲೂ ತಮ್ಮನ್ನು ಕ್ಷತ್ರಿಯರೆಂದು ಕರೆದುಕೊಳ್ಳುವವರಿದ್ದಾರೆ. ಸೈನ್ಯವನ್ನು ಸೇರುವ ಸಿಖ್ಖರನ್ನು, ಕೊಡಗರನ್ನು ‘ಕ್ಷತ್ರಿಯ’ರೆಂದು ಪರಿಗಣಿಸಬಹುದೇನೋ? ಒಟ್ಟಿನಲ್ಲಿ, ಹುಟ್ಟಿನಿಂದ ಯಾವ ಜಾತಿಯವರಾದಾಗಿದ್ದರೂ ಸರಿ, ಇಂದಿನ ಲೆಕ್ಕದಲ್ಲಿ ಸೈನ್ಯಕ್ಕೆ ಸೇರಿದವರೆಲ್ಲ ಕ್ಷತ್ರಿಯರು. ಆದೇರೀತಿ ಆರ್ಥಿಕ ಪ್ರಗತಿಗಾಗಿ, ವ್ಯಾಪಾರ-ವ್ಯವಸಾಯಾದಿ ವೃತ್ತಿಗಳಲ್ಲಿ ತೊಡಗಿದವರೆಲ್ಲ ವೈಶ್ಯರೇ. ತಮಗೆ ತಾವೇ ಸ್ವಾಮಿಗಳಾಗದೇ ಇತರರ ಕೈಕೆಳಗೆ ದುಡಿಯುವ ಸೇವಕಜನರೆಲ್ಲ ಶೂದ್ರರು. ಈ ತಕ್ಕಡಿಯಲ್ಲಿ ತೂಗಿಕೊಂಡರೆ ನಮ್ಮಲ್ಲಿ ಬಹುಸಂಖ್ಯಾತರು ಶೂದ್ರರು.

ಬ್ರಾಹ್ಮಣ್ಯವೆಂಬುದು ಒಂದು ಆದರ್ಶ :

ಜಾತಿಯಿಂದ ಬ್ರಾಹ್ಮಣರಾಗಿ ವೃತ್ತಿಯಿಂದ ಇಂಜಿನಿಯರುಗಳೋ, ಡಾಕ್ಟರುಗಳೋ, ಲಾಯರುಗಳೋ ಆಗಿರುವ ನಮ್ಮಲ್ಲನೇಕರಲ್ಲಿ ಬ್ರಾಹ್ಮಣ್ಯದ ಆಚರಣೆಯಿಲ್ಲ, ಬ್ರಹ್ಮಜ್ಞಾನದ ಹಂಬಲವಾಗಲೀ ಅದನ್ನು ಕೈಗೂಡಿಸಿಕೊಳ್ಳಲು ಬೇಕಾದ ಸಿದ್ಧತೆಯಾಗಲೀ ಇಲ್ಲ. ತಾವೇ ಸ್ವತಃ ದಿಕ್ಕುಗಾಣದೇ ಇರುವ ತಂದೆತಾಯಿಗಳು ತಮ್ಮ ಮಕ್ಕಳಿಗೆ ಏನುತಾನೇ ದೀಕ್ಷೆ ಕೊಡಲು ಸಾಧ್ಯ?

ಬ್ರಾಹ್ಮಣ್ಯವೆಂಬುದು ಪ್ರತಿಯಾಬ್ಬನ ಆದರ್ಶದ ಹಂಬಲವಾಗಬೇಕು, ಅಂಥಾ ಆದರ್ಶ ಎಲ್ಲರ ಕೈಗೂ ಎಟಕಲಾರದ್ದು ಎಂಬ ತಿಳಿವು ಇದ್ದರೂ ಸಹ. ಅಲ್ಲೊಬ್ಬ ಸತ್ಯಕಾಮ, ಇಲ್ಲೊಬ್ಬ ನಚಿಕೇತ, ಅಲ್ಲೊಬ್ಬ ವಾಲ್ಮೀಕಿ, ಇಲ್ಲೊಬ್ಬ ವಿಶ್ವಾಮಿತ್ರ, ಅಲ್ಲೊಬ್ಬ ಕಬೀರ, ಇಲ್ಲೊಬ್ಬ ಕನಕ, ಹೀಗೆ ಪುರಾಣ ಇತಿಹಾಸಗಳನ್ನು ತಡಕಿದರೆ ಜಾತಿಯಿಂದ ಬ್ರಾಹ್ಮಣನಲ್ಲದವನು ಬ್ರಾಹ್ಮಣ್ಯವನ್ನು ಸಂಪಾದಿಸಿದ ಉದಾಹರಣೆಗಳು ದೊರಕುತ್ತವೆ.

ಸಮಾಜದ ರೀತಿ-ರಿವಾಜುಗಳು ಏನೇ ಇರಲಿ, ಬೌದ್ಧಿಕ ದೃಷ್ಟಿಕೋಣದಲ್ಲಿ ಬ್ರಾಹ್ಮಣ್ಯ ಕೇವಲ ಹುಟ್ಟಿನಿಂದ ಬರುವಂಥದ್ದಲ್ಲ (ಹುಟ್ಟಿನಿಂದ ಬರಬಾರದೆಂದಲ್ಲ) ಎಂಬ ಆ ಕಿರಿಯಳ ವಾದ ಹಿರಿಯರಿಗೂ ಒಪ್ಪಿಗೆಯಾಗಲೇಬೇಕಾದದ್ದು ಅನ್ನಿಸುವುದಿಲ್ಲವೇ? ‘ಐವೀ ಲೀಗ್‌ ವಿದ್ಯಾಲಯಗಳಿಗೆ ಯೋಗ್ಯತೆ ಇದ್ದವರಿಗೆಲ್ಲ ಪ್ರವೇಶ ದೊರಕುವುದು ನ್ಯಾಯವೋ, ಅಥವಾ ಐವೀ ಲೀಗ್‌ ಶಾಲೆಗಳಲ್ಲಿ ಕಲಿತವರ ಮಕ್ಕಳಿಗೆ ಮಾತ್ರ ಅಲ್ಲಿ ಪ್ರವೇಶ ದೊರಕಬೇಕೋ?’ ಎಂಬ ಪ್ರಶ್ನೆಯಾಂದಿಗೆ ವಿರಮಿಸುವೆ, ಮುಂದಿನ ಕಂತಿನವರೆಗೆ.

Advertisements

About sujankumarshetty

kadik helthi akka

Posted on ಆಗಷ್ಟ್ 19, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಜಾಲತರಂಗ - ಡಾ|| ಮೈ.ಶ್ರೀ. ನಟರಾಜ. Bookmark the permalink. 1 ಟಿಪ್ಪಣಿ.

  1. Hi Sujan,

    You article is very well written, with good content, depth of research and analysis.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: