ನೆಲಮಾಳಿಗೆಯಾಳದಲ್ಲಿ ಸುಳಿದ ನೆನಪುಗಳು – Resorted memories in the Cellarage!

ಅನೇಕ ವರ್ಷಗಳಿಂದ ಮನದೊಳಗೆ ಹುದುಗಿದ್ದ ನಮ್ಮದೊಂದು ಆಸೆ ಜೂನ್‌ 19ರಂದು ನೆರವೇರಿತು. ನಮ್ಮ ಮನೆಯಂಗಳದಲ್ಲೊಂದು ಸಂಗೀತ ಕಚೇರಿ ನಡೆಯಿತು. ಹಿಂದೆ ನಾವಿದ್ದ ಮನೆ ಎಲ್ಲ ವಿಷಯಗಳಲ್ಲೂ ಅನುಕೂಲವಾಗಿದ್ದರೂ ನೆಲಮಾಳಿಗೆಯ ವಿಸ್ತೀರ್ಣ ಸಮಾಧಾನಕರವಾಗಿರಲಿಲ್ಲ, ಹೆಚ್ಚು ಜನ ಒಂದೆಡೆ ಸೇರಲು ಸಾಕಷ್ಟು ಸೌಲಭ್ಯ ಯಾವ ಒಂದು ಕೊಠಡಿಯಲ್ಲೂ ಇರಲಿಲ್ಲ, ಹೀಗಾಗಿ ಹಲವುಬಾರಿ ನಮ್ಮ ಮನೆಗೆ ಕಲಾವಿದರೋ ಕವಿಗಳೋ ಬಂದಾಗ ನಡೆಸಿದ ಸಭೆಗಳಿಗೆ ಅತಿಥಿಗಳ ಸಂಖ್ಯೆಯನ್ನು ವಿಧಿಯಿಲ್ಲದೇ ಮಿತಿಗೊಳಿಸ ಬೇಕಾಗುತ್ತಿತ್ತು.

ಆದರೆ, ಈಚೆಗೆ ಬಂದು ನೆಲೆಸಿದ ಮನೆಯಾಳಗೆ ಆ ಕೊರತೆ ಸಾಕಷ್ಟು ಮಟ್ಟಿಗೆ ನೀಗಿದೆ. ನಾವು ಮನೆ ಕೊಂಡಾಗ ವಿಶಾಲವಾದ ನೆಲಮಾಳಿಗೆ ಇನ್ನೂ ಅಪೂರ್ಣವಾಗಿತ್ತು, ಹೀಗಾಗಿ ಅದಕ್ಕೆ ಒಂದು ರೂಪಕೊಟ್ಟು, ಮುಚ್ಚದೇ ಬಿಟ್ಟಿದ್ದ ತಳಪಾಯದ ಒಳಭಾಗವನ್ನು ಒಣಗೋಡೆಯ (ಡ್ರೈ ವಾಲ್‌) ಪದರದಿಂದ ಮುಚ್ಚಿಸಿ, ಸುಣ್ಣ ಬಣ್ಣ ಮಾಡಿಸಿ ಸೂರಿಗೆ ದೀಪಗಳನ್ನು ಹಾಕಿಸಿ ನೆಲಕ್ಕೆ ಜಮಖಾನೆ ಹಾಕಿಸಿ ಪೂರ್ಣಗೊಳಿಸುವ ಕೆಲಸ ನಮ್ಮ ಮೇಲೇ ಬಿತ್ತು. ಕೆಲಸ ಸಂಪೂರ್ಣವಾದ ಸಂಭ್ರಮವನ್ನು ಬಂಧುಮಿತ್ರರೊಂದಿಗೆ ಹಂಚಿಕೊಳ್ಳಲು ನೆಲಮಾಳಿಗೆ ಕಚೇರಿಗಿಂತ ಉತ್ತಮ ಮಾರ್ಗ ಯಾವುದು?ಸಂಗೀತ ಪ್ರೇಮಿಗಳ ಅದೃಷ್ಟವೋ ಎಂಬಂತೆ, ಪ್ರತಿ ವರ್ಷ ರಾಜಧಾನಿಗೆ ಆಗಮಿಸುವ ಕಲಾವಿದರಿಗೇನೂ ಕೊರತೆಯಿಲ್ಲ. ನಾದತರಂಗಿಣಿ ವಾರ್ಷಿಕ ಸಂಗೀತೋತ್ಸವದಲ್ಲಿ ಭಾಗವಹಿಸಲು ಶ್ರೀಮತಿ ಉಷಾ ಚಾರ್‌ ಕರೆಸಿಕೊಂಡಿದ್ದ ವೀಣಾ ವಾದಕಿ ಶ್ರೀಮತಿ ಪುಷ್ಪಾ ಕಾಶೀನಾಥ್‌, ಖಂಜೀರ ನುಡಿಸುವ ಅವರ ಪತಿ ಕಾಶೀನಾಥ್‌, ಮೃದಂಗವಿದ್ವಾನ್‌ ಆನೂರು ದತ್ತಾತ್ರೇಯ ಶರ್ಮ ಹಾಗೂ ಅವರ ಅಮೇರಿಕದ ಶಿಷ್ಯ ಗೌತಮ್‌ ಸುಧಾಕರ್‌ (ಈತ ಮೃದಂಗದ ಜೊತೆಗೆ ಘಟವನ್ನೂ ಅಭ್ಯಾಸಮಾಡಿದ್ದಾನೆ) ಇವರೆಲ್ಲ ನಮ್ಮ ನೆಲಮಾಳಿಗೆಯ ಪ್ರಪ್ರಥಮ ಕಚೇರಿಯನ್ನು ನಡೆಸಿಕೊಡಲು ಒಪ್ಪಿದ್ದು ನಮ್ಮೆಲ್ಲರ ಸುದೈವ.

ಆ ಭಾನುವಾರದ ಮದ್ಯಾಹ್ನ ಬಂಧುಮಿತ್ರರ ನಡುವೆ ಮನೆಯಲ್ಲಿ ಒಂದು ಸುಂದರ ವಾತಾವರಣ ಉಂಟಾಗಿತ್ತು. ರಂಗದ ಹಿನ್ನೆಲೆಯಲ್ಲಿ ಸಂಗೀತದ ಅಧಿದೇವತೆಯಾದ ವೀಣೆ ಹಿಡಿದ ಸರಸ್ವತಿಯ ವಿಗ್ರಹ, ಆ ವಿಗ್ರಹದ ಮುನ್ನೆಲೆಯಲ್ಲಿ ವೀಣೆ ಹಿಡಿದು ಕುಳಿತ ಕಲಾವಿದೆ ಸರಸ್ವತಿಯೇ ಪ್ರತ್ಯಕ್ಷಳಾಗಿ ಬಂದು ಕುಳಿತಂತೆ ಅನುಭವವಾಗಿ, ನನ್ನ ಮನಸ್ಸಿನ ನೆಲಮಾಳಿಗೆಯಾಳದಿಂದ ನೆನಪುಗಳು ಮರುಕಳಿಸಿಲಾರಂಭಿಸಿದವು. ಅದೇ ಕ್ಷಣ, ನನ್ನ ತಾಯಿ, ಅವರ ತಾಯಿ, ನಾನು ನೋಡದ ಆದರೆ ಕೇಳಿ ಮಾತ್ರ ಗೊತ್ತಿರುವ ನಮ್ಮ ತಾಯಿಯ-ತಾಯಿಯ-ತಂದೆ, ನನ್ನ ಅಕ್ಕ, ತಂಗಿ ಇವರೆಲ್ಲ ಹೇಗೋ, ಹಿಂದೆಂದೋ ಸಂಸ್ಕಾರದಾನ ಮಾಡುವ ಮೂಲಕ ನನ್ನನ್ನು ಈ ಕಚೇರಿಗೆ ಸಿದ್ಧಗೊಳಿಸಿದ್ದರೆಂಬ ಭಾವ ಉಂಟಾಗಿ ಮನಸ್ಸು ತುಂಬಿ ಬಂತು.

ಸ್ವತಃ ಸಂಗೀತವನ್ನು ಕಲಿಯದಿದ್ದ ನನಗೆ ಸಂಗೀತದ ಪ್ರೀತಿ ಮತ್ತು ಅಭಿರುಚಿ ಬರುವಂತೆ ಮಾಡಿದ ನಮ್ಮ ತಾಯಿ, ನಮ್ಮ ತಾಯಿಯ ತಾಯಿ, ಮೊದಲು ನನ್ನ ಕಣ್ಣಮುಂದೆ ಸುಳಿದು ಹೋದರು. ನಾನು ಚಿಕ್ಕವನಾಗಿದ್ದಾಗ ಸತತವಾಗಿ ಸಂಗೀತಾಭ್ಯಾಸ ಮಾಡುತ್ತಿದ್ದ ನನ್ನ ಅಕ್ಕತಂಗಿಯರು ನನ್ನ ಶ್ರವಣಜ್ಞಾನವನ್ನು ಹೆಚ್ಚಿಸುವಲ್ಲಿ ವಹಿಸಿದ ಪಾತ್ರ ಕೂಡ ನೆನಪಾಯಿತು. ಇಂದು, ಸಂಗೀತ ಕಚೇರಿಗಳಲ್ಲಿ ಹಾಡುಗಾರರು ಅಲಾಪ ಪ್ರಾರಂಭಿಸಿದ ಕೂಡಲೆ ಅವರು ಹಾಡಲು ಹೊರಟಿರುವ ರಾಗ ಯಾವುದು ಅನ್ನುವುದು ಥಟ್ಟನೆ ಹೊಳೆಯುವುದು ಆ ನನ್ನ ಬಾಲ್ಯದ ಶ್ರವಣಜ್ಞಾನದಿಂದಲೇ ಎಂಬುದನ್ನು ಕೃತಜ್ಞತಾ ಭಾವದಿಂದ ನೆನೆಸಿಕೊಂಡೆ. ಸ್ವರಗಳ ಬಗ್ಗೆ ಖಚಿತವಾದ ಜ್ಞಾನವಿಲ್ಲದಿದ್ದರೂ ಅಪಸ್ವರಗಳು ಬಂದರೆ ಥಟ್ಟನೆ ಮುಖಹಿಂಡುವಂತೆ ಪ್ರತಿಕ್ರಿಯಿಸುವುದೂ ಆ ಶ್ರವಣಜ್ಞಾನದಿಂದಲೇ.

ನಮ್ಮ ತಾಯಿ, ಹರಿಕಥಾವಿದ್ವಾನ್‌ ಕೊಣನೂರು ಸೀತಾರಾಮಶಾಸ್ತ್ರಿಗಳ ತಂದೆಯವರಿಂದ ಚಿಕ್ಕಂದಿನಲ್ಲಿ ಸಂಗೀತ ಕಲಿತರಂತೆ. ಹದಿಮೂರನೇ ವಯಸ್ಸಿನಲ್ಲೇ ಮದುವೆಯಾಗಿ ಹದಿನೈದು ತುಂಬುವ ಮೊದಲೇ ಗಂಡನ ಮನೆಯನ್ನು ಸೇರಿದ ನಮ್ಮ ತಾಯಿ ಮದುವೆಗೆ ಮುನ್ನ ಬಾಯಿ ಹಾಡುಗಾರಿಕೆಯ ಜೊತೆಗೆ ಹಾರ್ಮೋನಿಯಮ್‌ ಮತ್ತು ವೀಣಾವಾದನವನ್ನೂ ಅಭ್ಯಸಿಸಿದ್ದರೆಂದರೆ ಆಶ್ಚರ್ಯವಾಗುತ್ತದೆ. ಅವರ ವೀಣಾವಾದನ ಮಾತ್ರ ಒಂದು ಕ್ಷುಲ್ಲಕ ಕಾರಣದಿಂದ ನಿಂತುಹೋದ ಕಥೆಯನ್ನು ಅವರು ಅತ್ಯಂತ ನೋವಿನಿಂದ ಹೇಳಿಕೊಳ್ಳುತ್ತಿದ್ದರು. ಅವರಿಗಾಗಿ ಅವರ ತಂದೆಯೋ (ಅಜ್ಜನೋ, ಮರೆತು ಹೋಗಿದೆ), ಅಂತು ಮೈಸೂರಿನಿಂದ ಒಳ್ಳೆಯ ವೀಣೆಯನ್ನು ಖರೀದಿಸಿ ಭುಜದಮೇಲಿಟ್ಟುಕೊಂಡು ಕೊಣನೂರಿಗೆ ನಡೆದೇ ಬಂದಿದ್ದರಂತೆ. (ಗಾಡಿಯಲ್ಲಿಟ್ಟು ತಂದರೆ ಒಡೆದು ಹೋದೀತು ಎಂಬ ಕಾಳಜಿಯಿಂದ.) ಆ ವೀಣೆ ತಮ್ಮದೇ ಎಂಬ ನಂಬಿಕೆ ಅವರದ್ದಾಗಿತ್ತು, ಆದರೆ, ಅವರ ನಂತರ ಅವರ ತಮ್ಮನಿಗೆ (ನಮ್ಮ ಮಾವನಿಗೆ) ಮೈಸೂರಿನ ಹೆಣ್ಣು ಕೊಟ್ಟು ಮದುವೆಯಾಯಿತು, ಆಕೆಯೂ ವೀಣೆ ನುಡಿಸಲು ಕಲಿಕೆ ಶುರುಮಾಡಿದ್ದರಂತೆ, ಆ ಕಾರಣದಿಂದ ನಮ್ಮ ಅಜ್ಜಿ ವೀಣೇಯನ್ನು ಕೊಣನೂರಿನಲ್ಲೇ ಇಟ್ಟುಕೊಂಡು ಹಾರ್ಮೋನಿಯಮ್‌ ಮಾತ್ರ ಕೊಟ್ಟು ಮಗಳನ್ನು ಕಳಿಸಿಕೊಟ್ಟರಂತೆ. ವೀಣೆಯಿಂದ ವಂಚಿತರಾಗಿ ಮತ್ತೆಂದೂ ವೀಣೆಯನ್ನು ಮುಟ್ಟುವುದಿಲ್ಲವೆಂದು ನಮ್ಮ ತಾಯಿ ಪಣತೊಟ್ಟ ಕಾರಣ ಅವರು ವೀಣೆ ನುಡಿಸುವುದನ್ನು ನಾವ್ಯಾರೂ ನೋಡುವ/ಕೇಳುವ ಸುಯೋಗ ಒದಗಲೇ ಇಲ್ಲ.

ನಮ್ಮ ತಾಯಿಯ ಹಾರ್ಮೋನಿಯಮ್‌ ವಾದನ ಮಾತ್ರ ಮುಂದುವರೆಯಿತು. ಅವರ ಕೈ ಎಷ್ಟು ಚೆನ್ನಾಗಿತ್ತೆಂದರೆ, ಅವರು ಶೃಂಗೇರಿಗೆ ಹೋಗಿದ್ದಾಗ ಅವರು ನುಡಿಸುವುದನ್ನು ಕೇಳಿದ ಮಠದ ಸಂಚಾಲಕರು ಜಗದ್ಗುರು ಚಂದ್ರಶೇಖರಭಾರತಿಗಳ ಸಮ್ಮುಖದಲ್ಲಿ ‘ಶಂಕರ-ಗುರುವರ-ಮಹಿಮ’ ಎಂಬ ಕೃತಿಯನ್ನು ನುಡಿಸಲು ಅವಕಾಶ ಮಾಡಿಕೊಟ್ಟಿದ್ದರಂತೆ, ಆಗ ನನಗೆ ಇನ್ನೂ ಎರಡೇ ವರ್ಷವಂತೆ, ನನ್ನನ್ನು ಅಜ್ಜಿಯಾಂದಿಗೆ ಮನೆಯಲ್ಲೇ (ಶಿವಮೊಗ್ಗೆಯಲ್ಲಿ) ಬಿಟ್ಟು ಶೃಂಗೇರಿಗೆ ತಾವೊಬ್ಬರೇ ಹೋಗಿದ್ದನ್ನು ಆಗಾಗ್ಗೆ ನಮ್ಮಮ್ಮ ನೆನೆಸಿಕೊಳ್ಳುತ್ತಿದ್ದರು. ಅವರು ಎಪ್ಪತ್ತು ಮೀರಿದ ವಯಸ್ಸಿನಲ್ಲಿ ನುಡಿಸಿದ ಒಂದೋ ಎರಡೋ ಹಾರ್ಮೋನಿಯಂ ದ್ವನಿಸುರುಳಿ ಮಕ್ಕಳಾದ ನಮ್ಮಬಳಿ ಇವೆ, ಈಗಲ್ಲೂ ಒಮ್ಮೊಮ್ಮೆ ಕೇಳಿ ಸಂತೋಷ ಪಡುತ್ತೇವೆ.

ನಮ್ಮ ತಾಯಿಯ ಬಾಯಿ ಹಾಡುಗಾರಿಕೆ ಮಾತ್ರ ನನಗೆ ಅಚ್ಚರಿ ಉಂಟು ಮಾಡುತ್ತದೆ. ಅಷ್ಟು ಅಲ್ಪ ಸಮಯದಲ್ಲಿ (ಬಾಲ್ಯಪಾಠವೂ ಸೇರಿ ಸುಮಾರು ಐದಾರು ವರ್ಷಕ್ಕಿಂತ ಹೆಚ್ಚಿರಲಾರದು) ನೂರಿನ್ನೂರು ಕೃತಿಗಳನ್ನೂ ಅದಕ್ಕೆ ಮುಪ್ಪಟ್ಟೋ ನಾಲ್ಪಟ್ಟೋ ದೇವರನಾಮಗಳನ್ನು ಕಲಿತಿದ್ದರು. ಬೆಳಗಿನಿಂದ ಸಂಜೆಯವರೆಗೆ ಒಂದಿಲ್ಲ ಒಂದು ಹಾಡನ್ನು ಹಾಡುತ್ತಲೇ ಕೆಲಸಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದರು. ಹಾಡಿನ ಮಧ್ಯೆ ಅಡಚಣೆ ಬಂದರೆ, ಅದರ ನಂತರ ಏನೂ ಆಗೇ ಇಲ್ಲವೆನ್ನುವಂತೆ ಯಾವ ಸ್ಥಳದಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಮುಂದಕ್ಕೆ ಹಾಡಿಕೊಂಡು ಹೋಗುತ್ತಿದ್ದರು.

‘ಏಳು ನಾರಾಯಣನೇ ಏಳು ಲಕ್ಷ್ಮೀರಮಣ, ಏಳು ಕಮಲಾಕ್ಷ ಕಮಲನಾಭ’ ದಿಂದ ಅವರ ದಿನಚರಿ ಪ್ರಾರಂಭವಾದರೆ, ಸಂಜೆ ದೀಪ ಹಚ್ಚುವ ಸಮಯದಲ್ಲಿ ‘ದೀಪ ಮಂಗಳ ಜ್ಯೋತಿ ನಮೋ ನಮೋ’ ಎಂಬ ದೀಪಕರಾಗದ ಹಾಡಿನೊಂದಿಗೆ ಮುಕ್ತಾಯವಾಗುತ್ತಿತ್ತು. ಪ್ರತಿನಿತ್ಯ ಬೇರೆ ಬೇರೆ ಕೃತಿಗಳನ್ನು ನೆನಪಿಸಿಕೊಳ್ಳುತ್ತ ಕಲಿತ ಎಲ್ಲಾ ಕೃತಿಗಳನ್ನೂ ಮರೆಯದಂತೆ ನೋಡಿಕೊಳ್ಳುತ್ತಿದ್ದರು. ಸಂಗೀತದ ಜೊತೆಗೆ ರಾಮಾಯಣ ಮಹಾಭಾರತ ಮುಂತಾದ ಇತಿಹಾಸ ಪುರಾಣಗಳನ್ನು ಓದಿ ನೂರಾರು ಕಥೆ-ಉಪಕಥೆಗಳನ್ನು ನೆನಪಿನಲ್ಲಿಟ್ಟುಕೊಂಡು ಮಕ್ಕಳಿಗೆ ಹೇಳುತ್ತಿದ್ದರು. ನನ್ನ ತಮ್ಮ ಹುಟ್ಟಿದಾಗ, ಅವರ ಬಾಣಂತನದ ಸಮಯದಲ್ಲಿ, ಎಲ್ಲಿ ಮರೆತು ಹೋಗುವುವೋ ಎಂದು ಹೆದರಿ, ನಮ್ಮಣ್ಣನ ಕೈಯ್ಯಲ್ಲಿ (ಅವನ ಅಕ್ಷರ ಗುಂಡಾಗಿತ್ತು ಎಂದು) ತಾವು ಕಲಿತ ಎಲ್ಲ ಕೃತಿಗಳನ್ನೂ ಬರೆಸಿಕೊಂಡಿದ್ದರು.

ನಮ್ಮ ತಾಯಿಯ ತಾಯಿ ವೆಂಕಮ್ಮನವರು ಪ್ರಚಂಡ ಹೆಂಗಸರ ಪೈಕಿಯವರು. ಎಪ್ಪತ್ತೆರಡು ಜನರಾಗದ ಕೃತಿಯಾಂದನ್ನು ಅವರು ಹೇಳುತ್ತಿದ್ದರಂತೆ (ಕೇಳುವ ಸುಯೋಗ ನನಗೆ ದೊರಕಲಿಲ್ಲ). ಅವರ ಆ ಕೃತಿಯನ್ನು ಧ್ವನಿಮುದ್ರಿಸಿಕೊಳ್ಳಲು ಆಕಾಶವಾಣಿಯ ತಂತ್ರಜ್ಞರು ಕೊಣನೂರಿಗೆ ಬಂದಿದ್ದ ವಿಷಯ ನನಗೆ ಚೆನ್ನಾಗಿ ನೆನಪಿದೆ. ಅವರು ಕನ್ನಡ [^], ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನುರಿತಿದ್ದರು. (ಇಂಗ್ಲಿಷ್‌ ಸಹ ಅರ್ಥವಾಗುತ್ತಿತ್ತು!) ತ್ಯಾಗರಾಜ ಕೃತಿಗಳ ಅರ್ಥವನ್ನು ಚೆನ್ನಾಗಿ ವಿವರಿಸುವಷ್ಟು ತೆಲುಗಿನ ಭಾಷಾಜ್ಞಾನವಿತ್ತು. ಅವರ ತಂದೆ ಅಮುಲ್ದಾರ್‌ ಕೇಶವಯ್ಯನವರು, ಅವರ ಮನೆಯಲ್ಲಿ ಕುದುರೆ ನೋಡಿಕೊಳ್ಳಲು ಮುಸಲ್ಮಾನ ಸೇವಕರು ಇದ್ದದ್ದರಿಂದ ಅವರಿಗೆ ಉರ್ದೂ ಭಾಷೆ ಚೆನ್ನಾಗಿ ಬರುತ್ತಿತ್ತು! (ಒಮ್ಮೆ, ಅವರು ಹಾಸನದಲ್ಲಿ ನಮ್ಮ ಮನೆಗೆ ಬಂದಿದ್ದಾಗ, ಒಬ್ಬ ಮುಸಲ್ಮಾನ ಚಾಪೆ ಮಾರಲು ಬಂದಿದ್ದ, ಅವನೊಂದಿಗೆ ಸರಂಪುರಿಯಾಗಿ ಉರ್ದುವಿನಲ್ಲಿ ಸಂಭಾಷಣೆ ಮಾಡುತ್ತಿದ್ದ ವಯಸ್ಸಾದ ಮಡಿ ಹೆಂಗಸನ್ನು ನೋಡಿದ ಅಕ್ಕಪಕ್ಕದವರೆಲ್ಲ ದಂಗುಬಡಿದು ಹೋಗಿದ್ದರು, ಆ ದೃಶ್ಯ ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.)

ನನಗೆ ಸಂಗೀತದಬಗ್ಗೆ ಅಭಿರುಚಿ ಇರುವುದನ್ನು ಕಂಡುಕೊಂಡಿದ್ದ ನಮ್ಮಜ್ಜಿ, ನನಗೆ ಅನೇಕ ಸಂಗೀತಕ್ಕೆ ಸಂಬಂಧಪಟ್ಟ ಕತೆಗಳನ್ನು ತಿಳಿಸುತ್ತಿದ್ದರು. ಅವರು ನಮ್ಮಜ್ಜನನ್ನು ಮದುವೆಯಾಗಿ ಕೊಣನೂರಿಗೆ ಬರುವ ಮೊದಲು ಮೈಸೂರಿನಲ್ಲಿ ಬೆಳೆಯುತ್ತಿದ್ದಾಗ ಮೈಸೂರರಸರ ಅರಮನೆಯಲ್ಲಿ ನಡೆಯುತ್ತಿದ್ದ ದಸರಾ ಕಚೇರಿಗಳನ್ನು ಕೇಳಿದವರು ಅವರು. ಮೈಸೂರು [^] ವಾಸುದೇವಾಚಾರ್ಯರಂಥ ಸಂಗೀತಗಾರರು ಅವರ ಮನೆಯ ಅಂಗಳದಲ್ಲಿ ಬಂದು ಹಾಡುತ್ತಿದ್ದ ವಿಷಯವನ್ನು ಸ್ವಯಂ ವಾಸುದೇವಾಚಾರ್ಯರೇ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ‘ಕೇಶವಯ್ಯನವರು ಸಂಗೀತ ರಸಿಕರು, ಅವರು ಎಷ್ಟು ಉದಾರಿಗಳೆಂದರೆ, ಐದು ರೂಪಾಯಿ ಸಂಭಾವನೆ ಕೊಟ್ಟು ನಮ್ಮನ್ನು ಆದರಿಸುತ್ತಿದ್ದರು’ ಎಂಬ ವಾಸುದೇವಾಚಾರ್ಯರ ಮಾತನ್ನು ನೆನೆಸಿಕೊಂಡರೆ, ಮತ್ತು ಆ ಘಟನೆ ನಡೆದದ್ದು ನೂರು ವರ್ಷಗಳಿಗಿಂತ ಹೆಚ್ಚು ಕಾಲದಹಿಂದೆ ಎಂಬುದನ್ನು ನೆನೆಸಿಕೊಂಡರೆ ಮೈಯ್ಯಲ್ಲಿ ರೋಮಾಂಚನವಾಗುತ್ತದೆ.

ಪುಷ್ಪಾ ಕಾಶೀನಾಥ್‌ ಅವರು ವೀಣೆ ನುಡಿಸುತ್ತಿದ್ದಾಗ ಮರುಕಳಿಸಿದ ನಮ್ಮ ತಾಯಿ, ಅವರ ತಾಯಿ, ಅವರ ತಂದೆ, ಮತ್ತು ನನ್ನ ಅಕ್ಕ ತಂಗಿಯರು ನನ್ನ ಸಂಗೀತಪ್ರೀತಿಗೆ ತಮಗೇ ತಿಳಿಯದಂತೆ ಹೇಗೆ ಹೊಣೆಯಾಗಿದ್ದಾರೆ ಎಂಬ ಕೃತಜ್ಞತೆ ಮನಸ್ಸಿನಲ್ಲಿ ಮೂಡಿಬಂತು. ಆ ಕಾರಣದಿಂದ ನಮ್ಮ ನೆಲಮಾಳಿಗೆಯ ಪ್ರಥಮ ಕಚೇರಿ ಮಕ್ಕಳಲ್ಲಿ ಸಂಗೀತ ಪ್ರೀತಿಯನ್ನು ಬೆಳೆಸಿದ ಆ ತಾಯಂದಿರಿಗೆ ಅರ್ಪಣೆ ಮಾಡಿದ್ದು ನನ್ನ ಮನಸ್ಸಿಗೆ ತುಂಬ ತೃಪ್ತಿ ಕೊಟ್ಟಿತು. ಇಂಥಾ ಅವಕಾಶಗಳನ್ನು ಆಗಾಗ್ಗೆ ಸಂಗೀತದ ಅಧಿದೇವತೆಯಾದ ಸರಸ್ವತಿಯು ನಮಗೆ ದಯಪಾಲಿಸಲಿ ಎಂಬ ಕೋರಿಕೆಯಾಂದಿಗೆ ವಿರಮಿಸುವೆ ಮುಂದಿನ ಕಂತಿನ ವರೆಗೆ.

Advertisements

About sujankumarshetty

kadik helthi akka

Posted on ಆಗಷ್ಟ್ 19, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಜಾಲತರಂಗ - ಡಾ|| ಮೈ.ಶ್ರೀ. ನಟರಾಜ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: