ಕೆ.ಜಿ.ವಿ.ಕೃಷ್ಣ ಅವರಿಗೆ ಸಹಸ್ರಚಂದ್ರದರ್ಶನ – K.G.Venkatakrishna – The Gentleman

ಅಮೆರಿಕದ ರಾಜಧಾನಿಯ ಕನ್ನಡಿಗರಲ್ಲಿ ಎಂಭತ್ತನ್ನು ದಾಟಿದವರು ಬೆರಳೆಣಿಸುವಷ್ಟು ಮಂದಿ ಇರಬಹುದು. ಇಂಥವರ ಅಗ್ರಪಂಕ್ತಿಯಲ್ಲಿ ಕೆ.ಜಿ.ವೆಂಕಟಕೃಷ್ಣ ಒಬ್ಬ ಅಪರೂಪದ ವ್ಯಕ್ತಿ. ಇವರ ಚಿರಯುೌವನದ ರಹಸ್ಯವೇನು ಎನ್ನುವಿರೊ? -ಸರಳ ಜೀವನ, ಹಿತಮಿತವಾದ ಆಹಾರ, ಮನಸ್ಸನ್ನು ಪ್ರಫುಲ್ಲಗೊಳಿಸುವಂಥ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ದೇಹವನ್ನು ಚುರುಕಾಗಿಡುವ ಟೆನ್ನಿಸ್‌ ಆಟ, ಮಿದುಳನ್ನು ಚುರುಕಾಗಿಡುವ ಓದು-ಬರಹ, ಸುತ್ತಮುತ್ತಲ ಬಂಧು-ಮಿತ್ರರೊಂದಿಗೆ ಆರೋಗ್ಯಕರ ಸಂಬಂಧ, ದೇವರ ಕೆಲಸವೇ ಆಗಲಿ, ಕನ್ನಡದ ಕೆಲಸವೇ ಆಗಲಿ, ಸಂಗೀತ-ಸಾಹಿತ್ಯಗಳ ಕೆಲಸವೇ ಆಗಲಿ ಎಲ್ಲದರಲ್ಲೂ ಆಸಕ್ತಿ.

ಈ ಕಾರಣಗಳಿಂದ ಇವರು ನಡೆಸುವ ಜೀವನ ಬಲು ಸ್ವಾರಸ್ಯಕರ, ಆರೋಗ್ಯಕರ ಮತ್ತು ಆಯುಷ್ಯವೃದ್ಧಿಗೆ ಹೇಳಿ ಮಾಡಿಸಿದ ಲೇಹ್ಯದಂತೆ ರುಚಿಕರ! ಉತ್ಸಾಹದಿಂದ ಪಾಲ್ಗೊಂಡು ಮುಕ್ತಹಸ್ತದಿಂದ ಸಹಾಯಮಾಡಿದರೂ ಎಲೆಮರೆಯ ಕಾಯಾಗಿ ವಾಷಿಂಗ್‌ಟನ್‌ ಕನ್ನಡಿಗರ ದೃಷ್ಟಿಯಲ್ಲಿ ‘ಜೆಂಟಲ್‌ಮನ್‌’ ಎನ್ನಿಸಿಕೊಳ್ಳುವ ಕೆ.ಜಿ. ವೆಂಕಟಕೃಷ್ಣ ಅವರಿಗೆ ಎಂಭತ್ತು ತುಂಬಿದ ಶುಭಸಂದರ್ಭವನ್ನು ಮೆಲಕುಹಾಕುತ್ತ ಜಾಲತಂಗದ ಓದುಗರಿಗೆ ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದೇ ಈ ಕಿರುಲೇಖನದ ಉದ್ದೇಶ.

KGV Krishna and Leela Krishnaಅಕ್ಟೋಬರ್‌ 9, 2005ರಂದು ಕೆಜಿವಿ ಅವರ ಕುಟುಂಬ -ಅರ್ಧಾಂಗಿ ಲೀಲಾ, ಮಗಳು ಗೌರಿ, ಮಗ ಸಂಜಯ, ಅಳಿಯ, ಸೊಸೆ ಮತ್ತು ಮೊಮ್ಮಕ್ಕಳು ಹಾಗು ಹತ್ತಿರದ ಸಂಬಂಧಿಗಳು, ಆಪ್ತಮಿತ್ರರು, ಕಾವೇರಿ ಕನ್ನಡಸಂಘದ ಹಲವಾರು ಹಿರಿಯ ಕಿರಿಯ ಗೆಳೆಯರೆಲ್ಲ ಒಟ್ಟುಗೂಡಿ ಶ್ರೀ ಶಿವ ವಿಷ್ಣು ದೇವಾಲಯದಲ್ಲಿ ಕೆಜಿವಿ ಅವರ ಎಂಭತ್ತನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೆಂಗಳೂರಿನಲ್ಲಿ ಜನಿಸಿದ ಕೃಷ್ಣ ಅವರು, ಮೊದಲು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ, ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಗಳನ್ನು ಪಡೆದು 1950ರಿಂದ 56ರವರೆಗೆ ಮುಂಬೈನ ಜೈ ಹಿಂದ್‌ ಕಾಲೇಜಿನಲ್ಲಿ, ತದನಂತರ 1956ರಿಂದ 66ರವರೆಗೆ ಕೀನ್ಯಾದ ನೈರೋಬೀ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಬೋಧಿಸುವುದರಲ್ಲಿ ನಿರತರಾಗಿದ್ದರು. ಇದರ ಮಧ್ಯೆ ಒಂದು ವರ್ಷ (1963-64) ಅಮೆರಿಕದಲ್ಲಿ ನ್ಯೂಯಾರ್ಕ್‌ ಸಂಸ್ಥಾನದ ಸಿರಕ್ಯೂಸ್‌ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಉಪನ್ಯಾಸಮಾಡಿದರು. ಇವರ ನೈಪುಣ್ಯವನ್ನು ಗುರುತಿಸಿದ ವಿಶ್ವಸಂಸ್ಥೆ (ಯುನೆಸ್ಕೋ) ಇವರನ್ನು ಸಲಹೆಗಾರನನ್ನಾಗಿ ಮಾಡಿಕೊಂಡಿತು. 1966ರಲ್ಲಿ ಅಮೇರಿಕಕ್ಕೆ ಬಂದು ನೆಲಸಿದಮೇಲೆ 25 ವರ್ಷಗಳ ಸತತ ಸೇವೆಯನ್ನು ವಿಶ್ವ ಬ್ಯಾಂಕ್‌ ಸಂಸ್ಥೆಗೆ ಸಲ್ಲಿಸಿ ಎಲ್ಲರ ಮಾನ್ಯತೆ ಪಡೆದು ಈಗ ಸುಖ-ಶಾಂತಿ-ಸಮೃದ್ಧಿಗಳ ನಿವೃತ್ತಿಜೀವನದಲ್ಲಿ ವಿಶ್ರಾಂತಿಯ ನಡುವೆಯೂ ಅನೇಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಕೆಜಿವಿ ಅವರ ಸೇವೆಯ ವ್ಯಾಪ್ತಿಯಲ್ಲಿ ಸೇರಿದ ಪೂರ್ವ ಮತ್ತು ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ, ದೂರಪ್ರಾಚ್ಯ, ಮೊದಲಾದ ಅನೇಕ ಭಾಗಗಳಲ್ಲಿ, ಟರ್ಕಿ, ಪಾಕೀಸ್ತಾನ ಮೊದಲುಗೊಂಡು 25ರಾಷ್ಟ್ರಗಳ ಸರ್ಕಾರಗಳಿಗೆ, ವ್ಯವಸಾಯದ ನಿರ್ವಹಣೆಗೆ ತಕ್ಕ ಆರ್ಥಿಕ ಸಲಹೆಗಳನ್ನು ಕೊಡುವುದರ ಮೂಲಕ, ಅಲ್ಲಿಯ ಜನತೆಯನ್ನು ಶ್ರೀಮಂತಗೊಳಿಸಿದ್ದಾರೆ.

ಸಂಗೀತ, ಸಾಹಿತ್ಯಗಳ ಬಗ್ಗೆ ಇವರಿಗಿರುವ ಒಲವು ವಾಷಿಂಗ್‌ಟನ್ನಿನ ಅವರ ಮಿತ್ರಮಂಡಲಿಗೆ ಚಿರಪರಿಚಿತ. ಸಂಗೀತದ ವಿಚಾರದಲ್ಲಿ ಕೆಜಿವಿ ಮಡಿವಂತರಲ್ಲ, ಅವರಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತ ಎಷ್ಟು ಪ್ರಿಯವೋ, ಲಘುಸಂಗೀತವೂ ಅಷ್ಟೇ ಪ್ರಿಯ, ಏಕೆ, ಪಾಶ್ಚಿಮಾತ್ಯ ಸಂಗೀತಕ್ಕೂ ಅವರು ತಲೆದೂಗುತ್ತಾರೆ, ಮಿಣುಕುವ ದೀಪದ ಕತ್ತಲು-ಬೆಳಕಿನ ತಾಕಲಾಟದ ನಡುವೆ ರಾಕ್‌ ಬ್ಯಾಂಡಿನ ಡ್ರಮ್ಮಿನ ಬಡಿತಕ್ಕೂ ತಾಳ ಹಾಕುತ್ತಾರೆ! ಇವರು ಒಳ್ಳೇ ಓದುಗರು, ಅದರಲ್ಲೂ ಹಣಕಾಸಿನ ವ್ಯವಸ್ಥೆಯ ವಿಷಯ ಮತ್ತು ಜಗತ್ತಿನ ಆಗುಹೋಗುಗಳು ಇವರ ಅಂತರಂಗಕ್ಕೆ ಹತ್ತಿರದ ವಸ್ತುಗಳು. ಮುಂಬೈನಲ್ಲಿ ಜೈಹಿಂದ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ ರಂಗ-ಚಟುವಟಿಕೆಯಲ್ಲಿ ಸಹ ತೊಡಗಿದ್ದು, ನಟ ಮತ್ತು ನಿರ್ದೇಶಕರೂ ಆಗಿದ್ದರೆಂದರೆ, ಕೆಜಿವಿ ಅವರ ಬಹುಮುಖ ಪ್ರತಿಭೆಯ ಪರಿಚಯ ಕಿಂಚಿತ್ತಾದರೂ ಆಗಬಹುದೇನೋ? ಎಂಭತ್ತರ ತಾರುಣ್ಯದಲ್ಲಿ ತಪ್ಪದೇ ಟೆನ್ನಿಸ್‌ ಆಡುವ ಈ ಕ್ರೀಡಾಪಟು ಅನೇಕ ಟ್ರೋಫಿಗಳ ಒಡೆಯ.

ವಿಶ್ವಬ್ಯಾಂಕಿನ ವೃತ್ತಿಯ ಕಾರಣದಿಂದ ಕೆಜಿವಿ ಅವರಿಗೆ, ಹತ್ತಾರು ಸರ್ಕಾರಗಳೊಂದಿಗೆ, ಅನೇಕ ಮಜಲುಗಳಲ್ಲಿ, ದುಡಿಯುವ ಸದವಕಾಶಗಳು ಒದಗಿದವು. ಹಾಗಾಗಿ, ಇಥಿಯೋಪಿಯಾದ ಚಕ್ರವರ್ತಿ ಹೈಲಿ ಸೆಲಾಸಿ ಅವರೊಂದಿಗೆ ಮತ್ತು, ಕೀನ್ಯಾ, ಉಗಾಂಡ, ಟಾನ್‌ಜಾನಿಯಾ, ಮಲಾವಿ ಹಾಗು ಸುಡಾನ್‌ ದೇಶಗಳ ಅಧ್ಯಕ್ಷರುಗಳೊಂದಿಗೆ ರಸಮಯ ಘಳಿಗೆಗಳನ್ನು ಕಳೆಯುವ ಸುಯೋಗ ಅವರ ಪಾಲಿಗೆ ದೊರಕಿತ್ತು. ಆಫ್ರಿಕಾದಲ್ಲಿದ್ದಾಗ, ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರಿಗೆ ತಮ್ಮ ನೈರೋಬಿಯ ಮನೆಯಲ್ಲಿ ಆತಿಥ್ಯ ಮಾಡುವ ಅವಕಾಶ ಅವರಿಗೆ ದೊರಕಿದ್ದನ್ನು ಅವರು ಅತ್ಯಂತ ಅಕ್ಕರೆಯಿಂದ ನೆನೆಯುತ್ತಾರೆ.

ಕರ್ನಾಟಕದಿಂದ ಬರುವ ಯಾವ ಸಂಗೀತಗಾರರನ್ನಾಗಲೀ, ನಟರನ್ನಾಗಲೀ, ಕವಿಗಳನ್ನಾಗಲೀ, ಅವರು ಭೇಟಿಯಾಗಲು ಉತ್ಸುಕರಾಗುತ್ತಾರೆ. ಅವರೊಂದಿಗೆ ಬೆರೆತು, ಅವರನ್ನು ಗೌರವಿಸುವ ಸತ್ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. 1985ರಲ್ಲಿ ನಾನು ಕಾವೇರಿಯ ಅಧ್ಯಕ್ಷನಾಗಿದ್ದಾಗ, ಗಣೇಶನ ಹಬ್ಬದ ಕಾರ್ಯಕ್ರಮಕ್ಕೆ ಮೊಟ್ಟಮೊದಲ ಬಾರಿಗೆ ವಿದ್ವಾನ್‌ ಆರ್‌.ಕೆ. ಶ್ರೀಕಂಠನ್‌ ಅವರ ಸಂಗೀತ ಕಚೇರಿಯನ್ನು ಏರ್ಪಡಿಸಿವ ಸದವಕಾಶ ನನಗೆ ದೊರಕಿತ್ತು. ಆಗ ಕೆಜಿವಿ ಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ತಮ್ಮ ಸಹಪಾಠಿಗಳಾಗಿದ್ದ ಶ್ರೀಕಂಠನ್‌ ಅವರನ್ನು ಸ್ವಗೃಹದಲ್ಲಿ ಇಟ್ಟುಕೊಂಡು ಸತ್ಕರಿಸಿದ್ದಷ್ಟೇ ಅಲ್ಲ, ಸಂಗೀತಗಾರರಿಗೆ ಮತ್ತು ಅವರ ಪಕ್ಕವಾದ್ಯದವರಿಗೆ ಕೊಡಬೇಕಾದ ಸಂಭಾವನೆಯ ಗೌರವಧನವನ್ನೂ ಸಹ ಕೊಡಲು ಮುಂದೆ ಬಂದಿದ್ದನ್ನು ನಾನು ಎಂದೂ ಮರೆಯಲಾರೆ.

ಕೃಷ್ಣ ಅವರು ಕಾವೇರಿಯನ್ನು ಕಟ್ಟಿ ಬೆಳೆಸಿದ ಹಿರಿಯರಲ್ಲಿ ಒಬ್ಬರು. ರಾಜಧಾನಿಯ ಶ್ರೀ ಶಿವ ವಿಷ್ಣು ದೇವಾಲಯದ ಕೆಲಸದಲ್ಲೂ ಉತ್ಸಾಹದಿಂದ ಭಾಗವಹಿಸಿದ್ದಾರೆ. ಹಿರಿಯರಲ್ಲಿ ಗಣ್ಯರಾಗಿ, ಕಾವೇರಿ ಕನ್ನಡ ಸಂಘದ ಕನ್ನಡ ಚಟುವಟಿಕೆಗಳಿಗೆ ಸ್ಫೂರ್ತಿದಾಯಕರೂ ಮಾರ್ಗದರ್ಶಿಗಳೂ ಆಗಿದ್ದಾರೆ. ಇವರ ಬಾಳ ಪಯಣದಲ್ಲಿ ಸದಾ ಇವರೊಂದಿಗೆ ಇದ್ದು ಜೀವನಕ್ಕೆ ಅರ್ಥವನ್ನೂ ಬಲವನ್ನೂ ತುಂಬಿದ ತಮ್ಮ ಧರ್ಮಪತ್ನಿ ಲೀಲಾ ಅವರೊಂದಿಗೆ ಚೆವೀ ಚೇಸ್‌ನಲ್ಲಿ ಇವರ ವಾಸ. ಮೊಮ್ಮಕ್ಕಳಾದ ರೇಷ್ಮಾ ಮತ್ತು ಅಂಜಲಿ ಅವರ ಮೇಲೆ ಇವರಿಗೆ ತುಂಬಾ ಅಕ್ಕರೆ. ತಮ್ಮ ಜೀವನದ ಅನುಭವಗಳನ್ನು ಶ್ರೀಮಂತಗೊಳಿಸಿರುವ ನೂರಾರು ಸ್ವಾರಸ್ಯಕರ ಘಟನೆಗಳನ್ನು ತಿಳಿಹಾಸ್ಯ ಬೆರೆತ ಅವರದೇ ಶೈಲಿಯಲ್ಲಿ ಚಿತ್ರ ಬಿಡಿಸಿದಂತೆ ಬಣ್ಣಿಸುವುದನ್ನು ಅವರ ಬಾಯಿಂದಲೇ ಕೇಳಬೇಕು!

ಸಹಸ್ರಚಂದ್ರಗಳನ್ನು ಕಂಡ ನಮ್ಮ ‘ಜೆಂಟಲ್‌ಮನ್‌’ ಕೆಜಿವಿ ಆರೋಗ್ಯದಿಂದ ಬಾಳುತ್ತಾ ಶತಕವನ್ನು ಬಾರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ, ವಿರಮಿಸುವೆ ಮುಂದಿನ ಕಂತಿನ ವರೆಗೆ.

Advertisements

About sujankumarshetty

kadik helthi akka

Posted on ಆಗಷ್ಟ್ 19, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಜಾಲತರಂಗ - ಡಾ|| ಮೈ.ಶ್ರೀ. ನಟರಾಜ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: