ಸಂಗೀತಶಾಸ್ತ್ರದ ಬಗ್ಗೆ ವಸಂತಮಾಧವಿಯವರ ಒಂದು ಉಪಯುಕ್ತ ಪುಸ್ತಕ – Inside View : Theory of Music

ಮನುಷ್ಯನ ಲೆಕ್ಕದಲ್ಲಿ ಸ್ವರಗಳು ಏಳೇ ಆದರೂ ಅವುಗಳಿಂದ ಉದ್ಭವವಾಗುವ ರಾಗಗಳಿಗೆ ಲೆಕ್ಕವಿಲ್ಲ. ಸ್ವರವೆಂದರೇನು?, ರಾಗವೆಂದರೇನು? ಎಂಬ ಹಲವು ಹತ್ತು ಪ್ರಶ್ನೆಗಳನ್ನು ಕೇಳುವ ಬುದ್ಧಿಯುಳ್ಳ ಮನುಷ್ಯ ಹುಟ್ಟುವ ಮೊದಲೇ ಸಂಗೀತ ಹುಟ್ಟಿ ಆಗಿತ್ತು. ಪ್ರಕೃತಿಯಲ್ಲಿ ಪ್ರತಿನಿತ್ಯ ಧ್ವನಿಸುವ, ಗಿಡ-ಮರ-ಬಳ್ಳಿಗಳಲ್ಲಿ ಸ್ಫುರಿಸುವ, ಗಾಳಿ-ಮಳೆ-ಮಿಂಚು-ಗುಡುಗುಗಳ ಪಕ್ಕವಾದ್ಯಗಳಿಂದ ವಿಜೃಂಭಿಸುವ ಪಶು-ಪಕ್ಷಿಗಳ ಸಂಗೀತ ಯಾವ ಶಾಸ್ತ್ರಕ್ಕೂ ಕಟ್ಟುಬೀಳದಿದ್ದರೂ, ಆ ದನಿಗಳಲ್ಲಿ ದುಃಖ, ಆನಂದ, ಶಾಂತ, ಭಕ್ತಿ, ಭಯ, ಉನ್ಮಾದ, ರೌದ್ರ, ಸ್ನೇಹ, ಕರುಣ ಮುಂತಾದ ರಸಗಳು, ಭಾವಗಳು ವ್ಯಕ್ತವಾಗುತ್ತವೆ ಎಂಬುದು ಅನುಭವವೇದ್ಯವಾದದ್ದು.

ಯಾವ ಶಾಸ್ತ್ರೀಯಸಂಗೀತವನ್ನೂ ಕಲಿಯದ ಹಸುಕಾಯುವ ಗೊಲ್ಲ, ಕುರಿಕಾಯುವ ಕುರುಬ, ನೇಗಿಲನ್ನು ಹಿಡಿದು ಉಳುವ ರೈತ, ಗದ್ದೆಯಲ್ಲಿ ನಾಟಿ ಮಾಡುವ ಹೆಣ್ಣಾಳುಗಳು, ಭಾರಹೊರುವ ಕೆಲಸಗಾರರು, ಇವರಲ್ಲನೇಕರು ಮಧುರವಾಗಿ ಹಾಡುತ್ತಾರೆ, ಅವರಲ್ಲನೇಕರಿಗೆ ತಾಳದ ಪರಿವೆ ಅದ್ಭುತವಾಗಿರುತ್ತದೆ ಎಂಬುದನ್ನು ನಾವು ಗಮನಿಸಬಹುದು. ವ್ಯಾಕರಣದ ಜ್ಞಾನವಿಲ್ಲದ ಮಗು ಹಿರಿಯರು ಆಡುವ ಮಾತುಗಳನ್ನು ಕೇಳಿ ಕೇಳಿ, ಲಿಂಗ, ವಚನ, ವಿಭಕ್ತಿಗಳನ್ನು ಯಾವಗೊಂದಲವೂ ಇಲ್ಲದೇ ಪ್ರಯೋಗಿಸುವಹಾಗೆ, ಧ್ವನಿಯುಳ್ಳವರು ಶಾಸ್ತ್ರಜ್ಞಾನವಿಲ್ಲದಿದ್ದರೂ ಸುಮಧುರವಾಗಿ ಹಾಡಬಹುದು. ಅಂತು, ನಮಗೆ ತಿಳಿದೋ ತಿಳಿಯದೆಯೋ, ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಡುತ್ತದೆ. ಆದರೆ, ಸಂಗೀತವನ್ನು ಸುಮ್ಮನೇ ಕೇಳುವುದಕ್ಕೂ ಅದರ ರಹಸ್ಯಗಳನ್ನು ಅಭ್ಯಸಿಸಿ ಸವಿಯುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ.

Theory of Music by Vasanthamadhaviಎಲ್ಲರಿಗೂ ಸಂಗೀತ ಕಲಿಯಲಾಗುವುದಿಲ್ಲ. ಆದರೂ, ನಮ್ಮ ಜೀವನದ ಅವಿಭಾಜ್ಯ ಅಂಗವಾದ ಸಂಗೀತದ ಬಗ್ಗೆ, ಆಳವಾಗಿ ಅಲ್ಲದಿದ್ದರೂ ಅಲ್ಪ-ಸ್ವಲ್ಪವಾದರೂ ಕಲಿಯಬೇಕು. ಅಂಥ ಕಲಿಕೆಗೆ ಸಹಾಯವಾಗಲು ಸರಳವಾದ ಭಾಷೆಯಲ್ಲಿ ಬರೆದ ಪುಸ್ತಕಗಳಿರಬೇಕಲ್ಲವೇ? ಸಂಗೀತ ಶಾಸ್ತ್ರವೆಂಬುದು ಒಂದು ಮಹಾಸಾಗರವಿದ್ದಂತೆ. ಅದರಬಗ್ಗೆ ನೂರಾರು ಪುಸ್ತಕಗಳು ಹತ್ತಾರು ಭಾಷೆಗಳಲ್ಲಿ ಪ್ರಕಟವಾಗಿವೆ. 2005ರಲ್ಲಿ ಪ್ರಕಟವಾದ, ಸಂಗೀತವಿದುಷಿ ಶ್ರೀಮತಿ ವಸಂತಮಾಧವಿ ಅವರ Theory of Music ಎಂಬ (ಇಂಗ್ಲಿಷ್‌ ಭಾಷೆಯಲ್ಲಿರುವ) ಪುಸ್ತಕ ಗಮನಾರ್ಹವಾದುದು.

ಶ್ರೀಮತಿ ವಸಂತಮಾಧವಿ ಅವರು, ಸಂಗೀತ ವಿದುಷಿ, ಅಧ್ಯಾಪಕಿ, ಮತ್ತು ವಾಗ್ಗೇಯಕಾರ್ತಿ ಕೂಡ. ರಾಗಶ್ರೀ ಸಂಗೀತ ಕಾಲೇಜಿನ ಪ್ರಾಂಶುಪಾಲರು. ಹಲವಾರು ಯುವಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸಂಗೀತ ಕಲಿಸಿ, ನಿರಂತರ ಆಭ್ಯಾಸ ಮಾಡುವಂತೆ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ್ದಾರೆ. ‘ ಸುಬ್ಬರಾಮಯ್ಯ ಫೈನ್‌ ಆರ್ಟ್ಸ್‌ ಟ್ರಸ್ಟ್‌’ ಎಂಬ ಸಂಸ್ಥೆಯನ್ನು ತಮ್ಮ ಗುರುಗಳ ಹೆಸರಿನಲ್ಲಿ ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷವೂ ಬೆಂಗಳೂರಿನಲ್ಲಿ ಸಂಗೀತ-ನೃತ್ಯ-ನಾಟಕಗಳ ಹಬ್ಬವನ್ನು ನಡೆಸುತ್ತ, ಅನೇಕ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನೂ ಬೆಳೆಸಿಕೊಂಡಿದ್ದಾರೆ. ಸ್ವಯಂ ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ವೆಂಕಟೇಶ್ವರನನ್ನು ಕುರಿತ ಇವರ ಒಂಬತ್ತು ಕೃತಿಗಳಲ್ಲಿ ಹಲವು ಅಪರೂಪದ ರಾಗಗಳನ್ನು ಬಳಸಿಕೊಂಡಿವೆ. ನವಗ್ರಹಗಳನ್ನು ಕುರಿತು ರಚಿಸಿದ ನವಗ್ರಹಕೃತಿಗಳು ಮತ್ತು ಎಲ್ಲ ವಿಭಕ್ತಿ ಪ್ರಯೋಗಗಳನ್ನೂ ಉಪಯೋಗಿಸಿ ರಚಿಸಿರುವ ಅಷ್ಟದಿಕ್ಪಾಲಕರ ಕೃತಿಗಳು ಪಂಡಿತರ ಗಮನ ಸೆಳೆದಿವೆ. ಪ್ರೌಢ ಮತ್ತು ವಿದ್ವತ್‌ ವಿಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಹಲವು ಪುಸ್ತಕಗಳನ್ನೂ ಇವರು ಬರೆದು ಪ್ರಕಟಿಸಿದ್ದಾರೆ.

‘ಥಿಯರಿ ಆಫ್‌ ಮ್ಯೂಸಿಕ್‌’ ಎಂಬ ಈ ಪುಸ್ತಕದಲ್ಲಿ, ಸುಮಾರು ಇನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ಹದಿಮೂರು ಅಧ್ಯಾಯಗಳಲ್ಲಿ ಸರಳ ವಿಷಯಗಳಿಂದ ಹಿಡಿದು ಅತ್ಯಂತ ಗಹನವಾದ ವಿಷಯಗಳನ್ನು ಪ್ರಸ್ತುತ ಪಡಿಸಿದ್ದಾರೆ. ಅನೇಕ ಗ್ರಂಥಗಳನ್ನು ಓದಲಾಗದವರಿಗೆ ಒಂದೇ ಎಡೆಯಲ್ಲಿ ಅನೇಕ ವಿಷಯಗಳನ್ನು ಸಂಗ್ರಹಿಸಿ ಸರಳವಾಗಿ, ನೇರವಾಗಿ ಎಲ್ಲರಿಗೂ ತಿಳಿಯುವಂತೆ ವಿವರಿಸಿರುವುದೇ ಈ ಪುಸ್ತಕದ ವೈಶಿಷ್ಟ್ಯ. ಮೊದಲ ಎರಡು ಅಧ್ಯಾಯಗಳಲ್ಲಿ, ನಾದ, ಸ್ವರ, ಶ್ರುತಿ, ರಾಗ, ಸ್ಥಾಯಿ ಮುಂತಾದ ಪದಗಳಿಗೆ ಸರಳವಾದ ಆದರೆ ಖಚಿತವಾದ ವಿವರಣೆಗಳನ್ನು ಒದಗಿಸಿದ್ದಾರೆ. ಸಂಗೀತಶಾಸ್ತ್ರದ ಬಗ್ಗೆ ನಡೆಯುವ ಎಲ್ಲ ಚರ್ಚೆಗಳನ್ನು ಅನುಸರಿಸಲು ಈ ತಾಂತ್ರಿಕ ಶಬ್ದಗಳ ಅರಿವು ಬಲು ಮುಖ್ಯ.

ಮೂರನೆಯ ಅಧ್ಯಾಯ ‘ತಾಳ’ದ ವಿಷಯಕ್ಕೆ ಮುಡಿಪಾಗಿದೆ. ಅಲ್ಲಿ ಕೊಟ್ಟಿರುವ ಮುವ್ವತ್ತೈದು ತಾಳಗಳ ಪಟ್ಟಿಯಲ್ಲಿ ಸಾಧಾರಣವಾಗಿ ಎಲ್ಲರೂ ಕೇಳಿರಬಹುದಾದ ತಾಳಗಳ ಹೆಸರುಗಳಿವೆ. ಆದರೆ, ಎಪ್ಪತ್ತೆರಡು ಮೇಳಕರ್ತ ರಾಗಗಳಂತೆ ಅವೇ ಹೆಸರುಗಳುಳ್ಳ ‘ಮೇಳ-ತಾಳ’ಗಳೂ ಇವೆ ಎಂಬುದು ಎಲ್ಲರಿಗೂ ತಿಳಿಯದ ವಿಷಯ! ಅಭಂಗ, ಅನ್ನಲೀಲ, ಆನಂದ ಮುಂತಾದ ತಾಳಗಳ ಹೆಸರುಗಳು ಎಷ್ಟು ಜನರಿಗೆ ಗೊತ್ತು? ಇಲ್ಲಿ ಉದ್ಧರಿಸಲ್ಪಟ್ಟ ಸಂಗೀತ ಚಂದ್ರಿಕೆಯಲ್ಲಿರುವ ನೂರೆಂಟು ತಾಳಗಳ ಪಟ್ಟಿಯಲ್ಲಿ ಆ ಹೆಸರುಗಳನ್ನು ನಾವು ಓದಬಹುದು.

ಕಿವಿಗೆ ಇಂಪಾದ ಧ್ವನಿಯ ಕಂಪನದಿಂದ ಉದ್ಭವವಾಗುವುದೇ ‘ಗಮಕ’. ಗಮಕಕ್ಕೆ ಸಂಬಂಧಪಟ್ಟ ಚರ್ಚೆಗೆ ನಾಲ್ಕನೇ ಅಧ್ಯಾಯ ಮೀಸಲು. ಎಪ್ಪತ್ತೆರಡು ಜನಕರಾಗಗಳ ವಿವರಗಳು ಮತ್ತು ಪಟ್ಟಿಯಲ್ಲಿ ಅವುಗಳ ಸ್ಥಾನವನ್ನು ಕಂಡುಹಿಡಿಯುವ ‘ಕಟಪಯಾದಿ’ ಸೂತ್ರವನ್ನು ಉಪಯೋಗಿಸುವ ವಿಧಾನಗಳನ್ನು ಐದನೇ ಅಧ್ಯಾಯದಲ್ಲಿ ಕಾಣಬಹುದು. ಆರನೆಯ ಅಧ್ಯಾಯ ಅತ್ಯಂತ ಉಪಯುಕ್ತ ಅಧ್ಯಾಯಗಳಲ್ಲಿ ಒಂದು. ಇಲ್ಲಿ, ಸರಳೆ (ಸ್ವರಾವಳಿ), ವರಸೆಗಳು, ಅಲಂಕಾರ, ಜತಿಸ್ವರ ಮತ್ತು ಸ್ವರಜತಿ (ಸ್ವರಜತಿಯಲ್ಲಿ ಸಾಹಿತ್ಯವಿರುತ್ತದೆ, ಜತಿಸ್ವರದಲ್ಲಿ ಕೇವಲ ಸ್ವರಗಳು), ವರ್ಣ, ಕೃತಿ, ಕೀರ್ತನ, ಜಾವಳಿ, ತಿಲ್ಲಾನ, ದರು, ಪದ, ಪ್ರಬಂಧ ಮೊದಲಾದ ರಚನೆಗಳು ಮತ್ತು ಅವುಗಳ ಸ್ವರೂಪಗಳನ್ನು ಉದಾಹರಣೆಗಳ ಸಹಿತ ವಿವರಿಸಲಾಗಿದೆ.

‘ರಾಗಲಕ್ಷಣ’ಗಳ ಸುದೀರ್ಘ ಮಂಡನೆಯ ಏಳನೆಯ ಅಧ್ಯಾಯ ಪ್ರೌಢ ವಿದ್ಯಾರ್ಥಿಗಳಿಗೆ ಬಹೂಪಯೋಗಿ. ನೂರೈವತ್ತು ರಾಗಗಳ ವಿವರಣೆ ಇಲ್ಲಿದೆ. ಉದಾಹರಣೆಗೆ ‘ಧರ್ಮವತಿ’ಯನ್ನು ತೆಗೆದುಕೊಳ್ಳೋಣ. ಇದು 59ನೇ ಮೇಳ, ಹತ್ತನೇ ಚಕ್ರದ ಐದನೇ ರಾಗ. ಪ ಮತ್ತು ಧ ಗ್ರಹಸ್ವರಗಳು, ರಿ, ಮ ಮತ್ತು ನಿ ಅಂಶಸ್ವರಗಳು, ಸ, ರಿ, ಪ, ನಿ ಗಳು ನ್ಯಾಸಸ್ವರಗಳು. (ಗ್ರಹಸ್ವರ, ಅಂಶಸ್ವರ ಮತ್ತು ನ್ಯಾಸಸ್ವರಗಳ ತಿಳಿವಳಿಕೆಗೆ ಎರಡನೇ ಅಧ್ಯಾಯಕ್ಕೆ ಮತ್ತೊಮ್ಮೆ ಭೇಟಿ ಕೊಟ್ಟರೆ ಒಳ್ಳೆಯದು!) ಆಧಾರಷಡ್ಜದ ವರ್ಗಾವಣೆಯ ಮೂಲಕ, ರಿ ಯಿಂದ ಚಕ್ರವಾಕವನ್ನೂ, ಪ ದಿಂದ ಸರಸಾಂಗಿಯನ್ನೂ ಪಡೆಯಬಹುದು. ತ್ರಿಸ್ಥಾಯಿಗಳ ಈ ರಾಗ, ದಿನದ ಎಲ್ಲ ಸಮಯಗಳಲ್ಲೂ ಹಾಡಬಹುದಾದದ್ದು, ಭಕ್ತಿ ಮತ್ತು ಕರುಣಾ ರಸಗಳಿಗೆ ಹೇಳಿ ಮಾಡಿಸಿದ್ದು, ಇತ್ಯಾದಿ, ಇತ್ಯಾದಿ ವಿವರಗಳೇ ಅಲ್ಲದೇ ಮುಖ್ಯವಾದ ಸ್ವರಪ್ರಸ್ತಾರಗಳು ಮತ್ತು ಹಲವು ಪ್ರಮುಖ ವಾಗ್ಗೇಯಕಾರರು ಈ ರಾಗದಲ್ಲಿ ರಚಿಸಿರುವ ಜನಪ್ರಿಯ ಕೃತಿಗಳ ಪಟ್ಟಿ, ಇವೆಲ್ಲವೂ ಸುಮಾರು ಹತ್ತು ಸಾಲುಗಳಲ್ಲಿ ಅಡಕವಾಗಿವೆ ಎಂದರೆ ಈ ಅಧ್ಯಾಯದ ಪ್ರಾಮುಖ್ಯತೆಯನ್ನು ಓದುಗರೇ ಊಹಿಸಿಕೊಳ್ಳಬಹುದು!

ಎಂಟನೇ ಅಧ್ಯಾಯದಲ್ಲಿ ಸಂಗೀತಶಾಸ್ತ್ರದ ಬಗ್ಗೆ ನಮಗೆ ದೊರಕುವ ಅನೇಕ ಪ್ರಮುಖ ಗ್ರಂಥಗಳ ಸಂಕ್ಷಿಪ್ತ ವರ್ಣನೆ ದೊರಕುತ್ತದೆ. ಭರತನ ನಾಟ್ಯಶಾಸ್ತ್ರ, ಮತಂಗನ ಬೃಹದ್ದೇಶಿ, ಸೋಮೇಶ್ವರನ ಅಭಿಲಷಿತ ಚಿಂತಾಮಣಿ, ಪಾರ್ಶ್ವದೇವನ ಸಂಗೀತ ಸಮಯಸಾರ, ಶಾರ್ಙ್ಗದೇವನ ಸಂಗೀತ ರತ್ನಾಕರ, ವಿದ್ಯಾರಣ್ಯರ ಸಂಗೀತಸಾರ, ವೆಂಕಟಮುಖಿನ್‌ ಬರೆದ ಚತುರ್ದಂಡಿ ಪ್ರಕಾಶಿಕ, ರಾಮಾನುಜಯ್ಯನ ಸಂಗೀತ ಸರ್ವಾರ್ಥಸಾರ ಸಂಗ್ರಹಮು, ಗೋವಿಂದಾಚಾರ್ಯನ ಸಂಗೀತ ಚೂಡಾಮಣಿ, ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿ, ಇವುಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಗಳು ಮತ್ತು ಇನ್ನೂ ಹತ್ತಿಪ್ಪತ್ತು ಗ್ರಂಥಗಳ ಪಟ್ಟಿ ಸಹ ಇಲ್ಲಿ ಸಿಗುತ್ತದೆ.

ಒಂಬತ್ತನೇ ಅಧ್ಯಾಯದಲ್ಲಿ ಮನೋಧರ್ಮಸಂಗೀತದ ಬಗ್ಗೆ ಸುದೀರ್ಘ ಪ್ರಬಂಧವಿದೆ. ‘ರಾಗ-ತಾನ-ಪಲ್ಲವಿ’ಯ ವಿಷಯದಲ್ಲಿ ಆಸಕ್ತರಾದವರಿಗೆ ಇದು ಮುಖ್ಯವಾದ ಪಾಠ. ಹತ್ತನೇ ಅಧ್ಯಾಯದಲ್ಲಿ ಸಂಗೀತದ ವಿವಿಧ ಶಾಖೆಗಳ ಚರ್ಚೆ ಇದೆ. ಜಾನಪದ, ಭಕ್ತಿಸಂಗೀತ, ಹರಿಕಥಾಕಾಲಕ್ಷೇಪದಲ್ಲಿ ಸಂಗೀತದ ಸ್ಥಾನ, ನಾಟ್ಯಕ್ಕೆ ಬೇಕಾದ ಸಂಗೀತ, ವಚನಸಾಹಿತ್ಯವನ್ನು ಅಳವಡಿಸಿಕೊಂಡ ಶಾಸ್ತ್ರೀಯ ಸಂಗೀತ ಮುಂತಾದ ಸ್ವಾರಸ್ಯಕರವಾದ ವಿಚಾರಧಾರೆಯಿದೆ. ವಾದ್ಯಗಳಿಗೇ ಮುಡಿಪಾದ ಹನ್ನೊಂದನೇ ಅಧ್ಯಾಯದಲ್ಲಿ ಹತ್ತಾರು ಜನಪ್ರಿಯವಾದ್ಯಗಳ ಸಚಿತ್ರ ವಿವರಣೆ ಇದೆ. ವಾಗ್ಗೇಯಕಾರರ ಜೀವನಚರಿತ್ರೆ ಮತ್ತು ಅವರ ಶೈಲಿ ಹಾಗು ಕೊಡಿಗೆಗಳನ್ನು ಪ್ರಸ್ತುತಪಡಿಸುವ ಹನ್ನೆರಡನೇ ಅಧ್ಯಾಯದಲ್ಲಿ ಅನೇಕ ಸ್ವಾರಸ್ಯಕರವಾದ ಕಥೆಗಳು ಮತ್ತು ಪ್ರಮುಖರ ಸಂಕ್ಷಿಪ್ತ ಜೀವನಚರಿತ್ರೆ ದಾಖಲಾಗಿದೆ. ಸಂಗೀತಾಭ್ಯಾಸಿಗಳಿಗೆ ಮತ್ತು ಸಂಗೀತ ರಸಿಕರಿಗೆ ಇಲ್ಲಿ ನಮೂದಿಸಿರುವ ವಿಚಾರಗಳು ಉತ್ತಮ ಸಾಮಗ್ರಿ. ಹದಿಮೂರನೆಯ ಮತ್ತು ಕೊನೆಯ ಅಧ್ಯಾಯದಲ್ಲಿ ಸಂಗೀತ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ಇತರ ವಿಷಯಗಳ ಬಗ್ಗೆ (ಭೌತಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಗಣಿತ, ಶಬ್ದಶಾಸ್ತ್ರ) ಕಿರು ಟಿಪ್ಪಣಿಗಳ ರೂಪದಲ್ಲಿ ಕೆಲವು ಉಪಯುಕ್ತ ಮಾಹಿತಿಗಳಿವೆ.

ಸಂಗೀತಕ್ಕೆ ಸಂಬಂಧಪಟ್ಟ ಅನೇಕ ಗ್ರಂಥಗಳು ಸಂಸ್ಕೃತದಲ್ಲಿರುವುದರಿಂದ ಆ ಭಾಷೆ ತಿಳಿಯದವರಿಗೆ ಅವುಗಳ ಉಪಯೋಗ ವಾಗುವುದಿಲ್ಲ. ಎಲ್ಲಾ ಮುಖ್ಯವಿಷಯಗಳೂ ಒಂದೇ ಪುಸ್ತಕದಲ್ಲಿ ದೊರಕದೇ ಇರುವುದರಿಂದ ಮತ್ತು ಹಲವಾರು ಪುಸ್ತಕಗಳ ಪ್ರತಿಗಳು ಮುಗಿದು ಸುಲಭವಾಗಿ ಸಿಕ್ಕದೇ ಇರುವುದರಿಂದ, ಒಂದೇ ಪುಸ್ತಕದಲ್ಲಿ ಅನೇಕ ಮುಖ್ಯವಿಚಾರಗಳನ್ನು ಕಲೆಹಾಕಿ ವಸಂತಮಾಧವಿಯವರು ಸಂಗೀತದ ವಿದ್ಯಾರ್ಥಿಗಳಿಗೆ ಮಹದುಪಕಾರ ಮಾಡಿದ್ದಾರೆ. ಮೂಲ ಸಂಸ್ಕೃತಗ್ರಂಥಗಳ ಹಲವು ವಿವರಣಾತ್ಮಕ ಶ್ಲೋಕಗಳನ್ನು ಯಥೋಚಿತವಾಗಿ ಉದ್ಧರಿಸಿರುವುದು ಈ ಪುಸ್ತಕದ ಮತ್ತೊಂದು ವಿಶೇಷ.

ಒಟ್ಟಿನಲ್ಲಿ, ಹೆಚ್ಚು ಶ್ರಮ ಮತ್ತು ಶ್ರದ್ಧೆಯಿಂದ ಶ್ರೀಮತಿ ವಸಂತಮಾಧವಿಯವರು ಬರೆದಿರುವ (ಪ್ರಿಸಮ್‌ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಕಟಿಸಿರುವ) ಈ ಪಠ್ಯಪುಸ್ತಕ ವಿದ್ಯಾರ್ಥಿಗಳಿಗೂ, ಆಸಕ್ತರಿಗೂ, ಪಂಡಿತರಿಗೂ ಮತ್ತು ಪಾಮರರಿಗೂ ಉಪಯುಕ್ತ ಪುಸ್ತಕ. ಸ್ವತಃ ಸಂಗೀತಜ್ಞನಲ್ಲದಿದ್ದರೂ, ಸಂಗೀತದಲ್ಲಿ ಅಭಿರುಚಿಯುಳ್ಳವನಾಗಿ, ಇತರ ಸಮಾನಾಸಕ್ತರಿಗೆ ಸಹಾಯವಾಗಬಹುದೆಂಬ ದೃಷ್ಟಿಯಿಂದ ಈ ಪುಸ್ತಕದ ಸಮೀಕ್ಷೆ ಮಾಡಿದ್ದೇನೆ. (ಇದು ವರದಿಯೇ ಹೊರತು ವಿಮರ್ಶೆ ಖಂಡಿತ ಅಲ್ಲ!) ಅದರಲ್ಲಿರುವ ಶಾಸ್ತ್ರದ ಬಗ್ಗೆ ನಿಖರವಾದ ಅಭಿಪ್ರಾಯವನ್ನು ಪ್ರಕಟಪಡಿಸಲು ಬೇಕಾದ ಪರಿಕರ ನನ್ನಲ್ಲಿಲ್ಲವೆಂಬ ಸತ್ಯಾಂಶವನ್ನು ಓದುಗರಿಗೆ ನೆನಪಿಸುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.

ವಿ.ಸೂ : ಈ ಪುಸ್ತಕವನ್ನು ಖರೀದಿಸ ಬಯಸುವವರು ಶ್ರೀಮತಿ ವಸಂತಮಾಧವಿಯವರನ್ನು ನೇರವಾಗಿ vasanthamadhavi@upavan.comನಲ್ಲಿ ಸಂಪರ್ಕಿಸಬಹುದು.

ಪುಸ್ತಕದ ವಿವರ :

Theory of Music
Author : Vasanthamadhavi
PRISM BOOKS PVT LTD
ISBN:81-7286-355-1
Price in India Rs 225/-

Advertisements

About sujankumarshetty

kadik helthi akka

Posted on ಆಗಷ್ಟ್ 19, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಜಾಲತರಂಗ - ಡಾ|| ಮೈ.ಶ್ರೀ. ನಟರಾಜ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: