‘ಡಿ ವಿ ಜಿ’ ಅವರ ‘ಅಂತಃಪುರ ಗೀತೆಗಳು’(ಭಾಗ -2) – D.V.Gundappas Anthapura geetegalu(Part 2)

ಇನ್ನು ಮುಂದೆ ಆಯ್ದ ಹತ್ತು ಗೀತೆಗಳನ್ನು ಕೇಳಿ ಆನಂದಿಸೋಣ.

(1) ಶುಕ ಸಖಿ

ಮದನಿಕೆ ಪ್ರೀತಿಯ ಗಿಣಿಯೊಂದನ್ನು ಸಾಕಿದ್ದಾಳೆ. ಇದು ಸಾಧಾರಣ ಹಕ್ಕಿಯಲ್ಲ, ಕಲಿಸಿದನು ಉಲಿಯುವ ಗಿಣಿ. ಆಹಾ ಸುಂದರಿ ಎಂದು ಹೇಳಿಕೊಟ್ಟರೆ ಅದೂ ಕೂಡ -ಆಹಾ ಸುಂದರಿ ಎನ್ನುತ್ತದೆ! ಮನುಷ್ಯನ ಭ್ರಮೆಗೆ ಮತ್ತಷ್ಟು ಪಿತ್ಥ ಏರಿಸಲು ಇನ್ನೇನು ಬೇಕು ಹೇಳಿ? ಕವಿ ಮನುಷ್ಯನ ದೌರ್ಬಲ್ಯಕ್ಕೆ ಮರುಗುತ್ತಾರೆ. ‘ಸರಸವಾಡೆ ಕೆಳೆಯನ್‌ ಎತ್ತಲರಸಿ ತಂದೆಯೇ?’ ಆಟವಾಡಲು ಎಲ್ಲಿಂದ ಹುಡುಕಿ ತಂದೆ ಎಂದು ಕೇಳುತ್ತಾರೆ.

‘ನುಡಿಯ ಕೇಳ್ವರ್‌ ಇರದೇ ಮನಸು ರೋಸಿ ಹೋದುದೇ?’ ಮನುಷ್ಯನಿಗೆ ಎಲ್ಲ ಇದ್ದು ತನ್ನ ಮಾತನ್ನು ಕೇಳುವವರು ಯಾರೂ ಇಲ್ಲದಿದ್ದಾಗ ಚಿಂತಾಜನಕವಾದ ಪರಿಸ್ಥಿತಿ ಉಂಟಾಗುತ್ತದೆ. ಅಂಥಾ ಸಂದರ್ಭದಲ್ಲಿ ಇಂಥಾ ಒಂದು ಅರಗಿಣಿಯನ್ನು ಸಾಕಿಬಿಟ್ಟರೆ ಸರಿ, ಒಳ್ಳೊಳ್ಳೆ ಮಾತುಗಳನ್ನು ಹೇಳಿಕೊಟ್ಟು ಹೊಗಳಿಸಿಕೊಳ್ಳ ಬಹುದಲ್ಲವೇ? ಕಲಿಸಿದ್ದನ್ನು ಮಾತ್ರ ಹೇಳಿ ಒಪ್ಪಿಸುವ ಈ ಗಿಣಿ ಸತ್ಯವನ್ನಂತೂ ನುಡಿಯುವುದಿಲ್ಲ. ನಿಜವಾಗಿ ನಿನ್ನ ಮನಸನ್ನು ತಿಳಿಯಬಲ್ಲವ ಅವನೊಬ್ಬನೇ, ಚೆನ್ನಕೇಶವ ಎಂದು ಮದನಿಕೆಗೆ ಜ್ಞಾಪಿಸುತ್ತಾರೆ. ಇಡೀ ಜಗತ್ತಿನ ಸೌಂದರ್ಯಕ್ಕೆ ಕಾರಣನಾದ ಆ ಪರಮಾತ್ಮನಲ್ಲದೇ ಮತ್ತಾರು ನಿನ್ನ ಸೊಬಗಿಗೆ ಕಾರಣರು? ಎಂದು ಕೇಳುತ್ತಾರೆ.

ಮತ್ತೊಂದು ಭಾವ ಕೂಡ ಈ ಶಿಲ್ಪದಲ್ಲಿ ಅಡಗಿದೆ. ಗಂಡ ಅಥವಾ ಪ್ರೇಮಿ ತಪ್ಪು ಮಾಡಿದಾಗ ಅವನೊಂದಿಗೆ ಮಾತು ಬಿಟ್ಟು ಮೌನವನ್ನಾಚರಿಸಿ ಮೂರನೇ ಮಾಧ್ಯಮದ ಮೂಲಕ ಮಾತನಾಡುವ, ಸಂದೇಶ ಕಳಿಸುವ ಹೆಣ್ಣಿನ ಚಾಳಿ ಗಂಡಸರಿಗೆಲ್ಲ ಗೊತ್ತೇ ಇರಬೇಕು. ‘ವಿಕಟವ ಗೈದನೇ ವಲ್ಲಭನ್‌, ಅಕಳಂಕಿತೆ, ಸೈಸು,’ ಪ್ರಿಯಕರ ತಪ್ಪು ಮಾಡಿದರೂ ಅದನ್ನು ಸಹಿಸಿಕೊಂಡಿರುವ ಔದಾರ್ಯ ಹೆಣ್ಣಿಗಿರಬೇಕೆಂಬ ಬುದ್ಧಿವಾದದ ಸೂಚನೆಯೂ ಇಲ್ಲಿದೆ.

ಈಗ ಕೇಳಿ: ಶುಕ ಸಖಿ, ರಾಗ-ಹಂಸಧ್ವನಿ, ತಾಳ ರೂಪಕ.

(2) ಮುರಜಾಮೋದೆ

Darpana Sundari - Shilabalikeಈ ಮದನಿಕೆಯ ಕೈಯ್ಯಲ್ಲೊಂದು ಢಮರುಗ, ಅದನ್ನು ತಲೆಯ ಮೆಲೆತ್ತಿ ಹಿಡಿದು ಕೋಲಿನಿಂದ ತಾಳ ತಟ್ಟುತ್ತಾ ಇದ್ದಾಳೆ. ‘ಡಕ್ಕೆಯ ಶಿರಕೆತ್ತಿ ತಾಳಗೋಲಿಂ ತಟ್ಟಿ, ತಕ್ಕಿಟ ಧಿಮಿಕಿಟ ತಕಝಣುರೆನಿಸಿ, ಕುಕ್ಕುತೆ ಚರಣವ ಕುಲುಕುತೆ ಕಾಯವ, ಸೊಕ್ಕಿದ ಕುಣಿತವ ಕುಣಿವೆ ನೀನೆಲೆ ಬಾಲೆ, ಏನೀ ಮಹಾನಂದವೇ ಓ ಭಾಮಿನಿ, ಏನೀ ಸಂಭ್ರಮದಂದವೇ, ಬಲ್ಚಂದವೇ.’

ಇಲ್ಲಿನ ವ್ಯಂಗ್ಯವನ್ನು ಗಮನಿಸಿ. ‘ಬಲ್‌ ಚಂದವೇ’ ನೃತ್ಯದ ಆಮೋದದಿಂದ ಜೀವನದ ಉನ್ಮಾದವನ್ನ, ಉನ್ಮತ್ತತೆಯನ್ನ ಪ್ರದರ್ಶಿಸುತ್ತಿರುವ, ಕಾಲನ್ನು ಕುಕ್ಕುತ್ತಾ, ಮೈಯನ್ನು ಬಳುಕಿಸಿತ್ತಿರುವ ಈ ಸಂಭ್ರಮಕ್ಕೆ ಕಾರಣವೇನೆಂದರೆ, ‘ಆರೋ ನಿನ್ನ ಹೃದಯಾಗಾರದಿ ನರ್ತಿಸಿ ಮಾರಶೂರತೆಯನ್ನ ಪ್ರಚಾರಿಸುತಿರ್ಪನ್‌ ಅಂದರೆ, ಕಾಮಪ್ರಚೋದನೆ ನಡೆದಿದೆಯೇ ಎಂಬ ಅನುಮಾನ.’ ಇಲ್ಲಿ ಪ್ರೇಮಕ್ಕಿಂತ ಕಾಮವೇ ಹೆಚ್ಚಾಗಿದೆ, ಅದು ಸಲ್ಲದು ಅನ್ನುವ ಸೂಚನೆ ಇದೆ. ನೃತ್ಯದಲ್ಲಿ ಕಾಮುಕತೆ ಅಂದರೆ ‘ಸಿಡಕ್ಟಿವ್‌ ಎಮ್ಫಸಿಸ್‌’ ಹೆಚ್ಚಾದಾಗ ಆಗುವ ಆಭಾಸವನ್ನು ಕುರಿತು ಹೇಳುವ ಮಾತಿದು. ಅವಳಿಗೆ ತಿಳುವಳಿಕೆಯ ಜೊತೆಗೆ ಒಂದಿಷ್ಟು ಎಚ್ಚರಿಕೆಯನ್ನೂ ಕೊಡುತ್ತಾರೆ. ‘ಸ್ಮೇರವದನ ನಮ್ಮ ಚನ್ನಕೇಶವರಾಯ ನಗುಮೊಗದ ಕೇಶವ ಓರೆಗಣ್ಣಿನಿಂದ ನೋಡುತ್ತಿದ್ದಾನೆ, ಜೋಕೆ!

ಈ ಶಿಲ್ಪವನ್ನು ನೋಡಿ, ಮನಸ್ಸಿನಲ್ಲೆ ಕುಣಿತದ ಜತಿಗಳನ್ನ ಹೇಳಿಕೊಳ್ಳಿ : ಝಣಜ್ಝಣತ್ಕ ಕಿಂಕಿಣೀ, ಢಣಢಣತ್ಕ ಢಕ್ಕಿಣೀ, ಸ್ವನ್ನೋತ್ತರಂಗಿತಾಂಗಿನೀ, ಮೃಣಾಲ ಲೋಲ ನರ್ತಿನೀ.

ಇದೋ ಕೇಳಿ : ಮುರಜಾಮೋದೆ, ರಾಗ ಕಮಾಚ್‌, ತಾಳ, ಆದಿ.

(3) ಮಂಜು ಕಬರೀ

ಈ ಮದನಿಕೆಯ ಸೌಂದರ್ಯದ ರಹಸ್ಯ ಅವಳ ಜಡೆ. ‘ಇವಳು ಯಾರು ಬಲ್ಲೆ ಏನು? ಇವಳ ಹೆಸರ ಹೇಳಲೇನು, ಇವಳ ದನಿಗೆ ತಿರುಗಲೇನು, ಇವಳು ಏತಕೋ ಬಂದು ನನ್ನ ಸೆಳೆದಳು’ ನೆನಪಿರಬಹುದು, ಅಲ್ಲಿಯೂ ಅವಳ ಜಡೆಯೇ ಆಕರ್ಷಣೆ. ಸುಂದರವಾದ ಕೇಶರಾಶಿಗೆ, ಮತ್ತು ತರಿಸುವ ಕಾಶ್ಮೀರಾಗರು ಕೇಶ ತೈಲ ಉಜ್ಜಿಕೊಂಡು ಇದೀಗ ಮಿಂದು ಬಂದಿದ್ದಾಳೆ ಶುಭ್ರಕಾಂತಿಯಿಂದ. ಜಡೆಯ ತುದಿಯಿಂದ ನೀರು ತೊಟ್ಟಿಕ್ಕುತ್ತಿರುವುದನ್ನು ಗಮನಿಸಿದಿರಾ? ಇಷ್ತೇ ಸಾಲದೇ ಗಂಡನ್ನು ಮುಗ್ಗರಿಸಿ ಕೆಡವಲು? ಅವಳು ಸ್ಮಿತಾಧರಿ! ಇನ್ನೇನು ನಗುತ್ತಾಳೆ ಅನ್ನುವ ನಿರೀಕ್ಷೆಯನ್ನುಂಟುಮಾಡುವ ಆ ತುಟಿಗಳನ್ನು ಸ್ವಲ್ಪ ಗಮನವಿಟ್ಟು ಪರೀಕ್ಷಿಸಿ. ಇವಳ ತಲೆಯ ಆಭರಣಗಳೋ ಕಿರೀಟದ ನವರತ್ನಗಳಂತಿವೆ. ‘ವಾಸನೆಗಳ ಕಟ್ಟಿ ನಾಗಪಾಶವ ಸುತ್ತಿದ್ದಾಳೆ.’ ಇಲ್ಲಿ ವಾಸನೆ ಎಂಬುದಕ್ಕೆ ಎರಡರ್ಥ, ಒಂದು ಕನ್ನಡದ ಸುವಾಸನೆ ಮತ್ತೊಂದು ಸಂಸ್ಕೃತದ ವಾಸನೆ ಅಂದರೆ ವಿಷಯವಾಸನೆ. ನಾಗಪಾಶ ಹಾಕಿದರೆ ಮುಗಿಯಿತು, ಮೂಳೆ ಮುರಿಯುವ ಬಿಗಿತ. ಹೆಣ್ಣಿನ ಮೋಹಪಾಶದ ಬಿಗಿತ ಅದು!

ಕವಿ ಕೇಳುತ್ತಾರೆ, ಕೇಶವನನ್ನು ಮೋಹಪಾಶದಿಂದ ಬಿಗಿಯೋದಕ್ಕೆ ಮೋಸದ ಹೆರಳೇ? ಇವಳೇನು, ವಿಗ್‌ ಧರಿಸಿದ್ದಾಳ? ಕಾರಿರುಳುನ ಕಪ್ಪು ಮೋಡದಂಥ ಮೋಸದ ಹೆರಳಿನಿಂದ ನಾಗಪಾಶ ಹಾಕುವುದನ್ನ ಕವಿ ಒಪ್ಪುವುದಿಲ್ಲ.

ಕೇಳೋಣ: ಮಂಜು ಕಬರೀ, ರಾಗ ನಾಟಕುರಂಜಿ, ತಾಳ ಮಿಶ್ರಚಾಪು.

(4) ಜಗನ್ಮೋಹಿನಿ

ಈ ಹಿಂದೆ ನೋಡಿದ ಮದನಿಕೆಯರು ಸುಂದರಿಯರು ನಿಜ, ಆದರೆ, ಅವರೆಲ್ಲ ಕೇವಲ ಮನುಷ್ಯಮಾತ್ರದವರು. ಮಾನವಸೌಂದರ್ಯವೇ ಮತ್ತುತರಿಸುವಂತಿರುವಾಗ, ಇನ್ನು ಭಗವಂತನೇ ಸುಂದರಿಯ ರೂಪ ತಳೆದು ಬುವಿಗೆ ಬಂದುಬಿಟ್ಟರೆ?

ಹಿಂದೆ ರಾಕ್ಷಸರಿಗೂ ದೇವತೆಗಳಿಗೂ ಅಮರರಾಗಬೇಕೆಂಬ ಆಸೆ ಉಂಟಾಯಿತಂತೆ. ಅದಕ್ಕಾಗಿ ಅವರು ಅಮರತ್ವವನ್ನು ಅನುಗ್ರಹಿಸುವ ಅಮೃತಕ್ಕಾಗಿ ಸಮುದ್ರಮಥನಮಾಡಬೇಕಯಿತು. ಪರ್ವತರಾಜನೇ ಕಡೆಗೋಲಾದ, ಮಹಾಸರ್ಪ ವಾಸುಕಿಯೇ ಹಗ್ಗವಾದ. ನೀರಿನಲ್ಲಿ ಪರ್ವತ ಮುಳುಗದಂತೆ ನೋಡಿಕೊಳ್ಳಲು ಮಹಾವಿಷ್ಣು ಕೂರ್ಮಾವತಾರಿಯಾದ. ದೇವಾಸುರರು ಹಾವನ್ನು ಹಗ್ಗದಂತೆ ಜಗ್ಗಾಡಿ ಸಮುದ್ರದಲ್ಲಿದ್ದ ಅಮೃತವನ್ನು ವಿಷವನ್ನು ಬೇರ್ಪಡಿಸಿದರು. ತಕ್ಷಣ ಅಮೃತಕ್ಕಾಗಿ ಕಚ್ಚಾಟವಾಯಿತು. ಸಮಸ್ಯೆಯ ಪರಿಹಾರಕ್ಕೆ ಇದ್ದಾನಲ್ಲ, ನಮ್ಮ ಮಹಾವಿಷ್ಣು? ಮೋಹಿನಿಯ ಅವತಾರ ತಾಳಿಬಂದ! ದೇವತೆಗಳಿಗೆ ಮಾತ್ರ ಅಮೃತವನ್ನು ಹಂಚಿ ರಕ್ಕಸರಿಗೆ ಮಣ್ಣುತಿನ್ನಿಸಿದಳಲ್ಲವೇ ಆ ಮೋಹಿನಿ? ಅವಳೇ ಜಗನ್ಮೋಹಿನಿ. ಅವಳೆಂತಹ ಮೋಹಿನಿ ಎಂದರೇ ಆತ್ಮಸಂಯಮಕ್ಕೆ ಹೆಸರಾದ ಮಹಾದೇವ, ಕಾಮನನ್ನೇ ಸುಟ್ಟ ಪರಮೇಶ್ವರ ಅವಳ ರೂಪಕ್ಕೆ ಮರುಳಾದ.

ಅಂದರೆ, ಭಗವಂತ ಜಗನ್ಮೋಹನ, ಜಗನ್ಮೋಹಿನಿ ಎರಡೂ ಅವನೇ. ಅವನ ಮಾಯಾಜಾಲದಲ್ಲಿ ಸತ್ಯವೂ ಸ್ವಾಹಾ ಸೌಂದರ್ಯವೂ ಸ್ವಾಹಾ. ಹೀಗೆ ಸತ್ಯ, ಶಿವ ಮತ್ತು ಸುಂದರವನ್ನ ಒಂದುಗೂಡಿಸುವ ಚೆಲುವ ಕೇಶವನ ಸೊಬಗನ್ನು ಭಟ್ಟಿ ಇಳಿಸುವ ಈ ಗೀತೆಯನ್ನು ಕೇಳಿ.

ಜಗನ್ಮೋಹಿನಿ, ರಾಗ: ವರಾಳಿ, ತಾಳ: ರೂಪಕ.

(5) ಕೀಶರುಷ್ಟೆ

ಭಗವದ್‌ಸೃಷ್ಟಿಯಲ್ಲಿ ಕೇವಲ ಸೌಂದರ್ಯ ಮಾತ್ರವೇ ಇದೆ ಎಂದು ನಂಬಲಾಗದು. ಈ ವಿಶ್ವ ಅವನ ಲೀಲೆ, ಅಂದರೆ, ಆಟ! ಆಟ ಎಂದಮೇಲೆ, ಗಾಂಭೀರ್ಯದ ಜೊತೆಜೊತೆಗೇ, ಹುಡುಗಾಟ, ಹುಚ್ಚಾಟ, ಚೇಷ್ಟೆ, ಇವೆಲ್ಲವೂ ಇದ್ದೇ ಇರುತ್ತವೆ. ಚೇಷ್ಟೆ ಎಂದಾಗ ನೆನಪಾಗುವುದು, ಕಪಿ. ಅದಕ್ಕೇ ನಾವು ಮಕ್ಕಳನ್ನು ಗದರಿಸುವಾಗ ‘ಕಪಿಚೇಷ್ಟೆ ಸಾಕು’ ಎನ್ನುವುದು!

ಈ ಮದನಿಕೆಯನ್ನು ನೋಡಿ, ಆಕೆಗೆ ಸ್ವಲ್ಪ ಕೋಪ ಬಂದಿರುವ ಹಾಗಿದೆ. ಏಕೆ ಕೋಪ? ಕಪಿಯೊಂದು ಬಂದು ಅವಳ ಅಂಗವಸ್ತ್ರವನ್ನು ಎಳೆದುಹಾಕಿದೆ. ಕಪಿಗೂ ಹೆಣ್ಣಿನ ಅಂಗವನ್ನ ಅದರ ಮೂಲರೂಪದಲ್ಲೇ ಕಂಡು ಸವಿಯುವ ಚಪಲ. ಈ ಕಾರಣದಿಂದಲೇ ಮನುಷ್ಯನ ಮನಸ್ಸನ್ನು ಕಪಿಗೆ ಹೋಲಿಸುತ್ತಾರೆ.

ಈ ಮುಜುಗರದ ಸಂದರ್ಭವನ್ನೂ ಕವಿ ಉಪಯೋಗಿಸಿಕೊಂಡು ಮದನಿಕೆಗೆ ಸಮಾಧಾನ ಹೇಳುತ್ತಾರೆ. ‘ಉಡಿಗೆಯನ್‌ ಎಳೆಯೆ, ನಿನ್ನ ಒಡಲಿನ ವಯ್ಯಾರದ ಬೆಡಗು ಕಣ್ಗಳಿಗೆ ನೂರ್ಮಡಿ ಸೊಗಸಾಯ್ತೇ?’ ಎಂದು ವ್ಯಂಗ್ಯವಾಡುತ್ತಾರೆ. ಯಾರ ಕಣ್ಣಿಗೆ ನೂರ್ಮಡಿ ಸೊಗಸಾಯ್ತು? ಆ ಕಪಿಯ ಚೇಷ್ಟೆಯಿಂದ ರಸಿಕ ಕೇಶವನ ಕಣ್ಣಿಗೆ ನಿನ್ನ ಸೌಂದರ್ಯದರ್ಶನವಾಯ್ತು, ‘ಬಿಡು ದೋಷದೃಷ್ಟಿಯ,’ ಎನ್ನುತ್ತಾರೆ. ಸಾಂತ್ವನ ಮಾಡುತ್ತ, ಈ ಹುಡುಗಾಟದ ಹುಚ್ಚು, ಕೇಶವನಿಗೆ ಮೆಚ್ಚು ಎಂದು ತಿಳಿಯಹೇಳುತ್ತಾರೆ, ಈ ಕಪಿಯ ಚೇಷ್ಟೆಗೂ ಆದಿಕೇಶವನೇ ಮೂಲ ಎಂಬುದನ್ನೂ ನೆನಪಿಸುತ್ತಾ.

ಮುಂದೆ ಕೇಳಿ, ಕೀಶರುಶ್ಟೆ, ಕಾಂಬೋಜಿ ರಾಗದಲ್ಲಿ ಮತ್ತು ಆದಿತಾಳದಲ್ಲಿ.

(6) ನೀಲಾಂಬರೆ

ಪಾಪ, ನೋಡಿ, ಈ ಮದನಿಕೆಯ ಸೀರೆಯ ನೆರಿಯಲ್ಲಿ ಚೇಳೊಂದು ಬಂದು ಸೇರಿಕೊಂಡಿದೆ. ಅದನ್ನು ಕಂಡು ಬೆಚ್ಚಿ ಭಯಭ್ರಾಂತಳಾಗಿ ಸೀರೆಯನ್ನು ಕೊಡವಿ ಚೇಳನ್ನು ಕೆಡಹಲು ಯತ್ನಿಸುತ್ತಿರುವ ಸುಂದರ ಶಿಲ್ಪವಿದು. ಚೇಳಿಗೆ ಹೆಣ್ಣಿನ ಸೀರೆಯ ನೆರಿಗೆಯಡಿ ಬಚ್ಚಿಟ್ಟುಕೊಳ್ಳುವ ರಸಿಕಬುದ್ಧಿಯನ್ನು ಹೇಳಿಕೊಟ್ಟವರಾರು? ‘ಬೆಚ್ಚಿಸಿ ನಿನ್ನನು ನಿಶ್ಚೇಲಗೈದು, ತನ್ನಕ್ಷಿಗೆ ಸಿಂಗಾರದೂಟವನುಣಿಸೆ, ವೃಶ್ಚಿಕಮಂತ್ರವನುಚ್ಚರಿಸಿದನೇನೆ, ಅಚ್ಚು-ಮೆಚ್ಚಿನ ನಿನ್ನ ಮಾಯಾವಿ ಕೇಶವ’ ಎಂಬ ಉತ್ತರವನ್ನು ಕವಿಯೇ ಕೊಡುತ್ತಾರೆ.

ಈ ಶಿಲ್ಪದ ವೈಶಿಷ್ಟ್ಯವನ್ನು ಕವಿ ನಾಲ್ಕೇ ಮಾತುಗಳಲ್ಲಿ ವಿವರಿಸುತ್ತಾರೆ, ‘ದೃಷ್ಟ ವೃಶ್ಚಿಕಾ, ನಷ್ಟ ವೇಷ್ಟಿಕಾ, ಸ್ಪಷ್ಟ ಕನ್ಯಕಾ, ಹೃಷ್ಟ ಲೌಕಿಕಾ’ ಅಂದರೆ, ಚೇಳನ್ನು ಕಂಡವಳು ಬಟ್ಟೆಯನು ಕಳಚಿದಳು, ಮೈಯ್ಯ ತೋರಿದಳು, (ನೀಲಾಂಬರೆಯಾಗಿ) ಕಣ್ಣ ತಣಿಸಿದಳು. ನೀಲಾಂಬರೆ ಎಂಬುದಕ್ಕೆ ಎರಡರ್ಥ, ನೀಲಿ ಸೀರೆಯನುಟ್ಟವಳು, ಹಾಗೂ ನೀಲಿ ಅಂಬರವೇ ಬಟ್ಟೆಯಗಿ ಉಳ್ಳವಳು!

ಮುಂದಿನ ಗೀತೆ, ನೀಲಾಂಬರೆ, ಇದಕ್ಕೆ ಮತ್ಯಾವ ರಾಗ? ನೀಲಾಂಬರಿ. ತಾಳ ಮಿಶ್ರಚಾಪು.

(7) ಕೊರವಂಜಿ

ಈ ಮದನಿಕೆ ಒಂದು ಪ್ರಸಿದ್ಧ ನೃತ್ಯಗೀತೆಯಾಗಿ ನೂರಾರುಬಾರಿ ನೂರಾರು ನಗರಗಳಲ್ಲಿ ರಂಗವನ್ನೇರಿಬಿಟ್ಟಿದ್ದಾಳೆ. ‘ಡಮರು ಢಣರು ಢಂಢಣರೆನೆ, ಚಿಟಿಕೆ ತಾಳ ಚಟಚಟವೆನೆ, ಕುಲುಕಿ ಬಳುಕಿ ಬಳ್ಳಿಯೊಡನೆ, ಒಲಿದು ನಲಿದು ಕುಣಿದ ಲಲನೆ-ನಟನವಾಡಿದಳ್‌, ತರುಣಿ ನಟನವಾಡಿದಳ್‌.’

ಹಳ್ಳಿಯಿಂದ ಹಳ್ಳಿಗೆ ಕಾಲ್ನಡಗೆಯಲ್ಲಿ ಹೋಗಿ, ಮನೆಮನೆಗಳ ಮುಂದೆ ನಿಂತು ಚಿಟಿಕೆ ತಾಳ ಹಾಕುತ್ತ, ಬುಡುಬುಡಿಕೆ ಮಾಡುವ ಮುಗ್ದ ಕೊರವಂಜಿಯೂ ಕೇಶವೇಶನ ದಾಸಿಯೇ ಆಗುತ್ತಾಳೆ. ಇವಳ ನೃತ್ಯದಲ್ಲಿ ಈಶತಾಂಡವವಿದೆ, ರಾಸಲೀಲೆಯ ರಭಸವಿದೆ, ಆಶೆನೋಟದ ರತಿಲೀಲೆಯೂ ಇದೆ, ಅದರ ಜೊತೆಗೇ, ಕೇಶವನಲ್ಲಿ ಅಚಲ ಭಕ್ತಿ ಮತ್ತು ಮುಗ್ದಮನಸ್ಸಿನ ಸೇವಾಭಾವನೆಯೂ ತುಂಬಿದೆ.

ಇನ್ನು ಗೀತೆಯನ್ನು ಕೇಳೋಣ, ಕೊರವಂಜಿ, ಹುಸೇನಿ ರಾಗ ಮತ್ತು ಏಕ ತಾಳ.

(8) ನಾಟ್ಯ ಸುಂದರಿ

ಇವಳೊಬ್ಬಳು ಸುಂದರ ನರ್ತಕಿ. ಇವಳು ತನ್ನ ವಲ್ಲಭನಿಗಾಗಿ ನಿರೀಕ್ಷಣೆಯಲ್ಲಿದ್ದಾಳೆ, ಇನ್ನೇನು ಬಂದಾನು ಎಂಬ ಆಶಾಭಾವದ ಜೊತೆಗೇ, ಇನ್ನೂ ಏಕೆ ಬರಲಿಲ್ಲ ಎಂಬ ತವಕವೂ ಸೇರಿದೆ. ಈ ಗೀತೆಯಲ್ಲಂತೂ ಕವಿಯ ವರ್ಣನೆ ತುಂಬಾ ಸೊಗಸಾಗಿದೆ. ಇವಳ ಮುಖ, ಝಲ್ಲರೀ ಝಂಕೃತಾಮೊದ ಮುಗ್ಧಾನನಮ್‌ (ಝಲ್ಲರೀ ವಾದ್ಯದ ಝಂಕಾರದಿಂದ ಮುದಗೊಂಡ ಮುಖಕಮಲ ಇವಳದ್ದು), ಮಲ್ಲಿಕಾ ಮಾಲಿಕಾಲಂಕೃತ ಉರಸ್ಥಲಂ (ಮಲ್ಲಿಗೆಯ ಹಾರ ಎದೆಯಮೇಲೆ ಶೋಭಿಸುತ್ತಿದೆ), ವಲ್ಲರಾಗಾರದೊಳ್‌ ಚೇಟಿಕಾ ನರ್ತನಮ್‌, ವಲ್ಲಭ ಸ್ವಾಗತಾನಂದ ಸಂವೀಕ್ಷಣಮ್‌ (ವಲ್ಲಭ ಬರುತ್ತಾನೆ, ಅವನ ಸ್ವಾಗತಕ್ಕೆ ಒಂದು ಸುಂದರ ನೃತ್ಯವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಾ ಇರುವ) ಇವಳ ಒಂದು ಸುಂದರ ಭಂಗಿ ಅತ್ಯಂತ ಆಕರ್ಷಣೀಯವಾಗಿದೆ, ಗಮನಿಸಿ.

ಕವಿಹೃದಯ ಅವಳೊಂದಿಗೆ ಸರಸವಾಡುತ್ತದೆ. ಸುಂದರಿ ನೀನೇ, ಸುಂದರಿ ನೀನೆ ಎಂದು ಹಲುಬುತ್ತಾರೆ, ಅಷ್ಟೇ ಅಲ್ಲ, ಕಂದರ್ಪ ಸಂದೇಶ ದುರಂಧರಿಯೂ ನೀನೆ, ಮನ್ಮಥನ ಸಂದೇಶವನ್ನು ಹೊತ್ತ ಪುಷ್ಪವೂ ನೀನೆ ಎಂದು ಮನಃಪೂರ್ವಕವಾಗಿ ಮೆಚ್ಚುತ್ತಾರೆ. ಅವಳು ಮಾಡಬಹುದಾದ ಸ್ವಾಗತನೃತ್ಯವನ್ನು ಊಹಿಸಿಕೊಳ್ಳುತ್ತಾ, ಪದಕರ ವಿನ್ಯಾಸ (ಕೈ ಕಾಲ್ಗಳ ಚಲನೆ), ವದನಾಧರ ಹಾಸಗಳು (ಮುಖ ಮತ್ತು ತುಟಿಯಲ್ಲಿ ವ್ಯಕ್ತವಾಗುವ ನಗೆ), ಮೃದುನಯನ ವಿಕಾಸಗಳು (ಹಿತವಾದ ಕಣ್ಣಿನ ಅರಳುವಿಕೆ), ಮತ್ತು ಹೃದಯಾಂಗ ವಿಲಾಸಗಳು (ವಕ್ಷಸ್ಥಳದ ಕುಲುಕುಗಳು) ಇವನ್ನೆಲ್ಲ ಬಣ್ಣಿಸುತ್ತಾರೆ. ಬಳ್ಳಿಯಂಥ ಅವಳ ಶರೀರ ಗೀತಮಾಧುರ್ಯಕ್ಕೆ ತಲೆದೂಗುತ್ತ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಈ ನರ್ತಕಿಯನ್ನು ವಸಂತ ಋತುವಿನ ಸುಂದರ ಸುಪ್ರಭಾತದಂದು ಅರಳುವ ಒಂದು ಸುಂದರ ಪುಷ್ಪಕ್ಕೆ ಹೋಲಿಸುವುದನ್ನು ನೋಡಿದರೆ, ಗುಂಡಪ್ಪನವರು ಈ ಸುಂದರಿಗೆ ಮಾರುವೋಗಿದ್ದರೋ ಎಂಬ ಅನುಮಾನ ಬಾರದೇ ಇರದು! ಆದರೆ ಅಂಥ ಅನುಮಾನಕ್ಕೆ ಆಸ್ಪದ ಕೊಡದೇ, ಕೇಶವವಿಭುಸಂಪ್ರೀತೆ ಎನ್ನುತ್ತ ಅವಳ ಸೌಂದರ್ಯವನ್ನು ಶಿಲ್ಪಿಯಂತೆ ತಾವೂ ಚೆನ್ನಕೇಶವನಿಗೆ ಸಮರ್ಪಿಸುವುದನ್ನು ಮಾತ್ರ ಮರೆಯುವುದಿಲ್ಲ.

ಈಗ ಕೇಳೋಣ, ನಾಟ್ಯಸುಂದರಿ, ರಾಗ ಬೇಗಡೆ, ತಾಳ ರೂಪಕ.

(9) ಮುಕುರ ಮುಗ್ಧೆ

‘ನಾರ್ಸಿಸ್ಟಿಕ್‌ ಬಿಹೇವಿಯರ್‌’ ಅಥವಾ ಆತ್ಮರತಿ ಎಂಬುದು ಮನುಷ್ಯನ ಹಳೇ ರೋಗಗಳಲ್ಲಿ ಒಂದು, ಅದರಲ್ಲೂ ಹೆಣ್ಣಿನ ಅತಿದೊಡ್ಡ ದೌರ್ಬಲ್ಯಗಳಲ್ಲಿ ಇದೂ ಒಂದು. ತನ್ನ ಮುಖವನ್ನು ಕನ್ನಡಿಯಲ್ಲಿ ಕಂಡು ತನಗೆ ತಾನೇ ಮರುಳಾಗುವ ಮೋಹವನ್ನು ಶಿಲ್ಪಿ ಈ ಕೆತ್ತನೆಯಲ್ಲಿ ಜೀವಂತಗೊಳಿಸಿದ್ದಾನೆ.

ಹುಣ್ಣಿಮೆ ಚಂದಿರನಂತಿರುವ ಈ ಮದನಿಕೆಯ ಗುಂಡುಮುಖದಲ್ಲಿ ಮೆರೆಯುತ್ತಿರುವ ಹಣೆಯಮೇಲೆ, ಕುಂಕುಮವನ್ನಿಟ್ಟುಕೊಳ್ಳಲು ಬಲಗೈಯ್ಯ ಒಂದು ಬೆರಳು ಸಿದ್ಧವಾಗಿದೆ, ಗಮನಿಸಿ. ನಟ್ಟನಡುಹಣೆಯಲ್ಲಿ ಸರಿಯಾಗಿ ಕುಂಕುಮವಿಟ್ಟುಕೊಳ್ಳಲು ಬೇಕಾದ ಕನ್ನಡಿಯನ್ನು ಎಡಗೈಯ್ಯಲ್ಲಿ ಹಿಡಿದಿದ್ದಾಳೆ. ಅರೆ, ಇದೇನಿದು? ಇವಳು ಕುಂಕುಮದ ವಿಚಾರವನ್ನೇ ಮರೆತಂತಿದೆ! ತನ್ನ ಸೌಂದರ್ಯಕ್ಕೆ ತಾನೇ ಬೆರಗಾಗಿ ಪರವಶಳಗಿದ್ದಾಳೆಯೇ?

ನಿಜವಾಗಿ ಪರವಶಳೋ, ಅಥವಾ ಇದೂ ಒಂದು ‘ಸ್ಮರತಂತ್ರ ನಯವೋ?’ ಅಂದರೆ, ಸುಮ್ಮನೆ ನಟಿಸುತ್ತ, ತನ್ನ ಇನಿಯನನ್ನು ಆಕರ್ಷಿಸಲು ಹೂಡಿದ ಮನ್ಮಥನಾಟವೊ? ‘ಎಲೆ ಸುಂದರಿ, ನಿನ್ನ ಕುಂಕುಮದೊಡೆಯ ಯಾರೆಂದು ಮರೆತೆಯ? ಸುಮ್ಮನೆ ಸಮಯ ಹಾಳುಮಾಡಬೇಡ, ನಿನಗೆ ನೀನೇ ಮೋಸ ಮಾಡಿಕೊಳ್ಳಬೇಡ. ನಿಜವಾದ ಧನ್ಯತೆ ಬೇಕಾಗಿದ್ದಲ್ಲಿ, ಬೇಗ ಕುಂಕುಮವಿಟ್ಟುಕೋ, ಆ ಕನ್ನಡಿಯನ್ನು ಅತ್ತ ತೆಗೆದಿಡು, ನೋಡು ಚೆನ್ನಕೇಶವನನ್ನ,’ ಎಂದು ಕವಿ ಎಚ್ಚರಿಸುತ್ತಾರೆ.

ಮುಂದೆ ಕೇಳಿ, ಮುಕುರಮುಗ್ಧೆ, ಕೇದಾರ ರಾಗ, ಆದಿತಾಳ.

(10) ವಿರಹಾರ್ತೆ

ಪ್ರೇಮದಲ್ಲಿ ಮಿಲನಕ್ಕೆ ಎಷ್ಟು ಪ್ರಾಮುಖ್ಯತೆ ಉಂಟೋ ಅಷ್ಟೇ ಪ್ರಾಮುಖ್ಯತೆ ವಿರಹಕ್ಕೂ ಇದೆ. ವಿರಹದಲ್ಲೇ ನಿಜವಾದ ಪ್ರೇಮದ ಅರಿವಾಗುವುದು, ವಿರಹದಲ್ಲೇ ಪ್ರೇಮದ ಉತ್ಕಟತೆ ಹೆಚ್ಚುವುದು, ವಿರಹದಲ್ಲೇ ನೈಜಪ್ರೇಮದ ಪರೀಕ್ಷೆಯಾಗುವುದು. ಈ ಮದನಿಕೆ ವಿರಹದಿಂದ ಕೊರಗಿ ಕರಗಿಬಿಟ್ಟಿದ್ದಾಳೆ. ಅವಳನ್ನು ಕಂಡು ಕವಿ ಕನಿಕರದಿಂದ ಕೇಳುತ್ತಾರೆ. ‘ನಾಥನೇಂ ಮುನಿದನೇ, ಮಾತನೇ ತೊರೆದನೇ, ಏತಕೀ ವಿರಹವೇ, ಪ್ರೀತಿಪ್ರಮೋದನೆ?’

‘ನೀನು ನಿಜವಾಗಿ ಪ್ರೀತಿಪ್ರಮೋದನೆಯೇ ಆಗಿದ್ದಲ್ಲಿ ವಿರಹಕ್ಕೇನು ಕಾರಣ? ಓಹೋ, ಪ್ರಣಯಸಲ್ಲಾಪದಲ್ಲಿ ಸ್ವಲ್ಪ ಎಲ್ಲೆಮೀರಿ ವಿನಯವನ್ನು ಬಿಟ್ಟು, ನಾಚಿಕೆಗೆಟ್ಟವಳಂತೆ ವರ್ತಿಸಿಬಿಟ್ಟೆಯಾ? ಅಥವಾ, ಯಾವ ಕಾರಣದಿಂದ ಇನಿಯನಿಗೆ ಕೋಪ ಬಂದಿದೆ, ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಹೋದೆಯ? ಅಥವಾ, ನಿನ್ನ ಪ್ರೀತಿಗೆ ಬದಲಾಗಿ ಏನಾದರೋ ಷರತ್ತು ಹಾಕಿದೆಯ? ಹೀಗೇ ಮಾಡು, ಹಾಗೇ ಮಾಡು ಎಂದೆಲ್ಲ ಪಣಗಳನ್ನೊಡ್ಡಿದೆಯ? ಹೀಗೆಲ್ಲ ಮಾಡ ಬಹುದೇ ಸುಂದರಿ? ನಿನ್ನಿನಿಯ ಯಾರು? ಅವನು ಸಾಧಾರಣನಲ್ಲ, ಅವನು ಚೆಲುವ ನಾರಾಯಣ.’

ವಿರಹಾರ್ತೆಯ ವಿರಹಾಲಾಪದ ವಿವರವವನ್ನು ಕೇಳಿ, ಖರಹರಪ್ರಿಯ ರಾಗದಲ್ಲಿ, ಮತ್ತು ಖಂಡಚಾಪು ತಾಳದಲ್ಲಿ.

Advertisements

About sujankumarshetty

kadik helthi akka

Posted on ಆಗಷ್ಟ್ 19, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಜಾಲತರಂಗ - ಡಾ|| ಮೈ.ಶ್ರೀ. ನಟರಾಜ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: