ನಮ್ಮ ಬದುಕಿದೆಯಲ್ಲ, ಅದರ ಉದ್ದೇಶವೇನು? Aim of life | Existance of God | Osho | Philosophy | Beechi | Bhat | ಬದುಕಿನ ಉದ್ದೇಶ | ಓಶೋ | ಬೀchi | ದೇವರ ಅಸ್ತಿತ್ವ

Philosopher Osho

ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ. ಹಾಗೆನ್ನುವುದಕ್ಕಿಂತ ಎಲರೂ ಒಪ್ಪುವಂಥ ಉತ್ತರವನ್ನು ಯಾರೂ ಕೊಟ್ಟಿಲ್ಲ. ಕೊಟ್ಟರೂ ಅದರಿಂದ ಎಲ್ಲರಿಗೂ ಸಮಾಧಾನ ಸಿಕ್ಕಿಲ್ಲ ಎನ್ನಬಹುದೇನೋ. ಏಕೆಂದರೆ, ಈ ಪ್ರಶ್ನೆಗೆ ಸಿಗುವ ಉತ್ತರ ಪುನಃ ಪುನಃ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕೊನೆಗೆ ಪ್ರಶ್ನೆಯೊಂದೇ ಬೃಹದಾಕಾರವಾಗಿ ಕಾಡುತ್ತದೆ. ಅನೇಕ ದಾರ್ಶನಿಕರು, ತತ್ತ್ವಜ್ಞಾನಿಗಳು ಈ ಪ್ರಶ್ನೆಯನ್ನು ಇಟ್ಟುಕೊಂಡು ಜೀವ ಸವೆಸಿದ್ದಾರೆ. ಉತ್ತರ ಸಿಗದೇ ತಮ್ಮ ಮುಂದಿನವರಿಗೆ ಈ ಪ್ರಶ್ನೆಯನ್ನು ದಾಟಿಸಿದ್ದಾರೆ. ಆದರೆ ಇದಕ್ಕೆ ಸಿಗುವ ಉತ್ತರ ಮಾತ್ರ ದಡಸೇರಿಲ್ಲ. ಹೀಗಾಗಿ ಈ ಪ್ರಶ್ನೆ ಪದೇ ಪದೆ ನಮ್ಮ ಮುಂದೆ ಈಜುತ್ತಾ ತರಂಗಗಳನ್ನು, ವೈಚಾರಿಕ ಅಲೆಗಳನ್ನು ಆಗಾಗ ಎಬ್ಬಿಸುತ್ತಿರುತ್ತದೆ.

ಬದುಕಿನ ಉದ್ದೇಶವೇನು ಎಂಬ ಪ್ರಶ್ನೆಗೆ ಝೆನ್ ಗುರುವೊಬ್ಬ `ಉದ್ದೇಶರಹಿತವಾಗಿರುವುದೇ ಬದುಕು’ ಎಂದು ಅತ್ಯಂತ ಸರಳವಾಗಿ ಸಂಕ್ಷಿಪ್ತವಾಗಿ -ಆದರೆ ಆತನ ಪ್ರಕಾರ-ಅತ್ಯಂತ ದೀರ್ಘವಾಗಿ ಉತ್ತರಿಸಿದ್ದಾನೆ. ಆದರೆ ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭಕ್ಕೆ ದಕ್ಕುವಂಥದ್ದಲ್ಲ. ಹಾಗೆಂದು ಎಷ್ಟೇ ಹಣೆ ಚಚ್ಚಿಕೊಂಡರೂ ಸಿಗುವುದಿಲ್ಲ. ಬದುಕಿನ ಉದ್ದೇಶವೇನು ಎಂಬ ಪ್ರಶ್ನೆಗೆ ಬೀchi ತಮಾಷೆಯಿಂದ ತೀಕ್ಷ್ಣ ಉತ್ತರ ನೀಡಿದ್ದರು- `ಸಾಯುವ ತನಕ ಜೀವನ ಸಾಗಿಸುವುದೇ ಬದುಕಿನ ಉದ್ದೇಶ.’ ಅಲ್ಲ ಅಂತ ಹೇಗೆ ಹೇಳ್ತೀರಿ? ಆದರೂ ಬದುಕಿನ ಉದ್ದೇಶ ಮಾತ್ರ ಪೂರ್ತಿ ಮನವರಿಕೆಯಾಗುವುದಿಲ್ಲ.

ಮತ್ತೊಬ್ಬ ಕಿಲಾಡಿ ಝೆನ್ ಗುರು ಹೇಳುತ್ತಾನೆ- `ಜೀವನದ ಉದ್ದೇಶವನ್ನು ತಿಳಿದುಕೊಳ್ಳದೇ ಬದುಕುವುದೇ ಬದುಕಿನ ಉದ್ದೇಶ.’ ಹೀಗಂದ್ರೆ ಏನು ಹೇಳಿದಂತಾದೀತು? ಇನ್ನು ಈ ಪ್ರಶ್ನೆ ಹಿಡಕೊಂಡು ಕೆಲವರಂತೂ ಪುಸ್ತಕ ಬರೆದಿದ್ದಾರೆ, ಭಾಷಣ `ಕೊರೆ’ದಿದ್ದಾರೆ, ಸಂಶೋಧನೆ ಮಾಡಿದ್ದಾರೆ, ಏನೆಲ್ಲ ಮಾಡಬಹುದೋ ಅವನ್ನೆಲ್ಲ ಮಾಡಿ ಮುಗಿಸಿದ್ದಾರೆ, ಆದರೂ ಗಿಟ್ಟಿಲ್ಲ. ಇವೆಲ್ಲ ಗೊತ್ತಿದ್ದೂ ಗೊತ್ತಿದ್ದು ಮತ್ಯಾಕೆ ಈಗ ನಿಮ್ಮ ರಾಗ ಎಂದು ಕೇಳಬಹುದು. ಕೇಳಬೇಕಾದ್ದೇ. ಆದರೆ ಉತ್ತರ ಸಿಗುವುದಿಲ್ಲ ಅಂತ ಪ್ರಶ್ನೆ ಕೇಳದೇ ಇದ್ದರೆ ಹೇಗೆ? ಉತ್ತರ ಎಲ್ಲಾದರೂ ಭೇಟಿಯಾಗಬಹುದು, ಮುಖಾಮುಖಿಯಾಗಬಹುದು ಅಥವಾ ಕಣ್ಣು ಮಿಟುಕಿಸಿ ಮಾಯವಾಗಬಹುದು. ಬದುಕಿನ ಉದ್ದೇಶವೇನು ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ಉತ್ತರ ಅಲ್ಲವಂತೆ. ಅದು ಮತ್ತೊಂದು ಪ್ರಶ್ನೆಯಂತೆ! ಹಾಗಂತ ಹೇಳಿದವರೂ ಬೀchiಯೇ. ಹೀಗೆಲ್ಲ ಅಂದ್ರೆ ಹೇಗೆ ಎಂದು ಕೇಳಿಯೂ ಉತ್ತರ ಕಂಡುಕೊಳ್ಳದಿದ್ದರೆ ಹೇಗೆ?

ಬದುಕಿನ ಬಗ್ಗೆ ಈ ಮೂಲಭೂತ ಪ್ರಶ್ನೆಯ ಇಡಗಂಟನ್ನು ಹಿಡಿದುಕೊಂಡು ತಡಕಾಡುತ್ತಿರುವಾಗ ಅಚಾನಕ್ಕಾಗಿ ಸಿಕ್ಕಿದ್ದು ಓಶೋ ಎಂದೋ ಬರೆದ The Hidden Splendor ಎಂಬ ಪುಸ್ತಕ. ಜಂಗುಹಿಡಿದ ಟ್ರಂಕಿನ ಮೈಯ ಹಾಗೆ, ಹಾಳೆಗಳೆಲ್ಲ ಪಳೆಯುಳಿಕೆಗಳ ಹಾಗೆ, ತರಚಿದ ಗಾಯದಿಂದ ಕಿತ್ತುಹೋದ ಹಾಳೆಗಳನ್ನೆಲ್ಲ ಪ್ರಯಾಸಪಟ್ಟು ಹಿಡಿದುಕೊಂಡ ಪುಸ್ತಕದ ಹಾಗೆ, ಇತ್ತೀಚೆಗೆ ಅಂಥದ್ದೊಂದು ಪುಸ್ತಕ ಸಿಕ್ಕಿತು. ಆ ಪುಸ್ತಕದೊಳಗೆ ಓಶೋ What is the aim of Life? ಎಂಬ ಅಧ್ಯಾಯ ಬರೆದಿದ್ದಾನೆ. ಈ ಪ್ರಶ್ನೆಯೆಂಬ ಪಾತರಗಿತ್ತಿಯನ್ನು ಹಿಡಿಯಲು ಪ್ರಯಾಸಪಟ್ಟ ಓಶೋ, ಪಾತರಗಿತ್ತಿ ಸಿಕ್ಕಿತೇನೋ ಎಂಬಂತಿರಲು ಅದು ಕೈಗೆ ಸಿಗದೇ ಹಾರಿಹೋಗಿ ಪುನಃ ಅದರ ಹಿಂದೆ ಬಿದ್ದು ಅನುಭವಿಸುವ ತಾಕಲಾಟವನ್ನು ಅದನ್ನು ಓದಿಯೇ ಅನುಭವಿಸಬೇಕು. ಹಾಗಾದರೆ ಕೊನೆಗೆ ಆ ಪಾತರಗಿತ್ತಿ ಸಿಕ್ಕಿತಾ? ಹಾರಿ ಹೋಯಿತಾ? ನೀವೇ ಹೇಳಬೇಕು.

ಹೀಗೊಂದು ಚಿಕ್ಕ ಬ್ರೇಕ್! ಬ್ರೇಕಿನ ಬಳಿಕ ಓಶೋ ಏನಂತಾರೆ ಕೇಳೋಣ. ಬದುಕಿನ ಉದ್ದೇಶವೇನು? ಇದು, ಎರಡೇ ಪದಗಳ, ತಕ್ಷಣವೇ ಉತ್ತರಿಸಲು ಸಾಧ್ಯವಾಗದಂಥ ಪ್ರಶ್ನೆ. ಯಾರಾದರೂ- `ನೀವು ಹೇಗೆ ಬದುಕಬೇಕು’ ಅಂತ ಆಸೆ ಪಡ್ತೀರಿ? ಈಗಿನ ಬದುಕಿನಲ್ಲಿ ನಮಗಿರುವ ಸಂಭ್ರಮವೇನು? ಸಂಕಟಗಳು ಏನೇನು ಎಂದು ಕೇಳಿದರೆ ಉದ್ದುದ್ದದ ವಿವರಣೆ ನೀಡಬಹುದು. ಆದರೆ `ಬದುಕು ಎಂದರೇನು? ಅದರ ಉದ್ದೇಶವೇನು?’ ಎಂದು ಕೇಳಿದರೆ `ಇದಮಿತ್ಥಂ’ ಎಂಬಂಥ ಉತ್ತರ ಕೊಡುವುದಂತೂ ಸುತರಾಂ ಸಾಧ್ಯವಿಲ್ಲ. ಇಲ್ಲಿ ಸ್ವಲ್ಪ ಒಗಟಿನಂಥ ಉತ್ತರ ಹೇಳುವುದಾದರೆ- `ಬದುಕುವುದನ್ನು ಹೊರತುಪಡಿಸಿದರೆ, ಬದುಕಿಗೆ ಬೇರೊಂದು ಗುರಿಯೂ ಇಲ್ಲ. ಉದ್ದೇಶವೂ ಇಲ್ಲ.’ ಆದರೆ, ಈ ಮಾತನ್ನು ಹೆಚ್ಚಿನವರು ಒಪ್ಪುವುದಿಲ್ಲ. ಬದುಕು ಎಂದರೇನು ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ಉತ್ತರಿಸುತ್ತಾರೆ. ಕೆಲವರು ಅದು `ಅಸ್ತಿತ್ವ’ ಎನ್ನುತ್ತಾರೆ. ಕೆಲವರು, ಬದುಕು ಎಂದರೆ ದೇವರು ಎಂದು ಬಣ್ಣಿಸುತ್ತಾರೆ. ಇನ್ನು ಕೆಲವರು ಬದುಕು ಎಂದರೆ ಬದುಕು ಅಷ್ಟೆ, ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುತ್ತಾರೆ.

ದೇವರಲ್ಲಿ ನಂಬಿಕೆ ಇರುವ ಜನ- `ಬದುಕೆಂದರೆ ದೇವರು’ ಎಂದು ಕರೆದರು. ದೇವರು ನಮ್ಮನ್ನು ಸೃಷ್ಟಿಸಿದ್ದಾನೆ. ಯಾವಾಗ ಏನೇನು ಆಗಬೇಕು ಎಂಬುದನ್ನೆಲ್ಲ ನಮ್ಮನ್ನು ಸೃಷ್ಟಿಸುವ ಸಂದರ್ಭದಲ್ಲಿಯೇ ಆತ ನಿರ್ಧರಿಸಿರುತ್ತಾನೆ. ಹಾಗಾಗಿ ಬದುಕು ಅವನ ಆಣತಿಯಂತೆಯೇ ಸಾಗುತ್ತದೆ. ನಾವೆಲ್ಲ ಏನಿದ್ದರೂ ನಿಮಿತ್ತ ಮಾತ್ರ ಎಂಬುದು ಅವರ ಮಾತಿನ ಅರ್ಥ. ಆದರೆ, ಬದುಕೆಂದರೆ ದೇವರು ಎಂದು; ದೇವರ ಆಣತಿಯಂತೆ ಜೀವಿಸುವುದೇ ಬದುಕಿನ ಉದ್ದೇಶವೆಂದು ಹೇಳಿದರೆ ತುಂಬ ಮಂದಿ ಅದನ್ನು ವಿರೋಧಿಸಬಹುದು ಹಾಗೂ ಈ ಮಾತಿಗೂ ವಿರೋಧ ವ್ಯಕ್ತಪಡಿಸಬಹುದು. ಏಕೆಂದರೆ, ಪ್ರಪಂಚದಲ್ಲಿರುವ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ದೇವರನ್ನು ನಂಬುವುದಿಲ್ಲ. ಕಮ್ಯುನಿಸ್ಟರು ಮಾತ್ರವಲ್ಲ, ಬೌದ್ಧರು, ಜೈನರು ಹಾಗೂ ಹಿಂದೂಗಳು ಅನಿಸಿಕೊಂಡಿರುವ ಅದೆಷ್ಟೋ ಸಾವಿರ ಜನ ದೇವರನ್ನು ನಂಬುವುದಿಲ್ಲ. ಹಾಗಾಗಿ, `ದೇವರ ಆಣತಿಯಂತೆ ಜೀವಿಸುವುದೇ ಬದುಕಿನ ಉದ್ದೇಶ’ ಎಂದರೆ ಬಹುಶಃ ಅವರು-`ನಿಮ್ಮ ದೇವರು ಎಲ್ಲಿದ್ದಾನೆ ತೋರಿಸಿ. ಆಗ ಮಾತ್ರ ನಿಮ್ಮ ಮಾತನ್ನು ಒಪ್ಪುತ್ತೇವೆ’ ಎಂದು ಸವಾಲು ಹಾಕಬಹುದು. ದೇವರು ಇದ್ದಾನೆ ಎಂದು ವಾದಿಸಬಹುದು. ಆದರೆ, ನಾಸ್ತಿಕರ ಮುಂದೆ ದೇವರಿದ್ದಾನೆ ಎಂದು ತೋರಿಸುವುದು, ಅವನ ಇರುವನ್ನು ಸಾಬೀತುಪಡಿಸುವುದು ಹೇಗೆ?

ಈ ಕಾರಣದಿಂದಲೇ- ಬದುಕಿನ ಉದ್ದೇಶವೇನೆಂದರೆ, `ನಮ್ಮ ಅಸ್ತಿತ್ವ ಸ್ಥಾಪಿಸುವುದು’ ಎಂದು ಹೇಳಿದರೆ ಸರಿ ಅನ್ನಿಸುತ್ತದೆ. ಏಕೆಂದರೆ, ಒಬ್ಬ ಮನುಷ್ಯ ಬಾಳಿ ಬದುಕಿದ ಎಂಬುದಕ್ಕೆ ಆತನ ನಂತರವೂ ಸಾಕ್ಷಿ ಸಿಗುತ್ತದೆ. ಆತ ನಿರ್ವಹಿಸಿದ ನೌಕರಿ, ಜೀವಿಸಿದ ಮನೆ, ನಿಧನಹೊಂದಿದ ಜಾಗ, ಮದುವೆಯ ಫೋಟೊ, ಆತನಿಗೆ ಆವಾಗಾವಾಗ ಒದಗಿಬಂದ ಕಷ್ಟ, ಆತನ ಸಾಧನೆ, ವೇದನೆ ಆತನ ನಂತರವೂ ಬೆಳೆಯುವ ವಂಶವಾಹಿ… ಇವೆಲ್ಲವೂ ಒಬ್ಬ ಮನುಷ್ಯ ಅಸ್ತಿತ್ವದಲ್ಲಿದ್ದ ಎಂಬ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಹಾಗಾಗಿ ಬದುಕಿನ ಉದ್ದೇಶ ಏನೆಂದರೆ ನಮ್ಮ ಅಸ್ತಿತ್ವ ಸ್ಥಾಪಿಸುವುದು ಹಾಗೂ ಅಸ್ತಿತ್ವಕ್ಕಾಗಿ ತಡಕಾಡುವುದು ಎಂದು ಹೇಳಿದರೆ, ಬಹುಶಃ ಅದನ್ನು ಹೆಚ್ಚಿನವರು ವಿರೋಧಿಸಲಾರರು ಅನಿಸುತ್ತದೆ. ಆದರೆ, ನನ್ನ ವಾದವೇ ಬೇರೆ. ನನ್ನ ಪ್ರಕಾರ ದೇವರಿಲ್ಲ ಎಂದು ಎಷ್ಟು ಸುಲಭವಾಗಿ ವಾದಿಸಿ ಗೆದ್ದುಬಿಡಬಹುದೋ, ಅಷ್ಟೇ ಸುಲಭವಾಗಿ ಯಾವುದೇ ಒಂದು ಜೀವ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ವಾದಿಸಿಯೂ ಗೆದ್ದುಬಿಡಬಹುದು. ಹಾಗಾಗಿ, ಬದುಕಿನ ಉದ್ದೇಶವೆಂದರೆ- ದೇವರು ಹೇಳಿದಂತೆ(?) ಜೀವಿಸುವುದೂ ಅಲ್ಲ; ನಮ್ಮ ಅಸ್ತಿತ್ವ ಸ್ಥಾಪಿಸಲು ಹೆಣಗಾಡುವುದೂ ಅಲ್ಲ. ಹಾಗಾಗಿ ನಮಗೆ ಖುಷಿಯಾಗುವಂತೆ, ನಮಗೆ ದೊರೆತ ಅವಕಾಶದಂತೆ, ನಮಗೆ ತೊಂದರೆಗಳು ಬಾರದಂತೆ ಎಚ್ಚರಿಕೆ ವಹಿಸಿ ಪ್ರತಿಕ್ಷಣವನ್ನೂ ಆನಂದಿಸುತ್ತಾ ಜೀವಿಸುವುದೇ ಬದುಕಿನ ಉದ್ದೇಶ ಅನ್ನುವುದು ನನ್ನ ವಾದ.

ಸ್ವಾರಸ್ಯವಿರುವುದೇ ಇಲ್ಲಿ. ಏಕೆಂದರೆ, ದೇವರಿಲ್ಲ ಎನ್ನುವುದಕ್ಕೆ ಸಾಕ್ಷಿ ತೋರಬಹುದು. ಯಾರೊಬ್ಬರ ಅಸ್ತಿತ್ವಕ್ಕೂ ಇಲ್ಲಿ ಬೆಲೆಯಿಲ್ಲ ಎಂಬುದಕ್ಕೆ ಉದಾಹರಣೆ ಕೊಡಬಹುದು. ಆದರೆ, ನಮ್ಮ ಆಯ್ಕೆಯಂತೆ ಜೀವಿಸುವುದೇ ಬದುಕು ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಏಕೆಂದರೆ, ನಾವು ಬದುಕಿದ್ದೇವೆ, ಬದುಕುತ್ತಿದ್ದೇವೆ ಎಂಬುದಕ್ಕೆ ನಮ್ಮ ಹೃದಯದ ಬಡಿತ ಸಾಕ್ಷಿ ಹೇಳುತ್ತಿರುತ್ತದೆ. ನಾವು ಬದುಕಿದ್ದೇವೆ, ನಮ್ಮ ಸುತ್ತಲಿನ ಜಗತ್ತೂ ಬದುಕಿದೆ ಎಂಬುದನ್ನು ನಮ್ಮ ಕಂಗಳು ನೋಡಿರುತ್ತವೆ. ಒಂದು ಮಧುರಭಾವಕ್ಕೆ, ಸಂತೋಷಕ್ಕೆ, ಸಂಕಟಕ್ಕೆ ಸಾಕ್ಷಿಯಾಗಿರುತ್ತವೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ಗಿಡ, ಮರ, ಪಕ್ಷಿ, ಪ್ರಾಣಿಸಂಕುಲ ಹಾಗೂ ಬೆಟ್ಟಗುಡ್ಡಗಳಲ್ಲಿ ಕೂಡ ಬದುಕಿನ ಲಕ್ಷಣಗಳು ಕಾಣಿಸುತ್ತವೆ. ಜೀವನದ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಕಳೆಯಬೇಕು ಎಂಬುದೇ ಎಲ್ಲರ ಆಸೆ. `ಬದುಕು ಬಂದ ಹಾಗೆ ಬರಲಿ’ ಎಂದು ಹೇಳಿಕೊಂಡು ಜೀವಿಸುವುದನ್ನು ಹೊರತುಪಡಿಸಿದರೆ, ಬದುಕಿಗೆ ಬೇರೊಂದು ಉದ್ದೇಶವೂ ಇಲ್ಲ; ಅರ್ಥವೂ ಇಲ್ಲ ಎನ್ನಬಹುದು. ಒಂದು ಜೀವ(ಜೀವಿ) ಬೆಳೆಯುತ್ತಿದೆ, ಅದರ ವ್ಯಾಪ್ತಿ ದೊಡ್ಡದಾಗುತ್ತಿದೆ, ಅದು ಸಂಭ್ರಮಿಸುತ್ತಿದೆ, ಹರ್ಷಿಸುತ್ತಿದೆ, ಕುಣಿದು ಕುಪ್ಪಳಿಸುತ್ತಿದೆ, ತನಗೆ ಒಗ್ಗದೇ ಇರುವುದನ್ನು ವಿರೋಧಿಸುತ್ತಿದೆ ಅಂದರೆ, ಇವೆಲ್ಲವೂ ಸಹಜ ಬದುಕಿಗೆ ಅನಾಯಾಸವಾಗಿ ಎಲ್ಲರಿಗೂ ಸುಲಭದಲ್ಲಿ ಒದಗುವ ಒಂದು ಸಾಕ್ಷಿ, ಅಷ್ಟೆ…

ವಿಪರ್‍ಯಾಸವೆಂದರೆ, ನಮ್ಮಿಷ್ಟದಂತೆ ಬದುಕುವುದೇ ಜೀವನದ ಪರಮೋದ್ದೇಶ ಎಂದು ಯಾವ ಧರ್ಮವೂ ಹೇಳಲಿಲ್ಲ. ಈ ಶ್ರಮ, ಹೋರಾಟ, ಸಂಭ್ರಮ ಇದೆಲ್ಲವೂ ಬದುಕಿನ ಗುರಿ ಸಾಧನೆಯ ಯಾತ್ರೆಯಲ್ಲಿ ಕಾಣಿಸಿಕೊಂಡ ಪ್ರಸಂಗಗಳು ಎಂದು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಕಾಣದ ದೇವರ ಕಡೆಗೆ; ಆಚಾರದ ಕಡೆಗೆ ಕೈತೋರಿಸಿ, ಬದುಕೆಂದರೆ ಇಷ್ಟೇನೇ ಎಂದು ನಂಬಿಸಲು ಪ್ರಯತ್ನಿಸಿದೆ. ಆದರೆ, ಸಾವಿರಾರು ವರ್ಷಗಳಿಂದಲೂ ಯಾರೆಷ್ಟೇ ಪ್ರಯತ್ನಿಸಿದರೂ- ಬದುಕು ಅಂದ ಮೇಲೆ ಅಲ್ಲಿ ಹೋರಾಟವಿರಬೇಕು, ಪ್ರತಿಯೊಂದು ಹೋರಾಟಕ್ಕೂ ಕಡೆಗೊಮ್ಮೆ ಯಶಸ್ಸು ಸಿಗಲೇಬೇಕು ಎಂಬುದನ್ನು ಅಲ್ಲಗಳೆಯಲು ಸಾಧ್ಯವಾಗಿಯೇ ಇಲ್ಲ. ದೇವರ ಹೆಸರಿನಲ್ಲಿ ಹಲವರನ್ನು ಹೆದರಿಸುವ, ಆ ಮೂಲಕ ಬದುಕಿನಿಂದ ವಿಮುಖರಾಗುವಂತೆ ಮಾಡುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಬಂದಿದ್ದಾರೆ ನಿಜ. ಆದರೆ, ಪ್ರತಿ ಸಂದರ್ಭದಲ್ಲೂ ಮನುಕುಲ ಅಂಥ ಸಂಕೋಲೆಗಳಿಂದ ಬಿಡಿಸಿಕೊಂಡು ಹೊರಗೆ ಬಂದಿದೆ. ಆ ಮೂಲಕ life is nothing but life ಎಂಬ ಮಾತಿಗೆಸಾಕ್ಷಿ ಒದಗಿಸಿದೆ.

ನಮ್ಮ ಎಲ್ಲ ಧರ್ಮಗಳಲ್ಲೂ ಚಾಲ್ತಿಯಲ್ಲಿರುವ ಒಂದು ಆಚರಣೆಯ ಬಗ್ಗೆ ಇಲ್ಲಿ ಹೇಳಲೇಬೇಕು. ಏನೆಂದರೆ, ಒಬ್ಬ ಸಂತನನ್ನು, ಋಷಿಯನ್ನು, ಸಾಧಕನನ್ನು -ಆತ ಬದುಕಿದ್ದ ದಿನಗಳಲ್ಲಿ ಬಹುಪಾಲು- ಎಲ್ಲ ಧರ್ಮಗಳೂ ಖಂಡಿಸುತ್ತವೆ. ಅವಮಾನಕ್ಕೆ ಈಡುಮಾಡುತ್ತವೆ. ಬಗೆಬಗೆಯಲ್ಲಿ ಹಿಂಸೆ ಕೊಡುತ್ತವೆ. ದೇಶಬಿಟ್ಟು ಓಡಿಸುತ್ತವೆ. ಆತನನ್ನು ಗಲ್ಲಿಗೇರಿಸಿ, ಕಲ್ಲು ಹೊಡೆದು ಸಾಯಿಸಿ ಎಂದೆಲ್ಲಾ ಆದೇಶಗಳನ್ನು ಹೊರಡಿಸುತ್ತದೆ. ಆದರೆ, ಬದುಕಿದ್ದಾಗ ಎಲ್ಲರ ಟೀಕೆಗೆ, ಗೇಲಿಗೆ, ಅಪಹಾಸ್ಯಕ್ಕೆ ಗುರಿಯಾಗಿದ್ದ ಮನುಷ್ಯನನ್ನು, ಸತ್ತ ತಕ್ಷಣ ದೇವರ ಪಟ್ಟಕ್ಕೆ ಏರಿಸಿಬಿಡುತ್ತವೆ. ಛೀ, ಥೂ ಅಂದ ಜನರೇ ಹುಚ್ಚರಂತೆ ಪೂಜಿಸಲು ಆರಂಭಿಸುತ್ತಾರೆ. ಸತ್ತವನ ಗೋರಿಯ ಮುಂದೆ ದರ್ಶನಕ್ಕಾಗಿ ಕ್ಯೂ ನಿಲ್ಲುತ್ತಾರೆ!

ಮನುಷ್ಯರು ಈ ರೀತಿ ಏಕಾಏಕಿ ಬದಲಾಗುವುದಾದರೂ ಏಕೆ? ಇಂಥದೊಂದು ಬದಲಾವಣೆ ಇರುವ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಮನಶ್ಶಾಸ್ತ್ರದಲ್ಲಿ ಏನಾದರೂ ಉತ್ತರವಿದೆಯೆ ಎಂದು ಯಾರೂ ಯೋಚಿಸಿದಂತೆ ಕಾಣುತ್ತಿಲ್ಲ. ನಿಜ ಹೇಳ ಬೇಕೆಂದರೆ, ಇದು ಗಂಭೀರ ಚರ್ಚೆಗೆ ಒಳಪಡಬೇಕಾದ ವಿಚಾರ. ಒಬ್ಬ ವ್ಯಕ್ತಿಯನ್ನು ಬದುಕಿದ್ದಾಗ ಖಂಡಿಸುವುದರಲ್ಲಿ, ಸತ್ತ ನಂತರ ಆರಾಧಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಸತ್ತಿರುವ ವ್ಯಕ್ತಿಯನ್ನು ನಾವು ಎಷ್ಟೇ ರೀತಿಯಲ್ಲಿ ಪೂಜಿಸಿದರೂ ಅದು ಅವನಿಗೆ ಗೊತ್ತಾಗುವುದಿಲ್ಲ. ಈ ಕಾರಣದಿಂದಲೇ ಆತ ನಮ್ಮ ಶ್ರದ್ಧೆ, ಭಕ್ತಿ ಕಂಡು ಸಂಭ್ರಮಿಸುವುದಿಲ್ಲ, ನಗುವುದಿಲ್ಲ. ಭೇಷ್ ಭೇಷ್ ಎನ್ನುವುದಿಲ್ಲ. ಏಕೆಂದರೆ, ಆತನಿಗೆ ಅಸ್ತಿತ್ವವೇ ಇರುವುದಿಲ್ಲ. ಹೇಳಲೇಬೇಕಾದ ಒಂದು ಮಾತೆಂದರೆ, ಸತ್ತವರು ಯಾವುದೇ ಪಾಪವನ್ನೂ ಮಾಡುವುದಿಲ್ಲ. ಯಾರಾದರೂ ತಮ್ಮನ್ನು ಟೀಕಿಸಿದರೂ ಕೇಳುವುದಿಲ್ಲ. ಪೂಜಿಸಿದರೂ ಆಕ್ಷೇಪಿಸುವುದಿಲ್ಲ.

ಆದರೆ, ಬದುಕಿರುವ ಸಂತನ ಮೇಲೆ ಇಂಥದೊಂದು ನಂಬಿಕೆ ಇಡಲು ಸಾಧ್ಯವಿಲ್ಲ. ಏಕೆಂದರೆ ಆತ ಇದ್ದಕ್ಕಿದ್ದ ಹಾಗೆ ಮನಸ್ಸು ಬದಲಿಸಿಬಿಡಬಹುದು. ಸಂತರು ಪಾಪಿಗಳಾಗಿ ಬದಲಾದ ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಯೇ, ಪಾಪಿಗಳು ಸಂತರಾಗಿಹೋದ ಪ್ರಸಂಗಗಳೂ ಸಾಕಷ್ಟಿವೆ. ಹಾಗಾಗಿ ಇಂಥವರು ಹೀಗೇ ಇದ್ದಾರೆ, ಹೀಗೆಯೇ ಇರುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ. ಯಾವುದೋ ಒಂದು ಆಚರಣೆಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಹಲವರನ್ನು ಹೆದರಿಸುವ ಕೆಲಸ ಈಗ ಹಲವು ಕಡೆಗಳಲ್ಲಿ ನಡೆಯುತ್ತಿದೆ. ನಮ್ಮ ಧರ್ಮ ಅಂದಮೇಲೆ ಇಂಥದೊಂದು ಆಚರಣೆಗೆ ತೊಡಗಲೇಬೇಕು ಎಂದು ಧಮಕಿ ಹಾಕಲಾಗುತ್ತಿದೆ. ಈ ಪದ್ಧತಿ ಆಚರಿಸದಿದ್ದರೆ ದೇವರು ಕೇಡು ಬಗೆಯುತ್ತಾನೆ ಎಂದು ಹೆದರಿಸಲಾಗುತ್ತಿದೆ. ಅಂಥವರಿಗೆ ನನ್ನದೊಂದು ತುಂಟ ಪ್ರಶ್ನೆಯಿದೆ. ನಮ್ಮ ಕಣ್ಮುಂದೆ ಇರುವ ಹಕ್ಕಿ, ಪಕ್ಷಿ, ನದಿ, ತೊರೆ, ಬೆಟ್ಟ-ಗುಡ್ಡ, ಮರ-ಗಿಡ, ಬಾನು, ನಕ್ಷತ್ರ… ಇವುಗಳಿಗೆ ಯಾವುದೇ ಧರ್ಮವಿಲ್ಲ. ಇವು ಯಾವ ಆಚರಣೆಗೂ, ಯಾರ ಕಟ್ಟುಪಾಡಿಗೂ ಒಳಪಡುವುದಿಲ್ಲ. ಹಾಗಿದ್ದರೂ ಅವೆಲ್ಲ ನಮಗಿಂತ ಸಂತೋಷದಿಂದ ಬದುಕಿವೆ ತಾನೆ? ಅಂದಮೇಲೆ, ಯಾವುದೋ ಒಂದು ಪದ್ಧತಿಯನ್ನು ಆಚರಿಸುತ್ತಾ ಜೀವಿಸುವುದೇ ಬದುಕಿನ ಪರಮೋದ್ದೇಶ ಎಂದು ಸಾರುವುದರಲ್ಲಿ ಅರ್ಥವಿದೆಯೇ? ಹಾಗಿದ್ದರೆ, ಬದುಕಿನ ಉದ್ದೇಶವೇನು ಎಂದು ಕೇಳಿದರೆ ನನ್ನ ಉತ್ತರ ಇಷ್ಟು: ಬದುಕಿನ ಉದ್ದೇಶವೆಂದರೆ, ಹತ್ತು ಮಂದಿ ಮೆಚ್ಚುವಂತೆ, ಹತ್ತುಮಂದಿಗೆ ಮಾದರಿಯಾಗುವಂತೆ ಬದುಕುವುದು. ಕಣ್ಣೆದುರಿಗೆ ಒಂದಿಷ್ಟು ಗುರಿಗಳನ್ನು ಇಟ್ಟುಕೊಂಡಾಗ, ಈ ಗುರಿ ತಲುಪುವ ತನಕ ಹೋರಾಡಬೇಕು ಎಂಬ ಮನಸ್ಸು ನಮ್ಮದಾಗುತ್ತದೆ. ಗುರಿಯೊಂದು ಎದುರಿಗಿದ್ದಾಗ ಅದನ್ನು ಸಾಧಿಸುವ ಛಲ, ಕಣ್ಣ ಮುಂದಿನ ಗುರಿಗೆ ಒಂದು ಕೊನೆ, ಒಂದು ಸಾಧನೆ ಎಲ್ಲವೂ ಒಂದರ ಹಿಂದೊಂದು ಜತೆಯಾಗುತ್ತದೆ. ಅಷ್ಟೇ ಅಲ್ಲ ಭವಿಷ್ಯ ಎಂಬುದು ನಮ್ಮ ಕಲ್ಪನೆ, ಭೂತ ಎಂಬುದು ಮತ್ತೆ ಮರಳಿ ಬಾರದಂತಹ ಹಳೆಯ ನೆನಪು. ವರ್ತಮಾನವಿದೆಯಲ್ಲ? ಅದಷ್ಟೇ ನಮ್ಮ ಬದುಕು’ ಎಂಬುದು ತಕ್ಷಣವೇ ಅರ್ಥವಾಗಿಬಿಡುತ್ತದೆ.

ಹೀಗೆ ಬದುಕಿನ ಉದ್ದೇಶದ ಬಗ್ಗೆ ಹೇಳಲು ಹೊರಟಾಗ, ದೇವರ ಪ್ರಸ್ತಾಪ ಬಂದೇಬರುತ್ತದೆ. `ದೇವರಿಲ್ಲ’ ಎಂದು ಖಂಡತುಂಡವಾಗಿ ಹೇಳಿಬಿಟ್ಟರೆ, ಅದರಿಂದ ದೈವಭಕ್ತರಿಗೆ ಬೇಸರವಾಗಬಹುದು. ಹಾಗಾಗಿ, ದೇವರು ಎಂದರೆ, ಅದೊಂದು ಶಕ್ತಿ ಎಂದು ನೆನಪಿಟ್ಟುಕೊಳ್ಳಿ. ನಮ್ಮನ್ನು ಒಳ್ಳೆಯ ಕೆಲಸ ಮಾಡಲು ಭೂಮಿಗೆ ಕಳಿಸಿರುವವನೇ ದೇವರು ಎಂದು ಅರ್ಥಮಾಡಿಕೊಳ್ಳಿ. ನಂತರ, ನಾಳೆಯೆಂಬುದು ಇಲ್ಲವೇ ಇಲ್ಲ ಎಂದು ತಿಳಿದು ದುಗುಡವಿಲ್ಲದೆ, ಭಯವಿಲ್ಲದೆ, ಚಿಂತೆಯಿಲ್ಲದೆ, ವಿಪರೀತದ ಆಸೆಯಿಲ್ಲದೆ, ಸ್ವರ್ಗ ಸೇರಲೇಬೇಕು(?) ಎಂಬ ಹಠವಿಲ್ಲದೆ ಬದುಕಲು ಆರಂಭಿಸಿ. ಆಗ ಬದುಕಿನ ಅರ್ಥ ತಕ್ಷಣಕ್ಕೇ ಆಗಿಬಿಡುತ್ತದೆ. ಕೆಲವರಿರುತ್ತಾರೆ. ಅವರಿಗೆ ಯಾರೋ ಒಬ್ಬರಂತೆ ಆಗಬೇಕು, ದೊಡ್ಡ ಹೆಸರು ಮಾಡಬೇಕು ಎಂಬ ಹಪಾಹಪಿ ಇರುತ್ತದೆ. ಪ್ರತಿದಿನವೂ ಅದೇ ಧ್ಯಾನದಲ್ಲಿರುತ್ತಾರೆ. `ಅವನ ಥರಾ ಆಗಬೇಕು ನೋಡಪ್ಪ, ಅದೇ ನನ್ನ ಜೀವನದ ಮಹದಾಸೆ’ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಒಂದು ದೊಡ್ಡ ಎತ್ತರಕ್ಕೆ ಬರಲು ರೋಲ್‌ಮಾಡೆಲ್ ಅನ್ನಿಸಿಕೊಂಡಾತ ಎದುರಿಸಿದ ಕಷ್ಟಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಆತನಂತೆ ಶ್ರಮಪಡುವುದೂ ಇಲ್ಲ. ಆದರೆ, ನಾನು ಏನೋ ಆಗಬೇಕು ಎಂದು ಹುಯಿಲಿಡುವುದನ್ನು ನಿಲ್ಲಿಸುವುದಿಲ್ಲ. ನೆನಪಿಡಿ: ಬದುಕಿನ ಉದ್ದೇಶ ಹೀಗೆ ಹುಯಿಲಿಡುವುದಲ್ಲ; ಇನ್ನೊಬ್ಬರಿಗಿಂತ ದೊಡ್ಡ ಸಾಧನೆ ಮಾಡಲು ಶ್ರಮಿಸುವುದು. ಇನ್ನೊಂದು ವಿಷಯ: ಯಾವುದಾದರೂ ಒಂದು ರಂಗದಲ್ಲಿ ದೊಡ್ಡ ಹೆಸರು ಮಾಡಿದ ಕೆಲವರಿಗೆ, ಜನರು ಎಂದೆಂದೂ ನಮ್ಮನ್ನು ನೆನಪಿಸಿಕೊಳ್ಳಲಿ ಎಂಬ ಸ್ವಾರ್ಥವಿರುತ್ತದೆ. ಈ ಕಾರಣದಿಂದಲೇ ಅವರು ಯಾವುದೋ ಪ್ರಶಸ್ತಿ, ಬಹುಮಾನ ನೀಡುವ ಪದ್ಧತಿ ಆರಂಭಿಸುತ್ತಾರೆ. ನನ್ನ ನಂತರವೂ ನನ್ನ ಹೆಜ್ಜೆಗುರುತು ಉಳಿದಿರಲಿ ಎಂಬುದೇ ಅವರ ಬದುಕಿನ ಉದ್ದೇಶವಾಗಿರುತ್ತದೆ. ಇದನ್ನು ನೆನಪು ಮಾಡಿಕೊಂಡಾಗಲೆಲ್ಲ ನನಗೆ ನಗು ಬರುತ್ತದೆ. ಹಿಂದೆಯೇ ಹಕ್ಕಿ-ಪಕ್ಷಿಗಳ ನೆನಪಾಗುತ್ತದೆ; ಗೊತ್ತಲ್ಲ? ಪಕ್ಷಿಯೊಂದು ತನ್ನ ಪಾಡಿಗೆ ತಾನು ಬದುಕಿರುತ್ತದೆ. ಆದರೆ, ಅದು ಸತ್ತ ನಂತರವೂ ಮನೆಮಂದಿ ಅದನ್ನು ನೆನಪು ಮಾಡಿಕೊಳ್ಳುತ್ತಾರೆ. ಅದರ ಹೆಜ್ಜೆಗುರುತು ಇಲ್ಲದಿದ್ದರೂ… ಏಕೆಂದರೆ, ಆ ಪಕ್ಷಿ ತುಂಬ ಪ್ರಾಮಾಣಿಕವಾಗಿ, ತುಂಬ ಸಂಭ್ರಮದಿಂದ, ಸಂಯಮದಿಂದ ಬದುಕಿರುತ್ತದೆ. ದ್ವೇಷಾಸೂಯೆಗಳನ್ನು ಮರೆತು ಹೇಗೆ ಬದುಕಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿ ಹೋಗಿರುತ್ತದೆ.

ಕಡೆಯದಾಗಿ ನಾನು ಹೇಳುವುದಿಷ್ಟೆ: ಬದುಕೆಂಬುದು ಇದೆಯಲ್ಲ? ಅದರ ಉದ್ದೇಶವೇನೆಂದರೆ, ಪ್ರತಿ ಕ್ಷಣವನ್ನೂ ಸಂಭ್ರಮದಿಂದ ಬದುಕುವುದು. ನಮ್ಮ ಬದುಕನ್ನು ಇನ್ಯಾರೋ ಉದ್ಧಾರ ಮಾಡುತ್ತಾರೆ ಎಂದು ನಂಬುವ ಬದಲು, ನಮಗೆ ನಾವೇ ಮಾದರಿ ಎಂದುಕೊಂಡು, ನಮ್ಮದೇ ಒಳನೋಟದೊಂದಿಗೆ ಬದುಕುವುದು. ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿ, ಆದಷ್ಟೂ ಸರಳವಾಗಿ ಬದುಕುವುದು. ಹಾಗೆ ಮಾಡಿದಾಗ ಮಾತ್ರ ಬದುಕೆಂದರೆ ಏನು? ಅದರ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಡುತ್ತದೆ. ಒಪ್ತೀರಿ ತಾನೆ?

Advertisements

About sujankumarshetty

kadik helthi akka

Posted on ಆಗಷ್ಟ್ 22, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: