ನಂಬಕೂಡದ ಸತ್ಯಕಥೆ

ರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು ಬದುಕುವುದು ಸಾದ್ಯವಿರಲಿಲ್ಲ. ಕೇವಲ 16 ಮಳೆಗಾಲ ಕಳೆದ ಅವನಾದರೂ ಎರಡು ದಿನಗಳಿಂದ ಅತ್ತೂ ಅತ್ತೂ ಕಣ್ಣೀರು ತಾತ್ಕಾಲಿಕವಾಗಿ ಬತ್ತಿ ಹೋಗಿತ್ತು. ಮನಸ್ಸು ತುಂಬ ಊಟಮಾಡಿ ಎಷ್ಟು ದಿನವಾಗಿತ್ತೋ ದೇವರೇಬಲ್ಲ. ಸ್ವರ ಬಿಚ್ಚಿ ಅಳುವ ಚೈತನ್ಯವನ್ನೂ ಕಳಕೊಂಡಿದ್ದ. ನಮಗಾಗಿ ಎಷ್ಟು ದಿನ ಬರೇ ನೀರು ಕುಡಿದು ದಿನವನ್ನ ಮುಗಿಸಿದ ಬಾಬಾ (ಅಪ್ಪ)ನನ್ನ ಉಳಿಸಿಕೊಳ್ಳಲೂ ಆಗಲಿಲ್ಲವಲ್ಲ ಎಂದು ನೆನಸಿಕೊಂಡಾಗಲೆಲ್ಲಾ ಕ್ಷೀಣವಾದ ಸ್ವರದಲ್ಲಿ ನರಳುವ ಸ್ತಿತಿ ತಲುಪಿದ್ದ.

ಅಪ್ಪಟ ಬಯಲುಸೀಮೆ ಎನಿಸಿಕೊಂಡ ಗುಲ್ಬರ್ಗದ ಮೂಲೆಯ ಒಂದು ಹಳ್ಳಿ ಗಾಣಗಾಪುರಕ್ಕೆ ಕೃಷ್ಣಾ ನದಿಯ ಹರಿವಿದ್ದು, ನೀರಿಗೆ ತೊಂದರೆ ಇಲ್ಲದಿರುವುದರಿಂದ ಜೋಳ, ದ್ರಾಕ್ಷಿ, ಮುಂತಾದ ಬೆಳೆ ಬೆಳೆದು ಅಲ್ಲಿ ಹದಿನೈದಿಪ್ಪತ್ತು ಬಡ ಕುಟುಂಬಗಳು ಬಾಳ್ವೆ ಮಾಡಿಕೊಂಡಿದ್ದವು.

ಹೀಗೆ ಗಂಜಿ ಕುಡಿದರೂ ಮರ್ಯಾದೆ ಬಿಡದೆ ಜೀವನ ಸಾಗಿಸುವ ಕುಟುಂಬಗಳಲ್ಲಿ ಸೈದಪ್ಪನದ್ದೂ ಒಂದು. ಇರುವ 20 ಗುಂಟೆ ಹೊಲದಲ್ಲಿ ಮುದಿತಾಯಿ, ಹೆಂಡತಿ ಹಾಗು ಮೂರು ಮಕ್ಕಳ ಹೊಟ್ಟೆ ಬಟ್ಟೆಗೆ ವ್ಯವಸ್ಥೆ ಆಗಬೇಕಿತ್ತು. ಮೊದಲನೆಯ ಹೆಂಡತಿ ಸಂತೋಷ ಎಂಬ ಮಗನಿಗೆ 1 ವರ್ಷ ಇರುವಾಗ ಬಂದ ಕಾಯಿಲೆಯ ಗುರುತು ಹಿಡಿಯುವ ಮೊದಲೇ ಶಿವೈಕ್ಯಳಾದಳು. ಸಣ್ಣ ಮಗುವಿನ ಆರೈಕೆ ಮಾಡಲಿಕ್ಕಾಗಿ ಮನೆಗೆ ಬಂದ ಎರಡನೆಯ ಹೆಂಡತಿ ಆ ಮಗುವಿಗೆ ಜೊತೆಗೆ ಆಡಲು ಒಂದು ತಮ್ಮ,ತಂಗಿಯನ್ನ ಕೊಟ್ಟಳು. ಬಂದವಳು ಮಲತಾಯಿಯಾದರೂ ಅಳುವ ಸ್ವಂತ ಮಕ್ಕಳನ್ನು ಅಂಗಳದಲ್ಲಿ ಬಿಟ್ಟು ನಗುವ ಸಂತೂವನ್ನು ಎತ್ತಿಕೊಂಡು ತಾನೂ ನಗುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಊರಿನ ಇತರ ಮಕ್ಕಳು ತಮಗೂ ಮಲತಾಯಿ ಇದ್ದಿದ್ದರೆ ಎನ್ನುವಷ್ಟು ಆದರ್ಶಮಾತೆಯಾಗಿದ್ದಳು. ಸಂತುವಾದರೂ ತಂದೆ ತಾಯಿಯರ ಪ್ರೀತಿಯನ್ನ ದುರುಪಯೋಗಪಡಿಸಿಕೊಳ್ಳದೆ ತಂದೆ ತಾಯಿಯರಿಗೆ ಪ್ರೀತಿ ಪಾತ್ರನಾಗಿ ಅಪ್ಪನ ಹೊಲದ ಕೆಲಸ, ತಾಯಿ ಮನೆ ಜವಾಬ್ದಾರಿ, ತಮ್ಮ ತಂಗಿಯರ ಶಾಲೆ, ಅಜ್ಜಿಯ ಕಾಯಿಲೆ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಂಡು ಎಲ್ಲರ ಸಂತಸಕ್ಕೆ ಕಾರಣನಾಗಿದ್ದ.

ಸೈದಪ್ಪ ಇರುವ ತುಂಡು ಜಮೀನನ್ನು ಅಚ್ಚುಕಟ್ಟಾಗಿ ನೋಡಿಕೊಂಡು ಊರಿಗೇ ಮಾದರೀ ರೈತನಾಗಿದ್ದ. ಊರ ಶಾನುಭೋಗರಿಂದ ಹಿಡಿದು ವರ್ಷಕ್ಕೊಮ್ಮೆ ಶಾಲೆಗೆ ಬೇಟಿ ನೀಡುವ ಸಾಹೇಬರವರೆಗೆ ಎಲ್ಲರ ಗೌರವಕ್ಕೆ ಪಾತ್ರನಾಗಿದ್ದ ತಾನು ಓದದಿದ್ದರೂ ಮಕ್ಕಳು ಓದಿ ದೊಡ್ಡ ಹುದ್ದೆಗೆ ಸೇರಬೇಕೆನ್ನುವ ಮಹದಾಸೆಯಿಂದ ಮಕ್ಕಳ ಓದಿಗಾಗಿ ಮೈ ಕೈ ಜಡ್ಡು ಗಟ್ಟಿಸಿಕೊಂದಿದ್ದ.

ಹೀಗಿರುವಾಗ ಒಂದು ದಿನ ಸೈದಪ್ಪ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಮೈಯೆಲ್ಲಾ ಬೆವೆತು ಕಣ್ಣು ಕತ್ತಲೆ ಕಟ್ಟಿದಂತಾಯಿತು. ಸಾವರಿಸಿಕೊಂಡು ಪಕ್ಕದಲ್ಲೇ ಇದ್ದ ಮರದ ಬುಡ ಸೇರಿ ತಲೆ ಆನಿಸಿದವನಿಗೆ ಎಚ್ಚರ ಆದದ್ದು ಸಂಜೆ ಉದ್ಯಾನ್ ಎಕ್ಸ್ಪ್ರೆಸ್ ಸ್ಟೇಷನ್ ಗಾಣಗಾಪುರ ದಾಟಿದಾಗ. ಏನು ನಡೆಯುತ್ತಿದೆ ಎನ್ನುವುದನ್ನು ತಕ್ಷಣ ತಿಳಿದುಕೊಂಡವ ದುಗುಡದಲ್ಲಿಯೇ ಮನೆ ಸೇರಿದ. ಮನೆಯಲ್ಲಿ ಹೇಳಿದರೆ ಎಲ್ಲರ ಎದೆ ಒಡೆದು ಹೋಗುವುದು ಖಂಡಿತವಾಗಿದ್ದರಿಂದ ಯಾರಿಗೂ ಹೇಳಿಕೊಳ್ಳದೆ ತನ್ನಲ್ಲೇ ನುಂಗಿಕೊಂಡ. ಸಣ್ಣ ಪುಟ್ಟ ಕಾಯಿಲೆಗೆಲ್ಲ ದವಾಖಾನೆ ಹೋಗುವ ಜಾಯಮಾನ ಹಳ್ಳಿಗರಲ್ಲೇ ಇಲ್ಲ ಅದರಲ್ಲೂ ಸೈದಪ್ಪ ದವಾಖಾನೆಯ ಮುಖವನ್ನೇ ನೋಡಿದವನಲ್ಲ, ಮೈ ಬಗ್ಗಿಸಿ ದುಡಿಯುವುದರಿಂದ ಅವನ ಬಳಿ ಖಾಯಿಲೆಗಳೂ ಸುಳಿಯುತ್ತಿರಲಿಲ್ಲ. ತನ್ನ ಮಕ್ಕಳ ಕಾಲು ಗಟ್ಟಿಯಾಗುವುದರೊಳಗೇ ಹೀಗೆ ತನ್ನ ಹೃದಯ ಸಂಬಂಧಿ ಖಾಯಿಲೆ ತನ್ನನ್ನು ನುಂಗಿಬಿಡುತ್ತದೆ ಎನ್ನುವ ಕಲ್ಪನೆ ಕೂಡ ಇಲ್ಲದ ಸೈದಪ್ಪ ಹೊಲದಲ್ಲಾದ ಘಟನೆಯನ್ನ ಮರೆತೂ ಬಿಟ್ಟಿದ್ದ.

ಅದಾಗಿ ಸುಮಾರು ಆರು ತಿಂಗಳ ನಂತರ ತನ್ನ SSLC ಸ್ಪೆಷಲ್ ಕ್ಲಾಸ್ ಮುಗಿಸಿ ಬಸ್ಸಿಳಿದ ಸಂತೂವಿಗೆ ಅಘಾತ ಕಾದಿತ್ತು. ತನ್ನ ಕೊನೆಯ ತಂಗಿ ಬಸ್ಸ್ಟ್ಯಾಂಡಿನಲ್ಲೇ ಕಾದು ತಮ್ಮ ತಂದೆಗೆ ಎದೆ ನೋವು ಹೆಚ್ಚಾಗಿ ಗುಲ್ಬರ್ಗಕ್ಕೆಕರೆದು ಕೊಂಡು ಹೋದ ವಿಷಯ ತಿಳಿಸಿದಳು. ತನ್ನ ಪುಸ್ತಕಗಳನ್ನ ಅವಳ ಕೈಲಿತ್ತು ಅದೇ ಬಸ್ಸಿನಲ್ಲಿ ಗುಲ್ಬರ್ಗಕ್ಕೆ ಹೊರಟ. ಯಾವುದೆ ಕಾರಣಕ್ಕೂ ತನ್ನ ತಂದೆ ಆಸ್ಪತ್ರೆಗೆ ಹೋಗದವ ಇಂದು ಹೋಗಿದ್ದಾನೆಂದರೆ ಇದು ಅವನಿಗೇ ಭಯ ಹುಟ್ಟಿಸುವ ಕಾಯಿಲೆ ಆಗಿರಬೇಕು ಅತವಾ ಅವನ ಇಷ್ಟದ ವಿರುದ್ದವಾಗಿ ಒತ್ತಾಯ ಮಾಡಿ ಅವನನ್ನ ಕರೆದದೊಯ್ದಿದ್ದಾರೆ ಎಂದೆಲ್ಲಾ ತರ್ಕಿಸಿ ಸನ್ನಿವೇಶ ಎದುರಿಸಲು ಮಾನಸಿಕವಾಗಿ ಸಿದ್ದನಾದ.

ಸಂತು ಗುಲ್ಬರ್ಗದ ಸಣ್ಣಬಸಪ್ಪ ಆಸ್ಪತ್ರೆಗೆ ಬಂದು ತಲುಪಿಸುವಷ್ಟರ ಹೊತ್ತಿಗೆ ಸೈದಪ್ಪನನ್ನ ECG, Scanning, ಮುಂತಾದ ಪರಿಕ್ಷೆಗೊಳಪಡಿಸಿ ICUಗೆ ವರ್ಗಾಯಿಸಲಾಗಿತ್ತು. ಸೈದಪ್ಪನ ಊರಿನವರೇ ಆದ ವೈದ್ಯರೊಬ್ಬರು ವಿಶೇಷ ಮುತುವರ್ಜಿವಹಿಸಿ ಪರೀಕ್ಷೆಗೊಳಪಡಿಸಿ ಪರಿಸ್ಥಿತಿಯ ಜಟಿಲತೆಯನ್ನು ತಿಳಿದು ಸಂತೂವಿನ ಬರುವಿಕೆಗಾಗಿ ಕಾದಿದ್ದರು. ಸಣ್ಣವನಾದರೂ ಪ್ರಭುದ್ದನಾದ ಸಂತು ಮಾತ್ರ ಈ ಸಮಸ್ಯೆಯನ್ನ ನಿಭಾಯಿಸಬಲ್ಲ ಎನ್ನುವುದು ಡಾಕ್ಟರ್ ರಿಗೆ ತಿಳಿದಿತ್ತು.

“ನೋಡು ಸಂತೂ ನಾ ಹೇಳೂ ಮಾತ ಸರೀಕೇಳ್ಕೋ ನಿಮ್ ಬಾಬಾಗ ಹಾರ್ಟ್ ದಾಗ ಜರ ತೊಂದ್ರಿ ಆಗ್ಯದ ನೀ ಲಗೂನ ಸ್ವಲ್ಪು ರೊಕ್ಕ ತಗೊಂಡ್ ಬಾಬಾನ ದೊಡ್ಡ ದವಾಖಾನಕ್ಕ ಒಯ್ಯಬೇಕಾತದ ತಡ ಮಾಡಬ್ಯಾಡ ನೋಡು ನಾ ಈಗಾ ಹೇಳೀನಿ” ಎಂದು ಬೆಂಗಳೂರಿನ ದೊಡ್ದ ಆಸ್ಪತ್ರೆಯ ತನ್ನ ಮಿತ್ರ ಡಾ|| ಹಿರೇಮಠರ ಫೋನ್ ನಂಬರ್ ಕೊಟ್ಟು ಹೊರನಡೆದರು. ಬರಸಿಡಿಲಿನ ಆಘಾತಕ್ಕೊಳಗಾದ ಸಂತೋಷ ಏನು ಮಾಡಬೇಕೆಂದು ತಿಳಿಯದಾದ. ನಂತರ ದೊಡ್ಡವರ ಸಮಾಲೋಚನೆಯ ನಂತರ ಸ್ವಲ್ಪ ಓದಿ, ಬೆಂಗಳೂರಿನ ಪರಿಚಯವಿದ್ದ ಸೋದರ ಮಾವನ ಜೊತೆ ತಂದೆಯನ್ನ ಆಂಬ್ಯುಲೆನ್ಸ್ ಒಂದರಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಸಿದ್ದನಾದ. ಇದ್ದ ಬದ್ದ ಹಣವನ್ನೆಲ್ಲ ಕೂಡಿಸಿ ಸುಮಾರು ಒಂದು ಲಕ್ಷ ಒಟ್ಟುಮಾಡಿಕೊಂಡು ಬೆಂಗಳೂರಿನ ದೊಡ್ಡ ಆಸ್ಪತ್ರೆ ತಲುಪಿದರು. ಗ್ರಹಚಾರಕ್ಕೆ ಡಾ|| ಹಿರೇಮಠರು ಒಂದು ದೊಡ್ದ ಆಪರೇಷನ್ ಮುಗಿಸಿ ಮನೆಗೆ ಹೋಗುವಾಗ ಯಾವುದೇ ಕಾರಣಕ್ಕೂ ತನಗೆ ಫೋನ್ ಮಾಡದಂತೆ ಆಸ್ಪತ್ರೆ ಸಿಬ್ಬಂದಿಗೆ ತಾಕೀತು ಮಾಡಿ ಮನೆಗೆ ಹೋಗಿದ್ದರು.

ತಾನು ಗುಲ್ಬರ್ಗದಿಂದ ತಂದೆಯ ಚಿಕಿತ್ಸೆಗಾಗಿ ಬಂದಿರುವುದಾಗುಯೂ, ಹಿರೇಮಠರ ಸ್ನೇಹಿತರೊಬ್ಬರು ಕಳುಹಿಸಿರುವುದಾಗಿ ಪರಿಪರಿಯಾಗಿ ಬೇಡಿಕೊಂಡರೂ ಅವರನ್ನ ಕಾಣಲಾಗಲಿಲ್ಲ. ಬಡವನೆನ್ನುವ ಒಂದೇ ಕಾರಣಕ್ಕಾಗಿ ಸೈದಪ್ಪನ ಎದೆ ಮೇಲೆ ಸ್ಟೆತೊಸ್ಕೋಪ್ ಇಡಲೂ ಯರೂ ಮುಂದಾಗಲಿಲ್ಲ. ಹೇಗೋ ಕೊನೆಯಲ್ಲಿ ಇವರ ಬಳಿ ಹಣ ಇರುವುದನ್ನು ತಿಳಿದ ಸಿಬ್ಬಂದಿ ಅವನನ್ನು ದಾಖಲಿಸಿಕೊಂಡು ICUನಲ್ಲಿ ಇಟ್ಟು ಒಂದಷ್ಟು ಚಿಕಿತ್ಸೆ ಕೊಟ್ಟಂತೆ ಮಾಡಿದರು ಎರಡು ತಾಸುಗಳ ಕಾಲ ICUನಲ್ಲಿಟ್ಟು ಸಂತೋಷನ ಕೈ ಬರಿದಾದುದನ್ನ ತಿಳಿದು ಇನ್ನು ನಮ್ಮ ಕೈಯಲ್ಲಿ ಏನೂ ಇಲ್ಲ ದೇವರೇ ಇವನನ್ನು ಬದುಕಿಸಬೇಕು ಎಂದು ಮುಖದ ಮೇಲೆ ಬಿಳಿಯ ವಸ್ತ್ರ ಎಳೆದರು. ಅಲ್ಲಯವರೆಗೆ ತಡೆಹಿಡಿದಿದ್ದ ಸಂತೋಷನ ಅರಣ್ಯರೋದನ ಮುಗಿಲು ಮುಟ್ಟಿತು.

ಹೇಗೋ ಅವನನ್ನ ಸಮಾಧಾನ ಮಾಡಿ ಆಸ್ಪತ್ರೆಯ ವಿಧಿಗಳನ್ನೆಲ್ಲ ಮುಗಿಸಿ ಸಂತೋಷನ ಸೋದರಮಾವ ಹನಮಂತಪ್ಪ ಒಂದು ಆಂಬ್ಯುಲೆನ್ಸ್ ಬಾಡಿಗೆ ಮಾತಾಡಿ ಊರಿನಲ್ಲಿರುವ ಸಿದ್ದೇಶ್ ಮಾಲಕರ ಮನೆಗೆ ಫೋನ್ ಮಾಡಿ ಸೈದಪ್ಪನ ಮನೆಯವರಿಗೆ ವಿಷಯ ತಿಳಿಸಲು ಹೇಳಿ ಅಲ್ಲಿಂದ ಹೊರಡುವಷ್ಟರಲ್ಲಿ ಸಂತೂ ಎರಡುಬಾರಿ ಮೂರ್ಛೆ ತಪ್ಪಿದ್ದ ಅವನಿಗೆ ಪ್ರಥಮ ಚಿಕಿತ್ಸೆಯ ಔದಾರ್ಯ ತೋರಿಸಿದ ಆಸ್ಪತ್ರೆಯವರಿಗೆ ಕೈ ಮುಗಿದು ಅಲ್ಲಿಂದ ಹೊರಟರು.

ಸಂತುವನ್ನ ಮುಂದೆ ಡ್ರೈವರ್ ನ ಪಕ್ಕದ ಸೀಟಿನಲ್ಲಿ ಕೂರಿಸಿ ಹನಮಂತಪ್ಪ ತಾನು ಹಿಂದೆ ಸೈದಪ್ಪನ ಪಕ್ಕದಲ್ಲಿ ಹಾಸಿಗೆಯ ಮೇಲೆ ಅಡ್ಡಾದ ಪಾಪ ಹಿಂದಿನ ದಿನ ನಿದ್ರೆ ಇಲ್ಲದ ಕಾರಣ ಹನಮಂತಪ್ಪ ಸ್ವಲ್ಪ ಹೊತ್ತಿನಲ್ಲಿಯೆ ನಿದ್ರೆಗೆ ಜಾರಿದ.

ಇಂತಹಾ ಎಷ್ಟೋ ಸಂದರ್ಭಗಳನ್ನ ಎದುರಿಸಿದ್ದ ಡ್ರೈವರ್ ಆನಂದ ಸಂತುವಿನ ಮನಸ್ಸನ್ನ ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿ ತಾನು ಹಿಂದೆ ಎಷ್ಟೋ ಹೆಣಗಳನ್ನ ಒಬ್ಬೊಬ್ಬನೇ ಸಾಗಿಸಿದ ಕಥೆಗಳನ್ನೆಲ್ಲಾ ಹೇಳುತ್ತಾ ಕೊಚ್ಚಿಕೊಳ್ಳುತ್ತ ವಾಹನ ಓಡಿಸುತ್ತಿದ್ದ. 3-30ರ ಸುಮಾರಿಗೆ ಕುಷ್ಟಗಿ ಹೈವೆ ಇಂದ ಗುಲ್ಬರ್ಗ ರಸ್ತೆಗೆ ತಿರುಗಿಸಿದ. ಕೆಟ್ಟ ರಸ್ತೆಯಲ್ಲಿ ಹೊಂಡ ಗುಂಡಿಗಳನ್ನ ಹತ್ತಿ ಇಳಿಯುತ್ತಾ ವಾಹನ ಸಾಗುತ್ತಿತ್ತು.

ಅಷ್ಟರಲ್ಲಿ ಪವಾಡವೊಂದು ನಡೆದೇ ಹೋಯಿತು. ರಸ್ತೆ ಸರಿ ಇಲ್ಲದ ಕಾರಣ ಆಂಬ್ಯುಲೆನ್ಸ್ ಕುಲುಕಾಟದಿಂದ ಸೈದಪ್ಪನ ನಿಂತ ಹೃದಯಕ್ಕೆ ಮತ್ತೆ ಜೀವ ಬಂದು ಬಿಟ್ಟಿತ್ತು. ಆದರೆ ಸೈದಪ್ಪನಿಗೆ ನಿದ್ದೆ ಮಂಪರು ಇರುವ ಕಾರಣ ಏನಾಯಿತೆಂದು ತಿಳಿವುವ ಮೊದಲು ನಿದ್ದೆ ಬಂದು ಹೋಯಿತು. ಸ್ವಲ್ಪ ಸಮಯದ ನಂತರ ಆನಂದ ಚಾ ಕುಡಿಯಲೆಂದು ಕಮಲಾಪುರದ ದಾಬಾದಲ್ಲಿ ನಿಲ್ಲಿಸಿ ಸಂತೂವನ್ನೂ ಎಬ್ಬಿಸಿ ಒತ್ತಾಯಪೂರ್ವಕವಾಗಿ ಚಾ ಕುಡಿಲು ಕರೆದುಕೊಂಡು ಹೋದ ಹನಮಂತಪ್ಪ ಗಾಢ ನಿದ್ರೆಯಲ್ಲಿದ್ದುದರಿಂದ ಅವನನ್ನು ಎಬ್ಬಿಸದೇ ಇವರಿಬ್ಬರೇ ನಡೆದರು. ಎರಡು ದಿನದಿಂದ ಏನೂ ತಿಂದಿಲ್ಲವಾದ್ದರಿಂದ ನಡೆಯಲೂ ಆಗದೆ ನೆಲದ ಮೇಲೆ ಕುಸಿದ ಸಂತೂವಿಗೆ ತಲೆಗೆ ನೀರು ತಟ್ಟಿ ಎರಡು ರೊಟ್ಟಿ ಕರಿ ಕೊಡಿಸಿದ.

ಅಷ್ಟರಲ್ಲಿ ಮತ್ತೆ ಎಚ್ಚರವಾದ ಸೈದಪ್ಪ ತನ್ನನ್ನು ಬೆಲ್ಟ್ ಗಳೀಂದ ಕಟ್ಟಿರುವುದನ್ನ ಗಮನಿಸಿ ಅದನ್ನು ಬಿಡಿಸಿಕೊಂಡು ವಾಹನದಿಂದ ಇಳಿದು ಬೆಳಕು ಕಂಡತ್ತ ಹೆಜ್ಜೆ ಹಾಕಿದ ಏನೂ ತಿಳಿಯದಂತೆ ಅತ್ತಿತ್ತ ನೋಡುತ್ತಾ ಬರುತ್ತಿರುವ ಸೈದಪ್ಪನನ್ನ ನೋಡಿ ಮೂರ್ಚೆ ಹೋಗುವ ಸರದಿ ಈಗ ಡ್ರೈವರ್ ಆನಂದನದ್ದು!!

ನಾರಾಯಣ ಮೂರ್ತಿ ಹೊಸಬಾಳೆ

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 20, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: