ಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್ – Ganashyamachar | Mumbai Kannadiga | Achievement | God

Mumbai Kannadiga Ghanashyamachar

ಕೈಕಾಲು ದೇಹದ ಸರ್ವಾಂಗಗಳೂ ಸದೃಢವಾಗಿದ್ದರೂ ನಯಾಪೈಸೆ ಕೆಲಸ ಮಾಡದ ಅಪಾಪೋಲಿಗಳನ್ನು ನೋಡಿದ್ದೇವೆ. ತಮ್ಮ ನಿಷ್ಕ್ರಿಯತೆಗೆ ದೇವರನ್ನು ಬೈದಾಡಿಕೊಳ್ಳುತ್ತಲೇ ಎಲ್ಲವೂ ವಿಧಿಲಿಖಿತ ಎಂಬಂತೆ ಅಬ್ಬೇಪಾರಿ ಜೀವನ ನಡೆಸಿರುವವರನ್ನು ಕಂಡಿದ್ದೇವೆ. ಇಂಥವರ ನಡುವೆ ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಎರಡೂ ಕಾಲ್ಗಳ ಸ್ವಾಧೀನ ಕಳೆದುಕೊಂಡರೂ, ಎಂಥ ಚಟುವಟಿಕೆಯಿಂದ ಇರುವಂಥ ವ್ಯಕ್ತಿಯೂ ನಾಚುವಂತೆ ಬದುಕಿದಕನ್ನಡಗ, ಜೀವನವನ್ನು ಅಪಾರವಾಗಿ ಪ್ರೀತಿಸಿದ ಘನಶ್ಯಾಮಾಚಾರ್ ಅವರ ಸಾಧನೆ ನಿಜಕ್ಕೂ ಘನವಾದುದು.

ಕೃತಜ್ಞತೆ
* ನಾನು ಹಾಸಿಗೆಯಲ್ಲಿ ಬಿದ್ದಾಗ, ಅಲಾರ್ಮ ಬಾರಿಸಿದಾಗ, ಗೊಣಗುತ್ತ ಏಳುವಾಗ, `ನನಗೆ ಕೇಳಲು ಕಿವಿ ಕೊಟ್ಟಿರುವೆಯಲ್ಲ ದೇವಾ ಎಂದು ನಾನು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನ ಪೂರ್ತಿ ಕಿವುಡರಾಗಿರುತ್ತಾರಲ್ಲ.
* ಸುಪ್ರಭಾತ ಕಾಲದಲ್ಲಿ ಬೆಳಕು ಎಲ್ಲೆಡೆ ಚೆಲ್ಲಿದಾಗ, ನಾನು ಒಂದು ಕಣ್ಣು ತೆರೆದು ಜಗವನೆಲ್ಲ ನೋಡುವೆ. `ಒಂದು ಕಣ್ಣು ಉಳಿಸಿರುವೆಯೆಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನರಿಗೆ ಎರಡೂ ಕಣ್ಣು ಇರುವುದಿಲ್ಲವಲ್ಲ.
* ನಾನು ಹಾಸಿಗೆಯಲ್ಲೇ ಒದ್ದಾಡುವೆ, ಏಳಲು ಶಕ್ತಿಯೇ ಇಲ್ಲ. ಯಾರೋ ಬಂದು ನನ್ನನ್ನು ಎಬ್ಬಿಸಿ ಕೂಡಿಸುತ್ತಾರೆ. `ನನ್ನನ್ನು ಎಬ್ಬಿಸಿ ಕೂಡಿಸುವ ಜನರನ್ನು ಕೊಟ್ಟಿರುವೆಯಲ್ಲಾ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನ ಹಾಸಿಗೆಯಿಂದ ಏಳುವುದೇ ಇಲ್ಲವಲ್ಲ.
* ನಾನು ಎದ್ದಾಗ ನನಗೆ ಹಲವಾರು ತೊಂದರೆ. ನನಗೆ ಮುಖ ಒರೆಸಲು ಟವೆಲ್ ಸಿಗುವುದಿಲ್ಲ, ಚಹ ಬರಲು ತಡವಾಗುತ್ತದೆಂದು ಹಲುಬುತ್ತೇನೆ. ಸುತ್ತಮುತ್ತ ಸದ್ದು ಕಿರಿಚಾಟ ಕೇಳುತ್ತೇನೆ. `ನನ್ನ ಕುಟುಂಬದ ಸಹಕಾರ ನನಗೆ ದೊರೆವಂತೆ ಮಾಡಿದೆಯಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನರ ದೈವದಲ್ಲಿ ಈ ಅನುಕೂಲತೆಯೂ ಇರುವದಿಲ್ಲವಲ್ಲ.
* ನಮ್ಮ ಡೈನಿಂಗ್ ಟೇಬಲ್ ಚಿತ್ರಗಳಲ್ಲಿ ತೋರಿಸಿದಂತೆ ಸುಂದರವಾಗಿರುವುದಿಲ್ಲ, ಎಲ್ಲವೂ ಅಸ್ತವ್ಯಸ್ತ. `ಆದರೂ ನನಗೆ ಊಟ ದೊರೆವಂತೆ ಮಾಡಿದೆಯಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನರ ಹಣೆಯಲ್ಲಿ ಹೊಟ್ಟೆತುಂಬ ಊಟ ದೊರೆವ ಭಾಗ್ಯ ಬರೆದಿರುವುದಿಲ್ಲವಲ್ಲ.
* ನನಗೆ ನಡೆಯಲು ಬರುವುದಿಲ್ಲ. ವ್ಹೀಲ್-ಚೇರ್ ಹಿಡಿದು ಮನೆಯತುಂಬ ಓಡಾಡುವೆ. `ಇಷ್ಟಾದರೂ ಚಲಿಸುವಂತೆ ಮಾಡಿದೆಯಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನ ನಿಷ್ಕ್ರಿಯರಾಗಿ ಹಾಸಿಗೆಯಲ್ಲೇ ಬಿದ್ದಿರುವರಲ್ಲ.
* ಪ್ರತಿದಿನ ನನ್ನ ಜೋಲುಬಿದ್ದ ಕಾಲು ಮಸಾಜುಮಾಡಲು ಥೆರಪಿಸ್ಟ್ ಬರುತ್ತಾರೆ, ವ್ಯಾಯಾಮ ಮಾಡಿಸುತ್ತಾರೆ. ನಂತರ ನಾನು ಕಾಂಪ್ಯೂಟರ್ ಮುಂದೆ ಕುಳಿತು ಬರೆಯುತ್ತೇನೆ. `ನನಗೆ ಬರೆವ ಬುದ್ಧಿ ಹಾಗೂ ಟೈಪ್‌ಮಾಡುವ ಶಕ್ತಿ ನೀಡಿದೆಯಲ್ಲಾ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ.
* ಕೆಲವು ಸಲ ದೈವವನ್ನು ಹಳಿಯುತ್ತೇನೆ, ಗೋಳಾಡುತ್ತೇನೆ, ದಿನಗಳು ಉರುಳುತ್ತವೆ. ಅದರೂ ದೇವಾ ನಿನ್ನ ಅಪಾರ ಕರುಣೆ ಮರೆಯಲಾರೆ. ನಿನ್ನ ಕರುಣೆಯ ತುಲನೆಯಲ್ಲಿ ನಾನು ತೋರುವ ಕೃತಜ್ಞತೆಯ ಮೊತ್ತವನ್ನು ಹೋಲಿಸಿದರೆ, ನನಗೆ ಪಾಸಾಗುವಷ್ಟು ಅಂಕಗಳೂ ದೊರೆಯಲಿಕ್ಕಿಲ್ಲ. ನನ್ನನ್ನು ಜೀವಂತ ಇಟ್ಟಿರುವೆಯಲ್ಲ ದೇವಾ, ನಾನು ನಿನಗೆ ಕೃತಜ್ಞ.

`ಕೃತಜ್ಞತೆ ಎಂಬ ಮೇಲಿನ ಪ್ರಾರ್ಥನೆ ಬರೆದವರು ಶೂರ್ಪಾಲಿ ಘನಶ್ಯಾಮ ಪವಮಾನಾಚಾರ್. ಅವರು ಬರೆದದ್ದು ಇಂಗ್ಲೀಷಿನಲ್ಲಿ. ಅದರ ಭಾವಾನುವಾದವನ್ನು ಇಲ್ಲಿ ಕೊಡಲಾಗಿದೆ. ಅವರು ಮೀರಾ ರೋಡ್‌ನ ಮನೆಯಲ್ಲಿ ಕಳೆದ 11 ವರ್ಷ ವ್ಹೀಲ್-ಚೇರ್ ಮೇಲೆಯೇ ಹೋರಾಟದ ಜೀವನ ನಡೆಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡ ಕಥೆ [^] ಪವಾಡಸದೃಶವಾಗಿದೆ.

ನನ್ನ ಮಿತ್ರ ಶೂರ್ಪಾಲಿ ಪವಮಾನಾಚಾರ್ ಭಾಭಾ ಅಣುಶಕ್ತಿಕೇಂದ್ರದಲ್ಲಿ ಅಧಿಕಾರಿಯಾಗಿ ಕೆಲಸಮಾಡಿ ನಿವೃತ್ತರಾಗಿ ಎರಡು ದಶಕಗಳು ಕಳೆದಿವೆ. ಅವರಿಗೆ ಈ ವರ್ಷ ಸಹಸ್ರಚಂದ್ರದರ್ಶನದ ಪರ್ವಕಾಲ. ಈ ಸಮಯದಲ್ಲಿ ಅವರ ವಂಶದ ಚಂದ್ರ (ಏಕಮಾತ್ರ ಪುತ್ರ ಘನಶ್ಯಾಮ) ಅಸ್ತಂಗತನಾದುದು ಅವರ ಕುಟುಂಬಕ್ಕೆ, ಮಿತ್ರಪರಿವಾರಕ್ಕೆ ಒಂದು ರೀತಿಯ ಗ್ರಹಣವನ್ನು ತಂದಿದೆ. ಘನಶ್ಯಾಮ ಅವರ ಜೀವನ ಮತ್ತು ಸಾಧನೆಗಳು ಸ್ತುತ್ಯವಾಗಿವೆ. ದೇಶವಿದೇಶಗಳಲ್ಲಿ ಸಂಚರಿಸುತ್ತ ತಮ್ಮ ಜೀವನದಲ್ಲಿಯ ಯಶದ ಶಿಖರ ತಲುಪಿದಾಗ ಎರಡುಕಾಲುಗಳನ್ನು ಕಳೆದುಕೊಂಡು ವಿಕಲಾಂಗರಾದರು. ಆದರೂ ಸಾಧಿಸುವ ಛಲವನ್ನು, ಸಂಕಲ್ಪಶಕ್ತಿಯನ್ನು ತೋರಿಸಿ ಮಹಾನ್ ಸಾಧನೆ ಮಾಡಿದವರು ಘನಶ್ಯಾಮ. ಸಕಾರಾತ್ಮಕ ಮನೋಭಾವ ಹಾಗೂ ಸಮಾಜಸೇವೆಗೈಯುವ ಕರ್ಮಯೋಗ ಅವರ ಬಾಳಿಗೆ ಒಂದು ಪೂರ್ಣತೆಯನ್ನು ತಂದುಕೊಟ್ಟಿತು. ಅವರು ದೇವರನ್ನೆಂದೂ ದೂರಲಿಲ್ಲ, ತಮ್ಮ ಪಾಲಿನ ಕರ್ತವ್ಯವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು, ಆದರ್ಶ ಜೀವನ ನಡೆಸಿದರು.

ಘನಶ್ಯಾಮ ಮುಂಬೈಯಲ್ಲೇ ಜನಿಸಿದರು(5, ಮಾರ್ಚ್,1952). ಮನೆಯಲ್ಲಿಕನ್ನಡವಾತಾವರಣ. ಕಲಿತದ್ದು ಚಕಾಲಾದ ಹೋಲಿ ಫ್ಯಾಮಿಲಿ ಹೈಸ್ಕೂಲ್‌ನಲ್ಲಿ. ಮುಂದೆ ಭವನ್ಸ್ ಕಾಲೇಜಿನಿಂದ ಬಿಎಸ್.ಸಿ. ಪದವಿ. ಮುಂಬೈ ವಿಶ್ವ ವಿದ್ಯಾಲಯದಿಂದ ಕರೋಜನ್ ಕೆಮೆಸ್ಟ್ರೀಯಲ್ಲಿ ಎಮ್‌ಎಸ್‌ಸಿ ಡಿಗ್ರಿ ಪಡೆದರು. ಭವನ್ಸ್ ಕಾಲೇಜಿನಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದರು. ಬಿಸ್‌ನೆಸ್ ಎಡ್‌ಮಿನ್ಟ್ರೇಶನ್ ಹಾಗೂ ಮಾರ್ಕೆಟಿಂಗ್ ಮೆನೆಜ್‌ಮೆಂಟ್‌ನಲ್ಲಿ ಎರಡು ಡಿಪ್ಲೊಮಾಗಳನ್ನು ಪಡೆದರು. ಭಾರತ ಸರ್ಜಿಕಲ್‌ದಲ್ಲಿ ಶಿಫ್ಟ್-ಇನ್-ಚಾರ್ಜ್ ಆಗಿ ಕೆಲಸ ಮಾಡಿದರು. ನಂತರ ಟಿ.ಐ.ಪಿ.ಸಿ.ಓ.ದಲ್ಲಿ ಪ್ರೊಡಕ್ಷನ್ ಇನ್-ಚಾರ್ಜ್ ಆದರು. ದುಬೈಗೆ ಪ್ರವಾಸ ಮಾಡಿ ಅಲ್ಲಿ ಬೆಸ್ಟ್ ಫುಡ್ ಕಾರ್ಪೊರೇಶನ್‌ದಲ್ಲಿ ಸೇಲ್ಸ್ ಕೊ-ಅರ್ಡಿನೇಟರ್ ಆಗಿ ಕೆಲಸಮಾಡಿದರು. 1982ರಿಂದ ಥರ್ಮ್ಯಾಕ್ಸ್ ಲಿಮಿಟೆಡ್ ಕಂಪನಿಯ ಕೆಮಿಕಲ್ ಡಿವಿಜನ್‌ನಲ್ಲಿ ಎರಡು ದಶಕಗಳಕಾಲ ದುಡಿದರು. ಅಲ್ಲಿ ಬಿಸ್‌ನೆಸ್ ಮೆನೆಜರ್ ಹುದ್ದೆಗೆ ಬಡತಿ ಪಡೆದರು. ಕೆಲಕಾಲ ಪುಣೆಯಲ್ಲಿ ವಾಸ. ಕಂಪನಿಯ ಅಭಿವೃದ್ಧಿಗಾಗಿ, ವಿದೇಶಗಳಲ್ಲಿ ಮಾರುಕಟ್ಟೆ ಪಡೆಯುವಲ್ಲಿ ಯಶಸ್ವೀ ಕಾರ್ಯಾಚರಣೆ. ದೇಶವಿದೇಶಗಳಲ್ಲಿ ನಡೆದ ಪ್ರದರ್ಶನ, ವಿಚಾರಸಂಕಿರಣಗಳಲ್ಲಿ ಭಾಗವಹಿಸಿದರು.

1998ರಲ್ಲಿ `ಸ್ಪೈನಲ್ ಇಂಜುರಿಯಿಂದಾಗಿ ಕಾಲುಗಳಲ್ಲಿಯ ತ್ರಾಣ ಹೋಯಿತು. ಮನೆಯಲ್ಲೇ ಕುಳಿತುಕೊಳ್ಳಬೇಕಾಯ್ತು. ಇವರ ಕಾರ್ಯಕುಶಲತೆಯನ್ನು ಮೆಚ್ಚಿದ ಕಂಪನಿ ಇವರಿಗೆ ಮನೆಯಲ್ಲಿದ್ದುಕೊಂಡೇ ಕೆಲಸ ಮಾಡಲು ಅನುಮತಿ ಕೊಟ್ಟರು. ಸರ್ಫಿಂಗ್ ಮೆನೆಜರ್ ಆಗಿ ಕೆಲಸ ಮುಂದುವರಿಸಿದರು. ಮೂರು ವರ್ಷಗಳ ನಂತರ ಐಚ್ಛಿಕ ನಿವೃತ್ತಿ ಪಡೆದರು.

ಇವರ ದೇಹದ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇವರ ಚಿಕಿತ್ಸೆ ಭಕ್ತಿವೇಂದಾಂತ ಆಸ್ಪತ್ರೆಯಲ್ಲಿ ನಡೆಯಿತು. ಅಲ್ಲಿ ಪೇಶಂಟ್ ಆಗಿ ಹೋದವರು ಅಲ್ಲಿ ಕನ್ಸ್‌ಲ್ಟಂಟ್ ಆಗಿ ಕೆಲಸಮಾಡ ತೊಡಗಿದರು. ಆಸ್ಪತ್ರೆಯವರು ಇವರಿಗಾಗಿ ಒಂದು ಅಫೀಸನ್ನು ತೆರೆದುಕೊಟ್ಟರು, ಅಸ್ಪತ್ರೆಗೆ ಸಮೀಪದಲ್ಲಿ ಮನೆ ಕೊಡಿಸಿದರು. ಇವರು ಆಫೀಸಿಗೆ ವ್ಹೀಲ್-ಚೇರ್ ಮೇಲೆ ಹೋಗುತ್ತಿದ್ದರು. ಅವರ ಸೇವೆಗೆ ಆಸ್ಪತ್ರೆಯ ಜವಾನರಿಬ್ಬರು ಬರುತ್ತಿದ್ದರು. ಇವರ ಸೊಂಟದ ಕೆಳಗಿನ ದೇಹ ನಿಷ್ಕ್ರಿಯವಾಗಿತ್ತು. ಇವರು ಹತಾಶರಾಗಲಿಲ್ಲ. ತಲೆ ಚೆನ್ನಾಗಿ ಕೆಲಸ ಮಾಡುತ್ತಿತ್ತು. ಇವರು ಟೆಲಿಫೊನ್ ಮತ್ತು ಕಂಪ್ಯೂಟರ್ ಬಳಸಿ ಅಗಾಧವಾಗಿ ಕೆಲಸ ಮಾಡಿತೋರಿಸಿದರು `ನಾಲೇಜ್ ಮೆನೇಜ್‌ಮೆಂಟ್ ಕನ್ಸ್‌ಲ್ಟಂಟ್ ಆಗಿ ಕೆಲಸ ಮಾಡಿದರು. ಆಸ್ಪತ್ರೆಯ ಕಾರ್ಯಗಳ ಕ್ಯಾಲೆಂಡರ್ ತಯಾರಿಕೆ, ವಾರದ ಪ್ರಗತಿಯ ಬಗ್ಗೆ ಆಡಳಿತ ವರ್ಗಕ್ಕೆ ವರದಿಯ ಪೂರೈಕೆ, ವೆಬ್‌ಸೈಟ್ ವಿಕಾಸ ಹಾಗೂ ಮೇಲ್ವಿಚಾರಣೆ, ರೋಗಗಳ ಸರ್ವೇ ಹಾಗೂ ಡಾಕ್ಯುಮೆಂಟೇಶನ್ ಮಾಡುವುದರಲ್ಲಿ ಪ್ರಗತಿ ಸಾಧಿಸಿ ಆಸ್ಪತ್ರೆಯಲ್ಲಿ ಅನನ್ಯ ಸ್ಥಾನ ಗಳಿಸಿದರು. `ಶೇರ್ ಯುವರ್ ಕೇರ್ ಎಂಬ ವಿಭಾಗದಲ್ಲಿ ಕೆಲಸ ಮಾಡುತ್ತ ರೋಗಿಗಳಿಗೆ ಅವಶ್ಯಕವಾದ ಹಣವನ್ನು ಚಾರಿಟೆಬಲ್ ಸಂಸ್ಥೆಗಳಿಂದ ಲಕ್ಷಾವಧಿ ರೂಪಾಯಿ ದಾನ ರೂಪದಲ್ಲಿ ಪಡೆದರು, ಜನಹಿತ ಸಂಪರ್ಕಾಧಿಕಾರಿಯಂತೆ ಕೆಲಸ ಮಾಡಿದರು. ಡೈರೆಕ್ಟರ್ ಕೆ. ವೆಂಕಟರಾಮನ್ ಹೇಳುವಂತೆ ಇವರು ಆ ವಿಭಾಗದ ಬೆನ್ನೆಲುಬೇ ಆಗಿದ್ದರು.

ಇವರದು ಕಾನ್ವೆಂಟ್ ಸ್ಕೂಲಿನ ಶಿಕ್ಷಣ. ಆದ್ದರಿಂದ ಕನ್ನಡ [^] ಓದಲು ಬರೆಯಲು ಬರುತ್ತಿರಲಿಲ್ಲ. ತತ್ತ್ವಜ್ಞಾನದಲ್ಲಿ ಆಸಕ್ತರಾದ ಇವರು ಕನ್ನಡದಲ್ಲಿದ್ದ ದಾಸಸಾಹಿತ್ಯದ ಆಭ್ಯಾಸಮಾಡಲು ಕನ್ನಡ ಕಲಿತರು. ಜಗನ್ನಾಥದಾಸರ `ಹರಿಕಥಾಮೃತಸಾರವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು, ಜೊತೆಗೆ ವಿವರಣೆಯನ್ನೂ ಬರೆದರು. ಎರಡುವರೆ ಸಾವಿರ ಪುಟಗಳ ಗ್ರಂಥ ಸಿದ್ಧವಾಯಿತು. ವಿಷ್ಣುಸಹಸ್ರನಾಮದ ಬಗ್ಗೆ ಒಂದು ಗ್ರಂಥವನ್ನು ಬರೆಯಲು ಪ್ರಾರಂಭಿಸಿದರು. ಅದು ಅರ್ಧದಷ್ಟು ಆಗಿತ್ತು. ಅವರು ದೇವರನ್ನು ಎಂದೂ ದೂರಲಿಲ್ಲ. ಮೇಲೆ ಉದ್ಧರಿಸಿದ ಪ್ರಾರ್ಥನೆಯೇ ಅದಕ್ಕೆ ಸಾಕ್ಷಿ. ಅಂಗವಿಕಲರಾಗಿದ್ದರೂ, ಹಲವಾರು ರೋಗರುಜಿನಗಳ ಬಾಧೆಗೆ ಬಲಿಯಾಗಿದ್ದರೂ, ಅವರ ಸಾಹಸ ಹಾಗೂ ಸಾಧನೆಗಳು ನಿರಂತರವಾಗಿ ಮುಂದುವರೆದವು. ಅವರ ಹೆಂಡತಿ ಪ್ರೊ.ವೀಣಾ ಇಂಗ್ಲಿಷ್ ವಿಷಯದ ಅಧ್ಯಾಪಕಿ. ಮಗ ಲೋಕನಾಥ ಫೈನಲ್ ಸಿ.ಎ. ತಲುಪಿದವ. ಜೊತೆಗೆ ಜರ್ಮನಿ ಹಾಗೂ ಚೈನಾ ಭಾಷಗಳ ತಜ್ಞ. ಇಬ್ಬರೂ ಘನಶ್ಯಾಮರಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಸಹಕಾರ ನೀಡಿದರು, ಅವರ ಸಾಧನೆಗೆ ಬೆಂಬಲವಾಗಿ ನಿಂತರು. ತಂದೆ ಪವಮಾನಾಚಾರ್ಯರು ನಿವೃತ್ತಿಯ ಹಾಗೂ ಶ್ರೇಯಸ್ಸಿನ ಮಾರ್ಗ ತೋರಿಸಿದರು.

ಸೋಮವಾರ 24 ಅಗಸ್ಟ್ 2009 ಬ್ರಾಹ್ಮೀ ಮೂಹೂರ್ತದಲ್ಲಿ ಘನಶ್ಯಾಮ ಬ್ರೇನ್ ಹ್ಯಾಮರೇಜ್ ಆಗಿ ಅಸು ನೀಗಿದರು. ಅವರದು ಸಾಧನ ಶರೀರ. ನೆತ್ತಿಯಿಂದ ಪ್ರಾಣಹೋದದ್ದು ಶುಭಸೂಚಕ. ಅವರ ಆತ್ಮಕ್ಕೆ ಚಿರಶಾಂತಿ ಕೋರಲು ಆಪ್ತಮಿತ್ರರೊಂದಿಗೆ ಇಡೀ ಭಕ್ತಿವೇದಾಂತ ಆಸ್ಪತ್ರೆಯೇ ನೆರೆದಿತ್ತು.

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 20, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: