Forest girl : ಅಡವಿಯ ಹುಡುಗಿ

Forest girl, a short story by Prem Shekhar
ನೀರವ ರಾತ್ರಿಯಲ್ಲಿ ಕಾಡಿನ ಮಧ್ಯದಲ್ಲಿ ಬೈಕು ಕೆಟ್ಟು ಹೋಗುತ್ತೆ, ಮೈಗೆ ರಾಚುವ ಪಕ್ಕದ ಕೆರೆಯಿಂದ ಬರುವ ತಂಗಾಳಿ, ಆ ಕಾಡಿನಲ್ಲೊಂದು ಮನೆ, ಮನೆಯಲ್ಲಿ… ಕಥೆ ಓದಿ ಮುಗಿಸುತ್ತಿದ್ದಂತೆ ಮೈ ಜುಂ ಅಂದಿರಬೇಕು, ಬಾಯಿ ಪಸೆ ಆರಿಹೋಗಿರಬೇಕು, ಕೈಬೆರಳ ತುದಿಯಲ್ಲಿ ಸಣ್ಣ ಕಂಪನ, ಬೆರಳ ನಡುವಿನಲ್ಲಿ ಇದ್ದೂ ಇಲ್ಲದಂತಹ ತೆಳ್ಳನೆಯ ಬೆವರಿನ ಪೊರೆ…. ಓದುತ್ತಾ ಓದುತ್ತಾ ಅದರಲ್ಲಿಯ ಒಂದು ಪಾತ್ರವೇ ನಾವಾಗಿರುತ್ತೇವೆ. ಇದು ನವದೆಹಲಿಯ ಪ್ರೇಮ್ ಶೇಖರ್ ಅವರ ಕಥನದ ಶೈಲಿ.
ಯಾವುಯಾವುದೋ ಗೋಜಲಿಗೆ ಸಿಕ್ಕಿಕೊಂಡು ಪಾಂಡಿಚೆರಿಯಿಂದ ಹೊರಡುವಾಗಲೇ ತಡವಾಗಿಹೋಗಿತ್ತು. ಚೆಂಗಲ್‌ಪೇಟೆ ಸಮೀಪಿಸುತ್ತಿದ್ದಂತೆ ಕತ್ತಲೆ ದಟ್ಟವಾಗಿ ಅಮರಿಕೊಳ್ಳತೊಡಗಿತ್ತು. ಇಲ್ಲಿಯವರೆಗೇನೋ ಚೆನ್ನಾಗಿ ತಿಳಿದಿದ್ದ ರಸ್ತೆ. ಮುಂದಿನದಂತೂ ನಾನೂ ಎಂದೂ ಕಾಲಿಡದ ಹಾದಿ.

ಫಾದರ್ ಆಲ್ಫಾನ್ಸೋ ವಾರದಿಂದಲೂ ತಿದಿ ಒತ್ತುವಂತೆ ಒತ್ತಿದ್ದರು. ಮಹಾಬಲಿಪುರಂನ ಸಮೀಪದ ತಿರುವಡಿಸೂಲಂನಲ್ಲಿ ಸುನಾಮಿ ಸಂತ್ರಪ್ತರ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರ ಪರಿಚಯದ ಮನುಷ್ಯನೊಬ್ಬನಿಂದ ಕೆಲವು `ವೆರಿ ವೆರಿ ಇಂಪಾರ್ಟೆಂಟ್’ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡು, ಜತೆಗೆ ಒಂದಷ್ಟು ಫೋಟೋಗಳನ್ನೂ ತೆಗೆದುಕೊಂಡು ಬರುವಂತೆ ನನ್ನನ್ನು ನಕ್ಷತ್ರಿಕನಂತೆ ಪೀಡಿಸಿಬಿಟ್ಟಿದ್ದರು. ಆ ಪತ್ರಗಳನ್ನವರು ಆದಷ್ಟು ಬೇಗನೆ ಡೆನ್‌ಮಾರ್ಕ್‌ನ ಒಂದು ಎನ್‌ಜಿಓಗೆ ಕಳುಹಿಸಬೇಕಾಗಿತ್ತಂತೆ. ಯೂನಿವರ್ಸಿಟಿಯಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಸೆಮಿನಾರ್ ಒಂದರ ಆಯೋಜನೆಯಲ್ಲಿ ತೊಡಗಿಕೊಂಡಿದ್ದ ನನಗಂತೂ ಬಿಡುವೇ ಇರಲಿಲ್ಲ. ಉದ್ಘಾಟನೆಗೆ ಪಾಂಡಿಚೆರಿಯ ಮುಖ್ಯಮಂತ್ರಿ [^], ಸಮಾರೋಪ ಸಮಾರಂಭಕ್ಕೆ ಕೇಂದ್ರೀಯ ಮಂತ್ರಿಯೊಬ್ಬರು ಬರಲೇಬೇಕೆಂದು ಡೀನ್ ಸಾಹೇಬರು ಪಟ್ಟು ಹಿಡಿದದ್ದರಿಂದ ಹಾಗೂ ಅವರ ತಾಳಕ್ಕೆ ತಕ್ಕಂತೆ ಹೆಚ್‌ಓಡಿ ಮಹಾಶಯ ಕುಣಿಯತೊಡಗಿದಾಗ ನನಗೆ ಸಾಕುಬೇಕಾಗಿಹೋಗಿತ್ತು. ಬರೀ ಪ್ರಾಧ್ಯಾಪಕರು, ವಿದ್ವಾಂಸರುಗಳಿರುವ ಸೆಮಿನಾರ್‌ಗಳನ್ನು ಆಯೋಜಿಸುವುದಾದರೆ ತೊಂದರೆಯಿಲ್ಲ. ಈ ಪುಢಾರಿಗಳನ್ನು ಎಳಕೊಂಡು ಬರುವುದೆಂದರೆ ನಮ್ಮದು ನಾಯಿಪಾಡಾಗಿಬಿಡುತ್ತದೆ. ಸೆಕ್ಯೂರಿಟಿ, ಪ್ರೋಟೋಕಾಲ್ ಎಂದೆಲ್ಲಾ ನೂರೊಂದು ರಗಳೆಗಳಿಗೆ ಸಿಕ್ಕಿಕೊಂಡು ತಲೆ ಚಿಟ್ಟುಹಿಡಿದುಹೋಗುತ್ತದೆ.

ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಸೆಮಿನಾರ್ ಒಂದಕ್ಕೆ ಈ ರಾಜಕೀಯದವರ ಉಪಸ್ಥಿತಿಯ ಅಗತ್ಯ ನನಗಂತೂ ಇಲ್ಲ. ದುರಂತವೆಂದರೆ ಉಳಿದೆಲ್ಲರಿಗೂ ಅವರವರದೇ ಕಾರಣಗಳಿಗಾಗಿ ಅದು ಇದೆ. ಸೆಮಿನಾರ್ ಮುಗಿದದ್ದು ಮೊನ್ನೆ. ಬಂದಿದ್ದವರಲ್ಲಿ ಅರ್ಧಕ್ಕರ್ಧ ಆ ಸಂಜೆಯೇ ಜಾಗ ಖಾಲಿ ಮಾಡಿದರು. ಉಳಿದವರನ್ನು ನಿನ್ನೆ ಆರೋವಿಲ್‌ಗೆ ಕರೆದುಕೊಂಡು ಹೋಗಿದ್ದೆವು. ಈವತ್ತು ದಿನಪೂರ್ತಿ ನನಗೆ ಬಿಲ್ಲುಗಳದೇ ಕೆಲಸ. ಕ್ಯಾಂಟಿನಿನವ, ಟ್ಯಾಕ್ಸಿಯವ, ಜೆರಾಕ್ಸ್ ಅಂಗಡಿಯವ- ಹೀಗೆ ನೂರೊಂದು ಜನರಿಗೆ ಹಣ ಸಂದಾಯ ಮಾಡಿ ಸಮರ್ಪಕ ರಶೀದಿಗಳನ್ನು ಪಡೆದುಕೊಳ್ಳುವುದರಲ್ಲಿ ಹಗಲು ಕಳೆದೇಹೋಯಿತು.

ಇದೆಲ್ಲದರ ನಡುವೆ ಈ ಪಾದರಿ ಮಹಾಶಯ ನನ್ನ ಬೆನ್ನಿಗೆ ಬಿದ್ದಿದ್ದ. `ನಾನೇ ಆಗಬೇಕಾ? ಇನ್ಯಾರೂ ಇಲ್ಲವಾ?’ ಎಂದು ನಾನು ರೋಸಿನಾಳ ಎದುರು ಅಸಹನೆ ಕಾರಿಕೊಂಡಿದ್ದೆ. `ನಿನ್ನ ಮೇಲೆ ಅವರಿಗೆ ತುಂಬಾ ನಂಬಿಕೆ ಇದೆ. ಅದನ್ನು ಕಳೆದುಕೊಳ್ಳಬೇಡ.’ ಅವಳದು ತಣ್ಣನೆಯ ಉತ್ತರ.

ಹೌದು, ಫಾದರ್ ಆಲ್ಫೋನ್ಸೋಗೆ ನನ್ನ ಮೇಲೆ ಅಗಾಧ ವಿಶ್ವಾಸ. ಅದನ್ನು ಹಾಗೇ ಉಳಿಸಿಕೊಳ್ಳುವುದರ ಅಗತ್ಯ ನನಗೂ ಇದೆ! ರೋಸಿನಾ ನನ್ನವಳಾಗಬೇಕಾದರೆ ಅದು ಅತ್ಯಗತ್ಯ. ಫಾದರ್ ಆಲ್ಫೋನ್ಸೋ ಅವರ ಅಣ್ಣನ ಮಗಳು ರೋಸಿನಾ. ಚಿಕ್ಕಂದಿನಿಂದಲೂ ಅವರ ರಕ್ಷಣೆ, ಆರೈಕೆಯಲ್ಲೇ ಬೆಳೆದವಳು. ಅವಳ ಮೇಲೆ ಪಾದರಿಯವರ ಋಣ ಅಗಾಧ. ಒಂದೂವರೆ ವರ್ಷಗಳ ಹಿಂದೆ ನನ್ನ – ರೋಸಿನಾಳ ಕಣ್ಣುಗಳು ಸಂಧಿಸಿದಾಗಿನಿಂದ ನಾನೂ ಆ ಋಣಕ್ಕೆ ಸಿಲುಕಿಕೊಂಡಿದ್ದೇನೆ. ಯಾವುದೇ ಕಾರಣದಿಂದ ಫಾದರ್‌ಗೆ ನನ್ನ ಮೇಲಿನ ವಿಶ್ವಾಸ ಕಳೆದುಹೋಯಿತೆಂದರೆ ನಾನು ರೋಸಿನಾಳನ್ನು ಕಳೆದುಕೊಂಡಂತೆಯೇ.

`ಯೆಹೋವನ ಟೆನ್ ಕಮ್ಯಾಂಡ್‌ಮೆಂಟ್ಸನ್ನಾದರೂ ಮೀರಿಯೇನು, ಫಾದರ್ ಮಾತನ್ನು ಮೀರುವುದು ಬಹುಷಃ ನನ್ನಿಂದಾಗದು.’ ರೋಸಿನಾ ನನ್ನ ಮುಂಗೈ ಹಿಡಿದು ಸಣ್ಣಗೆ ದನಿ ತೆಗೆಯುತ್ತಾಳೆ. ಆವಾಗೆಲ್ಲಾ ಅವಳ ಕಣ್ಣುಗಳು ಅರೆಮುಚ್ಚಿಕೊಳ್ಳುತ್ತವೆ. ರೆಪ್ಪೆಗಳ ನಡುವಿನಿಂದ ಕಣ್ಣೀರು ಜಿನುಗುತ್ತದೆ…

ಫಾದರ್ ಆಲ್ಫೋನ್ಸೋ ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೆ ಮಾಡಿದ್ದೇನೆ, ವಾರಕ್ಕೆ ನಾಲ್ಕು ಗಂಟೆ ಅವರ ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲೆಯ ಕ್ಲಾಸ್ ತೆಗೆದುಕೊಳ್ಳುತ್ತೇನೆ, ತಿಂಗಳಿಗೆರಡು ಸಲವಾದರೂ ಅವರ ವಿದೇಶೀ ಅತಿಥಿಗಳ ನಡುವೆ ಮಹಾರಾಜನಂತೆ ಕುಳಿತು ಶಾಂಪೇನ್ ಚಪ್ಪರಿಸುತ್ತೇನೆ, ಪ್ರತೀ ಶನಿವಾರ ಅವರು ಮೀನು ಬೇಟೆಗೆಂದು ಅಥವಾ ಬೇಟೆಯ ಆಟಕ್ಕೆಂದು ಉಷ್ಟೇರಿ ಲೇಕ್‌ಗೆ ಹೋಗುವಾಗ ಮುಲುಮುಲುಗುಟ್ಟುವ ಮಣ್ಣುಹುಳುಗಳ ಪೊಟ್ಟಣ ಹಿಡಿದು ಅವರ ಹಿಂದೆ ಹೋಗುತ್ತೇನೆ…

ಪ್ರೇಮ ಮನುಷ್ಯನನ್ನು ಒಮ್ಮೆ ಚಕ್ರವರ್ತಿಯಾಗಿಸಿದರೆ ಮತ್ತೊಮ್ಮೆ ಸಾಕುನಾಯಿಯಾಗಿಸುತ್ತದೆ ಎಂದು ಅದ್ಯಾವನೋ ಪುರಾತನ ರೋಮನ್ ಬುದ್ಧಿವಂತ ಹೇಳಿದ ಮಾತಿನಲ್ಲಿ ನನಗೆ ನಂಬಿಕೆ ಬಂದಿದೆ. ನೇರಕ್ಕೆ ಸಾಗಿದ್ದ ಚೆನ್ನೈ ಹೈವೇ ಬಿಟ್ಟು ಬಲಕ್ಕೆ ಹೊರಳಿ ಫ್ಲೈಓವರ್ ಕೆಳಗೆ ನುಸುಳಿ ಚೆಂಗಲ್‌ಪೇಟೆಯತ್ತ ಸಾಗಿದ್ದ ಕಿರಿದಾದ ರಸ್ತೆಗಿಳಿದೆ. ಎರಡೂ ಕಡೆಯ ಜಲಸಸ್ಯಗಳಿಂದ ತುಂಬಿದ್ದ ಜೌಗುಪ್ರದೇಶದತ್ತ ಒಮ್ಮೆ ಚಕಚಕನೆ ನೋಟ ಹೊರಳಾಡಿಸಿ ನೇರಕ್ಕೆ ನೋಡುತ್ತಾ ವಾಹನದ ವೇಗ ಹೆಚ್ಚಿಸಿದೆ. ಪಟ್ಟಣ ಪ್ರವೇಶಿಸುತ್ತಿದ್ದಂತೇ ಗಡಿಯಾರದತ್ತ ಕಣ್ಣಾಡಿಸಿದೆ. ಏಳೂವರೆಯಾಗುತ್ತಿತ್ತು. ಹಸಿವೆಯೆನಿಸಿತು. ಚೆಂಗಲ್‌ಪೇಟೆಯಲ್ಲೇ ಏನಾದರೂ ತಿಂದು ಮುಂದೆ ಹೋಗುವ ಯೋಚನೆ ಬಂದರೂ ಅದನ್ನು ತಳ್ಳಿಹಾಕಿದೆ. ನಾನು ಪಾಂಡಿಚೆರಿ ಬಿಡುವಾಗಲೇ ಐದೂವರೆ ದಾಟಿದ್ದನ್ನು ನೋಡಿ ರಾತ್ರಿ ತಿರುವಡಿಸೂಲಂನಲ್ಲೇ ಉಳಿಯಲು ಫಾದರ್ ಸೂಚಿಸಿದ್ದರು. ಅಷ್ಟೇ ಅಲ್ಲ, ಅಲ್ಲಿ ನಾನು ಭೇಟಿಯಾಗಬೇಕಾಗಿದ್ದ ಜೇಸುರತ್ನಂ ಎಂಬಾತನಿಗೆ ಫೋನ್ ಮಾಡಿ ನನಗಾಗಿ ಚಿಕನ್‌ನದ್ದೇನಾದರೂ ಅಡಿಗೆ ಮಾಡಬೇಕೆಂದು ತಾಕೀತು ಮಾಡಿ ನನ್ನ ಕೋಳಿಚಪಲದ ಸುದ್ಧಿಯನ್ನು ನನಗಿಂತಲೂ ಮೊದಲೇ ತಿರುವಡಿಸೂಲಂಗೆ ತಲುಪಿಸಿಬಿಟ್ಟಿದ್ದರು.

ಮುಖ್ಯರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ರಸ್ತೆಬದಿಯ ಚಹದಂಗಡಿಯ ಮುಂದೆ ನಿಂತೆ. ಒಂದು ಸ್ಟ್ರಾಂಗ್ ಟೀಗೆ ಹೇಳಿ ತಿರುವಡಿಸೂಲಂಗೆ ಹೋಗುವ ರಸ್ತೆಯ ಬಗ್ಗೆ ಪ್ರಶ್ನಿಸಿದೆ.

“ನೇರಕ್ಕೆ ಹೋಗಿ ಎರಡನೇ ಸರ್ಕಲ್‌ನಲ್ಲಿ ಬಲಕ್ಕೆ ತಿರುಗಿ. ಮಹಾಬಲಿಪುರಂಗೆ ಹೋಗೋ ರಸ್ತೆ ಅದು. ಅದರಲ್ಲಿ ಎರಡು ಕಿಲೋಮೀಟರ್ ಸಾಗಿದ್ರೆ ಎಡಕ್ಕೆ ತಿರುವಡಿಸೂಲಂಗೆ ಹೋಗೋ ರಸ್ತೆ ಸಿಗುತ್ತೆ. ಬೋರ್ಡಿದೆ ಅಲ್ಲಿ.” ಉತ್ತರ ಬಂತು. ಜೇಸುರತ್ನಂ ಫೋನಿನಲ್ಲಿ ಹೇಳಿದ್ದ ವಿವರವನ್ನು ಖಚಿತಪಡಿಕೊಂಡದ್ದಾಯಿತು. ಬೈಕಿನ ಮೇಲೆ ಕುಳಿತಂತೇ ಕಣ್ಣುಗಳನ್ನು ಅರೆಮುಚ್ಚಿ ಚಹಾ ಹೀರಿ ಮುಂದೆ ಸಾಗಿದೆ…

ತಿರುವಡಿಸೂಲಂ ರಸ್ತೆ ತುಂಬಾ ಕಿರಿದಾಗಿತ್ತು. ಎರಡೂ ಕಡೆ ದಟ್ಟ ಗಿಡಮರಗಳ ಗೋಡೆ. ರಸ್ತೆ ಬಳುಕಿಬಳುಕಿ ಸಾಗಿತ್ತು. ಒಂದು ಕಿಲೋಮೀಟರ್ ಸಾಗಿದರೂ ಎದುರಿನಿಂದ ಒಂದು ವಾಹನದ ಸುಳಿವೂ ಕಾಣಲಿಲ್ಲ. ಜತೆಗೇ ಮರಗಳ ದಟ್ಟಣೆ ಮತ್ತಷ್ಟು ಅಧಿಕವಾಗಿ ತಲೆಯ ಮೇಲೇ ಕಪ್ಪನೆಯ ಚಪ್ಪರ ಹರಡಿದಂತಾಗಿಬಿಟ್ಟಿತು. ನನಗೆ ಕಗ್ಗತ್ತಲ ಸುರಂಗವೊಂದರಲ್ಲಿ ಪಯಣಿಸುತ್ತಿರುವ ಭ್ರಮೆ. ಸ್ವಲ್ಪ ಅಧೀರತೆಯಲ್ಲಿ ವಾಹನದ ವೇಗ ಕುಗ್ಗಿಸುತ್ತಿದ್ದಂತೇ ಹಿಂದಿನಿಂದ ಬಂದ ಟಾಟಾ ಸುಮೋವೊಂದು ಅಸಡ್ಡೆಯಿಂದ ನೂಕುವಂತೆ ತೀರಾ ಸನಿಹದಲ್ಲೇ ನನ್ನನ್ನು ದಾಟಿ ಮುಂದೆ ಹೋಯಿತು. ಕತ್ತಲ ಸುರಂಗದಿಂದ ಕೊನೆಗೂ ಹೊರಬರುತ್ತಿದ್ದಂತೆ ರಸ್ತೆ ಏರುತ್ತಾ ಬಲಕ್ಕೆ ಹೊರಳಿಕೊಂಡಿತು. ಎಡಕ್ಕೆ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿದ್ದ ವಿಶಾಲ ಕೆರೆ. ನೆಮ್ಮದಿಯೆನಿಸಿತು. ಜೇಸುರತ್ನಂ ಹೇಳಿದ್ದಂತೆ ತಿರುವಡಿಸೂಲಂಗೆ ಇನ್ನು ನಾಲ್ಕು ಕಿಲೋಮೀಟರ್‌ಗಳಷ್ಟೇ.

ಏರುತಿರುವಿನಲ್ಲಿ ನಿಧಾನವಾಗಿ ಮುಂಬರಿದ ವಾಹನ ಅರ್ಧದಷ್ಟಕ್ಕೆ ಸಾಗಿ “ಗಡ್‌ಗಡ್ ಗಡರ್ರ್” ಎನ್ನುತ್ತಾ ನಿಂತುಬಿಟ್ಟಿತು. ಸ್ತಬ್ಧಗೊಂಡ ಎಂಜಿನ್ ಏನು ಮಾಡಿದರೂ ಮತ್ತೆ ಗಂಟಲು ತೆರೆಯಲಿಲ್ಲ. ಪೆಟ್ರೋಲ್ ಖಾಲಿಯಾಗಿರುವುದು ಸಾಧ್ಯವಿಲ್ಲ. ಪಾಂಡಿಚೆರಿ ಬಿಡುವಾಗ ಟ್ಯಾಂಕನ್ನು ಭರ್ತಿ ಮಾಡಿಸಿದ್ದೆ. ಆದರೂ ಒಮ್ಮೆ ನೋಡೋಣವೆಂದುಕೊಂಡು ಮುಚ್ಚಳ ತೆರೆದು ಟಾರ್ಚ್ ಬೆಳಕು ಹಾಯಿಸಿದೆ. ಟ್ಯಾಂಕ್ ಮುಕ್ಕಾಲು ಭಾಗ ತುಂಬಿತ್ತು. ಮುಂದಿನ ಹದಿನೈದು – ಇಪ್ಪತ್ತು ನಿಮಿಷಗಳಲ್ಲಿ ನನಗೆ ಗೊತ್ತಿದ್ದ ಕಸರತ್ತನ್ನೆಲ್ಲಾ ಮಾಡಿದೆ. ಗಾಡಿ ಜಪ್ಪಯ್ಯ ಅನ್ನಲಿಲ್ಲ. ತೊಂದರೆಯೇನೆಂದು ನನಗೆ ಅರ್ಥವಾಗಲೂ ಇಲ್ಲ. ಕೈಸೋತು ನಿಂತೆ. ಅಪರಿಚಿತ ಸ್ಥಳ, ಕತ್ತಲ ರಾತ್ರಿ, ಒಂದು ನರಪಿಳ್ಳೆಯ ಸುಳಿವೂ ಇಲ್ಲ, ಕೈಕೊಟ್ಟ ವಾಹನದ ಮುಂದೆ ನಿಸ್ಸಹಾಯಕನಾಗಿ ನಿಂತ ನಾನು. ಗಾಬರಿಗೊಂಡು ಸುತ್ತಲೂ ನೋಟ ಹೊರಳಾಡಿಸಿದೆ.

ಎಡಕ್ಕೆ ವಿಶಾಲ ಕೆರೆ. ಸುಂಯುಗುಡುತ್ತಿದ್ದ ನಸುಗಾಳಿಗೆ ಮೇಲೆದ್ದು ಮೆಲ್ಲಮೆಲ್ಲಗೆ ದಡದತ್ತ ಸಾಗಿಬರುತ್ತಿದ್ದ ಪುಟ್ಟಪುಟ್ಟ ಅಲೆಗಳು. ಕೆರೆಯಾಚೆ ಕಪ್ಪು ದೈತ್ಯನಂತೆ ನಿಂತಿದ್ದ ಕರೀಗುಡ್ಡ. ಬಲಕ್ಕೆ ಮೇಲುಮೇಲಕ್ಕೆ ಏರಿಹೋಗಿದ್ದ ಬೆಟ್ಟ. ಎಲ್ಲವೂ ನಿರ್ಜನ, ನಿಶ್ಚಲ. ಜೀರುಂಡೆಗಳ “ಝೀ”ಕಾರದ ಹೊರತಾಗಿ ಎಲ್ಲವೂ ನಿಶ್ಶಬ್ಧ. ಹಿಂದಿನಿಂದ ಯಾವುದೋ ವಾಹನದ ಲಘು ಮೊರೆತ ಕೇಳಿಬಂತು. ಛಕ್ಕನೆ ಅತ್ತ ತಿರುಗಿದೆ. ತಿರುವಿನಲ್ಲಿ ಒಮ್ಮೆ ಹರಡಿಕೊಳ್ಳುತ್ತಾ ಒಮ್ಮೆ ಮಾಯವಾಗುತ್ತಿದ್ದ ಬೆಳಕು. ಅತ್ತಲೇ ಕಣ್ಣು ಕೀಲಿಸಿದವನಿಗೆ ಹತ್ತಿರಾದದ್ದು ಒಂದು ಮೋಟಾರ್‌ಬೈಕ್. ಅದರ ಮೇಲೆ ಇಬ್ಬರಿದ್ದರು. ಕೈತೋರಿದೆ. ನಿಧಾನವಾಗಿ ಹತ್ತಿರಾದ ವಾಹನ ನನ್ನನ್ನು ಸಮೀಪಿಸುತ್ತಿದ್ದಂತೇ ಛಕ್ಕನೆ ವೇಗ ಹೆಚ್ಚಿಸಿಕೊಂಡು ಏರಿನಲ್ಲಿ ಸಾಗಿಹೋಯಿತು. ಅದರ ಎಂಜಿನ್‌ನ ಕರ್ಕಶ ಸದ್ದು ನನ್ನ ಕಿವಿಗಳ ತಮಟೆಗಳನ್ನು ಹರಿದುಹಾಕಿಬಿಡುತ್ತದೆನಿಸಿ ನಾನು ಕಿವಿಗಳನ್ನು ಬಿಗಿಯಾಗಿ ಮುಚ್ಚಿಕೊಂಡೆ.

ಆ ನರಕದ ತುತ್ತೂರಿಯಂಥ ಸದ್ದು ದೂರಾಗುತ್ತಿದ್ದಂತೇ ನಡೆದದ್ದೇನೆಂದು ನನ್ನ ಅರಿವಿಗೆ ಬಂತು. ಆ ವಾಹನ ನನ್ನ ಪಕ್ಕ ಸರಿದೋಡುತ್ತಿದ್ದಾಗ ಅದರ ಸವಾರರನ್ನು ನಾನು ಸ್ಪಷ್ಟವಾಗಿ ನೋಡಿದ್ದೆ. ನಾನು ಕಂಡದ್ದೇನು? ಚಾಲಕನ ಮುಖ ಭೂತದರ್ಶನವಾದಂತೆ ಬಿಳಿಚಿಹೋಗಿತ್ತು. ಪಿಲಿಯನ್‌ನಲ್ಲಿದ್ದವ ತನ್ನ ಮುಖವನ್ನು ಚಾಲಕನ ಬೆನ್ನಿಗೆ ಬಲವಾಗಿ ಒತ್ತಿಕೊಂಡಿದ್ದ. ಅವನ ಕೈಗಳು ಚಾಲಕನ ಎರಡೂ ಭುಜಗಳನ್ನು ಅವಚಿ ಹಿಡಿದುಬಿಟ್ಟಿದ್ದವು!

ಇದೇಕೆ ಹೀಗೆ? ನಾನು ಗಾಬರಿಗೊಂಡೆ. ರೋಸಿನಾ, ಫಾದರ್ ಆಲ್ಫೋನ್ಸೋ, ಜೇಸುರತ್ನಂನ ಮುಖಗಳು ಕ್ಷಣದಲ್ಲಿ ಕಣ್ಣೆದುರು ಮೂಡಿದವು. ಸೊಂಟದ ಬೆಳ್ಟ್‌ನಿಂದ ಸೆಲ್‌ಫೋನ್ ತೆಗೆದೆ. ಜೇಸುರತ್ನಂನ ನಂಬರನ್ನು ನೆನಪಿಗೆ ತಂದುಕೊಳ್ಳುತ್ತಾ ಗುಂಡಿಗಳನ್ನು ಆತುರಾತುರವಾಗಿ ಒತ್ತಿ ಕಿವಿಗೆ ಹಿಡಿದೆ.

“ಟಿಣ್ ಟೊಂಯ್ ಟಿಣ್!” ಕಿವಿ ಇರಿದ ಸದ್ದಿಗೆ ಬೆಚ್ಚಿ ಸೆಲ್‌ಫೋನಿನ ಪರದೆಯತ್ತ ಗಾಬರಿಯ ನೋಟ ಹೂಡಿದೆ. ಅಲ್ಲಿ ಕಂಡದ್ದು… “ಕಾಲ್ ಫೈಯಿಲ್ಡ್.”

ಹತ್ತಿರದಲ್ಲೆಲ್ಲೂ ಟವರ್ ಇರುವ ಸಾಧ್ಯತೆ ಇಲ್ಲ ಎನ್ನುವ ಭೀಕರ ಸತ್ಯ ನನ್ನೆದುರು ಅನಾವರಣಗೊಂಡಿತ್ತು. ತಣ್ಣಗೆ ನಿಂತು ಯೋಚಿಸಿದೆ. ಎಂದೂ ಕೈಕೊಡದ ನನ್ನ ಹೀರೋ ಹೋಂಡಾ ಇಂದು ಈ ನಿರ್ಜನ ಪ್ರದೇಶದಲ್ಲಿ ಕೈಕೊಟ್ಟಿದೆ. ನಾನೀಗ ಯಾರನ್ನೂ ಸಂಪರ್ಕಿಸಲು ಸಾಧ್ಯವಿಲ್ಲ. ಈ ದಾರಿಯಲ್ಲಿ ಯಾರಾದರೂ ಬಂದರೂ ಅವರು ನನಗೆ ಸಹಾಯ ನೀಡುವುದಿಲ್ಲ ಎನ್ನುವುದು ನಿಮಿಷದ ಹಿಂದೆಯಷ್ಟೇ ಸಾಬೀತಾಗಿದೆ.

ಇದೆಲ್ಲದರಿಂದ ನಾನು ಧೈರ್ಯಗೆಡುವುದು ಬೇಡ. ಇದೊಂದು ಕೆಟ್ಟ ಅನುಭವವಾಗುವುದರ ಬದಲು ನಾಳೆ ರೋಸಿನಾಳಿಗೆ ಹೇಳಿಕೊಂಡು ನಗುವಂಥ ಒಂದು ಸ್ವಾರಸ್ಯಕರ ಅನುಭವವಾಗಬೇಕು. ಮುಂದಿನ ನಾಲ್ಕು ಕಿಲೋಮೀಟರ್‌ಗಳನ್ನು ನಡೆದುಬಿಟ್ಟರೆ ಹೇಗೆ? ಅದಕ್ಕಿಂತಲೂ ಉತ್ತಮವಾದ ಮಾರ್ಗ ಬೇರೊಂದಿಲ್ಲ.

ಬೈಕನ್ನು ತಳ್ಳಿಕೊಂಡು ಹೋಗಿ ರಸ್ತೆ ಬದಿಯ ದಟ್ಟ ಪೊದೆಯ ಹಿಂದೆ ನಿಲ್ಲಿಸಿ ಲಾಕ್ ಮಾಡಿದ್ದಲ್ಲದೇ ಚಕ್ರಕ್ಕೆ ಚೈನ್ ಸಹಾ ಹಾಕಿ ಬೀಗ ಹಾಕಿದೆ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋದ ಹೆಸರಿಲ್ಲದ ಇರುಳ್ವಕ್ಕಿಯನ್ನು ಶಪಿಸಿ ಹೆಗಲಿಗೆ ಚೀಲ ತೂಗುಹಾಕಿಕೊಂಡು ರಸ್ತೆಗಿಳಿದೆ. ಎರಡು ಹೆಜ್ಜೆ ನಡೆಯುವಷ್ಟರಲ್ಲಿ ಹಿಂದಿನಿಂದ ಯಾವುದೋ ವಾಹನದ ಶಬ್ಧ ಕೇಳಿ ನನ್ನ ಹೆಜ್ಜೆಗಳು ತಾವಾಗಿಯೇ ಸ್ಥಗಿತಗೊಂಡವು. ಮರುಕ್ಷಣ ನಿಮಿಷಗಳ ಹಿಂದಿನ ಅನುಭವ ನೆನಪಿಗೆ ಬಂತು. ನೇರವಾಗಿ ಮುಂದಕ್ಕೆ ನೋಡುತ್ತಾ ಏರುಹಾದಿಯಲ್ಲಿ ವೇಗವಾಗಿ ಹೆಜ್ಜೆ ಸರಿಸಿದೆ. ಹಿಂದಿನಿಂದ ಏದುತ್ತಾ ಬಂದ ವಾಹನ ನನ್ನ ನಿರೀಕ್ಷೆಗೆ ವಿರುದ್ಧವಾಗಿ ನನ್ನ ಪಕ್ಕದಲ್ಲೇ ನಿಂತಿತು. ನಿಂತು ಅತ್ತ ತಿರುಗದೇ ವಿಧಿಯಿರಲಿಲ್ಲ. ಅದೊಂದು ಹಳೆಯ ಜೀಪ್. ಚಾಲಕನ ಮೋರೆ ಸರಿಯಾಗಿ ಕಾಣದಿದ್ದರೂ ಅವನ ಹೊರತಾಗಿ ಬೇರಾರೂ ಇಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.

“ಎಲ್ಲಿಗೆ ಹೋಗ್ತಿದೀಯ?” ಈ ನೆಲದ್ದಲ್ಲದ ಉಚ್ಛಾರಣೆಯ ಇಂಗ್ಲಿಷ್‌ನಲ್ಲಿ ಪ್ರಶ್ನೆ ಬಂತು. ಹೇಳಿದೆ. ಮುಂದಿನ ಪ್ರಶ್ನೆಗೆ ಅವಕಾಶವಿಲ್ಲದಂತೆ ನನ್ನ ಬೈಕ್ ಕೈಕೊಟ್ಟ ಕಥೆಯನ್ನೂ ಚುಟುಕಾಗಿ ವಿವರಿಸಿದೆ. ಅವನೊಮ್ಮೆ ಲೊಚಗುಟ್ಟಿದ. “ಬೈಕ್ ಬಗ್ಗೆ ಈಗೇನೂ ಮಾಡೋಕೆ ಆಗೋಲ್ಲ. ನಾಳೆ ಬೆಳಿಗ್ಗೆ ನನ್ನ ಕೆಲಸದವನನ್ನ ಚೆಂಗಲ್‌ಪೇಟೆಗೆ ಕಳಿಸಿ ಮೆಕ್ಯಾನಿಕ್ ಕರೆಸಬಲ್ಲೆ. ಜೀಪ್ ಹತ್ತು. ನಿನ್ನನ್ನ ತಿರುವಡಿಸೂಲಂಗೆ ತಲುಪಿಸ್ತೀನಿ.” ಕೈಚಾಚಿ ಬಾಗಿಲು ತೆರೆದ. ಇದೂ ಒಂದು ಅನುಭವ. ಹತ್ತಿದೆ. ಈಗ ಅವನನ್ನು ಸರಿಯಾಗಿ ನೋಡುವ ಅವಕಾಶ. ಅರವತ್ತು ದಾಟಿದಂತಿದ್ದ ವಿದೇಶೀ ಮುದುಕ. ಜೀಪಿನ ಟಾಪಿಗೆ ತಾಗುತ್ತಿದ್ದ ತಲೆ, ಬೆಳ್ಳನೆಯ ಉಡುಪಿನಲ್ಲಿದ್ದ ಕುಗ್ಗದ ದೇಹ.

“ನಾನು ಹ್ಯಾರಿಸ್… ಹ್ಯಾರಿಸ್ ವಿಲ್ಸನ್.” ತನ್ನ ಪರಿಚಯ ಹೇಳಿಕೊಂಡ. “ಹದಿನೈದು ವರ್ಷಗಳಿಂದ ಇಲ್ಲಿ ಸೆಟ್ಲ್ ಆಗಿದ್ದೀನಿ. ನನ್ನ ಮನೆ ಇಲ್ಲಿಂದ ಅರ್ಧ ಕಿಲೋಮೀಟರ್ ದೂರ.” ವಾಹನವನ್ನು ಮುಂದಕ್ಕೆ ಚಿಮ್ಮಿಸಿ ಪ್ರಶ್ನೆ ಹಾಕಿದ: “ನಿನ್ನ ಬಗ್ಗೆ ಹೇಳು.”

ನನ್ನ ಹೆಸರು ಹೇಳಿ, ಪಾಂಡಿಚೆರಿ ವಿಶ್ವವಿದ್ಯಾಲದಲ್ಲಿ ನಾನೊಬ್ಬ ಅಧ್ಯಾಪಕ ಎಂದು ಹೇಳುತ್ತಿದ್ದಂತೆ ಆತ “ಊಹ್ ಊಹ್! ಎಂದು ಉದ್ಗಾರ ತೆಗೆದ. “ಗ್ರೇಟ್” ಎನ್ನುತ್ತಾ ಎಡಗೈಯಿಂದ ನನ್ನ ಭುಜ ತಟ್ಟಿದ. “ನನ್ನ ಮಗ ಸಹಾ ಯೂನಿವರ್ಸಿಟಿ ಪ್ರೊಫೆಸರ್, ಸಿಡ್ನಿಯಲ್ಲಿ.” ದನಿಯಲ್ಲಿ ಹೆಮ್ಮೆಯಿತ್ತು. ಮುಂದಿನ ತಿರುವಿನಲ್ಲಿ ಛಕ್ಕನೆ ಬ್ರೇಕ್ ಒತ್ತಿದ.

“ಮಳೆ ಬರೋ ಹಾಗಿದೆ.” ಲೊಚಗುಟ್ಟಿದ. “ನನಗೆ ಹತ್ತು ನಿಮಿಷ ಅವಕಾಶ ಕೊಡು. ನನ್ನ ಹೆಂಡತಿಯನ್ನ ಮನೆಗೆ ಕರಕೊಂಡು ಬರೋ ಸಮಯ ಇದು. ಅವಳು ಮನೆ ಸೇರಿದ ತಕ್ಷಣ ನಿನ್ನನ್ನ ನಿನ್ನ ಸ್ಥಳಕ್ಕೆ ಸೇರಿಸ್ತೀನಿ.” ಪ್ರತಿಕ್ರಿಯೆಗೂ ಕಾಯದೇ ರಸ್ತೆಯನ್ನು ಬಿಟ್ಟು ಎಡಕ್ಕೆ ಗುಡ್ಡಗಳೆರಡರ ನಡುವೆ ನುಸುಳಿಹೋಗಿದ್ದ ಹಾದಿಗಿಳಿದ. ಮಾತು ಮುಂದುವರೆದಿತ್ತು: “ಇಲ್ಲಿಂದ ಒಂದು ಫರ್ಲಾಂಗ್ ದೂರ ನನ್ನ ಮನೆ. ಗುಡ್ಡದ ಆಚೆ ಕೆಳಗಿರೋ ಪುಟ್ಟ ಹಳ್ಳಿಯ ಕಡೆ ಸರ್ಕಾರದ ಗಮನ ಇಲ್ಲ. ಅಲ್ಲಿನ ಜನರಿಗೆ ನನ್ನ ಹೆಂಡತಿ ದಿನಾ ಸಂಜೆ ಪಾಠ ಹೇಳ್ತಾಳೆ. ಅವರ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧೋಪಚಾರ ಸಹಾ. ಅಲ್ಲಿಗೆ ಜೀಪ್ ಹೋಗೋದಿಲ್ಲ. ಸಂಜೆ ಐದುಗಂಟೆಗೆ ಅಲ್ಲಿಗೆ ನಡೆದುಹೋಗ್ತಾಳೆ. ಹಿಂದಕ್ಕೆ ಬರೋದು ಎಂಟೂವರೆಗೆ. ನಾನು ಹೋಗಿ ಕರಕೊಂಡು ಬರಬೇಕು. ಕತ್ತಲಲ್ಲಿ ಒಂಟಿಯಾಗಿ ಬರೋದಿಕ್ಕೆ ಅವಳಿಗೆ ಭಯ. ಹಾವುಗಳಿಗೆ ಅವಳು ವಿಪರೀತ ಹೆದರ್ತಾಳೆ.” ನಕ್ಕು ಮರುಕ್ಷಣ ದನಿ ತಗ್ಗಿಸಿದ: “ನಿನಗೊಂದು ವಿಷಯ ಹೇಳಬೇಕು. ಆ ಕೆರೆ… ಅದನ್ನ ಪೇಯಿ ಕುಳಂ ಅಂತಾರೆ.”

ಪೇಯಿ ಕುಳಂ! ದೆವ್ವದ ಕೊಳ!

ಅವನತ್ತ ತಿರುಗಿದೆ. ರಸ್ತೆಯ ಮೇಲೆ ದೃಷ್ಟಿ ನೆಟ್ಟಿದ್ದ ಅವನಿಂದ ಗಂಭೀರ ದನಿಯಲ್ಲಿ ಮಾತು ಬಂತು: “ಅಲ್ಲಿ ಅಚಾನಕ್ ಆಗಿ ಕೆಟ್ಟು ನಿಂತ ವಾಹನ ನಿನ್ನದೊಬ್ಬನದೇ ಅಲ್ಲ.” ನಾನು ಬೆಚ್ಚಿದೆ. ಮೈ ಸಣ್ಣಗೆ ಕಂಪಿಸಿತು. “ಹಾಗಂದರೆ…?” ಅವನು ಮಾತಾಡಲಿಲ್ಲ. ಕೈ ಒದರಿದ: “ಅಹ್ ಫರ್‌ಗೆಟ್ ಇಟ್.” ಅವನ ಮುಖವನ್ನೇ ದಿಟ್ಟಿಸಿದೆ. ಅವನ ತುಟಿಗಳು ಬಿಗಿದುಕೊಂಡಿದ್ದವು. ತಿರುವಿನಲ್ಲಿ ಸರ್ರನೆ ವಾಹನ ಹೊರಳಿಸಿ ನಿಲುಗಡೆಗೆ ತಂದ. ಹೊರಗೆ ಹಾರಿ ಗೇಟ್ ತೆರೆದು ಮತ್ತೆ ಒಳಸೇರಿ ವೀಲ್ ಹಿಡಿದ. ನಾಲ್ಕು ಮಾರು ಮುಂದೆ ಸಾಗಿ ಬ್ರೇಕ್ ಒತ್ತಿದ. “ಇಳಿ.” ನನ್ನತ್ತ ನೋಡದೇ ಹೇಳಿದ. ಕೆಳಗಿಳಿದು ಮುಂಭಾಗದಲ್ಲಿ ಹೆಂಚು ಹೊದಿಸಿದ್ದ ಒಂದಂತಸ್ತಿನ ವಿಶಾಲ ಮನೆಯ ಮುಂದೆ ನಿಂತೆ. “ಒಂದು ನಿಮಿಷ ನಿಲ್ಲು” ಎನ್ನುತ್ತಾ ಜೀಪನ್ನು ಮನೆಯ ಹಿಂಭಾಗಕ್ಕೆ ಕೊಂಡೊಯ್ದ.

ಸುತ್ತಲೂ ನೋಟ ಹರಿಸಿದೆ. ಎಡಕ್ಕೆ ನಾವು ಬಂದ ಹಾದಿ ದಟ್ಟ ವೃಕ್ಷಗಳ ಹಿಂದೆ ಮುಚ್ಚಿಹೋಗಿತ್ತು. ಮನೆಯ ಹಿಂದೆ ಇನ್ನೂ ಮೇಲಕ್ಕೆ ಏರಿಹೋಗಿದ್ದ ಗುಡ್ಡ. ಎದುರಿನ ಇಳಿಜಾರು ಕಪ್ಪು ಕಂಬಳಿಯೊಂದನ್ನು ಹಾಸಿದಂತಿತ್ತು. ಬಲಕ್ಕೆ ಕೆಳಗೆ ಗಿಡಮರಗಳ ನಡುವೆ ಅರೆಬರೆ ಇಣುಕುತ್ತಿದ್ದ ಪೇಯಿ ಕುಳಂ. ನಾವು ಕೆರೆಯನ್ನು ಸುತ್ತಿ ಅದರ ಮತ್ತೊಂದು ಪಾರ್ಶ್ವದ ಗುಡ್ಡವನ್ನು ಅರ್ಧ ಏರಿಬಂದಿರುವುದು ಗಮನಕ್ಕೆ ಬಂತು. ಗಡಿಯಾರವನ್ನು ಮುಖದ ಹತ್ತಿರಕ್ಕೆ ತಂದು ಸಮಯ ನೋಡಿದೆ. ಎಂಟೂವರೆಗೆ ಎರಡು ನಿಮಿಷಗಳಿದ್ದವು. ಗಡಿಯಾರದಿಂದ ತಲೆ ಮೇಲೆತ್ತುತ್ತಿದ್ದಂತೆ ಅವನು ಕಾಣಿಸಿಕೊಂಡ. ನೀಳ ಬೀಗದ ಕೈ ಹೂಡಿ ಮುಂಬಾಗಿಲು ತೆರೆದ. ಒಂದು ಕೈ ಒಳತೂರಿ ಸ್ವಿಚ್ ಒತ್ತಿ ಬೆಳಕು ಮೂಡಿಸಿದ. “ಎರಡು ನಿಮಿಷ ಒಳಗೆ ಕೂರು.” ಪ್ರತಿಕ್ರಿಯೆಗೂ ಕಾಯದೇ ನೆಲದ ಮೇಲೆ ಟಾರ್ಚ್‌ನ ಬೆಳಕು ಆಡಿಸುತ್ತಾ ಪೇಯಿ ಕುಳಂ ಕಡೆಗಿನ ಇಳಿಜಾರಿನಲ್ಲಿ ಹಿಂತಿರುಗಿ ನೋಡದೇ ಧಾಪುಗಾಲು ಹಾಕಿದ. ಎರಡು ಕ್ಷಣದಲ್ಲಿ ಮರಗಳ ಹಿಂದೆ ಮರೆಯಾಗಿಹೋದ.

ನಾನು ಗರಬಡಿದು ನಿಂತೆ. ಒಳಗೆ ಹೋಗುವುದೇ ಬೇಡವೇ? ಯೋಚಿಸಲು ಸಮಯವೇ ಇರಲಿಲ್ಲ. ತಲೆಯ ಮೇಲೆ ತಣ್ಣನೆಯ ಹನಿಯೊಂದು ಬಿತ್ತು. ಮುಂದಿನ ಕ್ಷಣದಲ್ಲಿ ಹತ್ತು ತಣ್ಣನೆಯ ಸೂಜಿಗಳು. ಮನೆಯೊಳಗೆ ಪ್ರವೇಶಿಸಿದೆ. ಇದೂ ಒಂದು ಅನುಭವ. ಎರಡು ಟ್ಯೂಬ್‌ಲೈಟ್‌ಗಳ ಬೆಳಕಿನಲ್ಲಿ ಮೀಯುತ್ತಿದ್ದ ವಿಶಾಲ ಹಜಾರ. ನೆಲಕ್ಕೆ ಹಾಸಿದ್ದ ಮೆತ್ತನೆಯ ರತ್ನಗಂಬಳಿ, ಮೆತ್ತೆ ಹಾಕಿದ್ದ ಬೆತ್ತದ ಸೋಫಾಗಳು, ಕುರ್ಚಿಗಳು, ಗಾಜಿನ ಹೊದಿಕೆಯ ಬೆತ್ತದ್ದೇ ಟೀಪಾಯ್. ಮುಸುಕು ಹೊದ್ದ ಟೀವಿ, ಮತ್ತೊಂದು ಮೂಲೆಯಲ್ಲಿ ಎತ್ತರಕ್ಕೆ ನಿಂತಿದ್ದ ಸ್ಪೀಕರ್‌ಗಳ ನಡುವೆ ನಾಚಿದಂತೆ ಕುಳಿತಿದ್ದ ಮ್ಯೂಸಿಕ್ ಸಿಸ್ಟಮ್, ಅದರ ಒಂದು ಪಕ್ಕದ ಗಾಜಿನ ಗೋಡೆಯ ಹಿಂದೆ ನೂರುಗಟ್ಟಲೆಯಲ್ಲಿದ್ದ ಸಿಡಿಗಳು, ಕ್ಯಾಸೆಟ್‌ಗಳು… ಒಂದುಗೋಡೆಯ ಮೇಲಿದ್ದ ಎರಡು ಪುಟ್ಟ ಪುಟ್ಟ ತೈಲ ಚಿತ್ರಗಳು… ಬೇರೆಲ್ಲೂ ಕಂಡಿರದಿದ್ದ ಸ್ವಚ್ಛತೆ, ಈಗಷ್ಟೇ ಎಲ್ಲವನ್ನೂ ಜೋಡಿಸಿಟ್ಟಂತಹ ಅಚ್ಚುಕಟ್ಟುತನ. ಇದ್ಯಾವುದೋ ಮಾಯಾಲೋಕವಿರಬೇಕೆನಿಸಿತು.

ಹೊರಗೆ ಮಳೆಯ ರಭಸ ಅಧಿಕವಾಯಿತು. ಹಿಂದೆಯೇ ಹುಯ್ಲಿಡುವ ಗಾಳಿ. ಮೆದುಳಿಗೆ ಸೂತಕದಂತಹ ಮುಸುಕು ಕವಿದುಕೊಳ್ಳುತ್ತಿದೆ ಅನಿಸುತ್ತಿದ್ದಂತೇ ಫಕ್ಕನೆ ದೀಪಗಳು ಆರಿಹೋದವು. ಎಲ್ಲೆಡೆ ಗಾಢಾಂಧಕಾರ. ಬೆಚ್ಚಿ ಮೇಲೆದ್ದು ನಿಂತೆ. ಸಾವರಿಸಿಕೊಂಡು ಮತ್ತೆ ಕುಳಿತೆ. ರೋಸಿನಾ ಏಕಾಏಕಿ ನೆನಪಾದಳು. ನನಗೇ ಧೈರ್ಯ ಹೇಳಿಕೊಳ್ಳುವಂತೆ ಅವಳ ನಂಬರ್ ಒತ್ತಿದೆ. ಮತ್ತೆ ಕಾಲ್ ಫೆಯಿಲ್ಡ್!

ಹ್ಯಾರಿಸ್‌ನ ಸುಳಿವಿಲ್ಲ. ಈ ಮಳೆಯಲ್ಲಿ ಅವನು ಹಿಂತಿರುಗಲಾರ. ಬಡಿದ ಸಿಡಿಲಿಗೆ ಇಡೀ ಮನೆ ಅದುರಿತು. ಒಹ್ ಇದೇನಾಗುತ್ತಿದೆ! ನಾನೆಲ್ಲಿದ್ದೇನೆ?

ಹೆದರಿಕೆ ಹುಟ್ಟಿಸುವಂಥ “ದೆವ್ವದ ಕೊಳ” ಎಂಬ ಹೆಸರಿನ ಕೆರೆ, ಅಲ್ಲಿ ಕೆಟ್ಟು ನಿಂತ ಬೈಕ್, ನನಗೆ ಹೆದರಿ ಓಡಿಹೋದ ಬೈಕ್ ಸವಾರರು, ಸಹಾಯಹಸ್ತ ನೀಡಿ ಇಲ್ಲಿಗೆ ಕರೆತಂದು ಒಂಟಿಯಾಗಿ ಕೂರಿಸಿ ಮಾಯವಾಗಿಹೋದ ವಿದೇಶೀ ಮುದುಕ… ಈ ಸುಡುಗಾಡಿನಲ್ಲಿ ಸುಸಜ್ಜಿತ ವಾಸದ ಮನೆ… ಎಲ್ಲವೂ ಅರ್ಥಕ್ಕೆ ನಿಲುಕದ ಅಸಹಜ ಬಿಡಿಬಿಡಿ ಚಿತ್ರಗಳು. ಇದಾವುದೂ ವಾಸ್ತವವಾಗಿರಲು ಸಾಧ್ಯವಿಲ್ಲ. ಈಗ ನಿಜವಾಗಿಯೂ ನನ್ನೆದೆಯಲ್ಲಿ ಹೆದರಿಕೆ ಮೂಡಿತು. “ಹೀಗೇನು ಮಾಡುವುದು” ಎಂಬ ಪ್ರಶ್ನೆ ಭೂತಾಕಾರವಾಗಿ ಮೇಲೇಳುತ್ತಿದ್ದಂತೇ ಒಳಬಾಗಿಲಲಲ್ಲಿ ಮಸುಕು ಬೆಳಕು ಕಾಣಿಸಿಕೊಂಡಿತು.

ಮನೆಯೊಳಗೆ ಯಾರೋ ಇದ್ದಾರೆ! ನನ್ನ ಕಣ್ಣೆದುರೇ ಹ್ಯಾರಿಸ್ ಬೀಗ ತೆರೆದು ಬೆಳಕು ಮೂಡಿಸುವವರೆಗೆ ಕತ್ತಲಲ್ಲಿ ಮುಳುಗಿದ್ದ ಮನೆಯಲ್ಲಿ…!

ಹಾರತೊಡಗಿದ ಎದೆಯನ್ನು ಒತ್ತಿ ಹಿಡಿದು ಅತ್ತಲೇ ನೋಟ ಕೀಲಿಸಿದೆ. ನಿಧಾನವಾಗಿ ಅಧಿಕಗೊಳ್ಳುತ್ತಿದ್ದ ಬೆಳಕಿನ ಜತೆ ಕಿವಿಗೆ ಸ್ಪಷ್ಟವಾಗಿ ಬಿದ್ದ ಹೆಜ್ಜೆಯ ಸಪ್ಪಳಗಳು. ಮುಂದಿನ ಕ್ಷಣದಲ್ಲಿ ಮೊಂಬತ್ತಿ, ಹಿಂದೆಯೇ ಅನಾವರಣಗೊಂಡ ದೀಪಧಾರಿಣಿ. ದುಂಡನೆಯ ಬಿಳುಪು ಮುಖ. ಸುತ್ತಲಿನ ಕತ್ತಲೆಯೇ ಮೈಗೆ ಮೆತ್ತಿಕೊಂಡಂಥ ಕಪ್ಪು ಗೌನ್‌ನಲ್ಲಿದ್ದ ಮೂವತ್ತರ ಅಸುಪಾಸಿನ ಹೆಂಗಸು. ಬೆಚ್ಚಿ ಗಕ್ಕನೆ ಮೇಲೆದ್ದೆ. ಅವಳು ನನಗಿಂತಲೂ ಅಧಿಕವಾಗಿ ಬೆಚ್ಚಿದಳು! ಗೋಚರವಾಗುವಂತೆ ಕಂಪಿಸಿದ ಅವಳ ದೇಹ. ಮೊಂಬತ್ತಿ ಆರಿಹೋಗುವಷ್ಟು ತೀವ್ರವಾಗಿ ಅಲುಗಿತು.

“ನೀನು… ನೀನು ಯಾರು? ಯಾರು ನೀನು? ಒಳಗೆ ಹೇಗೆ ಬಂದೆ?” ಅತೀವ ಗಾಬರಿಯಲ್ಲಿ ಕೂಗಿದಳು.
ನಾನು ಕಂಗಾಲಾಗಿಹೋದೆ. “ನಾನು… ನಾನು…” ತೊದಲಿದೆ. “ಹ್ಯಾರಿಸ್… ಹ್ಯಾರಿಸ್ ಇಲ್ಲಿ ಕೂರಿಸಿ ಹೋದ.”

ಅವಳ ಮುಖ ಬಿಳಿಚಿಕೊಂಡಿತು. ನನ್ನ ಮೇಲೆ ದೃಷ್ಟಿ ನೆಟ್ಟಂತೇ ನಿಧಾನವಾಗಿ ಮುಂದೆ ಬಂದು ಮೊಂಬತ್ತಿಯಿದ್ದ ಕಂಚಿನ ಸ್ಟ್ಯಾಂಡನ್ನು ಟೀಪಾಯ್ ಮೇಲಿಟ್ಟಳು. “ಮತ್ತೊಮ್ಮೆ ಹೇಳು, ಇಲ್ಲಿಗೆ ಹೇಗೆ ಬಂದೆ?” ಕಣ್ಣುಗಳಲ್ಲಿ ಅಗಾಧ ಕೌತುಕ.

ನಾನು ಸಾವರಿಸಿಕೊಂಡಿದ್ದೆ. ನನ್ನ ಬೈಕ್ ಕೆಟ್ಟುಹೋಗಿದ್ದರಿಂದ ಹಿಡಿದು ಹ್ಯಾರಿಸ್ ಇಲ್ಲಿಗೆ ಕರೆತಂದದ್ದರವರೆಗೆ ವಿವರವಾಗಿ ಹೇಳಿದೆ. ಎಲ್ಲವನ್ನೂ ಹೇಳಿಬಿಡಬೇಕು, ಅದೊಂದೇ ಈ ನಾಟಕೀಯ ಪ್ರಸಂಗದಿಂದ ಹೊರಬರಲು ನನಗಿರುವ ದಾರಿ ಎಂದು ನನಗನಿಸಿತ್ತು. ಅವಳು ರೆಪ್ಪೆ ಅಲುಗಿಸದೇ ಕೇಳಿದಳು. ನನ್ನ ಮಾತು ಮುಗಿಯುವ ಹೊತ್ತಿಗೆ ಅವಳ ಹಣೆಯ ಮೇಲೆ ಈ ತಂಪು ಹವೆಯಲ್ಲೂ ಬೆವರಹನಿಗಳು ಕಾಣಿಸಿಕೊಂಡಿದ್ದವು. ಹತ್ತಿರದ ಸೋಫಾದಲ್ಲಿ ಕುಸಿದ ಅವಳು ಮೌನವಾಗಿ ನನ್ನನ್ನೇ ನೋಡತೊಡಗಿದಳು. ಹೊರಗೆ ಮಳೆಯ ರಭಸ ಕಡಿಮೆಯಾಗಿತ್ತು.

“ಹ್ಯಾರಿಸ್ ಬಂದ ತಕ್ಷಣ ಹೊರಟುಬಿಡ್ತೀನಿ. ಮಳೆ ನಿಲ್ಲದಿದ್ದರೂ ಪರವಾಗಿಲ್ಲ.” ನನಗೇ ಹೇಳಿಕೊಳ್ಳುವಂತೆ ಹೇಳಿದೆ. ಅವಳು ನಿಟ್ಟುಸಿರಿಟ್ಟಳು.
“ಹ್ಯಾರಿಸ್ ಬರೋದಿಲ್ಲ.” ಪಿಸುಗಿದಳು.
“ಅಂದ್ರೆ…?” ನಾನು ಹೆಚ್ಚುಕಡಿಮೆ ಚೀರಿದೆ.
“ಹ್ಯಾರಿಸ್ ಸತ್ತುಹೋಗಿದ್ದಾನೆ. ಅವನ ಹೆಂಡತಿಯೂ ಸಹಾ. ಇಂದಿಗೆ ಸರಿಯಾಗಿ ಒಂದು ವರ್ಷ.” ಅವಳಿಂದ ಅದೇ ಪಿಸುದನಿಯಲ್ಲಿ ಬಿಡಿಬಿಡಿ ಪದಗಳು ಹೊರಬಂದವು.

ನಾನು ಗರಬಡಿದು ಕುಸಿದೆ. ಅವಳು ಕಣ್ಣುಗಳಿಗೆ ಕರವಸ್ತ್ರ ಒತ್ತಿದಳು. “ನಾನು ಮಾರ್ಥಾ, ಮಾರ್ಥಾ ವಿಲ್ಸನ್. ಹ್ಯಾರಿಸ್ ಮತ್ತು ಸೋಫಿಯಾರ ಮಗಳು… ಇಂದಿಗೆ ಸರಿಯಾಗಿ ಒಂದು ವರ್ಷ… ಡ್ಯಾಡ್‌ದು ಬರ್ತ್‌ಡೇ ಅವತ್ತು. ನಾನು ಸಿಡ್ನಿಯಿಂದ ಬಂದಿದ್ದೆ. ಹೀಗೆ ಮಳೆಯ ರಾತ್ರಿ ಅದು. ಮಹಾಬಲಿಪುರಂನಲ್ಲಿ ಡಿನ್ನರ್ ಮುಗಿಸಿ ಬರ್ತಾ ಇದ್ವಿ. ಅದೇ ಆ ಪೇಯಿ ಕುಳಂ…” ನಿಲ್ಲಿಸಿದಳು. ನಾನು ಬೆರಗುಹತ್ತಿ ಮುಖವನ್ನು ಮುಂದೆ ತರುತ್ತಿದ್ದಂತೇ ಮುಂದುವರೆಸಿದಳು: “ಡ್ರೈವ್ ಮಾಡ್ತಾ ಇದ್ದದ್ದು ನಾನೇ. ತಿರುವಿನಲ್ಲಿ ನಿಯಂತ್ರಣ ಕಳಕೊಂಡು ಜೀಪ್ ಕೆರೆಗೆ ಉರುಳಿಬಿತ್ತು. ನಾನು ಹೊರಗೆ ಹಾರಿ ಬಚಾವಾದೆ. ಆದ್ರೆ… ಮಮ್ ಅಂಡ್ ಡ್ಯಾಡ್… ಮುಳುಗಿಹೋದ್ರು… ಹೋಗಿಬಿಟ್ರು.”

ದುರಂತಕಥೆಯೊಂದರ ಅನಾವರಣ ನನ್ನನ್ನು ಗಾಢವಾಗಿ ಅಲುಗಿಸಿಬಿಟ್ಟಿತು. ಮಾತು ಹೊರಡಲಿಲ್ಲ. ನಿಮಿಷದ ನಂತರ ಕಷ್ಟಪಟ್ಟು “ಐ ಆಮ್ ಸಾರೀ” ಎಂಬ ಮೂರು ಪದಗಳನ್ನು ಹೊರಡಿಸಿದೆ. ಅವಳು ತುಟಿ ತೆರೆದಳು. ಯಾರಿಗಾದರೂ ಹೇಳಿಕೊಳ್ಳಬೇಕೆಂಬ ತುಡಿತವೋ, ಹೇಳತೊಡಗಿದಳು. ಹತ್ತು – ಹನ್ನೆರಡು ನಿಮಿಷಗಳವರೆಗೆ ಅವ್ಯಾಹತವಾಗಿ ಹರಿದ ಅವಳ ಮಾತುಗಳನ್ನು ನಾನು ಕಣ್ಣವೆ ಅಲುಗಿಸದೇ ಕೇಳಿದೆ. ಹ್ಯಾರಿಸ್ ಮೂಲತಃ ಸ್ಕಾಟ್‌ಲೆಂಡಿನವ. ಹೆಂಡತಿ ಸೋಫಿಯಾ ಆಸ್ಟ್ರೇಲಿಯಾದವಳು. ಮದುವೆಯ ನಂತರ ಹ್ಯಾರಿಸ್ ಆಸ್ಟ್ರೇಲಿಯಾಗೇ ವಲಸೆ ಹೋದ. ದಂಪತಿಗೆ ಇಬ್ಬರು ಮಕ್ಕಳು. ಮಗ ಜೋನಥನ್, ಮಗಳು ಮಾರ್ಥಾ. ಹದಿನೈದು ವರ್ಷಗಳ ಹಿಂದೆ ಹ್ಯಾರಿಸ್ ಹೆಂಡತಿ ಜೊತೆ ಇಂಡಿಯಾಗೆ ಪ್ರವಾಸ ಬಂದ. ಈ ದೇಶ ಅವರಿಬ್ಬರಿಗೂ ತುಂಬಾ ಇಷ್ಟವಾಗಿಬಿಟ್ಟಿತು. ಇಲ್ಲೇ ಸೆಟ್ಲ್ ಆಗೋ ನಿರ್ಧಾರ ಮಾಡಿದ್ರು. ಬ್ರಿಟಿಷ್ ಪಾದ್ರಿಯೊಬ್ಬನಿಗೆ ಸೇರಿದ್ದ ಈ ಮನೆ ಕೊಂಡು ಇಲ್ಲಿ ನೆಲೆಸಿದರು. ಸುತ್ತಲ ಹಳ್ಳಿಗರ ಪ್ರೀತಿವಿಶ್ವಾಸ ಗಳಿಸಿದರು. ಸೋಫಿಯಾ ಹಳ್ಳಿಗರಿಗೆ ಪಾಠ ಹೇಳುವುದಲ್ಲದೇ ಅವರ ಸಣ್ಣಪುಟ್ಟ ಕಾಯಿಲೆಗಳಿಗೆ ಮದ್ದು ಮಾಡುತ್ತಿದ್ದಳು. ಅವಳಿಗೆ ಅದೊಂದು ಹುಚ್ಚೇ ಆಗಿಬಿಟ್ಟಿತು. ಹ್ಯಾರಿಸ್ ಚಿತ್ರವಿಚಿತ್ರ ಗಿಡಗಂಟೆಗಳನ್ನು ಬೆಳೆಸಿಕೊಂಡು ಅವುಗಳ ಆರೈಕೆಯಲ್ಲಿ ಖುಷಿಪಡತೊಡಗಿದ. ಪ್ರತೀ ಸಂಜೆ ಎಂಟೂವರೆಗೆ ಗುಡ್ಡದ ಕೆಳಗಿನ ಹಳ್ಳಿಗೆ ಹೋಗಿ ಹೆಂಡತಿಯನ್ನು ಕರೆದುಕೊಂಡು ಬರುವುದು ಅವನ ದಿನಚರಿಯ ಒಂದು ಭಾಗ. ವಿಲ್ಸನ್ ದಂಪತಿ ಇಲ್ಲಿ ಬದುಕಿದ ಬಗೆ ಇದು. ಮಗ – ಮಗಳು ಸಿಡ್ನಿಯಲ್ಲೇ ಉಳಿದರು. ಜೋನಥನ್ ಈಗ ಅಲ್ಲಿನ ಯೂನಿವರ್ಸಿಟಿಯಲ್ಲಿ ತತ್ವಶಾಸ್ತ್ರ ಬೋಧಿಸುತ್ತಿದ್ದಾನೆ. ಅವನಿಗೆ ಮದುವೆಯಾಗಿದೆ. ನನ್ನೆದುರು ಕೂತ ಮಗಳು ಮಾರ್ಥ ಒಬ್ಬಳು ನನ್. ನ್ಯೂಗಿನಿ, ಸೋಲೋಮನ್ ಐಲ್ಯಾಂಡ್ಸ್, ಸಮೋವಾ ಮುಂತಾದ ಫೆಸಿಫಿಕ್ ದ್ವೀಪಗಳಲ್ಲಿ ಮತಪ್ರಚಾರದ ಸುತ್ತಾಟ ಅವಳಿಗೆ ಇಷ್ಟವಾದ ಕೆಲಸ. ತಾನು ಎಲ್ಲಿದ್ದರೂ ಸರಿ ಪ್ರತಿವರ್ಷ ತಂದೆತಾಯಿಯರ ಹುಟ್ಟಿದ ಹಬ್ಬಗಳಂದು ತಪ್ಪದೇ ಇಲ್ಲಿಗೆ ಬರುತ್ತಾಳೆ. ಕಳೆದ ವರ್ಷವೂ ಬಂದಿದ್ದಳು. ದುರಂತ ಘಟಿಸಿದ್ದು ಆಗಲೇ. ತಂದೆಯ ಹುಟ್ಟಿದ ಹಬ್ಬ ಮತ್ತೆ ಬಂದಿದೆ. ಆದರೆ ತಂದೆ ಈಗ ಇಲ್ಲ. ತಾಯಿ ಸಹಾ. ಆದರೂ ಮಾರ್ಥಾಳಿಗೆ ಇಲ್ಲಿನ ಸೆಳೆತ ತಪ್ಪಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಇಲ್ಲಿಗೆ ಬಂದಿದ್ದಾಳೆ…

ಕೇಳಿದ ವಿವರಗಳನ್ನು ಅರಗಿಸಿಕೊಳ್ಳುತ್ತಿದ್ದಂತೇ ಅವಳಿಂದ ಮಾತು ಬಂತು: “ನಾನು ಒಂಟಿಯಾಗಿ ಕೂತು ಅಳ್ತಾ ಇದ್ದೆ. ನನ್ನ ದುಃಖ ಹಂಚಿಕೊಳ್ಳೋದಿಕ್ಕೆ ನೀನು ಬಂದಿದ್ದೀಯ.”

ವಿಷಾದದ ನಗೆಯೊಂದು ನನ್ನಿಂದ ಹೊರಡುತ್ತಿದ್ದಂತೆ ಅವಳು ಕಣ್ಣುಗಳನ್ನು ಒರೆಸಿಕೊಂಡು ತಲೆಯೆತ್ತಿದಳು: “ಈ ಮನೆಯನ್ನ ಮಾರಿಬಿಡಬೇಕು ಅನ್ನೋ ಯೋಚನೆ ನನಗೆ ಬಂದದ್ದುಂಟು. ಆದರೆ ಕೊಂಡುಕೊಳ್ಳೋಕೆ ಯಾರೂ ಮುಂದೆ ಬರ್ತಾ ಇಲ್ಲ. ಇಲ್ಲಿ ಅಸಹಜ ಘಟನೆಗಳು ನಡೀತಿವೆ ಅಂತ ಹೇಳಿ ಹಳ್ಳಿಯ ಜನರೂ ಇತ್ತ ಬರೋದಿಲ್ಲ. ಮನೆಯನ್ನ ಸ್ವಚ್ಛವಾಗಿಡೋಕೆ, ತೋಟವನ್ನ ನೋಡಿಕೊಳ್ಳೋಕೆ ಒಂದು ಕುಟುಂಬವನ್ನ ಹೆಚ್ಚು ಹಣದಾಸೆ ತೋರಿಸಿ ಕಷ್ಟಪಟ್ಟು ಒಪ್ಪಿಸಿದ್ದೀನಿ. ಆ ಜನರ ಓಡಾಟ ಇಲ್ಲಿ ಹಗಲಲ್ಲಿ ಮಾತ್ರ. ಕತ್ತಲಾದ ಮೇಲೆ ಒಂದು ನರಪಿಳ್ಳೆಯೂ ಇತ್ತ ಸುಳಿಯೋದಿಲ್ಲ. ನಂಗೆ ಒಮ್ಮೊಮ್ಮೆ ಅನ್ಸುತ್ತೆ, ಮಮ್ ಹಾಗೂ ಡ್ಯಾಡ್‌ಗೆ ಇಷ್ಟವಾದ ಈ ಮನೆಯಲ್ಲೇ ಇದ್ದುಬಿಡೋಣ ಅಂತ.” ಕಣ್ಣುಗಳನ್ನು ಅರೆಮುಚ್ಚಿದಳು. ತಗ್ಗಿದ ದನಿಯಲ್ಲಿ ಮಾತು ಸಾಗಿತ್ತು: “ಅವರಿಬ್ರೂ ಮಾಡ್ತಾ ಇದ್ದ ಕೆಲಸಾನ್ನ ಮುಂದುವರಿಸ್ಕೊಂಡು, ಇಲ್ಲೇ, ಈ ಕಾಡುಜನರ ನಡುವೆ ಈ ಕಾಡಿನ ಮಗಳಾಗಿ ಇದ್ದುಬಿಡೋಣವಾ ಅಂತ.”

“ಕಾಡಿನ ಮಗಳು! ಅಡವಿಯ ಹುಡುಗಿ!” ಸಣ್ಣಗೆ ನಕ್ಕೆ. ಅವಳು ನನ್ನತ್ತ ತಿರುಗಿದಳು. “ಯೆಸ್, ಅದೇ. ಅಡವಿಯ ಹುಡುಗಿ.” ಕನಸಿನಲ್ಲೆಂಬಂತೆ ಹೇಳಿಕೊಂಡಳು. ನಾನು ಪ್ರತಿಕ್ರಿಯಿಸುವ ಮೊದಲೇ ಛಕ್ಕನೆ ದನಿಯೆತ್ತರಿಸಿ ಪ್ರಶ್ನಿಸಿದಳು: “ನಿನ್ನ ಯೋಚನೆ ಏನು? ನೀನು ಈಗಲೇ ನಿನ್ನ ದಾರಿ ಹಿಡಿದು ಹೋಗೋದಿಕ್ಕೆ ಬಯಸ್ತೀಯೇನು? ಅಥವಾ ಈ ರಾತ್ರಿ ಇಲ್ಲೇ ಉಳಿಯೋದಿಕ್ಕೆ ನೀನು ಇಷ್ಟಪಟ್ರೆ ಈ ಅಡವಿಯ ಹುಡುಗಿಯ ಅಭ್ಯಂತರ ಇಲ್ಲ.” ಸಣ್ಣಗೆ ನಕ್ಕು ಮುಂದುವರೆಸಿದಳು: “ಬೆಳಿಗ್ಗೆ ತಿರುವಡಿಸೂಲಂಗೆ ನಿನ್ನ ಜತೆ ನಾನೂ ನಡೆದು ಬರ್ತೀನಿ. ನನಗೆ ಒಂದು ಬದಲಾವಣೆ ಅದು.”

ಕಣ್ಣುಗಳನ್ನು ಅರೆಮುಚ್ಚಿ ಯೋಚಿಸಿದೆ. ಮಳೆ ನಿಂತಿತ್ತು. ನಿರ್ಧಾರಕ್ಕೆ ಬಂದೆ.

“ದಯವಿಟ್ಟು ತಪ್ಪು ತಿಳೀಬೇಡ ಮಾರ್ಥಾ. ನಾನು ಎಷ್ಟೇ ಆದ್ರೂ ಒಬ್ಬ ಅಪರಿಚಿತ. ಇದು ನಿನ್ನ ವೈಯುಕ್ತಿಕ ಕ್ಷಣ. ಇಲ್ಲಿ ನನ್ನ ಅತಿಕ್ರಮಣ ಸೌಜನ್ಯ ಅನ್ನಿಸೋದಿಲ್ಲ. ನಾನು ಈಗ ಹೊರಡ್ತೀನಿ. ನನಗಾಗಿ ಅಲ್ಲಿ ಜೇಸುರತ್ನಂ ಕಾಯ್ತಿದಾನೆ. ಮಳೆ ನಿಂತಿದೆ. ನನ್ನತ್ರ ಟಾರ್ಚ್ ಇದೆ.”

ಅವಳು ನಿಟ್ಟುಸಿರಿಟ್ಟಳು. “ಸರಿ, ನಿನ್ನಿಷ್ಟ.” ನಿಧಾನವಾಗಿ ಮೇಲೆದ್ದಳು. “ಒಂದು ನಿಮಿಷ ಕೂರು, ನಿನಗೆ ಟೀ ತರ್ತೀನಿ.” ಒಳಕೋಣೆಯ ಬಾಗಿಲ ಕತ್ತಲಲ್ಲಿ ಕರಗಿಹೋದಳು. ಬೊಗಸೆಯಲ್ಲಿ ಮುಖವಿಟ್ಟು ಯೋಚನೆಗೆ ಬಿದ್ದೆ. ಇದೆಲ್ಲವೂ ವಾಸ್ತವವೇ? ಅಥವಾ ಕನಸೇ? ನನ್ನನ್ನಿಲ್ಲಿ ಕರೆತಂದದ್ದು ಹ್ಯಾರಿಸ್‌ನ ಪ್ರೇತವೇ? ಯಾಕಾಗಿ? ಹೊರಬಾಗಿಲಲ್ಲಿ ಸದ್ದಾಯಿತು. ತಲೆಯೆತ್ತಿದೆ. ಮಾರ್ಥಾ ಇಟ್ಟುಹೋಗಿದ್ದ ಮೊಂಬತ್ತಿಯ ತಣ್ಣನೆಯ ಬೆಳಕಿನಲ್ಲಿ ಕಂಡದ್ದು…! ರಕ್ತ ಹೆಪ್ಪುಗಟ್ಟಿಸುವ ನೋಟ! ನಖಶಿಖಾಂತ ಬೆವತುಹೋದೆ.

ಅಲ್ಲಿ… ಒದ್ದೆಯಾಗಿಹೋಗಿದ್ದ ಬಟ್ಟೆಗಳನ್ನು ಒದರಿಕೊಳ್ಳುತ್ತಾ ನಿಂತಿದ್ದ… ಹ್ಯಾರಿಸ್! ಅದೇ ಬಿಳಿಯುಡುಗೆ. ಪಕ್ಕದಲ್ಲಿ ಬಿಳಿಯದೇ ಉಡುಪಿನಲ್ಲಿ ಒಬ್ಬಳು ವಯಸ್ಕ ಹೆಂಗಸು. ಚೀರಲೆಂದು ನಾನು ಬಾಯಿ ತೆರೆಯುತ್ತಿದ್ದಂತೇ ಅವನು ನಕ್ಕ. “ಸಾರೀ ಮ್ಯಾನ್. ಈ ಮಳೆಯಿಂದಾಗಿ ನಿನ್ನನ್ನ ಹೆಚ್ಚು ಹೊತ್ತು ಕಾಯಿಸಬೇಕಾಯ್ತು.” ಪಕ್ಕದಲ್ಲಿದ್ದ ಹೆಂಗಸಿನತ್ತ ತಿರುಗಿದ: “ನೋಡು ಸೋಫಿ, ಇವನೇ ನಾನು ಹೇಳಿದ ಆ ಬಡಪಾಯಿ.”

ಹೆಂಗಸು ನನ್ನತ್ತ ನೋಡಿ ಮುಗುಳ್ನಕ್ಕಳು. ನಾನು ಹತಾಷೆಯಲ್ಲಿ ಒಳಕೋಣೆಯ ಬಾಗಿಲತ್ತ ತಿರುಗಿದೆ. ಮತ್ತೆ ಇತ್ತ ತಿರುಗುವಷ್ಟರಲ್ಲಿ ಹ್ಯಾರಿಸ್ ನನ್ನಿಂದ ಕೇವಲ ಎರಡು ಅಡಿಗಳಷ್ಟು ಹತ್ತಿರದಲ್ಲಿದ್ದ. ಅವನ ಮುಖ ಬೆಳ್ಳಗೆ ಬಿಳಿಚಿಹೋಗಿತ್ತು.

“ಏನಾಯ್ತು? ಯಾಕಿಷ್ಟು ಹೆದರಿದ್ದೀಯ?” ಅವನ ದನಿಯಲ್ಲಿ ಗಾಬರಿಯಿತ್ತು. ನನ್ನ ಭುಜದತ್ತ ಕೈಚಾಚಿದ. ನಾನು ಅತೀವ ಭೀತಿಯಲ್ಲಿ “ಓಹ್ ನೋ” ಎಂದು ಚೀರಿ ಎರಡು ಹೆಜ್ಜೆ ಹಿಂದೆ ಹಾರಿದೆ. “ಮಾರ್ಥಾ, ಪ್ಲೀಸ್ ಬೇಗ ಬಾ.” ಭೀತಿಯಲ್ಲಿ ಅರಚಿದೆ.

ನನ್ನತ್ತ ಚಾಚಿದ್ದ ಅವನ ಕೈ ಹಾಗೇ ಗಾಳಿಯಲ್ಲಿ ನಿಶ್ಚಲವಾಗಿ ನಿಂತುಬಿಟ್ಟಿತು. ಬಾಗಿಲಲ್ಲೇ ನಿಂತಿದ್ದ ಅವನ ಹೆಂಡತಿ ಧಾಪುಗಾಲಿಟ್ಟು ನನ್ನತ್ತ ಓಡಿಬಂದಳು. ಅವಳ ಕಣ್ಣುಗಳು ಅಗಲವಾಗಿ ತೆರೆದುಕೊಂಡಿದ್ದವು. ಮುಖ ಶವದಂತೆ ಬಿಳಿಚಿಹೋಗಿತ್ತು. “ಮಾರ್ಥಾ! ಮಾರ್ಥಾ! ಎಲ್ಲಿದ್ದಾಳೆ ಅವಳು?” ಆತುರಾತುರವಾಗಿ ಪ್ರಶ್ನಿಸಿದಳು.

ನನ್ನ ಕೈ ಅಯಾಚಿತವಾಗಿ ಒಳಕೋಣೆಯ ಬಾಗಿಲತ್ತ ಚಾಚಿತು. “ಒಳಗೆ ಹೋದ್ಲು… ಈಗ.” ನನ್ನ ದನಿ ನನಗೇ ಅಪರಿಚಿತವಾಗಿತ್ತು. ಇಬ್ಬರೂ ಮುಖ ಮುಖ ನೋಡಿಕೊಂಡರು. “ಸ್ಟ್ರೇಂಜ್!” ಹ್ಯಾರಿಸ್ ಉದ್ಗರಿಸಿದ. “ಮಾರ್ಥಾ ಸತ್ತುಹೋದಳು, ಇಂದಿಗೆ ಸರಿಯಾಗಿ ಒಂದು ವರ್ಷ. ನನ್ನ ಬರ್ತ್‌ಡೇ ಆವತ್ತು. ಆ ದಿನವೇ ನನ್ನ ಮಗಳನ್ನ ಕಳಕೊಂಡೆ.”

ನಾನು ಶಿಲೆಯಾಗಿ ನಿಂತೆ. ಅವನ ಮಾತು ಮುಂದುವರೆದಿತ್ತು: “ನನ್ನ ಬರ್ತ್‌ಡೇಗಾಗಿ ಸಿಡ್ನಿಯಿಂದ ಬಂದಿದ್ಲು ಅವಳು. ಮಹಾಬಲಿಪುರಂನಲ್ಲಿ ಡಿನ್ನರ್ ಮುಗಿಸಿ ಬರ್ತಾ ಇದ್ವಿ. ಆ ದಿನವೂ ಇಂಥದೇ ಮಳೆ. ಡ್ರೈವ್ ಮಾಡ್ತಾ ಇದ್ದದ್ದು ಅವಳೇ. ತಿರುವಿನಲ್ಲಿ ನಿಯಂತ್ರಣ ಕಳಕೊಂಡು ಜೀಪ್ ಕೆರೆಗೆ ಉರುಳಿಬಿತ್ತು. ಮುಂಭಾಗ ಪೂರ್ತಿ ನೀರಿನಲ್ಲಿ. ಹಿಂದಿನ ಸೀಟ್‌ನಲ್ಲಿದ್ದ ನಾವಿಬ್ರೂ ಪ್ರಯಾಸದಿಂದ ಹೊರಗೆ ಬಂದ್ವಿ. ಆದ್ರೆ… ಮಾರ್ಥಾ… ಹೋಗಿಬಿಟ್ಲು. ಅವಳಿದ್ದ ಜೀಪಿನ ಮುಂಭಾಗ ನೀರಲ್ಲಿ ಮುಳುಗಿಹೋಗಿತ್ತು. ಅವಳಿಗೆ ಏಟು ಬಿದ್ದಿತ್ತು. ಜತೆಗೇ ಸೀಟಿನಲ್ಲಿ ಸಿಕ್ಕಿಕೊಂಡಿದ್ಲು. ಹೊರಗೆ ಬರೋದಿಕ್ಕೆ ಅವಳಿಗೆ…”

ಅವನು ಹೇಳುತ್ತಲೇ ಇದ್ದ. ನಾನು ಕಾಲುಗಳ ಸ್ವಾಧೀನ ತಪ್ಪಿ ಕೆಳಗೆ ಕುಸಿದೆ

ಪ್ರೇಮಶೇಖರ, ನವದೆಹಲಿ
Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 20, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: