Marathi Chandru : ಮರಾಠಿ ಚಂದ್ರು

ಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.

ಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ…? ಇವನು ಚಿಕ್ಕಮಗಳೂರಿನ ಒಂದು ಚಿಕ್ಕಹಳ್ಳಿಯ ಗ್ರಾಮಸ್ತ, ನೋಡಲು ಹಾವಾಡಿಗನಂತೆ ಕಾಣುವ ಈತ, ಮಾತಿನ ಮಲ್ಲ. ಮೂರನೆ ಕ್ಲಾಸ್ ದಾಟದಿದ್ದರೂ, ನಿಮಿಷಕ್ಕೆ 360 ಮಾತನಾಡುವುದು ಇವನ ಸ್ಪೆಷಲ್ ಕೆಪಾಸಿಟಿ. ಬಾಯಿತುಂಬ ಜರದ, ಹೊಗೆಸೊಪ್ಪು ಇದ್ರೇನೆ ಇವನ ಆಟ. ಫಿಟ್ಸ್ ರೋಗವಿದ್ದರೂ ಅದಕ್ಕೆ ಕೇರ್ ಮಾಡೋ ಆಸಾಮಿಯಲ್ಲ. ಹಾಗಾಗಿ ಬೆಳಗಿನ ಗಂಜಿಕಾಸುವ ಬೆಂಕಿಗೆ ಇವನ ಕೈ-ಮೈಗಳು ಆಹುತಿಯಾಗಿ ಇವನ ಸೌಂದರ್ಯಕ್ಕೆ ವಿಶೇಷವಾದ ಕಳೆಬರುವಂತೆ ಮಾಡಿವೆ.

ಕುಡುಕನಲ್ಲದಿದ್ದರೂ ಕುಡುಕರಿಗಿಂತಲೂ ಕಡೆಯಾಗಿ ಯೋಚಿಸುವ ಶಕ್ತಿ ದೈವದತ್ತ ಬಳುವಳಿಯಾಗಿ ಇವನಲ್ಲಿದೆ. ಮೂರಕ್ಷರ ಕಲಿತಿದ್ದರೆ ಎಮ್.ಎಲ್.ಎ, ಹೋಗಲಿ, ಪಂಚಾಯತ್ ಅಧ್ಯಕ್ಷನಾಗಿಯಾದರೂ ಹಳ್ಳಿಯನ್ನು ಆಳುತಿದ್ದ. ಈಗೇನು ಕಮ್ಮಿಯಿಲ್ಲ.. ಊರವರನ್ನೆಲ್ಲ ಎದುರು ಹಾಕಿಕೊಂಡು ಒಂದು ಕೈ ನೋಡಿಯೆಬಿಡುವೆ ಎನ್ನಬಲ್ಲ….

ಹೋಯ್ ಹಾಗದರೆ ಚಂದ್ರು ಯಾರು..? ಅವನಿಗೆ ಅಷ್ಟೊಂದು ಸಾಮರ್ಥ್ಯ ಇದೆಯೇ ಎಂದು ಅವನ ಮನೆ ಪಕ್ಕದ ‘ಶೀತ’ರಾಮನಲ್ಲಿ ಕೇಳಿದರೆ….”ಸ್ವಾಮಿ ಕೈಯಲ್ಲಿ ಗರಟ ಹಿಡಿದು ನಿಲ್ಲಲು ಶಕ್ತಿಯಿಲ್ಲದಿದ್ದರೂ, ತುಂಬ ಒರಟ, ಹೊಡಿತೀನಿ ,ಬಡಿತೀನಿ ಅಂತಾನೆ ಬಡ್ಡೀಮಗ” ಎಂದು ಬೀಡಿ ಸೇದುತ್ತಾ ಹೇಳ್ತಾನೆ.

ಸರಿ, ಈ ಚಂದ್ರುಗೆ ಯಾಕೆ ಬಂತು ಈ ಹಾಳಾದ ರೋಗ ಅಂತ ಅವನೆಲ್ಲೆ ಕೇಳಿದರೆ, “ನಂಗೆ ಈ ವರ್ಸ ಸರ್ಪದ ದೋಸ ಇದೆ, ಹಾಗಾಗಿ ಹಿಂಗೆ ಮಾತಾಡ್ತ ಇರಬೇಕಾಗಿದೆ, 500 ರೂ ಸಾಲ ಕೊಡಿ, ದೊರಗಲ್ಲ ಭಟ್ಟರತ್ರ ಪೂಜೆಮಾಡಿಸುತ್ತೇನೆ” ಅಂತ ಸಾಲಕೇಳೊ ಐನಾತಿ ಈ ಚಂದ್ರು.

ಇವನ ಕೊಳಕು ಮಾತುಗಳನ್ನು ಕೇಳಿ-ಕೇಳಿ ರೋಸಿ ಹೋದ ಇವನ ಜೊತೆಗಾರರು ಇವನಿಗೆ ತಕ್ಕ ಶಾಸ್ತಿ ಮಾಡಲು ಇವನನ್ನು ತಮ್ಮಜೊತೆ ಭಟ್ಟರಮನೆ ತೋಟದ ಕೆಲಸಕ್ಕೆ ಬಾರದಂತೆ ಕಂಡಿಶನ್ ಹಾಕಲು ಪ್ಲಾನ್ ಮಾಡಿಟ್ಟುಕೊಂಡಿದ್ದಾರೆ. ಅರೇ ಅವನು ಕೆಟ್ಟದಾಗಿ ಬಯ್ದರೆ ಇವರೇಕೆ ಬಯ್ಯಿಸಿಕೊಳ್ಳಬೇಕು? ಯಾಕೆ ನಾಲ್ಕು ಬಾರಿಸುತ್ತಿಲ್ಲ ಆ ಬಡ ಜೀವಿಗೆ, ಇವರೇನು ಗಾಂಧಿವಾದಿಗಳೇ? ಅದಕ್ಕೆ ಉತ್ತರ ಅವನ ಜಾತಿ. ಇವನು ಅನ್ಟ್‍ಚ್ಚೇಬಲ್ ಸಾಲಿಡ್ ಒಬ್ಜೆಕ್ಟ್!

ಸರ್ಕಾರದ ಪಾಲಿಸಿಗಳು ಎಲ್ಲಿಯತನಕ ಮಿಸ್ಯುಸ್ ಆಗುತ್ತವೆ ಅನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಇವನ ಪಂಗಡವನ್ನು ದಲಿತರ ಗುಂಪಿಗೆ ಸೇರಿಸಿದ್ದರಿಂದ ಅವರ ಸವಲತ್ತುಗಳು ಇವನಿಗೆ ಲಭ್ಯವಾಗಿದೆ. ಹಾಗಾಗಿ ಇವನಿಗೆ ಹೊಡೆತ ಬಿದ್ದರೆ, ದಲಿತರ ದೌರ್ಜನ್ಯದ ಹೆಸರಿನಲ್ಲಿ ಹೊಡೆದವನ ಹೆಡೆಮುರಿಯುವ ಸರ್ಕಾರ, ಇವನ ಕೈಗೆ ಹಣ ಇಡುತ್ತೆ, ಪರಿಹಾರದ ರೂಪದಲ್ಲಿ. ಹೀಗಾಗಿ ತನ್ನ ಮೇಲೆ ಒಂದು ಮಾತನಾಡಿದರೆ ನೂರು ಮಾತನಾಡುವ ಶಕ್ತಿ ಸರ್ಕಾರ ಇವನಿಗೆ ದಯಪಾಲಿಸಿದೆ. ಹಾಗಾಗಿ ತನ್ನ ಕುಡುಕ ಜೊತೆಗಾರರಿಗೆ ಗಂಟಲೊಳಗಿನ ಬಿಸಿರಮ್ ನಂತಾಗಿದ್ದನೆ.

ಚಂದ್ರುವಿಗೆ ತಕ್ಕ ಪಾಠ ಕಲಿಸಲು ಮೇಸ್ತ್ರಿ ‘ಶೀತ’ರಾಮನು ಹೆಂಡದಂಗಡಿಯಲ್ಲಿ ವಿಶೇಷವಾದ ಸಭೆಯೊಂದನ್ನು ಕರೆದು, ಅಂಗಡಿಯವ ಸಾಲ ನಿರಾಕರಿಸುವವರೆಗೆ ಕುಡಿದು, ಚಂದ್ರುವನ್ನು ಭಟ್ಟರಮನೆಯ ಕೆಲಸದಿಂದ ಬಹಿಷ್ಕರಿಸುವ ನಿರ್ಣಯಕ್ಕೆ ಬರುತ್ತಾರೆ. ಮಾರನೇ ದಿನ ಮೇಸ್ತ್ರಿ ತನ್ನ ಜೊತೆಗಾರರ ಜೊತೆಗೆ ಭಟ್ಟರಲ್ಲಿ ತಮ್ಮ ನಿರ್ಣಯವನ್ನು ತಿಳಿಸುತ್ತಾರೆ. ಆದರೆ ಅವರಿಗೆ ಅವನಮೇಲೆ ಯಾವುದೇ ದ್ವೇಷವಿಲ್ಲ, 15 ವರ್ಷದ ಸೇವೆ ಮನಸ್ಸಿನಲ್ಲಿದೆ ಜೊತೆಗೆ ಅವನ ಸಾಲದ ಲೆಕ್ಕ ಪುಸ್ತಕದಲ್ಲಿದೆ. ನೋಡ್ರಪ್ಪ ನಿಮ್ಮ ಜಗಳವನ್ನೆಲ್ಲ ನಮ್ಮ ಮನೆ ಕಾಂಪೌಂಡ್ ಒಳಗೆ ತರಬೇಡಿ ಎಂದರು. ಅವಿವೇಕಿಗಳಾದ ಮೇಸ್ತ್ರಿ ಕಡೆಯವರು ಹೆಂಡದಂಗಡಿಯಲ್ಲಿ ಕೊಂಡ ತೀರ್ಮಾನಕ್ಕೆ ಅಂಟಿಕೊಂಡಿದ್ದರು. ಕೆಲಸದ ಸಮಯವನ್ನೆಲ್ಲ ವ್ಯರ್ಥಮಾಡುವ ಲಕ್ಷಣತೋರಿದ್ದರಿಂದ ಅವರ ತೀರ್ಮಾನಕ್ಕೆ ಅಸ್ತು ಅನ್ನದೆ ವಿಧಿಯಿರಲಿಲ್ಲ.

ಇಷ್ಟಾಗುವಾಗ ಚಂದ್ರು ಅಲ್ಲಿ ಪ್ರತ್ಯಕ್ಷನಾಗಿದ್ದನು, ಕೆಲಸಗಾರರೆಲ್ಲ ಚದುರಿದರು. ಆದರೆ ಅವರ ಮಾತುಗಳು ವಾತಾವರಣದಲ್ಲಿ ಹಾಗೆ ಉಳಿದು ಚಂದ್ರುವಿನ ಕಿವಿಹೊಕ್ಕಿತು. ಬಾಯಿಯಲಿದ್ದ ಜರದ ತಲೆಗೇರಿ ದರಿದ್ರನ ಮನಸ್ಸನ್ನು ದಿಕ್ಕಪಾಲಾಗಿಸಿತು. ಅಗಿಯುತಿದ್ದ ಜರದವನ್ನು ಅಲ್ಲೇ ತುಪ್ಪಿ ಶುರುವಿಟ್ಟನು, ಸೂಳೆಮಕ್ಕಳ, ನಿಮ್ಮ ಹಣೆಬರಹ [^]ಕ್ಕೆ ಬೆಂಕಿಹಾಕ, ಹೇಸಿಗೆ ತಿನ್ನುವ ನಾಯಿಗಳ, ನಿಮ್ಮ ಮಾತಿಗೆಲ್ಲ ಜಗ್ಗುವಮಗನಲ್ಲ ಎನ್ನುತ್ತ ತನ್ನ ಸಾಹುಕಾರನ್ನು ಕೂಗಿದನು.

ಭಟ್ಟರೆ ನೀವು ಆ ನಾಯಿಗಳ ಮಾತು ಕೇಳ್ತಿರಾ, ನಿಮ್ಮ ಮನೆ ಕೆಲಸಕ್ಕೆ ನಾ ಬೇಡ ಅನ್ನೋಕೆ ಆ ತೋಲಪ್ಪನಾಯಕನ್ಯಾರು? ಸರಿ..ಬಿಡಪ್ಪ ನಿನಗೆ ನನ್ನ ಸ್ನೇಹಿತನ ಮನೆಯಲ್ಲಿ ಕೆಲಸ ಕೊಡಿಸುವ-ಅಂದರೆ, ಅವನು-ಹೋ, ಇದೆಲ್ಲ ಒಪ್ಪುವ ಮಗ ನಾನಲ್ಲ. ನಾನು ದುಡಿಯುವ ಮನುಷ್ಯ, ಎಲ್ಲಿ ಬೇಕಾದರು ದುಡಿಯಬಲ್ಲೆ, ಆದರೆ ನನ್ನ ಸೇವೆ ಏನಿದ್ದರು ಈ ಮನೆಗೆ. ನನ್ನ ಸಾಲವೇನು ಅವರಪ್ಪ ತೀರಿಸುತ್ತಾರ, ನಾ ಇಲ್ಲಿ ಕೆಲಸ ಮಾಡೋದು ಯಾರು ತಪ್ಪಿಸುತ್ತಾರೆ ನೋಡೇಬಿಡುವೆ ಎನ್ನುತ್ತ, ಭಟ್ಟರ ಉತ್ತರಕ್ಕೂ ಕಾಯದೆ ಬಿರಬಿರನೆ ನಡೆದ.

ಸಂಜೆಕಳೆಯಿತು, ಚಂದ್ರು ಹೊರಬಂದು ಸೀದ ಮೇಸ್ತ್ರಿಮನೆ ಮುಂದೆ ಹೋದ, ಆಗತಾನೆ ಕುಡಿದು ಬಂದಿದ್ದ ಮೇಸ್ತ್ರಿಯನ್ನು ಜೋರಾಗಿ ಕೂಗಿದ. ವಠಾರದಲ್ಲಿದ್ದವರೆಲ್ಲ ಅಲ್ಲಿ ಸೇರಿದ್ದರು, ಉತ್ತೇಜನಗೊಂಡ ಚಂದ್ರು-ದುಷ್ಟ ಬೋಳಿಮಗನೆ, ನನ್ನ ಕೆಲಸಕ್ಕೆ ಬ್ಯಾಡ ಅನ್ನುತಿಯೇನೊ? ಎಂದ. ಮತ್ತಿನಲ್ಲಿ ತೇಲುತಿದ್ದ ಮೇಸ್ತ್ರಿ ಹೆದರಿಸಲು ದೊಣ್ಣೆಯೊಂದಿಗೆ ಹೊರಬಂದ. ಮಾತಿಗೆ ಮಾತು ಬೆಳೆದು, ಗಂಡಸ್ತನದ ಪ್ರಶ್ನೆ ಎದುರಾದಗ, ಮೇಸ್ತ್ರಿ ಒಂದೇಟು ಹಾಕಿಯೇ ಬಿಟ್ಟ. ಇಷ್ಟು ಸಾಕಿತ್ತು ಸರ್ಕಾರಿ ಹಣ ದುರುಪಯೋಗವಾಗಲು. ಅಲ್ಲಿ ಸೇರಿದ್ದ ಮಕ್ಕಳೆಲ್ಲ ಭಾರಿ ಫೈಟಿಂಗ್ ಒಂದನ್ನು ನಿರೀಕ್ಷಿಸಿದ್ದರು, ಒಂದೇ ಏಟಿಗೆ ತೆಪ್ಪನಾದ ಚಂದ್ರು ಅವರಿಗೆ ನಿರಾಸೆ ಗೊಳಿಸಿದ್ದ. ಚಂದ್ರು ಸೋತು ಗೆದ್ದಿದ್ದ.

ಊರೆಲ್ಲ ಸುದ್ದಿಹಬ್ಬಿದಮೇಲೆ, ಅಲ್ಲಿಗೆ ಬಂದ ಲೋಕಲ್ ಪೇಪರ್ ಸಂಪಾದಕ ಸಂಜಯ್ ಶೆಟ್ಟಿ. ಇಂತಹ ಕೇಸ್‍ಗಳನ್ನು ನಯವಾಗಿ ಸರಿಪಡಿಸುವಲ್ಲಿ ಇವನದು ಎತ್ತಿದ ಕೈ. ಹೆಣ್ಣುಮಕ್ಕಳ್ಯಾರಾದರು ಮನೆ ಬಿಟ್ಟು ಓಡಿಹೋದರೆ, ಗಂಡ ಹೆಂಡಿರು ಜಗಳವಾಡಿಕೊಂಡರೆ, ಆ ಮನೆಯನ್ನು ಕೂಡಲೆ ತಲುಪಿ ಬಣ್ಣದ ಮಾತುಗಳನ್ನಾಡಿ ಜೇಬು ತುಂಬಿಸಿಕೊಂಡು ಹೋಗುವ, ಹಣ ಕೊಡಲು ಒಪ್ಪದಿರೆ ತನ್ನ ಪೇಪರ್‌ನ ಕಾಲಂ ತುಂಬಿಸುವ ಛಾತಿ ಇವನದು. ಬಂದವನೆ ಮೇಸ್ತ್ರಿಯಮನೆ ಹೊಕ್ಕು ಅವನಿಗರ್ಥವಾಗದ ಭಾಷೆಯಲ್ಲಿ ಕಾನೂನಿನ ಉದ್ದಗಲಗಳನ್ನು ವಿವರಿಸಿ, ಇವನಿಂದ ತನಗೇನು ಪ್ರಯೋಜನವಿಲ್ಲವೆಂದೆಣಿಸಿ, ಮೇಸ್ತ್ರಿಗೆ ಜೀವನವೇಸಾಕು ಎಂಬಷ್ಟರ ಮಟ್ಟಿಗೆ ಹೆದರಿಸಿ, ಕೂಡಲೆ ಚಂದ್ರುವಿನ ಮನೆಸೇರಿ ಅವನ ಮನತುಂಬಿಸಿ, ಒಳಒಪ್ಪಂದವಂದನ್ನು ಮಾಡಿಕೊಂಡು ತನ್ನ ಪ್ರೆಸ್ ತಲುಪಿದನು. ಆ ಸಂಜೆ ತನ್ನ ಲೋಕಲ್‍ಪೇಪರ್ ‘ಬಡವರಕೂಗು’ವಿನಲ್ಲಿ ದಲಿತನ ದೌರ್ಜನ್ಯ ಎಂದು ದೊಡ್ಡದಾಗಿ ಪ್ರಕಟಿಸಿ, ಕಾಣದ ಕೈಗಳ ಕೈವಾಡವಿದೆಯೆಂದು ಸೇರಿಸಿದನು. ಚಂದ್ರು ಪೊಲೀಸ್ ಕೇಸ್ ಒಂದನ್ನು ನೋಂದಾಯಿಸಿ ತನ್ನ ಕರ್ತವ್ಯಮೆರೆದನು.. ಇತ್ತ ಮೇಸ್ತ್ರಿ ಮಾತ್ರ ಒಬ್ಬಂಟಿಗನಾಗಿ ನೋವಿನ ಜೊತೆ, ಹೆಂಡಹೀರುತ್ತ ಕುಳಿತಿದ್ದನು. ಆ ದಿನ ಕಳೆಯಿತು.

ಅಪರೂಪಕ್ಕೊಮ್ಮೆ ಪೋಲಿಸ್ ಜೀಪ್ ಹಳ್ಳಿಕಡೆಗೆ ಬರುತ್ತದೆ, ಹಾಗಾಗಿ ಎಲ್ಲರೂ ಅದನ್ನು ವಿಶೇಷವಾಗಿ ಗಮನಿಸುತ್ತಾರೆ. ಸಣ್ಣಹಳ್ಳಿಯಾಗಿದ್ದರಿಂದ ಪೋಲಿಸ್ ಬಂದಕಾರಣ ಪ್ರತಿಯೊಬ್ಬರಿಗು ತಿಳಿದಿರುತ್ತದೆ. ಭಾನುವಾರ ಆದಕಾರಣ ಮೇಸ್ತ್ರಿಮಲಗೆ ಇದ್ದ, ಅಷ್ಟರಮಟ್ಟಿಗೆ ರಾತ್ರಿ ಕುಡಿದ ಮದ್ಯ ಕೆಲಸಮಾಡಿತ್ತು. ಪೋಲಿಸ್ ಜೀಪ್ ಮನೆ ಮುಂದೆನಿಂತಾಗ ಮೇಸ್ತ್ರಿಗೆ ಎಚ್ಚರವಾಗಿ ಪ್ರತಿರೋಧ ತೋರದೆ ಹೊರನೆಡೆದ. ಪೋಲಿಸ್ ಇನ್ಸ್‍ಪೆಕ್ಟರ್ ಕರಿಯಪ್ಪ ದರ್ಪದಿಂದ ಜೀಪ್ ಹತ್ತೋ ಬೋಳಿಮಗನೆ ಅಂದ… ಬಾಯಿ ಬಡಿಯುತ್ತ, ಅಯ್ಯೋ ನನ್ನ ಯಜಮಾನರು ಏನೂ ತಪ್ಪುಮಾಡಿಲ್ಲವೆನ್ನುತ್ತ ಸತಿ ಸಾವಿತ್ರಿ ಹೊರಬಂದಳು, ಮೇಸ್ತ್ರಿ ಮಕ್ಕಳ ಚೀರಾಟ ಸುತ್ತಲ ಜನರನ್ನು ಹತ್ತಿರ ಸೇರಿಸಿತು.

ಮೇಸ್ತ್ರಿ ತನ್ನ ಸಣಕಲು ಸ್ವರದಲ್ಲಿ- ಸಾಯಬ್ರೆ, ಸ್ಟೆಷನ್‍ಗೆಲ್ಲ ಯಾಕೆ? ನಾನು ಏನ್ ತಪ್ಪು ಮಾಡಿದ್ದೇನೆ? ಸಿಟ್ಟಿಗೆದ್ದ ಕರಿಯಪ್ಪ ಕೆನ್ನೆಗೊಂದು ಬೀಸಿ ಬಾಯಿಗೆ ಬಂದ ಹಾಗೆ ಮಾತನಾಡಲಾರಂಭಿಸಿದನು. ಹಲ್ಕನನ್ನಮಕ್ಕಳ ಬಡದಲಿತ ನನ್ನು ಹಿಂಸಿಸುತ್ತೀರ? ಏನೆಂದು ಕೊಂಡಿದ್ದೀರ ಕಾನೂನನ್ನು, ಮೇಸ್ತ್ರಿಯ ಕಣ್ಣಲ್ಲಿ ನೀರು… ನೋವಿಗಲ್ಲ, ಮರ್ಯಾದೆಗೆ.

ಅರೇ, ಯಾರೋ ನನ್ನ ಪರವೇ ಮಾತನಾಡುತ್ತಿದ್ದಾರಲ್ಲ ಎಂದು ಯೋಚಿಸುತ್ತ ಚಂದ್ರು ತನ್ನ ಮನೆಯಿಂದ ಹೊರಬಿದ್ದನು. ಮೇಸ್ತ್ರಿಮನೆಕಡೆಗೆ ಅವನ ದೃಷ್ಟಿಹರಿಯಿತು… ಅವನ ಹೆಂಡತಿ, ಮಕ್ಕಳ ಕೂಗು ಮುಗಿಲು ಮುಟ್ಟುತ್ತಿದೆ. ಇತ್ತ ಮೇಸ್ತ್ರಿ, ಕರಿಯಪ್ಪನ ಬಿ.ಪಿಗೆ ಬಲಿಯಾಗುತಿದ್ದರೆ, ಜನ ಮರಗುವವರಂತೆ ನಟಿಸುತ್ತ ತಮಾಷೆನೋಡುತ್ತಿದ್ದಾರೆ…. ಚಂದ್ರುವಿಗೆ ಭೀಕರ ಕೋಪಬಂತು. ನೆರೆದ ಜನಗಳಮೇಲೆ, ಸಂಜಯ್ ಶೆಟ್ಟಿಯ ಮೇಲೆ, ನಂತರ ತನ್ನಮೇಲೆಯೇ…ಏನೇನೋ ಯೋಚಿಸಿ ಇನ್ಸ್‍ಪೆಕ್ಟರ್ ಕರಿಯಪ್ಪನ ಬಳಿನೆಡೆದ.

ಸಾರ್, ಕೇಸ್ ವಾಪಾಸ್ ತಗೊಳ್ತೀನಿ, ಅವನನ್ನು ಬಿಟ್ಟುಬಿಡಿ ಸಾರ್…..ಕರಿಯಪ್ಪ ಸಿಟ್ಟಿನಿಂದ ಇವನ ಮುಖನೋಡಿ, ಇವನಿಗೂ ನಾಲ್ಕು ಬಿಗಿಯುವ ಮನಸ್ಸು ಮಾಡುತ್ತಾನೆ. ಕೂಡಲೆ ಕಾಯಿದೆಯ ನೆನಪಾಗಿ, ದರಿದ್ರ ಮಕ್ಕಳ ನೀವೆಲ್ಲಾ ಒಂದೆ, ನಡಿ ಸ್ಟೆಷನ್‍ಗೆ. ಬರಿ ಬಾಯಲ್ಲಿ ಹೇಳಿದರಾಗಲಿಲ್ಲ, ಬಂದು ಸಹಿಹಾಕು ಎಂದು ಜೀಪುಹತ್ತಿಸಿದ. ಎಲ್ಲರು ಮನೆಸೇರಿದರು.. ಇತ್ತ ಸೂರ್ಯಕೂಡ ಚಂದ್ರುವಿನ ಮನಸ್ಸನ್ನು ಅರ್ಥಮಾಡಿಕೊಳ್ಳಲಾಗದೆ ಮೋಡದ ಮರೆಯಲ್ಲಿ ಕಳೆದುಹೋದ;

ನಂತರ ವಾರದ ‘ಬಡವರಕೂಗು’ವಿನಲ್ಲಿ “ದೊಡ್ಡವರ ದುಡ್ಡುತಿಂದ ಇನ್ಸ್‍ಪೆಕ್ಟರ್ ಕರಿಯಪ್ಪ” ಎಂದು ಪ್ರಕಟವಾಯಿತು.

ರಾಜೇಂದ್ರ ಎಚ್ಆರ್, ಬೆಂಗಳೂರು

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 20, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: