Swamy teacher : ಸ್ವಾಮಿ ಮೇಷ್ಟ್ರು

ಹೆಂಡತಿಯ ಕಾಯಿಲೆಯ ನೋವು, ಮಗನ ನಿರುದ್ಯೋಗದ ಚಿಂತೆ ಹೊತ್ತು ದೊಡ್ಡ ಕಂಪನಿ ತೆರೆದ ತನ್ನ ಪ್ರೀತಿಯ ಶಿಷ್ಯನ ಬಳಿ ಬಂದ ಮೇಷ್ಟ್ರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಸದಾ ಕಂಪನಿ, ಟೂರು, ಪ್ರಾಫಿಟ್ಟಿನ ಬಗ್ಗೆ ಯೋಚಿಸುವ ಚಂದ್ರನಿಗೆ ಮೇಷ್ಟ್ರ ಕಷ್ಟದ ಬಗ್ಗೆ ಯೋಚಿಸುವ ವ್ಯವಧಾನವಾದರೂ ಎಲ್ಲಿತ್ತು?
ದುಂಡಗಿನ ಬಿಳಿಯ ಮುಖ, ಅಗಲವಾದ ಹಣೆಯ ಮೇಲೆ ರೈಲ್ ಕಂಬಿಯಂತೆ ಸಮಾನಾಂತರವಾಗಿ ಎಳೆದ ಮೂರು ಪಟ್ಟೆ ವಿಭೂತಿ, ಚೂಪಾದ ಗರುಡನ ಮೂಗು, ಗೋಲ್ದ್ ಫ್ರೇಮ್ ಕನ್ನಡಕ ಮರೆ ಮಾಡಿದ ಅಗಲವಾದ ಕಣ್ಣುಗಳು, ಯಾವಾಗಲೂ ಮುಗುಳ್ನಗುತ್ತಿರುವ ತುಟಿಗಳು, ನೀಟಾಗಿ ಕ್ರಾಪ್ ಮಾಡಿ ಬಾಚಿರುವ ಕೂದಲ ರಾಶಿಯ ನಡುವೆ, ಬೇಕು ಬೇಡದಂತೆ ಇಣುಕುತ್ತಿರುವ ಅಲ್ಲೊಂದು ಇಲ್ಲೊಂದು ಬಿಳಿಯ ಕೂದಲು, ಗಂಜಿ ಹಾಕಿ ಇಸ್ತ್ರಿ ಮಾಡಿದ ಶುಭ್ರ ಬಿಳಿಯ ಪಂಚೆ, ಒಂದು ಚೂರು ಕಲೆಯಿಲ್ಲದ ಬಿಳಿಯ ಅಂಗಿ, ಹೆಗಲ ಮೇಲೆ ಹಾಕಿದ ಸಿಲ್ಕ್ ಅಂಗವಸ್ತ್ರ, ಇಷ್ಟು ವಿವರಣೆ ಸಾಕು ನಮ್ಮ ಸ್ವಾಮಿ ಮಾಸ್ತರನ್ನು ವರ್ಣಿಸಲು. ಸ್ವಾಮಿ ಮೇಷ್ಟ್ರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕ್ ಸರ್ಕಾರಿ ಪ್ರಾಥಮಿಕ ಶಾಲೆಯ ಗಣಿತದ ಉಪಾಧ್ಯಾಯರು. ಹೆಸರಿಗೆ ನರಸಿಂಹಸ್ವಾಮಿಗಳಾದರೂ, ಇವರು ಶಾಂತಮೂರ್ತಿಗಳು, ಮೇಷ್ಟ್ರು ಹೊಡೆಯುವುದು ಇರಲಿ ರೇಗಿದ್ದನ್ನೇ ಯಾರೂ ನೋಡಿಲ್ಲ.

ಚಂದ್ರಶೇಖರ ಇದೇ ಶಾಲೆಯಲ್ಲಿ ನಾಲ್ಕನೇ ಇಯತ್ತೆಯಲ್ಲಿ ಓದುತ್ತಿರುವ ತುಂಟ ಹುಡುಗ. ಚಂದ್ರನ ತಂದೆ ರಾಮಯ್ಯ ಅಠಾರ ಕಚೇರಿಯಲ್ಲಿ ಗುಮಾಸ್ತರು. ಒಬ್ಬನೇ ಮಗನಾದ ಚಂದ್ರನಿಗೆ ಓದಿಗಿಂತ ಆಟ, ತುಂಟಾಟಗಳಲ್ಲೇ ಆಸಕ್ತಿ ಜಾಸ್ತಿ. ಎಲ್ಲಾ ಉಪಾಧ್ಯಾಯರ ಬಾಯಲ್ಲಿ ಈತ ತಲೆಹರಟೆ. ಒಂದು ದಿನ ಸ್ವಾಮಿ ಮೇಷ್ಟ್ರು ಬೋರ್ಡ್ ಮೇಲೆ ಲೆಕ್ಕ ಬರೆಯಬೇಕಾದರೆ, ಚಂದ್ರ ಹಿಂದಿನ ಬೆಂಚ್‌ನಿಂದ ಚಿಕ್ಕ ಕಲ್ಲು ಎಸೆದ. ಅಚಾನಕ್ ಮುಂದೆ ತಿರುಗಿದ, ಮೇಷ್ಟ್ರ ಕನ್ನಡಕದ ಮೇಲೆ ಕಲ್ಲು ಬಿತ್ತು. ಕನ್ನಡಕದ ಗಾಜು ಚೂರು ಚೂರಾಗಿ, ಒಂದು ಚೂರು ಮೇಷ್ಟ್ರ ಕಣ್ಣಿನ ಕೆಳಗೆ ಚುಚ್ಚಿತು. ಗಾಬರಿಯಿಂದ ಓಡಿ ಬಂದ ಬೇರೆ ಉಪಾಧ್ಯಾಯರು ಕೂಡಲೇ ಮೇಷ್ಟ್ರನ್ನು ಸರ್ಕಾರಿ ದವಾಖಾನೆಗೆ ಕರೆದೊಯ್ದರು. ದೇವರ ದಯೆಯಿಂದ ಕಣ್ಣಿಗೆ ಏನು ತೊಂದರೆ ಆಗಿರಲಿಲ್ಲ. ವೈದ್ಯರು ಕಣ್ಣಿನ ಕೆಳಗೆ ಹೊಲಿಗೆ ಹಾಕಿದರು.

ಈ ಗಲಾಟೆಯಲ್ಲಿ ಚಂದ್ರ ಯಾರಿಗೂ ತಿಳಿಯದಂತೆ ಮನೆಗೆ ಓಡಿ ಹೋದ. ವಿಷಯ ತಿಳಿದು ಕಚೇರಿಯಿಂದ ಬಂದ ರಾಮಯ್ಯ ಯಾವ ಪರಿಯಲ್ಲಿ ಬೆತ್ತದಿಂದ ಹೊಡೆದರೆಂದರೆ, ಚಂದ್ರನ ತಾಯಿ ಬಿಡಿಸದಿದ್ದರೆ ಚಂದ್ರನ ಕತೆ ಅವತ್ತೇ ಮುಗಿದುಹೋಗುತ್ತಿತ್ತು. ಮಾರನೇ ದಿನ ಶಾಲೆಯ ಮುಖ್ಯೋಪಾಧ್ಯಾಯರು, ರಾಮಯ್ಯನವರಿಗೆ ಚಂದ್ರನನ್ನು ಬೇರೆ ಶಾಲೆಗೆ ಸೇರಿಸುವಂತೆ ಹೇಳುತ್ತಿರುವಾಗ ಒಳಗೆ ಬಂದ ಸ್ವಾಮಿ ಮೇಷ್ಟ್ರು, ಚಂದ್ರನನ್ನು ಕ್ಷಮಿಸಬೇಕೆಂದು ಕೇಳಿದರು. ಸ್ವಾಮಿಯವರ ಮಾತಿನಂತೆ ಚಂದ್ರನನ್ನು ಮಾಫಿ ಮಾಡಿ, ಅವನಿಗೆ ಅದೇ ಶಾಲೆಯಲ್ಲಿ ಮುಂದೆ ಓದಲು ಅನುಮತಿ ನೀಡಿದರು ಮುಖ್ಯೋಪಾಧ್ಯಾಯರು.

ಚಂದ್ರ ತಂದೆಯವರ ಮಾತಿನಂತೆ ಕ್ಷಮೆ ಕೇಳಲು ರಾತ್ರಿ ಮೇಷ್ಟ್ರ ಮನೆಗೆ ಹೋದ. ಅಧ್ಯಯನದ ರೂಮಿನಲ್ಲಿ ಮೇಷ್ಟ್ರು ಉಪನಿಷತ್ ಓದುತ್ತಿದ್ದರು. ಕಣ್ಣಿನ ಬ್ಯಾಂಡೇಜ್ ಹಾಗೆಯೇ ಇತ್ತು. ಮಾಸ್ತರನ್ನು ನೋಡಿದ ಚಂದ್ರ ಗಳಗಳನೆ ಅಳಲು ಶುರು ಮಾಡಿದ. ಚಂದ್ರನನ್ನು ಸಮಾಧಾನ ಮಾಡಿದ ಸ್ವಾಮಿ, ಜೀವನದ ಸರಿ ತಪ್ಪುಗಳನ್ನು, ರೀತಿ-ನೀತಿಗಳನ್ನು ಹೇಳಿದರು. ನಚಿಕೇತ, ಧ್ರುವ, ಅರುಣಿ, ಉಪಮನ್ಯು ಮುಂತಾದವರ ಉದಾಹರಣೆಯಿಂದ ಜೀವನದ ಅರ್ಥವನ್ನು ಮತ್ತು ಮೌಲ್ಯಗಳನ್ನೂ ಸಾರಿ ಹೇಳಿದರು. ಚಂದ್ರ ಪಶ್ಚಾತ್ತಾಪದಿಂದ ಯಾವ ರೀತಿ ಮುದುರಿಹೋಗಿದ್ದನೆಂದರೆ ಮೇಷ್ಟ್ರ ಒಂದೊಂದು ಮಾತುಗಳು ಹಸಿ ಸಿಮೆಂಟಿಗೆ ಅಂಟಿಸಿದ ಕಲ್ಲಿನಂತೆ ಅಂಟಿಕೊಂಡಿದ್ದವು. ಮೇಷ್ಟ್ರ ಮನೆಯಿಂದ ಹೊರಗೆ ಬಂದಾಗ ಚಂದ್ರ ಬೇರೆಯೇ ಮನುಷ್ಯನಾಗಿದ್ದ.

ಅಂದಿನಿಂದ ಚಂದ್ರನಿಗೆ ಸ್ವಾಮಿ ಮೇಷ್ಟ್ರು ಸ್ನೇಹಿತ, ಚಿಂತಕ ಮತ್ತು ಮಾರ್ಗದರ್ಶಿ ಆದರು. ಮಾಸ್ತರರ ಸುಪರ್ದಿಯಲ್ಲಿ ಬೆಳೆದ ಚಂದ್ರ ಏಳನೇ ತರಗತಿಯಲ್ಲಿ ಕೋಲಾರ ಜಿಲ್ಲೆಗೆ ಮೊದಲ ಸ್ಥಾನ ಪಡೆದ. ತಂದೆಗೆ ವರ್ಗವಾಗಿ ಬೆಂಗಳೂರಿಗೆ ಮುಂದೆ ಓದಲು ಹೊರಟ ಚಂದ್ರಶೇಖರನಿಗೆ ಮೇಷ್ಟ್ರು ಹೇಳಿದ ಒಂದೇ ಮಾತು ಜೀವನದಲ್ಲಿ ಮೌಲ್ಯಗಳನ್ನು ಮಾತ್ರ ಕಳೆದುಕೊಳ್ಳಬೇಡ.

ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿ, ಐಐಟಿಯಲ್ಲಿ ಬಿಟೆಕ್ ಮಾಡಿ ಚಂದ್ರಶೇಖರ ಅಮೆರಿಕದ ಪ್ರಸಿದ್ಡ MITನಲ್ಲಿ PHD ಮಾಡಿ ಡಾಕ್ಟರ್ ಚಂದ್ರಶೇಖರ ಆದ. ಪ್ರತಿಷ್ಠಿತ ಐಬಿಎಮ್ ಸಂಸ್ಥೆಯಲ್ಲಿ ಐದು ವರುಷ ಕೆಲಸ ಮಾಡಿದ. ನಂತರ ಭಾರತಕ್ಕೆ ವಾಪಸ್ ಬಂದು ಸಮಾನಮನಸ್ಕ ಸ್ನೇಹಿತರ ಜೊತೆ ಸೇರಿ ಒಂದು ಸಾಫ್ಟ್‌ವೇರ್ ಸಂಸ್ಥೆ ತೆಗೆದ. ಪರಿಶ್ರಮ, ಶ್ರದ್ಧೆಯಿಂದ ಸಂಸ್ಥೆ ಬಹಳ ಚೆನ್ನಾಗಿ ಬೆಳೆದು ಭಾರತದ ನಂಬರ್ ಒನ್ ಕಂಪನಿಯಾಯಿತು. ಎಲ್ಲಾ ಮೀಡಿಯಾಗಳಲ್ಲೂ ಚಂದ್ರಶೇಖರನ ಬಗ್ಗೆ ಸುದ್ದಿಯಿಲ್ಲದ ದಿನವೇ ಇರಲಿಲ್ಲ. ಉಸಿರಾಡಲು ಪುರುಸೊತ್ತು ಇರದಂತೆ ಹಗಲು ರಾತ್ರಿ ಚಂದ್ರಶೇಖರ ಪ್ರಪಂಚ ಪರ್ಯಟಣೆ ಮಾಡುತ್ತಿದ್ದ.

ಸ್ವಾಮಿ ಮೇಷ್ಟ್ರು ಉದ್ಯೋಗದಿಂದ ನಿವೃತ್ತಿ ಹೊಂದಿ ಊರಿನಲ್ಲಿ ಬಡ ಮಕ್ಕಳಿಗೆ ಉಚಿತ ಪಾಠ ಹೇಳುತ್ತ ಕಾಲ ಕಳೆಯುತ್ತಿದ್ದರು. ಅವರ ಒಬ್ಬನೇ ಮಗ, ಸರಿಯಾಗಿ ಓದದೇ, ಎಲ್ಲೂ ಕೆಲಸ ಸಿಗದೆ, ಉಂಡಾಡಿ ಗುಂಡನಂತೆ ಕಾಲ ಹಾಕುತ್ತಿದ್ದ. ಮೊದಲೇ ಅಸ್ತಮಾದಿಂದ ನರಳುತಿರುವ ಮೇಷ್ಟ್ರ ಹೆಂಡತಿ ಮಗನ ಚಿಂತೆಯಲ್ಲೀ ಇನ್ನೂ ಹಣ್ಣಾಗಿದ್ದರು. ಪ್ರತಿದಿನ ಮೀಡಿಯಾದಲ್ಲಿ ಮೇಷ್ಟ್ರು ಚಂದ್ರಶೇಖರನ ಪ್ರಗತಿ ನೋಡಿ ನೋಡೇ ನನ್ನ ಶಿಷ್ಯ ಎಷ್ಟು ಮುಂದೆ ಬಂದಿದ್ದಾನೆ ಎಂದಾಗಲೆಲ್ಲ, ಏನಾದರೇನು ನಮಗೆ ಏನು ಭಾಗ್ಯ ಬಂತು ಎನ್ನುತ್ತಿದರು.

ಹೀಗಿರುವಾಗ ಒಂದು ತಿಂಗಳ ಕೊನೆಯಲ್ಲಿ ಅಸ್ತಮಾ ಜಾಸ್ತಿಯಾಗಿ ಮೇಷ್ಟ್ರ ಪತ್ನಿಯನ್ನು ದವಾಖಾನೆಗೆ ಸೇರಿಸಬೇಕಾಗಿ ಬಂತು, ಖರ್ಚು ಬಹಳ ಜಾಸ್ತಿಯಾಗಿ ಸ್ವಾಮಿ ಚಿಂತಾಕ್ರಾಂತರಾಗಿದ್ದರು. ಅವರ ಅವಸ್ಥೆ ನೋಡಲಾರದೆ, ಅವರ ಪತ್ನಿ ನೋಡಿ, ನೀವೇನು ನಿಮ್ಮ ಶಿಷ್ಯನನ್ನು ದುಡ್ದು ಕಾಸು ಕೇಳಬೇಡಿ, ಅವನ ಕಂಪೆನಿಯಲ್ಲಿ ನಿಮ್ಮ ಮಗನಿಗೆ ಒಂದು ಚಿಕ್ಕ ಕೆಲಸ ಕೊಡಿಸಿ ಎಂದರು. ಹೆಂಡತಿಯ ಕಾಟ ತಾಳಲಾರದೆ, ಸ್ವಾಮಿ ಚಂದ್ರಶೇಖರನನ್ನು ನೋಡಲು ಬೆಂಗಳೂರಿಗೆ ಹೊರಟರು.

ಬೆಂಗಳೂರಿನ ಟೆಕ್ನಾಲಜಿ ಪಾರ್ಕ್ ಬಳಿ ಇರುವ ಚಂದ್ರಶೇಖರನ ಕಂಪನಿಯ ಮುಂದೆ ಸಿಟಿಬಸ್‌ನಿಂದ ಇಳಿದ ಮೇಷ್ಟ್ರರನ್ನು ಸೆಕ್ಯುರಿಟಿ ಗಾರ್ಡ್ ಗೇಟ್ ಬಳಿ ತಡೆದ. ನಾನು ನಿಮ್ಮ ಮಾಲೀಕರ ಮೇಷ್ಟ್ರು, ಅವರ ಜೊತೆ ಮಾತನಾಡಬೇಕೆಂದ ಸ್ವಾಮಿಗೆ ಆಪಾಯಿಟ್ಮೆಂಟ ಇದೇಯೇನ್ರಿ ದಿನಕ್ಕೆ ನೂರು ಮಂದಿ ನಿಮ್ಮ ತರಹ ಸುಳ್ಳು ಸುಳ್ಳೇ ಹೇಳಿ ಬರುತ್ತಾರೆ ಎಂದು ದಬಾಯಿಸಿದ. ಪ್ರಯಾಣದ ಅಯಾಸದಿಂದಲೋ, ಚಿಂತೆಯಿಂದಲೋ ಕಣ್ಣು ಕತ್ತಲೆ ಬಂದಂತಾಗಿ ಸ್ವಾಮಿ ಅಲ್ಲೇ ಕುಸಿದರು. ಈ ಗಲಾಟೆ ಕೇಳಿ ಅಲ್ಲಿಗೆ ಬಂದ ಸೆಕ್ಯುರಿಟಿ ಮುಖ್ಯಸ್ಥರು ಮೇಷ್ಟ್ರರಿಗೆ ನೀರು ಕೊಟ್ಟು ಹೇಗಾದರಾಗಲಿ ಒಮ್ಮೆ ಮಾತಾಡೋಣ ಎಂದು ಚಂದ್ರಶೇಖರರಿಗೆ ಫೋನ್ ಮಾಡಿದರು.

ವಿಷಯ ಕೇಳಿದ ಚಂದ್ರಶೇಖರ್, ಬೇಗನೆ ಸೆಕ್ಯುರಿಟಿ ಬಳಿ ಬಂದರು, ಸ್ವಾಮಿ ಮೇಷ್ಟ್ರನ್ನು ನೋಡಿ ಬಹಳ ಸಂತೋಷಪಟ್ಟರು. ತಾವೇ ಖುದ್ದಾಗಿ ಕ್ಯಾಂಪಸ್ ಟೂರ್ ಮಾಡಿಸಿದರು. ಬೋರ್ಡ್ ರೂಮ್ ಬಳಿ ಕಂಪನಿಗೆ ಬಂದಿದ್ದ ಅವಾರ್ಡ್‌ಗಳನ್ನು ತೋರಿಸುತ ಸಾರ್ ಇದೆಲ್ಲಾ ಸಾಧ್ಯವಾದ್ದದ್ದು ನಿಮ್ಮಿಂದಲೇ ನೀವು ನನಗೆ ಸರಿ ದಾರಿ ತೋರಿಸಿಲ್ಲದಿದ್ದರೆ, ನಾನು ಈ ಲೆವೆಲ್‌ಗೆ ಬರತ್ತಿರಲಿಲ್ಲ, ನೀವು ಹೇಳಿಕೊಟ್ಟ ಹಾದಿಯಲ್ಲೇ ನಡೆದಿದ್ದೇನೆ. ಇಲ್ಲಿಯತನಕ ನಮ್ಮ ಕಂಪೆನಿ ಕೆಲಸಕ್ಕೇ ಎಷ್ಟೊಂದು ಜನ ಶಿಫಾರಸ್ ಕಳಿಸಿದ್ದರು, ಮಂತ್ರಿಗಳ ಮಕ್ಕಳನ್ನು, ನಮ್ಮ ಆಪ್ತ ನೆಂಟರ ಮಕ್ಕಳನ್ನೂ ಕೂಡ ತೆಗೆದುಕೊಂಡಿಲ್ಲ, ಅರ್ಹತೇಯೇ ನಮ್ಮ ಧ್ಯೇಯ, ನೀವು ಹೇಳಿಕೊಟ್ಟ ಮೌಲ್ಯಗಳನ್ನು ಯಾವತ್ತೂ ಮಾರಿಲ್ಲ ಎಂದು ಹೇಳಿದರು. ಚಂದ್ರಶೇಖರರ ಮಾತನ್ನು ಕೇಳಿದ ಮೇಷ್ಟ್ರರಿಗೆ ಹೃದಯ ತುಂಬಿ ಬಂತು. ಚಂದ್ರಶೇಖರನ ಜೊತೆ ಊಟ ಮಾಡಿ ನಾನ್ನಿನು ಬರುತ್ತೇನಪ್ಪ, ಬಹಳ ದಿನ ಆಗಿತ್ತಲ್ಲ ನಿನ್ನ ನೋಡಿ, ಒಮ್ಮೆ ನೋಡೋಣ ಅಂತ ಬಂದೆ, ಕೆಲಸ ಆಯಿತಲ್ಲ ಎಂದು ಹೊರಟರು. ಮನೆಗೆ ಬನ್ನಿ ಎಂದ ಶೇಖರರಿಗೆ ಇಲ್ಲ ಇನ್ನೊಮ್ಮೆ ಬಂದು ಎರಡು ದಿನ ಇರುತ್ತೇನೆ ಎಂದರು.

ಕಂಪನಿ ಕಾರ್ ಕಳುಸುವೆ ಎಂದಾಗ ಅನಪೇಕ್ಷಿತವಾಗಿ ಸಹಾಯ ಪಡೆಯುವುದು ತಪ್ಪು ಎಂದರು. ಮೇಷ್ಟ್ರ ಮೌಲ್ಯಗಳನ್ನು ಬಲ್ಲ ಚಂದ್ರಶೇಖರರು ಬಲವಂತ ಮಾಡದೆ ಅವರ ಜೊತೆ ಬಂದು ಕಂಪನಿಯ ಹೊರಗಡೆ ಸಿಟಿಬಸ್ ಹತ್ತಿಸಿದರು. ಕಿಟಕಿ ಬಳಿ ಕುಳಿತ ಮೇಷ್ಟ್ರ ಕಣ್ಣಂಚಿನ ನೀರು, ಕಣ್ಣಿನ ಕೆಳಗೆ ಚಂದ್ರಶೇಕರನ ಕೃಪೆಯಿಂದ ಆಗಿದ್ದ ಹಳೆಯ ಗಾಯದ ಕಲೆಯ ಮೇಲೆ ಹರಿಯಿತು.

ಅಚಾನಕ್ ಯಾಕೆ ಮೇಷ್ಟ್ರು ಬಂದಿದ್ದರು? ತಾನು ಕಲಿತ ಮೌಲ್ಯ, ಕಂಪನಿಯ ವೃದ್ಧಿಯತ್ತಲೇ ಹೆಮ್ಮೆಯಿಂದ ಬೀಗುತ್ತಿದ್ದ ಚಂದ್ರಶೇಖರನಿಗೆ ಸಾವಕಾಶವಾಗಿ ಕುಳಿತು ಈ ಬಗ್ಗೆ ಯೋಚಿಸುವ ವ್ಯವಧಾನವೂ ಇರಲಿಲ್ಲ. ಆ ಕ್ಷಣದಲ್ಲಿಯೇ ಚಂದ್ರಶೇಖರರ ಮೊಬೈಲ್ ರಿಂಗ್ ಆಯಿತು. ಆ ತುದಿಯಲ್ಲಿ ಸೆಕ್ರೆಟರಿ ಶೀಲಾ “ಸಾರ್ ಜಪಾನ್ ಡೆಲಿಗೇಟ್ಸ್ ಕಾಯತ್ತಿದ್ದಾರೆ. ರಾತ್ರಿ ಶಿಕಾಗೊ flight confirm ಆಯಿತು” ಎಂದಳು. ಈಗಲೇ ಬಂದೆ ಎಂದು ಚಂದ್ರಶೇಖರ ಬೋರ್ಡ್ ರೂಮ್ ಕಡೆ ಹೊರಟರು.

ಕೃಷ್ಣಸ್ವಾಮಿ, ಬೆಂಗಳೂರು
Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 20, 2009, in ಸಣ್ಣ ಕಥೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: